ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ!'

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನಮ್ಮ ಬದುಕಿನಲ್ಲಿ ಎಷ್ಟೊಂದು ಜನರನ್ನ ಭೇಟಿ ಮಾಡುತ್ತೇವೆ ಅಲ್ಲವೇ ? ಆದರೆ ಅವರೆಲ್ಲರೂ ನಮಗೆ ನೆನಪಿರಲು ಸಾಧ್ಯವಿಲ್ಲ. ಕೆಲವೊಬ್ಬರು ನಮ್ಮ ಜೀವನದ ಕಥೆಯಲ್ಲಿ ಒಂದಷ್ಟು ದಿನಗಳು ಅಥವಾ ವಾರಗಳು ಅತಿಥಿ ಪಾತ್ರದಂತೆ ಬಂದು ಹೋಗಿರುತ್ತಾರೆ. ಅವರೆಲ್ಲರೂ ನೆನಪಲ್ಲಿ ಉಳಿಯಲು ಮತ್ತು ಅವರೆಲ್ಲರ ಬಗ್ಗೆ ಬರೆಯಲು ಸಾಧ್ಯವಿಲ್ಲ . ಆದರೆ ಕೆಲವೊಂದು ಸನ್ನಿವೇಶಗಳು ಹೇಗಿರುತ್ತವೆ ಅಂದರೆ ಅವರ ಪಾತ್ರ ನಮ್ಮ ಬದುಕಿನಲ್ಲಿ ಬಹಳ ಚಿಕ್ಕದಾಗಿದ್ದರೂ ಅವರನ್ನ ಮರೆಯಲು ಸಾಧ್ಯವಾಗುವುದಿಲ್ಲ. ಇದು ನನ್ನೊಬ್ಬನ ಅನುಭವವಲ್ಲ ನಮ್ಮೆಲ್ಲರದ್ದು ಕೂಡ ಎನ್ನುವುದು ನನ್ನ ನಂಬಿಕೆ. ಇರಲಿ

ಅದು 2003/2004ರ ಸಮಯ. ಅಲ್ಮೇಸನ್ ಎಂದರೆ ಉಗ್ರಾಣ ಎನ್ನುವ ಅರ್ಥ ಅಥವಾ ಇಂಗ್ಲಿಷ್ ನಲ್ಲಿ ವೇರ್ ಹೌಸ್ ಎನ್ನಬಹದು. ಅಂದಿಗೆ ನಾನು ಟೆಕ್ಸ್ ಟೈಲ್ ವಲಯದ ಹಣಕಾಸು ವಹಿವಾಟು ನೋಡಿಕೊಳ್ಳುತ್ತಿದ್ದ ಸಮಯ. ವೇರ್ ಹೌಸ್ ನಲ್ಲಿ ಕೆಲಸ ಮಾಡಲು ಬಹಳಷ್ಟು ಜನ ಬೇಕಾಗುತ್ತಿದ್ದರು . ಸಾಮಾನ್ಯವಾಗಿ ಸ್ಪ್ಯಾನಿಷ್ ಯುವಕರು ಆರರಿಂದ ವರ್ಷ ಕೆಲಸ ಮಾಡುವುದರಲ್ಲಿ ಬೇಸತ್ತು ಬೇರೆ ಕೆಲಸವನ್ನ ಹುಡುಕಿಕೊಳ್ಳುತ್ತಿದ್ದರು . ಬಹುತೇಕ ಸ್ಥಳೀಯರು ಮಾಡುವ ತಪ್ಪುಗಳನ್ನ ಸ್ಪ್ಯಾನಿಷರು ಕೂಡ ಮಾಡುತ್ತಿದ್ದರು.

ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ? ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ?

