ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ರೂಗೆ ಒಂದು ಕನ್ನಡ ಮ್ಯಾಗಜೀನ್

By * ಮಾ.ವೆಂ.ಸ. ಪ್ರಸಾದ್
|
Google Oneindia Kannada News

Kannada magazine Sum Sumne
ನಿಮ್ಮೂರಿನ ಹೋಟೆಲ್‌ನಲ್ಲಿ ಈಗ ಒಂದು ಕಾಫಿಯ ಬೆಲೆ ಎಷ್ಟು? ನಮ್ಮೂರಿನಂತ ನಮ್ಮೂರಿನಲ್ಲೇ ಅದಕ್ಕೆ ಐದು ರೂಪಾಯಿ. ಎರಡು ಗುಟುಕಿಗೆ ಆ ಪ್ಲಾಸ್ಟಿಕ್ ಕಪ್ ಖಾಲಿ ಬೇರೆ! 10 ರೂ, 20 ರೂ, 70 ರೂ? ಆಯಾ ನಗರದ, ಆಯಾ ದರ್ಜೆಯ ಹೋಟೆಲ್‌ಗಳನ್ನು ಅನುಸರಿಸಿ ದರವಿದ್ದೀತು. ಅವತ್ತೊಂದು ದಿನ ಬೆಂಗಳೂರಿನ ಏರ್‌ಪೋರ್ಟ್ ಒಳಗೆ ಕಾಫಿ ಕುಡಿದರೆ ಬಿಲ್ ಕೈ ಸುಟ್ಟಿತ್ತು, 70 ರೂಪಾಯಿ! ಇಂತಹ ದಿನಗಳಲ್ಲಿ ಕೇವಲ ಮೂರು ರೂ.ಗೆ ಒಂದು ಮಾಸಪತ್ರಿಕೆ ಪ್ರಕಟಗೊಳ್ಳುತ್ತಿರುವುದು ನಿಮಗೆ ಗೊತ್ತೆ?

ಗಂಭೀರವಾಗಿಯೇ ಹೇಳುತ್ತಿದ್ದೇನೆ, ಪತ್ರಿಕೆಯ ಹೆಸರೇ 'ಸುಮ್ ಸುಮ್ನೆ" ನನಗೆ ನೆನಪಿರುವಂತೆ ಈ ಪತ್ರಿಕೆ ಆರಂಭವಾದದ್ದು ಎಂಟೂ ಹತ್ತೋ ರೂ.ದರದಲ್ಲಿ. ಆಗ ಅದರ ಪುಟ ಸಂಖ್ಯೆ, ಬಹುಷಃ ನೀತಿ ಬೇರೆಯೇ ಇತ್ತು. ಆದರೆ ಮಾರುಕಟ್ಟೆಯಲ್ಲಿ ತನ್ನದೇ ಒಂದು ಅಸ್ತಿತ್ವ ಪ್ರದರ್ಶಿಸಲು ಮೂರು ರೂ.ಗಳ ದರವಿಟ್ಟು ಪತ್ರಿಕೆಯನ್ನು ಪುನರ್ರೂಪಿಸಿದ್ದು ಸುಮಖ ಪ್ರಕಾಶನದ ರೂವಾರಿ ನಾರಾಯಣ ಮಾಳ್ಕೋಡ್.

ಪತ್ರಿಕೋದ್ಯಮದ ಚೂರುಪಾರು ಪರಿಚಯವಿದ್ದವರಿಗೆ ಮಾಳ್ಕೋಡ್‌ರ ಹೆಸರು ಕಿವಿಗೆ ಬಿದ್ದೇಬಿದ್ದಿರುತ್ತದೆ. ಬದುಕಿನ ಮಜಲುಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ದುಡಿದು ಈಗ ತಮ್ಮದೇ ಒಂದು ಬೃಹತ್ ಪುಸ್ತಕ ಪ್ರಕಾಶನವನ್ನು ನಡೆಸುತ್ತಿರುವ ಸಾಹಸಿ ಮಾಳ್ಕೋಡ್. ವೈಯುಕ್ತಿಕವಾಗಿ ಯಾವುದೇ ಪರಿಚಯ ನನಗಿಲ್ಲ. ಆದರೆ ಮೂಲತಃ ಹೊನ್ನಾವರದವರು ಎಂಬ ಮಾಹಿತಿ ಕೇಳಿ ಗೊತ್ತು. ಪ್ರತಿ ತಿಂಗಳು ಮುದ್ದಾಂ ಪುಸ್ತಕ ಪ್ರಕಟನೆ ಮಾಡುವುದು, ಸಂಗೀತ ಸಂಜೆ ಕಾರ್ಯಕ್ರಮ ನಡೆಸುವುದು, ಸಾಹಿತ್ಯಿಕ ಗೋಷ್ಠಿ... ನಡೆಸುವ ಸುಮುಖ ಇವತ್ತು ಈ ಹಿಂದಿನ ಸಂಗಮ ಪ್ರಕಾಶನದ ರಾಗಸಂಗಮ, ಚುಟುಕು ಪತ್ರಿಕೆಗಳ ಜವಾಬ್ದಾರಿಯ ಜೊತೆಗೆ ತನ್ನದೇ ನಾಲ್ಕು ಮಾಸಿಕಗಳನ್ನು ಹೊರತರುತ್ತಿದೆ. ಅದರಲ್ಲೊಂದು ಸುಮ್ ಸುಮ್ನೆ.

