• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುರುಷರಿಗಾಗಿ ಮಹಿಳೆ ಆರಂಭಿಸಿದ ಟೇಲರ್‌ಮ್ಯಾನ್

By ಪ್ರಸಾದ ನಾಯಿಕ
|

ನಾವು ಧರಿಸುವ ಉಡುಪು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂಬ ಮಾತು ನಿಜವೆಂದಾದರೆ, ನಮ್ಮ ವ್ಯಕ್ತಿತ್ವದ ಒಂದು ಭಾಗ ದರ್ಜಿ ಅಥವಾ ಶಿಂಪಿ ಅಥವಾ ಟೇಲರ್ ಕೈಯಲ್ಲಿ ಇರುತ್ತದೆ ಎಂಬುದು ಕೂಡ ಅಷ್ಟೇ ಸತ್ಯವಾದ ಮಾತು. ಕಚೇರಿಯಲ್ಲಿ, ಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಮದುವೆ ಮುಂಜಿ ಸಮಾರಂಭಗಳಲ್ಲಿ ನಾವು ಧರಿಸಿರುವ ಬಟ್ಟೆ ಮತ್ತು ಅದರ ಗುಣಮಟ್ಟದಿಂದ ಜನ ನಮ್ಮ ಅಳೆದುತೂಗುತ್ತಾರೆ. ಹಾಗೆಯೆ, ಕಾಲಕಾಲಕ್ಕೆ ತಕ್ಕಂತೆ ಬಟ್ಟೆಗಳ ಕುರಿತು ನಮ್ಮ ಅಭಿರುಚಿಗಳೂ ಬದಲಾಗಿವೆ.

ಬಟ್ಟೆ ಧರಿಸಿದ ನಂತರ ಒಂದೆರಡು ನಿಮಿಷ ನಿಲುವುಗನ್ನಡಿಯ ಮುಂದೆ ನಿಂತು ಪರ್ಫೆಕ್ಟ್ ಫಿಟ್ ಆಗಿದೆಯೋ ಇಲ್ಲವೋ, ನಮ್ಮ ದೇಹಕ್ಕೆ, ನಮ್ಮ ಡಿಮ್ಯಾಂಡಿಗೆ ತಕ್ಕಂತೆ ದರ್ಜಿ ಹೊಲಿದಿದ್ದಾನೋ ಇಲ್ಲವೋ ಎಂಬುದನ್ನು ನೋಡದಿದ್ದರೆ ನಮಗೆ ಸಮಾಧಾನವಿರುವುದಿಲ್ಲ. 'ಅಳತೆ ಸರಿಯಾಗೇ ಕೊಟ್ಟಿದ್ದೆ, ಆದ್ರೂ ವೇಸ್ಟ್ ಸ್ವಲ್ಪ ಟೈಟ್ ಮಾಡಿದ್ದಾನೆ, ಕಾಲುಸಂದಿಯಲ್ಲಿ ಬಿಗಿ, ಯಾಕೋ ಕಿರಿಕಿರಿ' ಮುಂತಾದ ಡೈಲಾಗುಗಳು ಸರ್ವೇಸಾಮಾನ್ಯ. ಇದರ ಸಹವಾಸವೇ ಬೇಡವೆಂದು ಇನ್ಫಾರ್ಮಲ್ ರೆಡಿಮೇಡ್ ದಿರಿಸಿಗೆ ಜನ ಮರುಳಾಗಿದ್ದಾರಾದರೂ, ನಮ್ಮ ದೇಹಕ್ಕೆ ತಕ್ಕಂತೆ ಹೊಲಿದಿರುವ ಫಾರ್ಮಲ್ ಪ್ಯಾಂಟು ಶರ್ಟನ್ನು ಧರಿಸುವ ಮಜವೇ ಬೇರೆ.

