ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಇವತ್ತು ನಾವು ಎಲ್ಲಿ ಬದುಕುತ್ತೇವೆ ಎನ್ನುವುದಕ್ಕಿಂತ ಹೇಗೆ ಬದುಕುತ್ತೇವೆ ಎನ್ನುವುದು ಮತ್ತು ನಮ್ಮ ಚಿಂತನೆ ಮುಖ್ಯವಾಗುತ್ತದೆ . ಉಳಿದಂತೆ ಸಣ್ಣ ಪುಟ್ಟ ತೊಂದರೆಗಳು ಎಲ್ಲಡೆಯೂ ಇರುತ್ತದೆ . ಬದುಕು ಎಲ್ಲಕ್ಕಿಂತ ಮಿಗಿಲಾದದ್ದು ಅದನ್ನ ನಮ್ಮಿಚ್ಛೆಯಂತೆ ಬದುಕುವುದು ನಿಜವಾದ ಸ್ವಾತಂತ್ರ್ಯ . ಬದುಕು ವಿಜ್ಞಾನವಲ್ಲ , ಗಣಿತವಂತೂ ಅಲ್ಲವೇ ಅಲ್ಲ !

ಇಲ್ಲಿ ಯಾವುದು ಸರಿ ?ಯಾವುದು ತಪ್ಪು ?ಎಂದು ನಿಖರವಾಗಿ ಹೇಳಲು ಬರುವುದಿಲ್ಲ . ಇವತ್ತಿಗೆ ಈ ಸಾಲುಗಳನ್ನ ಬರೆಯುವ ಧೈರ್ಯ ಮತ್ತು ಸ್ವಾತಂತ್ರ್ಯ ಎರಡೂ ಸಿಕ್ಕಿದೆ. ಆದರೆ ಇಪ್ಪತ್ತು ವರ್ಷದ ಹಿಂದೆ ಈ ಮಾತನ್ನ ಹೇಳಲು ನನಗೆ ಸಾಧ್ಯವಿರಲಿಲ್ಲ. ಅದಕ್ಕೆ ಕಾರಣ ಕೂಡ ಬಹಳ ಸರಳ. ಹೊಟ್ಟೆ ತುಂಬಿದ ನಂತರದ ಯೋಚನೆಗಳಿಗೂ , ಹಸಿದ ಹೊಟ್ಟೆಯ ಯೋಚನೆಗಳಿಗೂ ಇರುವ ವ್ಯತ್ಯಾಸವದು.

ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ

ಸಿಗರೇಟು ಸೇವನೆ , ಆಲ್ಕೋಹಾಲ್ ಕುಡಿಯುವುದು ಮತ್ತು ಮಾಂಸ ತಿನ್ನುವುದು ಕೆಟ್ಟದ್ದು ಎನ್ನುವುದನ್ನ ಬುದ್ದಿ ಬಂದಾಗಿನಿಂದ ಕೇಳಿಕೊಂಡು ಬಂದಿದ್ದೇನೆ. ನನ್ನಜ್ಜಿಯಂತೂ ಗರುಡ ಪುರಾಣದ ಕಥೆಗಳನ್ನ ರೋಚಕವಾಗಿ ವಿವರಿಸಿ ಹೇಳುತ್ತಿದ್ದಳು. ಸಮಾಜ ಮುಂದೆ ಹೇಗೆ ಬದಲಾಗುತ್ತದೆ ಎನ್ನುವುದನ್ನ ಗರುಡ ಪುರಾಣದಲ್ಲಿ ವರ್ಣಿಸಿದ್ದಾರೆ ಎನ್ನುವುದು ಅಜ್ಜಿಯ ಅದಮ್ಯ ನಂಬಿಕೆ. ಅಜ್ಜಿ ಹೇಳಿದ್ದನ್ನ ಪೂರ್ಣವಾಗಿ ನಂಬಿಕೊಂಡು ಬೆಳೆದ ನನಗೆ ಸ್ಪೇನ್ ತಲುಪಿದಾಗ ಆಘಾತವಾಗಿತ್ತು .

