ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಅದು ವಿಮಾನವಿರಲಿ , ರೈಲಾಗಿರಲಿ , ಪಂಚತಾರಾ ಹೋಟೆಲ್ ಆಗಿರಲಿ ಚೀನಿ ಪ್ರವಾಸಿಗರು ಬಂದರು ಎಂದ ಮೇಲೆ ಅಲ್ಲಿ ಗಲಾಟೆ ಶುರು. ಪ್ರಥಮವಾಗಿ ಅವರು ಮಾತುನಾಡುವುದು ಕಿರುಚುವಂತೆ , ಜಗಳವಾಡುವಂತೆ ತೋರುತ್ತದೆ. ಎರಡು ಅವರು ನಿಜವಾಗಿಯೂ ತಮ್ಮತಮ್ಮಲ್ಲೇ ಜಗಳ ಕೂಡ ಆಡುತ್ತಾರೆ. ಉಳಿದ ಸಹ ಪ್ರಯಾಣಿಕರು ಏನೆಂದುಕೊಂಡಾರು ? ಎನ್ನುವ ಸಣ್ಣ ಪರಿಜ್ಞಾನ ಕೂಡ ಇವರಿಗಿಲ್ಲ.

ತಾವಿದ್ದ ಜಾಗದಲ್ಲಿ ಧಾಂದಲೆ ಎಬ್ಬಿಸುವುದು ಕೂಡ ಇವರ ಪರಿಪಾಠ. ಅದೇ ಜಪಾನೀಯರು ಮತ್ತಿ ಸೌತ್ ಕೊರಿಯನ್ನರು ಇದಕ್ಕೆ ತದ್ವಿರುದ್ದ . ಇಷ್ಟೊಂದು ಸಂಸ್ಕಾರವಂತ ಜನ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ ಎನ್ನುವಷ್ಟು ಒಳ್ಳೆಯವರು. ಒಂದೇ ಭೂಮಿ , ಒಂದೇ ಆಕಾಶ , ಅದೇ ಗಾಳಿ , ಅದೇ ನೀರು , ಆದರೂ ಅದೆಷ್ಟು ವ್ಯತ್ಯಾಸ . ಒಮ್ಮೆ ಬಾರ್ಸಿಲೋನಾ ದಿಂದ ಮಲಾಗ ಎನ್ನುವ ಸ್ಥಳಕ್ಕೆ ಕೆಲಸದ ನಿಮಿತ್ತ ಹೊರಟ್ಟಿದ್ದೆ . ಬಾರ್ಸಿಲೋನಾ ದಲ್ಲಿ ನಾಲ್ಕು ಜನ ಜಪಾನೀಯರು ರೈಲನ್ನ ಹತ್ತಿದರು.

ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ!ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ!

ಪ್ರಯಾಣದ ಉದ್ದಕ್ಕೂ ಒಮ್ಮೆಯೂ ಅವರು ಧ್ವನಿ ಎತ್ತರಿಸಿ ಮಾತ್ನಾಡಿದನ್ನ ನಾನು ನೋಡಲಿಲ್ಲ . ಮಲಾಗದಲ್ಲಿ ಇಳಿದಾಗ ಅವರು ಮುಂದಿನ ಪ್ರಯಾಣದ ಬಗ್ಗೆ ಒಂದಷ್ಟು ಮಾಹಿತಿಯನ್ನ ಪಡೆಯಲು ರೈಲಿನಲ್ಲಿದ್ದ ಸಿಬ್ಬಂದಿಯನ್ನ ತಮಗೆ ಬಂದ ಇಂಗ್ಲಿಷ್ನಲ್ಲಿ ಪ್ರಶ್ನಿಸಿದರು. ಆ ಸಿಬ್ಬಂದಿಗೆ ಇಂಗ್ಲಿಷ್ ನ ಲವಲೇಶ ಗಾಳಿಯೂ ಇರಲಿಲ್ಲ . ಆತ ಸ್ಪ್ಯಾನಿಷ್ ನಲ್ಲಿ ' ಆಲ್ಗಿನ್ ದೆ ವಸತ್ರೋಸ್ ಸಾವೆಸ್ ಇಂಗ್ಲೆಸ್ ? ' ( ನಿಮ್ಮಲ್ಲಿ ಯಾರಿಗಾದರೂ ಇಂಗ್ಲಿಷ್ ಬರುತ್ತದೆಯೇ ) ಎನ್ನುವ ಪ್ರಶ್ನೆಯನ್ನ ಕೇಳಿದರು.