ಟೇಲರಿಂಗ್ ಲೋಕದಲ್ಲಿ ಇಣುಕಿದರೆ ರಾರಾಜಿಸುವವರು ಪುರುಷರೇ ಹೊರತು ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೈ ಮತ್ತು ಕಾಲ್ಚಳಕವನ್ನು ತೋರಿಸುವ ಮಹಿಳೆಯರಲ್ಲ. ಮಹಿಳೆಯರ ದಿರಿಸುಗಳನ್ನು ಹೊಲಿಯುವವರು ಕೂಡ ಪುರುಷರೇ. ಪುರುಷರ ಬಟ್ಟೆ ಹೊಲಿಯುವ ಮಹಿಳಾ ಟೇಲರನ್ನು ತೋರಿಸಿ ನೋಡೋಣ? ಎಲ್ಲೆಲ್ಲೂ ಪುರಷರದ್ದೇ ದರ್ಬಾರು. ಅಂಥವರ ನಡುವೆ, ಮಹಿಳೆಯೊಬ್ಬರು ಪುರುಷರು ಅಂದವಾಗಿ ಕಾಣುವಂತೆ, ಅವರವರ ಅಭಿರುಚಿಗೆ ತಕ್ಕಂತೆ ಸೂಟ್ ಹೊಲಿಯುವ ಟೇಲರಿಂಗ್ ಉದ್ಯಮದಲ್ಲಿ ಕಾಲಿಟ್ಟು ಪುರುಷರು ತಲೆಯೆತ್ತಿ ನೋಡುವಂತೆ ಬೆಳೆದಿದ್ದಾರೆ.

ಅವರೇ ಶ್ರೀಲಂಕಾದಲ್ಲಿ ಹುಟ್ಟಿ, ಚೆನ್ನೈನಲ್ಲಿ ಬೆಳೆದು, ಲಂಡನ್, ಪ್ಯಾರಿಸ್ ಸುತ್ತಾಡಿ, ಬೆಂಗಳೂರಿನಲ್ಲಿ ನೆಲೆಗೊಂಡು, ಪುರುಷರ ಬಟ್ಟೆ ಹೊಲಿಯುವ ಟೇಲರ್‌ಮ್ಯಾನ್ ಕಂಪನಿಯನ್ನು ಸ್ಥಾಪಿಸಿರುವ ಯಶಸ್ವಿ ಮಹಿಳೆ ವಿದ್ಯಾ ನಟರಾಜ್. ಇನ್ನೂ ಮೂವತ್ಮೂರರ ಹರೆಯದ ಚೆಲುವೆ ವಿದ್ಯಾ, ಕೇವಲ ಒಂದೂವರೆ ವರ್ಷದಲ್ಲಿ ಟೇಲರಿಂಗ್ ಕ್ಷೇತ್ರದಲ್ಲಿ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಗಮನಿಸುವಂಥ ಸಾಧನೆ ಮಾಡಿದ್ದಾರೆ. ತಾವು ನಡೆದುಬಂದ ಹಾದಿ, ಎದುರಿಸಿದ ಸಂಕಷ್ಟಗಳು, ಉದ್ಯಮದ ವಿಸ್ತಾರದ ಕುರಿತು ಒನ್ಇಂಡಿಯಾ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ದೇಶ ಸುತ್ತು, ಕೋಶ ಓದು : ಅಪ್ಪ ಅಮ್ಮ ಚೆನ್ನೈನವರಾದರೂ ವಿದ್ಯಾ ಹುಟ್ಟಿದ್ದು ಅಆಇಈ ಕಲಿತಿದ್ದು ಶ್ರೀಲಂಕಾದಲ್ಲಿ. ಲಂಡನ್ನಿನ ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಡಿಗ್ರಿ ಪಡೆದುಕೊಂಡು, ಅಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ ಹಣಕಾಸಿನ ವ್ಯವಹಾರದಲ್ಲಿ ಎರಡು ವರ್ಷ ಪೂರೈಸಿದ್ದಾರೆ. ನಂತರ ಫ್ರಾನ್ಸ್‌ನ ಇನ್‌ಸೆಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಪದವಿ ಗಳಿಸಿರುವ ವಿದ್ಯಾ ಹೆಸರಿಗೆ ತಕ್ಕಂತೆ ವಿದ್ಯಾಪಾರಂಗತೆ. ಉದ್ಯಮಿಯಾಗಬೇಕೆಂಬ ಕನಸು ಹೊತ್ತಿದ್ದ ವಿದ್ಯಾ ಚೆನ್ನೈನಲ್ಲಿ ಆಪರೇಷನಲ್ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. [ಪ್ಯಾಂಟು ಎದೆ ತಾವ್ ವಸಿ ಲೂಜು

