• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿವಿ ಸಂಗೀತ ಸ್ಪರ್ಧೆಗಳ ಶೃತಿ, ಅಪಶೃತಿ

By Staff
|

ಬಹುತೇಕ ಇವತ್ತು ಎಲ್ಲ ಟಿವಿ ವಾಹಿನಿಗಳಲ್ಲೂ ಒಂದಲ್ಲ ಒಂದು ಬಗೆಯ ಸಂಗೀತ ಸ್ಪರ್ಧೆಗಳ ಕಾರ್ಯಕ್ರಮಗಳು ರಾರಾಜಿಸುತ್ತಿವೆ. ಹೊಸ ಪ್ರತಿಭೆಗಳನ್ನು ಅನ್ವೇಷಿಸುವ ಉತ್ಸಾಹ ಮತ್ತು ಸಂಗೀತ ಶ್ರದ್ಧೆಯನ್ನು ಮೀಟುವ ಕಾರ್ಯಕ್ರಮಗಳ ಬಗೆಗೆ ತಲೆದೂಗುವ ಲೇಖಕರು, ಅಲ್ಲಲ್ಲಿ ಇಣುಕು ಹಾಕುತ್ತಿರುವ ಹೊಸ ಪ್ರತಿಭೆಗಳ "ಶಿಕಾರಿ"ಯ ಕುರಿತು ಎದೆಗುಂದಿ ಬರೆಯುತ್ತಿದ್ದಾರೆ.

ಪ್ರತಾಪ್ ಸಿಂಹ

Zee Kannada Sarigamapa Runner up Sahana
ಲಿಟ್ಲ್ ಚಾಂಪ್ ರನ್ನರ್ ಅಪ್ ಸಹನಾ ಹೆಗಡೆ ಗಾನ ಕೋಗಿಲೆಗಳ ಟ್ಯಾಲೆಂಟ್ 'ಹಂಟ್"!

ಎಂದುಕು ಪೆದ್ದಲ ವಾಳ್ಳೆ ಬುದ್ಧಿ ಇಯ್ಯಾವು

ಎಂದು ಪೋದುನಯ್ಯ ರಾಮಯ್ಯ

ಅಂದರಿ ವಾಳ್ಳೆ ದಾಟಿ ದಾಟಿ ವದರಿತಿ

ಅಂದ ರಾನಿ ಪಂಡಾಯೆ ಕಾದರಾ(ಎಂದು)

ತ್ಯಾಗರಾಜರ ಈ ಹಾಡು ಜನರ ನಾಲಗೆ ತುದಿಯ ಮೇಲೆ ಕುಣಿಯುವ ಮೊದಲೇ “ಶಂಕರಾಭರಣಂ ರಾಗ" Immortal ಆಗಿ ಎಷ್ಟೋ ವರ್ಷಗಳೇ ಕಳೆದಿದ್ದವು. ಆ ರಾಗದಲ್ಲಿ ಅದ್ಯಾವ ಮಾಧುರ್ಯ, ಅದೆಂಥ ಆಕರ್ಷಣೆ ಇದೆಯೋ ಗೊತ್ತಿಲ್ಲ, ಎಂತಹವರೂ ತಲೆದೂಗುವಂತೆ ಮಾಡುವ ಶಕ್ತಿ ಅದಕ್ಕಿದೆ. ಶ್ರೋತೃಗಳು ಮಾತ್ರವಲ್ಲ, ಹಾಡುತ್ತಾ ಹಾಡುತ್ತಾ ಗಾಯಕರೂ ಮೈಮರೆತು ಬಿಡುತ್ತಾರೆ. ಕಳೆದ ವಾರ ಆಗಿದ್ದೂ ಅದೇ. ಒಂದೆಡೆ ಟಿವಿ ಮುಂದೆ ಕುಳಿತು ಮಲೆಯಾಳಮ್‌ನ “ಐಡಿಯಾ ಸ್ಟಾರ್ ಸಿಂಗರ್" ಕಾರ್ಯಕ್ರಮದ ಫೈನಲ್ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ಶ್ರೋತೃಗಳಿಗೆ 'ಶಂಕರಾಭರಣಂ ರಾಗ"ವನ್ನು ಮರು ಆವಾಹನೆ (revisit) ಮಾಡಿಕೊಂಡಂತಾಗುತ್ತಿದ್ದರೆ, ಇನ್ನೊಂದೆಡೆ ಸ್ಪರ್ಧೆಯ ಕಾಲಮಿತಿಯಾದ 20 ನಿಮಿಷ ಕಳೆದರೂ ಭಾವಪರವಶನಾಗಿ ಹಾಡುತ್ತಿದ್ದ ತುಷಾರ್ ಗೆ ಈ ಜಗದ ಪರಿವೆಯೇ ಇರಲಿಲ್ಲ.