Barcelona Memories Coloumn By Rangaswamy Mookanahalli Part 13

ಯಾರೊಬ್ಬರೂ ಮುಂದೆ ಬರಲಿಲ್ಲ. ಸಹಜವಾಗಿ ನಾನು ಮುಂದೆ ಹೋದೆ , ಜಪಾನೀಯರು ಇಂಗ್ಲಿಷ್ ನಲ್ಲಿ ಹೇಳಿದ್ದನ್ನ ಸ್ಪ್ಯಾನಿಷ್ ಗೆ ತುರ್ಜುಮೆ ಮಾಡಿ ರೈಲ್ವೆ ಸಿಬ್ಬಂದಿಗೆ ಹೇಳಿದೆ. ಅವರು ಸ್ಪ್ಯಾನಿಷ್ ನಲ್ಲಿ ಹೇಳಿದ ಮಾಹಿತಿಯನ್ನ ಕೇಳಿಸಿಕೊಂಡು ಜಪಾನಿ ಯಾತ್ರಿಕರಿಗೆ ಇಂಗ್ಲಿಷ್ ನಲ್ಲಿ ಹೇಳಿದೆ. ಜಪಾನೀಯರು ದೇಹವನ್ನ ಅರ್ಧ ಬಾಗಿಸಿ ಧನ್ಯವಾದ ತಿಳಿಸಿ ಹೋದರು. ಅದು ನನ್ನ ಜೀವನದ ಪ್ರಥಮ ಅನೌಪಚಾರಿಕ ದುಬಾಷಿ ಕೆಲಸ .

ಅದೊಂತರ ಮನಸ್ಸಿಗೆ ಬಹಳಷ್ಟು ಖುಷಿ ನೀಡಿತು. ಭಾಷೆ ಯಾವುದೇ ಇರಲಿ ಅದನ್ನ ಕಲಿತಷ್ಟೂ ನಮಗೆ ಒಳ್ಳೆಯದು ಎನ್ನುವ ಜ್ಞಾನೋದಯವಾಯ್ತು. ಅಂದು ನನ್ನ ಬಹತೇಕ ಸ್ಪ್ಯಾನಿಷ್ ಸಹ ಪಯಣಿಕರು ' ಮುಯ್ ಬಿಯನ್ ಹೆಚ್ಚೊ ' ( ಒಳ್ಳೆಯ ಕೆಲಸ ಮಾಡಿದೆ ) ಎನ್ನುವ ಶಹಬಾಸ್ ಗಿರಿಯನ್ನ ಕೊಟ್ಟು ಹೋದರು. ಸ್ಪ್ಯಾನಿಷ್ ಬಿಟ್ಟು ಯೂರೋಪಿನ ಇತರ ಭಾಷೆಗಳನ್ನ ಕಲಿಯಲು ಈ ಘಟನೆ ನಾಂದಿಯಾಯ್ತು .