]

ಬದುಕಿಗೆ ಸಿಕ್ಕ ವಿಶಿಷ್ಟ ತಿರುವು : ವಿದ್ಯಾ ಅವರ ಬದುಕಿಗೆ ತಿರುವುದು ಸಿಕ್ಕಿದ್ದು ಗಣೇಶ್ ನಾರಾಯಣ್ ಅವರನ್ನು ಲಗ್ನವಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡನಂತರ. ಕುಟುಂಬ ಸ್ಥಾಪಿಸಿದ್ದ ಲ್ಯಾಂಡ್‌ಮಾರ್ಕ್ ರಿಟೇಲ್ ಬಿಸಿನೆಸ್ ನಲ್ಲಿ ಕೆಲವರ್ಷ ತೊಡಗಿಕೊಂಡರು. ಉದ್ಯಮದಲ್ಲಿ ಹೊಸತನದ ತುಡಿತದಲ್ಲಿಯೇ ಇದ್ದ ವಿದ್ಯಾ ಅವರು ಬೆಂಗಳೂರಿನ ಮತ್ತೊಬ್ಬ ಉದ್ಯಮಿ ಗೌತಮ್ ಗೊಲ್ಚಾ ಅವರನ್ನು ಭೇಟಿಯಾಗಿದ್ದು ಮತ್ತೊಂದು ಕನಸಿಗೆ ನಾಂದಿ ಹಾಡಿತು. ಸೂಟ್ ಮತ್ತು ಪ್ಯಾಂಟ್ ಉತ್ಪಾದನೆಯಲ್ಲಿ ಏಷ್ಯಾದಲ್ಲಿ ಅಗ್ರಗಣ್ಯರಾಗಿರುವ ಗೌತಮ್ ಜೊತೆ ಸೇರಿಕೊಂಡು ಆರಂಭಿಸಿದ್ದೇ ಟೇಲರ್ ಮ್ಯಾನ್ ಕಂಪನಿ.

ವಿದ್ಯಾ ಹೇಳುವ ಹಾಗೆ, "ನಮ್ಮಲ್ಲಿ ಬೇಕಾದಷ್ಟು ಟೇಲರುಗಳಿದ್ದಾರೆ. ಗುಣಮಟ್ಟದ ಬಟ್ಟೆ ಸಿಗುತ್ತದೆ, ಆದರೆ ನಮ್ಮ ಅಳತೆಗೆ ತಕ್ಕಂತೆ ಬಟ್ಟೆ ಹೊಲಿಯುವುದಿಲ್ಲ. ಬಟ್ಟೆ ಎಲ್ಲಿಂದಲೋ ತರುತ್ತಾರೆ, ಯಾರೋ ಕೈಯಿಂದ ಅಳತೆ ತೆಗೆದುಕೊಳ್ಳುತ್ತಾರೆ, ಮತ್ತಾರೋ ಹೊಲಿಯುತ್ತಾರೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅತ್ಯಂತ ನಿಖರವಾಗಿ ಹೊಲಿಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದನ್ನೆಲ್ಲ ಗಮನಿಸಿ, ಎಲ್ಲ ಅನುಕೂಲಗಳೂ ಒಂದೇ ಕಡೆ ಸಿಗುವ, ಕಡಿಮೆ ಬೆಲೆಯಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ದಿರಿಸನ್ನು ಏಕೆ ನೀಡಬಾರದು ಎಂಬ ವಿಚಾರ ಬಂದಿದ್ದೇ ಶುರುಮಾಡಿದ್ದು ಟೇಲರ್‌ಮ್ಯಾನ್."