ಅಂತಹ ತಲ್ಲೀನತೆ ಅಲ್ಲಿತ್ತು. ಆತ ನಿದ್ರೆಯಿಂದ ಬೆಚ್ಚಿ ಎದ್ದವನಂತೆ ಅರಿವು ತಂದುಕೊಂಡು ಕ್ಷಮೆಯಾಚಿಸುತ್ತಿದ್ದರೆ ಜಡ್ಜ್‌ಗಳ ಬಾಯಿಂದ ಮಾತುಗಳು

ಹೊರಡುವುದೇ ಕಷ್ಟವಾಗಿತ್ತು, ಕಣ್ಣುಗಳು ಒದ್ದೆಯಾಗಿದ್ದವು. ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ದೇಶದ ಮೊದಲ ಪಾಪ್ ಗಾಯಕಿ ಉಷಾ ಉತುಪ್, ಸಂಗೀತ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಶರತ್, ಹೆಸರಾಂತ ಗಾಯಕ ಶ್ರೀಕುಮಾರ್, ಸೆಲೆಬ್ರಿಟಿ ಜಡ್ಜ್ ಆಗಿ ಬಂದಿದ್ದ ಕೆ.ಜೆ. ಜೋಯ್ಸ್ ಮೂಕವಿಸ್ಮಿತರಾಗಿ ಮಾತುಬಾರದೆ ಕುಳಿತಿದ್ದರೆಂದರೆ ತುಷಾರ್‌ನ ಗಾನಸುಧೆ ಹೇಗಿದ್ದಿರಬಹುದೆಂದು ಊಹಿಸಿ ನೋಡಿ.

ರಾಗ= ಸೂಪರ್, ಕೀರ್ತನೆ= ಸೂಪರ್, ನೆರವಲ್= ಸೂಪರ್ ಸೂಪರ್, ಸ್ವರ= ಮೆಗಾ ಸೂಪರ್!

ಹಾಗಂತ ಶ್ರೀಕುಮಾರ್ ಹೇಳಿದರೆ, ಅಸಾಧ್ಯವಾದ ಸಾಧನೆ ಎಂದರು ಶರತ್. ಉಷಾ ಉತುಪ್ ಅವರಂತೂ ಗದ್ಗದಿತರಾಗಿಯೇ ಕುಳಿತಿದ್ದರು. ಇದು ಮಲೆಯಾಳದಲ್ಲಿ ಬರುವ ಒಂದು ಕಾರ್ಯಕ್ರಮವೇ ಆಗಿರಬಹುದು. ಸಂಗೀತಕ್ಕೆ ಭಾಷೆಯ ಹಂಗಾಗಲಿ, ಎಣೆಯಾಗಲಿ ಇಲ್ಲ ಎಂಬ ಮಾತನ್ನು ವಾಸ್ತವದಲ್ಲಿ ನಿಜವಾಗಿಸುತ್ತಿರುವ ಒಂದು ಅದ್ಭುತ ಪ್ರತಿಭಾ ಶೋಧನೆ ಅಥವಾ ಟ್ಯಾಲೆಂಟ್ ಶೋ. ತುಷಾರ್ ಒಬ್ಬನೇ ಅಲ್ಲ, ನಜೀಮ್, ಹಿಶಾಮ್ ರೆಹಮಾನ್, ಅರುಣ್ ಗೋಪನ್ ಅವರಂತಹ ಪ್ರತಿಭೆಗಳನ್ನೂ 'ಐಡಿಯಾ ಸ್ಟಾರ್ ಸಿಂಗರ್" ಬೆಳಕಿಗೆ ತಂದು ಜಗತ್ತಿಗೆ ಪರಿಚಯಿಸಿದೆ. ಫೈನಲ್ ಹಂತದವರೆಗೂ ಬಂದಿದ್ದ ಅಮೃತಾ ಸುರೇಶ್‌ಳಂತೂ ಖ್ಯಾತ ಗಾಯಕಿ ಚಿತ್ರಾ ಅವರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಾರೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಅಮೃತಾಳ ಕಂಠ ಚಿತ್ರಾ ಅವರೇ ಹಾಡುತ್ತಿದ್ದಾರೇನೋ ಎಂದು ಭಾವಿಸುವಂತೆ ಮಾಡುತ್ತದೆ.

Zee Kannada Seregamapa runner up adarsh
ಲಿಟ್ಲ್ ಚಾಂಪ್ ರನ್ನರ್ ಅಪ್ ಆದರ್ಶ್ ಪ್ರಸ್ತುತ ಚಾಲ್ತಿಯಲ್ಲಿರುವ ಮೆಗಾ ಫೈನಲ್‌ನಲ್ಲಿರುವ ದುರ್ಗಾ ವಿಶ್ವನಾಥ್ ಎಂಬ ಮತ್ತೊಬ್ಬ ಸ್ಪರ್ಧಿಯಂತೂ 6ವಿಧಗಳಲ್ಲಿ 'ವಾಯ್ಸ್ ಮಾಡ್ಯುಲೇಶನ್" ಮಾಡಬಲ್ಲಳು. ಒಂದು ಟ್ಯಾಲೆಂಟ್ ಶೋ ಹೇಗಿರಬೇಕು ಎಂಬುದಕ್ಕೆ 'ಐಡಿಯಾ ಸ್ಟಾರ್ ಸಿಂಗರ್" ಮಾದರಿ. ಇಲ್ಲಿ ನೂರಾರು ಬಾರಿ ಕೇಳಿ ಬಾಯಿಪಾಠ ಮಾಡಿಕೊಂಡಿರುವ ಚಿತ್ರಗೀತೆಗಳನ್ನು ಇಂಪಾಗಿ ಹಾಡಿದರೆ ಸಾಲದು, 20ನಿಮಿಷ ಕಛೇರಿಯನ್ನೂ ಕೊಡಬೇಕು. ಶಾಸ್ತ್ರೀಯ ಸಂಗೀತದಲ್ಲಿ ಸಾಧಿಸಿರುವ ವಿದ್ವತ್ತನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗೆ ಪ್ರಾಮಾಣಿಕ ಕಾಳಜಿ ಹಾಗೂ ಪ್ರಯತ್ನದಿಂದ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿರುವುದರಿಂದಲೇ ಇಂದು 'ಐಡಿಯಾ ಸ್ಟಾರ್ ಸಿಂಗರ್" ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಅತಿ ಹೆಚ್ಚು ಟಿಆರ್‌ಪಿ(ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್) ಹೊಂದಿರುವ ಪ್ರಾದೇಶಿಕ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಎಲ್ಲವೂ ಕೃತಕವಾಗಿ ಕಾಣುತ್ತಿರುವ ಸಂದರ್ಭದಲ್ಲಿ ಸ್ಟಾರ್ ಸಿಂಗರ್ ಪ್ರತಿಭಾನ್ವೇಷಣೆಗೆ ಹೊಸ ಭಾಷ್ಯ ಬರೆಯುತ್ತಿದೆ.

