• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನೂ ಮೊದಲ ದಿನವೇ 'ಕೆಜಿಎಫ್' ಸಿನೆಮಾ ನೋಡಲು ಹೋಗಿದ್ದೆ!

|

ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ನಾಡುಗಳಲ್ಲಿಯೂ ಧೂಳೆಬ್ಬಿಸಿರುವ, ಚಿಂದಿ ಚಿತ್ರಾನ್ನ ಅಂತ ಅನ್ನಿಸಿಕೊಂಡಿರುವ, ಕನ್ನಡ ಚಿತ್ರರಂಗದ ಬಂಗಾರದ ರೇಖೆ, ಮಾಸ್ಟರ್ ಪೀಸ್ ಅನ್ನಿಸಿಕೊಂಡಿರುವ 'ಕೆಜಿಎಫ್' ಮೊದಲ ದಿನವೇ ನೋಡಬೇಕು ಅಂತ ಅದಮ್ಯ ಆಸೆ ಹುಟ್ಟಿಕೊಂಡಿತು.

ಇಡೀ ಫೇಸ್ ಬುಕ್ ತುಂಬ ಬೆಳ್ಳಂಬೆಳಗ್ಗೆಯೇ ತುಂಬಿಕೊಂಡಿರುವ ಅತೀವ ಹೊಗಳಿಕೆಯ ಮಾತುಗಳನ್ನು, ಸ್ಟಾರ್ ಲೇಖಕರ ಒನ್ ಲೈನ್ ವಿಮರ್ಶೆಗಳನ್ನು ಓದಿ ತಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಇವತ್ತೇ ರಾಕಿಂಗ್ ಸ್ಟಾರ್ ಚಿತ್ರವನ್ನು ನೋಡಿಯೇಬಿಡಬೇಕು, ಕಚೇರಿಗೆ ಚಕ್ಕರ್ ಹಾಕದೆಯೆ ಎಂದು ನಿರ್ಧರಿಸಿ ಬುಕ್ ಮೈ ಶೋ ತೆರೆದೆ.

'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

ಮಲ್ಟಿಪ್ಲೆಕ್ಸ್ ಗಳೆಲ್ಲ ಹೆಚ್ಚೂಕಡಿಮೆ ಭರ್ತಿ, ಇದ್ದರೂ ಮೂಲೆಯಲ್ಲಿ ಅಥವಾ ಮೊದಲ ಸಾಲಿನಲ್ಲಿ ಕೆಲ ಸೀಟುಗಳು ಖಾಲಿ ಇದ್ದುದನ್ನು ನೋಡಿ, ಈ ಸಲ ಕುಟುಂಬ ಸಮೇತನಾಗಿ ಹೋಗದೆಯೆ ಧೈರ್ಯ ಮಾಡಿ ನಾನೊಬ್ಬನೇ ಸಿನೆಮಾಕ್ಕೆ ಹೋಗಿಬರುತ್ತೇನೆ ಎಂದು ನಿರ್ಧರಿಸಿ, ಮನೆಯ ಹತ್ತಿರದಲ್ಲೇ ಇರುವ, ಎಂದೂ ಹೋಗದ ಥಿಯೇಟರಿಗೆ ಟಿಕೆಟ್ ಬುಕ್ ಮಾಡಿದೆ.

ಮಲ್ಟಿಪ್ಲೆಕ್ಸ್ ಗಳಲ್ಲಿ ಮುನ್ನೂರಐವತ್ತರಿಂದ ಆಚೆ ಇದ್ದರೆ, ಈ ಥಿಯೇಟರಲ್ಲಿ ನೂರಿಪ್ಪತ್ತು ರುಪಾಯಿ! ಯಾವ ಥಿಯೇಟರಲ್ಲಿ ನೋಡಿದರೇನು? ನಾನೂರಿಪ್ಪತ್ತು ಕೊಟ್ಟರೂ ಅದೇ ಸಿನೆಮಾ ನೋಡೋದು, ನೂರಿಪ್ಪತ್ತು ತೆತ್ತರೂ ಅದೇ ಕೆಜಿಎಫ್ ನೋಡೋದು ಅಂದುಕೊಂಡು, ಒಂದಿಷ್ಟು ದುಡ್ಡು ಉಳಿಸಿದ್ದಕ್ಕೆ ನನಗೆ ನಾನೇ ಶಭಾಶ್ ಗಿರಿ ಕೊಟ್ಟುಕೊಂಡೆ, ಕಚೇರಿಯಲ್ಲಿ ಈ ವಿಷಯವನ್ನು ಎಲ್ಲರೆದಿರು ಹೇಳಿ ಸ್ವಯಂಪ್ರಶಂಸೆ ಮಾಡಿಕೊಂಡೆ.

