ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಡಿಸೆಂಬರ್ ಬಂತೆಂದರೆ ಸಾಕು ಯೂರೋಪ್ ತುಂಬೆಲ್ಲಾ ಕ್ರಿಸ್ಮಸ್ ಹಬ್ಬದ ಸಡಗರದ ವಾತಾವರಣ ಮನೆ ಮಾಡುತ್ತದೆ.ತಿಂಗಳ ಪ್ರಾರಂಭದಿಂದಲೇ ಜನರು ಹಬ್ಬಕ್ಕೆ ಬೇಕಾದ ವಸ್ತುಗಳನ್ನ ಕೊಳ್ಳುವ ಕಾಯಕದಲ್ಲಿ ಮಗ್ನರಾಗುತ್ತಾರೆ. ಮಕ್ಕಳಿಗೆ ಉಡುಗೊರೆ ಸಿಗುತ್ತದೆ ಎನ್ನುವ ಖುಷಿಯಾದರೆ , ಮನೆಮಂದಿಯೆಲ್ಲಾ ಕಲೆತು ಹರಟೆ ಹೊಡೆಯುತ್ತಾ ಸಮಯ ಕಳೆಯುವ ಖುಷಿ ಮನೆಯ ಇತರ ಸದಸ್ಯರದ್ದು.

ಇದು ಕ್ರಿಶ್ಚಿಯನ್ನರಿಗೆ ಅತ್ಯಂತ ದೊಡ್ಡ ಹಬ್ಬ. ಈ ಹಬ್ಬದಲ್ಲಿ ಮನೆಯ ಎಲ್ಲಾ ಸದಸ್ಯರೂ ಒಂದು ಕಡೆ ಸೇರುವುದು ಇಲ್ಲಿ ಪದ್ದತಿ. ಬೇರೆ ಊರುಗಳಲ್ಲಿ ಅಥವಾ ದೇಶದಲ್ಲಿ ಇದ್ದವರು ಕೂಡ ಕುಟುಂಬವನ್ನ ಸೇರಿ ಕೊಳ್ಳಲು ಪ್ರಯಾಣಿಸುವುದು ಕೂಡ ಅತ್ಯಂತ ಸಾಮಾನ್ಯ. ಬಾರ್ಸಿಲೋನಾ ನಗರದಲ್ಲಿ ಪ್ರಥಮ ಬಾರಿಗೆ ಕ್ರಿಸ್ಮಸ್ ಹಬ್ಬದ ಸಡಗರವನ್ನ ಸವಿಯುವ ಭಾಗ್ಯ ನನ್ನದಾಗಿತ್ತು. ಇಡೀ ನಗರವನ್ನ ದೀಪದಿಂದ ಅಲಂಕರಿಸುತ್ತಾರೆ. ಅಚ್ಚರಿ ಎನ್ನುವಂತೆ ಸ್ಪೇನ್ ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ಸಂಬಳವನ್ನ ದುಪ್ಪಟ್ಟು ನೀಡುತ್ತಾರೆ.

'ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!''ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!'

ಜೊತೆಗೆ 'ಹಾಮೋನ್ ಮತ್ತು ವೈನ್' ಗಳನ್ನ ಕೂಡ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಉಡುಗೊರೆ ರೂಪದಲ್ಲಿ ನೀಡುವುದು ಇಲ್ಲಿ ಸಾಮಾನ್ಯವಾಗಿದೆ. ಹಾಮೋನ್ ಎಂದರೆ ಹಂದಿಯ ತೊಡೆಯ ಭಾಗದ ಮಾಂಸವನ್ನ ನಮ್ಮ ಉಪ್ಪಿನಕಾಯಿ ಕಾಯಂತೆ ಬಹಳಷ್ಟು ವರ್ಷ ಕ್ಯೂರ್ ಮಾಡಿ ನಂತರ ಒಣಗಿದ ಮಾಂಸವನ್ನ ಸಣ್ಣದಾಗಿ , ಅತ್ಯಂತ ತೆಳುವಾಗಿ ಕತ್ತರಿಸಿ ತಿನ್ನುತ್ತಾರೆ. ಮಾಂಸ ಎಷ್ಟು ವರ್ಷ ಹಳೆಯದು ಎನ್ನುವುದರ ಮೇಲೆ ಅದರ ಬೆಲೆಯನ್ನ ನಿರ್ಧಾರ ಮಾಡುತ್ತಾರೆ. ಹೀಗೆ ಹಂದಿಯ ಮಾಂಸವನ್ನ ಅತ್ಯಂತ ತೆಳುವಾಗಿ ಕತ್ತರಿಸುವುದು ಇಲ್ಲಿ ಒಂದು ವೃತ್ತಿ. ಇದರಲ್ಲಿ ನಿಪುಣತೆ ಹೊಂದಿದವರಿಗೆ ಎಲ್ಲಿಲ್ಲದ ಬೇಡಿಕೆ , ಅದಕ್ಕೆ ತಕ್ಕಂತೆ ಕೈತುಂಬಾ ವೇತನ ಕೂಡ ನೀಡುತ್ತಾರೆ. ಇರಲಿ