ರಮ್ಯಳಿಗೆ ಬಾರ್ಸಿಲೋನಾ ದಲ್ಲಿ ಮೂರು ತಿಂಗಳು ಕಳೆದರೆ ಸಾಕು ಒಂಥರಾ ನಿಶಕ್ತಿ ಆವರಿಸಿ ಬಿಡುತ್ತಿತ್ತು . ಇದಕ್ಕೆ ಬಹು ಮುಖ್ಯ ಕಾರಣ ಇಲ್ಲಿ ಸೋಶಿಯಲ್ ಲೈಫ್ ಇಲ್ಲದೆ ಇರುವುದು. ಇಲ್ಲವೆನ್ನುವಷ್ಟು ಸಂಖ್ಯೆಯ ಭಾರತೀಯರು , ಇದವರಲ್ಲೂ ಸಾಮಾನ್ಯ ಗುಣಗಳ ಕೊರತೆ , ಹೀಗೆ ಪ್ರತಿ ಮೂರು ತಿಂಗಳ ನಂತರ ಬೆಂಗಳೂರಿಗೆ ಒಂದು ಟ್ರಿಪ್ ಹೋಗಲೇಬೇಕು. ಇದು ರಮ್ಯ ಅವಳಾಗೇ ಮಾಡಿಕೊಂಡಿದ್ದ ಅಲಿಖಿತ ನಿಯಮ. ಹೇಗೋ ಚಟ್ನಿಪುಡಿ ಮುಗಿದಿದೆ , ಪುಳಿಯೋಗರೆ ಪುಡಿ ಇನ್ನೆರೆಡು ದಿನಕ್ಕೆ ಮಾತ್ರ ಸಾಕಾಗುತ್ತೆ ಹೋಗಿ ಅವನ್ನೆಲ್ಲಾ ತರುತ್ತೇನೆ ಎನ್ನುತ್ತಿದ ರಮ್ಯಳಿಗೆ , ನಿನ್ನ ಚಟ್ನಿಪುಡಿ , ಹುಳಿಪುಡಿ , ಪುಳಿಯೋಗರೆ ಪುಡಿ ತುಂಬಾ ದುಬಾರಿ ಎಂದು ಕಿಚಾಯಿಸುತ್ತಿದ್ದೆ.

Barcelona Memories Coloumn By Rangaswamy Mookanahalli Part 13

 ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ

ಹೀಗೆ ಒಮ್ಮೆ ಬೆಳಿಗ್ಗೆ ಏಳೂವರೆಗೆ ಬಾರ್ಸಿಲೋನಾ ದಿಂದ ಫ್ರಾಂಕ್ ಫ಼ರ್ಟ್ ಗೆ ಇದ್ದ ವಿಮಾನಕ್ಕೆ ರಮ್ಯಳನ್ನ ಏರ್ಪೋರ್ಟ್ ಗೆ ಬಿಟ್ಟು ನಂತರ ಬೆಳಿಗ್ಗೆ ಒಂಬತ್ತಕ್ಕೆ ಕೆಲಸಕ್ಕೆ ಹೋದರಾಯ್ತು ಎಂದು ಅವಳ ಜೊತೆ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಯೂರೋಪಿನಲ್ಲಿ ಏಷ್ಯಾದಲ್ಲಿ ಇದ್ದಂತೆ ಬಹಳ ಕಟ್ಟುಪಾಡುಗಳಿಲ್ಲ . ಅಂದರೆ ನಾವು ಕೂಡ ಪ್ರಯಾಣಿಕರ ಜೊತೆ ಬೋರ್ಡಿಂಗ್ ಗೆ ಜೊತೆಯಾಗಬಹುದು . ಸೆಕ್ಯುರಿಟಿ ಚೆಕ್ ತನಕ ಅವರ ಜೊತೆಗೆ ಹೋಗಬಹದು . ಆ ನಂತರ ಮುಂದೆ ಬಿಡುವುದಿಲ್ಲ.

ಹೀಗೆ ರಮ್ಯಳ ಬೋರ್ಡಿಂಗ್ ಪಾಸ್ ಪಡೆಯಲು ಅವಳೊಂದಿಗೆ ಸರದಿಯಲ್ಲಿ ನಿಂತಿದ್ದೆ. ಹಿಂದೆ ' ಧಪ್ ' ಎನ್ನುವ ಶಬ್ದ ಬಂದಿತು. ಏನೆಂದು ನೋಡಿದರೆ ನಮ್ಮ ಪಕ್ಕದ ಸಾಲಿನಲ್ಲಿ ನಿಂತಿದ್ದ ಹಿರಿಯ ಭಾರತೀಯರಲ್ಲಿ ಒಬ್ಬಾತ ನೆಲಕ್ಕೆ ಬಿದ್ದಿದ್ದರು. ಆತನ ಜೊತೆಗಿದ್ದ ಮಹಿಳೆ ಬಹಳ ಟೆನ್ಷನ್ ನಲ್ಲಿ ಇರುವಂತೆ ಕಂಡರು . ಇದನ್ನ ನೋಡಿದ ರಮ್ಯ ' ರಂಗ , ಹೋಗು ಅವರಿಗೆ ಸಹಾಯ ಮಾಡು , ನನ್ನ ಪಾಡಿಗೆ ನಾನು ಹೋಗುತ್ತೇನೆ , ಬಾಯ್ ' ಎಂದಳು . ನನಗೆ ರಮ್ಯಳನ್ನ ಬಿಟ್ಟು ಹೋಗಲು ಮನಸ್ಸಿರಲಿಲ್ಲ .

