• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಯೆಟ್ನಾಮ್ ಪ್ರವಾಸಿತಾಣದ ಮುಕುಟಮಣಿ, ಜೆಮ್ ಆಫ್ ವಿಯೆಟ್ನಾಂ ನಿನ್ಹ್ ಬಿನ್ಹ್

By ರಂಗಸ್ವಾಮಿ ಮೂಕನಹಳ್ಳಿ
|

ಹರಿಯುವ ಕೊಳದಲ್ಲಿ ಬಿಂದಿಗೆಯೋ , ಲೋಟವೋ ಕೊನೆಗೆ ನಮ್ಮ ಕೈ ಬೊಗಸೆಯಲ್ಲಿ ತೆಗೆದುಕೊಂಡ ನೀರಷ್ಟೇ ನಮ್ಮದು ! ಅದರಲ್ಲೂ ಕುಡಿದದೆಷ್ಟು ಉಳಿದದೆಷ್ಟು ಎನ್ನುವ ಲೆಕ್ಕಾಚಾರ ಬೇರೆ ಬಿಡಿ. ಪ್ರವಾಸಾನುಭವಗಳು ಕೂಡ ಇದಕ್ಕೆ ಹೊರತಲ್ಲ. ನಮ್ಮ ಅರಿವಿಗೆ ನಿಲುಕಿದ್ದು, ಕಂಡದ್ದು ಕೇಳಿದ್ದು ... ಹೊರಟಾಗ ಹೋದ ನಾವುಗಿಂತ ಬರುವಾಗಿನ ನಾವು ಎಷ್ಟೆಲ್ಲಾ ಹೊಸ ಗ್ರಹಿಕೆ ಪಡೆದಿರುತ್ತದೆ.

ಒಮೊಮ್ಮೆ ಅನ್ನಿಸುತ್ತೆ ಆಕಸ್ಮಾತ್ ನಾನಿಲ್ಲಿಗೆ ಬಂದಿಲ್ಲದಿದ್ದರೆ ..... ನಾನು ಕೂತ ಟ್ಯಾಕ್ಸಿ ಗಳು ... ಉಂಡ ಹೋಟೆಲ್ಗಳು .... ಕಂಡ ಮಾನ್ಯೂಮೆಂಟ್ ಗಳು .... ಎಲ್ಲಾ ಹಾಗೆ ಇರುತಿತ್ತು ಅವೇನು ನನ್ನ ಬರುವಿಗೆ ಕಾಯುತ್ತಿರಲಿಲ್ಲ !! ಹಾಗಾದರೆ ಇಲ್ಲಿ ಕಳೆದುಕೊಳ್ಳುತಿದ್ದದು ಯಾರು ? ಈ ಪ್ರಶ್ನೆ ಈ ರೀತಿಯ ಭಾವನೆ ಉಂಟಾಗಿದ್ದು ನಿನ್ಹ್ ಬಿನ್ಹ್ ಹಳ್ಳಿಯನ್ನ ನೋಡಿದ ನಂತರ. ಹೌದು ಆಕಸ್ಮಾತ್ ಇಲ್ಲಿಗೆ ಬರದೆ ಹೋಗಿದ್ದರೆ ನಿಶ್ಚಿತವಾಗಿ ನಷ್ಟವಂತೂ ನನ್ನದೆ.

ಹನೋಯಿಯಲ್ಲಿ ಒಂದು ಸುತ್ತು, ಹತ್ತಿರ ಸುಳಿಯದು ಸುಸ್ತು

ನಿನ್ಹ್ ಬಿನ್ಹ್ (Ninh binh) ಹಳ್ಳಿ ದಕ್ಷಿಣ ವಿಯೆಟ್ನಾಂ ನ ಕೊನೆಯಲ್ಲಿದೆ, ಉತ್ತರ ವಿಯೆಟ್ನಾಮ್ ಪ್ರಾರಂಭದಲ್ಲಿ ರೆಡ್ ರಿವರ್ ಡೆಲ್ಟಾ ತಪ್ಪಲಿನಲ್ಲಿ ನೆಲೆಯಾಗಿದೆ. ಇದನ್ನ ವಿಯೆಟ್ನಾಂ ಪ್ರವಾಸಿತಾಣಗಳ ರಾಜ ಎಂದು ಕರೆಯಲು ಅಡ್ಡಿಯಿಲ್ಲ . ಇದನ್ನ ಇಲ್ಲಿಯ ಟ್ರಾವೆಲ್ ಏಜೆಂಟ್ಗಳು ಪರ್ಲ್ ಆಫ್ ವಿಯೆಟ್ನಾಂ , ಜೆಮ್ ಆಫ್ ವಿಯೆಟ್ನಾಂ .. ಹೀಗೆ ಇನ್ನು ಹತ್ತಾರು ಹೆಸರಿನಿಂದ ಕರೆಯುತ್ತಾರೆ.