ಆಲ್-ಇನ್-ಒನ್ ಸೇವೆ : "ನಮ್ಮಲ್ಲಿಯೇ ಎಲ್ಲಾ ಬ್ರಾಂಡ್ ಬಟ್ಟೆಗಳು ಸಿಗುತ್ತವೆ. ತೆಗೆದುಕೊಂಡ ಎಲ್ಲ ಗ್ರಾಹಕರ ಅಳತೆಗಳು ಡಿಜಿಟಲಿ ಸೇವ್ ಆಗಿರುತ್ತವೆ, ಬಟ್ಟೆಯನ್ನು ಕೂಡ ಅತ್ಯಂತ ನಿಖರವಾಗಿ ಡಿಜಿಟಲ್ ಆಗಿ ಕಟ್ ಮಾಡಲಾಗುತ್ತದೆ. ಮತ್ತೆ ಆರ್ಡರ್ ಮಾಡಬೇಕಾದರೆ, ಮತ್ತೆ ಅಂಗಡಿಗೆ ಬರುವ ಅಗತ್ಯವೇ ಇಲ್ಲ. ಎಲ್ಲಿದ್ದಲ್ಲಿಂದ ಒಂದು ಆರ್ಡರ್ ಕೊಟ್ಟರೆ ಸಾಕು. ಟೇಲರಿಂಗ್ ಉದ್ಯಮದಲ್ಲಿ ಬೇಕಾದಷ್ಟು ಉದ್ಯಮಿಗಳಿದ್ದಾರೆ. ಎಲ್ಲರೂ ನಮಗೆ ಸ್ಪರ್ಧಿಗಳೇ. ಆದರೆ, ನಾವು ಗ್ರಾಹಕರಿಗೆ ಕೊಡುತ್ತಿರುವ ಆಲ್-ಇನ್-ಒನ್ ಸೇವೆಯೇ ನಮ್ಮನ್ನು ವಿಶಿಷ್ಟವಾಗಿಸಿದೆ" ಎಂದು ಹೇಳುವ ವಿದ್ಯಾ ಮಾತುಗಳು ಕೂಡ ಡಿಜಿಟಲಿ ಕಟ್ ಮಾಡಿದ ಬಟ್ಟೆಯಂತಿರುತ್ತವೆ. [ಆಗಿನ ಕಾಲದ ಟೈಲರ್ ಗಳು]

ದರ್ಜಿ ಮನೆಗೇ ಬರುತ್ತಾರೆ, ಬರಮಾಡಿಕೊಳ್ಳಿ : ಟೇಲರ್‌ಮ್ಯಾನ್ ನೀಡುತ್ತಿರುವ ಮತ್ತೊಂದು ಸೇವೆ ಅವರನ್ನು ಇತರ ಎಲ್ಲರಿಗಿಂತ ವಿಭಿನ್ನವಾಗಿಸಿವೆ. ಅದು, ಮನೆಗೇ ಹೋಗಿ ಅಳತೆ ತೆಗೆದುಕೊಂಡು, ಹೊಲಿದ ಬಟ್ಟೆಯನ್ನು ಅವರ ಮನೆಗೆ ತಲುಪಿಸುವುದು. ಇದಕ್ಕೆ ಅವರು ಯಾವುದೇ ಸೇವಾಶುಲ್ಕವನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಸದ್ಯಕ್ಕೆ ಬೆಂಗಳೂರು, ಚೆನ್ನೈ ಮತ್ತು ಕೋಲ್ಕತಾದಲ್ಲಿ ಆರಂಭಿಸಿರುವ ಮಳಿಗೆಗಳನ್ನು ದೇಶದಾದ್ಯಂತ ವಿಸ್ತರಿಸುವ ಬೃಹತ್ ಯೋಜನೆಯನ್ನು ಕೂಡ ವಿದ್ಯಾ ಹಾಕಿಕೊಂಡಿದ್ದಾರೆ.

