ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ

By Staff
|
Google Oneindia Kannada News

Irshad Manji, author of The Trouble With Islam Todayನಿಮ್ಮ ಜತೆ ಮನಬಿಚ್ಚಿ ಹೇಳಿಕೊಳ್ಳಲೇಬೇಕು. ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ. ಅಷ್ಟಕ್ಕೂ ಪ್ರವಾದಿಯವರ ಸ್ವಘೋಷಿತ ರಾಯಭಾರಿಗಳಿಂದ ಮತ್ತೆ ಯಾವ ಆಪತ್ತು ಬರಲಿದೆ ಎಂಬ ಆತಂಕದೊಂದಿಗೇ ಕಾಲ ದೂಡುತ್ತಿದ್ದೇನೆ. ಅವರು ಹೊರಡಿಸುವ ಫತ್ವಾಗಳ ಬಗ್ಗೆ ಯೋಚಿಸಿದಾಗ ಭಾರೀ ಮುಜುಗರವಾಗುತ್ತದೆ. ನಿಮಗೂ ಆಗುತ್ತದಲ್ಲವೆ?

ಪ್ರತಾಪ್ ಸಿಂಹ
[email protected]

“ನನ್ನ ಸಂಗಡಿಗ ಮುಸ್ಲಿಮರೇ,

ನಿಮ್ಮ ಜತೆ ಮನಬಿಚ್ಚಿ ಹೇಳಿಕೊಳ್ಳಲೇಬೇಕು. ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ. ಅಷ್ಟಕ್ಕೂ ಪ್ರವಾದಿಯವರ ಸ್ವಘೋಷಿತ ರಾಯಭಾರಿಗಳಿಂದ ಮತ್ತೆ ಯಾವ ಆಪತ್ತು ಬರಲಿದೆ ಎಂಬ ಆತಂಕದೊಂದಿಗೇ ಕಾಲ ದೂಡುತ್ತಿದ್ದೇನೆ. ಅವರು ಹೊರಡಿಸುವ ಫತ್ವಾಗಳ ಬಗ್ಗೆ ಯೋಚಿಸಿದಾಗ ಭಾರೀ ಮುಜುಗರವಾಗುತ್ತದೆ. ನಿಮಗೂ ಆಗುತ್ತದಲ್ಲವೆ? 'ವ್ಯಾಲಂಟೈನ್ಸ್" ದಿನ ಯಾವುದಾದರೂ ಮಹಿಳೆ ಕೆಂಪು ಬಟ್ಟೆ ಧರಿಸಿರುವುದನ್ನು ಕಂಡರೆ ಪೊಲೀಸರು ಬಂಧಿಸಿ ಜೈಲಿಗೆ ದಬ್ಬುತ್ತಾರೆ ಎಂಬುದು ಸೌದಿ ಅರೇಬಿಯಾದಲ್ಲಿರುವ ನನ್ನ ಸ್ನೇಹಿತೆಯೊಬ್ಬಳ ಅಂಬೋಣ. ಆದರೆ ಮನುಜುರಾದ ನಾವು ಖುಷಿಪಟ್ಟರೆ ದಯಾಮಯಿಯಾದ ದೇವರು ಮುನಿಸಿಕೊಳ್ಳುವುದು ಎಲ್ಲಾದರೂ ಉಂಟೆ?! ಅತ್ಯಾಚಾರ ಕ್ಕೊಳಗಾದ ಮಹಿಳೆಯ ಮೇಲೆ 'ಅನೈತಿಕತೆ"ಯ ಆರೋಪ ಹೊರಿಸಿ ಕಲ್ಲು ಹೊಡೆದು ಸಾಯಿಸಿದ ಬಗ್ಗೆ ಓದಿದ್ದೇನೆ. ಇಂತಹ ಆತಂಕಕಾರಿ ಘಟನೆಗಳು ನಡೆಯುತ್ತಿದ್ದರೂ ನಾವು ಕಲ್ಲಿನಂತೆ ಮೌನವಾಗಿರುವುದಾದರೂ ಹೇಗೆ?..