ಹನೋಯಿ ನಗರದಿಂದ ಇಲ್ಲಿಗೆ ಬಸ್ ಟ್ರೈನ್ ಅಥವಾ ಕಾರು ಮಾಡಿಕೊಂಡು ಬರಬಹದು ನೂರು ಕಿಲೋಮೀಟರ್ ಗಿಂತ ಸ್ವಲ್ಪ ಕಡಿಮೆ ಅಂತರದಲ್ಲಿದೆ . ಎರಡರಿಂದ ಎರಡೂವರೆ ಗಂಟೆಯಲ್ಲಿ ಇಲ್ಲಿಗೆ ಬಂದು ತಲುಪಬಹದು . ಬಸ್ ಅಥವಾ ಟ್ರೈನ್ ಬಜೆಟ್ ಟ್ರಾವೆಲರ್ ಗಳಿಗೆ ಹೇಳಿ ಮಾಡಿಸಿದಂತಿದೆ. ಹಣದ ಉಳಿತಾಯದ ಜೊತೆಗೆ ಹೊಸ ಅನುಭವ ಕೂಡ ಪಡೆಯಬಹದು.

ಮೂರು ಕಡೆ ಕಡಿದ ಶಿಲೆಗಳಂತೆ ಕಾಣುವ ಪರ್ವತದ ನಡುವೆ ಸೀಳಿ ಕೊಂಡು ಹರಿಯುವ ನೀರಿನಲ್ಲಿ ಎರಡು ಗಂಟೆ ಹುಟ್ಟುಹಾಕುತ್ತ ಹೋಗುವುದು ಅನುಭವಿಸಿ ತೀರ ಬೇಕು. ಆಸ್ಟ್ರಿಯಾ , ಸ್ವಿಸ್ , ಲಿಚೆನ್ಸ್ಟೈನ್ ., ದಕ್ಷಿಣ ಫ್ರಾನ್ಸ್ ನ ನೈಸರ್ಗಿಕ ಸೌಂದರ್ಯ ಸವಿದ ಮೇಲೆ ಹುಬ್ಬೇರುವಂತ ಸ್ಥಳಗಳು ನನಗೆ ಸಿಕ್ಕಿದ್ದೆ ಕಡಿಮೆ ಅಥವಾ ಬೇಡದ ತುಲನೆ ಮಾಡುವ ಮನಸ್ಸಿನ ಮೌಢ್ಯವೂ ಇರಬಹದು.

ನಿನ್ಹ್ ಬಿನ್ಹ್ ನಿಸ್ಸಂದೇಹವಾಗಿ ಕಡಿಮೆ ದುಡ್ಡಿನಲ್ಲಿ ಮೇಲೆ ಹೇಳಿದ ಎಲ್ಲಾ ದೇಶಗಳಿಗೆ ಸೆಡ್ಡು ಹೊಡೆಯುವಂತ ಪ್ರಕೃತ್ತಿ ಸೌಂದರ್ಯದ ಗಣಿ . ಕೆಲವೊಮ್ಮೆ ನಾವು ತೆಗೆದ ಫೋಟೋಗಳೇ ಇರಬಹದು ಬರೆದ ಸಾಲುಗಳೇ ಇರಬಹದು ಅವು ಪೂರ್ಣವಾಗಿ ಅಲ್ಲಿಯ ಪ್ರಕೃತ್ತಿಯ ಹಿಡಿದಿಡುವಲ್ಲಿ ಖಂಡಿತ ಯಶಸ್ವಿಯಾಗುವುದಿಲ್ಲ. ಇದಕ್ಕೆ ಒಂದೇ ಮದ್ದು ಸಮಯ ಮಾಡಿಕೊಂಡು ಈ ಸೌಂದರ್ಯವ ಸವಿಯುವುದು .

