ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಪತ್ರಿಕೆ' ಓದೋಕೆ ಸಂಕೋಚ ಏಕೆ?

By * ಮಾ.ವೆಂ.ಸ. ಪ್ರಸಾದ್
|
Google Oneindia Kannada News

Shree Padre, Adike Patrike editor
ಬರಹಗಾರರಿಗೆ ತಮ್ಮ ಲೇಖನ ಪ್ರಕಟಗೊಳ್ಳುವುದು ಖುಷಿ ವಿಚಾರ. ಜೊತೆಗೆ ಅಂಚೆಯಲ್ಲಿ ಗೌರವ ಪ್ರತಿ ಬಂದಾಗ ಸಿಕ್ಕುವ ಆನಂದ... ಆಹಾ! ದುರಂತ ನೋಡಿ, ಇಂದು ತರಂಗ ಬಳಗ ಹಾಗೂ ಕರ್ಮವೀರವನ್ನು ಹೊರತುಪಡಿಸಿದರೆ ಕನ್ನಡದ ಬಹುಪಾಲು ಪ್ರಮುಖ ಪತ್ರಿಕೆಗಳಾವುವೂ ಗೌರವ ಪ್ರತಿ ಕಳುಹಿಸುವ ಸಂಪ್ರದಾಯವನ್ನು ಇಟ್ಟುಕೊಂಡಿಲ್ಲ. ಆ ಮೂಲಕ ಅವು ತಮ್ಮ ಮುಖ್ಯ ಜವಾಬ್ದಾರಿಯನ್ನು ಕಳೆದುಕೊಂಡಿವೆ. ಸರಿಯೇ? ನೀವು ಹೇಳಬೇಕು.

ಆದರೆ ದೂರದ ಪುತ್ತೂರಿನಿಂದ ಪ್ರಕಟಗೊಳ್ಳುವ ಅಡಿಕೆ ಪತ್ರಿಕೆ' ಇವತ್ತಿಗೂ ಗೌರವ ಪ್ರತಿ ಕಳುಹಿಸುವ ಸಂಸ್ಕೃತಿಯನ್ನು ಬಿಟ್ಟಿಲ್ಲ. ಅಷ್ಟೇಕೆ, ಯಾರ ಕುರಿತು ಲೇಖನ ಪ್ರಕಟವಾಗಿದೆಯೋ ಆ ವ್ಯಕ್ತಿಗೂ ಒಂದು ಕಾಂಪ್ಲಮೆಂಟರಿ ಕಾಪಿ ಮುದ್ದಾಂ ಹೋಗುತ್ತದೆ! ವಿಜಯ ಕರ್ನಾಟಕವೂ ನಾಚಿಕೊಳ್ಳುವಂತೆ ಸಾಕಷ್ಟು ಗಟ್ಟಿ ಚೆಕ್ ಕೂಡ ಲೇಖಕರಿಗೆ ನಿಕ್ಕಿ!

