ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪಟ 'ಮಣ್ಣಿನ ಮಗ' ರಾಫೆಲ್ ನಡಾಲ್

By Staff
|
Google Oneindia Kannada News

ಟೆನಿಸ್ ಅಂಗಳದಲ್ಲಿ ವಿಶಿಷ್ಟ ಪ್ರದರ್ಶನ ನೀಡಿ ದಾಖಲೆಗಳನ್ನು ಬರೆದ ಅನೇಕ ಆಟಗಾರರಿದ್ದಾರೆ. ಆದರೆ, ಸ್ಪೇನಿನ ಮಣ್ಣಿನ ಮಗ ರಾಫೆಲ್ ನಡಾಲ್ ಅಂತಹ ಇನ್ನೊಬ್ಬ ಪ್ರಚಂಡ ಕ್ರೀಡಾಳುವನ್ನು ಟೆನಿಸ್ ಪ್ರಪಂಚ ಕಂಡೇಯಿಲ್ಲ. ನಿನ್ನೆ ಭಾನುವಾರ ಆತ ಫ್ರೆಂಚ್ ಓಪನ್ ಅಂತಿಮ ಹಣಾಹಣಿಯಲ್ಲಿ ಮತ್ತೊಂದು ವಿಕ್ರಮ ಸ್ಥಾಪಿಸಿದ್ದಾನೆ. ಗೆಲವು ಮುಖ್ಯನೆ. ನಮಗೆ ಫೈನಲ್ ಪಂದ್ಯದ ಫಲಿತಾಂಶಕ್ಕಿಂತಲೂ ಟೆನಿಸ್ ಕರ್ಮಚಾರಿ ನಡಾಲ್ ಮಖ್ಯನಾಗುತ್ತಾನೆ. ಯಾಕೆ ?

*ಪ್ರತಾಪ್ ಸಿಂಹ

French Open champion Rafael Nadal of Spainಮುಂಗಾರು ಮಳೆಗಿಂತ ಮೊದಲು ಮಾರ್ಚ್, ಏಪ್ರಿಲ್‌ನಲ್ಲಿ ಧೋ ಎಂದು ಸುರಿವ ಮಳೆಯ ನೀರು ಹಳ್ಳಿಗಳ ರಸ್ತೆಯ ಮೇಲೆ ಹರಿದು ಹೊಂಡ ಸೇರಿ ಸಂಗ್ರಹವಾದಾಗ ಹೇಗೆ ಕಾಣುತ್ತದೋ ಹಾಗಿರುತ್ತದೆ ಫ್ರೆಂಚ್ ಓಪನ್ ಟೆನಿಸ್! ಆಸ್ಟ್ರೇಲಿಯನ್ ಹಾಗೂ ಅಮೆರಿಕನ್ ಓಪನ್‌ಗಳ ಹಾರ್ಡ್‌ಕೋರ್ಟ್, ವಿಂಬಲ್ಡನ್‌ನ ಗ್ರಾಸ್ ಕೋರ್ಟ್‌ಗಳಿಗೆ ಹೋಲಿಸಿದರೆ ಕೆಂಭೂತದಂತೆ ಕಾಣುವ ಫ್ರೆಂಚ್ ಓಪನ್ ಟೆನಿಸ್ ಯಾರಿಗೆ ತಾನೇ ಇಷ್ಟವಾದೀತು? ಅಷ್ಟೇ ಅಲ್ಲ, 'ಕ್ಲೇ"(ಕೆಮ್ಮಣ್ಣು) ಕೋರ್ಟ್‌ನಲ್ಲಿ ನಡೆಯುವ ಆಟ ನೋಡಲೂ ನೀರಸವೆನಿಸಿ ಬಿಡುತ್ತದೆ. ಟೆನಿಸ್‌ನಲ್ಲಿ ಸಹಜವಾಗಿ ಕಾಣಬಹುದಾದ ಮೆರುಗು ಇಲ್ಲಿ ಮಾತ್ರ ಕಾಣುವುದಿಲ್ಲ. ಸರ್ವ್ ಮತ್ತು ವಾಲಿಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಏಸ್ ಹಾಕಲು ಹೆಚ್ಚುಕಡಿಮೆ ಸಾಧ್ಯವೇ ಇಲ್ಲ. ಬಾಲು ನೆಲಕ್ಕೆ ಅಪ್ಪಳಿಸಿದ ನಂತರ ಸ್ಪಿನ್ ಆಗುವ, ಪುಟಿದೇಳುವ ಪರಿ ಎಂಥವರೂ ಹೆಣಗುವಂತೆ ಮಾಡಿಬಿಡುತ್ತದೆ. ಅದರಲ್ಲೂ ಎರಡೇ ಹೊಡೆತದಲ್ಲಿ ಆಟ ಮುಗಿಸಲು ಯಾರಿಗೂ ಸಾಧ್ಯವಿಲ್ಲ. ಒಂದೊಂದು ಪಾಯಿಂಟ್‌ಗೂ ಒಂದೊಂದು ಬಕೆಟ್ ಬೆವರು ಸುರಿಸಬೇಕು. ರ್‍ಯಾಲಿ ಇಲ್ಲದೆ ಪಾಯಿಂಟ್ ದೊರೆಯುವುದಿಲ್ಲ. ಕೋರ್ಟ್ ತುಂಬಾ ಓಡಾಡಬೇಕು. ಕೆಮ್ಮಣ್ಣಿನ ಕೋರ್ಟ್ ಆದ್ದರಿಂದ ಜಾರುವುದೂ ಜಾಸ್ತಿ. ಸ್ಲೈಡ್ ಮಾಡದೇ ಆಟವಾಡಲು ಆಗದು. ಬಾಲು ಮುಟ್ಟಿದರೆ ಕೈ ಒರೆಸಿಕೊಳ್ಳಬೇಕು. ಇವುಗಳ ಜತೆಗೆ ಬರೀ ಕೆಮ್ಮಣ್ಣಿನ ಮೇಲಷ್ಟೇ ತಮ್ಮ ತಾಕತ್ತು ತೋರುವ ಗುಸ್ತಾವೋ ಕುಯೆರ್ಟನ್, ಗಾಸ್ಟನ್ ಗಾಡಿಯೋ, ಮಾರ್ಸಿಲೋ ರಿಯೋಸ್, ಅಲೆಕ್ಸ್ ಕೊರೆಟ್ಜಾ, ಕೊರಿಯಾ, ಸೆಡ್ರಿಕ್ ಪಿಯೋಲಿನ್, ಜುವಾನ್ ಕಾರ್ಲೋಸ್ ಫೆರೇರೋ, ಥಾಮಸ್ ಮಸ್ಟರ್, ಸೆರ್ಗಿ ಬ್ರುಗೇರಾಗಳನ್ನು ಕಂಡರಂತೂ ಮೈ ಉರಿಯುತ್ತದೆ. ಅದರಲ್ಲೂ ಸ್ಯಾಂಪ್ರಾಸ್‌ನಂತಹ ಪ್ರತಿಭಾವಂತರೇ ಮೊದಲ ಅಥವಾ ಎರಡನೇ ಸುತ್ತಿನಲ್ಲೇ ಹೊರಬೀಳುವುದನ್ನು ಕಂಡಾಗ ಫ್ರೆಂಚ್ ಓಪನ್ ಮೇಲೆಯೇ ಸಿಟ್ಟು ಬರುತ್ತಿತ್ತು.