Barcelona Memories Coloumn By Rangaswamy Mookanahalli Part 12

ಮಾಂಸಾಹಾರ , ಕುಡಿತ ಮತ್ತು ಸಿಗರೇಟು ಸೇವನೆ ಮಾಡುವವರು ಬಹಳ ಕೆಟ್ಟ ಜನರು ಎನ್ನುವ ನಂಬಿಕೆಯಲ್ಲಿ ಬೆಳೆದಿದ್ದ ನನಗೆ ಒಂಥರಾ ಶಾಕ್ . ಭಾರತದಲ್ಲಿ ಹೆಚ್ಚು ಕಡಿಮೆ ನಮ್ಮ ಆಚಾರ ವಿಚಾರಗಳನ್ನ ಹೋಲುವರೊಂದಿಗೆ ಒಡನಾಟ ಇದ್ದ ಕಾರಣ ಹೊರ ಜಗತ್ತಿನ ಹೆಚ್ಚು ತಿಳುವಳಿಕೆಗೆ ಅವಕಾಶ ಸಿಗಲಿಲ್ಲ. ಇಲ್ಲಿ ನೋಡಿದರೆ ಸಿಗರೇಟು , ಮದ್ಯ ಮತ್ತು ಮಾಂಸಾಹಾರ ಸೇವಿಸವರು ಹುಡುಕಿದರೂ ಸಿಗುವುದಿಲ್ಲ . ಆದರೆ ಈ ಜನ ಕೆಟ್ಟವರಲ್ಲ . ಇಲ್ಲಿಗೆ ಬಂದ ನಂತರ ಕಲಿತ ಮೊದಲ ಪಾಠವಿದು.

'ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!' 'ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!'

ಕೇವಲ ಅವರ ಊಟ ತಿಂಡಿಯನ್ನ ಆಧಾರವಾಗಿಟ್ಟು ಕೊಂಡು ಅವರನ್ನ ಒಳ್ಳೆಯವರು ಅಥವಾ ಕೆಟ್ಟವರು ಎನ್ನುವ ಬ್ರಾಕೆಟ್ ನಲ್ಲಿ ಹಾಕುವುದು ತಪ್ಪು ಎನ್ನುವುದು. ಹೇಳಿಕೇಳಿ ಇದು ಮಾಂಸಾಹಾರಿ ದೇಶ. ಇಲ್ಲಿ ನನ್ನಂತ ಪುಳಿಚಾರಿಗರಿಗೆ ಮನೆಯಲ್ಲಿ ಮಾಡಿಕೊಂಡು ತಿನ್ನುವುದು ಮಾತ್ರ ಇರುವ ಏಕೈಕ ಆಯ್ಕೆ. ಇತ್ತೀಚಿಗೆ ಹತ್ತಾರು ಇಂಡಿಯನ್ ರೆಸ್ಟೋರೆಂಟ್ ಬಂದಿವೆ . ಆದರೆ ಅವೆಲ್ಲಾ ಪಂಜಾಬಿ ಅಥವಾ ಪಾಕಿಸ್ತಾನಿ ಶೈಲಿಯ ಆಹಾರಗಳು. ಮೊದಲ ದಿನಗಳಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಊಟಕ್ಕೆ ಕುಳಿತಾಗೆಲ್ಲ ನಿನಗೆ ಗೊತ್ತಿಲ್ಲ ನೀನು ಏನನ್ನ ಮಿಸ್ ಮಾಡಿಕೊಳ್ಳುತ್ತಿದ್ದೀಯ ಎಂದು , ಇದನ್ನ ರುಚಿ ನೋಡು ಹೀಗೆ ಹತ್ತಾರು ಒತ್ತಡಗಳು ಎದುರಾಗಿದ್ದವು.