ನಮ್ಮ ಕನ್ನಡದಲ್ಲೂ ಇಂತಹ 'ಟ್ಯಾಲೆಂಟ್ ಶೋ", 'ಟ್ಯಾಲೆಂಟ್ ಹಂಟ್"ಗಳಿಗೆ ಕೊರತೆಯೇನಿಲ್ಲ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ನಿತ್ಯೋತ್ಸವ" ಮೊದಲ ಪ್ರಯತ್ನವಾದರೂ, ಇಂದು 'ಎದೆತುಂಬಿ ಹಾಡು ವೆನು",'ವಾಯ್ಸ್ ಆಫ್ ಕರ್ನಾಟಕ", 'ಕಾನ್ಫಿಡೆಂಟ್ ಸ್ಟಾರ್ ಸಿಂಗರ್", 'ಝೀ ಸರಿಗಮಪ", 'ಝೀ ಲಿಟ್ಲ್ ಚಾಂಪ್ಸ್", 'ಸಪ್ತಸ್ವರ" ಮತ್ತು 'ಹಾಡಿನ ಬಂಡಿ" ಮುಂತಾದ ಹಲವು ಕಾರ್ಯಕ್ರಮಗಳು ಮೂಡಿಬರುತ್ತಿವೆ. ಆದರೆ ಇಷ್ಟೆಲ್ಲಾ ಕಾರ್ಯಕ್ರಮಗಳು ಬರುತ್ತಿದ್ದರೂ ನಮ್ಮ ಸಂಗೀತ ಕ್ಷೇತ್ರಕ್ಕೇಕೆ ಹೊಸ ಪ್ರತಿಭೆಗಳೇ ಸಿಗುತ್ತಿಲ್ಲ? ಈ ಕಾರ್ಯಕ್ರಮಗಳ ಮೂಲಕ ನವ ತಾರೆಗಳೇಕೆ ಹೊರಹೊಮ್ಮುತ್ತಿಲ್ಲ? ಅಥವಾ ಈ 'ಟ್ಯಾಲೆಂಟ್ ಹಂಟ್"ಗಳು ಟ್ಯಾಲೆಂಟ್ ಇರುವವರನ್ನೇ “ಹಂಟ್" (ಕೊಲ್ಲು) ಮಾಡುತ್ತಿವೆಯೇ?

ಕಳೆದ ಭಾನುವಾರ ಅಂತಿಮ ಸ್ಪರ್ಧೆ ನಡೆದ 'ಝೀ ಲಿಟ್ಲ್ ಚಾಂಪ್ಸ್" ಕಾರ್ಯಕ್ರಮವನ್ನೇ ತೆಗೆದುಕೊಳ್ಳಿ. ಅನಿರುದ್ಧನಂತಹ ಎಂಟರ್‌ಟೈನರ್‍ಸ್, ಸುನಾಮಿಯಂತೆ ಬಂದ ಸಿದ್ಧಾರ್ಥ್, ಚರಣ್, ವೇದಳಂತಹ ಎಳೆ ಕುಡಿ ಗಳನ್ನು ಪರಿಚಯಿಸಿದ 'ಲಿಟ್ಲ್‌ಚಾಂಪ್ಸ್" ಪ್ರಯತ್ನ ಖಂಡಿತ ಶ್ಲಾಘನೀಯ. ಆದರೆ ನೀವೇನಾದರೂ ಫೈನಲ್ ಸ್ಪರ್ಧೆಯನ್ನು ವೀಕ್ಷಿಸಿದ್ದರೆ ಅಂತಿಮ ಫಲಿತಾಂಶ ಖಂಡಿತ ನಿಮಗೆ ಆಘಾತವನ್ನುಂಟು ಮಾಡಿರುತ್ತದೆ ಅಲ್ಲವೆ? ಫಾಸ್ಟ್, ಮೆಲೋಡಿ, ಕ್ಲಾಸಿಕಲ್ ಎಲ್ಲ ವಿಧಗಳಲ್ಲೂ ಹಾಡಿಸಿ ಮಕ್ಕಳನ್ನು ಪರೀಕ್ಷಿಸಿದ, ತಿದ್ದಿ ತೀಡಿದ ಜಡ್ಜ್ ರಾಜೇಶ್ ಕೃಷ್ಣನ್ ಪ್ರಯತ್ನ ಮೆಚ್ಚುವಂಥದ್ದೇ. ಆದರೆ ರಾಜೇಶ್ ಕೃಷ್ಣನ್ ಫೈನಲ್‌ನಲ್ಲಿ ಮಕ್ಕಳನ್ನು ಜಡ್ಜ್ ಮಾಡುವಲ್ಲಿ ಎಡವಿದರೋ ಅಥವಾ ಕಾಣದ ಕೈಗಳ ಆಟವಿತ್ತೋ? ಒಂದು ವೇಳೆ ಎಡವಿದ್ದೇ ಆಗಿದ್ದರೆ ಕನಿಷ್ಠ ಸಹನಾ ಅಥವಾ ಆದರ್ಶ ಇಬ್ಬರಲ್ಲಿ ಒಬ್ಬರಿಗಾದರೂ ನ್ಯಾಯ ಸಿಗುತ್ತಿತ್ತು ಅಲ್ಲವೆ?

