ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗನ ಗಿನ್ನಿಸ್ ಸಾಹಸಕ್ಕೆ ನಿಮ್ಮ ಬೆಂಬಲವಿರಲಿ

By ಪ್ರಸಾದ ನಾಯಿಕ
|
Google Oneindia Kannada News

ದಿನಕ್ಕೆಷ್ಟು ನಡೆಯುತ್ತೀರಿ? ಇಂಥ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಬೆಳಗಿನ ಜಾವ ಪಾರ್ಕಲ್ಲಿ ಮೂರು ಕಿ.ಮೀ.? ಅಂಗಡಿಗೆ, ಬಸ್ ಸ್ಟಾಪಿನಿಂದ ಕಚೇರಿಗೆ ಅಲ್ಲಿಇಲ್ಲಿ ಅಂತ ಇನ್ನೆರಡು ಕಿ.ಮೀ. ಸೇರಿಸಿದರೂ ದಿನಕ್ಕೆ ಐದಾರು ಕಿ.ಮೀ. ದಾಟುವುದಿಲ್ಲ. ಇನ್ನೊಂದು ನಾಲ್ಕು ಹೆಜ್ಜೆ ನಡೆಯೋಣವೆಂದರೆ ಉಸ್ಸಪ್ಪ ಅಂತ ಸುಸ್ತಾಗಿ ಕುಳಿತುಕೊಂಡುಬಿಡುತ್ತೇವೆ.

ಆರೋಗ್ಯ ದಿವಿನಾಗಿರಬೇಕೆಂದು, ರೋಗ ನಿರೋಧಕ ಶಕ್ತಿ ಹೆಚ್ಚಾಗಲೆಂದು, ಕೊಬ್ಬು ಕರಗಿಸಬೇಕೆಂದು, ಮಧುಮೇಹ ಹದ್ದುಬಸ್ತಿನಲ್ಲಿಡಬೇಕೆಂದು ಹಲವರು ಬೆಳಗಾನೆದ್ದು ನಡೆಯುತ್ತಾರೆ. ಆದರೆ, ಯಾರೂ ದಾಖಲೆ ಸೃಷ್ಟಿಸಬೇಕೆಂದು ನಡೆಯುವುದಿಲ್ಲ. ಅಲ್ಲದೆ, ನಡಿಗೆಯಲ್ಲಿ ಅಡಗಿರುವ ಶಕ್ತಿ ಏನೆಂದು ಅನೇಕರಿಗೆ ತಿಳಿದಿರುವುದಿಲ್ಲ. ನಡಿಗೆಯ ಸ್ಪರ್ಧೆಗಳಿವೆಯಾದರೂ, ಅದರಲ್ಲಿ ನಮ್ಮ ದೇಶದವರು, ಅದರಲ್ಲೂ ಕನ್ನಡಿಗರು ಯಾವುದೇ ದಾಖಲೆ ಸೃಷ್ಟಿಸಿಲ್ಲ.

ಆದರೆ, ನಮ್ಮ ಕನ್ನಡದವರೇ ಆದ ಒಬ್ಬರು ನಿಯಮಿತ ಅವಧಿಯಲ್ಲಿ ಅತಿಹೆಚ್ಚು ದೂರ ಕ್ರಮಿಸಿದ ಗಿನ್ನಿಸ್ ದಾಖಲೆಯನ್ನು ಮುರಿಯಲು ಪಣ ತೊಟ್ಟಿದ್ದಾರೆ. ಕಳೆದ 31 ವರ್ಷಗಳಿಂದ ಅಬಾಧಿತವಾಗಿರುವ ಈ ದಾಖಲೆಯನ್ನು ಸಂಕಲ್ಪ ಮಾಡಿ, ಗಿನ್ನಿಸ್ ಸಂಸ್ಥೆಯ ಅನುಮತಿ ಪಡೆದು, ಇನ್ನೇನು ಕೆಲವೇ ದಿನಗಳಲ್ಲಿ ವಿಜಯಯಾತ್ರೆಯನ್ನು ಆರಂಭಿಸಲಿರುವವರು ಬೆಂಗಳೂರಿನ ನಿವಾಸಿ, ಅಪ್ಪಟ ಕನ್ನಡಿಗ 43 ವರ್ಷದ ಪ್ರಶಾಂತ್ ಹುಲುಮನಿ. ಕಲಿಯುಗದ ಕಲ್ಪತರು ರಾಘವೇಂದ್ರ ಸ್ವಾಮಿಗಳ ಭಕ್ತರಾಗಿರುವ ಪ್ರಶಾಂತ್ ಅವರು ತಮ್ಮ ಕನಸಿನ ಯಾತ್ರೆಯ ವಿವರಗಳನ್ನು ಒನ್ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ.

