• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಷ್ಟಕ್ಕೂ 'ಭಾರತ ರತ್ನ' ಪಡೆಯುವ ಅರ್ಹತೆ ಇವರಿಗಿಲ್ಲವಾ?

By Staff
|

Is Vajpayee not eligible to get hightest civilian award?ಭಾರತರತ್ನ ಗೌರವಕ್ಕೆ ಅರ್ಹರಾದ ವ್ಯಕ್ತಿಗಳು ಈ ದೇಶದಲ್ಲಿ ಬೇಕಾದಷ್ಟು ಮಂದಿ ಇದ್ದಾರು. ಇವರ ಸಂಖ್ಯೆ ಬೆಳೆಯುತ್ತಿರಲಿ ಎಂಬ ಆಶಯ ನಮ್ಮದು. ಆದರೆ, ಈ ಬಾರಿ ಅಟಲ್ ಬಿಹಾರಿ ವಾಜಪೇಯಿ ಯಾಕಾಗಬಾರದು? ಎಂಬ ವಾದವನ್ನು ನಮ್ಮ ಅಂಕಣಕಾರರು ಮಂಡಿಸಿದ್ದಾರೆ. ಪ್ರಿಯರಂಜನ್ ದಾಸ್ ಮುನ್ಷಿ ಅವರಿಗೆ ಕನ್ನಡ ಬರುವುದಿಲ್ಲವಾದ್ದರಿಂದ ಇಂಥ ವಾದಗಳು ಅವರ ಕಣ್ಣಿಗೆ ಬೀಳುವುದಿಲ್ಲ. ಆದರೇನು? ನಮ್ಮ ಕನ್ನಡ, ಕರ್ನಾಟಕ ಪ್ರಜೆಗಳು ಏನು ಹೇಳುತ್ತಾರೆ ಎನ್ನುವುದು ಮುಖ್ಯ?

ಜೀವನ ಅನ್ನೋದು ನಿಜಕ್ಕೂ ಸುಂದರ. ಅದರಲ್ಲಿ ವಿವರಿಸಲಾಗದ ಅದೆಷ್ಟೋ ವಿಚಾರಗಳಿವೆ. ಒಂದು ವೇಳೆ ಜೀವನದಲ್ಲಿ ಸಂಭವಿಸುವ ಘಟನೆಗಳಿಗೆಲ್ಲ ಕಾರಣ, ವಿವರಣೆ ಕೊಡಬಹುದೇ ಆಗಿದ್ದಿದ್ದರೆ ಜೀವನವೇ ಒಂದು ದುರಂತವಾಗಿರುತ್ತಿತ್ತು. ಒಂದು ಕ್ಷಣ ಯೋಚನೆ ಮಾಡಿ; ಎಲ್ಲದಕ್ಕೂ ವಿವರಣೆ ಇದ್ದಿದ್ದರೆ ಜೀವನದಲ್ಲಿ ರಹಸ್ಯಗಳೇ ಇರುತ್ತಿರಲಿಲ್ಲ, ಕವಿತೆಗಳೂ ಇರುತ್ತಿರಲಿಲ್ಲ, ಗುಟ್ಟೂ ಇರುತ್ತಿರಲಿಲ್ಲ. ಆಗ ಎಲ್ಲವೂ ನಿಸ್ಸಾರವಾಗಿರುತ್ತಿದ್ದವು. ಜೀವನ ಯಾವತ್ತೂ ನಿಸ್ಸಾರವಲ್ಲ. ಜೀವನಕ್ಕೆ ನೂರಾರು ಆಯಾಮಗಳಿವೆ, ಅದು ಹಲವು ಮಜಲುಗಳನ್ನು ಹೊಂದಿದೆ. ಅದನ್ನು ನೀವು ಅನ್ವೇಷಣೆ ಮಾಡುತ್ತಾ ಹೋಗಬಹುದು. ಆದರೂ ಅದು ಹೀಗೇ ಎಂದು ವಿವರಣೆ ಕೊಡಲು ಸಾಧ್ಯವಿಲ್ಲ. ಅದನ್ನು ನೀವು ಅನುಭವಿಸಬಹುದು. ಆದರೆ ಆ ಅನುಭವವನ್ನು ಶಬ್ದಗಳಿಗೆ ಇಳಿಸುವುದಕ್ಕಾಗುವುದಿಲ್ಲ.