Barcelona Memories Coloumn By Rangaswamy Mookanahalli Part 11

ಮೊದಲೇ ಹೇಳಿದಂತೆ ಕ್ರಿಸ್ಮಸ್ ಹಬ್ಬ ಯೂರೋಪಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ರಸ್ತೆಯನ್ನ ದೀಪದಿಂದ ಅಲಂಕರಿಸುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಚಳಿ ಇರುತ್ತದೆ. ಆದರೂ ಕ್ರಿಸ್ಮಸ್ ಹಬ್ಬದ ಗಮ್ಮತ್ತು ನೋಡಬೇಕೆಂದರೆ ಡಿಸೆಂಬರ್ ನಲ್ಲಿ ಯೂರೋಪಿನ ಯಾವದೇ ದೇಶದಲ್ಲಾದರೂ ಸರಿ ಇದ್ದು ಅದನ್ನ ಅನುಭವಿಸಬೇಕು. ಆದರೆ ಈ ವರ್ಷ ಕರೋನ ಕಾರಣ ಹೇಳಿ ಹಬ್ಬದ ವಾತಾವರಣಕ್ಕೆ ಒಂದಷ್ಟು ಬ್ರೇಕ್ ಹಾಕಲಾಗಿದೆ.

ಸ್ಪೇನ್ ಮೇ 31 ,2021ರ ವರೆಗೆ ಸ್ಟೇಟ್ ಆಫ್ ಎಮರ್ಜೆನ್ಸಿ ಸಡಿಲಿಸುವುದಿಲ್ಲ ಎಂದು ನಿರ್ಧಾರ ಮಾಡಿದೆ. ಈ ಬಾರಿ ಕ್ರಿಸ್ಮಸ್ ಹಬ್ಬಕ್ಕೆ 6ಜನರ ಮೀರಿ ಸೇರುವಂತಿಲ್ಲ ಎನ್ನುವ ಆದೇಶ ಹೊರಡಿಸಿದೆ. ಜರ್ಮನಿ 10 ಜನರು ಸೇರಬಹುದು ಅದಕ್ಕಿಂತ ಹೆಚ್ಚಿಲ್ಲ ಎಂದಿದೆ. ಮಕ್ಕಳಿಗೆ , ಅದರಲ್ಲೂ 14ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ. ಫ್ರಾನ್ಸ್ 30 ಜನ ಸೇರಲು ಅನುಮತಿ ನೀಡಿದೆ. ಬಹಳಷ್ಟು ಯೂರೋಪಿಯನ್ ದೇಶಗಳು ಡಿಸೆಂಬರ್ ಮೊದಲ ವಾರದ ಡೇಟಾ ನೋಡಿ ಆಮೇಲೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿವೆ.

