ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಬಿ ಕೆಟ್ಟವರಿಲ್ಲ, ಅಲ್ಲವಾ ಆಂಬಿ!

By Staff
|
Google Oneindia Kannada News

Stubborn Ambi turns 50ನಾವು ಎಷ್ಟೇ ಮೆಟೀರಿಯಲಿಸ್ಟಿಕ್ ಅಲ್ಲ ಅಂದರೂ ಕೂಡ ಕೆಲವು ವಸ್ತುಗಳ ಮೇಲೆ ಏನೋ ಒಂದು ಥರಾ ಮಮತೆ, ಮಮಕಾರ, ಮೋಹ ಅಂಟಿಕೊಂಡಿರುತ್ತದೆ. ಅಂಥ ಮೋಹಪಾಶ ಬೀಸಿದ ಬೈಕುಗಳ ಪೈಕಿ ಏನ್ ಫೀಲ್ಡ್ ಬುಲೆಟ್ ಮತ್ತು ನಾಲ್ಕು ಚಕ್ರದ ರಾಣಿ ಅಂಬಾಸಿಡರ್ ಕಾರನ್ನು ಮರೆಯುವುದಕ್ಕೆ ಸಾಧ್ಯವೇಯಿಲ್ಲ. ಸ್ವಾತಂತ್ರ್ಯೋತ್ತರ ಭಾರತದ ಮೊದಲ ವೈಸರಾಯ್ ಆಂಬಿಗೆ ಐವತ್ತು ವರ್ಷ ತುಂಬಿಬಂದಿದೆ. ಬನ್ನಿ, ನಂಬಿಕೆ ಅರ್ಹವಾದ ಈ ಕಾರಿನಲ್ಲಿ ನಂಬಿಕೆ ಉಳಿಸಿಕೊಂಡವರನ್ನು ಕುಳ್ಳಿರಿಸಿಕೊಂಡು ಒಂದು ರೌಂಡ್ ಹೋಗಿಬರೋಣ.

*ಪ್ರತಾಪ್ ಸಿಂಹ

Old is gold!ಹಾಗಂತ ಹೇಳುವ ಕಾಲ ಹೋಯಿತು ಅಂತ ಹೇಳುತ್ತೀರಾ? ಅಷ್ಟಕ್ಕೂ ಟಾಟಾದವರ ನ್ಯಾನೋ', ಸುಝೂಕಿಯವರ ಎ ಸ್ಟಾರ್', ಸ್ಪ್ಲ್ಯಾಶ್' ಮತ್ತು ಕಿಝಾಷಿ', ವೋಕ್ಸ್ ವ್ಯಾಗನ್ ಅವರ ಅಪ್', ಬಿಎಂಡಬ್ಯ್ಲೂ ಅವರ ಮಿನಿ', ಹೋಂಡಾದವರ ಜಾಝ್' ಕಾರುಗಳನ್ನು ನಿರೀಕ್ಷಿಸುತ್ತಿರುವ ನಮಗೆ ಆಂಬಿ' ಅಂದರೆ ಹೇಗೆ ತಾನೇ ಅರ್ಥವಾದೀತು?!

ನಂಬಿದರೆ ನಂಬಿ, ಬಿಟ್ಟರೆ ಬಿಡಿ.ಇಲ್ಲವೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಮೋದಿಯವರನ್ನು ಕೇಳಿನೋಡಿ. ಅಲ್ಲಿನ ಮಂತ್ರಿವರ್ಯರು ಇತ್ತೀಚೆಗೆ ಕ್ಯಾತೆ ತೆಗೆದಿದ್ದರು. ಅಂದವಾಗಿ ಕಾಣುವ ಉದ್ದ ಮೂತಿಯ ಲಕ್ಸುರಿ ಕಾರುಗಳನ್ನು ಕೊಟ್ಟಿದ್ದರೂ ಆಂಬಿ'ಯೇ ಬೇಕೆಂದು ಹಠ ಹಿಡಿದು ಕುಳಿತಿದ್ದಾರೆ. ಅದರಲ್ಲೂ ಸಿಟ್ಟಿಗೆದ್ದಿರುವ ಜಲಸಂಪನ್ಮೂಲ ಖಾತೆ ಸಚಿವ ರಾಮಾಶ್ರಯ್ ಪ್ರಸಾದ್ ಸಿಂಗ್ ಅವರಂತೂ, ಮುಖ್ಯಮಂತ್ರಿಗೆ ಪತ್ರ ಬರೆದು ತಮಗೆ ನೀಡಿರುವ ಲಕ್ಸುರಿ ಕಾರಿನ ವಿರುದ್ಧ ದೂರು ನೀಡಿದ್ದಾರೆ. ನನಗೆ ಅಂಬಾಸಿಡರ್ ಕಾರೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ!!

