• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಯಾಲಿಟಿ ಶೋನೋ?ಅಥವಾ ಇದೇನಿದು ತಮಾಷೆನೋ?

By Staff
|

ಸ್ವಂತಿಕೆ ಇಲ್ಲದೆ ಯಾವುದೇ ಕಾರ್ಯಕ್ರಮವನ್ನು ಮಾಡಿದರೆ ಅದು ತೋಪಾಗುತ್ತದೆ ಎನ್ನುವುದಕ್ಕೆ ಶಾಹ್‌ರುಖ್ ಖಾನ್ ಮಾಡಿದ್ದ ಕೌನ್ ಬನೇಗಾ ಕರೋಡಪತಿಯೇ ಸಾಕ್ಷಿ. ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಹಲ್ಲಾಗುಲ್ಲಾ ಎಬ್ಬಿಸಿದ್ದ ಶಿಲ್ಪಾ ಶೆಟ್ಟಿಯನ್ನು ಇಂಗ್ಲೆಂಡಿನಲ್ಲೇ ಕೇಳುವವರು ಇಲ್ಲ. ಸ್ವಂತಿಕೆ ಇದ್ದಕ್ಕಕ್ಕಾಗಿಯೇ ಲತಾ, ಕಿಶೋರ್‌ರ ಧ್ವನಿ ಇನ್ನೂ ಅಮರವಾಗಿದೆ. ಈಗಿನ ಟೆಕ್ನಾಲಜಿ ಕೂ‌ಡ ಟೋಪಿ ಇದ್ದ ಹಾಗೆ. ಟೋಪಿ ತೆಗೆದಾಗಲೇ ಅಲ್ವಾ ತಲೆಯಲ್ಲಿ ಕೂದಲೆಷ್ಟಿವೆ ಅಂತ ಗೊತ್ತಾಗುವುದು?

  • ಪ್ರತಾಪ್ ಸಿಂಹ

ಜೀ ಸಾರೆಗಮಪಾ ಪ್ರಶಸ್ತಿ ವಿಜೇತ ಅನೀಕ್ , ನಟ ಅಕ್ಷಯ್ ಜತೆಬೇಟಾ, ತುಮ್ಹೆ ಕ್ಯಾ ಚಾಹಿಯೇ? ಕಿತ್ನಾ ಚಾಹಿಯೇ?

ಪೂರೇ ದಸ್!

ಪೂರೇ ದಸ್ ದೇದೂಂಗಾ. ಬೇಟಾ ಅಮಾನತ್, ನೀನು ಹಾಡುವುದಕ್ಕಿಂತ ಮೊದಲೇ ನಿನಗೆ ಹತ್ತು ಮಾರ್ಕ್ಸ್ ಕೊಡುತ್ತಿದ್ದೇನೆ. ಒಂದು ವೇಳೆ ಅವಕಾಶವಿದ್ದಿದ್ದರೆ ನೀನು ಕೇಳಿದಷ್ಟು ಕೊಡುತ್ತಿದ್ದೆ...

ಫೆಂಟಾಸ್ಟಿಕ್, ಸುಪರ್ಬ್, ಮೈಂಡ್‌ಬ್ಲೋಯಿಂಗ್-ಟೆನ್ ಪಾಯಿಂಟ್ಸ್! ಬೇಟಾ ಆನೀಕ್, ವಿಶಾಲ್‌ಜಿ ಔರ್ ಶೇಖರ್‌ಜೀ ಕಾ ಆಶೀರ್ವಾದ್ ಲೋ....