"ಅನ್ಯಧರ್ಮೀಯರು ಬಂದು ಇಸ್ಲಾಂ ಬಗ್ಗೆ ಹೇಳಿ, ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ ಅಂತ ಬೇಡಿಕೊಂಡರೂ ನಾವೇಕೆ ಹೇಳಿಕೊಳ್ಳಬೇಕು? ನಾವಿರುವುದೇ ಹೀಗೆ ಅಂತ ಮುಲ್ಲಾಗಳು ಅಡ್ಡಗಾಲು ಹಾಕುತ್ತಾರೆ. ಹಾಗಾಗಿ ಅವರು ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡಾಗ ನಮ್ಮ ಬಗ್ಗೆ ಸರಿಯಾದ ಅಭಿಪ್ರಾಯ ಹೊಂದಲು ನಾವೇ ಅವಕಾಶ ಮಾಡಿಕೊಟ್ಟಿಲ್ಲ ಎಂಬುದನ್ನೂ ನಾವು ಗುರುತಿಸುವುದಿಲ್ಲ. ಇವೆಲ್ಲಕ್ಕಿಂತ ಮಿಗಿಲಾಗಿ, ನಮ್ಮ ಧರ್ಮದ ಒಡಕುಗಳ ಬಗ್ಗೆ ಸಾರ್ವಜನಿಕವಾಗಿ ಹೇಳಲು ಮುಂದಾದರೆ ಯಾವ ಮುಸ್ಲಿಮರು ಪ್ರತಿಯೊಂದರಲ್ಲೂ ಕಾರಣ ಹುಡುಕು ತ್ತಾರೋ ಅವರೇ ನನ್ನನ್ನೂ ಮಾರಿಕೊಂಡಿದ್ದಾಳೆ ಎಂದು ಬ್ರ್ಯಾಂಡ್ ಮಾಡಿಬಿಡುತ್ತಾರೆ. ಆದರೆ ನಾನು ಮಾರಿಕೊಂಡಿ ರುವುದು ಯಾವುದಕ್ಕೆ? ನೈತಿಕ ಸ್ಪಷ್ಟತೆಗೋ? ನಾಗರಿಕತೆಗೋ?..

"Yes, I am blunt. ನಾನು ಕೇಳುತ್ತಿರುವ ಪ್ರಶ್ನೆಗಳನ್ನು ಮರೆಮಾಚಲು ಸಾಧ್ಯವಿಲ್ಲ. ಇಸ್ರೇಲಿ ಹಾಗೂ ಪ್ಯಾಲೆಸ್ತೀನಿಯರ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ನಾವೇಕೆ ಒತ್ತೆಯಾಳಾಗಬೇಕು? ನಮ್ಮನ್ನು ದಾಸರನ್ನಾಗಿ ಮಾಡಿಕೊಂಡಿರುವುದು ಅಮೆರಿಕವೋ ಅಥವಾ ಅರಬ್ ರಾಷ್ಟ್ರಗಳೋ? ಮಹಿಳೆಯರಲ್ಲಿರುವ ಪ್ರತಿಭೆಯನ್ನೇಕೆ ಕೊಳೆಯಲು ಬಿಟ್ಟಿದ್ದೇವೆ? ದೇವರ ಎಲ್ಲ ಸೃಷ್ಟಿಯೂ 'ಅದ್ಭುತ" ಎಂದು ಕುರಾನ್‌ನಲ್ಲಿಯೇ ಹೇಳಿದ್ದರೂ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸಲಿಂಗಕಾಮಿಗಳನ್ನು ಕಲ್ಲುಹೊಡೆದು ಸಾಯಿಸುವುದೇಕೆ? ನಾನು ಹೇಳುತ್ತಿರುವುದು 'ನಿಜವಾದ" ಇಸ್ಲಾಂ ಅಲ್ಲ ಎಂದು ನಿಮಗನಿಸ ಬಹುದು. ನಿಮ್ಮ ಅನಿಸಿಕೆಯೇ ಸರಿಯಾಗಿರಲಿ..