ಕೆಲವು ವಿಷಯಗಳಿಗೆ ಕಾರಣವೂ ಇರುವುದಿಲ್ಲ, ವಿವರಣೆಯನ್ನೂ ಕೊಡುವುದಕ್ಕಾಗುವುದಿಲ್ಲ. ನೀವು ಯಾರನ್ನೋ ಪ್ರೀತಿಸಬಹುದು. ನಿಮ್ಮಂತೆ ಕೋಟ್ಯಂತರ ಜನರೂ ಕೂಡ ಪ್ರೀತಿಯಲ್ಲಿ ಮಿಂದಿದ್ದಾರೆ. ಆದರೆ ಪ್ರೀತಿ ಮಾತ್ರ ರಹಸ್ಯ. ಪ್ರೀತಿ ಅಂದರೆ ಏನು ಎಂದು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ, ಪ್ರೀತಿಯನ್ನು ಶಬ್ದಕ್ಕಿಳಿಸಲು ಹೊರಟರೆ ಅದು ನಿಮ್ಮ ಕೈಯಿಂದ ಜಾರಿ ಹೋಗುತ್ತದೆ. ತಲೆಮಾರುಗಳ ನಂತರ ತಲೆಮಾರುಗಳು ಬಂದರೂ ಅದು ಪವಾಡವಾಗಿಯೇ ಉಳಿದಿದೆ. ಪ್ರೀತಿಸುತ್ತಿರುವವರೆಲ್ಲರಿಗೂ ಪ್ರೀತಿ ಅಂದರೆ ಏನು ಎಂಬುದು ಗೊತ್ತಿರುತ್ತದೆ. ತುಡಿತ, ಮಿಡಿತಗಳಿಂದ ಕೂಡಿರುವ ಪ್ರೀತಿಯನ್ನು ಅನುಭವಿಸುತ್ತಲೂ ಇರುತ್ತಾರೆ. ಆದರೂ ಪ್ರೀತಿ ಅಂದರೆ ಏನು ಎಂದು ವಿವರಿಸಲು ಯಾರಿಂದಲೂ ಆಗದು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ ಯೋಚಿಸಿದಾಗಲೆಲ್ಲ ಓಶೋನ ಈ ಮಾತುಗಳು ನೆನಪಾಗುತ್ತವೆ. ಅಷ್ಟಕ್ಕೂ, ರಾಜಕಾರಣಿಗಳೆಂದರೆ ಮೂಗು ಮುರಿಯುವ ಮನಸ್ಸು ಈ ವ್ಯಕ್ತಿಗೇಕೆ ಆಯಾಚಿತವಾಗಿ ಹೃದಯದ ಕದ ತೆರೆದು ಒಳಗೆ ಕರೆದೊಳ್ಳುತ್ತದೆ ಎಂಬ ಪ್ರಶ್ನೆಯನ್ನು ಎಷ್ಟೋ ಬಾರಿ ನಿಮಗೆ ನೀವೂ ಕೇಳಿಕೊಂಡಿರಬಹುದು. ಆದರೆ ಉತ್ತರವೇ ತೋಚುವುದಿಲ್ಲ ಅಲ್ಲವೆ?

