ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗುವವರಿಗಾಗಿ ಮಾತ್ರ ಈ ಕನ್ನಡ ಕಚಗುಳಿ

By * ಮಾ.ವೆಂ.ಸ. ಪ್ರಸಾದ್
|
Google Oneindia Kannada News

Kachaguli, Kannada humor magazine
ಈ ವಾರ ಈ ಅಂಕಣದಲ್ಲಿ ಪತ್ರಿಕೆಯೊಂದನ್ನು ಪರಿಚಯಿಸುವ ಮುನ್ನ ಗಂಭೀರವೋ ಲಘುವೋ ನನಗೆ ಅರ್ಥೈಸಿಕೊಳ್ಳಲಾಗದ ಒಂದು ವಿಚಾರವನ್ನು ನಿಮ್ಮೊಂದಿಗೆ ಚರ್ಚಿಸಬೇಕಿದೆ.

ನನಗೆ ನೆನಪಿರುವಂತೆ, ಹಿಂದೆಲ್ಲ ದೈನಿಕಗಳಲ್ಲಿ ಶುಕ್ರವಾರ ಸಿನೆಮಾ ಪುರವಣಿ ಪ್ರತ್ಯೇಕವಾಗಿರಲಿಲ್ಲ. ಬೇರೆ ದಿನ ಕೇವಲ ಎಂಟು ಪುಟ ಹೊಂದಿರುತ್ತಿದ್ದ ಪ್ರಜಾವಾಣಿಯಂತವು ಆ ದಿನ ಮಾತ್ರ 10 ಪುಟ ಹೊಂದಿರುತ್ತಿತ್ತು. ಅದರಲ್ಲೂ ಬಹುಷಃ ಒಂದು ಪುಟ ಮಾತ್ರ ಸಿನೆಮಾ ಸುದ್ದಿ. ಹೀಗೆ ಹೆಚ್ಚು ಪುಟ ಕೊಡುತ್ತಿದ್ದ ಭಾನುವಾರ ಹಾಗೂ ಶುಕ್ರವಾರ ಪತ್ರಿಕೆಯ ಬೆಲೆಯಲ್ಲಿ ಕೆಲ ಪೈಸೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದೈನಿಕ ಪತ್ರಿಕೋದ್ಯಮ ಪುಟ ಸಂಖ್ಯೆಯ ಮೇಲೆ ನಿಂತಿಲ್ಲ. ಬಣ್ಣದ ಮುದ್ರಣ ಸರ್ವೇ ಸಾಮಾನ್ಯ. ಆದರೆ ದೈನಿಕಗಳು ಇವತ್ತಿಗೂ ಈ ಎರಡು ದಿನ ಹೆಚ್ಚು ಬೆಲೆ ನಿಗದಿ ಪಡಿಸುವ ಹಳೆಯ ಸಂಪ್ರದಾಯವನ್ನು ಮಾತ್ರ ಮುಂದುವರೆಸಿದ್ದು ಸೂಕ್ತವೇ?

ದಿ ಹಿಂದೂ ಪತ್ರಿಕೆ ಭಾನುವಾರ ನಿಜಕ್ಕೂ ಅರ್ಥವತ್ತಾದ ಸ್ಪೆಷಲ್ ಪುಟಗಳನ್ನು ಕೊಡುವುದರಿಂದ ಹೆಚ್ಚಿನ ಬೆಲೆಯನ್ನು ಸಮರ್ಥಿಸಿಕೊಳ್ಳಬಹುದೇನೋ. ಕನ್ನಡದ ಪತ್ರಿಕೆಗಳು ಸಾಪ್ತಾಹಿಕ ಪುರವಣಿಯಲ್ಲಿ ಕೊಡುತ್ತಿದ್ದ ಎಂಟು ಪುಟಗಳನ್ನು ಆರಕ್ಕೆ ಇಳಿಸಿದ್ದೊಂದೇ ಸಾಧನೆ! ನನ್ನ ವಾದ ಇಷ್ಟೇ, ಹೆಚ್ಚಿನ ಏನೂ ಇಲ್ಲದ ಈ ಎರಡು ದಿನಗಳ ಸಂಚಿಕೆಗಳ ಬೆಲೆಯೂ ಉಳಿದ ಐದು ದಿನಗಳಷ್ಟೇ ಇರಬೇಕು. ತಿಂಗಳ ವೆಚ್ಚ ಲೆಕ್ಕ ಹಾಕುವುದೂ ಆಗ ಸುಲಭ! ನೀವೇನಂತೀರಿ?