ಹೆಚ್ಚಿನ ವೇತನ ಒಂದೇ ಅಂತಲ್ಲ , ಹೆಚ್ಚು ರಜಾ ಹಾಕುವುದು , ಕೆಲಸದಲ್ಲಿ ಶ್ರದ್ದೆ ಇಲ್ಲದಿರುವುದು ಹೀಗೆ ಕಾರಣಗಳು ಅನೇಕ. ಹೀಗಾಗಿ ದೈಹಿಕ ಶ್ರಮ ಬೇಡುವ ಕೆಲಸಗಳನ್ನ ನಿಧಾನವಾಗಿ ದಕ್ಷಿಣ ಅಮೆರಿಕನ್ನರು , ಮೊರೊಕ್ಕಿಗಳು ಮತ್ತು ಪಾಕಿಸ್ತಾನಿ , ಬಾಂಗ್ಲಾದೇಶಿಗಳು ಆಕ್ರಮಿಸ ತೊಡಗಿದ್ದರು. ಸ್ಪ್ಯಾನಿಷ್ ವ್ಯಾಪಾರಸ್ಥರು ತಾವು ಹೇಳಿದ ಹಾಗೆ ಕೇಳುವ ಮತ್ತು ಒಂದಷ್ಟು ಕಡಿಮೆ ಹಣಕ್ಕೂ ಕೆಲಸ ಮಾಡುವ ವಲಸಿಗರನ್ನ ಕೆಲಸಕ್ಕೆ ತೆಗೆದುಕೊಳ್ಳಲು ಶುರು ಮಾಡಿದ್ದರು. ಇಂತಹ ಸಮಯದಲ್ಲಿ ನನಗೆ ಸಿಕ್ಕವನು ಇಮ್ರಾನ್ .

ಇಮ್ರಾನ್ ಪಾಕಿಸ್ತಾನದ ಪಿಂಡಿ ಎನ್ನುವ ಪ್ರದೇಶದವನು. ಬಾರ್ಸಿಲೋನಾ ಬಂದು ಸೇರುವುದಕ್ಕೆ ಹತ್ತಾರು ತಿಂಗಳು ಬೆವರಿಳಿಸಿದ್ದ. ರಸ್ತೆ ಬದಿಯಲ್ಲಿ ಇಮಿಟೇಷನ್ ಬ್ಯಾಗ್ ಗಳನ್ನ , ಮೊಬೈಲ್ ಕವರ್ , ಛತ್ರಿ , ಮಫ್ಲರ್ ಹೀಗೆ ಈತ ಮಾರುತ್ತಿದ್ದ ವಸ್ತುಗಳಿಗೆ ಕೊನೆಯಿಲ್ಲ . ಜನರು ಏನೆಲ್ಲಾ ಕೊಳ್ಳಬಹದು ಅದನ್ನೆಲ್ಲಾ ರಸ್ತೆ ಬದಿಯಲ್ಲಿ ಮಾರುತ್ತ ಜೀವನವನ್ನ ಸವೆಸುತ್ತಿದ್ದ . ಹೀಗೆ ಒಂದು ದಿನ ನನಗೆ ಅವನ ಪರಿಚಯವಾಯ್ತು.

Barcelona Memories Coloumn By Rangaswamy Mookanahalli Part 10

'ರಂಗ ಬಾಯ್ ಸಬ್ ಕುಚ್ ಸೆಟ್ ಹೈ , ಸಿರ್ಫ್ ಅಫೇರ್ತಾ ದೆ ತ್ರಬಾಹೊ ಚಾಯಿಯೇ' ಎಂದು ಗೋಗರೆಯಲು ಶುರು ಮಾಡಿದ. ಅಫೇರ್ತಾ ದೆ ತ್ರಬಾಹೊ ಎಂದರೆ ವರ್ಕ್ ಪರ್ಮಿಟ್ ಆಫರ್ ಲೆಟರ್ ಎಂದರ್ಥ. ಯಾವುದೇ ಒಂದು ಸಂಸ್ಥೆ ಇವನನ್ನ ನಾನು ಕೆಲಸಕ್ಕೆ ತೆಗೆದುಕೊಳ್ಳಲು ಬಯಸಿದ್ದೇನೆ ಎನ್ನುವ ಒಂದು ಲೆಟರ್ ಕೊಟ್ಟರೆ ಅದರ ಆಧಾರದ ಮೇಲೆ ಅವರಿಗೆ ರೆಸಿಡೆನ್ಸಿ ಪರ್ಮಿಟ್ ಸಿಗುತ್ತಿತ್ತು .