ಬಿಯರ್ ಬಗ್ಗೆಯೂ ಇದೆ ಸಮಸ್ಯೆಯನ್ನ ಎದುರಿಸಿದ್ದೇನೆ. ಅವರ ಆಹಾರವನ್ನ ಗೌರವಿಸುವುದನ್ನ ಕಲಿತ ನನಗೆ ನನ್ನ ಆಹಾರ ಪದ್ದತಿಯನ್ನ ಬಿಟ್ಟು ಕೊಡುವ ಮನಸ್ಸು ಮಾತ್ರ ಬರಲಿಲ್ಲ. ಇಂದಿಗೂ ಅದು ಮುಂದುವರಿದಿದೆ. ನಂತರದ ದಿನಗಳಲ್ಲಿ ಸ್ಥಳೀಯರು , ಸಹೋದ್ಯೋಗಿಗಳು ಎಲ್ಲಾದರೂ ಒಟ್ಟಿಗೆ ಊಟಕ್ಕೆ ಹೋದರೆ ಅವರೇ ಖುದ್ದಾಗಿ ನನಗೆ ವೆಜಿಟೇರಿಯನ್ ಆಹಾರ ಸಿಗುವ ವ್ಯವಸ್ಥೆಯನ್ನ ಮಾಡುತ್ತಿದ್ದರು . ನಮ್ಮ ನಿರ್ಧಾರ ಮತ್ತು ಬೇಕು ಬೇಡಗಳ ಬಗ್ಗೆ ಖಚಿತತೆ ಇದ್ದರೆ ಇತರರು ಕೂಡ ನಮ್ಮನ್ನ ಗೌರವಿಸುತ್ತಾರೆ ಎನ್ನುವ ಬದುಕಿನ ಪಾಠ ಕೂಡ ನನ್ನದಾಯಿತು .

ಇಲ್ಲಿ 'ಲ ರಾಂಬ್ಲಾ' ಎನ್ನುವ ಒಂದು ವಿಶ್ವ ವಿಖ್ಯಾತ ರಸ್ತೆಯಿದೆ. ವರ್ಷಾಂತ್ಯದಲ್ಲಿ ಇಲ್ಲಿ ಬಾರ್ಸಿಲೋನಾ ನಗರದ ಜನರು ಸಾಗರೋಪಾದಿಯಲ್ಲಿ ಸೇರುತ್ತಾರೆ. ಅದು 2000 ಇಸವಿಯ ಡಿಸೆಂಬರ್ 31, ರಸ್ತೆಯಲ್ಲಿ ಬಿಯರ್ ಅನ್ನು ಪುಕ್ಕಟೆ ಹಂಚುತ್ತಿದ್ದರು. ಎಲ್ಲೆಡೆ ಅಬ್ಬರದ ಮ್ಯೂಸಿಕ್ . ನನಗೆ ಇಂತಹ ಪರಿಸರ ಒಗ್ಗಿ ಬರುವುದಿಲ್ಲ. ಪ್ರವಾಸ ಮಾಡುವ ದಿನಗಳಲ್ಲಿ ಬಿಟ್ಟರೆ ರಾತ್ರಿ ೯ ಅಥವಾ ೯. ೩೦ಕ್ಕೆ ನಿದ್ದೆ ಮಾಡುವ ಜಾಯಮಾನದ ನನಗೆ , ಗೆಳೆಯರು ಬಹಳ ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದರು. ನಿತ್ಯ ಜೀವನದಲ್ಲಿ ನನ್ನ ಪಾಡಿಗೆ ನಾನಿದ್ದ ನನಗೆ ಇದೊಂದು ಹೊಸ ಲೋಕ , ಹೊಸ ಅನುಭವ.

ನಮ್ಮಲ್ಲಿ ಯಾವುದೋ ಅತ್ಯಂತ ಖಾಸಗಿ ಮತ್ತು ಪವಿತ್ರವೆಂದು ಭಾವಿಸುತ್ತೇವೆ ಅಂತಹ ಕಾರ್ಯಗಳು ಇಲ್ಲಿ ರಸ್ತೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದವು. ಅಜ್ಜಿ ಹೇಳುತ್ತಿದ್ದಳು ' ನಾಟಕದವರು ರಾಜ್ಯ ಆಳಲು ಶುರು ಮಾಡುತ್ತಾರೆ , ಹುಡುಗ ಹುಡುಗಿಯ ಧಿರಿಸನ್ನ , ಹುಡುಗಿ ಹುಡುಗನ ಬಟ್ಟೆಯನ್ನ ತೊಡಲು ಶುರು ಮಾಡುತ್ತಾರೆ. ಹೆಣ್ಣು ಗಂಡಿನ ನಡುವೆ ವ್ಯತ್ಯಾಸ ಎನ್ನುವುದು ಇಲ್ಲವಾಗಿ ಸ್ವೇಚ್ಛಾಚಾರ ಮುನ್ನೆಲೆಗೆ ಬರುತ್ತದೆ ' ಎಂದು. ನಾಟಕದವರು ರಾಜ್ಯವಾಳಿದ್ದು ಕಂಡಿದ್ದ ನನಗೆ ಇಲ್ಲಿಗೆ ಬಂದ ಮೇಲೆ ಅಜ್ಜಿಯ ಇತರ ಮಾತುಗಳು ಕೂಡ ನೆನಪಾಗ ತೊಡಗಿದವು.