ಪ್ರತಿ ಮೂವರು ಅಥವಾ ನಾಲ್ಕು ಜನರಿಗೆ ಒಂದು ಸಣ್ಣ ದೋಣಿಯನ್ನ ಕೊಡುತ್ತಾರೆ. ಹುಟ್ಟು ಹಾಕಲು ಸ್ಥಳೀಯ ನಾವಿಕರು ನಮ್ಮ ಜೊತೆಯಲ್ಲಿ ಇರುತ್ತಾರೆ. ಜೊತೆಗೆ ಇಷ್ಟ ಪಟ್ಟು ನಾವೇ ಹುಟ್ಟು ಹಾಕುತ್ತೇವೆ ಎಂದರೆ ಅದೂ ಕೂಡ ಮಾಡಬಹದು. ನಮ್ಮದು ಏಳು ಜನರ ತಂಡ ನಾಲ್ಕು ಜನ ಒಂದರಲ್ಲಿ ಉಳಿದ ಮೂವರು ಒಂದರಲ್ಲಿ ಕುಳಿತೆವು. ಸ್ವಂತ ಹುಟ್ಟು ಹಾಕುತ್ತ ಹೀಗೆ ಗಂಟೆಗಟ್ಟಲೆ ನೀರಿನ ಮೇಲೆ ಪ್ರಯಾಣಿಸಿದ್ದು ಇದೆ ಮೊದಲು.

ನಿತ್ಯ ಐನೂರು ರೂಪಾಯಿ ಉಳಿಸಿ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿ

ಎರಡು ಗಂಟೆಗೂ ಮೀರಿದ ಪ್ರಯಾಣದಲ್ಲಿ ಒಂದೆರೆಡು ಗವಿಗಳು (ಕೇವ್ ) ಎದುರಾದವು ಹಾಡಹಗಲೇ ರಾತ್ರಿಯ ಅನುಭವ ಕಟ್ಟಿಕೊಟ್ಟವು ಜೊತೆಗೆ ಸಣ್ಣದಾಗಿ ಜಿನುಗುವ ನೀರಿನ ಹನಿಗಳು ನಮ್ಮ ಮೇಲೆ ಬೀಳುತ್ತಿದ್ದವು ! ಅದೊಂದು ಅನುಭವಿಸಿಯೆ ತೀರಬೇಕಾದ ಅನುಭವ ! ಕೊನೆಯ ಗವಿಯ ಬಳಿ ತಮ್ಮ ಸಣ್ಣ ಪುಟ್ಟ ದೋಣಿಗಳಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವ ವಿಯೆಟ್ನಾಮಿ ಮಹಿಳೆಯರು ಸಿಕ್ಕರು.

ಬಾಯಾರಿದೆಯೆ ಕೋಕಾಕೋಲಾ ತಗೋಳಿ..., ನೀರು ಬೇಕೇ ? ಹೀಗೆ ನಯವಿನಯದಿಂದ ಮಾತನಾಡಿ ತಮ್ಮ ಬಳಿ ಇದ್ದ ವಸ್ತುವ ತಮಗೆ ಬಂದ ಭಾಷೆಯಲ್ಲಿ ಮಾರಲು ಪ್ರಯತ್ನಿಸುತ್ತಿದ್ದರು . ಇದಕ್ಕೆ ಬಗ್ಗದ ಜನರಿಗೆ ' ನೋಡಿ ಪಾಪ ನಿಮ್ಮ ಭಾರವನ್ನೆಲ್ಲ ಕೇವಲ ತಾನೊಬ್ಬಳೆ ಹುಟ್ಟು ಹಾಕುತ್ತಿದ್ದಾಳೆ ಅವಳು ದಣಿದಿದ್ದಾಳೆ ಅವಳಿಗಾದರು ಒಂದು ಎನರ್ಜಿ ಡ್ರಿಂಕ್ ಕೊಡಿಸಿ' ಎಂದು ದಂಬಾಲು ಬೀಳುತಿದ್ದರು .