ಒಂದು ವೇಳೆ ನೀವೇನಾದರೂ 'ಝೀ ಸರೆಗಮ" ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಬಂದಿದ್ದರೆ ಇಸ್ಮಾಯಿಲ್ 'ಫಕೀರ್" ದರ್ಬಾರ್ ಮತ್ತು ಹಿಮೇಶ್ ಬೇಶರ್ಮಿಯಾ ಅಲ್ಲಲ್ಲಾ, ರೇಶಮ್ಮಿಯಾ ಅವರ ಇಂತಹ ಮಾತುಗಳು ಖಂಡಿತ ನಿಮಗೂ ಬಾಯಿಪಾಠ ಆಗಿರುತ್ತವೆ! ಅಷ್ಟೇ ಅಲ್ಲ, “ಉಪರ್‌ವಾಲಾ", “ಭಗವಾನ್ ಸೇ ಪ್ರಾರ್ಥನಾ ಕರೋ", “ಅಗರ್ ಜನತಾ ಕೀ ಪ್ಯಾರ್ ತುಮ್ಹಾರಾ ಸಾಥ್ ಹೇ ತೋ, ವೋಟ್ ಜರೂರ್ ಮಿಲೇಗಾ" ಎಂಬ ಮಾತುಗಳನ್ನು ಕೇಳಿ ನೀವೂ ಕೂಡ ಒಮ್ಮೆಯಾದರೂ ಮಂಗನಾಗಿರುತ್ತೀರಿ, ಅಲ್ವಾ? ನೀವು ಕಳುಹಿಸುವ ಪ್ರತಿ ಎಸ್‌ಎಂಎಸ್‌ಗೂ ತಲಾ 6 ರೂ. ದಂಡ ಹಾಕುತ್ತಾರೆ. ಅದರಲ್ಲಿ 2 ರೂಪಾಯಿ ಮೊಬೈಲ್ ಸೇವೆ ಒದಗಿಸುವ ಕಂಪನಿಯ ಪಾಲಾದರೆ, 4 ರೂ. ಚಾನೆಲ್‌ಗಳ ಕಿಸೆಗಿಳಿದಿರುತ್ತದೆ.

ಮೊನ್ನೆ ಅಕ್ಟೋಬರ್ 13ರಂದು ನಡೆದ 'ಸರೆಗಮಪ" ಫೈನಲ್‌ಗೆ ಕಳುಹಿಸಲಾದ ಒಟ್ಟು ಎಸ್‌ಎಂಎಸ್‌ಗಳ ಸಂಖ್ಯೆ 10 ಕೋಟಿಗೂ ಹೆಚ್ಚು ಎಂದರೆ ನಂಬುತ್ತೀರಾ?

ಇದು ಯಾವುದೋ ಒಂದು ಚಾನೆಲ್ ಮಾತ್ರ ಮಾಡುತ್ತಿರುವ ಗಿಮಿಕ್ ಅಲ್ಲ. 'ಸ್ಟಾರ್ ಪ್ಲಸ್"ನ “ಅಮೂಲ್ ವಾಯ್ಸ್ ಆಫ್ ಇಂಡಿಯಾ", 'ಸೋನಿ" ಟೀವಿಯ “ಇಂಡಿಯನ್ ಐಡಲ್" ಶೋ ಗಳೂ ಕೂಡ ಇಂತಹ ಗಿಮಿಕ್ ಹಾಗೂ ಮಿಮಿಕ್‌ಗಳೇ. ಇವುಗಳಿಂದ ಸಂಗೀತ ಕ್ಷೇತ್ರಕ್ಕೆ ಭಾರೀ ದೊಡ್ಡ ಕೊಡುಗೆ ದೊರೆಯುತ್ತಿದೆ ಎಂದು ಭಾವಿಸಿದ್ದರೆ ಖಂಡಿತ ತಪ್ಪಾಗುತ್ತದೆ. ಕಳೆದ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ರಿಯಾಲಿಟಿ ಶೋಗಳಲ್ಲಿ ಜಯಿಸಿರುವ ಯಾವುದೇ ಹಾಡುಗಾರರೂ ಪ್ಲೇಬ್ಯಾಕ್ ಸಿಂಗರ್ ಆಗಿಲ್ಲ.