ಇಂತಹ ಅತ್ಯಂತ ನೀರಸ ಫ್ರೆಂಚ್ ಓಪನ್‌ಗೂ ಒಬ್ಬ “ಕಾನ್‌ಕ್ವಿಸ್ಟೆಡಾರ್" ಸಿಕ್ಕಿದ್ದಾನೆ! ಅವನು ಕಳೆದ ಮೂರು ವರ್ಷಗಳಿಂದ ಫ್ರೆಂಚ್ ಓಪನ್ ಬಗ್ಗೆಯೂ ಒಂದಿಷ್ಟು ನಿರೀಕ್ಷೆ ಇಟ್ಟುಕೊಳ್ಳುವಂತೆ, ಟಿವಿ ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದಾನೆ. ಭುಜದಿಂದ ಕೆಳಕ್ಕಿಳಿಯುವ ಉದ್ದ ಕೂದಲು, ಹಣೆಯ ಸುತ್ತ ಪಟ್ಟಿ, ತೋಳಿಲ್ಲದ ಟೀ ಷರ್ಟ್, ಅತ್ತ ಮುಕ್ಕಾಲು ಪ್ಯಾಂಟೂ ಅಲ್ಲ, ಇತ್ತ ಚೆಡ್ಡಿಯೂ ಅಲ್ಲ, ಮಂಡಿಯಿಂದ ಕೆಳಗಿಳಿದರೂ ಬರ್ಮುಡಾ ಎನಿಸುವುದಿಲ್ಲ, ಅಂಥದ್ದೊಂದು ನಿಕ್ಕರ್ ಹಾಕಿಕೊಳ್ಳುವ ಆತನನ್ನು ನೋಡಿದಾಗ ರಸ್ತೆಯಲ್ಲಿ ಹೋಗುತ್ತಿದ್ದ ಪಡ್ಡೆಯನ್ನು ಯಾರೋ ಎಳೆದುಕೊಂಡು ಬಂದಿದ್ದಾರೆ, ಕೈಗೊಂದು ರಾಕೆಟ್ ಕೊಟ್ಟು ಕೋರ್ಟ್‌ಗಿಳಿಸಿದ್ದಾರೆ ಎಂದನಿಸಿಬಿಡುತ್ತದೆ!