ಎತ್ತರದ ಬೆಟ್ಟಗಳ ಮೇಲೆ

ಮರಗಳೆಂದೂ ಬೆಳೆಯುವುದಿಲ್ಲ

ಗಿಡಗಳೆಂದೂ ಮೊಳೆಯುವುದಿಲ್ಲ

ಹುಲ್ಲು ಕೂಡ ಹುಟ್ಟುವುದಿಲ್ಲ

ಕೇವಲ ಹಿಮ ಮಾತ್ರ ಆವರಿಸಿರುವುದು

ಶವ ಬಟ್ಟೆಯ ತರಹ ಬಿಳುಪಾಗಿ

ಸಾವಿನ ಹಾಗೆ ತಣ್ಣಗೆ

ನನ್ನ ದೇವರೇ,

ನನಗೆ ಇಷ್ಟೊಂದು ಎತ್ತರದ ಸ್ಥಾನವನ್ನೆಂದೂ ನೀಡಬೇಡ

ಬೇರೆಯವರನ್ನು ಆಲಿಂಗಿಸಲಾರದಷ್ಟು

ತಡೆಯನ್ನು ಎಂದಿಗೂ ಒಡ್ಡಬೇಡ.

1992, ಏಪ್ರಿಲಡ್ 24ರಂದು 'ಪದ್ಮವಿಭೂಷಣ" ಪ್ರಶಸ್ತಿ ಪಡೆಯುವ ಮೊದಲು ಇಂತಹ ಸ್ವರಚಿತ ಕವನವನ್ನು ವಾಚನ ಮಾಡಿದ್ದರು ವಾಜಪೇಯಿ! ಅವರ ವ್ಯಕ್ತಿತ್ವವೇ ಅಂಥದ್ದು. ಕೆಲವೊಮ್ಮೆ ರಾಜಕೀಯ, ಅಧಿಕಾರ ಎಲ್ಲದರ ಬಗ್ಗೆಯೂ ವೈರಾಗ್ಯ ತಾಳುತ್ತಾರೆ. ಆದರೆ ಅದೇ ವ್ಯಕ್ತಿ ಇಡೀ ದೇಶವನ್ನೇ ಎದುರುಹಾಕಿಕೊಂಡು ಶತ್ರುವಿಗೆ ಸ್ನೇಹಹಸ್ತವನ್ನೂ ಚಾಚುತ್ತಾರೆ! 1998ರಲ್ಲಿ ಲಾಹರ್ ಬಸ್ಸಿನಲ್ಲಿ ತೆರಳಿದಾಗ ದೇಶಕ್ಕೆ ದೇಶವೇ ಅವರ ಬೆಂಗಾವಲಿಗೆ ನಿಂತಿತ್ತು. ಆದರೆ ಲಾಹೋರ್ ಯಾತ್ರೆಯ ಬೆನ್ನಲ್ಲೇ ಕಾರ್ಗಿಲ್‌ನಲ್ಲಿ ಚೂರಿ ಹಾಕಿದರು ಪಾಕಿಸ್ತಾನದ ಆಗಿನ ಸೇನಾ ಜನರಲ್ ಮುಷರ್ರಫ್. ಇತ್ತ 'ಅಮಾಯಕ ಶಾಂತಿದೂತ" ಎಂದು ಎಲ್ಲರೂ ವಾಜಪೇಯಿಯವರನ್ನು ಜರಿಯಲಾರಂಭಿಸಿದರು.