ಮೊದಲ 'ಇಂಡಿಯನ್ ಐಡಲ್" ಕಾರ್ಯಕ್ರಮದಲ್ಲಿ ರನ್ನರ್-ಅಪ್ ಆಗಿದ್ದ ಛತ್ತೀಸ್‌ಗಢದ ಅಮಿತ್ ಸಾನಾ, “ಫೇಮ್ ಗುರುಕುಲ್" ಎಂಬ ಮತ್ತೊಂದು ಶೋನಲ್ಲಿ ಗೆಲುವು ಸಾಧಿಸಿದ್ದ ಕಾಶ್ಮೀರದ ತೌಕಿರ್ ಖಾಝಿ ಜತೆ ಸೇರಿ ತನ್ನದೇ ಆದ ಆಲ್ಬಮ್ ಅನ್ನು ಹೊರತಂದು ಬೀದಿಗೆ ಬಂದಿದ್ದಾನೆ. ಕೈಯಲ್ಲಿದ್ದ ಕಾಸನ್ನೂ ಕಳೆದುಕೊಂಡು ಸಾಲದಲ್ಲಿ ಮುಳುಗಿದ್ದಾನೆ. ಅಷ್ಟೇಕೆ, ಮೊದಲ 'ಇಂಡಿಯನ್ ಐಡಲ್" ಎನಿಸಿದ ಅಭಿಜಿತ್ ಸಾವಂತ್ ಅವರ ಮೊದಲ ಆಲ್ಬಮ್ ತಕ್ಕಮಟ್ಟಿಗೆ ಯಶಸ್ಸು ಕಂಡರೂ ಹಿನ್ನೆಲೆ ಗಾಯಕನಾಗಲು ಆತನಿಗೂ ಸಾಧ್ಯವಾಗಿಲ್ಲ. ಕಳೆದ ವರ್ಷದ 'ಸರೆಗಮಪ" ವಿಜೇತ ದೇಬಜಿತ್ ಚಟರ್ಜಿ ಹೊರತಂದ ಆಲ್ಬಮ್ ಕೂಡ ಹೇಳಹೆಸರಿಲ್ಲದಂತಾಗಿದೆ. ಇತ್ತೀಚೆಗಷ್ಟೇ 'ಇಂಡಿಯನ್ ಐಡಲ್" ಆಗಿ ಹೊರಹೊಮ್ಮಿರುವ ಪ್ರಶಾಂತ್ ತಮಾಂಗ್ ಹಾಗೂ ರನ್ನರ್- ಅಪ್ ಅಮಿತ್ ಪಾಲ್ ಅವರ ಭವಿಷ್ಯವೂ ಇದಕ್ಕಿಂತ ಹೊರತಾಗಿರುವುದಿಲ್ಲ.

ಅಷ್ಟಕ್ಕೂ ಇವರು SMS Winnerಗಳಷ್ಟೇ!

ಮೂರು ವರ್ಷಗಳ ಹಿಂದೆ ಪ್ರಾರಂಭವಾದ 'ಇಂಡಿಯನ್ ಐಡಲ್", ಎರಡು ವರ್ಷಗಳ ಹಿಂದೆ ರಿಯಾಲಿಟಿ ಶೋ ಆಗಿ ಪರಿವರ್ತನೆಯಾದ 'ಸರೆಗಮಪ" ಹಾಗೂ ಸ್ಟಾರ್ ಪ್ಲಸ್ ಚಾನೆಲ್‌ನ ಸಂಗೀತ ಕಾರ್ಯಕ್ರಮಗಳು ಹೆಸರಿಗೆ “ಟ್ಯಾಲೆಂಟ್ ಶೋ"ಗಳೆಂಬ ಬೋರ್ಡು ಹಾಕಿಕೊಂಡಿದ್ದರೂ ಅವುಗಳ ಉದ್ದೇಶ ಸ್ಪರ್ಧಿಗಳಲ್ಲಿರುವ ಪ್ರತಿಭೆಯನ್ನು ಹೊರತರುವುದಲ್ಲ, ಚಂದವಾದ ನಿರೂಪಣೆ ಮತ್ತು ಮಾರ್ಕೆಟಿಂಗ್ ಮೂಲಕ ವೀಕ್ಷಕರನ್ನು ಮಂಗ ಮಾಡಿ ಎಸ್‌ಎಂಎಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ! ಈ ಮಾತನ್ನು ಏಕೆ ಹೇಳಬೇಕಾಗಿದೆಯೆಂದರೆ, ಒಮ್ಮೆ ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಿದ ನಂತರ ಅವರು ಪ್ರತಿನಿಧಿಸುವ ಸ್ಥಳಗಳನ್ನು ಪರಿಚಯ ಮಾಡಿಕೊಡುತ್ತಾರೆ. ಇದೂ ಕೂಡ ರಾಜಕೀಯದಂತೆಯೇ ವೋಟ್ ಬ್ಯಾಂಕ್ ತಂತ್ರ! ಅಂದರೆ ಪ್ರಾದೇಶಿಕ ಭಾವನೆಯನ್ನು ಬಡಿದೆಬ್ಬಿಸುವ ಮೂಲಕ ತಮ್ಮ ತಮ್ಮ ರಾಜ್ಯದ ಸ್ಪರ್ಧಿಗಳಿಗೆ ಜನ ಎಸ್‌ಎಂಎಸ್ ಮಾಡುವಂತೆ ಪ್ರೇರೇಪಿಸುತ್ತಾರೆ.