ಬೋರ್ಡಿಂಗ್ ಪಾಸ್ ಪಡೆದು ನಂತರ ಕಾಫಿ ಬಾರ್ ನಲ್ಲಿ ಕಾಫಿ ಕುಡಿದು ಅವಳಿಗೆ ಬಾಯ್ ಹೇಳುವುದು ನನ್ನ ಉದ್ದೇಶವಾಗಿತ್ತು . ಇಲ್ಲಿ ನೋಡಿದರೆ ಎಲ್ಲಾ ಉಲ್ಟಾ ಆಗುತ್ತಿದೆ. ನಾನು ಸ್ವಲ್ಪ ನಿರುತ್ಸಾಹದಿಂದ ರಮ್ಯ ನಮಗ್ಯಾಕೆ ಇಲ್ಲದ ಉಸಾಬರಿ ಸುಮ್ಮನೆ ಮುಂದೆ ತಿರುಗು ಎಂದೇ . ಅಷ್ಟರಲ್ಲಿ ಅಲ್ಲಿಗೆ ವೈದ್ಯರು ಮೆಡಿಕಲ್ ಕಿಟ್ ಸಮೇತ ಬಂದರು. ಅವರು ಕೇಳುವುದು ಆಕೆಗೆ ಅರ್ಥವಾಗುತ್ತಿಲ್ಲ. ಆಕೆ ಹಿಂದಿಯಲ್ಲಿ ಹೇಳುವುದು ವೈದ್ಯರಿಗೆ ಅರ್ಥವಾಗುತ್ತಿಲ್ಲ . ರಂಗ ಪ್ಲೀಸ್ ಗೋ .. ಎಂದು ರಮ್ಯ ನನ್ನ ತಳ್ಳಿದಳು .

ನಾನು ವಿಧಿಯಿಲ್ಲದೇ ಸರಿ ಎನ್ನುವಂತೆ ತಲೆಯಾಡಿಸಿ ಅವರ ಬಳಿ ಹೋದೆ. ಆಕೆಯನ್ನ ಮಾತನಾಡಿಸಿದೆ. ಕೆಳಗೆ ಜ್ಞಾನ ತಪ್ಪಿ ಬಿದ್ದವರು ಅವರ ಪತಿ . ಬಾರ್ಸಿಲೋನಾ ದಲ್ಲಿ ಅವರ ಮಗ ಇದ್ದಾನಂತೆ ಅವನ ಮನೆಯಲ್ಲಿ 15ದಿನ ಇದ್ದು , ನ್ಯೂಯಾರ್ಕ್ ನಲ್ಲಿರುವ ಮಗಳ ಮನೆಗೆ ಹೊರಟಿದ್ದರಂತೆ , ಅವರು ಶುಗರ್ ಪೇಷಂಟ್ , ಸಾಲದಕ್ಕೆ ಅಮೇರಿಕಾ ವೀಸಾ ಇರುವ ಪಾಸ್ಪೋರ್ಟ್ ಜೊತೆಯಲ್ಲಿ ಇಲ್ಲ ಎನ್ನುವುದು ಗೊತ್ತಾಗಿ ಬಿಪಿ ಹೆಚ್ಚಾಗಿ ಜ್ಞಾನ ತಪ್ಪಿ ಬಿದ್ದಿದ್ದರು. ಇಷ್ಟೆಲ್ಲಾ ವರದಿಯನ್ನ ನಾನು ವೈದ್ಯರಿಗೆ ಒಪ್ಪಿಸಿದೆ .