ಪೂರ್ಣ ಬಹುಮತದೊಂದಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಂದ ನಿತೀಶ್ ಕುಮಾರ್ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ 56 ಲಕ್ಸುರಿ ಕಾರುಗಳನ್ನು ಖರೀದಿಸಿ, ಅವುಗಳನ್ನು ಮಂತ್ರಿಗಳಿಗೆ ನೀಡುವ ಮೂಲಕ ಮಂತ್ರಿಮಂಡಲದ ಕಳೆ ಹೆಚ್ಚಿಸಲು ಪ್ರಯತ್ನಿಸಿದ್ದರು. ಆದರೆ ಅವರ ಸಂಪುಟದ 26 ಸಚಿವರು ತಮಗೆ ನೀಡಲಾಗಿರುವ ಲಕ್ಸುರಿ ಕಾರುಗಳ ವಿರುದ್ಧವೇ ಅಪಸ್ವರವೆತ್ತಿದ್ದಾರೆ. ಗಟ್ಟಿಮುಟ್ಟಾದ ಅಂಬಾಸಿಡರ್ರೇ ಬೇಕು ಎಂದಿದ್ದಾರೆ. ಅನಿವಾರ್ಯವಾಗಿ ಲಕ್ಸುರಿ ಕಾರುಗಳನ್ನು ಹಿಂದಕ್ಕೆ ತೆಗೆದುಕೊಂಡು ಅವುಗಳನ್ನು ಹಿರಿಯ ಸರಕಾರಿ ಅಧಿಕಾರಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರಕಾರ, 100 ಹೊಚ್ಚಹೊಸ ಅಂಬಾಸಿಡರ್ ಕಾರುಗಳನ್ನು ಕೂಡಲೇ ಪೂರೈಸುವಂತೆ ಹಿಂದೂಸ್ಥಾನ್ ಮೋಟಾರ್‍ಸ್' ಕಂಪನಿಗೆ ಆರ್ಡರ್ ಮಾಡಿದೆ.

ಅಷ್ಟಕ್ಕೂ, sleek, sporty, sexy, fast ಕಾರುಗಳ ಈ ಯುಗದಲ್ಲೂ ದೃಷ್ಟಿ ಬೊಟ್ಟಿನಂತಿರುವ, ಚಚ್ಚೌಕದ ಡಬ್ಬಿ ಯಂತಿರುವ, ನಾಲ್ಕು ಗಾಲಿಗಳ ಮೇಲೆ ಡರ್ಬಿ ಹ್ಯಾಟ್ ಇಟ್ಟಂತಿರುವ ಆಂಬಿ'ಯಲ್ಲಿ ಅಂಥದ್ದೇನಿದೆ ಅಂತೀರಾ?