ಹಾಗಂತ ಅಟಲ್ ಸುಮ್ಮನಾಗಲಿಲ್ಲ. ಕಾರ್ಗಿಲ್ ಯುದ್ಧಕ್ಕೆ ಕಾರಣರಾಗಿದ್ದ ಮುಷರ್ರಫ್ ಅವರನ್ನೇ ಆಗ್ರಾಕ್ಕೆ ಆಹ್ವಾನಿಸಿದರು. ಆಗಮಾತ್ರ ಇಡೀ ದೇಶವೇ ವಾಜಪೇಯಿಯವರಿಗೆ ವಿರುದ್ಧವಾಗಿತ್ತು. ಪಕ್ಷ ಹಾಗೂ ಸಂಘಪರಿವಾರದ ವೈಷಮ್ಯವನ್ನೂ ಕಟ್ಟಿಕೊಳ್ಳಬೇಕಾಯಿತು. ಅದೇ ಸಂದರ್ಭದಲ್ಲಿ ನಡೆಯಬೇಕಾಗಿದ್ದ ರಾಜಸ್ಥಾನ, ದಿಲ್ಲಿ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಎದುರಿಸಬೇಕಾದ ಅಪಾಯವೂ ಇತ್ತು. “ಇನ್ನು ಮುಂದೆ ಏನಾಗುತ್ತದೋ ಅದೇ ನಿರ್ಣಾಯಕ. ಅದು ನನಗೂ ಕೂಡ ನಿರ್ಣಾಯಕ ಹೆಜ್ಜೆ. ಅಪಾಯವನ್ನು ಎದುರುಹಾಕಿಕೊಳ್ಳುತ್ತಿದ್ದೇನೆ ಎಂಬುದು ನನಗೂ ಗೊತ್ತು. ಆದರೆ ನನಗೊಂದು ಆಶಾಕಿರಣ ಗೋಚರಿಸುತ್ತಿದೆ"ಎಂದು ಸಂಸತ್ತಿನಲ್ಲಿ ಭಾವುಕರಾಗಿ ಮಾತನಾಡಿದ ಅಟಲ್ ಆಗ್ರಾ ಶೃಂಗ ನಡೆಸಲು ಮುಂದಾದರು. ಇದು ಅವರ ಸ್ಥಾನ ಮಾನ, ಘನತೆ ಮತ್ತು ಆತ್ಮಸ್ಥೈರ್ಯವನ್ನು ತೋರಿಸುತ್ತದೆ. ಆದರೂ ಆಗ್ರಾ ಶೃಂಗ ವಿಫಲಗೊಂಡು, ಮತ್ತೆ ಕೈಸುಟ್ಟು ಕೊಂಡರು ವಾಜಪೇಯಿ. ಹಾಗಂತ ಕೈಕಟ್ಟಿಕುಳಿತುಕೊಳ್ಳಲಿಲ್ಲ.

“ಕೆಲವರು ನನ್ನನ್ನು ಕವಿ ಎನ್ನುತ್ತಾರೆ. ಆದರೆ ಕೆಲವೊಮ್ಮೆ ಇತರರು ಮಾಡಲಾಗದ್ದನ್ನು ಕವಿಯೊಬ್ಬ ಮಾಡಬಲ್ಲ" ಎಂದ ವಾಜಪೇಯಿ "CBM''(Confidence building measures)ಗಳ ಬಗ್ಗೆ ಮಾತನಾಡಲಾರಂಭಿಸಿದರು! ಅವರೊಬ್ಬ "Incurable Optimist'' ಅಂತ ಜನ ಮಾತನಾಡಿಕೊಳ್ಳಲಾರಂಭಿಸಿದರು. ಆದರೇನಂತೆ, ವಾಜಪೇಯಿಯವರ ಪ್ರಯತ್ನಗಳು ಮೇಲ್ನೋಟಕ್ಕೆ ವೈಫಲ್ಯದಂತೆ ಕಂಡರೂ ಆಂತರಿಕವಾಗಿ ಸಾಕಷ್ಟು ಬದಲಾವಣೆಗಳನ್ನು ತಂದಿವೆ. ಮೊದಲೆಲ್ಲ ಭಾರತ-ಪಾಕಿಸ್ತಾನಗಳ ನಡುವಿನ ಕ್ರಿಕೆಟ್ ಪಂದ್ಯಗಳೆಂದರೆ ಯುದ್ಧವೆಂದೇ ಭಾವಿಸುವಂಥ ಪರಿಸ್ಥಿತಿ ಇತ್ತು. ದೇಶದ ಗಡಿಯಲ್ಲಿ ನಡೆಯುವ ಘರ್ಷಣೆ, ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ತಿಕ್ಕಾಟಗಳಿಗೆ ಕ್ರೀಡಾ ಸಂಬಂಧ ಬಲಿಯಾಗುತ್ತಿತ್ತು. ಕ್ರಿಕೆಟ್ ಸರಣಿಗಳೇ ರದ್ದಾಗುತ್ತಿದ್ದವು.