ಪಾಕಿಸ್ತಾನದ ಪಿಂಡಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಅವನು ಕೆಲಸ ಮಾಡುತ್ತಿದ್ದನಂತೆ .ಇಲ್ಲಿ ರೆಸಿಡೆನ್ಸಿ ಪರ್ಮಿಟ್ ಸಿಕ್ಕ ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆದು ಟ್ಯಾಕ್ಸಿ ಡ್ರೈವರ್ ಆಗಬೇಕು ಎನ್ನುವುದು ಅವನ ಜೀವನದ ಪರಮೋಚ್ಚ ಗುರಿಯಾಗಿತ್ತು . ಮೊದಲೇ ಹೇಳಿದಂತೆ ಅಂದಿನ ದಿನದಲ್ಲಿ ನಮ್ಮ ವೇರ್ ಹೌಸ್ ನಲ್ಲಿ ಕೆಲಸ ಖಾಲಿಯಿದ್ದ ಕಾರಣ ಅವನಿಗೆ ಆಫರ್ ಲೆಟರ್ ನೀಡಿದೆವು. ಇದೇನು ಅವನ ಮೇಲಿನ ಕರುಣೆಯಿಂದಲ್ಲ , ಮುಂದಿನ ಒಂದಷ್ಟು ವರ್ಷ ಮಿನಿಮಮ್ ಸಂಬಳಕ್ಕೆ ಕೆಲಸ ಮಾಡುತ್ತಾನೆ ಎನ್ನುವ ಲಾಭದ ದೃಷ್ಟಿಯಿಂದ ನೀಡಿದ ಆಫರ್ .

ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ! ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!

ಅದು ಅವನಿಗೆ ಅನುಕೂಲವಾಯ್ತು . ಅವನಿಗೆ ರೆಸಿಡೆನ್ಸಿ ಪರ್ಮಿಟ್ ಅಪ್ಪ್ರೋವ್ ಆಯ್ತು , ಆದರೇನು ಅದನ್ನ ತನ್ನ ಪಾಸ್ಪೋರ್ಟ್ ಮೇಲೆ ಪಾಕಿಸ್ತಾನದಿಂದ ಸ್ಟ್ಯಾಂಪ್ ಮಾಡಿಸಿಕೊಂಡು ಬರಬೇಕಿತ್ತು. ಈ ಆಪ್ರೋವ್ ಪತ್ರವನ್ನ ತೋರಿಸಿ ಸುಲಭವಾಗಿ ಅವನು ಪಾಕಿಸ್ತಾನಕ್ಕೆ ಹೊರಟು ಹೋದ. ಎರಡು ವಾರದಿಂದ ಮೂರು ವಾರದಲ್ಲಿ ವಾಪಸ್ಸು ಬರುತ್ತಾನೆ ಎನ್ನುವ ಲೆಕ್ಕಾಚಾರ ನಮ್ಮದು ತಿಂಗಳಾದರೂ ಅವನ ಸುಳಿವಿಲ್ಲ . ಯಾವ ಸಂಸ್ಥೆಯಿಂದ ಆಫರ್ ಸಿಕ್ಕಿರುತ್ತದೆ ಅಲ್ಲಿ ಕೆಲಸ ಮಾಡಬೇಕು , ಇನ್ನೊಂದು ಹೊಸ ಆಫರ್ ಸಿಗುವವರೆಗೆ ಅವನಿಗೆ ಬೇರೆ ದಾರಿಯಿಲ್ಲ , ಅಲ್ಲದೆ ಹೊಸ ಆಫರ್ ಇಲ್ಲದಿದ್ದರೆ ರೆಸಿಡೆನ್ಸಿ ಪರ್ಮಿಟ್ ರಿನ್ಯೂ ಮಾಡಿಕೊಡುವುದಿಲ್ಲ .