'ಕೆ.ಜಿ.ಎಫ್' ಫಸ್ಟ್ ಹಾಫ್ ವಿಮರ್ಶೆ: ಇಂಟರ್ವೆಲ್ ವರೆಗೂ ಚಿಂದಿ ಗುರು.!

ಆ ಥಿಯೇಟರ್ ಮುಂದೆಯೇ ಹದಿನೈದು ವರ್ಷಗಳಿಂದ ಅಡ್ಡಾಡುತ್ತಿದ್ದರೂ ಒಂದೇ ಒಂದು ಸಿನೆಮಾ ಅಲ್ಲಿ ನೋಡಿದವನಲ್ಲ. ಅಂತೂ ಅಲ್ಲಿ ಸಿನೆಮಾ ನೋಡುವ ಮುಹೂರ್ತ ಕೂಡಿಬಂದಿದೆ ಎಂದು ಕಚೇರಿಯಿಂದ ಮೂರು ಗಂಟೆ ಮೊದಲೇ ಹೊರಟು, ಹಾದಿಯಲ್ಲಿಯೇ ಒಂದಿಷ್ಟು ಈರುಳ್ಳಿ ಪಕೋಡಾ, ಬಾಳೆಕಾಯಿ ಬಜ್ಜಿ, ಮಿರ್ಚಿ ಬಜ್ಜಿ ಕಟ್ಟಿಸಿಕೊಂಡು ಬೈಕನ್ನೇರಿ ಥಿಯೇಟರ್ ಕಡೆ ಹೊರಟೆ.

ಧೂಳೆಬ್ಬಿಸಿರುವ ಸಿನೆಮಾ ನೋಡಲು ಬಂದ ಅಪಾರಜನಸ್ತೋಮದಿಂದ ಧೂಳೋಧೂಳು. ಮುಖಕ್ಕೆ ಒಂದು ಕೈಯಿಂದ ಕರ್ಚೀಫ್ ಹಿಡಿದುಕೊಂಡು, ಮತ್ತೊಂದು ಕೈಯನ್ನು ಹಿಂಬದಿಯ ಪರ್ಸ್ ಮೇಲೆ ಇಟ್ಟುಕೊಂಡು ಜಂಗುಳಿಯ ನಡುವೆ ನುಗ್ಗಿ ಸೀಟಿನತ್ತ ಧಾವಿದೆ. ಅಷ್ಟರಲ್ಲಿ ಆಸಾಮಿಯೊಬ್ಬ ನಾನು ಕುಳಿತುಕೊಳ್ಳಬೇಕಾದ ಸೀಟಿನಲ್ಲಿ ವಿರಾಜಮಾನ! ಸಾರ್ ಇದು ನನ್ನ ಸೀಟು ಅಂತ ಸ್ಟೈಲಾಗಿ ಮೊಬೈಲ್ ತೆಗೆದು ತೋರಿಸಿದೆ. ಆತನೂ ಅಷ್ಟೇ ಸ್ಟೈಲಾಗಿ ಗುದ್ದಾಡಿ ಗಿಟ್ಟಿಸಿದ ಟಿಕೆಟ್ ತೋರಿಸಿದ. ಇಬ್ಬರದೂ ಒಂದೇ ಸಂಖ್ಯೆ, ಡಿ11!

ಬೆಳ್ಳಂಬೆಳಗ್ಗೆ 'ಕೆ.ಜಿ.ಎಫ್' ವೀಕ್ಷಿಸಿದ ಅಭಿಮಾನಿಗಳಿಗೆ ಅಭಿಮಾನಿಗಳಿಂದ ಅನ್ನದಾನ.!