Barcelona Memories Coloumn By Rangaswamy Mookanahalli Part 12

ಯುವ ಜನತೆ ಮುಕ್ಕಾಲು ಪಾಲು ಯೂರೋಪಿನಲ್ಲಿ ಇರುವುದು ಹೀಗೆ . ಮೂವತ್ತರ ವರೆಗೆ ಅವರ ಬದುಕಿನಲ್ಲಿ ಮೋಜು ಎನ್ನುವುದು ಬಿಟ್ಟರೆ ಬೇರೇನೂ ಇರುವುದಿಲ್ಲ. ಯಾವುದನ್ನೂ ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ . ಆದರೆ ಒಮ್ಮೆ ಕಮಿಟ್ ಆದರೆ ಇವರಷ್ಟು ಬದ್ಧತೆ ಉಳ್ಳವರು ಕೂಡ ಯಾರೂ ಇಲ್ಲ ಎನ್ನಬಹದು. ಭಾರತದಲ್ಲಿ ಸಾಮಾನ್ಯವಾಗಿ ಮದುವೆಯ ನಂತರ ಹುಡಿಗಿ , ಹಡುಗನ ಮನೆಗೆ ಹೋಗುತ್ತಾಳೆ . ಇಲ್ಲಿ ಇದು ವಿರುದ್ಧ. ಅಂದರೆ ಹುಡುಗಿ ಸಾಮಾನ್ಯವಾಗಿ ತನ್ನ ಪೋಷಕರ ಮನೆಯ ಬಳಿ ವಾಸಿಸಲು ಇಚ್ಛಿಸುತ್ತಾಳೆ .

ಹೀಗಾಗಿ ಮದುವೆಯ ನಂತರ ಅಥವಾ ಒಟ್ಟಾಗಿ ಜೀವಿಸಲು ಶುರು ಮಾಡಿದ ನಂತರ ಹುಡುಗ ಪೋಷಕರ ಮನೆಯಲ್ಲಿ ಅಥವಾ ಎಲ್ಲೇ ವಾಸವಿರಲಿ ಬಿಟ್ಟು ಹುಡುಗಿ ಹೇಳಿದ ಜಾಗದಲ್ಲಿ ವಾಸಿಸಲು ಶುರು ಮಾಡುತ್ತಾನೆ. ಮೊದಲೇ ಹೇಳಿದಂತೆ ಮುಕ್ಕಾಲು ಪಾಲು ಹುಡುಗಿಯ ಪೋಷಕರ ಮನೆಯ ಆಸುಪಾಸಿನಲ್ಲಿ ವಾಸಿಸುತ್ತಾರೆ. ತೀರಾ ಇತ್ತೀಚಿಗೆ ಇಲ್ಲಿ ಮದುವೆಗೆ ಮುಂಚೆ ಸಹಬಾಳ್ವೆ ನಡೆಸುವುದು ಜಾರಿಗೆ ಬಂದಿದೆ. ಸಾಮಾನ್ಯ ಸ್ಪ್ಯಾನಿಷ್ , ಅಥವಾ ಹಳ್ಳಿಯಲ್ಲಿ ವಾಸಿಸುವ ಜನರಲ್ಲಿ ಇಂದಿಗೂ ಇವೆಲ್ಲ ವರ್ಜ್ಯ.

