ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಸೈಟ್ ಇದ್ದರೆ ಒಳ್ಳೆಯದು!

By * ಮಾ.ವೆಂ.ಸ. ಪ್ರಸಾದ್
|
Google Oneindia Kannada News

Insight Magazine CERC
ಗೆಳೆಯ ಜಿತು ಜೊತೆ ಇತ್ತೀಚೆಗೆ ಜಿಮೈಲ್ ಚಾಟ್ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಆತ ಕೇಳಿ: ನಿನ್ನ ಈ ಅಂಕಣದಲ್ಲಿ ಇಂಗ್ಲೀಷ್ ಪತ್ರಿಕೆಗಳ ಬಗ್ಗೆ ಬರೆಯುವುದಿಲ್ಲವೇ? ನನ್ನ ನಿಲುವು ಸರಳ, ಅಂತಹ ಯಾವುದೇ ಮಡಿ ಮುಚ್ಚಟ್ಟೆ ಈ ಅಂಕಣಕ್ಕಿಲ್ಲ. ಪತ್ರಿಕೆ ನನಗೆ ವಿಶಿಷ್ಟ ಅಂತ ಅನಿಸಿರಬೇಕು. ಹಾಗಾಗಿ ಈ ವಾರ ನಾನು ಬೇಕೆಂತಲೇ ಪರಿಚಯಿಸಬೇಕಿದ್ದ ಕನ್ನಡ ಮಾಸಪತ್ರಿಕೆಯ ಸರತಿ ತಪ್ಪಿಸಿ ಅಪರೂಪದ ಆಂಗ್ಲ ದ್ವೈಮಾಸಿಕವನ್ನು ನಿಮ್ಮೆದುರಿಗೆ ಇಟ್ಟಿದ್ದೇನೆ. ಒಪ್ಪಿಸಿಕೊಳ್ಳಿ.

ಸ್ಲಿಮ್ ಟ್ಯೂಬ್‌ಲೈಟ್, ಅಡುಗೆ ಎಣ್ಣೆ, ಬ್ಯಾಟರಿ ಸೆಲ್, ಟೂತ್‌ಪೇಸ್ಟ್, ಟಿವಿ, ಗೋಧಿ ಹಿಟ್ಟು... ಹೀಗೆ ಹಲವು ವಿಚಾರಗಳಲ್ಲಿ ಖರೀದಿಗೆ ಹೊರಟಾಗ ನಮ್ಮ ತಲೆಯಲ್ಲಿ ಒಂದು ಅನುಮಾನ ಮೂಡಬಹುದು. ಯಾವ ಕಂಪನಿಯ ತಯಾರಿಕೆ ಖರೀದಿಗೆ ಯೋಗ್ಯ? ಕಾನೂನು ಮಾನದಂಡಗಳನ್ನು ಇವು ಸರಿಯಾಗಿ ಪಾಲಿಸುತ್ತವೆಯೇ? ಬೆಲೆಗೆ ತಕ್ಕ ಮೌಲ್ಯ ದೊರಕುತ್ತದೆಯೇ? ಮಾರುಕಟ್ಟೆಯಲ್ಲಿ ಯಾವ ಯಾವ ಕಂಪನಿಯ ತಯಾರಿಕೆಗಳಿವೆ? ಗುಣಮಟ್ಟ ಹೇಗೆ? ಉಫ್, ಈ ಪ್ರಶ್ನೆಗಳಿಗೆಲ್ಲ ಉತ್ತರ ಎಲ್ಲಿ ಸಿಕ್ಕೀತು?

ಇಂಗ್ಲೀಷ್‌ನಲ್ಲೊಂದು ಗ್ರಾಹಕ ಪತ್ರಿಕೆಯಿದೆ. ಎರಡು ತಿಂಗಳಿಗೊಮ್ಮೆ ಪ್ರಕಟವಾಗುವ ಈ ಸುಂದರ ಪತ್ರಿಕೆಯ ಹೆಸರೇ 'ಇನ್‌ಸೈಟ್" ಅಹ್ಮದಾಬಾದ್‌ನ ಕನ್ಸ್ಯೂಮರ್ ಎಜುಕೇಷನ್ ಅಂಡ್ ರೀಸರ್ಚ್ ಸೊಸೈಟಿ (ಸಿಇಆರ್‌ಎಸ್) ರಾಷ್ಟ್ರದ ಪ್ರತಿಷ್ಠಿತ ಗ್ರಾಹಕ ಸಂಘಟನೆ. ಇದು ತನ್ನ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಪರೀಕ್ಷಾ ಕೇಂದ್ರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿಯೇ ವಿವಿಧ ಕಂಪನಿಗಳ ತಯಾರಿಕೆಗಳನ್ನು ಪರೀಕ್ಷಿಸಿದೆ, ಪರೀಕ್ಷಿಸುತ್ತಿದೆ. ಅದರ ಆಮೂಲಾಗ್ರ ವರದಿಯನ್ನು ಪ್ರತಿ ಇನ್‌ಸೈಟ್‌ನಲ್ಲಿ ಪ್ರಮುಖವಾಗಿ ಪ್ರಕಟಿಸಲಾಗುತ್ತದೆ. ತುಂಬಾ ಪಾರದರ್ಶಕವಾಗಿ, ಪ್ರಜಾತಂತ್ರೀಯವಾಗಿ ಪರೀಕ್ಷೆ ನಡೆಯುವುದರಿಂದ ಅವು ನಂಬಲರ್ಹ. ಮುಖ್ಯವಾಗಿ, ತಾನು ಕಂಡುಹಿಡಿದ ಮಾಹಿತಿಗಳನ್ನು ಚಂದವಾಗಿ, ಮನಸ್ಸಿಗೆ ನಾಟುವಂತೆ ಲೇಖನವಾಗಿಸುವುದು ಇನ್‌ಸೈಟ್‌ಗೆ ಗೊತ್ತು.