ಕಳೆದ ವರ್ಷ ದೇಬಜಿತ್ ಚಟರ್ಜಿ ಸರೆಗಮಪ ಸ್ಪರ್ಧೆಯ ಫೈನಲ್ ತಲುಪಿದಾಗ ಅಸ್ಸಾಂ ಪ್ರತ್ಯೇಕತಾವಾದಿ ಸಂಘಟನೆಯಾದ ಉಲ್ಫಾ ಕೂಡ ದೇಬಜಿತ್ ಪರವಾಗಿ ಎಸ್‌ಎಂಎಸ್ ಮಾಡುವಂತೆ ಬಹಿರಂಗ ಕರೆ ನೀಡಿತ್ತು. ಏಕೆಂದರೆ ದೇಬಜಿತ್ ಅಸ್ಸಾಮಿಯಾಗಿದ್ದ. ಇತ್ತೀಚೆಗೆ 'ಇಂಡಿಯನ್ ಐಡಲ್" ಆಗಿ ಹೊರಹೊಮ್ಮಿರುವ ಪ್ರಶಾಂತ್ ತಮಾಂಗ್ ಪರವಾಗಿ ಎಸ್‌ಎಂಎಸ್ ಮಾಡುವಂತೆ ಜನರಿಗೆ ಬಹಿರಂಗ ಕರೆ ನೀಡಿದ್ದಲ್ಲದೆ ಡಾರ್ಜಿಲಿಂಗ್‌ನ ಬೀದಿ ಬೀದಿಗಳಲ್ಲಿ ಫೋನ್ ಬೂತ್ ತೆರೆದು ಉಚಿತವಾಗಿ ಎಸ್‌ಎಂಎಸ್ ಮಾಡಲು ಅನುಕೂಲ ಕಲ್ಪಿಸಲಾಗಿತ್ತು! ಇದರಿಂದ ಯಾರಿಗೆ ಲಾಭ?

ಹಿಮ್ಮೇಶ್ ರೇಶಮ್ಮಿಯಾಇದಷ್ಟೇ ಅಲ್ಲ, ಚಾನೆಲ್‌ಗಳು ಸ್ಪರ್ಧಿಗಳ ನಡುವೆ ಪ್ರೇಮ ಕಥೆಗಳನ್ನು ಹೆಣೆಯುತ್ತವೆ. ಸರೆಗಮಪ ಕಾರ್ಯಕ್ರಮದಲ್ಲಂತೂ ಹಿಮೇಶ್ ರೆಶಮ್ಮಿಯಾ ಅವರು ಸುಮೇದಾ ಮತ್ತು ಆನೀಕ್ ನಡುವೆ ಪ್ರೇಮಕಥೆ ಹೆಣೆದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮೇದಾಳ ತಂದೆ-ತಾಯಿಯ ಎದುರೇ ನಿಮ್ಮ ಮಗಳು ಫ್ಲರ್ಟ್ ಮಾಡುತ್ತಿದ್ದಾಳೆ ಎಂದು ಹೇಳಿದರೆ ಮನಸ್ಸಿಗೆ ಹೇಗಾಗಬಹುದು? ಚಾನೆಲ್‌ಗಳು ಯಾವುದಕ್ಕೂ ಕ್ಯಾರೆ ಎನ್ನುವುದಿಲ್ಲ. ಅವುಗಳ ಏಕಮಾತ್ರ ಉದ್ದೇಶ ಎಸ್‌ಎಂಎಸ್ ಹೆಚ್ಚಿಸಿಕೊಳ್ಳುವುದು. ಕೆಲವೊಮ್ಮೆ ಪ್ರೇಮಕಥೆಗಳನ್ನು ಬಿಟ್ಟು ಸ್ಪರ್ಧಿಗಳ ಡ್ರೆಸ್ ಬಗ್ಗೆ ಕಿತ್ತಾಡಲು ಆರಂಭಿಸುತ್ತಾರೆ. ಅಲ್ಲದೆ ಕೌಟುಂಬಿಕ ಹಿನ್ನೆಲೆ ತೋರಿಸಿ ಕಣ್ಣಲ್ಲಿ ನೀರೂರಿಸುತ್ತವೆ. ಆಕೆ/ಆತನಿಗೆ ನಿಮ್ಮ ಪ್ರೀತಿ-ಪೋತ್ಸಾಹ ಬೇಕು ಎಂದು ನಿಮ್ಮನ್ನು ಪುಸಲಾಯಿಸಿ ಎಸ್‌ಎಂಎಸ್ ಮಾಡಿಸುತ್ತವೆ!