ಆನ್ ಲೈನ್ ಟಿಕೆಟ್ ಬುಕ್ಕಿಂದ್ ಮತ್ತು ಥಿಯೇಟರ್ ಟಿಕೆಟ್ ಅವ್ಯವಸ್ಥೆಯನ್ನು ಬೈದುಕೊಳ್ಳಲು ಆರಂಭಿಸಿದೆ. ಅದ್ಹ್ಯಾಗೆ ಇಬ್ಬರಿಗೂ ಒಂದೇ ಟಿಕೆಟ್ ಕೊಡ್ತಾರೆ, ಸ್ವಲ್ಪವೂ ತಲೆಬೇಡವಾ ಅಂತ, ಸಿಟ್ಟಿನಿಂದಲೇ ಅವರಿವರಿಗೆ ಡಿಕ್ಕಿ ಹೊಡೆಯುತ್ತ ಅಲ್ಲಿಯೇ ಬ್ಯಾಟರಿ ಹಿಡಿದು ಲೇಟ್ ಲತೀಫ್ ಜನರಿಗೆ ಕೂಡಿಸಲು ಸಹಾಯ ಮಾಡುತ್ತಿದ್ದವನಿಗೆ ಆನ್ ಲೈನ್ ನಲ್ಲಿ ಬುಕ್ ಮಾಡಿದ ಟಿಕೆಟ್ ತೋರಿಸಿದೆ. ನನ್ನನ್ನು ಒಳಬಿಟ್ಟವನೂ ಸರಿಯಾಗಿ ಗಮನಿಸಿರದಿದ್ದರಿಂದ ಮಹಾ ಎಡವಟ್ ಆಗಿತ್ತು.

"ಸಾರ್ ಇದು ವಜ್ರೇಶ್ವರಿ ಥಿಯೇಟರ್, ನೀವು ಬಂದಿರುವುದು ರಾಜೇಶ್ವರಿ ಥಿಯೇಟರಿಗೆ. ರಾಜೇಶ್ವರಿ ಇರುವುದು ಮಲ್ಲತ್ತಹಳ್ಳಿಯಲ್ಲಿ, ವಜ್ರೇಶ್ವರಿ ಇರುವುದು ಉಲ್ಲಾಳ ಗ್ರಾಮದಲ್ಲಿ. ಬೇಗನೆ ಹೋಗಿ, ಈಗಾಗಲೆ ಪಿಚ್ಚರ್ ಶುರು ಆಗಿರಬಹುದು, ಇಲ್ಲಿಂದ ಬರೀ ನಾಲ್ಕು ಕಿಲೋಮೀಟರ್. ಹೀಗೇ ಒಳಗಿಂದ ಹೋಗಿಬಿಡಿ ಸಾರ್..."

'ಕೆ.ಜಿ.ಎಫ್' ಚಿತ್ರ ನೋಡಿದ ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಏನು.?

ಆ ಕತ್ತಲೆಯಲ್ಲಿ ನನ್ನ ಮುಖ ನೋಡಬೇಕಾಗಿತ್ತು ನೀವು! ಒಂದು ಬಾರಿಯೂ ಈ ಥಿಯೇಟರಿಗೆ ಬಂದವನಲ್ಲ. ಆದರೆ, ಪ್ರತಿದಿನ ನೋಡುತ್ತಿದ್ದರಿಂದ ಇದೇ ಥಿಯೇಟರಲ್ಲಿ ಟಿಕೆಟ್ ಬುಕ್ ಮಾಡಿದ್ದೇನೆಂದು ಅಂದುಕೊಂಡಿದ್ದೆ. ಬುಕ್ ಮಾಡಿದ್ದು ರಾಜೇಶ್ವರಿ ಅಲ್ಲ ವಜ್ರೇಶ್ವರಿ. ಯಾಕೆ ಈ ಥರ ಒಂದೇ ರೀತಿ ಕಾಣುವ ಹೆಸರಿಟ್ಟು ಥಿಯೇಟರ್ ಮಾಲಿಕರು ಕನ್‌ಫ್ಯೂಸ್ ಮಾಡ್ತಾರೋ ಅಂತ ಅವನ್ನೂ ಬೈದುಕೊಂಡು, ಇನ್ನೂ ಒಳನುಗ್ಗಿ ಬರುತ್ತಿರುವ ಜನರನ್ನು ಭೇದಿಸಿಕೊಂಡು ಹೊರಬಂದು ಬೈಕ್ ಏರಿದೆ.