ಹೀಗಾಗಿ ಅವನು ಬೇರೆಡೆಗೆ ಹೋದ ಎನ್ನುವಂತಿಲ್ಲ , ಈ ಮಧ್ಯೆ ಒಂದು ದಿನ ಪಾಕಿಸ್ತಾನದಿಂದ ಫೋನ್ ಬಂದಿತು. ಅತ್ತ ಕಡೆಯಿಂದ ಇಮ್ರಾನ್ ಅಳುವ ದನಿಯಲ್ಲಿ ಸ್ಪ್ಯಾನಿಷ್ ಎಂಬೆಸಿ ಕರಾಚಿಯಲ್ಲಿ ಐದು ಲಕ್ಷ ಕೊಟ್ಟರೆ ಸ್ಟ್ಯಾಂಪ್ ಹಾಕುವುದಾಗಿ ಇಲ್ಲದಿದ್ದರೆ ಇಲ್ಲ ಎಂದು ಹೇಳುತ್ತಿದ್ದಾರೆ , ಏನಾದರೂ ಮಾಡಿ ಎಂದು ಅಂಗಲಾಚಿದ. ನೋಡೋಣ ಏನಾಗುತ್ತದೆ ಎಂದು ಹೇಳಿದ್ದೆ. ಆದರೆ ವಸ್ತುಸ್ಥಿತಿ ಬೇರೆಯಿತ್ತು . ಸಂಸ್ಥೆಗೆ ಲೋಕಲ್ ಆಗಿ ಇಮ್ರಾನ್ ನಂತಹ ನೂರಾರು ಹುಡುಗರು , ಜೊತೆಗೆ ಸ್ಪ್ಯಾನಿಷ್ ಹುಡುಗರು ಎಲ್ಲರೂ ಕೆಲಸಕ್ಕೆ ಸಿಗುತ್ತಿದ್ದರು. ಹೀಗಾಗಿ ಇಮ್ರಾನ್ನನ್ನ ನಾವೆಲ್ಲರೂ ಮರೆತು ಬಿಟ್ಟೆವು . ಯಾವುದೇ ಸಹಾಯ ಮಾಡುವ ಮಾತು ದೂರವೇ ಉಳಿಯಿತು.

Barcelona Memories Coloumn By Rangaswamy Mookanahalli Part 10

ಇಮ್ರಾನ್ ಪರಿಚಿತನಾಗಿ ಅವನಿಗೆ ಆಫರ್ ಲೆಟರ್ ನೀಡುವ ಮುಂಚೆ ಒಂದು ದಿನ ನಾನು ಮತ್ತು ಕಾಂತ ಬಾರ್ಸಿಲೋನಾದ ಬೀಚ್ ನಲ್ಲಿ ಸಾಯಂಕಾಲ ಕುಳಿತು ಏನೋ ಮಾತನಾಡುತ್ತಿದ್ದೆವು . ಬೀಚ್ ನಲ್ಲಿ ಚೀನಿ ಹುಡುಗಿಯರು ಮಸಾಜ್ ಬೇಕೇ ಎಂದು ಕುಳಿತವರನ್ನ ಕೇಳುವುದು ಮಾಮೂಲು ಎನ್ನುವಂತಾಗಿದೆ , ಹಾಗೆಯೇ ಪಾಕಿಸ್ತಾನಿ ಗಳು ಕುಳಿತೆಡೆಗೆ ಬಿಯರ್ , ಕೋಕಾಕೋಲಾ ಇತ್ಯಾದಿಗಳನ್ನ ತಂದು ಮಾರುವುದು ಕೂಡ ಕಾಮನ್ . ಪೋಲೀಸರ ಕಣ್ಣಿಗೆ ಬಿದ್ದರೆ ಮಾತ್ರ ಕಷ್ಟ , ಆದರೆ ಇವರಿಗೆ ಪೋಲೀಸರ ಸುಳಿವು ಅವರು ಬರುವುದಕ್ಕೆ ಮುಂಚೆಯೇ ತಿಳಿದು ಬಿಡುತ್ತಿತ್ತು .