ಮುಂದಿನ ರಸ್ತೆ ಕಾಣುವುದೇ ಕಷ್ಟವಾಗಿರುತ್ತದೆ. ಅಷ್ಟು ಧಾರಾಕಾರವಾಗಿ ಮಳೆ ಸುರಿಯುತ್ತಿರುತ್ತದೆ. ಅದು ಕೆಸರಾಗಿರುವ ಹಳ್ಳಿ ರಸ್ತೆ. ಅದರ ಮೇಲೆ ಮಂಡಿಯುದ್ದ ನೀರು ಹರಿಯುತ್ತಿದೆ. ಇದ್ದಕ್ಕಿದ್ದಂತೆಯೇ ಕಾರಿನ ಒಂದು ಚಕ್ರ ರಸ್ತೆಯಲ್ಲಿದ್ದ ಗುಂಡಿಯೊಳಕ್ಕೆ ಕಚಕ್ಕನೆ ಇಳಿದು ಬಿಡುತ್ತದೆ. ಆತಂಕದಿಂದ ಕೆಳಗಿಳಿಯುವ ಡ್ರೈವರ್ ಟಾರ್ಚ್‌ನಿಂದ ಬೆಳಕು ಹಾಯಿಸಿ ಚಕ್ರವನ್ನು ಗಮನಿಸುತ್ತಾನೆ. ಆದರೂ ನಿರಾಳವಾಗಿ ವಾಪಸ್ ಬಂದು ಕಾರಿನೊಳಗೆ ಕುಳಿತುಕೊಳ್ಳುತ್ತಾನೆ. ಏನಾಯ್ತು ಅಂತ ದಣಿ ಕೇಳಿದರೆ No Problem' ಎಂದು ನಗು ಬೀರುತ್ತಾ ಮತ್ತೆ ಕಾರನ್ನು ಸ್ಟಾರ್ಟ್ ಮಾಡುತ್ತಾನೆ. ಆ ಕಾರು ಅಂಬಾಸಿಡರ್ ಆಗಿರಲೇಬೇಕು!

ಅಂಬಾಸಿಡರ್‌ನ ವೈಶಿಷ್ಟ್ಯವೇ ಅದು. ಹೆಸರು ಅಂಬಾ ಸಿಡರ್' ಎಂದಿದ್ದರೂ ನಿಜವಾಗಿ ಅದು ಕಿಂಗ್'. ಭಾರತದ ರಸ್ತೆಗಳ ರಾಜ. ಅಕಸ್ಮಾತ್ ಬಿಡಾಡಿ ದನವೇನಾದರೂ ರಸ್ತೆಗೆ ಅಡ್ಡ ಬಂದರೆ ಸ್ಟೀರಿಂಗ್ ತಿರುಗಿಸಲು ಹೆಣಗಾಡಬೇಕಾಗಿ ದ್ದರೂ ಹಳ್ಳ-ಕೊಳ್ಳಗಳನ್ನು ಮೆಟ್ಟಿ ಮುಂದೆ ಹೋಗುವುದಕ್ಕೆ ಮಾತ್ರ ಯಾವ ಆತಂಕವನ್ನೂ ಪಡಬೇಕಿಲ್ಲ. ಅಂಬಾಸಿಡರ್ ಅನ್ನು ಪುಟ್ಟದಾಗಿ, ಪ್ರೀತಿಯಿಂದ ಕರೆಯುವುದು ಆಂಬಿ' ಅಂತ.

ಆಂಬಿ'ಗೆ ಐವತ್ತು ವರ್ಷಗಳ ಇತಿಹಾಸವಿದೆ. ಉದ್ಯಮಿ ಬಿ.ಎಂ. ಬಿರ್ಲಾ ಅವರು ಕಾರು ತಯಾರು ಮಾಡುವ ಉದ್ದೇಶದಿಂದ 1942ರಲ್ಲಿಯೇ ಹಿಂದೂಸ್ತಾನ್ ಮೋಟಾರ್‍ಸ್' ಎಂಬ ಕಂಪನಿಯನ್ನು ಪ್ರಾರಂಭ ಮಾಡಿದ್ದರು. ಗುಜರಾತ್‌ನ ಓಕ್ಲಾ ಬಂದರಿನ ಬಳಿ ಉತ್ಪಾದನಾ ಘಟಕವೂ ಸ್ಥಾಪನೆಯಾಗಿತ್ತು. ಆದರೆ ಕಾರಣಾಂತರಗಳಿಂದ 1948ರಲ್ಲಿ ಪಶ್ಚಿಮ ಬಂಗಾಳದ ಉತ್ತರ್‌ಪಾರಕ್ಕೆ ತಯಾರಿಕಾ ಘಟಕವನ್ನು ವರ್ಗಾವಣೆ ಮಾಡಲಾಯಿತು. 1950ರ ದಶಕದ ಪ್ರಾರಂಭದಲ್ಲಿ ಮಾರಿಸ್ ಆಕ್ಸ್‌ಫರ್ಡ್-2 ಮತ್ತು 3' ಎಂಬ ಹೆಸರಿನಲ್ಲಿ ಆಂಬಿಯ ಪಯಣ ಆರಂಭವಾಯಿತು. ಅವು ಅಪ್ಪಟ ಬ್ರಿಟಿಷ್ ಮಾದರಿಗಳಾಗಿದ್ದವು. ಆದರೆ ಭಾರತದಲ್ಲಿ ಮೊಟ್ಟಮೊದಲು ತಯಾರಾದ ಆಕ್ಸ್‌ಫರ್ಡ್‌ಗೆ ಲ್ಯಾಂಡ್‌ಮಾಸ್ಟರ್' ಎಂಬ ಹೆಸರು ನೀಡಲಾಗಿತ್ತು.