ಇಷ್ಟೇ ಅಲ್ಲ, ಕಾನೂನು ಸಲಹೆ, ತೆರಿಗೆ ಮಾಹಿತಿ, ಅನಾರೋಗ್ಯಕರ ತಯಾರಿಕೆಗಳು, ಬಳಕೆದಾರರ ಸಂಬಂಧೀ ಕಾಯ್ದೆಗಳು.. ಮಾಹಿತಿ ಹೇರಳ. ಸ್ವಲ್ಪ ಪ್ರಮಾಣದ ಇಂಗ್ಲೀಷ್ ಗೊತ್ತಿದ್ದವನಿಗೂ ಪತ್ರಿಕೆ ಗಿಟ್ಟುತ್ತದೆ, ಈಗ ನಾನಿಲ್ಲವೇ? ಅದರ ಬಿಡಿ ಪ್ರತಿ ಬೆಲೆ 40 ರೂ. ಮಾರಾಟದಲ್ಲಿ ಬಿಡಿ ಪ್ರತಿ ಸಿಕ್ಕದು. ವಾರ್ಷಿಕ ಚಂದಾ 180 ರೂ. ಅದೇ ಮೂರು, ಐದು ವರ್ಷಗಳಿಗೆ ಆದರೆ ರಿಯಾಯಿತಿ ದರವಿದೆ. ಅನುಕ್ರಮವಾಗಿ ಅದು 450, 700 ರೂ. ಚಂದಾ ಕಳಿಸುವುದಾದರೆ.

ನೆನಪಿರಲಿ, ಪತ್ರಿಕೆಯ ಉದ್ದೇಶ ಗ್ರಾಹಕ ಜಾಗೃತಿಯೇ ವಿನಃ ವ್ಯಾವಹಾರಿಕ ಲಾಭವಲ್ಲ. ಆದರೂ ಪತ್ರಿಕೆ ಬೇಡ, ಮಾಹಿತಿಯಷ್ಟೇ ಬೇಕು ಎನ್ನುವವರು. ವೆಬ್‌ಸೈಟ್‌ನಲ್ಲಿ ಇಣುಕಬಹುದು. ಸಿಇಆರ್ ಸಿ ಗಳ ಬಗೆಗೆ ಲೇಖನಗಳು ನಿಮಗೆ ಗೂಗಲ್ ಹುಡುಕಾಟದಲ್ಲಿ ಸಿಗುತ್ತವೆ.

ಕೊನೆಮಾತು :ಮಿತ್ರ ಜಿತು ಈಗ 'ತನಗೆ ಬರುತ್ತಿರುವ ಕೆಲವು ವಿಶಿಷ್ಠ ಪತ್ರಿಕೆಗಳನ್ನು ನನಗೆ ಕೊಡುವುದಾಗಿ ತಿಳಿಸಿದ್ದಾನೆ. ನಿಮ್ಮಂತ ಇತರ ಸ್ನೇಹಿತರಲ್ಲೂ ನಾನು ಕೇಳುವುದಿಷ್ಟೇ, ನಿಮಗೆ ಉತ್ತಮ ಎನ್ನಿಸಿದ ಪತ್ರಿಕೆಯ ಸ್ಯಾಂಪಲ್ ಪ್ರತಿಯನ್ನು ನನ್ನ ವಿಳಾಸಕ್ಕೆ ಕಳಿಸಿಕೊಡಿ. ನನಗೂ ಮೆಚ್ಚುಗೆಯಾದರೆ ಈ ಅಂಕಣದಲ್ಲಿ ಬಳಸಿಕೊಳ್ಳುವೆ. ಅಷ್ಟಕ್ಕೂ ನನಗೆ ಲಭ್ಯವಿರುವ ಅಪರೂಪದ ಪತ್ರಿಕೆಗಳು ಕೆಲವೊಂದು ಮಾತ್ರ. ಉಳಿದವಕ್ಕೆ ಸಲ್ಲಬೇಕಾದ ಸಮ್ಮಾನ ತಪ್ಪಿಹೋದೀತು. ಕಳಿಸಿಕೊಡುವಿರಾ?

ಲೇಖಕರ ವಿಳಾಸ :
ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X