ಇದನ್ನೆಲ್ಲಾ ನೋಡುತ್ತಿದ್ದರೆ, ಅದು ಸಂಗೀತ ಕಾರ್ಯಕ್ರಮವೋ, ಫ್ಯಾಶನ್ ಶೋನೋ ಅಥವಾ ಯಾವುದೋ ಸುದ್ದಿ ಚಾನೆಲ್ಲೋ? ಎಂಬ ಗೊಂದಲ ಕಾಡಲು ಆರಂಭವಾಗುತ್ತದೆ. ಇನ್ನು ಇಂತಹ ರಿಯಾಲಿಟಿ ಶೋಗಳಿಗೆ ಆಗಮಿಸುವ ಜಡ್ಜ್‌ಗಳೂ ಅಂತಹವರೇ ಆಗಿರುತ್ತಾರೆ. ಹಾಡಿನ ಮಧ್ಯೆ "Sing with me" ಅಥವಾ "Put your hands up" ಎಂದು ಹೇಳುವಂತೆ ಸ್ಪರ್ಧಿಗಳ ಮೇಲೆ ಒತ್ತಡ ಹೇರುತ್ತಾರೆ. ಸ್ಪರ್ಧಿಗಳು ಹಾಡು ಹೇಳಬೇಕೋ ಅಥವಾ ವೀಕ್ಷಕರನ್ನು ಸೆಳೆಯುವ ತಂತ್ರದಲ್ಲಿ ನಿರತರಾಗಬೇಕೋ? ಇವುಗಳ ಮಧ್ಯೆ, ತೀರ್ಪುಗಾರರ ನಾಟಕವನ್ನೂ ನಾವು ಸಹಿಸಿ ಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಬರುವವರು ಕಮರ್ಷಿಯಲ್ ಸಂಗೀತ ನಿರ್ದೇಶಕರು ಇಲ್ಲವೇ, Frustrated singers(ಜಾವೆದ್ ಅಖ್ತರ್ ಒಬ್ಬರನ್ನು ಈ ಗುಂಪಿನಿಂದ ಹೊರತುಪಡಿಸಬಹುದು). ಹಾಗಾಗಿ ಗಿಮಿಕ್‌ಗಳೇ ಹೆಚ್ಚಾಗುತ್ತವೆ. ಅದರಲ್ಲೂ 'ಇಂಡಿಯನ್ ಐಡಲ್"ನ ತೀರ್ಪುಗಾರರಾಗಿದ್ದ ಅಲಿಶಾ ಚಿನಾಯ್ ಹಾಗೂ ಅನುಮಲಿಕ್ ಆರೋಪ-ಪ್ರತ್ಯಾರೋಪದಲ್ಲೇ ಕಾಲಹರಣ ಮಾಡುತ್ತಿದ್ದರು. ಇತ್ತ 'ಅಮೂಲ್ ವಾಯ್ಸ್ ಆಫ್ ಇಂಡಿಯಾ"ದ ಜಡ್ಜ್ ಅಲ್ಕಾ ಯಾಗ್ನಿಕ್ ಅವರು ಪ್ರತಿ ಎಪಿಸೋಡ್‌ಗಳಲ್ಲೂ ಒಂದೊಂದು ನಾಟಕವಾಡುತ್ತಾರೆ.