"ಅದಕ್ಕಾ ಗಿಯೇ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಅಷ್ಟಕ್ಕೂ ಸಾಮಾನ್ಯ ಮುಸ್ಲಿಮರಾದ ನಾವು ಮುಲ್ಲಾಗಳಿಗಿಂತ ಹೆಚ್ಚು ವಿಚಾರಪರರು ಹಾಗೂ ಮಾನವೀಯರು ಎಂದು ನನಗನಿಸುತ್ತದೆ. ಒಂದು ಪ್ರಾಮಾಣಿಕ ಚರ್ಚೆಯ ಸಲು ವಾಗಿ ನಿಮಗೊಂದು ಸವಾಲು ಎಸೆಯುತ್ತೇನೆ. ಈಗ ನಾವು ಕಾಣುತ್ತಿರುವುದೇ ನಿಜವಾದ ಇಸ್ಲಾಮಾ ಅಥವಾ ಇಸ್ಲಾಂ ಎಂಬುದು ಬರೀ ಒಂದು ಆದರ್ಶವೇ? ಆದರ್ಶಗಳೆಲ್ಲವೂ ಅದ್ಭುತವಾಗಿಯೇ ಇರುತ್ತವೆ. ಕಮ್ಯುನಿಸಂ ಕೂಡ ಒಂದು ಆದರ್ಶವಾಗಿ ಅದ್ಭುತವಾಗಿ ಕಾಣುತ್ತದೆ. ಆದರೆ ವಾಸ್ತವ ಹಾಗೇ ಇದೆಯೇ? ಅಮೆರಿಕದ ಸಂವಿಧಾನ ಪ್ರತಿಯೊಬ್ಬ ರಿಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯ ನೀಡಿದೆ? ಆದರೆ ವಾಸ್ತವದಲ್ಲಿ ಜಾರಿಯಾಗಿದೆಯೇ? ಮುಸ್ಲಿಮರಿಗೂ ಕೂಡ ಇಸ್ಲಾಂನಲ್ಲಿರುವ ಪರಿಸ್ಥಿತಿ ಆದರ್ಶಕ್ಕಿಂತ ವಿಭಿನ್ನವಾಗಿದೆ ಎಂಬುದು ಗೊತ್ತು. ಆದರ್ಶ ಎಷ್ಟೇ ಒಳ್ಳೆಯದಾಗಿದ್ದರೂ ವಾಸ್ತವದಲ್ಲಿ ಅದು ಸಾಧ್ಯವಿಲ್ಲ. ಹಾಗಾಗಿ ಆದರ್ಶಕ್ಕೆ ಕಟ್ಟುಬೀಳದೆ ವಾಸ್ತವದಲ್ಲಿರುವ ಹುಳುಕುಗಳನ್ನು ಒಪ್ಪಿಕೊಂಡು ಸರಿಪಡಿಸಲು ಮುಂದಾಗಬೇಕು. ಒಮ್ಮೆ ಧರ್ಮ ಅಂದರೆ ಏನು? ಎಂದು ಕೇಳಿದಾಗ “ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೇ ಧರ್ಮ" ಎಂದಿದ್ದರು ಪ್ರವಾದಿ. ಅಂದರೆ ಮುಸ್ಲಿಮರಾದ ನಾವು ಹೇಗೆ ವರ್ತಿಸುತ್ತೇವೆ ಎಂಬುದೇ ನಿಜವಾದ ಇಸ್ಲಾಂ!"..
*****

“ದಿ ಟ್ರಬಲ್ ವಿತ್ ಇಸ್ಲಾಂ ಟುಡೆ" ಎಂಬ ಪುಸ್ತಕದಲ್ಲಿ ಮುಸ್ಲಿಮಳೇ ಆಗಿರುವ ಇರ್ಷಾದ್ ಮಂಜಿ ಹೀಗೆ ಬರೆಯುತ್ತಾ ಹೋಗುತ್ತಾರೆ. ಒಂದು ವೇಳೆ, ಪ್ರತಿಯೊಬ್ಬ ಮುಸ್ಲಿಮರೂ ಈ ಪುಸ್ತಕವನ್ನೇನಾದರೂ ಓದಿದರೆ, ಅದರಲ್ಲಿರುವ ಸಾರವನ್ನು ಅರಿತುಕೊಂಡರೆ ಬಹುಶಃ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾದ ಭಯೋತ್ಪಾದನೆಯೇ ಇಲ್ಲದಂತಾಗುತ್ತದೆ.