ಕನ್ನಡದಲ್ಲಿ ಹಾಸ್ಯಕ್ಕೆ ಮೀಸಲಾದ ಪತ್ರಿಕೆಗಳು ಕಡಿಮೆ. ಹೆಸರಿಸಹೊರಟರೆ ಬಾಗಿಲು ಮುಚ್ಚಿದ ಕೊರವಂಜಿ'ಯಂತ ಪತ್ರಿಕೆಗಳನ್ನೇ ಹೇಳಬೇಕಾಗುವುದು ದುರಂತ. ಆದರೂ ಇವತ್ತಿಗೂ ವಿನೋದ' ಚಾಲ್ತಿಯಲ್ಲಿದೆ. ಹಾಗೆಯೇ ಕಾರ್ಟೂನ್, ಜೋಕ್ಸ್, ನಗೆಬರಹಗಳಿಗೆ ಮೀಸಲಿರುವ ಪತ್ರಿಕೆಯೊಂದು ಪುಸ್ತಕದ ಅಂಗಡಿಗಳಲ್ಲಿ ಲಭ್ಯ, ಅದುವೇ ಕಚಗುಳಿ'. ಮನರಂಜನೆಯೊಂದೇ ಅದರ ಧ್ಯೇಯ!

ಶುಷ್ಕವಾಗಿ ಕೆಲವು ಮಾಹಿತಿಗಳನ್ನು ಒದರಿಬಿಡುತ್ತೇನೆ. 60 ಪುಟಗಳ ಈ ಮಾಸಪತ್ರಿಕೆಗೆ ತುಸು ದುಬಾರಿ ಬೆಲೆ, 20 ರೂಪಾಯಿ. ಈಗಾಗಲೇ 85 ಸಂಚಿಕೆಗಳನ್ನು ಈ ಪತ್ರಿಕೆ ಪೂರೈಸಿದೆ. ಅರ್ಥಾತ್ ಏಳು ವರ್ಷಗಳು!

ಕೆಲವರಿಗಾದರೂ ಬೆಂಗಳೂರಿನ ಅನುರಾಗ್ ಕ್ರಿಯೇಷನ್ಸ್ ಗೊತ್ತಿರಬೇಕು. ಅದು ಸ್ಪರ್ಧಾ ಜಗತ್ತು, ಆರೋಗ್ಯ ಮತ್ತು ಸೈಕಾಲಜಿ & ಪರ್ಸನಾಲಿಟಿ ಡೆವಲೆಪ್‌ಮೆಂಟ್ ಎಂಬ ದೀರ್ಘ ಹೆಸರಿನ ಪತ್ರಿಕೆಯೂ ಸೇರಿದಂತೆ ಒಂದು ಡಜನ್ ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ. ಆ ಪ್ರಕಾಶನದ ಮಾಲಿಕ ಆರ್. ಬಾಲಕೃಷ್ಣರೇ ಈ ಕಚಗುಳಿ'ಯ ಸಂಪಾದಕರು.

ನಿಜ, ಇಲ್ಲಿನ ಎಲ್ಲ ಜೋಕ್ಸ್, ಕಾರ್ಟೂನ್‌ಗಳು ಗುಣಮಟ್ಟವನ್ನು ನೀಡುವುದಿಲ್ಲ ಎನ್ನಿಸಬಹುದು. ಆದರೆ ನಗುವವರ ಮನಸ್ಥಿತಿಯ ಮೇಲೆ ಅವು ಮಾಡುವ ಪರಿಣಾಮ ನಿರ್ಧಾರಿತವಾಗಿರುವುದರಿಂದ ಇದಮಿತ್ಥಂ ಹೇಳುವುದು ಕಷ್ಟ. ನೀವೇ ನೋಡಿ, ಟೆನಿಸ್ ಕೃಷ್ಣನ ಹಾಸ್ಯಕ್ಕೆ ನೀವು ನಗಬಹುದು, ಮತ್ತೊಬ್ಬಾತ, ಛೆ, ಅಸಹ್ಯ ಎಂದುಬಿಡಬಹುದು. ಬಸ್‌ನಲ್ಲಿ, ಸುಮ್ಮನೆ ರಿಫ್ರೆಶ್‌ಗೆ ಎಂದು ಕುಳಿತುಕೊಳ್ಳುವವರಿಗೆ ಇದು ಆಪ್ತ! ಒಮ್ಮೆ ಓದಿ ನೋಡಿ....

ವಿಳಾಸ : ಕಚಗುಳಿ ಮಾಸಪತ್ರಿಕೆ
737, ಡಾ.ರಾಜ್‌ಕುಮಾರ್ ರಸ್ತೆ,
ಧಮಧಸ್ಥಳ ಶ್ರೀ ಮಂಜುನಾಥ ಕಲಾಭವನದ ಎದುರು, 6ನೇ ಬ್ಲಾಕ್, ರಾಜಾಜಿ ನಗರ, ಬೆಂಗಳೂರು - 560 010.
ಫೋನ್ - 080-23401654, 23203282

ಲೇಖಕರ ವಿಳಾಸ :
ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X