Let's support Kannadiga who is set to break Guinness record

ಹಿಂದಿನ ದಾಖಲೆ ವೀರ : ಈ ದಾಖಲೆ ನಿರ್ಮಿಸುವುದರಲ್ಲೇನು ವಿಶೇಷವಿದೆಯೆಂದು ನಿಮಗೆ ಪ್ರಶ್ನೆ ಕಾಡಿದರೆ ಅಚ್ಚರಿಯಿಲ್ಲ. ಅಧಿಕೃತ ಮಾಹಿತಿಯ ಪ್ರಕಾರ, ಯುನೈಟೆಡ್ ಕಿಂಗಡಂನ ಜಾರ್ಜ್ ಮೀಗನ್ ಎಂಬಾತ ದಕ್ಷಿಣ ಅಮೆರಿಕಾದ ದಕ್ಷಿಣದ ತುದಿಯಿಂದ ಉತ್ತರ ಅಮೆರಿಕಾದ ಉತ್ತರದ ತುದಿಯವರೆಗೆ 30,608 ಕಿ.ಮೀ. ಆರೂವರೆ ವರ್ಷಗಳ ಕಾಲ ಕ್ರಮಿಸಿ 1983ರಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯುವುದು ಒತ್ತಟ್ಟಿಗಿರಲಿ, ಪ್ರಯತ್ನವನ್ನು ಕೂಡ ಯಾರೂ ಮಾಡಿಲ್ಲ.

ಈಗ ಇದನ್ನು ಧೂಳಿಪಟ ಮಾಡಲು ಪ್ರಶಾಂತ್ ಅವರು ಸಿದ್ಧತೆ ನಡೆಸಿದ್ದಾರೆ. ಅಚ್ಚರಿಯೆಂದರೆ, ಈ ದಾಖಲೆಯನ್ನು ಪ್ರಶಾಂತ್ ಅವರು ಈಗಾಗಲೆ ಮುರಿದುಬಿಟ್ಟಿದ್ದಾರೆ. ಅದು ಹೇಗೆಂದರೆ, ಪ್ರಶಾಂತ್ ಅವರು ದಿನಕ್ಕೆ ಕನಿಷ್ಠ 30 ಕಿ.ಮೀ.ನ್ನು ನಡಿಗೆಯಲ್ಲೇ ಕ್ರಮಿಸುತ್ತಾರೆ. ನೀವು ಅವರನ್ನು ಎಲ್ಲೇ ಕರಿಯಿರಿ, ದುರುದುರನೆ ಬಿರಬಿರನೆ ನಡೆಯುತ್ತ ಅಲ್ಲಿಗೆ ಬರುತ್ತಾರೆ. ಈ ಜೀವನಶೈಲಿಯನ್ನು ಅವರು ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಇದಾವುದೂ ದಾಖಲಾಗದ ಕಾರಣ ದಾಖಲೆಯಾಗಿ ಉಳಿದಿಲ್ಲ.

