ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾದರಿ ಪತ್ರಿಕೆಯಿದು, ಖಾಯಂ ಓದಿರಿ ನೀವು!

By Staff
|
Google Oneindia Kannada News

Arivu, bimonthly magazine from Chintamani
ಚಿಂತಾಮಣಿಯಲ್ಲಿ ಅರಿವು ದ್ವೈಮಾಸಿಕದಿಂದ ಜನರಲ್ಲಿ ಅರಿವಿನ ವಿಸ್ತಾರ. ಈ ಪತ್ರಿಕೆಯಲ್ಲಿ ಕಾನೂನಿನ ಬಗ್ಗೆ ಮಾಹಿತಿಯಿರುತ್ತದೆ, ಸಬ್ಸಿಡಿ ಪಡೆದ ಕೃಷಿಕರ ಪಟ್ಟಿ, ಗ್ರಾಮಪಂಚಾಯಿತಿಗಳ ಖರ್ಚುವಿವರ ಲಭ್ಯವಿರುತ್ತದೆ. ಬೇರೆಡೆಯಲ್ಲೂ ಸಂಘಟನೆಗಳು ಈ ಅರಿವು ಪತ್ರಿಕೆಯ ಮಾದರಿಯನ್ನು ಮುದ್ದಾಂ ಆರಂಭಿಸಬೇಕು.

* ಮಾವೆಂಸ ಪ್ರಸಾದ್

ಇದೊಂದು ವಿಚಿತ್ರ ಸನ್ನಿವೇಶ. ಈ ಅಂಕಣವಿರುವುದು ಪತ್ರಿಕೆಗಳನ್ನು ಪರಿಚಯಿಸಲು ಮತ್ತು ಅವುಗಳ ಪ್ರಸಾರ ಸಂಖ್ಯೆ ಹೆಚ್ಚಿಸಲು ಕಿಂಚಿತ್ ಪ್ರಯತ್ನಿಸಲು. ಆದರೆ ಈ ವಾರ ಪರಿಚಯಿಸುತ್ತಿರುವ ಪತ್ರಿಕೆಯನ್ನು ನೀವು ಚಿಂತಾಮಣಿ ತಾಲ್ಲೂಕಿನವರಲ್ಲದಿದ್ದರೆ ಓದುವುದು ವ್ಯರ್ಥ. ಹಾಗೆಂದು ನೀವೊಮ್ಮೆ ಪತ್ರಿಕೆಯನ್ನು ಗಮನಿಸದಿದ್ದರೂ ನಷ್ಟ ನಷ್ಟ!

ಬೆಂಗಳೂರು ಸಮೀಪದ ಚಿಂತಾಮಣಿಯ ಮಂಜುನಾಥ ರೆಡ್ಡಿ ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಭ್ರಷ್ಟಾಚಾರದ ಎದುರು ಹೋರಾಟ ನಡೆಸಿದಾಗಲೊಮ್ಮೆ ಗೂಂಡಾಗಳಿಂದ ದೈಹಿಕ ಹಲ್ಲೆಗೆ ತುತ್ತಾದವರು. ನನಗೆ ಪರಿಚಿತರು. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನಲ್ಲಿ 'ಜನಜಾಗೃತಿ ವೇದಿಕೆ" ಎಂಬ ಜನಪರ ಸಂಸ್ಥೆಯ ಮುಂಚೂಣಿಯಲ್ಲಿದ್ದಾರೆ. ಅವರದೇ ಸಂಪಾದಕೀಯದಲ್ಲಿ ಪ್ರಕಟವಾಗುತ್ತಿರುವ ದ್ವೈಮಾಸಿಕ ಅಂಚೆ ಪತ್ರಿಕೆ 'ಅರಿವು".

ಪತ್ರಿಕೆಯ ಓದುಗರಸಂಖ್ಯೆ ಹೆಚ್ಚಲು ಅದರಲ್ಲಿ ಲೇಖನ ಕಸುಬು ಚೆಂದವಿರಬೇಕು ಎಂಬ ಮಾತಿದೆ. ಈ ಮಾತನ್ನು ಸುಳ್ಳಾಗಿಸಿರುವುದೇ ಈ ಪತ್ರಿಕೆಯ ಯಶಸ್ಸು. ಇದು ಮಾಹಿತಿ ಹಕ್ಕಿನ ಅಸ್ತ್ರದ ಬಳಕೆಯ ಮೂಲಕ ಚಿಂತಾಮಣಿಯ ನಗರಸಭೆ, ಗ್ರಾಮಪಂಚಾಯ್ತಿ ಹಾಗೂ ಸರ್ಕಾರಿ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಅದನ್ನು ಯಥಾವತ್ ಆಗಿ ಪ್ರಕಟಿಸುತ್ತದೆ.