ಆಟಗಾರರು ಸಾಂಪ್ರದಾಯಿಕ ಶೈಲಿಯಲ್ಲಿರಬೇಕು ಎಂದು ಬಯಸುವ ಟೆನಿಸ್‌ನ ಹಳೆಯ ಅಭಿಮಾನಿಗಳು ಹಾಗೂ ಮಡಿವಂತರಂತೂ ಈತನನ್ನು ನೋಡಿದರೆ ಉರಿದು ಬೀಳುತ್ತಾರೆ. ಅದರಲ್ಲೂ ಮಾಜಿ ಟೆನಿಸ್ ಆಟಗಾರ ಗೈ ಫೂಜೇಟ್ “ಕಟ್ಟಡ ಕಾಮಗಾರಿ ಕಾರ್ಮಿಕನಂತಿರುವ ವ್ಯಕ್ತಿ ಟೆನಿಸ್‌ಗೆ ಬೇಕಿಲ್ಲ" ಎನ್ನುವ ಮೂಲಕ ಸಾರ್ವಜನಿಕವಾಗಿಯೇ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಆತನ ವೆಬ್‌ಸೈಟ್‌ನಲ್ಲಿ “King of Clay" ಎಂದು ಬರೆದಿರುವುದನ್ನು ದ್ವೇಷಿಸುವವರೂ ಸಾಕಷ್ಟಿದ್ದಾರೆ. ಆತ ಏನೇ ಮಾಡಿದರೂ, ಯಾವುದೇ ಉಡುಪು ಧರಿಸಿದರೂ ಎಲ್ಲದರಲ್ಲೂ ಹುಳುಕು ಹುಡುಕುವವರಿದ್ದಾರೆ. ಪ್ರತಿ ಪಾಯಿಂಟ್‌ಗಳ ನಡುವೆ ಭಾರೀ ಸಮಯ ತೆಗೆದುಕೊಳ್ಳುತ್ತಾನೆ, ಯಾವಾಗಲೂ ಟವೆಲ್ ತೆಗೆದು ಮುಖ, ಮೈ ತೀಡಿಕೊಳ್ಳುತ್ತಾನೆ, ಬಾಲನ್ನು ಬೌನ್ಸ್ ಮಾಡುತ್ತಾನೆ, ಆಗಾಗ ಚೆಡ್ಡಿ, ಷರ್ಟ್ ಸರಿಪಡಿಸಿಕೊಳ್ಳುತ್ತಾನೆ ಎಂದು ವಟವಟ ಎನ್ನುವವರಿಗೂ ಕಡಿಮೆಯಿಲ್ಲ. ಅಷ್ಟೇ ಅಲ್ಲ, ಸೆರ್ಗಿ ಬ್ರುಗೇರಾ, ಜುವಾನ್ ಕಾರ್ಲೋಸ್ ಫೆರೆರೋ ಅವರಂತೆ ಆರಂಭ ಶೂರತ್ವ ತೋರಿ, ಒಮ್ಮೆಲೆ ಉರಿದು ಹೋಗುತ್ತಾನೆ ಎಂದು ಕೆಟ್ಟದ್ದನ್ನು ಬಯಸುತ್ತಿರುವವರು, ಶಪಿಸುತ್ತಿರುವವರೂ ಇದ್ದಾರೆ.