ಕುಟುಂಬ ಪದ್ದತಿಯಲ್ಲಿ ಬಹಳ ನಂಬಿಕೆಯಿಟ್ಟು ಬದುಕುತ್ತಿದ್ದ ಸ್ಪೇನ್ , ಬದಲಾವಣೆಯ ಗಾಳಿಗೆ ಬಹಳ ತೆರೆದು ಕೊಂಡಿದೆ. ಅದಕ್ಕಿಂತ ಹೆಚ್ಚಾಗಿ ಒಂದು ಹೆಜ್ಜೆ ಮುಂದೆ ಹೋಗಿದೆ ಎನ್ನಬಹದು. ಇಲ್ಲಿ ಯಾರೊಬ್ಬರೂ ಇನ್ನೊಬ್ಬರನ್ನ ಬಹಳ ಬೇಗ ಜಡ್ಜ್ ಮಾಡುವುದಿಲ್ಲ . ' ಕಾದ ಉನೊ , ಕೊಮಾ ಎಸ್ ' ಅಥವಾ ' ಕಾದ ಉನೊ ಕೋನ್ ಸು ಐರೆ ' ಎನ್ನುವುದು ಇಲ್ಲಿನ ಪ್ರತಿಯೋಬ್ಬರ ಬಾಯಲ್ಲೂ ಬರುವ ಅತ್ಯಂತ ಸಾಮಾನ್ಯ ಪದ. ಅಂದರೆ ' ಪ್ರತಿಯೊಬ್ಬರೂ ಅವರ ಪಾಡಿಗೆ ' ಅಥವಾ ' ಅವರವರ ಉಸಿರು ಅವರದು ' ಎನ್ನುವ ಅರ್ಥದಲ್ಲಿ ಈ ವಾಕ್ಯವನ್ನ ಬಳಸುತ್ತಾರೆ.

ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ? ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ?

ಈ ಕಾರಣಕ್ಕೆ ಇರಬಹದು ,ಜರ್ಮನಿ , ಫ್ರಾನ್ಸ್ , ಇಂಗ್ಲೆಂಡ್ ನಿಂದ ಇಲ್ಲಿಗೆ ಜನ ವಾರಾಂತ್ಯದಲ್ಲಿ ಬರುತ್ತಾರೆ. ಇಲ್ಲಿನ ಬೀಚ್ ಗಳಲ್ಲಿ ಹುಟ್ಟುಡುಗೆಯಲ್ಲಿ ವಿಹರಿಸುತ್ತಾರೆ. ಇಲ್ಲಿ ನಗ್ನತೆ ಎನ್ನುವುದನ್ನ ನೋಡುವ ದೃಷ್ಟಿಯೇ ಬೇರೆ ! ಸ್ಪೇನ್ ರಸ್ತೆಯಲ್ಲಿ ನೀವು ನಡೆದಾಗುವಾಗ ಯಾರದೊರೊಬ್ಬರು ನಮ್ಮ ಗೊಮ್ಮಟೇಶ್ವರನನ್ನ ನೆನೆಪಿಸುವಾಗೆ ನಡೆದು ಹೋದರೆ ನೀವು ಅಚ್ಚರಿ ಪಡಬೇಕಿಲ್ಲ !! ಏಕೆಂದರೆ ಇಲ್ಲಿ ಹೀಗೆ ನಗ್ನವಾಗಿ ಓಡಾಡುವುದು ಅಪರಾಧವಲ್ಲ .

ನಾನು ವಾರಾಂತ್ಯದಲ್ಲಿ ಲ್ಯಾಂಗ್ವಾಜ್ ಎಕ್ಸ್ಚೇಂಜ್ ಎನ್ನುವ ಒಂದಷ್ಟು ಗ್ರೂಪ್ ಗಳಲ್ಲಿ ಸೇರಿಕೊಂಡಿದ್ದೆ. ಭಾಷೆ ಕಲಿಯಲು ಮತ್ತು ಸ್ಥಳೀಯರೊಂದಿಗೆ ಬೆರೆಯಲು ಇದಕ್ಕಿಂತ ಉತ್ತಮ ಅವಕಾಶ ಸಿಕ್ಕದು ಎನ್ನುವುದು ನನ್ನ ಭಾವನೆ. ಈ ವಿಷಯದಲ್ಲಿ ಸ್ಪ್ಯಾನಿಷರು ಬಹಳ ತೆರೆದ ಮನಸ್ಸಿನವರು. ಇದೆ ಮಾತನ್ನ ಬೇರೆ ಯೂರೋಪಿನ ದೇಶಗಳಿಗೆ ಅನ್ವಯಿಸಲು ಬರುವುದಿಲ್ಲ. ಬೇರೆ ದೇಶಗಳಲ್ಲಿ ಸ್ಥಳೀಯರು ಸುಲಭವಾಗಿ ವಲಸಿಗರೊಂದಿಗೆ ಬೆರೆಯುವುದಿಲ್ಲ . ಸ್ಪೇನ್ ಇದಕ್ಕೆ ಅಪವಾದ. ಜೊತೆಗೆ ಇವರು ಒಂದು ಸ್ಥಳವನ್ನ ಅಥವಾ ಏರಿಯಾ ವನ್ನ ವಲಸಿಗರಿಗೆ ಎಂದು ಬಿಟ್ಟು ಕೊಡುವುದಿಲ್ಲ.