ಒಮ್ಮೆಯಂತೂ ಹಾಡುಗಾರರೊಬ್ಬರು ಸ್ಪರ್ಧೆಯಿಂದ ಹೊರಬಿದ್ದಾಗ ನಿರೂಪಕ ಶಾನ್ ಬಿಕ್ಕಳಿಸಿ ಅತ್ತಿದ್ದರು! ಹೀಗೆ ಸ್ಪರ್ಧೆಯಿಂದ ಹೊರಬಿದ್ದಾಗ ಕೆಲವೊಮ್ಮೆ ತೀರ್ಪುಗಾರರಲ್ಲೇ ಒಬ್ಬರು ಮುಂದೆ ಬಂದು 'ನಿನಗೆ ನಾನು ಅವಕಾಶ ನೀಡುತ್ತೇನೆ" ಎಂದು ಘೋಷಿಸುವುದನ್ನು ನೀವು ಗಮನಿಸಿರಬಹುದು. ಆದರೆ ಕಳೆದ ವರ್ಷ ನಡೆದ 'ಇಂಡಿಯನ್ ಐಡಲ್" ಕಾರ್ಯಕ್ರಮದಲ್ಲಿ ರನ್ನರ್-ಅಪ್ ಆಗಿದ್ದ ಎನ್.ಸಿ. ಕಾರುಣ್ಯ ಅವರಿಗೆ ಅವಕಾಶ ನೀಡುವುದಾಗಿ ಅನುಮಲಿಕ್ ಮಾಡಿದ್ದ ವಾಗ್ದಾನ ವರ್ಷ ಕಳೆದರೂ ಘೋಷಣೆಯಾಗಿಯೇ ಉಳಿದಿದೆ! ಅಂತಿಮ ಸುತ್ತುಗಳಿಗೆ ಆಯ್ಕೆಯಾಗಿರುವ ಸ್ಪರ್ಧಿಗಳನ್ನು ಆಯ್ದುಕೊಂಡು ಅವರಿಗೆ ತೀರ್ಪುಗಾರರೇ ಗುರುಗಳಾಗುತ್ತಾರೆ. ಒಬ್ಬೊಬ್ಬರು ಒಬ್ಬೊಬ್ಬ ಸ್ಪರ್ಧಿಯ ಪರ ವಕಾಲತ್ತು ವಹಿಸುತ್ತಾರೆ.

ಇವರ ನಾಟಕ ಎಷ್ಟು ಅಸಹ್ಯ ಹುಟ್ಟಿಸುತ್ತದೆ ಎಂಬುದು ಹಿಮೇಶ್ ರೇಶಮ್ಮಿಯಾನನ್ನು ನೋಡಿದ್ದರೆ ಬಹುಶಃ ನಿಮಗೆ ಗೊತ್ತಾಗಿರುತ್ತದೆ. ಇಲ್ಲಿ ಅಂದ-ಚೆಂದಗಳೂ ಲೆಕ್ಕಕ್ಕೆ ಬರುತ್ತವೆ. ಇದನ್ನೆಲ್ಲಾ ನೋಡುತ್ತಿದ್ದರೆ ಇವುಗಳು ಪ್ರತಿಭಾನ್ವೇಷಣೆ ಮಾಡುವ ರಿಯಾಲಿಟಿ ಶೋಗಳೋ ಅಥವಾ ಗ್ರೇಟ್ ಇಂಡಿಯನ್ ಕಾಮಿಡಿ ಶೋನೋ ಎಂದು ಖಂಡಿತ ಆಶ್ಚರ್ಯವಾಗುತ್ತದೆ!