ಈ ಮಧ್ಯೆ ನಮ್ಮ ವೇಗಕ್ಕೆ ತಕ್ಕಂತೆ ನಮ್ಮ ಹಿಂದೆ ಮುಂದೆ ನಮ್ಮ ಫೋಟೋ ತೆಗೆಯುವ ನುರಿತ ಫೋಟೋಗ್ರಾಫರ್ ಗಳ ದಂಡು ಬೇರೆ ! ಹೌದು ನಿಮ್ಮ ಹಿಂದೆಯೆ ಅವರೂ ಹುಟ್ಟು ಹಾಕುತ್ತ ಬಂದು ಉತ್ತಮ ಸ್ಥಳಗಳಲ್ಲಿ ನಮಗರಿವಿಲ್ಲದೆ ಕೆಲವೊಮ್ಮೆ ಅನುಮತಿ ಪಡೆದು ಫೋಟೋ ತೆಗೆಯುತ್ತಾರೆ . ಪ್ರಯಾಣ ಮುಗಿಸಿ ದಡ ತಲುಪುವ ವೇಳೆಗೆ ನಮ್ಮ ಫೋಟೋ ಆಲ್ಬಮ್ ಸಿದ್ಧವಿರುತ್ತದೆ !! .

ಒಂದು ದಿನ ಎನ್ನುವುದು ಅದೆಷ್ಟು ಕಡಿಮೆ ಅವಧಿ ಎನ್ನುವ ಅರಿವು ನಿನ್ಹ್ ಬಿನ್ಹ್ ಮಾಡಿಸಿತು . ಎರಡೂವರೆ ಗಂಟೆ ಹುಟ್ಟು ಹಾಕಿಯೂ ಕೈ , ಕಾಲಿನಲ್ಲಿ ನೋವಿನ ಛಾಯೆಯು ಇರಲಿಲ್ಲ. ನೀವು ವಿಯೆಟ್ನಾಮಿನಲ್ಲಿ ಏನನ್ನಾದರೂ ನೋಡಿ ಅಥವಾ ಬಿಡಿ ನಿನ್ಹ್ ಬಿನ್ಹ್ ನೋಡಲು ಮರೆತರೆ ಅರ್ಥ ನೀವು ವಿಯೆಟ್ನಾಮ್ ಪ್ರವಾಸಿ ತಾಣಗಳ ಮುಕುಟಮಣಿಯನ್ನ ನೋಡದ ಹಾಗೆ ! ನನ್ನ ಮಟ್ಟಿಗಂತೂ ವಿಯೆಟ್ನಾಮ್ ಅಂದರೆ ನಿನ್ಹ್ ಬಿನ್ಹ್ !

ವಿಯೆಟ್ನಾಮಿನ ಒಂದಷ್ಟು ವಿಶಿಷ್ಟ ಪ್ರವಾಸಿ ಅನುಭವಗಳು

# ಹಿಂದಿ ಚಲಚಿತ್ರಗಳು ಮೊರಾಕೊ ನಿಂದ ಹಿಡಿದು ಜಪಾನ್ , ಜರ್ಮನಿ ರಷ್ಯಾ , ಫ್ರಾನ್ಸ್ ಮಲೇಷ್ಯಾ ದಲ್ಲಿ ಪ್ರಸಿದ್ದಿ ಎನ್ನವುದು ಗೊತ್ತಿತ್ತು ಆದರೆ ವಿಯೆಟ್ನಾಮ್ ನಲ್ಲಿ ಹಿಂದಿ ಸೀರಿಯಲ್ಗಳು ಕೂಡ ಭಾರಿ ಜನಪ್ರಿಯ !! ವಿಯೆಟ್ನಾಮೀಸ್ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತವೆ . ' ನನ್ನ ಹೆಂಡತಿ ಮತ್ತು ಅಮ್ಮ ಇಬ್ಬರು ಸಹಮತದಿಂದ ಇರುವುದು ' ಬಾಲಿಕಾ ವಧು ' ಸೀರಿಯಲ್ ನೋಡುವಾಗ ಎಂದು ನಕ್ಕ ನಮ್ಮ ಡ್ರೈವರ್ ವಿಯೆಟ್ನಾಮ್ನ ಇನ್ನೊಂದು ಮುಖ ಪರಿಚಯಿಸಿದ .