ನಡಿಗೆ ಅಭಿವೃದ್ಧಿ ಕಡೆಗೆ : ಕೇವಲ ದಾಖಲೆ ಮುರಿಯಲಿಕ್ಕೆಂದು ಅವರು ಈ ಪ್ರಯತ್ನಕ್ಕೆ ಕೈಹಾಕುತ್ತಿಲ್ಲದಿರುವುದು ಗಮನಿಸಬೇಕಾದ ಸಂಗತಿ. ಇದರ ಹಿಂದೆ ಮಹತ್ ಉದ್ದೇಶವೂ ಇದೆ. ಭಾರತೀಯನೊಬ್ಬನ ಹೆಸರಿಗೆ ಈ ದಾಖಲೆ ಅಂಟಿಕೊಂಡರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ? ಭಾರತ ಧ್ವಜವನ್ನು ಎತ್ತಿಹಿಡಿಯುವುದರ ಜೊತೆಗೆ ಭಾರತ ಇಂದು ಎದುರಿಸುತ್ತಿರುವ ಆರೋಗ್ಯ, ಕುಡಿಯುವ ನೀರಿನ ಸಮಸ್ಯೆಯನ್ನು, ದೇಶದ ಉದ್ದಗಲಕ್ಕೂ ಸುತ್ತಾಡಿ, ಜನರನ್ನು ಭೇಟಿಯಾಗಿ, ಅವುಗಳ ಮಹತ್ವವನ್ನು ಪ್ರಚುರಪಡಿಸಬೇಕೆಂಬ ಮಹತ್ವಾಕಾಂಕ್ಷೆಯನ್ನೂ ಅವರು ಹೊಂದಿದ್ದಾರೆ.

ಜಾರ್ಜ್ ಮೀಗನ್ ಆರೂವರೆ ವರ್ಷದಲ್ಲಿ ದಾಖಲೆ ನಿರ್ಮಿಸಿದ್ದರೆ, ಪ್ರಶಾಂತ್ ಅವರು ಅದಕ್ಕೂ ಹೆಚ್ಚು ಅಂದರೆ, ಅಂದಾಜು 40 ಸಾವಿರ ಕಿ.ಮೀ. ದೂರವನ್ನು ಕೇವಲ 5 ವರ್ಷದಲ್ಲಿ ಕ್ರಮಿಸಬೇಕೆಂಬ ಗುರಿ ಹೊಂದಿದ್ದಾರೆ. ಅವರು ಈ ದಾಖಲೆಯನ್ನು ಹೇಗೆ ಕ್ರಮಿಸಲಿದ್ದಾರೆ, ಯಾರಿಂದ ಬೆಂಬಲ ಪಡೆಯಲಿದ್ದಾರೆ, ಅವರ ಜೊತೆ ಯಾರ್ಯಾರು ಸಾಗುತ್ತಾರೆ, ಅದಕ್ಕೆ ತಗಲುವ ಖರ್ಚುವೆಚ್ಚಗಳೆಷ್ಟು, ಮುಂದೆ ಏನೇನು ಸಾಧಿಸಬೇಕೆಂಬ ಆಸೆಯನ್ನು ಪ್ರಶಾಂತ್ ಹೊಂದಿದ್ದಾರೆ ಎಂಬುದನ್ನು ತಿಳಿಯುವ ಮೊದಲು, ಅವರು ಈ ಪರಿಯ ನಡಿಗೆ ಶುರು ಮಾಡಿದ್ದು ಹೇಗೆ ಎಂಬ ಸ್ವಾರಸ್ಯಕರ ಸಂಗತಿ ತಿಳಿಯೋಣ.

ಗಿನ್ನಿಸ್ ದಾಖಲೆಗೆ ಸ್ಫೂರ್ತಿ : ಪ್ರಶಾಂತ್ ಹುಲುಮನಿ ಅವರು ಒಬ್ಬ ಬ್ಯಾಂಕರ್. ಐಡಿಬಿಐ (ಡಿಎಸ್ಎ) ಬ್ಯಾಂಕಿನಲ್ಲಿ ಮನೆಸಾಲ ವಿಭಾಗದಲ್ಲಿ ಉನ್ನತ ಹುದ್ದೆ ಹೊಂದಿದ್ದರು ಮತ್ತು ಮೈ ಮನಿ ಮಂತ್ರಾ ಕಂಪನಿಯಲ್ಲಿ ಸಹಾಯಕ ಉಪಾಧ್ಯಕ್ಷರಾಗಿದ್ದರು. ಸುಮಾರು ಹದಿನೈದು ವರ್ಷಗಳ ಕಾಲ ಸಾಲ, ಬಡ್ಡಿ, ಚಕ್ರಬಡ್ಡಿ ಲೆಕ್ಕಾಚಾರದಲ್ಲೇ ಕಳೆಯುತ್ತಿದ್ದರೂ, ಬಾಲ್ಯದಿಂದಲೂ ವಿಭಿನ್ನವಾಗಿ ವಿಚಾರ ಮಾಡುತ್ತಿದ್ದ ಅವರ ಮನದಲ್ಲಿ ಏನಾದರೂ ಸಾಧಿಸಬೇಕೆಂಬ ವಿಚಾರ ಗುಂಗಿ ಹುಳುವಿನಂತೆ ಗುಂಗುಡುತ್ತಲೇ ಇತ್ತು. ಆದರೆ, 2010ರಲ್ಲಿ ಆ ಘಟನೆ, ಏನಾದರೂ ಸಾಧಿಸುವುದಿರಲಿ, ಬದುಕುಳಿದರೆ ಸಾಕಪ್ಪ ಅನ್ನುವಂಥ ಪರಿಸ್ಥಿತಿ ತಂದೊಡ್ಡಿತ್ತು.