ನಾಳೆಯ ಗುಟ್ಟು ಬಿಟ್ಟು ಕೊಡದ ಬದುಕು ಅಚ್ಚರಿಗಳ ಸಾಗರ!ನಾಳೆಯ ಗುಟ್ಟು ಬಿಟ್ಟು ಕೊಡದ ಬದುಕು ಅಚ್ಚರಿಗಳ ಸಾಗರ!

ಇವರ ನೆಟ್ ವರ್ಕ್ ಅಮೋಘ . ಇರಲಿ , ಹೀಗೆ ಕುಳಿತ್ತಿದ್ದ ನಮ್ಮ ಬಳಿಗೆ ಇಮ್ರಾನ್ ಬಂದವನು ಬೇಡವೆಂದರೂ ಸಮೋಸ ಮತ್ತು ಕೋಕಾಕೋಲಾ ನೀಡಿದ್ದ . ಯೂನಿವರ್ಸಿಟಿ ಬದುಕಿನಲ್ಲಿ ಕೇವಲ ಸ್ಪ್ಯಾನಿಷ್ ಜನರೊಂದಿಗೆ ವ್ಯವಹರಿಸುತ್ತಿದ್ದ ಕಾಂತನಿಗೆ ಇದು ಆಶ್ಚರ್ಯ ತಂದಿತು. ಏನೋ ರಂಗಿ ಇಲ್ಲೂ ಜನ ಸಂಪಾದಿಸಿದ್ದಿಯ ಎಂದಿದ್ದ. ಇಮ್ರಾನ್ ಕುರಿತು ಎಷ್ಟು ಗಂಟೆ ಕೆಲಸ ಮಾಡುತ್ತೀಯಾ ? ದಿನಕ್ಕೆ ಎಷ್ಟು ಗಂಟೆ ನಡೆಯುತ್ತೀಯ ? ಎನ್ನುವ ಪ್ರಶ್ನೆಗೆ ಅವನು 10ಗಂಟೆ ಓಡಾಡುತ್ತಲೇ ಇರುತ್ತೇನೆ , ಕಡಿಮೆ ಅಂದರೆ60/70 ಕಿಲೋ ಮೀಟರ್ ನಡೆಯುತ್ತೇನೆ ಎಂದಿದ್ದ. ಅವನ ಮುಗ್ದತೆಯನ್ನ ನೆನದು ನಾವಿಬ್ಬರೂ ಮನಸೋಇಚ್ಛೆ ನಕ್ಕಿದ್ದೆವು.

ಬಾರ್ಸಿಲೋನಾ ದಲ್ಲಿ ಮನೆಯ ವಿಸ್ತೀರ್ಣ ಎಷ್ಟು ಎನ್ನುವುದರ ಮೇಲೆ ಆ ಮನೆಯಲ್ಲಿ ಎಷ್ಟು ಜನ ವಾಸಿಸಬಹದು ಎನ್ನುವುದನ್ನ ಅಲ್ಲಿನ ಕಾರ್ಪೊರೇಷನ್ ನಿರ್ಧರಿಸುತ್ತದೆ . ಹೀಗೆ ಇಷ್ಟು ಜನ ಇರಬಹದು ಎಂದ ಮೇಲೆ ಆ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದನ್ನ ನೋಂದಾಯಿಸಿಕೊಳ್ಳುವುದು ಕೂಡ ಕಡ್ಡಾಯ. ಐದು ಅಥವಾ ಆರು ಜನರು ಇರಬಹದು ಎನ್ನುವ ಮನೆಯಲ್ಲಿ 10/15 ಜನ ಪಾಕಿಸ್ತಾನಿಯರು ಅಡ್ಜಸ್ಟ್ ಮಾಡಿಕೊಂಡು ನೊಂದಾವಣಿ ಮಾಡಿಕೊಳ್ಳದೆ ಬದುಕುತ್ತಿದ್ದರು.