ಅದಕ್ಕೆ ಬಲವಾದ ಕಾರಣವೂ ಇದೆ!ಇವತ್ತು ಟೆನಿಸ್‌ನಲ್ಲಿ “ಕಂಪ್ಲೀಟ್ ಪ್ಲೇಯರ್" ಅಂತ ಯಾರಾದರೂ ಇದ್ದರೆ ಅದು ರೋಜರ್ ಫೆಡರರ್ ಮಾತ್ರ. ಹದಿನಾಲ್ಕು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದರೂ ಪೀಟ್ ಸ್ಯಾಂಪ್ರಾಸ್ ಸರ್ವ್ ಮತ್ತು ವಾಲಿಗಳಿಗಾಗಿ ಹೆಸರುವಾಸಿಯಾದನೇ ಹೊರತು ಪರಿಪೂರ್ಣ ಆಟಗಾರ ಎಂದೆನಿಸಿಕೊಳ್ಳಲಿಲ್ಲ. ಆದರೆ ಫೆಡರರ್‌ನಲ್ಲಿ ಟೆನಿಸ್‌ನ ಎಲ್ಲ ಹೊಡೆತಗಳನ್ನೂ ಕಾಣಬಹುದು. ಆತ ಯಾವತ್ತೂ ಭಾವೋದ್ವೇಗಕ್ಕೊಳಗಾಗುವುದಿಲ್ಲ. ಯಾವತ್ತೂ ಸಮಚಿತ್ತ, ಸಮಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ. ಇಂತಹ ಗುಣ ಆತನನ್ನು ಟೆನಿಸ್ ಪ್ರೇಮಿಗಳ ಹೃದಯಕ್ಕೆ ಹತ್ತಿರವಾಗಿಸಿದೆ. ಆತ ಟೆನಿಸ್‌ನ ಅನಭಿಷಿಕ್ತ ದೊರೆಯೆನಿಸಿಕೊಂಡಿದ್ದಾನೆ. ಆದರೂ ಒಂದು ಕೊರಗಿದೆ. ಅಮೆರಿಕನ್, ಆಸ್ಟ್ರೇಲಿಯನ್ ಹಾಗೂ ವಿಂಬಲ್ಡನ್ ಗೆದ್ದಿರುವ ಆತನಿಗೆ ಫ್ರೆಂಚ್ ಓಪನ್ ಮರೀಚಿಕೆಯಾಗಿಬಿಟ್ಟಿದೆ. ಆತನಿಂದ ಫ್ರೆಂಚ್ ಓಪನ್ ಗೆಲ್ಲಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಬೇಸರ ಆತನಿಗಿಂತ ಆತನ ಅಭಿಮಾನಿಗಳಲ್ಲಿ ಬಲವಾಗಿದೆ. ಆ ಬೇಸರ ಇತ್ತೀಚೆಗಂತೂ ಅವರನ್ನು ಸಿಟ್ಟಿಗೇಳಿಸಲಾರಂಭಿಸಿದೆ. “To have a hero you need a villain" ಎಂಬ ಮಾತಿದ್ದು, ದುರದೃಷ್ಟವಶಾತ್ ಫೆಡರರ್ ಅಭಿಮಾನಿಗಳು ಸ್ಪೇನ್‌ನ ರಾಫೆಲ್ ನಡಾಲ್‌ನಲ್ಲಿ ಅಂತಹ ವಿಲನ್‌ನನ್ನು ಕಂಡುಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ರೋಜರ್ ಫೆಡರರ್ ಹಾಗೂ ಫ್ರೆಂಚ್ ಓಪನ್ ಪ್ರಶಸ್ತಿಯ ನಡುವೆ ಕಳೆದ ಮೂರು ವರ್ಷಗಳಿಂದ ಅಡ್ಡಗೋಡೆಯಾಗಿ ನಿಂತಿರುವವನೇ 22 ವರ್ಷದ ರಾಫೆಲ್ ನಡಾಲ್!ಇದುವರೆಗೂ ಹೇಳಿದ್ದು ಆತನ ಬಗ್ಗೆಯೇ. ಇಂದು ರಾಫೆಲ್ ನಡಾಲ್ ಎಂದರೆ ಜಗತ್ತೇ ಗುರುತಿಸುತ್ತದೆ, ಗೌರವಿ ಸುತ್ತದೆ. ಆದರೆ ಈ ಮೊದಲು ಮಿಗೆಲ್ ಏಂಜೆಲ್ ರಾಫೆಲ್ ದೊಡ್ಡ ಹೆಸರು ಮಾಡಿದ್ದರು. ಆತ ರಾಫೆಲ್ ನಡಾಲ್‌ಗೆ ದೂರದ ಸೋದರ. “ಬೀಸ್ಟ್ ಆಫ್ ಬಾರ್ಸಿಲೋನಾ" ಎಂದೇ ಹೆಸರುವಾಸಿಯಾಗಿದ್ದ ಮಿಗೆಲ್, ಖ್ಯಾತ ಫುಟ್ಬಾಲ್ ಕ್ಲಬ್ 'ಬಾರ್ಸಿಲೋನಾ"ದ ದೈತ್ಯ ಡಿಫೆಂಡರ್ ಆಗಿದ್ದರು. ಮೂರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕುಟುಂಬಕ್ಕೆ ಹೆಸರು ತಂದಿದ್ದರು. ರಾಫೆಲ್ ನಡಾಲ್ ಕೂಡ ಮೂಲತಃ ಫುಟ್ಬಾಲ್ ಆಟಗಾರನಾಗಿದ್ದ. ಒಳ್ಳೆಯ ಜೂನಿಯರ್ ಫುಟ್ಬಾಲರ್ ಎನಿಸಿಕೊಂಡಿದ್ದ. ಆತನಿಗೆ ಟೆನಿಸ್‌ನ ಗೀಳು ಅಂಟಿಸಿದ್ದು ಚಿಕ್ಕಪ್ಪ ಟೋನಿ ನಡಾಲ್. ಇಂದಿಗೂ ಆತನೇ ನಡಾಲ್‌ನ ಕೋಚ್. ನಡಾಲ್ ಎಡಗೈನಲ್ಲಿ ಟೆನಿಸ್ ಆಡುತ್ತಾನಾದರೂ ಸ್ವಾಭಾವಿಕವಾಗಿ ಆತ ಬಲಗೈ ಆಟಗಾರ. ಬಲಗೈ ಸಹಜವಾಗಿಯೇ ಬಲಿಷ್ಠವಾಗಿರುವುದರಿಂದ ಎಡಗೈನಲ್ಲಿ ಆಟವಾಡಿದರೆ ಬ್ಯಾಕ್‌ಹ್ಯಾಂಡ್ ಇನ್ನೂ ಬಲವಾಗುತ್ತದೆ ಎಂದು ಭಾವಿಸಿದ ಟೋನಿ ನಡಾಲ್, ರಾಫೆಲ್‌ಗೆ ಎಡಗೈನಲ್ಲಿ ಆಟವಾಡುವುದನ್ನು ಅಭ್ಯಾಸ ಮಾಡಿಸಿದರು.