ಆದರೆ ವಾಜಪೇಯಿಯವರು ಅಧಿಕಾರಕ್ಕೆ ಬಂದ ನಂತರ ಉಭಯ ರಾಷ್ಟ್ರಗಳ ನಡುವೆ ಹಾಕಿ ಸರಣಿ ಆರಂಭವಾಯಿತು. 2003ರಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ಹೊರಟು ನಿಂತಿದ್ದ ನಮ್ಮ ಕ್ರಿಕೆಟ್ ತಂಡಕ್ಕೆ “ಬರೀ ಪಂದ್ಯಗಳನ್ನಷ್ಟೇ ಅಲ್ಲ, ಹೃದಯವನ್ನೂ ಗೆದ್ದು ಬನ್ನಿ" ಅಂತ ಹೇಳಿದ ವಾಜಪೇಯಿಯವರು ರಾಜಕೀಯ ಸಂಬಂಧದ ಜತೆಗೆ ಕ್ರೀಡಾ ಸಂಬಂಧವೂ ಸುಧಾರಣೆಯಾಗಲು ಕಾರಣರಾದರು. ಇವತ್ತು ಭಾರತ-ಪಾಕಿಸ್ತಾನಗಳ ನಡುವಿನ ಪಂದ್ಯವೆಂದರೆ ಮೊದಲಿನ ರೋಷ ಕಾಣುವುದಿಲ್ಲ. ಅಲ್ಲಿನ ಮಾಜಿ ಕ್ರಿಕೆಟಿಗರಂತೂ ಭಾರತದಲ್ಲೇ ತಳವೂರಲಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಅಟಲ್ ಅವರೇ ಕಾರಣ. ಅಂದಮಾತ್ರಕ್ಕೆ ಅಟಲ್ ಸೌಮ್ಯವಾದಿ ಎಂದರ್ಥವಲ್ಲ. ಸಂಸತ್ ಮೇಲಿನ ದಾಳಿಯ ನಂತರ “ಒಂದು ವೇಳೆ ಭಾರತವೇನಾದರೂ ನಮ್ಮ ಮೇಲೆ ಆಕ್ರಮಣ ಮಾಡಿದರೆ ಸುಮ್ಮನೆ ಕುಳಿತುಕೊಳ್ಳಲು ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ" ಎಂದು ಮುಷರ್ರಫ್ ಹೇಳಿದಾಗ “ನಮ್ಮ ಪಂಜಾಬ್ ನಲ್ಲಿ ಗಂಡಸರೂ ಬಳೆ ತೊಡುತ್ತಾರೆ. ಮಿಗಿಲಾಗಿ ನೀವು ಸೋತಿದ್ದು ಬಳೆ ತೊಟ್ಟ ಹೆಣ್ಣಿನ(ಇಂದಿರಾಗಾಂಧೀ) ಕೈಯಲ್ಲೇ ಎಂದುದನ್ನು ಮರೆಯಬೇಡಿ" ಎಂದು ವಾಜಪೇಯಿ ಅಷ್ಟೇ ತೀಕ್ಷ್ಣವಾಗಿ ಮಾರುತ್ತರವನ್ನೂ ನೀಡಿದ್ದರು.

ಅಷ್ಟೇ ಅಲ್ಲ, ಅವರು ಪ್ರತಿಪಕ್ಷದಲ್ಲಿದ್ದಾಗಲೂ ರಾಷ್ಟ್ರೀಯ ಹಿತಾಸಕ್ತಿಯ ವಿಚಾರ ಎದುರಾದಾಗ ಪಕ್ಷಬೇಧವನ್ನು ಮೀರಿ ನಿಂತಿದ್ದೂ ಇದೇ. 1971ರಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾದೇಶವನ್ನು ವಿಮೋಚನೆ ಮಾಡಿ ದಾಗ ಆಗಿನ ಪ್ರಧಾನಿ ಇಂದಿರಾಗಾಂಧಿಯವರನ್ನು 'ದುರ್ಗಾ" ಎಂದು ವರ್ಣಿಸಿದ್ದ ವಾಜಪೇಯಿ, 1974ರಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಅಣುಪರೀಕ್ಷೆ ನಡೆಸಿದಾಗಲೂ ಸರಕಾರವನ್ನು ಬೆಂಬಲಿಸಿದ್ದರು. ಅಷ್ಟೇಕೆ, ಪಿ.ವಿ. ನರಸಿಂಹರಾವ್ ಸರಕಾರ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರಲು ಹೊರಟಾಗಲೂ ಬೆಂಬಲ ವ್ಯಕ್ತಪಡಿಸಿದ್ದರು. ಬಹುಶಃ ಅದಕ್ಕೇ ವಾಜಪೇಯಿ ಯವರನ್ನು Right man in the wrong party ಅಂತ ಕರೆಯುತ್ತಿದ್ದುದು.