ಉದ್ಯಮಿಯಾಗಿ ಬೆಳೆಯಬೇಕೆಂಬ ಕನಸು ಹೊತ್ತಿರುವ ನಾರಿಮಣಿಗಳಿಗೆ ಮಾದರಿಯಂತಿರುವ ವಿದ್ಯಾ ಅವರ ಬಟ್ಟೆ ಹೊಲಿಯುವ ಸಿಲ್ವರ್ ಕ್ರೆಸ್ಟ್ ಫ್ಯಾಕ್ಟರಿಯಲ್ಲಿ ಹೆಚ್ಚಿನ ಪಾಲು ಟೇಲರ್ ಗಳೆಲ್ಲ ಮಹಿಳೆಯರೇ ಎಂದು ವಿದ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚು ಉತ್ಪಾದನಾ ಸಾಮರ್ಥ್ಯ ಉಳ್ಳವರಾಗಿರುತ್ತಾರೆ ಎಂಬುದು ಅವರ ಮಾತು. ಆದರೆ, ಟೇಲರಿಂಗ್ ಉದ್ಯಮದಲ್ಲಿ ಉದ್ಯಮಿಯಾಗಿ ಮಹಿಳೆಯರು ಹೆಚ್ಚಾಗಿ ಯಾಕೆ ತೊಡಗಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ವಿದ್ಯಾ ಅವರಲ್ಲಿಯೂ ನಿಖರವಾದ ಉತ್ತರವಿಲ್ಲ.

ಟೇಲರ್ ಮೇಡ್ ಫಾರ್ ಆಲ್ : ಇಷ್ಟೆಲ್ಲ ಮಾತುಕತೆ ನಡೆಯುತ್ತಿರುವಾಗ, ಅವರ www.tailorman.com ವೆಬ್ ಸೈಟನ್ನು ಇಣುಕಿನೋಡಿದಾಗ ಮತ್ತೊಂದು ಪ್ರಶ್ನೆ ಕೊರೆಯುತ್ತಲೇ ಇತ್ತು. ಅದೇನೆಂದರೆ, ಈಸ್ ಟೇಲರ್‌ಮ್ಯಾನ್ ಟೇಲರ್ ಮೇಡ್ ಫಾರ್ ದಿ ರಿಚ್ ಎಂಬುದು. ಇದನ್ನು ಸಾರಾಸಗಟಾಗಿ ಅಲ್ಲಗಳೆಯುತ್ತಾರೆ ವಿದ್ಯಾ. ಒಂಬತ್ತರಿಂದ ಹತ್ತು ಸಾವಿರದಲ್ಲಿ ಅಂತಾರಾಷ್ಟ್ರೀಯ ಉತ್ಕೃಷ್ಟ ಬಟ್ಟೆಯ, ಪರ್ಫೆಕ್ಟ್ ಫಿಟ್ಟಿಂಗ್ ಇರುವ ಗುಣಮಟ್ಟದ ಸೂಟ್ ಗ್ರಾಹಕರ ಕೈಗಿಡಲಾಗುತ್ತದೆ. ಇಷ್ಟು ಕಡಿಮೆ ಬೆಲೆಯಲ್ಲಿ, ಇಷ್ಟು ಉತ್ತಮಮಟ್ಟದ ಸೂಟ್ ಯಾರು ಕೊಡ್ತಾರೆ ಹೇಳಿ ಎಂದು ಮರುಪ್ರಶ್ನಿಸುತ್ತಾರೆ ವಿದ್ಯಾ.

ಸಪ್ತಪದಿ ತುಳಿಯಲು ಸಿದ್ಧನಾಗಿರುವ ಮದುಮಗ, ಡಿಗ್ರಿ ಹಿಡಿದು ವಿದೇಶಕ್ಕೆ ಹಾರಲು ನಿಂತಿರುವ ಗ್ರಾಜ್ಯುಯೇಟ್, ಬೆಂಗಳೂರಿನ ಟೆಕ್ಕಿಗಳು ಬಟ್ಟೆ ಹೊಲಿಸಿಕೊಳ್ಳಲು ಹೆಚ್ಚಾಗಿ ಬರುತ್ತಾರೆ. ಮಾಜಿ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ, ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮುಂತಾದ ಖ್ಯಾತನಾಮರು ಕೂಡ ಇಲ್ಲಿ ಬಟ್ಟೆ ಹೊಲಿಸಿಕೊಂಡಿದ್ದಾರೆ ಎಂದು ವಿದ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆರಂಭದಲ್ಲಿ, ಸಾಕಷ್ಟು ಸಂಕಷ್ಟ ಅನುಭವಿಸಿದರೂ ಈಗ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ ಎಂದು ಹೇಳುವ ವಿದ್ಯಾ ಕಣ್ಣಲ್ಲಿ ಸಾರ್ಥಕ ಭಾವ ಕಾಣುತ್ತದೆ.