1957ರಲ್ಲಿ ಲ್ಯಾಂಡ್‌ಮಾಸ್ಟರ್ ಅನ್ನು ಅಂಬಾಸಿಡರ್' ಎಂಬ ಹೆಸರಿನಲ್ಲಿ ಉತ್ಪಾದಿಸಲು ಆರಂಭಿಸಿದರು. ಮುಂದಿನದ್ದು ದೀರ್ಘಕಾಲೀನ ಯಶೋಗಾಥೆ. ಭಾರತದ ಪಾಲಿಗೆ ಹಿಂದೂಸ್ತಾನ್ ಮೋಟಾರ್ಸ್ಸೇ ಅಮೆರಿಕದ ಜನರಲ್ ಮೋಟಾರ್ಸ್ ಆಯಿತು. ಅಷ್ಟಕ್ಕೂ ಅತ್ತ ಬಂಡವಾಳಶಾಹಿಯೂ ಅಲ್ಲ, ಇತ್ತ ಸಮಾಜವಾದವೂ ಅಲ್ಲ ಎನ್ನುವಂತಹ ಅರೆಸಮಾಜವಾದಿ ಆರ್ಥಿಕ ವ್ಯವಸ್ಥೆ ಯನ್ನು ಅಳವಡಿಸಿಕೊಂಡಿದ್ದ ಭಾರತಕ್ಕೆ ಬೇರೆ ಗತಿಯೂ ಇರಲಿಲ್ಲ. ಹೊರಗಿನಿಂದ ಕಾರುಗಳನ್ನು ಆಮದು ಮಾಡಿಕೊಳ್ಳುವುದಾಗಲಿ, ವಿದೇಶಿ ಕಾರುಗಳನ್ನು ಸ್ವದೇಶದಲ್ಲೇ ತಯಾರು ಮಾಡುವುದಾಗಲಿ ಅಸಾಧ್ಯದ ಮಾತಾಗಿತ್ತು. ಹಾಗಾಗಿ ಅಂಬಾಸಿಡರ್‌ನ ದರ್ಬಾರು ಆರಂಭವಾಯಿತು.

1970ರ ದಶಕ ವೇಳೆಗಂತೂ ಅಂಬಾಸಿಡರ್ ಕಾರು ತನ್ನ ಹೆಸರನ್ನು ಮೀರಿ ವಿವಾದಾತೀತ ರಾಜನಾಗಿ ಬಿಟ್ಟಿತು!ರಾಷ್ಟ್ರದ ಶೇ.70ರಷ್ಟು ಮಾರುಕಟ್ಟೆ ಆಂಬಿಯದ್ದೇ ಆಯಿತು. ಉಳಿದ ಮೂವತ್ತು ಪ್ರತಿಶತ ಪಾಲು ಇಟಲಿ ಮೂಲದ ದೇಶೀ ಉತ್ಪಾದಿತ ಪ್ರೀಮಿಯರ್ ಪದ್ಮಿನಿ' ಯದ್ದು. ಆದರೆ ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ಹಾಗಿತ್ತು ಅಂಬಾಸಿಡರ್ ಕಾರು. ಅದರಲ್ಲೂ ಪ್ರಭಾವಿ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳಿಗೆ ಬಿಳಿ ಅಂಬಾಸಿ ಡರ್ರೇ ರಥವಾದರೆ ಆರ್ಮಿ ಕೂಡ ಅಂಬಾಸಿಡರ್ ಮೊರೆ ಹೋಯಿತು. ಹಾಗಾಗಿಯೇ ಬ್ರಿಟನ್‌ಗೆ ರೋಲ್ಸ್ ರಾಯ್ಸ್', ಅಮೆರಿಕಕ್ಕೆ ಶೆವರ್ಲೆ' ಹೇಗೋ ಅಂಬಾಸಿಡರ್' ಭಾರತಕ್ಕೂ ಹಾಗೇ ಎನ್ನುವಂತಾಯಿತು.

