• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ ಅನಿಲ್ - ಸಂದರ್ಶನ

By ಪ್ರಸಾದ ನಾಯಿಕ
|

'ಹೃದಯ' ಬೇಕಂದ್ರೆ ಕೊಡುವವರು ನಮ್ಮ ದೇಶದಲ್ಲಿ ಬೇಕಾದಷ್ಟಿದ್ದಾರೆ. ಆದರೆ, ಕಿಡ್ನಿ ದಾನ ಮಾಡಿ ಅಂದ್ರೆ ಪರಿಚಿತರು ಕೂಡ 'ಯಾರು ನೀನು' ಎಂಬಂತೆ ನೋಡುತ್ತಾರೆ. ಎರಡೂ ಕಿಡ್ನಿಗಳು ವಿಫಲವಾದರೆ ಎಂತಹ ನುರಿತ ವೈದ್ಯನಿರಲಿ, ಆ ದೇವರು ಕೂಡ ಕಾಪಾಡಲಾರ. ಈ ಹಂತದಲ್ಲಿ ದೇವರಂತೆ ಬಂದು ಕಾಪಾಡಬಲ್ಲ ಶಕ್ತಿಯಿರುವುದು ಮೂತ್ರಜನಕಾಂಗದ ದಾನಿಗೆ ಮಾತ್ರ. ಆದರೆ, ಮೂತ್ರಪಿಂಡ ಬೇಕು ಅಂದಾಗ ಆ ದೇವರನ್ನು ಎಲ್ಲಿ ಹುಡುಕುವುದು?

ಮೂತ್ರಕೋಶ ವೈಫಲ್ಯತೆ ಭಾರತ ಎದುರಿಸುತ್ತಿರುವ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಲ್ಲಿ ಒಂದು. ಪ್ರತಿ ಹತ್ತು ಲಕ್ಷದಲ್ಲಿ 100 ಜನರು ಮೂತ್ರಕೋಶದ ವೈಫಲ್ಯತೆಯಿಂದ ಸಾಯುತ್ತಿದ್ದಾರೆ. ಪ್ರತಿವರ್ಷ ಭಾರತದಲ್ಲಿ ಏನಿಲ್ಲವೆಂದರೂ 1 ಲಕ್ಷ ಜನರು ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕನಿಷ್ಠ 10 ಸಾವಿರದಷ್ಟು ಕಿಡ್ನಿ ಕಸಿ ಮಾಡಲಾಗುತ್ತಿದೆ. ದಾನ ಮಾಡಲು ಬರುವವರಲ್ಲಿ ಶೇ.25ರಷ್ಟು ಜನರ ಕಿಡ್ನಿ ಮಾತ್ರ ಕಸಿಗೆ ಯೋಗ್ಯವಾಗಿರುತ್ತದೆ. ಇದು ಭಾರತ ಎದುರಿಸುತ್ತಿರುವ ಪ್ರಸ್ತುತ ಸ್ಥಿತಿ.

ರೋಗಿಯ ರೋಗವನ್ನು ಸರಿಪಡಿಸಬಲ್ಲ ತಾಕತ್ತಿರುವ ಬೆಂಗಳೂರಿನ ಖ್ಯಾತ ವೈದ್ಯರೇ ಎರಡೂ ಮೂತ್ರಪಿಂಡಗಳ ವಿಫಲತೆಯಿಂದ ಸಾವಿನ ಬಾಗಿಲು ತಟ್ಟುವ ಹಂತಕ್ಕೆ ಬಂದಾಗ, ಸ್ವಂತ ಸಹೋದರನೇ ತನ್ನದೊಂದು ಕಿಡ್ನಿಯನ್ನು ದಾನ ನೀಡಿ ಬದುಕಿಸಿಕೊಂಡ ಮಾನವೀಯ ಕಥೆ ಇಲ್ಲಿದೆ. ಒಂದು ಕಿಡ್ನಿ ದಾನ ಮಾಡುವುದು ಮುಖ್ಯವಲ್ಲ, ಆ ಮೂತ್ರಪಿಂಡ ಪಡೆದ ಸಹೋದರ ಇನ್ನಷ್ಟು ಜನರನ್ನು ಬದುಕಿಸಬಲ್ಲ ಎಂಬ ತುಡಿತ ಈ ಕಥೆಗೆ ಮತ್ತೊಂದು ಆಯಾಮವನ್ನು ನೀಡಿದೆ.