ಅದರ ಫಲವನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಂತ ಅವನೇನು 'ಗಿಫ್ಟೆಡ್ ಪ್ಲೇಯರ್" ಅಲ್ಲ, ಅಂತಹ ಸ್ಕಿಲ್ ಕೂಡ ಇಲ್ಲ. ಇರುವುದೊಂದೇ- ಆತ್ಮವಿಶ್ವಾಸ. ಆತನಲ್ಲಿ ಅತ್ಯುತ್ತಮ ಆಟ ಹೊರಬರುವುದೇ ಆತ ಸೋಲುವ ಸ್ಥಿತಿಯಲ್ಲಿದ್ದಾಗ. ಕಳೆದ ಹ್ಯಾಂಬರ್ಗ್ ಟೂರ್ನಿಯಲ್ಲಿ ಫೆಡರರ್ ಎದುರು 2-5ರಿಂದ ಹಿಂದಿದ್ದ ಆತ, ಅಂತಿಮವಾಗಿ 7-5ರಿಂದ ಸೆಟ್ ಗೆದ್ದುಕೊಂಡನೆಂದರೆ ಆತನ ಆತ್ಮವಿಶ್ವಾಸ, ಸ್ವಸಾಮರ್ಥ್ಯದ ಬಗ್ಗೆ ಇರುವ ನಂಬಿಕೆ ಎಂಥದ್ದಿರಬಹುದು! “never give up a point not even in practice match" ಎಂದು ಹೇಳಿಕೊಟ್ಟವರು ಟೋನಿ ನಡಾಲ್. ಇಂತಹ ಪಾಠವನ್ನು ಎಲ್ಲ ಗುರುಗಳೂ ಹೇಳಿಕೊಡುತ್ತಾರೆ. ಆದರೆ ನಡಾಲ್ ಒಬ್ಬ ಕಟಿಬದ್ಧ ಶಿಷ್ಯ. ಹಾಗಾಗಿಯೇ ಕೋಚ್ ಹೇಳಿಕೊಟ್ಟಿದ್ದನ್ನು ಕೃತಿಗಿಳಿಸಿದ್ದಾನೆ. ಪ್ರತಿಯೊಂದು ಪಾಯಿಂಟನ್ನೂ ಅಳಿವು-ಉಳಿವಿನಂತೆ ತೆಗೆದುಕೊಂಡು ಆಟವಾಡುವ ಏಕೈಕ ಆಟಗಾರ ನಡಾಲ್.

ಟೆನಿಸ್‌ನಲ್ಲಿ ಮಹಾಕಾವ್ಯವೆಂದರೆ ಐದು ಸೆಟ್‌ಗಳಿಗೆ ಸಾಗುವ ಪಂದ್ಯಗಳು: ಫೆಡರರ್ ಹಾಗೂ ನಡಾಲ್ ಈವರೆಗೂ 14 ಬಾರಿ ಮುಖಾಮುಖಿಯಾಗಿದ್ದಾರೆ. ಅವುಗಳಲ್ಲಿ ಮೂರು ಪಂದ್ಯಗಳು ಐದು ಸೆಟ್‌ಗಳವರೆಗೂ ಸಾಗಿದ್ದವು. ಅದರಲ್ಲೂ ರೋಮ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಬ್ಬರ ನಡುವೆ ಐದು ಗಂಟೆಗಳ ಕಾಲ ಕಾದಾಟ ನಡೆದಿತ್ತು. ಅಂದು ಫೆಡರರ್‌ನನ್ನು ಸೋಲಿಸಿದ ನಡಾಲ್‌ನನ್ನು “one surface wonder" ಎಂದು ಕುಟುಕಿದವರೇ ಹೆಚ್ಚು. ಆದರೇನಂತೆ ಕಳೆದ ವರ್ಷ ನಡೆದ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ತೋರಿದ ಹೋರಾಟದಿಂದಾಗಿ ಟೆನಿಸ್ ಪ್ರೇಮಿಗಳು ನಡಾಲ್‌ನನ್ನು ಗೌರವದಿಂದ ನೋಡುವಂತೆ ಮಾಡಿತು. ಐದನೇ ಬಾರಿಗೆ ವಿಂಬಲ್ಡನ್ ಮೇಲೆ ಕಣ್ಣಿಟ್ಟಿದ್ದ ಫೆಡರರ್ ಆಸೆ ಈ ಬಾರಿ ಈಡೇರುವುದಿಲ್ಲ ಎಂದು ಭಾವಿಸುವಷ್ಟರ ಮಟ್ಟಿಗೆ ನಡಾಲ್ ಸ್ಪರ್ಧೆ ಒಡ್ಡಿದ್ದ.