ಇಷ್ಟೆಲ್ಲಾ ಕಷ್ಟ ಅನುಭವಿಸಿ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳದೆ 3 ವರ್ಷ ಸವೆಸಿದ್ದ ಇಮ್ರಾನ್ ತನ್ನದೇ ದೇಶದ ಭ್ರಷ್ಟಾಚಾರದ ಬಲೆಗೆ ಬಿದ್ದಿದ್ದ. ತಿಂಗಳಲ್ಲಿ ಒಂದೆರೆಡು ಬಾರಿ ಫೋನ್ ಮಾಡಿ ' ಬಾಯ್ ಕುಚ್ ತು ಕರೋ , ಇದರ ಮೇರಾ ದಮ್ ಗುಟ್ ರಹಾಹೆ ' ಎನ್ನುತ್ತಿದ್ದ . ನೋಡೋಣ ಎನ್ನುವುದು ಬಿಟ್ಟರೆ ನಾನೇನು ಹೆಚ್ಚಿನ ಪ್ರಯತ್ನವನ್ನ ಮಾಡಲಿಲ್ಲ. ಇದಕ್ಕೆ ಕಾರಣ ಕೂಡ ಸ್ಪಷ್ಟ , ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯ ? ಒಂದಿಬ್ಬರ ಕಥೆಯಾದರೆ ಹೋಗಲಿ ಎನ್ನಬಹದು. ಅಂದಿನ ದಿನದಲ್ಲಿ ಎದುರಿಗೆ ಸಿಕ್ಕ ಮುಕ್ಕಾಲು ಪಾಲು ಸೌತ್ ಏಷ್ಯಾದ ವಲಸಿಗರ ಕಥೆಯಿದು.

ತಿಂಗಳಿಗೆ ಎರಡು ಮೂರು ಇದ್ದ ಕಾಲ್ ಕ್ರಮೇಣ ಒಂದಕ್ಕಿಳಿಯಿತು , ಎರಡು ಅಥವಾ ಮೂರು ತಿಂಗಳಿಗೆ ಒಂದಾಯ್ತು. ಆಮೇಲೆ ಆರು ತಿಂಗಳ ಮೇಲಾದರೂ ಒಂದು ಕರೆ ಕೂಡ ಇಮ್ರಾನ್ ಕಡೆಯಿಂದ ಬರಲಿಲ್ಲ. ಇಮ್ರಾನ್ ಪೂರ್ಣವಾಗಿ ನೆನಪಿನ ಅಂಗಳದಿಂದ ಮಾಸಿ ಹೋಗಿದ್ದ. 2008/2009ರ ಒಂದು ದಿನ ಇದ್ರಿಸ್ ಚೌಧರಿ ಎನ್ನುವ ಹುಡುಗ ರಸ್ತೆಯಲ್ಲಿ ಸಿಕ್ಕ , ಅವನು ಕೂಡ ಪಾಕಿಸ್ತಾನದ ಪಿಂಡಿಯವನು , ರಾವಲ್ಪೆಂಡಿಯನ್ನ ಪಿಂಡಿ ಎನ್ನುತ್ತಾರೆ ಎನ್ನುವುದು ಕೂಡ ಅಲ್ಲಿಯವರೆಗೆ ನನಗೆ ತಿಳಿದಿರಲಿಲ್ಲ.