ನಂತರದ 15ನಿಮಿಷದಲ್ಲಿ ಅವರಿಗೆ ಪ್ರಜ್ಞೆ ಬಂದಿತು. ನಾನು ಅವರಿಂದ ಅವರ ಮಗನ ನಂಬರ್ ಪಡೆದು ಅವನಿಗೆ ವಿಷಯವನ್ನ ಮುಟ್ಟಿಸಿದೆ. ನ್ಯೂಯಾರ್ಕ್ ನಲ್ಲಿರುವ ಅವರ ಮಗಳಿಗೂ ಫೋನ್ ಮಾಡಿ ಗಾಬರಿಯಾಗುವುದು ಬೇಡ. ನಿಗದಿಯಾದಂತೆ ನಿಮ್ಮ ಅಪ್ಪ ಅಮ್ಮ ಅಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ ಎನ್ನುವುದನ್ನ ಹೇಳಿದೆ. ರಮ್ಯಳಿಗೆ ನೀನು ಹೋಗು ಬಾಯ್ ಎಂದು ದೂರದಿಂದ ಹೇಳಿ , ಅವರ ಮಗ ಅಂಕುರ್ ಬಾಗ್ಲ ಬರುವವರೆಗೆ ಅಲ್ಲಿಯೇ ಅವರೊಂದಿಗೆ ಕುಳಿತೆ.

 'ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!' 'ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!'

ಈ ಅಂಕುರ್ ಬಾಗ್ಲ ನನ್ನ ನಾನು ಈ ಹಿಂದೆ ಅಂದರೆ ವರ್ಷ ಅಥವಾ ಎರಡು ವರ್ಷದ ಹಿಂದೆ ಒಮ್ಮೆ ಭಾರತೀಯ ದೂತವಾಸದಲ್ಲಿ ಭೇಟಿಯಾಗಿದ್ದೆ. ಹತ್ತು ಹದಿನೈದು ನಿಮಷದ ಮಾತುಕತೆಯಾಗಿತ್ತು . ಆದರೆ ನಂತರ ಆತ ನೆನಪಿನಾಳದಿಂದ ಮರೆಯಾಗಿದ್ದ. ಅವನನ್ನ ನೋಡಿದ ತಕ್ಷಣ ನನಗೆ ಹಿಂದಿನ ಭೇಟಿ ನೆನಪಾಯ್ತು . ' ಅರೆ ಯಾರ್ ರಂಗ , ಬಹುತ್ ಧನ್ಯವಾದ್ ' ಎಂದವನಿಗೆ ' ನೋ ಆಯ್ ದೆ ಕೆ ' ಎಂದೆ . ( ಅದೆಲ್ಲ ಏತಕ್ಕೆ ಎನ್ನುವ ಅರ್ಥ ) ಅಂಕುರ್ ಒಬ್ಬ ಕಲಾವಿದ. ಬಾರ್ಸಿಲೋನಾ ದಲ್ಲಿ ಪೈಂಟರ್ ಆಗಿ ಜೀವನವನ್ನ ಕಂಡುಕೊಡಿದ್ದ .

ತಿಂಗಳುಗಟ್ಟಲೆ ತಂಗೆ ಇಷ್ಟವಾದ ಚಿತ್ರಗಳನ್ನ ಬಿಡಿಸುವುದು ನಂತರ ಅದನ್ನ ಕಲಾರಸಿಕರಿಗೆ ಮಾರುವುದು ಅವನ ವೃತ್ತಿಯಾಗಿತ್ತು. ಇಷ್ಟು ಮಾಹಿತಿ ನನಗೆ ಮೊದಲೇ ತಿಳಿದಿತ್ತು . ಆದರೆ ಅವರಪ್ಪ ವಜ್ರದ ವ್ಯಾಪಾರಿ ಆಗರ್ಭ ಶ್ರೀಮಂತ ಎನ್ನುವುದು ನಂತರ ತಿಳಿದ ವಿಷಯ. ಜೈಪುರದಲ್ಲಿ ಬಹಳ ದೊಡ್ಡ ಹೆಸರು ಇವರ ಮನೆತನದ್ದು. ನನಗೆ ಬಿದ್ದವರು ಯಾರು ಎನ್ನುವುದು ಗೊತ್ತಿರಲಿಲ್ಲ , ಅವರಿಗೆ ಸಹಾಯ ಮಾಡಲು ಹೊರಟಿದ್ದು ರಮ್ಯಳ ಒತ್ತಾಯದ ಮೇರೆಗೆ , ಹಣೆಬರಹ ಎನ್ನುವುದು ಇದಕ್ಕೆ ಎನ್ನಬಹುದು.