ಸ್ವಾತಂತ್ಯ್ರಾನಂತರ ಸ್ಟಡ್‌ಬೇಕರ್, ಶೆವರ್ಲೆ, ವ್ಯಾಷ್ಠಲ್, ರೋವರ್, 1963 ಫಿಯೆಟ್ 1100 ಡಿ(ಪ್ರೀಮಿಯರ್ ಪದ್ಮಿನಿ), ಸೋವಿಯತ್ ಲಾದಾ ಮುಂತಾದ ವಿದೇಶಿ ಕಾರು ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೂ ಆಂಬಿಗೆ ಸವಾಲು ಎಸೆಯುವವರೇ ಇಲ್ಲವಾಗಿದ್ದರು. ರಸ್ತೆ ಹೇಗೇ ಇರಲಿ, ಯಾವ ತೊಂದರೆಯನ್ನೂ ಕೊಡದೆ ಚಲಿಸುತ್ತಿದ್ದ ಆಂಬಿ' ಸಹಜವಾಗಿಯೇ ಜನರ ಮನ ಗೆದ್ದಿತು. ಮಾರುಕಟ್ಟೆ ಆಂಬಿ ಕೈವಶವಾಯಿತು. 1980ರ ದಶಕದವರೆಗೂ ಆಂಬಿಯನ್ನು ಕೆಣಕುವ ತಾಕತ್ತು ಯಾವ ಕಂಪನಿಗೂ, ಕಾರಿಗೂ ಇರಲಿಲ್ಲ.

ಆದರೆ 80ರ ದಶಕದಲ್ಲಿ ಮಾರುಕಟ್ಟೆಗೆ ಬಂದ ಪುಟ್ಟ ಹಾಗೂ ಪ್ರಿಯವೆನಿಸುವ ಮಾರುತಿ 800' ಆಂಬಿಗೆ ಬಲವಾದ ಗುದ್ದು ನೀಡಿತು. ಆಂಬಿಯನ್ನು ಕೇಳುವವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವ್ಯಾಪಾರ ಕುಸಿದುಬಿತ್ತು. ಅದರಲ್ಲೂ 1991ರಲ್ಲಿ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಮೇಲಂತೂ ಫೋರ್ಡ್, ಹುಂಡಾಯ್, ಟೊಯೋಟಾದಂತಹ ವಿದೇಶಿ ವಾಹನ ಕಂಪನಿಗಳು ಆಗಮಿಸಿ ಭಾರತೀಯ ರಸ್ತೆಗಳ ಅಂದವನ್ನೇ ಹೆಚ್ಚಿಸಿದವು. ಇಂತಹ ಅಬ್ಬರದಲ್ಲಿ ಹೊಸತನ ವನ್ನೇ ಕಂಡುಕೊಳ್ಳದ ಆಂಬಿ' ಜೀವಂತವಾಗಿ ಉಳಿಯುವು ದಾದರೂ ಹೇಗೆ? ಇಂದು ಆಂಬಿ' ಎಂದರೆ ಮೂಗು ಮುರಿಯುವವರೇ ಎಲ್ಲ.