ಕೃಷಿ ನಿಯತಕಾಲಿಕಗಳಿಗೆ ಮಾದರಿ ಎನ್ನುವಂತಾದ್ದು ಅಡಿಕೆ ಪತ್ರಿಕೆ' ಮಾಸಿಕ. ನುಡಿಚಿತ್ರಕಾರ, ನೆಲ - ಜಲ ವಿಚಾರತಜ್ಞ ಶ್ರೀಪಡ್ರೆಯವರ ನೇತೃತ್ವದಲ್ಲಿ ರೂಪಗೊಂಡಿರುವ ಅಪ'ಕ್ಕೆ ಈಗ 22ರ ಪ್ರಾಯ. ಪ್ರಕಟಿಸುವ ಪ್ರತಿ ವಿಷಯವನ್ನು ಹಲವು ಕೋನಗಳಿಂದ ವಿಶ್ಲೇಷಿಸಿಯೇ ಪ್ರಕಟಿಸುವ ಇದರ ಧ್ಯೇಯ ರೈತಪರವಾದದ್ದು. ಇದ್ದಕ್ಕಿದ್ದಂತೆ ಲಾಭಕರ ಬೆಳೆ, ಭರ್ಜರಿ ಆದಾಯ ಎನ್ನುವಂತ ಸುಳ್ಳು ಸುಳ್ಳೇ ಲೇಖನಗಳು ಇದರಲ್ಲಿ ಪ್ರಕಟವಾಗುವುದಿಲ್ಲ. ಅನುಭವಿ ರೈತರ, ಕೃಷಿಲೋಕದ ಲೇಖಕರ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಹಾಗೆಯೇ ಎರೆಗೊಬ್ಬರ, ನೀರು ಇಂಗಿಸುವಿಕೆ, ಹಲಸು ಮುಂತಾದ ಬೆಳೆಗಳ ಮೌಲ್ಯವರ್ಧನೆ....... ಹೀಗೆ ಒಂದು ವಿಚಾರದಲ್ಲಿ ರೈತರಿಗೆ ಮನದಟ್ಟಾಗುವಂತೆ ಬರಹ ಆಂದೋಲನವನ್ನೇ ಹಮ್ಮಿಕೊಳ್ಳುವುದು ಅಡಿಕೆ ಪತ್ರಿಕೆಯ ಹೆಗ್ಗಳಿಕೆ. ಬಹುಷಃ ಕೃಷಿಕರ ಕೈಯಲ್ಲಿ ಮೊತ್ತಮೊದಲ ಬಾರಿಗೆ ಕತ್ತಿ, ಗುದ್ದಲಿಯ ಜಾಗದಲ್ಲಿ ಪೆನ್ನು ಹಿಡಿಸಿದ ಶ್ರೇಯಸ್ಸೂ ಅಪಕ್ಕೆ. ಶ್ರೀಪಡ್ರೆ ಹಿಂಸರಿದಿದ್ದ ಕೆಲಕಾಲ ಅಪ ಕಳೆಗುಂದಿತ್ತು. ಮತ್ತೆ ಈಗ ನಳನಳಿಸುತ್ತಿದೆ.

ಬಹುಷಃ ಇದಕ್ಕೆ ಅಡಿಕೆ ಪತ್ರಿಕೆ' ಎಂಬ ಶೀರ್ಷಿಕೆಯಿರುವುದೇ ಒಂದು ಸಮಸ್ಯೆಯಾಗಿರಲಿಕ್ಕೆ ಸಾಕು. ಅಡಿಕೆ ಬೆಳೆಯ ಹೊರತಾದ ಕೃಷಿಕರು ಇದು ತನಗಲ್ಲ ಎಂದುಕೊಂಡುಬಿಡುತ್ತಾರೆ. ಅಡಿಕೆ ಪತ್ರಿಕೆ ಹಾಗೇನೂ ಇಲ್ಲ. ಇದು ಎಲ್ಲ ಬೆಳೆಗಳ ಉಳುಮೆದಾರರಿಗೂ ಅನುಕೂಲಕರ. ಅದು ಮಾತ್ರವಲ್ಲ, ಕೃಷಿ ಜಗತ್ತಿನ ಮಾಹಿತಿ ನಮ್ಮಲ್ಲಿರಬೇಕು ಎಂದು ಬಯಸುವವರೆಲ್ಲ ತರಿಸಿಕೊಳ್ಳಲೇಬೇಕು.

ಯಾವುದೇ ಮುಖ್ಯವಾಹಿನಿಯ ಪತ್ರಿಕೆ ಅಚ್ಚರಿಪಡುವ ಮಟ್ಟಿಗೆ 'ಅಪ' ಅಂತರ್ಜಾಲವನ್ನು ಬಳಸಿಕೊಳ್ಳುತ್ತಿದೆ. ಇಂದು 'ಅಪ'ದ ನೆಟ್ ಆವೃತ್ತಿ ಲಭ್ಯ. ಬೇಕಿದ್ದರೆ ನೀವೇ ಹುಡುಕಿಕೊಳ್ಳಿ. ಬೇಕೆಂದೇ ಆ ಲಿಂಕ್‌ನ್ನು ತಿಳಿಸುತ್ತಿಲ್ಲ. ಹಾಗೆಯೇ ಅದರ ಚಂದಾದರದ ಬಗ್ಗೆಯೂ ಉಸುರುತ್ತಿಲ್ಲ. ಆಸಕ್ತರಿಗೆ ಇಷ್ಟು ಮಾಹಿತಿ ಸಾಕು. ಹುಡುಕಿಕೊಳ್ಳುತ್ತಾರೆ, ಅಲ್ಲವೇ?

ಅಡಿಕೆ ಪತ್ರಿಕೆಯ ವಿಳಾಸ : ಅಂಚೆ ಪಟ್ಟಿಗೆ ಸಂಖ್ಯೆ 29, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು - 574201

ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X