2010ರಲ್ಲಿ ಅವರು ಅಪಘಾತಕ್ಕೊಳಗಾಗಿ ಹಲವಾರು ತಿಂಗಳುಗಳ ಕಾಲ ಹಾಸಿಗೆ ಹಿಡಿಯುವಂತಾಯಿತು, ಕೆಲಸಕ್ಕೆ ಗುಡ್ ಬೈ ಹೇಳುವಂತಾಯಿತು, ಅಡ್ಡಾಡಲೂ ಬಾರದಂಥ ಸ್ಥಿತಿಯಲ್ಲಿ ಜೀವನವೇ ಬೇಸರ ತರಿಸಿತ್ತು. ಆದರೆ, ಇದೇ ಅನಾರೋಗ್ಯ ನಡಿಗೆಯಲ್ಲಿರುವ ಶಕ್ತಿಯನ್ನು ಅರಿಯಲು ಅವರಿಗೆ ಸಹಕಾರಿಯಾಯಿತು. ಮಳೆಯಿರಲಿ, ಮರಗಟ್ಟುವ ಚಳಿಯಿರಲಿ, ಕಲಬುರುಗಿಯ ಬೇಸಿಗೆಯ ಬಿಸಿಲಿರಲಿ... ವಾತಾವರಣದ ವೈರುಧ್ಯತೆಯನ್ನು ಧಿಕ್ಕರಿಸಿ ನಡಿಯುವ ತಾಕತ್ತು ಇಂದು ಅವರು ಬೆಳೆಸಿಕೊಂಡಿದ್ದಾರೆ. ಮನೋಬಲವೇ ಅವರನ್ನು ಈ ಹಂತಕ್ಕೆ ತಂದುನಿಲ್ಲಿಸಿದೆ.

ಆರಂಭದಲ್ಲಿ ಪಾದ ಅತೀವ ಉಷ್ಣದಿಂದ ಬೆಂದು ಹೋದರೂ, ಮೊಣಕಾಲು 'ಯೋ, ನಿಲ್ಸಪ್ಪ ನಿನ್ನ ನಡಿಗೆ ಸಾಕು' ಎಂದು ಕೂಗುತ್ತಿದ್ದರೂ, ಇದೇನಿದು ನಿಮ್ಮ ಹುಚ್ಚಾಟ ಅಂತ ಮನೆಮಂದಿಯೆಲ್ಲ ತಕರಾರು ತೆಗೆಯುತ್ತಿದ್ದರೂ ಅವರು ನಡಿಗೆಯನ್ನು ನಿಲ್ಲಿಸಿಲ್ಲ. ಅವರು ಈಗ ಯಾವ ಸ್ಥಿತಿಯನ್ನು ತಲುಪಿದ್ದಾರೆ ಎಂದರೆ, ಪ್ರತಿದಿನ ಕನಿಷ್ಠ 25ರಿಂದ 30 ಕಿ.ಮೀ. ನಡಿಯದಿದ್ದರೆ ಅವರಿಗೆ ಇರುಸುಮುರುಸು ಆಗಲು, ಆರೋಗ್ಯ ಏರುಪೇರಾಗಲು ಆರಂಭಿಸುತ್ತದೆ.