ಅದನ್ನು ಹಿಗ್ಗಾಮುಗ್ಗ ಬೈಯ್ಯುವವರಿಗೇನೂ ಕಡಿಮೆ ಯಿಲ್ಲ. ಅದಕ್ಕೆ ಕಾರಣವೂ ಇದೆ. ಇಪ್ಪತ್ತೊಂದನೇ ಶತಮಾ ನಕ್ಕೆ ಕಾಲಿಟ್ಟಿದ್ದರೂ cosmetic changes ಬಿಟ್ಟು ಅಂಬಾಸಿಡರ್ ಹೆಚ್ಚು ಬದಲಾಗಿಲ್ಲ. ಬದಲಾವಣೆ ಜಗದ ನಿಯಮ' ಎಂಬ ಮಾತು ಬಹುಶಃ ಅಂಬಾಸಿಡರ್‌ಗೆ ಅನ್ವಯವಾಗುವುದೇ ಇಲ್ಲ. ಆದರೆ ಬದಲಾಗದಿದ್ದರೂ ಬೇಡಿಕೆಯಲ್ಲಿರಲು ಅದಕ್ಕೇನು ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಿರುವ ರಾಜನೋಟವಿದೆಯೇ?!ಆದರೂ ಆಂಬಿ'ಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ನೀವು ಆಂಬಿಯನ್ನು ಇಷ್ಟಪಡಿ, ಬಿಡಿ... ಹಚ್ ಜಾಹೀರಾತಿನಲ್ಲಿ ಬರುತ್ತಿದ್ದ ನಾಯಿ(ಪಗ್)ಯಂತಹ ಮುಖಹೊಂದಿರುವ ಹಾಗೂ ಕಪ್ಪೆ ಕಣ್ಣಿನ ಅಂಬಾಸಿಡರ್ ಇಂದಿಗೂ ಭಾರತೀಯ ರಸ್ತೆಗಳ ದ್ಯೋತಕವಾಗಿದೆ. ಪ್ರಗತಿ ಮತ್ತು ಅವನತಿ ಎರಡಕ್ಕೂ ನಿರೋಧಕ ಶಕ್ತಿ ಬೆಳಸಿಕೊಂಡಿರುವ ಡೈನೋಸಾರ್ ಎಂದು ಅದನ್ನು ಜರಿದರೂ ತಪ್ಪಾಗುವುದಿಲ್ಲ. ಇಂದು ಮಾರುಕಟ್ಟೆಯಲ್ಲಿರುವ ಕಾರುಗಳ ಯಾವುದೇ ಮಾಡೆಲ್ ತೆಗೆದುಕೊಳ್ಳಿ. ಆರು ತಿಂಗಳಾಗುವಷ್ಟರಲ್ಲಿ ಅಲ್ಪ-ಸ್ವಲ್ಪವಾದರೂ ಬದಲಾಗುತ್ತವೆ. ಬದಲಾವಣೆ ಮಾಡದಿದ್ದರೆ, ಹೊಸ ರೂಪ ಕೊಡದಿದ್ದರೆ ಮಾರುಕಟ್ಟೆಯಲ್ಲಿ ಉಳಿಯುವುದೇ ಕಷ್ಟ. ಆದರೆ ಐವತ್ತು ವರ್ಷಗಳಾ ದರೂ ಮೂಲ ಮಾದರಿಯಲ್ಲೇ ಉತ್ಪಾದನೆಯಾಗುವ, ಬೇಡಿಕೆ ಉಳಿಸಿಕೊಂಡಿರುವ ಏಕೈಕ ಕಾರೆಂದರೆ ಬಹುಶಃ ಅಂಡಾಸಿಡರ್ ಮಾತ್ರ. ಅಂದವೂ ಅಷ್ಟಕ್ಕಷ್ಟೇ. ಒಂದು ವೇಳೆ, ಬ್ಯ್ರಾಂಡ್ ನ್ಯೂ' ಅಂಬಾಸಿಡರ್‌ನಲ್ಲಿ ಹೋದರೂ ಯಾವ ಹುಡುಗಿಯೂ ನಿಮ್ಮನ್ನು ಕಣ್ಣೆತ್ತಿ ನೋಡುವುದಿಲ್ಲ! ಆದರೂ ಅಂಬಾಸಿಡರ್‌ನಲ್ಲಿ ಸಿಗುವ ಸೆಕ್ಯೂರ್ ಫೀಲಿಂಗ್' ಇದೆಯಲ್ಲಾ ಅದು ಯಾವ ಕಾರಿನಲ್ಲೂ ಸಿಗಲು ಸಾಧ್ಯವಿಲ್ಲ. ಲಾರಿಗೆ ಡಿಕ್ಕಿ ಹೊಡೆದರೂ ಮೂತಿ ಜಜ್ಜುತ್ತದೆಯೇ ಹೊರತು ಪ್ರಾಣಕ್ಕೆ ಅಪಾಯ ಕಡಿಮೆ.
2003, ಅಕ್ಟೋಬರ್ 2ರಂದು ನಡೆದ ಘಟನೆಯನ್ನೊಮ್ಮೆ ನೆನಪಿಸಿಕೊಳ್ಳಿ.