ನಿಜ, ಸುಮ್ನೆಯದು ಗಟ್ಟಿ ಸಾಹಿತ್ಯಿಕ ಚಿಂತನೆ ಹಚ್ಚುವಂತದಲ್ಲ. ಹಾಗೆಂದು ಅದು ತನ್ನನ್ನು ಕರೆದುಕೊಂಡೂ ಇಲ್ಲ. ಟೈಂಪಾಸ್‌ಗೆ ಹಾಳೂಮೂಳೂ ತಿಂದು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಅದೇ ದರಕ್ಕೆ ಒಂದು ಸುಮ್ನೆ ಕೊಂಡು ಬಸ್‌ನಲ್ಲಿ ಓದುತ್ತ ಕೂರಬಹುದು. 26 ಪುಟಗಳಲ್ಲಿ ಪುಟ್ಟ ಸಣ್ಣ ಮಾಹಿತಿಗಳ ಸಂಗ್ರಹ. ಚಿತ್ರ ಸಮೇತ. ಇತ್ತೀಚೆಗಂತೂ ನಾಲ್ಕು ಎಂಟು ಪುಟಗಳನ್ನು ಬಹುವರ್ಣಗಳಲ್ಲಿ ಮುದ್ರಿಸುವ ಸಾಹಸವನ್ನು ಮಾಡುತ್ತಿದ್ದಾರೆ. 'ಮಕ್ಕಳ ಜ್ಞಾನ ವಿಕಾಸಕ್ಕಾಗಿ" ಎಂಬ ಉಲ್ಲೇಖ ಪತ್ರಿಕೆಯಲ್ಲಿದ್ದರೂ ಇದು ಎಲ್ಲ ವರ್ಗದ ಓದುಗರಿಗೆ ಸಲ್ಲುತ್ತದೆ. ತುಸು ಖುಷಿ, ಚುಟುಕು ಮಾಹಿತಿಯ ಪತ್ರಿಕೆಯ ತಂತ್ರ ಗಮನ ಸೆಳೆಯುತ್ತದೆ.

ಪತ್ರಿಕೆಗೆ ಇನ್ನೂ ಎರಡು ವರ್ಷಗಳ ಪ್ರಾಯ. ನನ್ನ ಆಪ್ತ ಮಾಹಿತಿದಾರರ ಪ್ರಕಾರ, ಸುಮ್ನೆಯ ಪ್ರಸಾರ ಸಂಖ್ಯೆ ಉತ್ತೇಜನಕಾರಿಯಾಗಿಲ್ಲ. ಬುಕ್‌ಸ್ಟಾಲ್‌ಗಳ ಕೌಂಟರ್ ಸೇಲ್ ಕೂಡ ಚೆನ್ನಾಗಿಲ್ಲ. ಖಂಡಿತವಾಗಿಯೂ ಇದು ಅಸಹನೀಯ ಅಂಶ. ಕೇವಲ ಮೂರು ರೂಪಾಯಿಯ ಈ ಪತ್ರಿಕೆ ಅಷ್ಟು ದುಡ್ಡಿಗೆ ಮೋಸ ಮಾಡುವುದಿಲ್ಲವೆಂದು ನಾನು 'ಯಾವುದೇ ದೇವರ ಮೇಲೆ" ಆಣೆ ಮಾಡಿ ಹೇಳಬಲ್ಲೆ! ಬೇಕೆನ್ನುವವರಿಗೆ ಬುಕ್‌ಸ್ಟಾಲ್‌ಗಳಲ್ಲಿ ಲಭ್ಯ. ಅಥವಾ ವರ್ಷಕ್ಕೆ ಬರೇ 36 ರೂ. ಚಂದಾವನ್ನು ಸುಮುಖ ಡಿಸ್ಟಿಬ್ಯೂಟರ್‍ಸ್, ನಂ.174ಇ/28, 2ನೇ ಮಹಡಿ, ಒಂದನೇ ಮುಖ್ಯರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್‌ಗೇಟ್, ಬೆಂಗಳೂರು -560023ಗೆ ಕಳುಹಿಸಿಕೊಡಬಹುದು. ಫೋನ್ - 080-2314 6060. ಓದಿ ಸುಮ್ನಾಗದಿರಿ, ಪ್ಲೀಸ್!

ಕೊನೆ ಮಾತು : ಕೆಲವು ಮಂದಿ ದಟ್ಸ್ ಕನ್ನಡ ಓದುಗರು ಪದೇ ಪದೆ ವಾಚನಾಲಯವೊಂದರ ಪ್ರಸ್ತಾಪ ನಿಮ್ಮ ಅಂಕಣದಲ್ಲಿ ಕಾಣುತ್ತಿದ್ದೇವೆ. ಅದರ ಬಗ್ಗೆ ಮಾಹಿತಿ ಬೇಕು ಎನ್ನುತ್ತಿದ್ದಾರೆ. ಅಂತವರಲ್ಲಿ ನನ್ನ ವಿನಮ್ರ ವಿನಂತಿ ಇಷ್ಟೇ, ನನ್ನ ಬ್ಲಾಗ್ ಲಿಂಕ್ http://mavemsa.blogspot.com/2009/10/blog-post_21.html ಬಳಸಿ ತಾವು ವಿವರಪೂರ್ಣ ಲೇಖನ ಓದಬಹುದು. ಜೊತೆಜೊತೆಗೆ ನೀವೂ ಈ ಅಕ್ಷರ ಆಂದೋಲನದಲ್ಲಿ ಪಾಲ್ಗೊಂಡರೆ ನಾನು ಕೃತಜ್ಞ. ಇನ್ನೆಂತ ಹೇಳಲಿ?

ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X