ಇಂತಹ ವಾಜಪೇಯಿಯವರಿಗೆ “ಭಾರತ ರತ್ನ" ನೀಡಿ ಗೌರವಿಸಬೇಕೆಂದು ಅವರ ದೀರ್ಘಕಾಲದ ಸಹಯೋಗಿ ಲಾಲ್ ಕೃಷ್ಣ ಆಡ್ವಾಣಿಯವರು ಜನವರಿ 5ರಂದು ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆದರೆ “ವಾಜಪೇಯಿಯವರಿಗೆ ಪಕ್ಷದಲ್ಲೇ ಗೌರವ ನೀಡಿದ್ದರೆ ಚೆನ್ನಾಗಿತ್ತು" ಎಂದು ಕೇಂದ್ರ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಕುಟುಕಿದ್ದಾರೆ. ಹಾಗಾದರೆ ವಾಜಪೇಯಿಯವರಿಗೆ ಭಾರತ ರತ್ನ ಪಡೆಯುವ ಅರ್ಹತೆಯೇ ಇಲ್ಲವೆ? ತುರ್ತುಪರಿಸ್ಥಿತಿ ಹೇರಿದ ಇಂದಿರಾ ಗಾಂಧೀ, ಬೊಫೋರ್ಸ್ ಖ್ಯಾತಿಯ ರಾಜೀವ್ ಗಾಂಧೀ, ಎಂ.ಜಿ. ರಾಮಚಂದ್ರನ್ ಅವರಂತಹ ವ್ಯಕ್ತಿಗಳಿಗೇ 'ಭಾರತ ರತ್ನ"ವನ್ನು ಕೊಡಬಹುದಾಗಿದ್ದರೆ ವಾಜಪೇಯಿ ಯವರಿಗೇಕೆ ನೀಡಬಾರದು? ಒಂದು ಕಲೆಯನ್ನು ಉದ್ಧಾರ ಮಾಡಿದ್ದಾರೆಂಬ ಕಾರಣಕ್ಕೆ ಪಂಡಿತ್ ರವಿಶಂಕರ್, ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ ಕೊಡಬಹುದಾದರೆ ಇಡೀ ದೇಶವನ್ನೇ ಪ್ರಗತಿ ಪಥದತ್ತ ಕೊಂಡೊಯ್ದ ವಾಜಪೇಯಿಯವರ ಸಾಧನೆಯೇನು ಕಡಿಮೆಯೇ?