ಒಂದು ವೇಳೆ ಅಂಬಾಸಿಡರ್ ಅಲ್ಲದೆ ಬೇರಾವುದೇ ಕಾರಾಗಿದ್ದರೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸತ್ತು ಐದು ವರ್ಷಗಳಾಗಿರಬೇಕಿತ್ತು. ನಕ್ಸಲೀಯರು ಅಂತಹ ಸಂಚು ರೂಪಿಸಿದ್ದರು. ಸುಧಾರಿತ ಸ್ಫೋಟಕಗಳು ಹಾಗೂ ನೆಲಬಾಂಬನ್ನು ರಸ್ತೆಯಡಿ ಹುದುಗಿಸಿ ಟ್ಟಿದ್ದ ನಕ್ಸಲೀಯರು ರಿಮೋಟ್ ಕಂಟ್ರೋಲ್‌ನೊಂದಿಗೆ ಹೊಂಚುಹಾಕಿಕೊಂಡು ಕುಳಿತಿದ್ದರು. ಅಂತಹ ಸಂಚನ್ನೂ ನಿಶ್ಫಲಗೊಳಿಸಿದ್ದು ಯಾವ ಭದ್ರತಾ ಅಧಿಕಾರಿಯೂ ಅಲ್ಲ, ಪೋಲೀಸರೂ ಅಲ್ಲ, ವಿಧಿಯೂ ಅಲ್ಲ. ಬುಲೆಟ್ ಪ್ರೂಫ್' ಅಂಬಾಸಿಡರ್ ಕಾರು! ಕಾರಿನ ಅಡಿಯಲ್ಲೇ ನೆಲಬಾಂಬು ಸ್ಫೋಟಗೊಂಡರೂ ನಾಯ್ಡು ಸಾಗುತ್ತಿದ್ದ ಅಂಬಾಸಿಡರ್‌ನ ಚಕ್ರಗಳು ಧ್ವಂಸಗೊಂಡವೇ ಹೊರತು ಒಳಗಿದ್ದ ಮುಖ್ಯ ಮಂತ್ರಿಯ ಪ್ರಾಣಕ್ಕೆ ಕುತ್ತು ಬರಲಿಲ್ಲ.

ಹಾಗಾಗಿಯೇ ನಕ್ಸಲೀಯರ ಅಪಾಯ ಎದುರಿಸುತ್ತಿರುವ ಆಂಧ್ರ ಸರಕಾರ ತನ್ನ ಸಚಿವರ ಪ್ರಾಣ ರಕ್ಷಣೆಗಾಗಿ ಇಂದಿಗೂ ನಂಬಿರುವುದು ಗುಂಡು ನಿರೋಧಕ ಅಂಬಾಸಿಡರ್ ಕಾರುಗಳನ್ನು. ಇಂದು ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಕಾರುಗಳು ತುಂಬಿದ್ದರೂ ಅಂಬಾಸಿಡರ್‌ನಲ್ಲಿ ಮಾತ್ರ ಸುರಕ್ಷಿತ ಎಂಬ ಭಾವನೆ ಮೂಡಲು ಸಾಧ್ಯ. ಅಂತಹ ಸ್ಕೋಡಾ ಕಾರೇ ಏರ್ ಬ್ಯಾಗ್' ಗಳಿದ್ದರೂ ಜೀವ ಉಳಿಸುವುದಿಲ್ಲ. ಮಾರುತಿಯಂತೂ ಸಣ್ಣ ಡಿಕ್ಕಿ ಹೊಡೆದರೂ ಮುದ್ದೆಯಾಗಿ ಬಿಡುತ್ತದೆ. ಉಳಿದ ಕಾರುಗಳ ಕಥೆಯೂ ಅದೇ. ಈಗಿನ ಕಾರುಗಳ ರೀಪೇರಿಗೆ ಕಂಪ್ಯೂಟರ್ ಬೇಕು, ಆದರೆ ಆಂಬಿಯನ್ನು ಯಾವ ಮೆಕ್ಯಾ ನಿಕ್ ಶಾಪ್‌ನವನೂ ರಿಪೇರಿ ಮಾಡಬಲ್ಲ.