ಇವುಗಳಿಗೆಲ್ಲ ಒಂದು ಅಪವಾದವೆಂದರೆ ಮಲೆಯಾಳಂನ 'ಏಷ್ಯಾನೆಟ್" ಚಾನೆಲ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುವ 'ಐಡಿಯಾ ಸ್ಟಾರ್ ಸಿಂಗರ್" ಕಾರ್ಯಕ್ರಮ. ಅಲ್ಲಿಯೂ ಎಸ್‌ಎಂಎಸ್‌ಗಳೇ ಜೀವಾಳವಾಗಿದ್ದರೂ ಜಡ್ಜ್‌ಗಳ ನಾಟಕವಾಗಲಿ, ಪೂರ್ವಗ್ರಹಗಳಾಗಲಿ ಕಾಣುವುದಿಲ್ಲ. ಇತ್ತ, ಈ ಹಿಂದೆ 'ಮೇರಿ ಆವಾಜ್ ಸುನೋ", 'ವೀ ಸೂಪರ್ ಸಿಂಗರ್‍ಸ್" ಅಥವಾ ಹಳೆಯ 'ಝೀ ಸರೆಗಮಪ" ಕಾರ್ಯಕ್ರಮಗಳಿಗೆ ಪಂಡಿತ್ ಜಸ್‌ರಾಜ್, ಅಬಿದಾ ಸುಲ್ತಾನಾ, ಉಷಾ ಮಂಗೇಶ್ಕರ್, ಪರ್ವೀನ್ ಸುಲ್ತಾನಾ, ಹರಿಪ್ರಸಾದ್ ಚೌರಾಸಿಯಾ, ಪಂಡಿತ್ ಶಿವಕುಮಾರ್ ಶರ್ಮಾ, ಲತಾ ಮಂಗೇಶ್ಕರ್, ಎ.ಆರ್. ರೆಹಮಾನ್ ಅವರಂತಹ ಖ್ಯಾತನಾಮರು ತೀರ್ಪುಗಾರರಾಗಿ ಬರುತ್ತಿದ್ದರು.

ಅಲ್ಲದೆ ಪ್ರತಿಭೆಯನ್ನು ಅಳೆಯುತ್ತಿದ್ದಿದ್ದು ಜಡ್ಜ್‌ಗಳೇ ಹೊರತು ಎಸ್‌ಎಂಎಸ್‌ಗಳಾಗಿರಲಿಲ್ಲ. ಹಾಗಾಗಿ ಕುಣಾಲ್ ಗಾಂಜಾವಾಲಾ, ಶ್ರೇಯಾ ಘೋಷಾಲ್, ಸುನಿಧಿ ಚೌವ್ಹಾಣ್, ನರೇಶ್ ಅಯ್ಯರ್ ಅವರಂತಹ ಪ್ರತಿಭಾನ್ವಿತ ಹಾಡುಗಾರರು ಹೊರಹೊಮ್ಮಿದರು. ಆದರೆ ಈಗ ನಡೆಯುತ್ತಿರುವ ಕಾರ್ಯಕ್ರಮಗಳ ಮೂಲಕ ಆನೀಕ್, ಅಭಿಜಿತ್, ಪ್ರಶಾಂತ್, ರಾಜಾ ಹಸನ್, ಅಮಾನತ್ ಅಲಿಯಂತಹ jerks ಎಷ್ಟೇ ಬಂದರೂ ಶೋ ಮುಗಿದ ನಂತರ ಹೇಳಹೆಸರಿಲ್ಲದಂತಾಗುತ್ತಾರೆ. ಅಷ್ಟಕ್ಕೂ, ಒಂದು ಹಾಡನ್ನು ನೂರು ಬಾರಿ ಕೇಳಿದರೆ ಅದನ್ನೇ ಮಿಮಿಕ್ ಮಾಡುವುದು ದೊಡ್ಡ ಸಾಧನೆಯೇನಲ್ಲ. ಮಿಮಿಕ್ ಮಾಡುವುದಕ್ಕೂ, ಸ್ವಂತವಾಗಿ ಹಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಗಟ್ಟಿ ಸಾಹಿತ್ಯ ಹೊಂದಿರುವ ಗೀತೆಗಳನ್ನು ಎಷ್ಟೇ ಕಳಪೆಯಾಗಿ ಹಾಡಿದರೂ ಸಹಜವಾಗಿಯೇ ಕಿವಿಗೆ ಮುದ ಕೊಡುತ್ತವೆ, ಮನಸ್ಸನ್ನು ಕರಗಿಸುತ್ತವೆ. ಆದರೆ ಸ್ವಂತವಾಗಿ ಕಂಪೋಸ್ ಮಾಡಿ, ಹಾಡಿಸಿದರೆ ನಿಜವಾದ ಪ್ರತಿಭೆಯ ಪರಿಚಯವಾಗುತ್ತದೆ.