ಬಹುತೇಕ ಯೂರೋಪಿಯನ್ ದೇಶಗಳು ಇಂದಿಗೂ ಲಾಕ್ ಡೌನ್ ಸ್ಥಿತಿಯಲ್ಲಿವೆ. ವ್ಯಾಪಾರ -ವಹಿವಾಟು ಕಥೆ ಕೇಳುವುದು ಬೇಡ. 2021ಕ್ಕೆ ವಿಶ್ವದಾದಂತ್ಯ ಜನರನ್ನ ಮತ್ತೆ ಹೇಗೆ ಪ್ರವಾಸಕ್ಕೆ ಸೆಳೆಯಬೇಕು ಎನ್ನುವುದು ಸದ್ಯಕ್ಕೆ ಯೂರೋಪಿನ ದೇಶಗಳು ಚಿಂತಿಸುತ್ತಿರುವ ವಿಷಯ. ಕ್ರಿಸ್ಮಸ್ ಹಬ್ಬದಲ್ಲಿ ಸಂತ ಕ್ಲಾಸ್ಸ್ ಬಂದು ಉಡುಗೊರೆ ನೀಡುವುದು ನಡೆದು ಬಂದಿರುವ ವಾಡಿಕೆ. ಮನೆಯ ಹಿರಿಯ ಅಥವಾ ಮನೆಯ, ಮಕ್ಕಳ ಶ್ರೇಯಸ್ಸನ್ನ ಬಯಸುವ ಯಾರಾದರೂ ಸರಿಯೇ ಈ ರೀತಿಯ ವೇಷವನ್ನ ಧರಿಸಿ , ಮಕ್ಕಳಿಗೆ ಉಡುಗೊರೆ ನೀಡುತ್ತಾರೆ.

Barcelona Memories Coloumn By Rangaswamy Mookanahalli Part 11

 ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ? ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ?

ಪುಟ್ಟ ಮಕ್ಕಳು ನಿಜವಾಗಿ ಸಂತ ಬಂದು ನೀಡಿದ ಎನ್ನುವ ನಂಬಿಕೆಯಲ್ಲಿ ಬದುಕುತ್ತವೆ. ಇದೊಂದು ಸುಂದರ ಸನ್ನಿವೇಶ. ಮನೆಯ ಹಿರಿಯರು ಇತರ ಅಡಲ್ಟ್ ಸದಸ್ಯರು ಕೂಡ ಇದನ್ನ ಪೂರ್ಣವಾಗಿ ನಂಬಿದಂತೆ ಭ್ರಾಮಕ ಲೋಕವನ್ನ ಸೃಷ್ಟಿಸುತ್ತಾರೆ.
ಇದು ಅಮೆರಿಕಾ ಸಂಪ್ರದಾಯ. ಜಗತ್ತಿನ ಬಹಳಷ್ಟು ದೇಶಗಳು ಇದನ್ನ ಪಾಲಿಸುತ್ತವೆ.ಇದು ಎಲ್ಲರಿಗೂ ತಿಳಿದ ವಿಷಯ, ತಿಳಿಯದ ವಿಷಯವೆಂದರೆ , ಸ್ಪೇನ್ ನ ಕತಲೋನ್ಯ ರಾಜ್ಯದಲ್ಲಿ ಸಂತನ ಸಂಪ್ರದಾಯವಿಲ್ಲ ! ಹೌದು ಇಲ್ಲಿ ಸಂತ ಬಂದು ಮಕ್ಕಳಿಗೆ ಉಡುಗೊರೆಯನ್ನ ನೀಡುವುದಿಲ್ಲ !! ಬದಲಿಗೆ ಇಲ್ಲಿ 'ಕಾಗ ತಿಯೋ ' ಎನ್ನುವ ಸಂಪ್ರದಾಯವನ್ನ ಪಾಲಿಸುತ್ತಾರೆ.