ಇದನ್ನೆಲ್ಲ ಏಕೆ ಹೇಳಬೇಕಾಗಿದೆಯೆಂದರೆ ಎಲ್ಲೋ ದೂರದ ಕಾಶ್ಮೀರ, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ ಕಂಡು-ಕೇಳಿ ಬರುತ್ತಿದ್ದ ಆತಂಕಕಾರಿ ಬೆಳವಣಿಗೆಗಳು ಇಂದು ನಮ್ಮ ನೆರೆಯಲ್ಲೇ ಕಾಣಿಸುತ್ತಿವೆ. ಹುಬ್ಬಳ್ಳಿಯ ಕಿಮ್ಸ್‌ನಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿರುವವರೇ ದೇಶದ್ರೋಹಿ ಕೃತ್ಯಕ್ಕೆ ಕೈಹಾಕುವುದಾದರೆ ಒಬ್ಬ ಸಾಮಾನ್ಯ ಅನಕ್ಷರಸ್ಥ ಮುಸಲ್ಮಾನನ ಮನಃಸ್ಥಿತಿ ಹೇಗಿರಬಹುದು? ಬಡತನ, ನಿರುದ್ಯೋಗ, ಅನಕ್ಷರತೆಯೇ ಮುಸ್ಲಿಮರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಕಾರಣ ಎಂದು ಕೆಲವರು ಸಬೂಬು ಹೇಳುತ್ತಿದ್ದರು. ಆದರೆ ಲಂಡನ್ ಬಾಂಬ್ ದಾಳಿಯ ರುವಾರಿ ಕಫೀಲ್, ಬಿಲಾಲ್‌ಗಳು ಹುಬ್ಬಳ್ಳಿಯಲ್ಲಿ ಸಿಕ್ಕಿಬಿದ್ದಿರುವ ಅಸಾದುಲ್ಲಾ, ಮೊಹಮದ್ ಗೌಸ್ ಕೂಡ ಅನಕ್ಷರಸ್ಥರೇ? ಮೆಡಿಕಲ್ ಓದುವಷ್ಟು ಶಕ್ತರಾದ ಅವರಿಗೂ ಬಡತನದ ಬೇಗೆ ಕಾಡುತ್ತಿತ್ತೆ? ನಿರುದ್ಯೋಗದ ಭಯವಿತ್ತೆ? ಒಂದು ವೇಳೆ ಬಡತನ, ನಿರುದ್ಯೋಗಗಳೇ ಭಯೋತ್ಪಾದನೆಗೆ ದಾರಿ ಮಾಡಿಕೊಡುತ್ತವೆ ಎನ್ನುವುದಾದರೆ ಬಡತನ ರೇಖೆಗಿಂತ ಕೆಳಗಿರುವ ಈ ದೇಶದ ಶೇ.30ರಷ್ಟು ಜನರು ಉಗ್ರಗಾಮಿಗಳಾಗಿರಬೇಕಿತ್ತಲ್ಲವೆ?

ಶತಶತಮಾನ ಗಳಿಂದಲೂ ಮೇಲ್ಜಾತಿಯವರ ದೌರ್ಜನ್ಯಕ್ಕೆ ಒಳಗಾಗುತ್ತಾ ಬಂದಿರುವ ದಲಿತರೂ ಕೂಡ ಶಸ್ತ್ರಾಸ್ತ್ರ ಹಿಡಿದು ಸಮಾಜದ ನಾಶಕ್ಕಿಳಿಯಬಹುದಿತ್ತಲ್ಲವೇ? ಅಂಬೇಡ್ಕರ್ ಕೂಡ ಬಿನ್ ಲಾಡೆನ್‌ನ ಹಾದಿ ತುಳಿದಿದ್ದರೆ? ರಾಜೇಂದ್ರ ಸಾಚಾರ್ ಸಮಿತಿ ವರದಿಯನ್ನಾಧರಿಸಿ 1800 ಕೋಟಿ ವ್ಯಯ ಮಾಡಿ ಪ್ರತಿಯೊಬ್ಬ ಮುಸ್ಲಿಂ ವಿದ್ಯಾರ್ಥಿಗೂ ಸ್ಕಾಲರ್‌ಶಿಪ್ ನೀಡಲು ಕೇಂದ್ರ ಸರಕಾರ ತಯಾರಿ ನಡೆಸುತ್ತಿದೆ. ಆದರೆ ಮುಸ್ಲಿಮರ ಮನಸ್ಥಿತಿಯೇ ಬದಲಾಗದೇ ಹೋದರೆ ಸ್ಕಾಲರ್‌ಶಿಪ್‌ನಿಂದ ಯಾವ ಪ್ರಯೋಜನವಾದೀತು? ಯಾವಾಗ ಮುಸ್ಲಿಮ ರಲ್ಲಿ ಧರ್ಮಕ್ಕಿಂತ ದೇಶ ಮೊದಲು ಎಂಬ ಭಾವನೆ ಮೂಡುವುದೋ ಅಗ ಮಾತ್ರ ಯಾವ ದೇಶವಾದರೂ ಅಭಿವೃದ್ಧಿ ಹೊಂದಲು, ಶಾಂತಿಯಿಂದಿರಲು ಸಾಧ್ಯ. ಅಷ್ಟಕ್ಕೂ, ಜಗತ್ತಿನ ಯಾವ ದೇಶವನ್ನು ಬೇಕಾದರೂ ತೆಗೆದುಕೊಳ್ಳಿ. ಎಲ್ಲೆಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೋ ಅಲ್ಲೆಲ್ಲ ದೌರ್ಜನ್ಯ ತಾಂಡವವಾಡುತ್ತಿದೆ, ಎಲ್ಲೆಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದಾರೋ ಅಲ್ಲೆಲ್ಲ ಬಂಡಾಯ, ಹಿಂಸೆ ಕಂಡುಬರುತ್ತಿದೆ. ಏಕೆ?.

“ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೇ ಧರ್ಮ" ಅಂತ ಪ್ರವಾದಿ ಯವರೇ ಹೇಳಿದ್ದರೂ ಧರ್ಮಾಂಧ ಮುಸ್ಲಿಮರು ನಡೆದು ಕೊಳ್ಳುತ್ತಿರುವ ರೀತಿ ಹೇಗಿದೆ? ಏಕೆ ಮುಸ್ಲಿಮರಲ್ಲಿ ಸಹಿಷ್ಣು ತೆಯೇ ಕಾಣುತ್ತಿಲ್ಲ? ಅವರು ಕೂಡಿ ಬಾಳುವುದನ್ನು ಕಲಿಯುವುದು ಯಾವಾಗ? ಇವತ್ತು ಕ್ರಿಶ್ಚಿಯಾನಿಟಿಯಲ್ಲಿನ ಹುಳುಕುಗಳ ಬಗ್ಗೆ ಬರೆದಿರುವ ಸಾವಿರಾರು ಪುಸ್ತಕಗಳನ್ನು ಕಾಣಬಹುದು. ಹಿಂದೂ ಧರ್ಮದ ಹುಳುಕುಗಳ ಬಗ್ಗೆ ನೂರಾರು ಪುಸ್ತಕಗಳೂ ಇವೆ, ಚಲನಚಿತ್ರಗಳೂ ನಿರ್ಮಾಣ ಗೊಂಡಿವೆ, ನಂಬಿಕೆಯನ್ನೇ ಅಲುಗಾಡಿಸುವಂತಹ ಪ್ರಶ್ನೆಗಳನ್ನು ಕೇಳಿದ್ದೂ ಇದೆ. ಆದರೆ ಇಸ್ಲಾಂನಲ್ಲಿನ ಸರಿ-ತಪ್ಪುಗಳ ಬಗ್ಗೆ ಏಕೆ ಯಾವ ಪುಸ್ತಕಗಳೂ ಲಭ್ಯವಿಲ್ಲ? ಅವರೇಕೆ ಮುಕ್ತ ಚರ್ಚೆಯನ್ನೇ ಸಹಿಸುವುದಿಲ್ಲ? ಯಾರಾದರೂ ಮುಕ್ತವಾಗಿ ಬರೆಯಲು, ಮಾತನಾಡಲು ಮುಂದಾದರೆ ಫತ್ವಾ ಹೊರಡಿಸಿ ಕೊಲ್ಲಲು ಹೊರಡುವುದೇಕೆ?

ಇಂತಹ ಪ್ರಶ್ನೆಗಳನ್ನು ಮುಸ್ಲಿಮರು ತಮಗೆ ತಾವೇ ಕೇಳಿಕೊಳ್ಳಬೇಕು. ಅದರಲ್ಲೂ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳೆಂಬ ಸೋಗುಹಾಕಿಕೊಂಡು ದಕ್ಷಿಣ ಭಾರತದಲ್ಲಿ ದೇಶದ್ರೋಹಿಗಳ ಜಾಲ ಹರಡುತ್ತಿರುವ ಸಂಘಟನೆಗಳು ಮೊದಲು ಆತ್ಮಾವಲೋಕನ ಮಾಡಿಕೊಳ್ಳ ಬೇಕು.