ಲೈವ್ ಸಿಂಗಿಂಗ್ ಮತ್ತು ರೆಕಾರ್ಡಿಂಗ್‌ಗೂ ಇವತ್ತಿನ ಸ್ಕ್ರಾಚ್ ಸಿಂಗಿಂಗ್‌ಗೂ ಭಾರೀ ವ್ಯತ್ಯಾಸವಿದೆ. 1949ರಲ್ಲಿ ಬಿಡುಗಡೆಯಾದ 'ಮಹಲ್" ಚಿತ್ರದ “ಆಯೇಗಾ ಆನೇವಾಲಾ" ಗೀತೆಯ ಪ್ರಾರಂಭಿಕ ಭಾಗವನ್ನು ದೂರದಿಂದ ಕೇಳಿಬರುತ್ತಿರುವಂತೆ ಹಾಗೂ ಎರಡನೇ ಭಾಗ ಜೋರಾಗಿ ಕೇಳುವಂತೆ ಹಾಡಬೇಕಿತ್ತು. ಆದರೆ ಆಗಿನ ತಂತ್ರಜ್ಞಾನ ಈಗಿನದಕ್ಕೆ ಹೋಲಿಸಿದರೆ ಒಂದು ಕಣಕ್ಕೆ ಸಮಾನವಾಗಿತ್ತು. ಹಾಗಾಗಿ ಗಾಯಕಿ ಲತಾ ಮಂಗೇಶ್ಕರ್ ಹಾಡಿಗೆ ಸೂಕ್ತ ಎಫೆಕ್ಟ್ ಕೊಡುವ ಸಲುವಾಗಿ ಮೈಕ್ರೊಫೋನನ್ನು ದೂರದಲ್ಲಿಟ್ಟು ಹಾಡುತ್ತಾ ಹಾಡುತ್ತಾ ಹತ್ತಿರಕ್ಕೆ ಬಂದಿದ್ದರು. ಹಾಗೆ 25 ಬಾರಿ ಪ್ರಯತ್ನಿಸಿ ಕೊನೆಗೆ ಸಫಲರಾಗಿದ್ದರು.

ಆದರೆ ಈಗ ರೆಹಮಾನ್ ಅವರಂತಹ ಸಂಗೀತ ನಿರ್ದೇಶಕರು 'ಓರೇ ಚೋರಿ", 'ಬಾತ್ ನಿಕ್ಲೆ" ಅಂತ ಒಂದೊಂದು ಸಾಲುಗಳನ್ನು ಗಂಟೆಗಳ ಅಂತರದಲ್ಲಿ ಹಾಡಿದರೂ ಜೋಡಿಸಿ ಅದ್ಭುತ ಎಫೆಕ್ಟ್ ನೀಡಬಲ್ಲರು. ಇಷ್ಟಾಗಿಯೂ, ತಂತ್ರಜ್ಞಾನದ ಯಾವ ಸಹಾಯವೂ ಇಲ್ಲದೆ ಲತಾ, ಆಶಾ, ಚಿತ್ರಾ, ಜಾನಕಿ, ಕಿಶೋರ್ ಕುಮಾರ್, ಮುಖೇಶ್, ರಫಿ ಅವರಂತಹ ಗಾಯಕರು ಇಂದಿಗೂ ನಮ್ಮ ಮನದಾಳದಲ್ಲಿ ಉಳಿದಿದ್ದರೆ ಅದು ಅವರಲ್ಲಿದ್ದ ಗಟ್ಟಿ ಪ್ರತಿಭೆಯಿಂದಾಗಿ ಮಾತ್ರ. ಆದರೆ ಕಾಮಿಡಿ ಶೋಗಳಾಗಿರುವ ಈಗಿನ ರಿಯಾಲಿಟಿ ಶೋಗಳಿಂದ ಅಂತಹ ಪ್ರತಿಭೆಯನ್ನು ಹೊರತರುವುದು ಸಾಧ್ಯವಿಲ್ಲದ ಮಾತು.ಇದೇ 'ರಿಯಾಲಿಟಿ".

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more