ಹಾಗಿರುವಾಗ ರಾಜೇಶ್ ಕೃಷ್ಣನ್ ಶರಣಾಗಿದ್ದು ಯಾರ ಪ್ರಭಾವಕ್ಕೆ? ಸಂಗೀತದ ಗಂಧ-ಗಾಳಿ ಗೊತ್ತಿಲ್ಲದವರಿಗೂ ಚೆನ್ನಾಗಿ ಹಾಡಿದ್ದು ಶಿರಸಿಯ ಉತ್ಸಾಹದ ಚಿಲುಮೆ ಸಹನಾ ಎಸ್. ಭಟ್ ಮತ್ತು ಬೆಂಗಳೂರಿನ ಆದರ್ಶ ಎಂಬುದು ತಿಳಿಯುವಂತಿತ್ತು. ಇಷ್ಟಾಗಿಯೂ ರಾಜ್ಯದ ಜನತೆಯೇ ದಿಟ್ಟಿಸಿ ನೋಡುತ್ತಿದ್ದ ಬಹಿರಂಗ ವೇದಿಕೆಯಲ್ಲೇ ಮೋಸವೆಸಗುತ್ತಾರೆಂದರೆ ಸ್ಪರ್ಧೆಯ ಉದ್ದೇಶದ ಬಗ್ಗೆಯೇ ಅನುಮಾನ ಪಡಬೇಕಾಗುತ್ತದೆ. ಹೀಗೆ ಮೋಸವೆಸಗಿದರೆ ಆ ಮಕ್ಕಳ ಎಳೆಯ ಮನಸ್ಸಿನ ಮೇಲೆ ಎಂತಹ ಕೆಟ್ಟ ಪರಿಣಾಮವುಂಟಾಗಬಹುದು? ಗಹನವಾದ ಜಿಜ್ಞಾಸೆಯಲ್ಲಿ ತೊಡಗಿರುವಂತೆ ನಾಟಕೀಯವಾಗಿ ವರ್ತಿಸಿ ಮೋಸವೆಸಗುವ ಮುನ್ನ ರಾಜೇಶ್ ಕೃಷ್ಣನ್ ಯೋಚಿಸ ಬೇಕಿತ್ತು. ದೊಡ್ಡವರ ತಪ್ಪಿಗಾಗಿ ಮಕ್ಕಳನ್ನು ಕಟಕಟೆಗೆ ತಂದು ನಿಲ್ಲಿಸುವುದು ನಿಜಕ್ಕೂ ನೋವು ಕೊಡುವ ಕೆಲಸ. ಆದರೆ ಅನ್ಯಾಯವನ್ನು ಎತ್ತಿತೋರಿಸದಿದ್ದರೆ, ಚಾನೆಲ್‌ಗಳು ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಜನರಿಗೆ ಇಂತಹ ಟ್ಯಾಲೆಂಟ್ ಹಂಟ್‌ಗಳ ಬಗ್ಗೆ ಇರುವ ವಿಶ್ವಾಸವೇ ಹೊರಟು ಹೋಗುತ್ತದೆ.