ಈ ಸಲ ದಾರಿ ತಪ್ಪಲೇಬಾರದು ಎಂದು ಸ್ಮಾರ್ಟ್ ಆಪ್ ಗೂಗಲ್ ಮ್ಯಾಪ್ ಅನ್ನು ಆನ್ ಮಾಡಿದೆ. ಮುಖ್ಯ ರಸ್ತೆಯ ಬದಲು ಒಳರಸ್ತೆಯನ್ನೇ ತೋರಿಸುತ್ತಿತ್ತು. ಮೊದಲೇ ನನ್ನ ಹದಿನಾರು ವರ್ಷದ ಪುರಾನಾ ಬೈಕಿನ ಹೆಡ್ ಲೈಟ್ ಭಲೇ ವೀಕು. ಅಲ್ಲಲ್ಲಿ ಸಿಗುವ ಹಂಪ್ ಗಳನ್ನು ಜಂಪ್ ಮಾಡಿಕೊಂಡು, ತಗ್ಗುದಿಣ್ಣೆಗಳಲ್ಲಿ ಏರಿಳಿಸುತ್ತ, ಕತ್ತಲ ರಸ್ತೆಗಳಲ್ಲಿ ಬೊಗಳುತ್ತ ಬರುವ ನಾಯಿಗಳಿಂದ ತಪ್ಪಿಸಿಕೊಳ್ಳುತ್ತ, ಅಲ್ಲಲ್ಲಿ ಬೈಕ್ ನಿಲ್ಲಿಸಿ ಸರಿದಾರಿಯಲ್ಲಿ ಹೋಗುತ್ತಿದ್ದೇನಾ ಎಂದು ಗೂಗಲ್ ಮ್ಯಾಪ್ ಅನ್ನು ಪರಿಶೀಲಿಸುತ್ತ ಸುಮಾರು ಮೂರು ಕಿ.ಮೀ. ಕ್ರಮಿಸಿದರೆ.....

ಇನ್ನೇನು? ಮನೆಯ ಹತ್ತಿರವೇ ಬಂದು ನಿಂತಿದ್ದೆ. "ಎಲಾ ನನ್ ಮಗನೆ ಗೂಗಲ್, ಥಿಯೇಟರ್ ದಾರಿ ತೋರಿಸು ಅಂದ್ರೆ ಮನೆಯ ಹತ್ತಿರ ಕರೆದುಕೊಂಡು ಬಂದಿದ್ದೀಯಲ್ಲ" ಎಂದು ಸ್ಮಾರ್ಟ್ ಆಪ್ ಗೂಗಲ್ ಮ್ಯಾಪ್ ಅನ್ನು ವಾಚಾಮಗೋಚರವಾಗಿ ಬೈದೆ. ಎದೆ ಢವಢವ ಹೊಡೆದುಕೊಳ್ಳುತ್ತಿತ್ತು, ತಲೆ ಮೊದಲೇ ಬಿಸಿಯಾಗಿತ್ತು, ಸಾಲದೆಂಬಂತೆ ಮನೆಯ ಬಳಿಯೇ ಮ್ಯಾಪ್ ನನ್ನನ್ನು ಕರೆದುಕೊಂಡು ಬಂದಿದೆ. ಅಷ್ಟರಲ್ಲಾಗಲೇ ಇಪ್ಪತ್ತೈದು ನಿಮಿಷ ಲೇಟಾಗಿಬಿಟ್ಟಿತ್ತು. ಮನೆಗೆ ಹೋದರೆ ಅವಮಾನ ಅಂದುಕೊಂಡು ಮತ್ತೆ ಥಿಯೇಟರ್ ಹುಡುಕಿಕೊಂಡು ಸಾಗಿತು ನನ್ನ ಬೈಕ್ ಪಯಣ.

ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲದಿದ್ದರಿಂದ ಎಲ್ಲೋ ರಸ್ತೆಯ ಬದಿಯಲ್ಲಿ ಬೈಕ್ ಪಾರ್ಕ್ ಮಾಡಿ, ಮತ್ತೆ ಮೊಬೈಲ್ ತೋರಿಸಿ, ನನ್ನ ಸೀಟು ಹುಡುಕಿಕೊಂಡು ಹೋದರೆ, ಅಲ್ಲಿ ಮತ್ತೊಬ್ಬ ಆಸನ ಆಕ್ರಮಿಸಿಕೊಂಡಿದ್ದಾನೆ. ಮತ್ತೆ ಬೇರೆ ಥಿಯೇಟರಿಗೆ ಬಂದುಬಿಟ್ಟೆನಾ ಅಂತ ಗಾಬರಿಯಾದೆ. ಅಷ್ಟರಲ್ಲಾಗಲೇ ಯಶ್ ಯಾವ್ದೋ ಡೈಲಾಗ್ ಹೊಡೆದ ಅಂತ ಕಾಣತ್ತೆ, ಇಡೀ ಚಿತ್ರಮಂದಿರದ ಛಾವಣಿಯೇ ಕಿತ್ತುಹೊಗುವಂತೆ ಕಿರುಚಾಟ ಮಾಡಿದರು.