ಉದಾಹರಣೆಗೆ ರೇಷ್ಮೆ ಕೃಷಿಗೆ ಈ ವರ್ಷ ಯಾರ್‍ಯಾರಿಗೆ ನೀರಾವರಿ ಸಬ್ಸಿಡಿ ಸಿಕ್ಕಿದೆ ಎಂಬ ಪಟ್ಟಿಯನ್ನು ಪಡೆದು ಪ್ರಕಟಿಸುತ್ತದೆ. ಖುದ್ದು ಹೆಸರಿಸಲಾದ ರೈತನಿಗೆ ಗಾಬರಿಯಾಗಬಹುದು. ಏಕೆಂದರೆ ಆತ ಅದನ್ನು ಪಡೆಯದೇ ಇರುವ ಸಾಧ್ಯತೆಯಿದೆ. ಅಥವಾ ಏನೂ ಕೆಲಸ ಮಾಡಿರದ ಖದೀಮ ಸಬ್ಸಿಡಿ ಹೊಡೆದಿರಬಹುದು. ಈ ಎರಡೂ ಪ್ರಕರಣದಲ್ಲಿ ಹೋರಾಡಲು ಈ ಮಾಹಿತಿ ನೆರವು ನೀಡುತ್ತದೆ.

ಈ ರೀತಿ ಕಾಮಗಾರಿ ಪಟ್ಟಿ, ಯಶಸ್ವಿನಿಯಡಿ ಆಸ್ಪತ್ರೆಗಳು ಪಡೆದಿರುವ ಮೊತ್ತ, ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಸಬ್ಸಿಡಿ, ಗ್ರಾಮಪಂಚಾಯ್ತಿಗಳ ಖರ್ಚು ವಿವರ... ಹೀಗೆ ನೇರನೇರವಾಗಿ ಅಂಕಿಅಂಶಗಳು ಪ್ರಕಟಗೊಳ್ಳುವುದರಿಂದ ಹೊಣೆಗಾರರಾದ ಅಧಿಕಾರಿಗಳು ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ. ಹೀಗೆ ಹೇಳಬಹುದು, ಲೆಕ್ಕದಲ್ಲಿ ಯಾವುದೋ ಕೆರೆಯ ಹೂಳು ತೆಗೆದಿದ್ದಾರೆಂದರೆ ಅದು ಚಿಂತಾಮಣಿಯಲ್ಲಿ 'ಅರಿವು" ಮೂಲಕ ಜಗಜ್ಜಾಹೀರವಾಗುತ್ತದೆ. ಸಾಕಲ್ಲ? ಪ್ರಜ್ಞಾವಂತ ನಾಗರಿಕ ಮುಂದಿನ ಹೆಜ್ಜೆ ಇಟ್ಟಾನು!

ಇಂತಹ ಪತ್ರಿಕೆ ಪ್ರತಿ ತಾಲ್ಲೂಕಿಗೊಂದರಂತೆ ಶುರುವಾಗಬೇಕು. ಅದಕ್ಕೂ ಮುನ್ನ ಒಮ್ಮೆ 'ಅರಿವು" ನೋಡಬೇಕು. ಇವತ್ತು ಚಿಂತಾಮಣಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮೂತ್ರ ವಿಸರ್ಜಿಸಿದರೆ ಶುಲ್ಕ ಕೊಡಬೇಕಾದುದಿಲ್ಲ, ಅಲ್ಲಿನ ಬಿಪಿಎಲ್ ಕಾರ್ಡ್‌ದಾರರಿಗೆ ಸಕ್ಕರೆ, ಗೋಧಿ, ಅಕ್ಕಿ ಎಲ್ಲವೂ ಸಿಗುತ್ತಿದೆ. ಇದಕ್ಕೆಲ್ಲ ಕಾರಣ 'ಅರಿವು" ದ್ವೈಮಾಸಿಕ.

ಜೊತೆಜೊತೆಗೆ ಎಲ್ಲರಿಗೂ ಅನುಕೂಲವಾಗಬಲ್ಲ ಕಾನೂನು ಮಾಹಿತಿಗಳೂ ಈ ಪತ್ರಿಕೆಯಲ್ಲಿದೆ. ಇದನ್ನು ನೋಡಿದಾಗ ನನಗೆ ಮಂಡ್ಯದ 'ಗ್ರಾಮಸರ್ಕಾರ" ಎಂಬ ಪತ್ರಿಕೆಯ ನೆನಪಾಗುತ್ತದೆ. ಅದರ ಬಗ್ಗೆ ಮುಂದೆ ಬರೆಯುವೆ. ಮುಖ್ಯವಾಗಿ ಬೇರೆಡೆಯಲ್ಲೂ ಸಂಘಟನೆಗಳು ಈ ಅರಿವು ಪತ್ರಿಕೆಯ ಮಾದರಿಯನ್ನು ಮುದ್ದಾಂ ಆರಂಭಿಸಬೇಕು. ಈ ಬರಹ ಕೆಲವರಲ್ಲಾದರೂ ಆ ಕೆಲಸ ಮಾಡಿಸಿದರೆ ಸಾರ್ಥಕ.

'ಅರಿವು" ವಿಳಾಸ : ಜಿ.ವಿ.ಮಂಜುನಾಥ್ ರೆಡ್ಡಿ, ಸಂಪಾದಕರು, 'ಅರಿವು", ಎನ್.ಆರ್.ಬಡಾವಣೆ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ -563125. ದೂರವಾಣಿ - 08158-254030, ಮೊಬೈಲ್ -99453 12314

ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X