ಕೊನೆಗೂ 7- 6(7), 4-6, 7-6(3), 2-6, 6-2 ಅಂತರದಲ್ಲಿ ಫೆಡರರ್ ಗೆದ್ದರೂ I was happy to win the title before Rafa takes them all" ಎನ್ನುವ ಮೂಲಕ ಪಂದ್ಯದ ವೇಳೆ ತಮಗೆ ಎದುರಾಗಿದ್ದ ಆತಂಕವನ್ನು ಹೊರಗೆಡವಿದರು. ಅಷ್ಟೇಕೆ, “ಫೆಡರರ್‌ನದ್ದು ಪರ್ಫೆಕ್ಟ್ ಆಟ. ಆತನ ಬ್ಯಾಕ್‌ಹ್ಯಾಂಡ್ ಎಲ್ಲಕ್ಕಿಂತ ಪರ್ಫೆಕ್ಟ್" ಎಂದಿದ್ದ ಟೆನಿಸ್ ದಂತಕಥೆ ಸ್ಯಾಂಪ್ರಾಸ್ ಮಾತನ್ನು ಸುಳ್ಳಾಗಿಸಿದ್ದೇ ನಡಾಲ್! ಅಂದರೆ ಬಾಲನ್ನು ನೆಲಕ್ಕೆ ಅಪ್ಪಳಿಸಿ ಭುಜದ ಮಟ್ಟಕ್ಕೆ ಬೌನ್ಸ್ ಮಾಡಿ ಅದನ್ನು ಬ್ಯಾಕ್‌ಹ್ಯಾಂಡ್‌ನಲ್ಲಿ ಹೊಡೆ ಯಲು ಫೆಡರರ್ ತಿಣುಕಾಡುವಂತೆ ಮಾಡಿದ ನಡಾಲ್, ಫೆಡರರ್‌ನ ಬ್ಯಾಕ್‌ಹ್ಯಾಂಡ್‌ನಲ್ಲಿ ದೌರ್ಬಲ್ಯವಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ. ಇದೇನೇ ಇರಲಿ, ಫೆಡರರ್ ಟೆನಿಸ್ ಕಲಿತಿದ್ದು, ಪ್ರಾಕ್ಟಿಸ್ ಮಾಡಿದ್ದೇ ಕ್ಲೇ ಕೋರ್ಟ್‌ನಲ್ಲಿ. ಆತನ ಆಟ ಕ್ಲೇ ಕೋರ್ಟ್‌ಗೂ ಹೇಳಿ ಮಾಡಿಸಿದಂತಿದೆ. ಆದರೂ ಏಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದರೆ ನಡಾಲ್ ದೊಡ್ಡ ಅಡ್ಡಿಯಾಗಿದ್ದಾನೆ. ನಡಾಲ್ ಇಲ್ಲದೇ ಹೋಗಿದ್ದರೆ ಫೆಡರರ್ ಈಗಾಗಲೇ ಎರಡು ಬಾರಿ ಫ್ರೆಂಚ್ ಓಪನ್ ಗೆದ್ದಿರುತ್ತಿದ್ದ.

ಬೋರಿಸ್ ಬೆಕರ್, ಮೈಕೆಲ್ ಚಾಂಗ್ 17ನೇ ವರ್ಷಕ್ಕೆ, ಮರಾಟ್ ಸಾಫಿನ್ 20ನೇ ವರ್ಷಕ್ಕೆ ಗ್ರ್ಯಾನ್‌ಸ್ಲ್ಯಾಮ್ ಗೆದ್ದರೂ ಆನಂತರ ಬರ ಎದುರಿಸಿದರು. ಆರಂಭದಲ್ಲಿ ಯಶಸ್ಸು ಪಡೆದರೂ ಗೆಲುವಿನ ಓಘವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. 18ನೇ ವರ್ಷಕ್ಕೆ ಫ್ರೆಂಚ್ ಒಪನ್ ಗೆದ್ದ ನಡಾಲ್ ಬಗ್ಗೆಯೂ ಇಂತಹದ್ದೇ ಮಾತು ಕೇಳಿ ಬಂದಿತ್ತು. ಬ್ರುಗೇರಾ ಹಾಗೂ ಕಾರ್ಲೋಸ್ ಫೆರೆರೋ ಥರಾ ನಡಾಲ್ ಕೂಡ ಬೇಗ ಮರೆಯಾಗುತ್ತಾನೆ ಎನ್ನಲಾಗಿತ್ತು. ಆದರೆ ಸತತ ಮೂರು ಬಾರಿ ಫ್ರೆಂಚ್ ಒಪನ್ ಗೆದ್ದ ಹಾಗೂ ಈಗ ನಾಲ್ಕನೇ ಬಾರಿಗೆ ಗೆಲ್ಲುವ ಹಂತಕ್ಕೆ ಬಂದಿರುವ ಆತ ಎಲ್ಲರ ಮಾತನ್ನೂ ಹುಸಿಯಾಗಿಸಿದ್ದಾನೆ. ಅಲ್ಲದೆ ಸತತ ನಾಲ್ಕು ಬಾರಿ ಫ್ರೆಂಚ್ ಓಪನ್ ಗೆದ್ದಿದ್ದ ಟೆನಿಸ್‌ನ ದಂತಕಥೆ ಜೋರ್ನ್ ಬೋರ್ಗ್ ನನ್ನು ಸರಿಗಟ್ಟುವ ಹೊಸ್ತಿಲಲ್ಲಿದ್ದಾನೆ. ಕಳೆದ ವರ್ಷ ನಡೆದ ವಿಂಬಲ್ಡನ್ ಟೆನಿಸ್‌ನ ಫೈನಲ್ ತಲುಪಿದ್ದ ನಡಾಲ್‌ನನ್ನು ಕಂಡ ಮೆಕೆನ್ರೋ, ""Hes is a made a beliver out of me" ಎನ್ನುವ ಮೂಲಕ ಆತನ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದಾರೆ.