ಬೆಂಗಳೂರಿನಲ್ಲಿ 2007, ಫೆಬ್ರವರಿಯಲ್ಲಿ ಬೃಹತ್ ಸಭೆ ನಡೆಸಿದ್ದ ಒಂದು ಸಂಘಟನೆ, “ಮಸೀದಿ ಕೆಡವಿದವರಿಗೆ ಅಧಿಕಾರ; ಕೆಲವರಿಗೆ ಗಲ್ಲು" ಎಂದು ಪೋಸ್ಟರ್ ಅಂಟಿಸುವ ಮೂಲಕ ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಬಗ್ಗೆ ತನಗಿರುವ ಅಕ್ಕರೆಯನ್ನು ವ್ಯಕ್ತಪಡಿಸಿತ್ತು! ಇದೇ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮಾಪಿಳ್ಳೆಗಳ ಮತ್ತೊಂದು ಸಂಘಟನೆ ಫೆಬ್ರವರಿ 22ರಂದು ಬೆಂಗಳೂರಿನಲ್ಲಿ ಅಂತಹದ್ದೇ ಸಭೆಯೊಂದನ್ನು ಏರ್ಪಡಿಸಿದೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಅಥವಾ ರಾಜ್ಯದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ನೋಡಿ “ಜನ ಮುನ್ನಡೆ" ಅಥವಾ “ಪೀಪಲ್ಸ್ ಮಾರ್ಚ್" ಎಂಬ ಪೋಸ್ಟರ್‌ಗಳು ಕಾಣುತ್ತವೆ. ಅವುಗಳ ಮೇಲೆ ಶೂದ್ರ, ದಲಿತ ಹಾಗೂ ಅಲ್ಪಸಂಖ್ಯಾತರು ಒಂದಾಗಬೇಕೆಂದು ಕರೆ ನೀಡಲಾಗಿದೆ!

ಆದರೆ ಕೇರಳದ ಮರದ್‌ನಲ್ಲಿ ಬಡ ಹಿಂದೂಗಳ ಮಾರಣಹೋಮ ಮಾಡಿದ್ದ ಮಾಪಿಳ್ಳೆಗಳ ಸಂಘಟನೆಯೇ ಆಗಿರುವ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ"ಕ್ಕೆ ಶೂದ್ರ ಹಾಗೂ ದಲಿತ ಹಿಂದೂಗಳ ಮೇಲೆ ಪ್ರೀತಿ ಬಂದಿದ್ದಾದರೂ ಯಾವಾಗ? ಇವರ ಧೂರ್ತ ಉದ್ದೇಶ ಏನೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಪೋಸ್ಟರ್‌ಗಳಲ್ಲಿ ಚಿತ್ರಿಸಿರುವ ಇವರು, ಯಾವ ಇಸ್ಲಾಮಿಕ್ ರಾಷ್ಟ್ರದಲ್ಲಿ ಜನಪರ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ ಎಂಬು ದನ್ನು ತೋರಿಸಲಿ? ಯಾವ ಇಸ್ಲಾಮಿಕ್ ರಾಷ್ಟ್ರದಲ್ಲಿ “Honor Killings" ಹೆಸರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ ಹೇಳಲಿ? ಯಾವ ಇಸ್ಲಾಮಿಕ್ ರಾಷ್ಟ್ರ ಮಹಿಳೆಯರು ಹಾಗೂ ಇತರ ಧರ್ಮೀಯರಿಗೆ ಸಮಾನ ಹಕ್ಕು ನೀಡಿದೆ? ಇಸ್ಲಾಮಿಕ್ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಹಕ್ಕು, ಸ್ವಾತಂತ್ರ್ಯ ಭಾರತೀಯ ಮುಸ್ಲಿಮರಿಗಿದೆ. ಆದರೂ ಅನ್ನ ನೀಡಿದ ದೇಶಕ್ಕೇ ಬಾಂಬಿಡುವ ಮನಸ್ಥಿತಿಗೆ ಏನನ್ನಬೇಕು ನೀವೇ ಹೇಳಿ?

ಇರ್ಷಾದ್ ಮಂಜಿಯವರ ಪುಸ್ತಕದಲ್ಲಿ ಒಂದು ಜೋಕು ಬರುತ್ತದೆ.ಪ್ಯಾಲೆಸ್ತೀನಿಯರ ನಾಯಕ ಯಾಸೆರ್ ಅರಾಫತ್ ಅವರು ಸತ್ತು ಸ್ವರ್ಗಕ್ಕೆ ಹೋಗುತ್ತಾರೆ. ಆದರೆ ಸ್ವರ್ಗದ ಬಾಗಿಲಲ್ಲಿ ಕಾಫಿರರನ್ನು(ಮುಸ್ಲಿಮೇತರರು) ಕೊಂದು ಹುತಾತ್ಮರಾಗಿ ರುವ ಪ್ಯಾಲೆಸ್ತೀನಿ ಉಗ್ರರ ದೊಡ್ಡ ದಂಡೇ ನೆರೆದಿರುತ್ತದೆ. ಅಂದರೆ ಕಾಫಿರರನ್ನು ಕೊಂದವರಿಗೆ ಸ್ವರ್ಗದಲ್ಲಿ ದೇವರು 70 ಕನ್ಯೆಯರನ್ನು ನೀಡುತ್ತಾನೆ ಎಂಬ ನಂಬಿಕೆ ಮುಸ್ಲಿಮರಲ್ಲಿದೆ. ಹಾಗಾಗಿ ಸತ್ತು ಸ್ವರ್ಗ ಸೇರಿರುವವರು ತಮ್ಮ ಪಾಲಿನ ಕನ್ಯೆಯರನ್ನು ಪಡೆದುಕೊಳ್ಳಲು ಮುಗಿಬಿದ್ದಿರುತ್ತಾರೆ. ಆದರೆ ಸ್ವರ್ಗದ ದ್ವಾರಪಾಲಕರು ಮಾತ್ರ ಅವರನ್ನು ಒಳಗೆ ಬಿಡುತ್ತಿಲ್ಲ.