ಇದು ಬರೀ ಲಿಟ್ಲ್ ಚಾಂಪ್ಸ್‌ವೊಂದರ ರಂಪವಲ್ಲ. ಮಲೆಯಾಳದ ಏಷ್ಯಾನೆಟ್ ಚಾನೆಲ್‌ನ 'ಐಡಿಯಾ ಸ್ಟಾರ್ ಸಿಂಗರ್"ನಂತಹ ಹಿಟ್ ಕಾರ್ಯಕ್ರಮವನ್ನು 'ಕಾನ್ಫಿಡೆಂಟ್ ಸ್ಟಾರ್ ಸಿಂಗರ್" ಹೆಸರಿನಲ್ಲಿ ಕನ್ನಡಕ್ಕೆ ತಂದಿರುವ 'ಸುವರ್ಣ ಚಾನೆಲ್" ಪ್ರಯತ್ನ ಸ್ತುತ್ಯರ್ಹವೇ ಆಗಿದ್ದರೂ ಅದು ಮ್ಯೂಸಿಕಲ್ ಟ್ಯಾಲೆಂಟ್ ಶೋನೋ, ಛದ್ಮವೇಶ ಸ್ಪರ್ಧೆಯೋ ಅಥವಾ ಡ್ಯಾನ್ಸ್ ಕಾಂಪಿಟೀಶನ್ನೋ ಎಂಬ ಅನುಮಾನವುಂಟಾಗುತ್ತದೆ. ರ್‍ಯಾಂಕ್ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಯಥಾವತ್ತಾಗಿ ಕಾಪಿ ಮಾಡಿ ಫೇಲಾಗಿರುವ ಉದಾಹರಣೆ ಎಲ್ಲಾದರೂ ಇದ್ದರೆ ಅದು 'ಕಾನ್ಫಿಡೆಂಟ್ ಸ್ಟಾರ್ ಸಿಂಗರ್" ಎಂದು ಕಾನ್ಫಿಡೆಂಟಾಗಿ ಹೇಳಬಹುದು. ಈ ಕಾರ್ಯಕ್ರಮದ ಉದ್ದೇಶ ಪ್ರತಿಭಾನ್ವೇಷಣೆಯೋ ಅಥವಾ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಕಸರತ್ತೋ ಎಂಬ ಅನುಮಾನ ಖಂಡಿತ ಕಾಡುತ್ತಿದೆ.

ಮಲೆಯಾಳದಲ್ಲಿ ಕಂಠಕ್ಕೆ ಒತ್ತುಕೊಟ್ಟರೆ ಕನ್ನಡದ ಸ್ಟಾರ್ ಸಿಂಗರ್‌ನಲ್ಲಿ ಕೋತಿ ಕುಣಿತಕ್ಕೇ ಮಣೆ. ಸಿಂಗಿಂಗ್‌ಗಿಂತ ಡ್ಯಾನ್ಸ್ ಬರುತ್ತೋ, ಮುಖ ಚೆನ್ನಾಗಿದೆಯೋ ಎಂಬುದನ್ನು ನೋಡುತ್ತಾರೆ. ಹಾಗಾಗಿಯೇ ರಂಜನಿ ಎಸ್. ಕೀರ್ತಿ, ಸಂಗೀತ ವರ್ಣೇಕರ್ ಎಂಬ ಒಂದಿಬ್ಬರು ಒಳ್ಳೆಯ ಹಾಡುಗಾರ್ತಿಯರು ಮೊದಲನೇ ಸುತ್ತಿನಲ್ಲೇ ಹೊರಹೋದರು. ಕಾರಣ ಹಾಡಲು ಬರುವುದಿಲ್ಲ ಅಂತಲ್ಲ, ಡ್ಯಾನ್ಸ್ ಬರುವುದಿಲ್ಲ ಅನ್ನುವ ಕಾರಣಕ್ಕೆ. 'ಐಡಿಯಾ"ದಲ್ಲಿ ಹಾಡುಗಾರಿಕೆಗೆ ಮೊದಲ ಆದ್ಯತೆಯಾದರೆ 'ಕಾನ್ಫಿಡೆಂಟ್" ನಲ್ಲಿ ನೃತ್ಯಕ್ಕೆ ಮೊದಲ ಸ್ಥಾನ. “ಬೆಳ್ಳಿ ಮೂಡಿತು, ಕೋಳಿ ಕೂಗಿತು...." ಅಂತ ಟರ್ರ್ssssss, ಟುರ್ರ್ssssss, ಕೊರ್ರ್ssssss ಅಂದರೆ, “ಜಿಂಕೆ ಮರೀನಾ, ನೀ ಜಿಂಕೆ ಮರೀನಾ " ಅಂತ ಗಂಟಲು ಕಿತ್ತುಕೊಳ್ಳುವಂತೆ ಅಸ್ಪಷ್ಟವಾಗಿ ಚೀರಾಡಿದರೆ... ಫೆಂಟಾಸ್ಟಿಕ್ ಎನ್ನುತ್ತಾ 80 ಮಾರ್ಕ್ಸ್ ಕೊಟ್ಟು ಬಿಡುತ್ತಾರೆ. ಹೆಸರು ಸ್ಟಾರ್ 'ಸಿಂಗರ್" ಆದರೂ ಚೆನ್ನಾಗಿ ಹಾಡುವವರೇ 'ಹಂಟ್" ಆಗುತ್ತಿದ್ದಾರೆ!