ದೇಶಕ್ಕಾಗಿ ಮಗನೆ ಏನಾದರೂ ಮಾಡು ಸಾಧನೆ : ಹೀಗಾಗಿ, ಇನ್ನು ಮುದುಕನಾಗಿ ಕೋಲು ಹಿಡಿಯುವ ಮೊದಲು, ಭಾರತಕ್ಕಾಗಿ ಈ ದಾಖಲೆಯನ್ನು ಸೃಷ್ಟಿಸಬೇಕೆಂದು ವಿಚಾರ ಅವರನ್ನು ಕಾಡಲು ಆರಂಭಿಸಿತು. ತಲೆಗೆ ಈ ವಿಚಾರ ಹೊಳೆದದ್ದೇ ಅವರು ನಡಿಗೆಯ ದಾಖಲೆ ಏನಾದರೂ ಇದೆಯಾ ಎಂದು ಹುಡುಕಲು ಪ್ರಾರಂಭಿಸಿದರು. ಗಿನ್ನಿಸ್ ಸಂಸ್ಥೆಯನ್ನು ಸಂಪರ್ಕಿಸಿದರು. ತಮ್ಮ ವಿಚಾರ, ಯೋಚನೆ, ಉದ್ದೇಶ, ತಮ್ಮಲ್ಲಿರುವ ತಾಕತ್ತು ಅವರಿಗೆ ಮನವರಿಕೆ ಮಾಡಲು ಹರಸಾಹಸ ಪಡಬೇಕಾಯಿತು. ಕಡೆಗೂ, ಛಲಬಿಡದ ತ್ರಿವಿಕ್ರಮನ ಉದ್ದೇಶಕ್ಕೆ ಗಿನ್ನಿಸ್ ಸಂಸ್ಥೆ ಹಸಿರು ನಿಶಾನೆ ನೀಡಿದೆ.

ಇದಕ್ಕಾಗಿ ಅವರು ವರ್ಲ್ಡ್ ರೆಕಾರ್ಡ್ ಅಸ್ಪೈರಂಟ್ಸ್ ಫೌಂಡೇಷನ್ (WRAF) ಎಂಬ ಲಾಭರಹಿತ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಕ್ರೀಡೆಯಲ್ಲಿ ದಾಖಲೆ ನಿರ್ಮಿಸುವ ಆಕಾಂಕ್ಷೆ ಉಳ್ಳವರಿಗೆ ಆಸರೆಯಾಗಿ, ನೀರೆರೆಯುವ ಉದ್ದೇಶವನ್ನು ಹೊಂದಿದ್ದಾರೆ. ಜೊತೆಗೆ, ಜನರ ವೈಯಕ್ತಿಯ ಜೀವನಮಟ್ಟ ಸುಧಾರಿಸುವ, ಆರೋಗ್ಯ ವೃದ್ಧಿಸುವ, ಪಾದಚಾರಿಗಳ ಸುರಕ್ಷತೆಗಾಗಿ ಅಭಿಯಾನ ನಡೆಸುವ, ಮಳೆನೀರು ಕೊಯ್ಲಿಗೆ ಉತ್ತೇಜನ ನೀಡುವ ಕೆಲಸಕ್ಕೂ ಕೈಹಾಕಲಿದ್ದಾರೆ.