ಅಂತಹ ಸಂದರ್ಭದಲ್ಲಿಯೇ ಸ್ವರ್ಗಕ್ಕೆ ಆಗಮಿಸಿದ ಅರಾಫತ್ ಅವರನ್ನು ಕಂಡು ಉಗ್ರರು ನಿಟ್ಟುಸಿರು ಬಿಟ್ಟರು! ನಮ್ಮ ನಾಯಕ ಅರಾಫತ್ ಮಧ್ಯಪ್ರವೇಶಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಅಂತ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲಾರಂಭಿಸಿದರು. ಅಷ್ಟರಲ್ಲಿ ಹತ್ತಿರಕ್ಕೆ ಬಂದ ಅರಾಫತ್, “ಏಕೆ ಒಳಕ್ಕೆ ಹೋಗಿಲ್ಲ?" ಎಂದು ಆಶ್ಚ ರ್ಯಚಕಿತರಾಗಿ ಪ್ರಶ್ನಿಸಿದರು.

“ಸ್ವರ್ಗಕ್ಕೆ ಪ್ರವೇಶ ನೀಡಬೇಕಾದವರ ಪಟ್ಟಿಯಲ್ಲಿ ನಮ್ಮ ಹೆಸರೇ ಇಲ್ಲವಂತೆ" ಎಂದ ಒಬ್ಬ ಪ್ಯಾಲೆಸ್ತೀನಿ ಹುತಾತ್ಮ! “ಅವರ ಪಟ್ಟಿಯಲ್ಲಿ 'ಪ್ಯಾಲೆಸ್ತೀನ್" ಎಂಬ ರಾಷ್ಟ್ರದ ಹೆಸರೇ ಇಲ್ಲವಂತೆ" ಅಂತ ಮತ್ತೊಬ್ಬ ಹೇಳಿದ!! ಇದನ್ನು ಕೇಳಿ ಇರಸುಮುರಸುಗೊಂಡ ಅರಾಫತ್ ಕೂಡಲೇ ಸ್ವರ್ಗದ ಕಿಟಕಿಯ ಬಳಿಗೆ ತೆರಳಿ “ನಾನು ಪ್ಯಾಲೆಸ್ತೀನಿ ಜನರ ನಾಯಕ" ಎಂದು ಪರಿಚಯ ಮಾಡಿಕೊಂಡರು. ಆದರೆ “ಯಾರು?" ಎಂದು ಆಶ್ಚರ್ಯದಿಂದ ಕೇಳಿದ ದ್ವಾರಪಾಲಕ! “ಪ್ಯಾಲೆಸ್ತೀನಿ ಜನರ ನಾಯಕ" ಎಂದು ಅರಾಫತ್ ಸಿಟ್ಟಿನಿಂದ ಹೇಳಿದಾಗ ಮತ್ತೆ ಪಟ್ಟಿಯನ್ನು ತೆರೆದು ಕಣ್ಣಾಡಿಸಿದ ದ್ವಾರಪಾಲಕನಿಗೆ ಎಷ್ಟು ಹುಡುಕಿದರೂ ಯಾವ ಪ್ಯಾಲೆಸ್ತೀನಿಯರ ಹೆಸರೂ ಕಾಣುವುದಿಲ್ಲ!