1998ರಲ್ಲಿ ಮಾರ್ಚ್ 19ರಂದು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ವಾಜಪೇಯಿಯವರು ಕೇವಲ ಒಂದೂವರೆ ತಿಂಗಳಲ್ಲಿ ಅಣು ಪರೀಕ್ಷೆ ನಡೆಸಿದ ಗಟ್ಟಿಗ. ಈ ಘಟನೆಯ ನಂತರ ಅಮೆರಿಕ ಸೇರಿದಂತೆ ಇಡೀ ಜಗತ್ತೇ ನಮ್ಮ ವಿರುದ್ಧವಾದಾಗಲೂ ಎದೆಗುಂದಲಿಲ್ಲ. ಭಾರತವನ್ನು ಹಾವಾಡಿಗರ, ಎತ್ತಿನ ಬಂಡಿಗಳ ನಾಡೆಂದೇ ಕಾಣುತ್ತಿದ್ದ ವಿದೇಶಿಯರಿಗೆ ನಮ್ಮ ಶಕ್ತಿಯ ಅರಿವಾಗಿದ್ದು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದು ಅಣುಪರೀಕ್ಷೆಯ ನಂತರವೇ. 1974 ರಲ್ಲಿಯೇ ಭಾರತ ಅಣು ಪರೀಕ್ಷೆ ನಡೆಸಿದ್ದರೂ ಭಾರತದ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದು 1998ರ ಪರೀಕ್ಷೆಯ ನಂತರ ಎಂಬುದನ್ನು ಮರೆಯಬೇಡಿ. ಐವತ್ತು ವರ್ಷಗಳ ಇತಿಹಾಸವಿದ್ದ ಭಾರತ-ಪಾಕಿಸ್ತಾನ ನಡುವಿನ ವೈಷಮ್ಯಕ್ಕೆ ತೆರೆ ಎಳೆದು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ತಿಳಿಯಾಗಿಸಿದ್ದು ವಾಜಪೇಯಿಯವರೇ ಅಲ್ಲವೆ?

ಅಷ್ಟೇಕೆ, ಸದಾ ಪಾಕಿಸ್ತಾನಪರ ವಕಾಲತ್ತು ವಹಿಸುತ್ತಿದ್ದ ಅಮೆರಿಕ ಭಾರತದ ಪರ ವಾಲುವಂತೆ ಮಾಡಿದ್ದೂ ಅಟಲ್ ಸರಕಾರವಲ್ಲವೆ? ಅದುವರೆಗೂ ಅನಿವಾಸಿ ಭಾರತೀಯವರನ್ನು ಸಂಭವನೀಯ ಬಂಡವಾಳ ಹೂಡಿಕೆದಾರರೆಂಬಂತೆ ಕಾಣುತ್ತಿದ್ದ ನಮ್ಮ ಧೋರಣೆಯನ್ನು ಬದಿಗೆ ತಳ್ಳಿ, ಅನಿವಾಸಿ ಭಾರತೀಯರು ತಾಯ್ನಾಡಿನ ಜತೆ ಮತ್ತೆ ಭಾವನಾತ್ಮಕ ಸಂಬಂಧವನ್ನು ಹೊಂದುವಂತೆ ಮಾಡಿದ್ದು ವಾಜಪೇಯಿಯವರಲ್ಲದೆ ಮತ್ತಾರು? ಜನವರಿ 9 ಅನ್ನು 'ಪ್ರವಾಸಿ ಭಾರತೀಯ ದಿವಸ್" ಎಂದು ಘೋಷಿಸಿ ವಿದೇಶಗಳಲ್ಲಿ ಸಾಧನೆಗೈದ ಭಾರತೀಯ ಮೂಲದವರಿಗೆ ಸನ್ಮಾನ ಮಾಡಲು ಆರಂಭಿಸಿದ್ದಾರು? ಅನಿವಾಸಿ ಭಾರತೀಯರಿಗೆ ದ್ವಿಪೌರತ್ವ ನೀಡುವ ಕನಸು ಕಂಡಿದ್ದು ಹಾಗೂ ಅದನ್ನು ಸಾಕಾರಗೊಳಿಸಿದ್ದು ಯಾರು? ಮಾಹಿತಿ ತಂತ್ರಜ್ಞಾನದ ಮಹತ್ವವನ್ನು ಗುರುತಿಸಿ, ಅದಕ್ಕೊಂದು ಪ್ರತ್ಯೇಕ ಖಾತೆಯನ್ನೇ ತೆರೆದು ಪ್ರೊತ್ಸಾಹ ನೀಡಿದ್ದು ಸಾಮಾನ್ಯ ಸಾಧನೆಯೇ? ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೂ ಕಾಯಂ ಸ್ಥಾನ ನೀಡಬೇಕೆಂದು ಬಲವಾಗಿ ಪ್ರತಿಪಾದಿಸಿದ್ದು, ವಿಶ್ವವ್ಯಾಪಾರ ಸಂಸ್ಥೆಯಲ್ಲಿ ತೆಗೆದುಕೊಳ್ಳಲಾಗುತ್ತಿದ್ದ ಏಕಪಕ್ಷೀಯ ನಿರ್ಧಾರಗಳಿಗೆ ತೆರೆ ಎಳೆಯುವ ಸಲುವಾಗಿ 'ಜಿ-24" ಎಂಬ ಸಂಘಟನೆಯನ್ನು ರಚಿಸಿ ಭಾರತ ಹಾಗೂ ಅಭಿವೃದ್ಧಿಶೀಲ ದೇಶಗಳ ಹಿತಾಸಕ್ತಿಯನ್ನು ಕಾಪಾಡಿದ್ದು ವಾಜಪೇಯಿ ಸರಕಾರವೇ ಅಲ್ಲವೆ?