ನಡೆಯುವುದರಿಂದ ಆಗುವ ಲಾಭಗಳು : ಪ್ರಶಾಂತ್ ಅವರ ಪ್ರಕಾರ, ಸುದೀರ್ಘ ನಡಿಗೆಯಿಂದ ಹಲವಾರು ಪ್ರಯೋಜನಗಳಿವೆ. ಶಿಸ್ತುಬದ್ಧ ನಡಿಗೆಯನ್ನು ಜನರು ರೂಢಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಾದ ಹೃದಯ ಸಂಬಂಧಿ ರೋಗಗಳಿಗೆ, ಮಧುಮೇಹ, ಕ್ಯಾನ್ಸರ್, ತೀವ್ರತರ ಪುಪ್ಪುಸ ರೋಗಗಳಿಗೆ ತುತ್ತಾಗಲಿದ್ದಾರೆ. ಈ ದಶಕದ ಕೊನೆಯಲ್ಲಿ ಹೆಚ್ಚಿನ ಜನರು ತೀವ್ರ ಖಿನ್ನತೆಗೆ ಒಳಗಾಗಲಿದ್ದಾರೆ. ನಡಿಗೆ ಈ ಅನೇಕ ರೋಗಗಳಿಗೆ ರಾಮಬಾಣವಾಗಿದ್ದು, ಸಾವಿನ ಸಂಖ್ಯೆ ಕೂಡ ಇದರಿಂದ ತಗ್ಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ನಡಿಗೆಯ ದಾಖಲೆಯ ಯೋಜನೆ ಕಣ್ಮುಂದೆ ಬಂದಾಗ ಅವರಿಗೆ ಸವಾಲಾಗಿ ನಿಂತಿದ್ದು ತಗಲುವ ಖರ್ಚುವೆಚ್ಚ. ಇದಕ್ಕೆ ಬೇಕಾದ ವಾಹನಗಳು, ವಿಡಿಯೋ ರೆಕಾರ್ಡ್ ಮಾಡುವ ತಂತ್ರಜ್ಞರು, ವೈದ್ಯರು, ಅಡುಗೆ ಮಾಡುವವರು, ಫಿಜಿಯೋಥೆರಪಿಸ್ಟ್, ಮಸಾಜ್ ಮಾಡುವವರು, ಭದ್ರತಾ ಸಿಬ್ಬಂದಿ, ಬಟ್ಟೆ ಒಗೆಯುವವರು... ಇವರ ಸಹಾಯಕರು... ಇದೆಲ್ಲರ ತಗಲುವ ವೆಚ್ಚದ ಲೆಕ್ಕಾಚಾರ ಹಾಕುತ್ತಿದ್ದಾರೆ ಪ್ರಶಾಂತ್. ಇದರ ಅಗಾಧತೆಯಿಂದ ಎದೆಗುಂದದೆ ಕಾರ್ಯತತ್ಪರರಾಗಿರುವ ಅವರು ಹಲವಾರು ಪ್ರಾಯೋಜಕರನ್ನು ಸಂಪರ್ಕಿಸಿದ್ದು, ಅವರಿಂದ ಥಂಬ್ಸ್ ಅಪ್ ಸಿಗ್ನಲ್ ದೊರೆತಿದೆ.

ಕಾರ್ಪೋರೇಟ್ ಕಚೇರಿಗಳು, ಸರಕಾರಿ ಸಂಸ್ಥೆಗಳು, ಸಾಫ್ಟ್ ವೇರ್ ಕಂಪನಿಗಳು, ಅನಿವಾಸಿ ಭಾರತೀಯರು ಹಾಗು ವೈಯಕ್ತಿಕವಾಗಿ ಆರ್ಥಿಕ ಬೆಂಬಲ ನೀಡಬೇಕು ಮತ್ತು ಈ ದೇಶಸೇವೆಗೆ ಉತ್ತೇಜನ ನೀಡಬೇಕು ಎಂದು ಪ್ರಶಾಂತ್ ಅವರು ಕೋರಿದ್ದಾರೆ. ಇವರು ಹುಟ್ಟುಹಾಕಿರುವ ಸಂಸ್ಥೆ ವಿದೇಶಿ ಹಣಕಾಸು ಸಹಾಯ ಪಡೆಯಲು ಅರ್ಹತೆ ಕೂಡ ಹೊಂದಿದೆ. ಕಾರ್ಪೋರೇಟ್ ಸಂಸ್ಥೆಗಳು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಡಿಯಲ್ಲಿ ಪ್ರಾಯೋಜಕತ್ವ ಮಾಡಬಹುದಾಗಿದೆ. ಈ ಯೋಜನೆ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ. ಸದ್ಯಕ್ಕೆ ಈ ಕನ್ನಡಿಗನ ಸಾಹಸಕ್ಕೆ ಬೆನ್ನುತಟ್ಟೋಣ ಬನ್ನಿ.

ಪ್ರಶಾಂತ್ ಹುಲುಮನಿ ವಿಳಾಸ : World Record Aspirants Foundation, No. 129, Temple Street, ITI Laout, Banashankari 3rd stage, Bengaluru - 560 085
ದೂರವಾಣಿ : 080 50028829
ಈಮೇಲ್ : [email protected]

English summary
Let's support Kannadiga Prashanth Hulumani from Bengaluru, who is set to break Guinness World record of Fastest Journey on Foot (walking), set by UK man George Meegan 31 years back. He also wants to spread patriotism, health benefits of walking, conservation of water etc during his journey in India for 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X