ಇಂದಿಗೂ ಸಂಸತ್ ಅಧಿವೇಶನದ ಸಮಯದಲ್ಲಿ ರಾಷ್ಟ್ರಪತಿ ಭವನದಿಂದ ಪಾರ್ಲಿಮೆಂಟ್‌ವರೆಗೂ ರಸ್ತೆ ಬದಿಯಲ್ಲಿ ಕಾಣಸಿಗುವ ಕಾರುಗಳೆಲ್ಲ ಬಿಳಿ ಅಂಬಾಸಿಡರ್‌ಗಳೇ ಆಗಿರುತ್ತವೆ. ನಮ್ಮ ಸರಕಾರದ ಬಳಿ 5 ಸಾವಿರ ಅಂಬಾಸಿಡರ್ ಕಾರುಗಳಿವೆ. ಆಂಬಿ'ಯ ಇನ್ನೊಂದು ಅನುಕೂಲವೆಂದರೆ ಸುಲಭವಾಗಿ ಸಂಸತ್ ಭವನವನ್ನೂ ಪ್ರವೇಶಿಸಬಹುದು! ಅಷ್ಟಕ್ಕೂ 2001, ಡಿಸೆಂಬರ್ 13ರಂದು ಸಂಸತ್ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ವಿಐಪಿ ಗೇಟಿನ ಮೂಲಕ ಸಂಸತ್ ಆವರಣದೊಳಕ್ಕೆ ಪ್ರವೇಶಿಸಲು ಸಾಧ್ಯವಾಗಿದ್ದೇ ಬಿಳಿ ಅಂಬಾಸಿಡರ್‌ನಿಂದಾಗಿ!!

ಇವತ್ತಿಗೂ ಟ್ಯಾಕ್ಸಿ ಡ್ರೈವರ್‌ಗಳ, ರಾಜಕಾರಣಿಗಳ, ಜಡ್ಜ್‌ಗಳ ರಥ ಅಂಬಾಸಿಡರ್. ಹಾಗಾಗಿಯೇ 6 ಲಕ್ಷ ಅಂಬಾಸಿಡರ್ ಕಾರುಗಳು ನಮ್ಮ ರಸ್ತೆಗಳ ಮೇಲಿವೆ. ಕೋಲ್ಕತಾದಲ್ಲಂತೂ ರಸ್ತೆ ಮೇಲಿರುವ ಹೆಚ್ಚಿನ ಕಾರುಗಳು ಅಂಬಾಸಿಡರ್ ಆಗಿವೆ. 2002ರವರೆಗೂ ಭಾರತದ ಪ್ರಧಾನ ಮಂತ್ರಿಯವರ ಅಧಿಕೃತ ವಾಹನವೂ ಅಂಬಾಸಿಡರ್ ಆಗಿತ್ತು. ಹೊಸತನವನ್ನು ಕಂಡುಕೊಳ್ಳದಿದ್ದರೆ ಯಾವ ವಸ್ತು, ಉಪಕರಣ, ವಾಹನಗಳಾಗಲಿ ಬೇಡಿಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಇಷ್ಟೆಲ್ಲಾ ಬಗೆ ಬಗೆಯ ಕಾರುಗಳು ಬಂದಿರುವಾಗ ಸಹಜವಾಗಿಯೇ ಆಂಬಿ' ಮೆರುಗು ಕಳೆದು ಕೊಂಡಿದೆ. ಆದರೆ ಎಷ್ಟೇ ವಿಧದ ಬೈಕುಗಳು ಬಂದರೂ ಗತ್ತು-ಗೈರತ್ತಿನ ರಾಯಲ್ ಎನ್‌ಫೀಲ್ಡ್‌ಗೆ ಸಾಟಿಯಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಸ್ವತಂತ್ರ ಭಾರತದಲ್ಲಿ ತಯಾರಾದ ಮೊದಲ ಕಾರು ಆಂಬಿ' ಬಗ್ಗೆಯೂ ಒಂಥರಾ ಭಾವನಾತ್ಮಕ ಸಂಬಂಧವಿರುತ್ತದೆ. ಅಂತಹ ಆಂಬಿಗೆ ಈಗ ತುಂಬಿದೆ ಐವತ್ತು.ಹಾಗಾಗಿ ಒಂದಿಷ್ಟು ನೆನಪುಗಳ ಮೆಲುಕು ಇದು.

(ಸ್ನೇಹಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X