ಮೊನ್ನೆ 'ಝೀ ಲಿಟ್ಲ್ ಚಾಂಪ್ಸ್" ಕಾರ್ಯಕ್ರಮದ ಫೈನಲ್‌ಗೆ ಜಡ್ಜ್ ಆಗಿ ಆಗಮಿಸಿದ್ದ ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿಯವರು, ವಿವಿಧ ರಾಗಗಳಲ್ಲಿ ಹಾಡುವಂತೆ ಸೂಚಿಸುತ್ತಿದ್ದ ರಾಜೇಶ್ ಕೃಷ್ಣನ್ ಅವರನ್ನು ಹೊಗಳುತ್ತಾ ಹೇಳಿದ ಮಾತು ಅಕ್ಷರಶಃ ಸತ್ಯ- “ನೀವು ಚಂದ ಡ್ರೆಸ್ ಮಾಡಿಕೊಂಡು, ಫಾಸ್ಟ್ ಬೀಟ್ ಹಾಡುಗಳನ್ನು ಹಾಡಿಕೊಂಡು ಫನ್ ಮಾಡಿದ ಕೂಡಲೇ ಉತ್ತಮ ಗಾಯಕರಾಗುವುದಿಲ್ಲ. ಅದಕ್ಕೆ ಕ್ಲಾಸಿಕಲ್, ಮೆಲೋಡಿ, ಲಯ ಪ್ರಧಾನ ಗೀತೆ ಎಲ್ಲ ಪ್ರಕಾರಗಳಲ್ಲೂ ಹಿಡಿತ ಇರಬೇಕು. ಫಾಸ್ಟ್ ಹಾಡುಗಳಲ್ಲಿ ಹಾವಭಾವವೇ ಗಣನೆಯಾಗುತ್ತದೆ. ಆದರೆ ವಿದ್ವತ್ತು ಗೊತ್ತಾಗುವುದಿಲ್ಲ" ಎಂದಿದ್ದರು. ಇದು ಹತ್ತಾರು ಚಿತ್ರಗಳಿಗೆ ಸಂಗೀತ ನೀಡಿರುವ, ಕಾನ್ಫಿಡೆಂಡ್ ಸ್ಟಾರ್ ಸಿಂಗರ್‌ನ 'ಸ್ಟಾರ್" ಜಡ್ಜ್" ಆಗಿರುವ ಗುರುಕಿರಣ್‌ಗೆ ಏಕೆ ಅರ್ಥವಾಗುವುದಿಲ್ಲ? “ನಿನ್ನ ಕಾಸ್ಟ್ಯೂಮ್ ಚೆನ್ನಾಗಿದೆ... ನೀನು ಚೆನ್ನಾಗಿ ಕಾಣುತ್ತಿದ್ದೀಯ... ನಿನ್ನ ಸ್ಕರ್ಟ್ ಚೆನ್ನಾಗಿದೆ, ಆದರೆ ಚಪ್ಪಲಿ ಚೆನ್ನಾಗಿಲ್ಲ.."-ಇವುಗಳನ್ನು ಬಿಟ್ಟು ಗುರುಕಿರಣ್ ಮ್ಯೂಸಿಕ್ ಬಗ್ಗೆ ಕಾಮೆಂಟ್ ಮಾಡುವುದು ಯಾವಾಗ?

ಅವರಿಗೆ ಟ್ಯಾಲೆಂಟ್ ಶೋಗೂ, ರ್‍ಯಾಂಪ್ ಶೋಗೂ ಇರುವ ವ್ಯತ್ಯಾಸವೇ ಗೊತ್ತಿಲ್ಲವೆ? ಇನ್ನು ಮತ್ತೊಬ್ಬ ಜಡ್ಜ್ ಆಗಿರುವ ನಂದಿತಾ ಅವರಿಗೆ ಶಾಸ್ತ್ರೀಯ ಸಂಗೀತದ ವಿದ್ವತ್ತಿದೆ, ಸಿನಿಮಾ ಸಂಗೀತದ ಅನುಭವವಿದೆ. ಆದರೆ ಅವರ ಮಾತುಗಳನ್ನು ಕೇಳಿದರೆ ಯಾರಿಗೂ ಹಾಗನ್ನಿಸುವುದೇ ಇಲ್ಲ! ವಿದ್ವತ್ತನ್ನು ಮಕ್ಕಳಿಗೆ ಧಾರೆಯೆರೆಯುವುದಕ್ಕೆ ಅದೇನೋ ಔದಾಸೀನ್ಯ. ಇಂತಹವರಿಂದ ಪ್ರತಿಭಾನ್ವೇಷಣೆ ಹೇಗೆ ಸಾಧ್ಯ? ಇದ್ದುದರಲ್ಲಿ ಪ್ರವೀಣ್ ಡಿ. ರಾವ್ ಪ್ರಬುದ್ಧವಾಗಿ ಟಿಪ್ಪಣಿ ಮಾಡುತ್ತಾರೆ. ಅವರ ಟೀಕೆ-ಟಿಪ್ಪಣಿಗಳಲ್ಲಿ ತೂಕವಿರುತ್ತದೆ.