ಆತ ಮುಂದಿನ ದಿನಗಳಲ್ಲಿ ನನ್ನನ್ನ ಬಹಳಷ್ಟು ಹಚ್ಚಿಕೊಂಡು ಬಿಟ್ಟರು. ಮಗನಿಗಿಂತ ಹೆಚ್ಚಾದ ಪ್ರೀತಿ ತೋರಿಸ ತೊಡಗಿದರು. ವಾರದಲ್ಲಿ ಅಮೇರಿಕಾ ವೀಸಾ ಇದ್ದ ಪಾಸ್ಪೋರ್ಟ್ ತರಿಸಿಕೊಂಡು ಅಮೆರಿಕಾಕ್ಕೆ ಹೋದರು . ತಿಂಗಳ ನಂತರ ರಮ್ಯ ಮರಳಿ ಬಂದಾಗ ಅವರೂ ಮತ್ತೆ ಬಾರ್ಸಿಲೋನಾ ಗೆ ಬಂದರು . ಬಂದವರು ನಮ್ಮ ಮನೆಗೂ ಬಂದರು. ಕೇಳದೆ ಹತ್ತಾರು ಗಿಫ್ಟ್ ತಂದಿದ್ದರು . ಬೇಡವೆಂದರೂ ಬಿಡದೆ ಅದನ್ನ ಒತ್ತಾಯವಾಗಿ ನಮಗೆ ಕೊಟ್ಟರು.

ಬಾಗ್ಲ ಪರಿವಾರದೊಂದಿಗೆ ಇಷ್ಟಕ್ಕೆ ನಮ್ಮ ಒಡನಾಟ ನಿಲ್ಲಲಿಲ್ಲ . ಪ್ರತಿ ವರ್ಷವೂ ಅವರಿಗೆ ಸಹಾಯ ಮಾಡಿದ ದಿನದಂದು ನನಗೆ ಧನ್ಯವಾದ ಹೇಳಿದ ಒಂದು ಪತ್ರ ಅವರ ಆಫೀಸ್ ನಿಂದ ಬಂದು ತಲುಪುತ್ತದೆ. ಪ್ರತಿ ವರ್ಷವೂ ಅವರ ಕುಟುಂಬದ ಸದಸ್ಯರೆಲ್ಲರೂ ಯಾವುದಾದರೂ ಒಂದು ದೇಶದಲ್ಲಿ ಸೇರಿ ಒಂದೆರೆಡು ವಾರ ಕಳೆಯುವುದು ಅವರ ಮನೆಯ ಪರಿಪಾಠ . ಈ ಘಟನೆಯ ನಂತರ ಸತತವಾಗಿ ಮೂರು ವರ್ಷ ಅವರ ಕುಟುಂಬ ಬಾರ್ಸಿಲೋನಾ ದಲ್ಲಿ ಸಭೆ ಸೇರುತ್ತಿತ್ತು .

ಒಂದು ದಿನ ತಪ್ಪದೆ ನನಗೂ ರಮ್ಯಳಿಗೂ ಅವರೊಂದಿಗೆ ಕಳೆಯುವ ಇನ್ವಿಟೇಷನ್ ತಪ್ಪದೆ ಇರುತ್ತಿತ್ತು . ಇಂದಿಗೂ ಬಾಗ್ಲ ಪರಿವಾರ ನನ್ನ ಅಂದಿನ ಸಣ್ಣ ಸಹಾಯವನ್ನ ನೆನೆಯುತ್ತಾರೆ . ಇಷ್ಟೆಲ್ಲಾ ಕಥೆಯನ್ನ ಹೇಳುವ ಉದ್ದೇಶ ಬಹಳ ಸರಳ . ನಾವು ಇದ್ದ ನೆಲದ ಭಾಷೆಯನ್ನ ಕಲಿಯಬೇಕು . ಎಷ್ಟು ಭಾಷೆ ಕಲಿತರೂ ಅದು ನಮಗೆ ವರದಾನ , ಆಸ್ತಿ. ಬಾರ್ಸಿಲೋನಾ ಗೆ ಬಂದು ಹತ್ತಾರು ವರ್ಷವಾದರೂ ಒಂದಕ್ಷರ ಸ್ಪ್ಯಾನಿಷ್ ಮಾತನಾಡದೆ ಜೀವನ ಸವೆಸುತ್ತಿರುವ ಅನೇಕ ಪಾಕಿಸ್ತಾನಿ , ಚೀನಿ ಮತ್ತು ಬಾಂಗ್ಲಾದೇಶೀಯರನ್ನ ಕಂಡಿದ್ದೇನೆ .

 ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ? ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ?

ಅದರಲ್ಲಿ ಭಾರತೀಯರೂ ಸೇರಿದ್ದಾರೆ ಎನ್ನುವುದು ದುಃಖದ ವಿಷಯ. ಚೀನಿಯರಂತೂ ಭಾಷೆ ಬಾರದೆ ವ್ಯಾಪಾರವನ್ನ ಕೂಡ ಮಾಡುತ್ತಿದ್ದಾರೆ . ಇದಕ್ಕೆಷ್ಟು ಬೆಲೆ ಎಂದರೆ , ಕ್ಯಾಲುಕುಲೇಟರ್ ನಲ್ಲಿ ಸಂಖ್ಯೆಯನ್ನ ಟೈಪ್ ಮಾಡಿ ತೋರಿಸುತ್ತಾರೆ ಎಂದರೆ ಇವರ ಮಟ್ಟ ಇನ್ನೆಂತಹುದು ಎನ್ನುವ ಅರಿವು ನಿಮ್ಮದಾದೀತು . ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಯ ಆಧಾರದ ಮೇಲೆ ದೇಶಗಳ ವಿಭಜನೆಯಾಗಿರುವುದು ಯೂರೋಪಿನಲ್ಲಿ ಎನ್ನಬಹದು.

ಇಲ್ಲಿ ಎಲ್ಲರಿಗೂ ತಮ್ಮ ಭಾಷೆಯ ಮೇಲೆ ಅತಿಯಾದ ವ್ಯಾಮೋಹ. ಇದನ್ನೆಲ್ಲಾ ನೋಡಿದ ಮೇಲೆ ನಾನು ಅಳವಡಿಸಿಕೊಂಡ ಜೀವನ ಪಾಠ ಸರಳ. ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸ ಬಾರದು ಎನ್ನುವುದು. ಕನ್ನಡದ ವಿಷಯದಲ್ಲೂ ಅಷ್ಟೇ ಪಾಲಿಸಿ. ಕನ್ನಡ ಎಂದು ಹಲವರು ಮಾಡುವ ಪ್ರಹಸನ ಕಂಡಾಗೆಲ್ಲ ಭಾಷೆ ಎನ್ನುವುದು ಸಂವಹನ ಮಾಧ್ಯಮವಷ್ಟೇ , ಅದಕ್ಕಾಗಿ ಕಚ್ಚಾಡುವ ಅವಶ್ಯಕತೆ ಇಲ್ಲ. ಕೊನೆಗೂ ನಮ್ಮ ಒಪ್ಪಿಗೆಯಿಲ್ಲದೆ ನಮ್ಮ ಮೇಲೆ ಹೇರಿಕೆ ಅಥವಾ ದಬ್ಬಾಳಿಕೆ ಮಾಡಲು ಯಾರಿದಂದಲೂ ಸಾಧ್ಯವಿಲ್ಲ ಅಲ್ಲವೇ ? ವಸ್ತು ಸ್ಥಿತಿ ಹೀಗಿದ್ದಾಗ ಕಿರುಚಾಡುವ ಬದಲು ಹೆಚ್ಚು ಹೆಚ್ಚು ಭಾಷೆಯನ್ನ ಕಲಿಯುವುದು ನಮಗೆ ಒಳ್ಳೆಯದು.

English summary
Barcelona Memories Coloumn By Rangaswamy Mookanahalli Part 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X