# ಹನೋಯ್ ನಗರದ ಜನಸಂಖ್ಯೆ ಹತ್ತಿರತ್ತಿರ ೮೦ ಲಕ್ಷ (೮ ಮಿಲಿಯನ್ ) . ನೀರಿನಂತೆ ಹರಿದು ಹೋಗುವ ವಾಹನ ಮತ್ತು ಜನ ಸಾಗರ . ಸಾಯಂಕಾಲವಂತೂ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಜನ ದಟ್ಟಣೆ ಇದೆ . ಹೀಗಿದ್ದೂ ಶುಕ್ರವಾರ , ಶನಿವಾರ ಮತ್ತು ಭಾನುವಾರ ಇಲ್ಲಿನ ಮುಖ್ಯ ರಸ್ತೆಯನ್ನ 'ಪೆಡೆಸ್ಟ್ರಿಯನ್ ' ರಸ್ತೆಯನ್ನಾಗಿ ಮಾರ್ಪಡಿಸುತ್ತಾರೆ . ಮಕ್ಕಳು ತಮ್ಮಿಚ್ಚೆಯಂತೆ ಕುಣಿಯಬಹದು ! . ಹಾಡು ಕುಣಿತ ಎಲ್ಲೆಡೆ !!.

# Tran Quoc Pagoda ಅತ್ಯಂತ ಪ್ರಸಿದ್ಧ ಬುದ್ಧನ ಆಲಯ . ಪಗೋಡ ಅಂದರೆ ದೇವಸ್ಥಾನ ಅಥವಾ ಬುದ್ಧನ ಆಲಯ ಎನ್ನುವ ಅರ್ಥ ಕೊಡುತ್ತದೆ . ಹಾಗೆ ನೋಡಲು ಹೋದರೆ ಇಡಿ ವಿಯೆಟ್ನಾಮ್ ಬುದ್ಧನ ಮಂದಿರಗಳಿಂದ ತುಂಬಿ ಹೋಗಿದೆ . ನಾವಿದಷ್ಟು ದಿನವೂ ಪಗೋಡ ಅನ್ನುವ ಪದ ಬಳಸದೆ ಇರಲು ಆಗಲಿಲ್ಲ . ಈ ದೇಶ ಹೆಸರಿಗಷ್ಟೆ ಕಮ್ಯುನಿಸ್ಟ್ ! ನನ್ನ ಅರಿವಿಗೆ ನಿಲುಕಿದ ಪ್ರಕಾರ ಇದೊಂದು ಪರಿಪೂರ್ಣ ಬೌದ್ಧ ದೇಶ.

ವಿಯೆಟ್ನಾಂ ನ ಹನೋಯಿ ನಗರದಲ್ಲಿ ೧೫೦೦ ವರ್ಷ ಹಳೆಯ ಬುದ್ಧನ ದೇವಾಲಯವಿದೆ . ಟೈಮ್ ಟ್ರಾವೆಲ್ ಮಾಡುವುದು ಸೈಂಟಿಫಿಕ್ ಫಿಕ್ಷನ್ ಇರಬಹುದು ಆದರೆ ನಿಜ ಜೀವನದಲ್ಲಿ ಕಡೇಪಕ್ಷ ಹಿಂದಕ್ಕೆ ಹೋಗುವ ಅವಕಾಶ ಇನ್ನೂ ಇದೆ . ಅದೊಂದು ಸಂತೋಷ , ಅವಕಾಶ ಸಿಕ್ಕರೆ ಈ ದೇವಾಲಯ ಭೇಟಿ ನೀಡಲು ಮರೆಯಬೇಡಿ.

ನಮ್ಮ ಗೈಡ್ ನ ನಿನ್ನ ಧರ್ಮ ಯಾವುದು ಎಂದೇ ಗೊತ್ತಿಲ್ಲ ಎಂದ !! ಬೌದ್ಧ ಧರ್ಮಿಯರು ಹೆಚ್ಚು ಉಳಿದಂತೆ ಕ್ಯಾಥೊಲಿಕ್ ಕೂಡ ಒಂದೇಳು ಪ್ರತಿಶತ ಇದ್ದಾರೆ .ಮುಸ್ಲಿಮರ ಸಂಖ್ಯೆ ಮಾತ್ರ ೦. ೨ ಪ್ರತಿಶತ . ಪ್ರತಿ ಊರಿಗೆ ಹತ್ತು ಪಗೋಡ (ದೇವಸ್ಥಾನ )ಸಿಗುತ್ತೆ . ಒಂದೇ ಒಂದು ಮಸೀದಿ ನನ್ನ ಕಣ್ಣಿಗೆ ಬೀಳಲಿಲ್ಲ . ಹನೋಯಿ ನಗರದಿಂದ ನೂರಾರು ಮೈಲಿ ದೂರದಲ್ಲಿ ಕೂಡ ಅಲ್ಲೊಂದು ಇಲ್ಲೊಂದು ಚರ್ಚು ಮಾತ್ರ ಕಣ್ಣಿಗೆ ಬಿದ್ದವು .