ಸಾರ್, ಇದು ನನ್ನ ಸೀಟು ಅಂತ ಹೇಳಿದೆ. ಸಖೇದಾಶ್ಚರ್ಯ! ಆತ ಬಿಟ್ಟುಕೊಟ್ಟು ಹಿಂದೆ ಹೋಗಿ ಕುಳಿತ. ಅಸಾಧ್ಯವಾಗಿ ಬೆವರಿದ್ದೆ, ಫ್ಯಾನಿನ ಗಾಳಿಯೂ ಬರುತ್ತಿರಲಿಲ್ಲ, ಧೂಳಿನಿಂದಾಗಿ ಸೀನುಗಳು ಬೇರೆ ಆರಂಭವಾಗಿದ್ದವು, ಸಾಲದೆಂಬಂತೆ ಅರ್ಧಗಂಟೆ ತಡವಾಗಿ ಬಂದಿದ್ದೆ. ಕರ್ಚೀಫು ತೆಗೆದುಕೊಂಡು ಮುಖ ಒರಿಸಿಕೊಳ್ಳುವ ಹೊತ್ತಿಗೆ ಪಕ್ಕದವ ಡೈಲಾಗ್ ಹೊಡೆದಿದ್ದ "ಯಾಕ್ ಸಾರ್ ಇಷ್ಟು ಲೇಟು? ಶುರುವಾಗಿ ಸುಮಾರು ಹೊತ್ತಾಯ್ತು!" ಅಂದ. "ಅಯ್ಯೋ, ಮನೆಗೆ ಯಾರೋ ಬಂದಿದ್ರು, ಅದಕ್ಕೇ ಲೇಟು" ಎಂದು ನಕ್ಕೆ.

ಅಷ್ಟರಲ್ಲಾಗಲೇ ಯಶ್ ಡೈಲಾಗ್ ಆರ್ಭಟ ಮುಗಿಲು ಮುಟ್ಟಿದ್ದು, ಹರಕು ಮುರುಕು ಇಂಗ್ಲಿಷಲ್ಲಿ ಚಿನ್ನಾ ಚಿನ್ನಾ ಅಂತ ನಾಯಕಿಯನ್ನು ಮಾತಾಡಿಸುವುದನ್ನು ನೋಡಿ, ಒಂದೊಂದು ಹೊಡೆತಕ್ಕೂ ವಿಲನ್ ಗಳನ್ನು ಯಶ್ ಪಲ್ಟಿ ಹೊಡೆಸುವುದನ್ನು ನೋಡಿ, ಡೈಲಾಗ್ ಮುಗಿಯುವ ಮೊದಲೇ ಎಲ್ಲ ಗೊತ್ತಿರುವವರ ಹಾಗೆ 'ಹೋ' ಅಂತ ಕಿರುಚಿಕೊಳ್ಳುವ ಪ್ರೇಕ್ಷಕರ ನಡುವೆ ನಾನು ಸುಮ್ಮನೆ ಕುಳಿತಿದ್ದೆ, ನನ್ನ ಪಕ್ಕ ಇನ್ನೊಬ್ಬ ನನ್ನ ಹಾಗೆಯೇ ಸುಮ್ಮನೆ ಕುಳಿತಿದ್ದ.

"ನನ್ ಮಗನೆ ಯಾಕೋ ಸುಮ್ನೆ ಕುಂತಿದ್ದಿಯಲೇ, ಕಿರುಚಲೋ. ನಿಮ್ಮಂಥವ್ರು ಸಿನೆಮಾಗೇ ಬರಬಾರದು" ಅಂತ ನನ್ನ ಪಕ್ಕದಲ್ಲಿ ಕುಳಿತುಕೊಂಡವನ ಸ್ನೇಹಿತ ಅವನಿಗೆ ಮಂಗಳಾರತಿ ಮಾಡಿದ್ದ. ಸದ್ಯಕ್ಕೆ ಇಷ್ಟು ಸಾಕು. ಕೆಜಿಎಫ್ ನ ಮೊದಲ ಅರ್ಧ ಇನ್ನೂ ನೋಡಿಲ್ಲವಾದ್ದರಿಂದ ಸಿನೆಮಾ ವಿಮರ್ಶೆ ಮಾಡುವುದು ಅಷ್ಟು ಸಮಂಜಸವಲ್ಲ. ಇನ್ನೊಂದು ಬಾರಿ ನೋಡಿಬಂದ ಮೇಲೆ ಹೇಳ್ತೀನಿ.

English summary
Yash starrer KGF has taken the world by storm. Many good reviews have been written and widely appreciated by the people all over the world. I also decided to watch much hyped movie on the first day itself. What happened is really interesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X