ನಡಾಲ್‌ನದ್ದು ನಾಚಿಕೆ ಸ್ವಭಾವ.ಮಾತು ಕಡಿಮೆ. ಆದರೆ ಹೋರಾಟಕ್ಕೆ ಇಳಿದಾಗ ಕದನಕಲಿಯಂತೆ ಕಾಣುತ್ತಾನೆ. ಅವನೊಬ್ಬ ಒಳ್ಳೆಯ ಅಥ್ಲೀಟ್. ಕೋರ್ಟ್ ತುಂಬಾ ಓಡಾಡುತ್ತಾನೆ. ಆದರೂ ಬಳಲುವುದಿಲ್ಲ. “ಸಾಮಾನ್ಯವಾಗಿ ಐದು ಬಾರಿ ಕ್ರಾಸ್‌ಕೋರ್ಟ್ ಹೊಡೆತ ಹೊಡೆದರೆ 6ನೆಯದು ಬರುವುದಿಲ್ಲ ಎಂದು ನಿರಾಳವಾಗಬಹುದು. ಆದರೆ ನಡಾಲ್ ಎದುರು 19 ಬಾರಿ ಕ್ರಾಸ್ ಕೋರ್ಟ್ ಶಾಟ್ ಹೊಡೆದರೂ 20ನೆಯದು ತಿರುಗಿ ಬಂದಿರುತ್ತದೆ. ಆಟ ಸಡಿಲಿಸಿದರೆ ನಡಾಲ್ ಬಿಡುವುದಿಲ್ಲ" ಎನ್ನುತ್ತಾನೆ ಫಿನ್‌ಲ್ಯಾಂಡ್‌ನ ಜಾರ್ಕೋ ನಿಮ್ಮೆನ್. ರಾವಣ ಇಲ್ಲದಿದ್ದರೆ ರಾಮನಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬ ಮಾತಿದೆ. ಅಂದರೆ ರಾವಣ ಬಲಿಷ್ಠ ಎದುರಾಳಿಯಾಗಿದ್ದರಿಂದಲೇ ರಾಮನ ಶೌರ್ಯ ಬೆಳಕಿಗೆ ಬಂದಿದ್ದು. ಅಂತೆಯೇ ಕ್ರೀಡೆಯಲ್ಲೂ ಒಬ್ಬ ಆಟಗಾರನಿಂದ ಅತ್ಯುತ್ತಮ ಆಟ ಯಾವಾಗ ಹೊರಬರುತ್ತದೆಂದರೆ ಆತನ ಎದುರಾಳಿ ಪ್ರಬಲ ಪ್ರತಿರೋಧವನ್ನು ಒಡ್ಡಿದಾಗ ಮಾತ್ರ. ಈ ದೃಷ್ಟಿಯಿಂದ ಫೆಡರರ್‌ಗೆ ಸವಾಲು ಹಾಕಿ ಆತನಿಂದ ಅತ್ಯುತ್ತಮ ಆಟವನ್ನು ಹೊರತಂದ ಕೀರ್ತಿ ನಡಾಲ್‌ಗೇ ಸಲ್ಲಬೇಕು. “ನನ್ನ ಅತ್ಯುತ್ತಮ ಆಟದಲ್ಲಿ ಅಗಾಸಿಗೂ ಪಾಲಿದೆ" ಎಂದಿದ್ದ ಸ್ಯಾಂಪ್ರಾಸ್ ಮಾತು ಫೆಡರರ್ ಗೆಲುವಿಗೂ ಅನ್ವಯವಾಗುತ್ತದೆ.

ಇದುವರೆಗೂ 26 ಬಾರಿ ವಿವಿಧ ಟೆನಿಸ್ ಟೂರ್ನಿಗಳ ಫೈನಲ್ ತಲುಪಿರುವ ನಡಾಲ್ 22 ಬಾರಿ ಗೆದ್ದಿದ್ದಾನೆ. 2005, ಜುಲೈ 25ರಂದು 2ನೇ ರ್‍ಯಾಂಕಿಂಗ್‌ಗೇರಿದ ಆತ, ಅತಿ ಹೆಚ್ಚುಕಾಲದಿಂದ ಎರಡನೇ ರ್‍ಯಾಂಕಿಂಗ್‌ನಲ್ಲಿರುವ ಏಕೈಕ ಆಟಗಾರ ಎಂಬ ದಾಖಲೆಯನ್ನೂ ಸೃಷ್ಟಿಸಿದ್ದಾನೆ. ಅಲ್ಲದೆ ಕ್ಲೇ ಕೋರ್ಟ್‌ನಲ್ಲಿ ಸತತ 81 ಪಂದ್ಯಗಳನ್ನು ಗೆದ್ದಿದ್ದಾನೆ. ಇದುವರೆಗೂ ಯಾರೂ ಯಾವುದೇ ಒಂದು ಸರ್ಫೇಸ್ ಮೇಲೆ ಇಷ್ಟು ಪಂದ್ಯಗಳನ್ನು ಅವಿರತವಾಗಿ ಗೆದ್ದಿಲ್ಲ. 'ಗ್ರೀಕ್ ಗಾಡ್" ಥರಾ ಕಾಣುವ ಆತನನ್ನು ನೋಡುವುದೇ ಒಂದು ಖುಷಿ. ಹೋರಾಡಿ ಪಾಯಿಂಟ್ ಗಳಿಸಿದಾಗ ಆತ ಬೀರುವ ನೋಟದಲ್ಲೂ ಒಂದು ವೈಭವ, ಅಗ್ರೆಶನ್ ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಟೆನಿಸ್‌ಗೆ ಬೇಕಾದ ಡಿಸಿಪ್ಲೀನ್ ಆತನಲ್ಲಿದೆ. ಸಂದಿಗ್ಧ ಸಂದರ್ಭದಲ್ಲಿ ಆಡುವ ಎದೆಗಾರಿಕೆ ಇದೆ. ಬರೀ ಸರ್ವೀಸ್‌ನಲ್ಲೇ ಮ್ಯಾಚ್ ಗೆಲ್ಲಲು ಪ್ರಯತ್ನಿಸುವ ರಾಡಿಕ್ ಒಂದೆಡೆಯಾದರೆ, ಹೆವಿಟ್ ಕಥೆ ಮುಗಿದೇ ಹೋಯಿತು. ಮರಾಟ್ ಸಫಿನ್ ಅರ್ಧವರ್ಷ ಗಾಯದಿಂದ ಮನೆಯಲ್ಲಿ ಕುಳಿತರೆ, ಇನ್ನರ್ಧ ವರ್ಷ ತಲೆಕೆಡಿಸಿಕೊಂಡು ಹುಚ್ಚನಂತೆ ವರ್ತಿಸುತ್ತಾನೆ. ಇವರ ನಡುವೆ ಕಾಣುವ ಏಕೈಕ ಆಶಾಕಿರಣವೆಂದರೆ ನಡಾಲ್.