#ಹನೋಯಿ ನಗರದಿಂದ ೮೫ ಕಿಲೋಮೀಟರ್ ದೂರದಲ್ಲಿ ಯುನೆಸ್ಕೋ ದಿಂದ ಮಾನ್ಯತೆ ಪಡೆದಿರುವ đường lâm ಎನ್ನುವ ಹಳ್ಳಿಯಿದೆ . ಹೆಸರಿಗೆ ಹನೋಯಿ ನಗರದಿಂದ ೮೫ ಕಿಲೋಮೀಟರ್ ದೂರ ..., ನಗರದ ಅಬ್ಬರ ಆರ್ಭಟಗಳಿಂದ ಮುನ್ನೂರು ವರ್ಷ ಹಿಂದೆ ಇದ್ದಾರೆ.

ಇಲ್ಲಿಗೆ ಕೋಲ್ಗೇಟ್ ಬಂದು ನಿಮ್ಮ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಕೇಳಲಾಗಿಲ್ಲ ! ಏಕೆಂದರೆ ಹಳ್ಳಿಯ ಹಿರಿಯರು ಹಲ್ಲಿಗೆ ಒಂದು ವಿಶಿಷ್ಟ ಮರದಿಂದ ತೆಗೆದ ರಸವನ್ನ ಹಚ್ಚುತ್ತಾರೆ ಹೀಗಾಗಿ ಇವರ ಹಲ್ಲುಗಳು ಕಪ್ಪು ಬಣ್ಣ !! ನಮಗೆ ಸಿಕ್ಕ ಮುಕ್ಕಾಲು ಪಾಲು ಜನರ ಹಲ್ಲಿನ ಬಣ್ಣ ಕಪ್ಪು . ಇಲ್ಲಿ ೯೩ ರ ಹರಯದ ವ್ಯಕ್ತಿಗಳ ಹಲ್ಲು ಇನ್ನೂ ಕಬ್ಬನ್ನ ಸಿಗಿದು ತಿನ್ನುವಷ್ಟು ಗಟ್ಟಿಮುಟ್ಟಾಗಿವೆ .

# ನಾವೆಲ್ಲಾ ಮೂಲದಲ್ಲಿ ಒಂದೇ ಎನ್ನುವ ವಿಷಯ ಪ್ರತಿ ದೇಶ ಭೇಟಿ ಕೊಟ್ಟ ನಂತರ ನನಗೆ ಮತ್ತಷ್ಟು ಮನದಟ್ಟಾಗುತ್ತೆ . ಇಲ್ಲಿ ಆಮೆಯನ್ನ (ಕೂರ್ಮಾವತಾರ !!?) ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ . ಇಲ್ಲಿನ ಬುದ್ಧನ ದೇವಾಲಯದಲ್ಲಿ ಇರುವ ಆಮೆಯ ತಲೆಯನ್ನ ಮುಟ್ಟುವುದ್ದರಿಂದ ಅದೃಷ್ಟ ಜೊತೆಯಾಗುತ್ತೆ ಎನ್ನುವುದು ಇಲ್ಲಿನ ಜನರ ನಂಬಿಕೆ ! ಕೇಳೋದಿನ್ನೇನು ಆಮೆಯ ತಲೆ ಸವರಿ ಸವರಿ ಅದರ ಬಣ್ಣವೇ ಬದಲಾಗಿದೆ . ದೇವಾಲಯದ ಹೊರಗೆ ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳ ಆಮೆ ಮರಿಗಳನ್ನ ಬಕೆಟ್ ನಲ್ಲಿ ಹಾಕಿಕೊಂಡು ಕೂತಿರುತ್ತಾಳೆ . ಜನ ಎರಡು ಡಾಲರ್ ತೆತ್ತು ಅದನ್ನ ಕೊಂಡು ಕೊಳಕ್ಕೆ ಬಿಡುತ್ತಾರೆ . ಹೀಗೆ ಬಿಡುವ ಮುನ್ನ ಮನದಲ್ಲಿನ ಆಸೆ ಹೇಳಿಕೊಂಡರೆ ಅದು ಈಡೇರುತ್ತಂತೆ !! .