ಇಮ್ರಾನ್ ಶಾಕ್ ನಿಂದ ಹೊರಬರಲಿಲ್ಲ , ಅವನಿಗೆ ಪುನಃ ತನ್ನೂರಿನಲ್ಲಿ ಮನಸ್ಸು ನೆಲಸಲಿಲ್ಲವಂತೆ , ಹೇಗಾದರೂ ಮಾಡಿ ವಾಪಸ್ಸು ಯೂರೋಪ್ ಗೆ ಹೋಗಬೇಕು ಎನ್ನವುದು ಅವನ ಆಸೆಯಾಗಿತ್ತಂತೆ , ಹಣದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಅವನೀಗ ಹುಚ್ಚನಾಗಿದ್ದಾನೆ , ಬೀದಿಯಲ್ಲಿ ಅರೆ ನಗ್ನಾವಸ್ಥೆಯಲ್ಲಿ ಓಡಾಡಿಕೊಂಡಿರುತ್ತಾನೆ , ಅವನ ಮನೆಯವರು ಮತ್ತೆ ಟ್ಯಾಕ್ಸಿ ಓಡಿಸಲು ಶುರು ಮಾಡು ಎಂದರೂ ಅದು ಅವನಿಗೆ ರುಚಿಸಲಿಲ್ಲ , ಅವನೀಗ ಹುಚ್ಚ ಎಂದು ಇದ್ರಿಸ್ ಒತ್ತಿ ಹೇಳಿದ.
ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ನೋವು , ಅವನ ಪಾಡಿಗೆ ಅವನಿದ್ದ , ಸಹಾಯ ಮಾಡುವ ನೆಪದಲ್ಲಿ ಅವನ ಜೀವನವನ್ನ ನಾನೇ ಹಾಳು ಮಾಡಿದೆನೇನೋ ? ಎನ್ನುವ ಪಾಪ ಪ್ರಜ್ಞೆ ಕಾಡತೊಡಗಿತು. ನಿಮ್ಮ ಕೈಲಾದದ್ದ ನೀವು ಮಾಡಿದ್ದೀರಿ , ಉಸ್ಕಾ ತಕ್ದಿರ್ ಮೇ ಕ್ಯಾ ಲಿಕಾತಾ ವಹಿ ಹೋಗಾನ ಎಂದು ಇದ್ರಿಸ್ ಸಂತನಂತೆ ಸಂತೈಸಿದ.

ಬಾರ್ಸಿಲೋನಾ ನಗರದಲ್ಲೇ ಸಿಕ್ಕ ಒಬ್ಬರು ಸಿಖ್ ಧರ್ಮಪಾಲ್ ಸಿಂಗ್ ಎನ್ನುವವರು ಕೇವಲ 3ನೇ ತರಗತಿಯವರೆಗೆ ಓದಿದವರು , ಆದರೇನು ಕತಲಾನ್ , ಸ್ಪ್ಯಾನಿಷ್ ಭಾಷೆಗಳನ್ನ ನಿರರ್ಗಳವಾಗಿ ಮಾತನಾಡಲು ಕಲಿತ್ತಿದ್ದರು. ಹೀಗಾಗಿ ಬಹುತೇಕ ವಲಸಿಗರಿಗೆ ಇವರು ದುಬಾಷಿಯಂತೆ ಕೆಲಸ ಮಾಡುತ್ತಿದ್ದರು. ಹಸನ್ಮುಖಿ , ಅಂದಿಗೆ ಸನ್ನಿವೇಶ ಸೃಷ್ಟಿಸಿದ ಅವಕಾಶವನ್ನ ಚನ್ನಾಗಿ ಬಳಸಿಕೊಂಡು ತನ್ನದೇ ಅದ ಕಚೇರಿಯನ್ನ ಕೂಡ ತೆರೆದಿದ್ದರು. ಇಂದಿಗೂ ಇವರು ಇದೆ ವೃತ್ತಿಯನ್ನ ಮಾಡಿಕೊಂಡು ಅಲ್ಲೇ ಇದ್ದಾರೆ.