ನಂಬರ್-1 ಎನಿಸಿ ಕೊಂಡಿರುವ ಫೆಡರರ್‌ನ ಸಾಕ್ಷಿಪ್ರಜ್ಞೆಯನ್ನೇ ಕೆಣಕುವ, ಅದ್ಭುತ ಆಟ ಹೊರತರುವ ತಾಕತ್ತು ಇರುವುದು ನಡಾಲ್‌ಗೆ ಮಾತ್ರ. ಸ್ಪ್ಯಾನಿಷ್‌ನಲ್ಲಿ Conquistador (ಜಯಶಾಲಿ)ಎಂಬ ಪದವಿದೆ. ಫುಟ್ಬಾಲ್ ಆಟಗಾರ ರಾಲ್ ಗಾನ್ಝಾಲೆಝ್, ಫಾರ್ಮುಲಾ-1 ಡ್ರೈವರ್ ಫರ್ನಾಂಡೋ ಅಲೊನ್ಸೋ ಹಾಗೂ ರಾಫೆಲ್ ನಡಾಲ್ ಮುಂತಾದವರು ಸ್ಪೇನ್‌ನಲ್ಲಿ ಜನಿಸುವ ಮೂಲಕ ಆ ಪದದ ಹಿರಿಮೆಯನ್ನು ಇನ್ನೂ ಎತ್ತರಿಸಿದ್ದಾರೆ.

ಇದೇನೇ ಇರಲಿ, ಕೆಲವರಿಗೆ ಆಸ್ತಿಪಾಸ್ತಿ ಮಾಡುವುದರಲ್ಲಿ ಖುಷಿ ಸಿಗಬಹುದು, ಕೆಲವರಿಗೆ ಒಳ್ಳೆಯ ಊಟದಲ್ಲಿ ಮಜಾ ಸಿಗಬಹುದು, ಇನ್ನು ಕೆಲವರಿಗೆ ದೈಹಿಕ ಸುಖದಲ್ಲಿ ಅಹ್ಲಾದ ಹೊರೆಯಬಹುದು. ಆದರೆ ಒಂದು ಒಳ್ಳೆಯ ಪುಸ್ತಕವನ್ನೋದಿದಾಗ, ಒಂದು ಕ್ರೀಡೆಯನ್ನೇ ಉನ್ನತಸ್ತರಕ್ಕೆ ಕೊಂಡೊಯ್ಯುವಂತೆ ಆಡುವ ನಡಾಲ್-ಫೆಡರರ್ ಕಾದಾಟವನ್ನು ನೋಡಿದಾಗ ಸಿಗುವ ಸುಖವೇ ಬೇರೆ! ಮೆಕೆನ್ರೋ-ಬೋರ್ಗ್, ಅಗಾಸಿ-ಸ್ಯಾಂಪ್ರಾಸ್ ನಡುವಿನ ಸೆಣಸಾಟಗಳು ಹೇಗೆ ಟೆನಿಸನ್ನೇ ಎತ್ತರಕ್ಕೆ ಕೊಂಡೊಯ್ದವೋ ಹಾಗೆಯೇ ನಡಾಲ್-ಫೆಡರರ್ ನಡುವಿನ ಹೋರಾಟಗಳೂ ಟೆನಿಸ್‌ನ ಘನತೆಯನ್ನು ಹೆಚ್ಚಿಸುತ್ತಿವೆ.

(ಸ್ನೇಹ ಸೇತು : ವಿಜಯ ಕರ್ನಾಟಕ)
ಶನಿವಾರ 7 ಜೂನ್, 2008

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X