ಮೊನ್ನೆ ತಾನೇ ಲಕ್ಷ ರೂ.ಗೆ ಕಾರು ನೀಡುವುದಾಗಿ ಟಾಟಾ ಕಂಪನಿ ವಾಗ್ದಾನ ಮಾಡಿದೆ. ಲಕ್ಷ ಕೊಟ್ಟರೆ ಸಾಮಾನ್ಯನಿಗೂ ಕಾರೇನೋ ದೊರೆಯಬಹುದು. ಆದರೆ ಕಾರು ಚಲಿಸಲು ಬೇಕಾದ ರಸ್ತೆಗಳ ಸ್ಥಿತಿ ಹೇಗಿದೆ ನೋಡಿ? ಅದೇ ವಾಜಪೇಯಿಯವರು ಅಧಿಕಾರದಲ್ಲಿದ್ದಾಗ ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಹೇಗಿದ್ದವು? ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀ. ಉದ್ದದ 'ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಸಾಮಾನ್ಯವೇ? ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, ಸರ್ವ ಶಿಕ್ಷಾ ಅಭಿಯಾನ ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ.

ಹಾಗಾಗಿಯೇ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ಅವರು ರಾಜಕೀಯ ಹಿನ್ನಡೆ ಎದುರಿಸಿದರೂ ದೇಶವಾಸಿಗಳ ಕಣ್ಣೆದುರು ಎಂದೂ ಚಿಕ್ಕವರಾಗಲಿಲ್ಲ. ಇಂದಿಗೂ ಬಿಜೆಪಿಯನ್ನು ಒಪ್ಪದವರೂ ಅಟಲ್ ಅವರನ್ನು ಸ್ವೀಕರಿಸುತ್ತಾರೆ. ಅಷ್ಟೇಕೆ, 2004ರಲ್ಲಿ ವಾಜಪೇಯಿ ಸರಕಾರ ಸೋತಾಗ ನಮಗೂ ಬೇಸರವಾಗಿತ್ತು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಖುರ್ಷಿದ್ ಕಸೂರಿ ಹೇಳುತ್ತಾರೆಂದರೆ ವಾಜಪೇಯಿಯವರ ವ್ಯಕ್ತಿತ್ವ ಎಂಥದ್ದಿರಬಹುದು? ಹಾಗೆ ಸೋತ ನಂತರವೂ "Dear countrymen, we have given up office but not our responsibility to serve the nation. We have lost an election, but not our determination" -ಅಂತ ಹೇಳಿದ್ದ ವಾಜಪೇಯಿಯವರಿಗೆ 'ಭಾರತ ರತ್ನ" ನೀಡಿದರೆ ಹೆಚ್ಚಾಗುವುದು ವಾಜಪೇಯಿಯವರ ಘನತೆಯಲ್ಲ, ಪ್ರಶಸ್ತಿಯ ಗೌರವ. ಪ್ರಿಯರಂಜನ್ ದಾಸ್ ಮುನ್ಷಿಯವರಂತಹ ವ್ಯಕ್ತಿಗಳಿಗೆ ಇದೆಲ್ಲ ಅರ್ಥವಾಗೊಲ್ಲ ಬಿಡಿ.

(ಸ್ನೇಹ ಸೇತು :ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more