ಕಾಗ ತಿಯೋ ಎಂದರೆ ಮರದ ತುಂಡಿಗೆ ಕಣ್ಣು ಮೂಗು ಬರೆದು , ಅದಕ್ಕೊಂದು ನಾಲ್ಕು ಕಾಲನ್ನ ಕೂಡ ಜೋಡಿಸುತ್ತಾರೆ. ಹಬ್ಬದ ದಿನ ಅದರ ಮೇಲೆ ಕೆಂಪು ಬಟ್ಟೆಯನ್ನ ಹೊದಿಸಿ ಇಡುತ್ತಾರೆ. ಮಕ್ಕಳಿಗೆ ಏನು ಬೇಕು ಎನ್ನುವುದನ್ನ ಅವರಿಗೆ ಗೊತ್ತಾಗದ ಹಾಗೆ ಅವರಿಂದ ಕೇಳಿ ತಿಳಿದುಕೊಂಡಿರುತ್ತಾರೆ. ಅದನ್ನ ಹೊದಿಕೆಯ ಅಡಿಯಲ್ಲಿ ಬಚ್ಚಿಟ್ಟಿರುತ್ತಾರೆ. 'ಕಾಗ' ಎಂದರೆ ವಿಸರ್ಜಿಸುವುದು ( ಸಂಡಸ್ಸಿಗೆ ಹೋಗುವುದು ಎನ್ನುವ ಅರ್ಥವನ್ನ ಕೂಡ ನೀಡುತ್ತದೆ ) ಎನ್ನುವ ಅರ್ಥ. ತಿಯೋ ಎಂದರೆ ಅಂಕಲ್ ಎನ್ನುವ ಅರ್ಥ.

ಹೀಗೆ ಆ ಮರದ ತುಂಡು ಕೇಳಿದ ಉಡುಗೊರೆಯನ್ನ ವಿಸರ್ಜಿಸುತ್ತದೆ ಎನ್ನುವ ಅರ್ಥದಲ್ಲಿ ಇದನ್ನ ಕಾಗ ತಿಯೋ ಎನ್ನಲಾಗಿದೆ. ಇದು ಸ್ಪೇನ್ ನ ಒಂದು ರಾಜ್ಯಗಳಾದ ಕತಲೋನ್ಯ ಮತ್ತು ಆರಾಗೊನ್ ನಲ್ಲಿ ,ಮಾತ್ರ ಆಚರಿಸಲಾಗುತ್ತದೆ. ಉಳಿದ ಕಡೆಯಲ್ಲಿ ಸಂತ ಕ್ಲಾಸ್ಸ್ ಬಂದು ರಾತ್ರಿ ಮಲಗಿದ್ದಾಗ ಉಡುಗೊರೆಯನ್ನ ಮಕ್ಕಳಿಗೆ ಇಟ್ಟು ಹೋಗಿರುವ ನಂಬಿಕೆಯನ್ನ ಬೆಳಸಿಕೊಂಡು ಬರಲಾಗಿದೆ.

ಕತಲೋನ್ಯ ರಾಜ್ಯದ ಜನಸಂಖ್ಯೆ 80ಲಕ್ಷಕ್ಕಿಂತ ಕಡಿಮೆ. ಹೀಗಿದ್ದೂ ಇವರು ನಮಗೆ ಪ್ರತ್ಯೇಕ ದೇಶ ಬೇಕು ಎನ್ನುವ ಬೇಡಿಕೆಯನ್ನ ದಶಕಗಳಿಂದ ಮುಂದಿಟ್ಟು ಕೊಂಡು ಬಂದಿದ್ದಾರೆ. ಅಂದಹಾಗೆ ನಮಗೆಲ್ಲಾ ದೂರದಿಂದ ನೋಡಿದಾಗ ಸ್ಪೇನ್ ಒಂದು ದೇಶ ಎನ್ನುವ ಭಾವನೆ ಬರುತ್ತದೆ. ಆದರೆ ಸ್ಪೇನ್ ನಲ್ಲಿ ಕೂಡ ನಾಲ್ಕು ಭಾಷೆಯನ್ನ ಮಾತನಾಡುತ್ತಾರೆ. ಸ್ಪ್ಯಾನಿಷ್ , ಗಯೆಗೊ , ಕತಲಾನ್ ಮತ್ತು ವಾಸ್ಕೋ . ಜನರ ನೆಡವಳಿಕೆ , ಬದುಕುವ ರೀತಿಯಲ್ಲಿ ಕೂಡ ಒಂದಷ್ಟು ವ್ಯತ್ಯಾಸವನ್ನ ಕಾಣಬಹದು. ಇಲ್ಲಿಗೆ ಬಂದ ಪ್ರಥಮ ದಿನಗಳಲ್ಲಿ ಎಲ್ಲರೂ ಒಂದೇ ರೀತಿ ಕಾಣುತ್ತಿದ್ದರು.