ಇಂಗ್ಲೆಂಡ್ ನಲ್ಲಿ ವಲಸಿಗರು ಹೆಚ್ಚಾಗಿ ಮನೆಯನ್ನ ಕೊಳ್ಳುವ ಜಾಗದಲ್ಲಿ ಸ್ಥಳೀಯ ಬ್ರಿಟಿಷ್ ಮನೆಯನ್ನ ಕೊಳ್ಳಲು ಬಯಸುವುದಿಲ್ಲ. ಇದಕ್ಕೆ ಅಪವಾದಾಗಲಿಲ್ಲವೆಂದಲ್ಲ ಆದರೆ ಸಾಮನ್ಯವಾಗಿ ನಡೆಯುವುದು ಹೀಗೆ. ಸ್ಪ್ಯಾನಿಶರು ಮಾತ್ರ ಇದಕ್ಕೆಲ್ಲ ಬಗ್ಗುವರಲ್ಲ , ಪಾಕಿಸ್ತಾನಿ , ಬಾಂಗ್ಲಾದೇಶಿಗಳು ಹಚ್ಚಾಗಿರುವ ಸ್ಥಳದಲ್ಲಿ ಕೂಡ ತಮ್ಮ ಛಾಪನ್ನ ಒತ್ತದೆ ಬಿಡುವುದಿಲ್ಲ. ಎಷ್ಟೇ ಆದರೂ ಜಗತ್ತನ್ನ ಹುಡುಕಿ ಹೊರಟ ನಾವಿಕರ ದೇಶವಲ್ಲವೇ ??

ಇನ್ನೊಂದು ನನಗೆ ಅತ್ಯಂತ ಆಶ್ಚರ್ಯ ಎನ್ನಿಸಿದ ವಿಷಯವೆಂದರೆ , ಮನೆಯಿಂದ ಐವತ್ತು ಅಥವಾ ನೂರು ಅಡಿ ದೂರದಲ್ಲಿರುವ , ಕೆಲವೊಮ್ಮೆ ಮನೆಯ ಕೆಳಗೆ ಇರುವ ಬಾರ್ ನಲ್ಲಿ ಕುಳಿತು ಇವರು ಗಂಟೆಗಟ್ಟಲೆ ಕಳೆಯುವುದು. ಮನೆಯಲ್ಲಿ ಕುಳಿತು ಐವತ್ತು ಸೆಂಟ್ ನಲ್ಲಿ ಕುಡಿಯಬಹುದಾದ ಬಿಯರ್ ಗೆ ಮೂರು ಯುರೋ ವ್ಯಯಿಸುವ ಇವರ ಮನಸ್ಥಿತಿ ಅರಿತು ಕೊಳ್ಳಲು ಬಹಳ ಸಮಯ ಬೇಕಾಯ್ತು. ನಿಮಗೆ ಗೊತ್ತಿರಲಿ ಯೂರೋಪಿನಲ್ಲಿ ಅತ್ಯಂತ ಹೆಚ್ಚು ಹೀಗೆ ಬಾರ್ ನಲ್ಲಿ ಅಥವಾ ಹೊರಗಡೆ ತಿನ್ನುವುದು ಅಥವಾ ಕುಡಿಯುವುದು ಮಾಡುವುದರಲ್ಲಿ ಸ್ಪ್ಯಾನಿಷರಿಗೆ ಪ್ರಥಮ ಸ್ಥಾನ.

ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!