ಅಲ್ಲಿ ಶ್ರುತಿ ತಪ್ಪಿತು, ಇಲ್ಲಿ ರಾಗ ಎಳೆಯುವ ಅಗತ್ಯವಿರಲಿಲ್ಲ ಅಂತ ನಿರ್ಣಾಯಕರು ಕುಳಿತಲ್ಲೇ ಕಾಮೆಂಟ್ ಮಾಡುವ ಬದಲು ಸ್ವತಃ ಹಾಡಿ ತಪ್ಪನ್ನು ಮನವರಿಕೆ ಮಾಡಿಕೊಟ್ಟರೆ ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಬಟ್ಟೆ ನೋಡುವ ಬದಲು ಬೆತ್ತಲು ಧ್ವನಿಯನ್ನು ಪರೀಕ್ಷಿಸುವುದು ಒಳ್ಳೆಯದು. ಅಷ್ಟಕ್ಕೂ ಬಟ್ಟೆ ಹಾಕಲೂ ಗತಿಯಿಲ್ಲದ ಸನ್ನಿಧಾನ್ ಎಂಬ ಶಬರಿಮಲೆ ಆಯಾ ಮಗ 'ಐಡಿಯಾ ಸ್ಟಾರ್ ಸಿಂಗರ್"ನಲ್ಲಿ ಟಾಪ್-10ರವರೆಗೂ ಬಂದಿದ್ದ. ಅಲ್ಲಿ ಪ್ರತಿಭೆಯಿದ್ದರೆ ಸಾಕು, ಸಾಣೆ ಹಿಡಿಯುವ ಕೆಲಸವನ್ನು ಜಡ್ಜ್‌ಗಳು ಮಾಡು ತ್ತಾರೆ. 'ಐಡಿಯಾ ಸ್ಟಾರ್ ಸಿಂಗರ್"ನಿಂದ ನಮ್ಮ 'ಎದೆ ತುಂಬಿ ಹಾಡುವೆನು" ಕಾರ್ಯಕ್ರಮದ ಆಯೋಜಕರೂ ಕಲಿಯುವುದು ಸಾಕಷ್ಟಿದೆ. ನಿಜವಾದ ಪ್ರತಿಭೆಗಳನ್ನು ಹೇಗೆ ಹುಡುಕಬಹುದು ಎಂಬುದನ್ನು ಕನ್ನಡದಲ್ಲಿ ಮೊದಲಿಗೆ ತೋರಿಸಿಕೊಟ್ಟಿದ್ದು ಖಂಡಿತ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರೇ. ಆದರೆ ನಾಲ್ಕೈದು ವರ್ಷಗಳಿಂದ ಪುನರಾವರ್ತನೆಯಾಗುತ್ತಿರುವ ಎಸ್ಪಿಯವರ ಸಿಹಿ ಸಿಹಿ ಮಾತುಗಳು, ಅದೇ ಹೊಗಳಿಕೆ, ಅದೇ ಕಿಚಾಯಿಸುವಿಕೆಗಳು ಪ್ರೇಕ್ಷಕರು ಏಕತಾನತೆಯಿಂದ ನರಳುವಂತೆ ಮಾಡುತ್ತಿದೆ.

ಮಲೆಯಾಳದ 'ಸ್ಟಾರ್ ಸಿಂಗರ್" ಕೂಡ ಎರಡೂವರೆ ವರ್ಷಗಳಿಂದ ಪ್ರಸಾರವಾಗುತ್ತಿದ್ದರೂ ಫ್ಯೂಶನ್, ರೀಮಿಕ್ಸ್, ಪರ್ಫಾರ್ಮೆನ್ಸ್ ರೌಂಡ್(ಹಾಡಿನ ಜತೆ ನೃತ್ಯ), ಶಾಸ್ತ್ರೀಯ ಸಂಗೀತ, ಫಿಲ್ಮೀ ಸಾಂಗ್ಸ್, ನಾನ್ ಫಿಲ್ಮೀ ಸಾಂಗ್ಸ್, ಗಝಲ್, ಮಿಕ್ಸ್ ಮಸಾಲಾ ಎಂಬಿತ್ಯಾದಿ ವೈವಿಧ್ಯಗಳನ್ನು ತರುವ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸುವಲ್ಲಿ, ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಯಾಗಿದೆ. 'ಎದೆ ತುಂಬಿ ಹಾಡುವೆನು" ಇಲ್ಲಿ ಸೋತಿದೆ, ಹಳಸಿದೆ. ಹಾಗಾಗಿ ಅನುಭವದ ಗಣಿಯಾದ ಎಸ್ಪಿಯವರನ್ನೇ ಇಟ್ಟುಕೊಂಡು ಹೊಸದರ ಬಗ್ಗೆ ಯೋಚಿಸಬೇಕಾಗಿದೆ. ಇತ್ತೀಚೆಗೆ ಈಟೀವಿಯಲ್ಲಿಯೇ 'ವಾಯ್ಸ್ ಆಫ್ ಕರ್ನಾ ಟಕ" ಎಂಬ ಮತ್ತೊಂದು ಕಾರ್ಯಕ್ರಮ ಆರಂಭವಾಗಿ ದ್ದರೂ ಕೂಡ 'ಎದೆತುಂಬಿ ಹಾಡುವೆನು"ಗಿಂತ ವಿಭಿನ್ನವಾಗಿಲ್ಲದಿರುವುದರಿಂದ ಪೇಲವವೆನಿಸಿ ಬಿಡುತ್ತದೆ. ಹಾಗಾಗಿ ಜನರನ್ನು ತಲುಪುವಲ್ಲಿ ಸೋತಿದೆ. ಇನ್ನು ಜಾತಿ ರಾಜಕೀಯದಿಂದ ನರಳಿದ ಕಸ್ತೂರಿ ಚಾನೆಲ್‌ನ 'ಸಪ್ತಸ್ವರ" ಮತ್ತು ಕಳಪೆ ಆರ್ಕೆಸ್ಟ್ರಾದಂತಿರುವ 'ಹಾಡಿನ ಬಂಡಿ"ಯ ಬಗ್ಗೆ ಮಾತನಾಡಿದರೆ ಸಮಯ ವ್ಯರ್ಥವಾಗುತ್ತದೆ, ಬರೆದರೆ ಜಾಗ ಹಾಳಾಗುತ್ತದೆ ಅಷ್ಟೇ.