ಸಮಯ ಕಳೆದಂತೆ ಮುಖ ನೋಡಿದ ತಕ್ಷಣ , ಯಾರು ಕತಲಾನ್ , ಯಾರು ಸ್ಪ್ಯಾನಿಷ್ ಎನ್ನುವುದರ ಜೊತೆಗೆ ದಕ್ಷಿಣ ಅಮೆರಿಕಾದ ಜನರನ್ನ ಕೂಡ ಅವರ ಮುಖ ನೋಡಿ ಪೆರುವಿನವರೇ , ಈಕ್ವೆಡೋರ್ ನವರೇ , ಮೆಕ್ಸಿಕನ್ ಅಥವಾ ಬ್ರೇಸಿಲಿಯನ್ ಎನ್ನುವುದನ್ನ ಗುರುತಿಸುವ ಹಂತಕ್ಕೆ ನನ್ನ ಜ್ಞಾನ ವೃದ್ಧಿಯಾಯ್ತು.

 ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ! ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!

ಫ್ರೆಂಚರು , ಜರ್ಮನರು , ಬ್ರಿಟಿಷರು , ಪೋರ್ಚುಗೀಸರು , ನಾರ್ತ್ ಯೂರೋಪಿಯನ್ ದೇಶದವರು ಹೀಗೆ ಜನರ ಹಾವಭಾವ ಮತ್ತು ಅವರ ಮುಖಭಾವದಿಂದ ಇವರು ಇಂತಹ ದೇಶಕ್ಕೆ ಸೇರಿದವರು ಎಂದು ಗುರುತಿಸುವಷ್ಟು ಜೊತೆಗೆ ಅವರು ಮಾತನಾಡುವಾಗ ಅದ್ಯಾವ ಭಾಷೆ ಎನ್ನುವುದನ್ನ ಕೂಡ ನಿಖರವಾಗಿ ಗ್ರಹಿಸುವ ಶಕ್ತಿ ಸಮಯ ಕಳೆದಂತೆ ಸಿದ್ಧಿಸಿತ್ತು. ಎಷ್ಟೋ ಬಾರಿ ರಮ್ಯ ಮತ್ತು ಕಾಂತನ ಜೊತೆ ಇವರು ಇಂತಹ ದೇಶದವರು ಎಂದು ಹೇಳುವುದು , ಅದು ಹೌದೇ ಅಲ್ಲವೇ ಎನ್ನುವುದರ ಮೇಲೆ ಸವಾಲು ಹಾಕುವುದು ಗೆದ್ದಾಗ ಬೀಗುವುದು ಕೂಡ ನಿನ್ನೆ ನಡೆದ ಘಟನೆಯಂತೆ ನೆನಪು ಹಸಿರಾಗಿದೆ.

ಸ್ಪ್ಯಾನಿಷ್ ಭಾಷೆ ಕೂಡ ನಮ್ಮ ಕನ್ನಡವನ್ನ ಹೇಗೆ ಒಂದೊಂದು ಊರಿನ ಜನ ಬೇರೆ ಬೇರೆ ರೀತಿಯಲ್ಲಿ ಆಡುತ್ತಾರೆ , ಹಾಗೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯದಲ್ಲಿ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಅದು ಅರ್ಥ ಆಗುವುದಿಲ್ಲ ಎಂದಲ್ಲ , ನಮ್ಮ ಧಾರವಾಡದ ಕನ್ನಡ , ಮಂಗಳೂರು ಕನ್ನಡ , ಬೆಂಗಳೂರು ಕನ್ನಡ , ಮಂಡ್ಯ ಕನ್ನಡ ಇಲ್ಲವೇ , ಹಾಗೆ ಇಲ್ಲೂ ಇದೆ . ಜೊತೆಗೆ ಸ್ಪ್ಯಾನಿಷ್ ಜಗತ್ತಿನ 26ದೇಶದಲ್ಲಿ ಆಡಳಿತ ಭಾಷೆ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಅಲ್ಲಿನ ಸ್ಪ್ಯಾನಿಷ್ ಇನ್ನಷ್ಟು ಬದಲಾಗಿರುತ್ತದೆ. ಕೆಲವೊಮ್ಮೆ ಕೇವಲ ಉಚ್ಚಾರಣೆ ಮಾತ್ರವಲ್ಲ , ಕೆಲವು ವಸ್ತುಗಳನ್ನ ಹೇಳುವ ರೀತಿ ಕೂಡ ಪೂರ್ಣ ಭಿನ್ನವಾಗಿರುತ್ತದೆ.