ಟೆಲರ್‌ಮ್ಯಾನ್ ಸ್ಪೆಷಾಲಿಟಿ : ನಿಶ್ಚಿತಾರ್ಥ, ಮದುವೆ, ಮುಂಜಿ ಮುಂತಾದ ಸಮಾರಂಭಗಳಿದ್ದಾಗ ಇಡೀ ಕುಟುಂಬದ ಸಲುವಾಗಿ ಆರ್ಡರುಗಳನ್ನು ತೆಗೆದುಕೊಂಡಿದ್ದೂ ಇದೆ. ಅಲ್ಲದೆ, ಕಾರ್ಪೊರೇಟ್ ಕಂಪನಿಗಳನ್ನು ಸಂಪರ್ಕಿಸಿ ಅಲ್ಲಿನ ಉದ್ಯೋಗಿಗಳಿಗಾಗಿ ಹೋಲ್ ಸೇಲ್ ಆಗಿ ಬಟ್ಟೆಗಳನ್ನು ಹೊಲಿಸಿಕೊಟ್ಟಿದ್ದು ನಾವು ನೀಡುತ್ತಿರುವ ಸೇವೆಯ ಸಂಕೇತ ಎಂದು ವಿದ್ಯಾ ಹೇಳಲು ಮರೆಯುವುದಿಲ್ಲ. ಮಧ್ಯಮವರ್ಗದವರಿಗೆ ಕೂಡ ಹೊರೆಯಾಗದಂತೆ ಅತ್ಯುತ್ಕೃಷ್ಟ ಗುಣಮಟ್ಟದ ಬಟ್ಟೆ ಹೊಲಿದು ಕೊಡುವುದೇ ನಮ್ಮ ಸ್ಪೆಷಾಲಿಟಿ ಅಂತಾರೆ ವಿದ್ಯಾ.

ಪುರುಷರ ಬಟ್ಟೆ ಹೊಲಿಯುವುದಕ್ಕಾಗಿ ಆರಂಭಿಸಲಾಗಿರುವ ಟೇಲರ್‌ಮ್ಯಾನ್ ನಿಧಾನವಾಗಿ ಮಹಿಳೆಯರ ಸೂಟ್ ಕೂಡ ಹೊಲಿಯಲು ಆರಂಭಿಸಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರು ಪ್ಯಾಂಟ್ ಶರ್ಟ್ ಧರಿಸುವುದು ವಿರಳವಾಗಿರುವುದು ಕೂಡ ಇದಕ್ಕೆ ಕಾರಣ. ಆದರೆ, ಹೆಚ್ಚೆಚ್ಚು ಮಹಿಳಾ ಉದ್ಯಮಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಒಂದು ವೇದಿಕೆ ನಿರ್ಮಿಸುವ ಕನಸನ್ನು ಕೂಡ ವಿದ್ಯಾ ಕಟ್ಟಿಕೊಂಡಿದ್ದಾರೆ. ಅವರ ಕನಸುಗಳು ಸಾಕಾರವಾಗಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Success story of a woman entrepreneur who started tailoring business for the men. Tailoring business is dominated by men. But, Vidya Nataraj took it as a challenge and proved by starting Tailorman mens suit online business, along with her partner Gautam Golchha who is Asia’s largest suits manufacturer, making for brands such as Hugo Boss and Ralph Lauren, in Bangalore, Chennai and Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more