ಇದೇನೇ ಇರಲಿ, ಕರ್ನಾಟಕಕ್ಕಿಂತಲೂ ಪುಟ್ಟ ರಾಜ್ಯವಾದ ಕೇರಳದಲ್ಲಿ ಇಷ್ಟೆಲ್ಲಾ ಪ್ರತಿಭೆಗಳು ಹೊರಹೊಮ್ಮಬಹು ದಾಗಿದ್ದರೆ 'ಕರ್ನಾಟಕ ಶಾಸ್ತ್ರೀಯ ಸಂಗೀತ"ದ ಉಗಮ ಸ್ಥಾನವಾದ, ಭಾವಗೀತೆ ಪರಂಪರೆಯನ್ನು ಬೆಳೆಸಿದ ನಮ್ಮ ಕನ್ನಡ ನಾಡಿನಲ್ಲಿ ಪಿಬಿ, ಎಸ್ಪಿ, ಜಾನಕಿ, ಚಿತ್ರಾ ಅವರಂತಹ ಒಬ್ಬ ಗಾಯಕರೂ ಏಕೆ ಹುಟ್ಟುತ್ತಿಲ್ಲ ಅಂದರೆ ಇದಕ್ಕೇ. ನಾವು ಸಂಗೀತ ಕಾರ್ಯಕ್ರಮಗಳನ್ನು ಮನರಂಜನೆಯಂತೆ ಕಾಣುತ್ತೇವೆ, ಅವರು ತಪಸ್ಸಿನಂತೆ ಆರಾಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜಡ್ಜ್‌ಗಳ, ಕಾರ್ಯಕ್ರಮ ಆಯೋಜಕರ ಉದ್ದೇಶ ಮೊದಲು ಬದಲಾಗಬೇಕಿದೆ. 'ಮ್ಯೂಸಿಕಲ್ ಟ್ಯಾಲೆಂಟ್ ಶೋ"ಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ನೀಡುವಾಗಲೂ ಸಂಗೀತದ ಬಗ್ಗೆ ಕನಿಷ್ಠ ಜ್ಞಾನ, ಗೌರವ ಇರುವವರಿಗೆ ನೀಡುವುದೊಳಿತು. ಇನ್ನು ಶೋ ಕ್ಲಿಕ್ ಆಗಬೇಕು ಅಂತ ಜೋಕರ್‌ಗಳಿಗೆ, ಡ್ಯಾನ್ಸರ್‌ಗಳಿಗೆ ಜಾಸ್ತಿ ಅಂಕ ನೀಡುವುದನ್ನು ಬಿಟ್ಟು ಸಿಂಗಿಂಗ್ ಟ್ಯಾಲೆಂಟ್‌ಗೆ ಪ್ರಾಧಾನ್ಯತೆ ನೀಡಬೇಕು. ಆಗ ಮಾತ್ರ ಸಂಗೀತ ಕ್ಷೇತ್ರಕ್ಕೆ ಹೊಸತಾರೆಗಳು ಸಿಗಲು, ಸಂಗೀತ ಕ್ಷೇತ್ರ ಶ್ರೀಮಂತಗೊಳ್ಳಲು ಸಾಧ್ಯ. ಕಾರ್ಯಕ್ರಮವನ್ನು ಆಯೋಜಿಸಿದವರಿಗೂ, ಪ್ರೇಕ್ಷಕರಿಗೂ, ಹಾಡಿದವರಿಗೂ ತೃಪ್ತಿಯಾಗುವುದು, ಧನ್ಯತಾ ಭಾವನೆ ಮೂಡುವುದೂ ಆಗಷ್ಟೆ. ಹಾಗಾಗಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಏನೆಲ್ಲಾ ಕಸರತ್ತು ಮಾಡುವು ದನ್ನು ನಿಲ್ಲಿಸಬೇಕು. ಅಷ್ಟಕ್ಕೂ ಸಿಂಗಿಂಗ್ ಚೆನ್ನಾಗಿದ್ದರೆ ಟಿಆರ್‌ಪಿ ತಾನಾಗಿಯೇ ಹೆಚ್ಚಾಗುತ್ತದೆ ಎಂಬುದಕ್ಕೆ ಮಲೆಯಾಳದ 'ಐಡಿಯಾ ಸ್ಟಾರ್ ಸಿಂಗರ್"ಗಿಂತ ಉತ್ತಮ ಉದಾಹರಣೆ ಇನ್ನೇನು ಬೇಕು?

(ಸ್ನೇಹ ಸೇತು :ವಿಜಯಕರ್ನಾಟಕ)

ಪೂರಕ ಓದಿಗೆ:

ಸಂಗೀತದ ನೆಪದಲ್ಲಿ ಜಿದ್ದಿಗೆ ಬಿದ್ದ ಟಿವಿ ಮಾಧ್ಯಮ

ಬಾಲುರಿಂದಲೂ ಒಂದು ಬಾರಿ ತಪ್ಪು ನಡೆದಿತ್ತು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more