# ವಿಯೆಟ್ನಾಂ ದೇಶದ ಜನಸಂಖ್ಯೆ ೯. ೫ ಕೋಟಿ ಅದರಲ್ಲಿ ಹತ್ತು ಪ್ರತಿಶತಕ್ಕೂ ಹೆಚ್ಚು ಸೀನಿಯರ್ ಸಿಟಿಜನ್ಸ್ ! ಇನ್ನೆರೆಡು ದಶಕದಲ್ಲಿ ಇಲ್ಲಿಯ ಜನಸಂಖ್ಯೆಯ ೩೫ ಪ್ರತಿಶತ ಸೀನಿಯರ್ ಸಿಟಿಜನ್ ಪಟ್ಟಿಗೆ ಸೇರುತ್ತಾರೆ . ಈಗಾಗಲೇ ಹಲವು ಹಳ್ಳಿಗಳಲ್ಲಿ ಯುವ ಜನತೆ ಹುಡುಕಿದರೂ ಸಿಗುವುದಿಲ್ಲ.

ಇಲ್ಲಿಯ ಹಳ್ಳಿಗಳ ರಸ್ತೆಯ ಮಧ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನೃತ್ಯ ದಂತ ಹಲವು ಕಾರ್ಯಗಳನ್ನ ವಯೋವೃದ್ಧರು ನೆಡೆಸುವುದು ಸಾಮಾನ್ಯ ದೃಶ್ಯವಾಗಿದೆ . ಹನೋಯಿ ಈ ದೇಶದ ರಾಜಧಾನಿ , ಇಲ್ಲಿ ಫ್ರೆಂಚ್ ಮಾತನಾಡುವರ ಸಂಖ್ಯೆ ಬಹಳವಿದೆ . ಫ್ರೆಂಚರ ವಸಾಹತು ಆಗಿದ್ದರ ನೆನಪು ತರುವ ಫ್ರೆಂಚ್ ಶೈಲಿಯ ವಾಸ್ತುಶಿಲ್ಪ ಉಳ್ಳ ಕಟ್ಟಡಗಳು ಕೂಡ ಹೇರಳವಾಗಿವೆ .

# ಎಲ್ಲಾ ಅನುಭವಗಳೂ ಒಳ್ಳೆಯವೆ ! ಕೆಲವು ನೆನಪಿನ ಬುತ್ತಿ ಹಿಗ್ಗಿಸುತ್ತವೆ ಕೆಲವೊಂದು ಅನುಭವಗಳು ಪಾಠ ಕಲಿಸುತ್ತವೆ . ಹೀಗೆ ಪಾಠ ಕಲಿಸುವ ಅನುಭವವೂ ಆಯಿತು . ಹನೋಯಿ ನಗರ ಅತ್ಯಂತ ಜನನಿಬಿಡ , ಸಾಯಂಕಾಲವಾದರಂತೂ ಹೊರಗೆ ಕಾಲಿಡುವುದೆ ಬೇಡ ಅನ್ನುವಷ್ಟು ಜನಸಂದಣಿ . ಸಂಸಾರ ಸಮೇತ ಇಂಡಿಯನ್ ರೆಸ್ಟುರಾಂಟ್ ನಲ್ಲಿ ಊಟ ಮುಗಿಸಿ ಟ್ಯಾಕ್ಸಿ ಗಾಗಿ ಕಾಯುತ್ತ ನಿಂತಿದ್ದೆವು.

ಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿ ಹೆಲ್ಮಟ್ ತೆಗೆದು ಕಣ್ಣು ಹೊಡೆದು 'ಮಸಾಜ್ ಮಸಾಜ್' ಎಂದು ಮುಖ ನೋಡಿದ ನಾನು ಬೇಡವೆನ್ನುವಂತೆ ಕೈ ಆಡಿಸಿದರೂ ಬಿಡದೆ ವ್ಯಾಪಾರ ಕುದಿರಿಸಿಯೆ ಸಿದ್ದ ಎನ್ನುವಂತಿತ್ತು ಅವನ ಹಾವಭಾವ. ಅವನನ್ನ ಸಾಗು ಹಾಕುವುದರಲ್ಲಿ ಮತ್ತೊಬ್ಬ ಪ್ರತ್ಯಕ್ಷ !! ಮತ್ತದೆ ರಿಪೀಟ್ ... , ಊರೆಂದ ಮೇಲೆ ಹೊಲಸು ಇರಲೇಬೇಕಲ್ಲವೆ ? ಜಗತ್ತಿನ ಅತ್ಯಂತ ಹಳೆಯ ವೃತ್ತಿ ಇಲ್ಲೂ ಅಭಾದಿತ .