ಜಗತ್ತಿನಲ್ಲಿ ಅತ್ಯಂತ ಹೆಚ್ಚು ದೇಶಗಳು ಭಾಷೆಯ ಆಧಾರದ ಮೇಲೆ ವಿಭಜಿಸಲ್ಪಟ್ಟಿರುವುದು ಯೂರೋಪಿನಲ್ಲಿ ಎಂದು ಹೇಳಬಹದು. ಇಷ್ಟೆಲ್ಲಾ ವೈವಿಧ್ಯತೆಗಳ ನಡುವೆ ಪೂರ್ಣ ಯೂರೋಪನ್ನ ಬೆಸೆಯುವ ಹಲವಾರು ಹಬ್ಬಗಳು ಇವೆ. ಈ ಹಬ್ಬಗಳನ್ನ ಇವರು ಅತ್ಯಂತ ಅಕ್ಕರಾಸ್ಥೆಯಿಂದ ಆಚರಿಸುತ್ತಾರೆ. ಆ ಲೆಕ್ಕಾಚಾರದಲ್ಲಿ ಇಂದಿಗೂ ಯೂರೋಪ್ ಒಂದು ಪುಟ್ಟ ಹಳ್ಳಿ.

ಅದು 2000 ಇಸವಿಯ ಡಿಸೆಂಬರ್ , ನಾನು ಅಂದಿಗೆ ಕೆಲಸ ಮಾಡುತ್ತಿದ್ದ ಸಂಸ್ಥೆ ತನ್ನೆಲ್ಲಾ ಉದ್ಯೋಗಿಗಳನ್ನ ಸಂಸಾರ ಸಮೇತ ಊಟಕ್ಕೆ ಆಹ್ವಾನಿಸಿತ್ತು. ಬಹಳಷ್ಟು ಜನ ಸಹೋದ್ಯೋಗಿಗಳ ಮಕ್ಕಳು ಕೂಡ ಬಂದಿದ್ದರು. ಅವರಿಗಾಗಿ ಒಂದಷ್ಟು ಉಡುಗೊರೆ ಕೂಡ ಸಿದ್ದವಾಗಿತ್ತು. ಸಂತನ ವೇಷವನ್ನ ತೊಟ್ಟು ಅದನ್ನ ಎಲ್ಲರಿಗೂ ನೀಡುವ ಅವಕಾಶ ನಾನು ಕೇಳದೆ ನನಗೆ ಒದಗಿ ಬಂತು. ಆದರೆ ಸಂತನ ಡ್ರೆಸ್ ನನ್ನ ದೇಹಕ್ಕೆ ಹೊಂದಲಿಲ್ಲ. ಹೀಗಾಗಿ ಸಹೋದ್ಯೋಗಿ ಮಾರ್ತಾ ಆ ಪೋಷಕನ್ನ ಧರಿಸಿ ಮಕ್ಕಳಿಗೆ ಉಡುಗೊರೆಯನ್ನ ನೀಡಿದಳು.