ಮತ್ತಷ್ಟು ಕುಪಿತರಾದ ಅರಾಫತ್, ದೇವರ ಜತೆ ನೇರವಾಗಿ ಮಾತನಾಡಬೇಕು ಎಂದರು. ಕೂಡಲೇ ದೇವರ ಬಳಿಗೆ ಹೋದ ದ್ವಾರಪಾಲಕ “ದೇವರೇ, ಯಾರೋ ಒಬ್ಬ ವ್ಯಕ್ತಿ ಬಾಗಿಲ ಬಳಿ ನಿಂತು ಕೂಗಾಡುತ್ತಿದ್ದಾನೆ. ಆತ ಮತ್ತು ಆತನ ಹಿಂಬಾಲಕರು ಹುತಾತ್ಮರಂತೆ. ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಬೇಕಂತೆ. ಆದರೆ ಪಟ್ಟಿಯಲ್ಲಿ ಅವರ್‍ಯಾರ ಹೆಸರೂ ಇಲ್ಲ" ಎನ್ನುತ್ತಾನೆ. “ಹೌದಾ? ನಿಜವೇ?" ಎಂದು ದೇವರು ಆಶ್ಚರ್ಯಚಕಿತನಾಗಿ ಕೇಳುತ್ತಾನೆ. “ಅದೆಷ್ಟು ಬಾರಿ ಪರಿಶೀಲಿಸಿದೆನೋ ನನಗೇ ಲೆಕ್ಕವಿಲ್ಲ. ಆದರೆ ಅವರ ಹೆಸರಂತೂ ಇಲ್ಲ" ಎನ್ನುತ್ತಾನೆ ದ್ವಾರಪಾಲಕ. ಒಂದು ಕ್ಷಣ ಚಿಂತಿಸಿದ ದೇವರು, “ಈ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಹಿಡಿಯುವವರೆಗೂ ಅವರಿಗೊಂದು ನಿರಾಶ್ರಿತರ ಶಿಬಿರವನ್ನೇಕೆ ರಚಿಸಬಾರದು" ಎನ್ನುತ್ತಾನೆ!!

ಅಂದರೆ ಈ ಪ್ಯಾಲೆಸ್ತೀನಿಯರು ಭೂಲೋಕದಲ್ಲೂ ನಿರಾಶ್ರಿತರೇ, ಕಾಫಿರರನ್ನು ಕೊಂದು ಸ್ವರ್ಗಕ್ಕೆ ಹೋದರೆ ಅಲ್ಲೂ ನಿರಾಶ್ರಿತರೇ!ಆದರೂ ಎಪ್ಪತ್ತು ಕನ್ಯೆಯರ ಜತೆ ಮಜಾ ಮಾಡಬಹುದು ಎಂಬ ಆಸೆಯಿಂದ ಇತರರನ್ನು ಕೊಂದು ತಾವೂ ಸಾಯುವುದನ್ನು ಮಾತ್ರ ಬಿಟ್ಟಿಲ್ಲ. ಇದು ಬರೀ ಜೋಕಲ್ಲ. 2001, ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ದಾಳಿಯ ರೂವಾರಿ ಮೊಹಮದ್ ಅಟ್ಟಾ ತನ್ನ ಆತ್ಮಹತ್ಯಾ ತಂಡದ ಪರವಾಗಿ ಬಿಟ್ಟುಹೋಗಿರುವ ಪತ್ರದಲ್ಲಿ “ಈ ಜಗತ್ತಿನ ಸೃಷ್ಟಿಕರ್ತನಾದ ದೇವರ ಮಾತೊಂದೇ ನಮಗೆ ಸಾಕು. ಸ್ವರ್ಗದ ಕನ್ಯೆಯರು ನಮಗಾಗಿ ಕಾದು ಕುಳಿತಿದ್ದಾರೆ. ಬನ್ನಿ ಎಂದು ಕೈಬೀಸಿ ಕರೆಯುತ್ತಿದ್ದಾರೆ" ಎಂದು ಬರೆದಿದ್ದಾನೆ!

ಅನ್ಯಧರ್ಮಿಯರನ್ನು ಕೊಲ್ಲುವ ಉಗ್ರರಿಗೆ ಸ್ವರ್ಗದಲ್ಲಿ ಎಪ್ಪತ್ತು ಕನ್ಯೆಯರೇನೋ ದೊರೆಯಬಹುದು. ಆದರೆ ಆ ಕನ್ಯೆಯರ ಜತೆ ಮಜಾ ಮಾಡುವ ಸಲುವಾಗಿ ಇತರರ ಜೀವವನ್ನು ಬಲಿತೆಗೆದುಕೊಳ್ಳುವುದು ಎಷ್ಟು ಸರಿ?

(ಸ್ನೇಹಸೇತು : ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X