ಮಾಂಸಾಹಾರ ಒತ್ತಟ್ಟಿಗಿರಲಿ ಮೊಟ್ಟೆಯನ್ನ ಕೂಡ ತಿನ್ನದ ನಾನು ಪ್ರಥಮ ಐದು ವರ್ಷದ ಬಾರ್ಸಿಲೋನಾ ಜೀವನವನ್ನ ಫ್ಲಾಟ್ ಶೇರ್ ಮಾಡಿಕೊಂಡು ಕಳೆಯುವಂತಾಯಿತು. ಒಂದೆರೆಡು ವರ್ಷದಲ್ಲಿ ನನ್ನ ಪಾಡಿಗೆ ನಾನು ಇರುವ ಆರ್ಥಿಕ ತಾಕತ್ತು ಬಂದಿತ್ತಾದ್ದರೂ , ಒಬ್ಬನೇ ಇದ್ದು ಮಾಡುವುದೇನು ? ಜೊತೆಗೆ ಇತರರೊಂದಿಗೆ ಬದುಕುವುದು ಬಹಳಷ್ಟು ಪಾಠವನ್ನ ಕಲಿಸುತ್ತದೆ.

ಒಂದೇ ಫ್ರಿಡ್ಜ್ ನಲ್ಲಿ ಒಂದು ಭಾಗದಲ್ಲಿ ನನ್ನ ತರಕಾರಿಗಳು ಪವಡಿಸಿದ್ದರೆ ಇನ್ನೊಂದು ಭಾಗದಲ್ಲಿ , ಹಂದಿ , ಕುರಿ , ಮೇಕೆ ಮತ್ತು ಮೀನುಗಳು ತಮ್ಮ ಜಾಗದಲ್ಲಿ ವಿರಮಿಸಿರುತ್ತಿದ್ದವು. ಹೀಗೆ ಬದುಕು ಎಂದರೆ ನಾವು ಅಂದು ಕೊಂಡದಷ್ಟೇ ಅಲ್ಲ , ಅದನ್ನ ಮೀರಿದ ಅರ್ಥಗಳನ್ನ ಅದು ಕೊಡುತ್ತಾ ಹೋಗುತ್ತದೆ ಎನ್ನುವುದನ್ನ ಆ ದಿನಗಳು ಕಲಿಸಿತು . ಇಂದಿಗೂ ಅದು ಮರೆತಿಲ್ಲ. ಅದನ್ನ ಅನನ್ಯಳಿಗೆ ವರ್ಗಾವಣೆ ಕೂಡ ಮಾಡಿದ್ದೇವೆ. ನಾವು ಮಾಂಸಾಹಾರ ಸೇವಿಸುವುದಿಲ್ಲ ಆದರೆ ಬರೆಯವರು ತಿಂದರೆ ' ಥು ' ಅಥವಾ 'ಯಕ್ ' ಎನ್ನುವುದು ಮಾಡುವುದಿಲ್ಲ.

ಮೊದಲ ಸಾಲುಗಳಲ್ಲಿ ಹೇಳಿದಂತೆ ಬದುಕು ವಿಜ್ಞಾನವಲ್ಲ. ಇಲ್ಲಿ ಸರಿ ತಪ್ಪುಗಳ ಲೆಕ್ಕಾಚಾರ ಹಾಕುವರಾರು ?ನಮಗೆ ಸರಿ ಎನ್ನಿಸಿದ್ದು , ಇನ್ನೊಬ್ಬರಿಗೆ ತಪ್ಪು ಎನ್ನಿಸಬಹದುದಲ್ಲವೇ ? ಇನ್ನೊಬ್ಬರಿಗೆ ಕೆಡುಕು ಮಾಡದೆ , ಇರುವ ಬದುಕನ್ನ ಸಂತೋಷದಿಂದ ಕಳೆದರೆ ಅದಕ್ಕಿಂತ ಬೇರೇನಿದೆ ? ಸಮಯ ಎನ್ನುವುದು ಕ್ಷಣ ಮಾತ್ರದಲ್ಲಿ ಕರಗಿಹೋಗುತ್ತದೆ. ಅದನ್ನ ಸರಿಯಾಗಿ ಬಳಸಿಕೊಂಡು ಗಳಿಸುವ ಅನುಭವವೇ ಜೀವನ ಉಳಿದ್ದಿದೆಲ್ಲ ನನ್ನ ಪ್ರಕಾರ ಶೂನ್ಯ.

English summary
Barcelona Memories Coloumn By Rangaswamy Mookanahalli Part 12,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X