ನೀವು ವಿಯೆಟ್ನಾಮ್ ಗೆ ಪ್ರಯಾಣಿಸುವರಿದ್ದರೆ ಇಲ್ಲಿ ಟಿಪ್ಸ್ ಕೊಡುವುದು ಅತ್ಯಂತ ಮುಖ್ಯವಾಗಿ ಮಾಡಲೇಬೇಕಾದ ಕೆಲಸ . ಭಾಷೆಯ ತೊಂದರೆ , ಸಂಕೋಚ ಹೀಗೆ ಹಲವು ಕಾರಣದಿಂದ ಬಹಳ ಜನ ನಿಮ್ಮ ಟಿಪ್ಸ್ ಕೇಳದೆ ಇರಬಹದು . ಇಲ್ಲಿನ ಸಾಮಾನ್ಯನ ಸಂಭಾವನೆ ಅತ್ಯಂತ ಕಡಿಮೆ. ಹೀಗಾಗಿ ಟಿಪ್ಸ್ ಕೊಡುವುದು ಇಲ್ಲಿಯ ಸಂಪ್ರಾಯದವಾಗಿ ಹೋಗಿದೆ.

ಅವರು ಕೇಳಲಿ ಬಿಡಲಿ ಒಂದಷ್ಟು ಟಿಪ್ಸ್ ಕೊಟ್ಟರೆ ಕಳೆದುಕೊಳ್ಳುವುದು ಏನೂ ಇಲ್ಲ . ಬದಲಿಗೆ ಹಸನ್ಮುಖತೆಯಿಂದ ಅರೆಬಾಗಿ ನಿಮಗೆ ವಂದಿಸುತ್ತಾರೆ . ಆ ನಗುವಿಗೆ ಆ ಪ್ರೀತಿ ಗೌರವಕ್ಕೆ ಬೆಲೆ ಕಟ್ಟಲಾದೀತೆ ? ವಿಯೆಟ್ನಾಮ್ಗೆ ಪ್ರಯಾಣಿಸಲು ಇದು ಸೂಕ್ತ ಸಮಯ ! ತಡವಿನ್ನೇಕೆ ಹೊರಡಿ . ಶುಭ ಪ್ರಯಾಣ .

# ವಿಯೆಟ್ನಾಮಿನಲ್ಲಿ ಕಾಯಿನ್ ಅರ್ಥತ್ ನಾಣ್ಯಗಳು ಚಾಲನೆಯಲಿಲ್ಲ ! ಒಂದು , ಎರಡು , ಐದು ಮತ್ತು ಹತ್ತು ಸಾವಿರ ಡಾಂಗ್ ಗಳನ್ನ ನಮ್ಮ ರೂಪಾಯಿಯಂತೆ ಪೇಪರ್ ಮೇಲೆ ಮುದ್ರಿಸಲಾಗಿದೆ . ಉಳಿದಂತೆ ಇಪ್ಪತ್ತು , ಐವತ್ತು , ಲಕ್ಷ , ಎರಡು ಲಕ್ಷ ಮತ್ತು ಐದು ಲಕ್ಷ ಡಾಂಗ್ ಗಳನ್ನ ಪ್ಲಾಸ್ಟಿಕ್ ಪೇಪರ್ ಮೇಲೆ ಮುದ್ರಿಸುತ್ತಾರೆ . ಇವನ್ನ ಪಾಲಿಮರ್ ನೋಟುಗಳು ಎನ್ನುತ್ತಾರೆ .

English summary
Ninh Binh, an amazing travel destination in Socialist Republic of Vietnam. This is the most fascinating places in Vietnam. Apart from an inspiring scenery, you have easy access to the rural and authentic Vietnam.A detailed travel report from Rangaswamy Mookanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X