ಗಮನಿಸಿ ಕಾಗತಿಯೋ ಮನೆಯಲ್ಲಿ ಪಾಲಿಸುತ್ತಾರೆ. ಆದರೆ ಪಬ್ಲಿಕ್ ಇವೆಂಟ್ ಗಳಲ್ಲಿ ಇಲ್ಲೂ ಕೂಡ ಸಂತನದೆ ದರ್ಬಾರು . ಅಂದಿಗೆ ಐದರಿಂದ ಹತ್ತು ವರ್ಷದ ಕೆಳಗಿದ್ದ ಐದಾರು ಮಕ್ಕಳು ಇಂದಿಗೆ ಬಹಳವೇ ದೊಡ್ಡವರಾಗಿದ್ದಾರೆ. ಆ ಪುಟಾಣಿಗಳನ್ನ ಅಂದು ಎತ್ತಾಡಿಸಿದ ನೆನಪು ಇನ್ನೂ ತಾಜಾ ಎನ್ನುವಂತಿದೆ , ಸಮಯದ ಓಟದಲ್ಲಿ ಅವರಲ್ಲಿ ಕೆಲವರು ಸ್ಪೇನ್ ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆಯ ದೇಶವನ್ನ ಸೇರಿದ್ದಾರೆ , ಕೆಲವರು ಆಗಲೇ ಕೆಲಸ ಶುರು ಮಾಡಿದ್ದಾರೆ. ಕಾಲನ ಓಟದ ಮುಂದೆ ನಾವೇನೂ ಅಲ್ಲ. ಎಷ್ಟು ಬೇಗ ಸಮಯ ಕಳೆದು ಹೋಯಿತು ಎನ್ನುವ ಉದ್ಘಾರದ ಜೊತೆಗೆ ಹಿಂದಿನ ನೆನಪನ್ನ ಮೆಲುಕು ಹಾಕುವುದು ಕೂಡ ಒಂದು ರೀತಿಯ ಸುಖವನ್ನ ನೀಡುತ್ತದೆ.

ಮೊನ್ನೆಯಷ್ಟೆ ಮೈಸೂರಿಗೆ ಹೋಗಿದ್ದೆವು. ಅಲ್ಲಿನ ಸಂತ ಫಿಲೋಮಿನಾ ಚರ್ಚ್ಗೆ ಭೇಟಿಯನ್ನ ನೀಡಿದ್ದೆವು. ಆಶ್ಚರ್ಯ ಎನ್ನುವಂತೆ ಆ ಚರ್ಚ್ ನಲ್ಲಿ ಸಂತ ಕ್ಲಾಸ್ಸ್ ನ ಬದಲು ಅಲ್ಲಿ ಕಾಗತಿಯೋ ಬೊಂಬೆಯನ್ನ ಇಟ್ಟಿದ್ದರು. ಎಲ್ಲಿಯ ಬಾರ್ಸಿಲೋನಾ ? ಎಲ್ಲಿಯ ಮೈಸೂರು ? ನೆನಪಿರಲಿ ಕಾಗ ತಿಯೋ ಎನ್ನುವುದು ಸ್ಪೇನ್ ದೇಶದ ಕೇವಲ ಎರಡು ರಾಜ್ಯದಲ್ಲಿ ಮಾತ್ರ ಇರುವ ನಂಬಿಕೆ. ಅದು ನಮ್ಮ ಮೈಸೂರಿನ ಸಂತ ಫಿಲೋಮಿನಾ ಚರ್ಚು ಹೇಗೆ ಸೇರಿರಬಹುದು ? ಎನ್ನುವ ಕುತೂಹಲ ನನ್ನದು.

ಓದುಗರಲ್ಲಿ ಯಾರಿಗಾದರೂ ಈ ಬಗ್ಗೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳಬಹದು. ಅಚ್ಚರಿಯಿಂದ ತೆಗೆದ ಫೋಟೋ ನಿಮ್ಮ ಮುಂದಿದೆ. ಸಂತ ಫಿಲೋಮಿನಾ ಚರ್ಚ್ ನಲ್ಲಿ ಕ್ರಿಶ್ಚಿಯನ್ನರು ಎಷ್ಟಿದ್ದರೂ ಅಷ್ಟೇ ಸಂಖ್ಯೆಯಲ್ಲಿ ಹಿಂದೂಗಳು ಇದ್ದರು . ಮುಸಲ್ಮಾನರು ಕೂಡ ಕ್ರಿಸ್ಮಸ್ ಹಬ್ಬದಲ್ಲಿ ತೊಡಗಿಕೊಂಡಿದ್ದರು. ಈ ಬಾರಿಯ ಕ್ರಿಸ್ಮಸ್ ಮೈಸೂರಿನಲ್ಲಿ ಆಚರಿಸಿದರೂ ಕಾಗತಿಯೋ ಬಾರ್ಸಿಲೋನಾ ಇದ್ದ ಭಾವನೆಯನ್ನ ನೀಡುತ್ತಿತ್ತು.

English summary
Barcelona Memories Coloumn By Rangaswamy Mookanahalli Part 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X