ವರ್ಷಾನುಗಟ್ಟಲೆ ಪರಿವಾರದಿಂದ ದೂರವಾಗಿ ಬದುಕುವ ವಲಸಿಗರನ್ನ ಕಂಡು ಇವರು ಬಹಳ ಮರುಗುತ್ತಿದ್ದರು. ಅವರು ಹೇಳುತ್ತಿದ್ದ ಮಾತು ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ . ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ ಎನ್ನುವುದು ಅವಳ ಮಾತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಹಾಗೆ ಇಲ್ಲಿಂದ ಎಲ್ಲವೂ ಚನ್ನಾಗೇ ಕಾಣುತ್ತದೆ. ಅಲ್ಲಿ ಕಷ್ಟ ಪಡದೆ ಹಣ ಸಿಗುವುದಿಲ್ಲ . ಹಣ ಮಾಡಬೇಕು ಎಂದು ಹೋಗುವುದು ಹುಚ್ಚುತನ , ಅದಕ್ಕೆ ಋಣವಿರಬೇಕು. ನಮ್ಮ ಹೆಸರಿದ್ದರೆ ಅದು ತಾನಾಗೇ ಒಲಿದು ಬರುತ್ತದೆ. ಪೈಸಾ ಔರ್ ಪರಿವಾರ್ ಹಮೇಶಾ ಸಾಥ್ ಮೇ ಹೋನಾ ಚಾಯಿಯೇ ಎನ್ನುವ ಮಾತು ನನಗೆ ಬಹಳ ಇಷ್ಟವಾಯ್ತು.

ನಾನು ಭಾರತಕ್ಕೆ ಮರಳಲು ನಿರ್ಧಾರ ಮಾಡಿದಾಗ ಈ ವಾಕ್ಯ ಕೂಡ ತನ್ನ ಕೈಲಾದ ದೇಣಿಗೆ ನೀಡಿದೆ. ಈ ವಾಕ್ಯವನ್ನ ನಾನು ಹೂಡಿಕೆಯ ಬಗ್ಗೆ ಸಲಹೆ ಕೇಳಲು ಬರುವರಿಗೂ ಹೇಳಲು ಶುರು ಮಾಡಿದ್ದೇನೆ. ನೀವೆಷ್ಟೇ ಗಳಿಸಿ , ಉಳಿಸಿ , ನೀವು ನಿಮ್ಮ ಪರಿವಾರದೊಂದಿಗೆ ಇಲ್ಲವೆಂದರೆ ಅವೆಲ್ಲವೂ ಕಸಕ್ಕೆ ಸಮಾನ. ಇದ್ದ ಜಾಗದಲ್ಲಿ , ಇದ್ದ ಪರಿಸ್ಥಿತಿಯಲ್ಲಿ , ಇರುವ ಸಂಪನ್ಮೂಲಗಳನ್ನ ಬಳಸಿಕೊಂಡು ಬದುಕುವುದು ಕಲಿಯಬೇಕು. ಸಮಯ , ಜಗತ್ತು ಇಲ್ಲಿನ ಜನ ನಮ್ಮನ್ನ ಮರೆಯಲು ಕಾರಣಗಳೇ ಬೇಕಿಲ್ಲ . ನೆನಪಿನಲ್ಲಿ ಇಟ್ಟು ಕೊಳ್ಳಲು ಮಾತ್ರ ಎಷ್ಟು ಶ್ರಮಿಸಿದರೂ ಅದು ಕಡಿಮೆ .

English summary
Barcelona Memories Coloumn By Rangaswamy Mookanahalli Part 10,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X