ಈ ಕಥೆಯ ಕಥಾನಾಯಕ ಮತ್ತಾರೂ ಇಲ್ಲ. 'ಅನಿಲ್ ಕಿ ಆವಾಜ್' ಮೂಲಕ ಇಡೀ ವಿಶ್ವದಲ್ಲಿ ಮನೆಮಾತಾದ, ಆನ್ ಲೈನ್ ಡಿಜಿಟಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ, ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನಲ್ಲಿಯೂ ಸೈ ಎನಿಸಿಕೊಂಡ, ರೇಡಿಯೋವಾಲಾ ಕಂಪನಿಯ ಸಿಇಓ ಆಗಿರುವ ಬೆಂಗಳೂರಿನ ಹುಡುಗ ಅನಿಲ್ ಶ್ರೀವತ್ಸ (47). ನರರೋಗ ತಜ್ಞನಾಗಿರುವ ತನ್ನ ಸಹೋದರ (ಅಣ್ಣ) ಡಾ. ಅರ್ಜುನ್ ಶ್ರೀವತ್ಸ(48)ನನ್ನು ಬದುಕಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಬಂದಾಗ, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತಮ್ಮ ಮೂತ್ರಜನಕಾಂಗವನ್ನು ದಾನ ಮಾಡಿದ್ದಾರೆ.

ಅನಿಲ್ ಶ್ರೀವತ್ಸ ಅವರೊಂದಿಗೆ ನಡೆಸಿದ ಸಂದರ್ಶನದ ಸಾರಾಂಶ ಕೆಳಗಿದೆ. ಇಲ್ಲಿ ಅವರು, ಮೂತ್ರಪಿಂಡ ದಾನ ಮಾಡಬೇಕಾದ ನಿರ್ಧಾರ ತೆಗೆದುಕೊಳ್ಳಬೇಕಾದ ಪ್ರಸಂಗ ಬಂದಾಗ ಧಿಗ್ಗನೆ ಎದುರಾದ ಪ್ರಶ್ನೆಗಳು, ತಾಂತ್ರಿಕ ಸವಾಲುಗಳು, ಮನೆಯವರು ಅನುಭವಿಸಿದ ಹಳವಂಡಗಳ ಕುರಿತು ವಿವರಿಸಿದ್ದಾರೆ. ಮೂತ್ರಜನಕಾಂಗದ ಕಸಿ ಬೆಂಗಳೂರಿನಲ್ಲಿ ಆಗಿ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ನರರೋಗ ತಜ್ಞರಾಗಿರುವ ಅವರ ಸಹೋದರ ಅವರ ಸೇವೆ ಸಮಾಜಕ್ಕೆ ಇನ್ನಷ್ಟು ಸಿಗಲೆಂದು ಹಾರೈಸುತ್ತ, ಸಂದರ್ಶನವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಒನ್ಇಂಡಿಯಾ : ನಿಮ್ಮ ಸಹೋದರನಿಗೆ ಕಿಡ್ನಿ ದಾನ ಮಾಡಬೇಕಾದ ಸಂದರ್ಭ ಎದುರಾದಾಗ ಸ್ಫೂರ್ತಿ ನೀಡಿದ್ದು ಯಾರು?

ಅನಿಲ್ : ಇಂಥ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಸಮಸ್ಯೆಯ ಕುರಿತಾಗಿ ನಮಗಿರುವ ಜ್ಞಾನವೇ ನಮ್ಮಲ್ಲಿ ಸಾಕಷ್ಟು ಸ್ಫೂರ್ತಿ ತುಂಬುತ್ತದೆ ಎಂಬುದು ನನ್ನ ಅಭಿಪ್ರಾಯ. 2001-02ರಲ್ಲಿ ನಮ್ಮ ನೆರೆಹೊರೆಯ ವ್ಯಕ್ತಿಯೊಬ್ಬರು ತಮ್ಮ ಸಹೋದರಿಗೆ ಕಿಡ್ನಿ ದಾನ ಮಾಡಿದಾಗ ಇದರ ಬಗ್ಗೆ ಮೊದಲು ಕೇಳಿದ್ದು. ಆ ಸಮಯದಲ್ಲಿ, ಅಗತ್ಯಬಿದ್ದರೆ ನಾನೂ ದಾನ ಮಾಡಬೇಕಾದ ಪರಿಸ್ಥಿತಿ ಬರುತ್ತಾ ಎಂಬ ಪ್ರಶ್ನೆ ಕೇಳಿಕೊಂಡಿದ್ದೆ. ಆದರೆ, ಅದೇ ಪ್ರಶ್ನೆಯನ್ನು ನನ್ನ ಸಹೋದರ ನನಗೆ ಕೇಳುವವರೆಗೆ ನನಗೆ ನಾನೇ ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ.

ನನ್ನ ನೆರೆಯವರು ದಾನ ನೀಡಿದ ದಶಕದ ನಂತರ ನನಗೇ ಅಂಥ ಪರಿಸ್ಥಿತಿ ಎದುರಾದಾಗ, ಒಂದು ಕ್ಷಣವೂ ಹಿಂದೆಮುಂದೆ ನೋಡದೆ ಮೂತ್ರಪಿಂಡ ದಾನ ಮಾಡಲು ಒಪ್ಪಿಕೊಂಡಿದ್ದೆ. ನಾನು ದಾನ ನೀಡಲು ಯೋಗ್ಯನಾಗಿದ್ದರೆ ಮಾತ್ರ ಕಿಡ್ನಿ ದಾನ ಮಾಡುತ್ತೇನೆ ಎಂದು ಸಹೋದರನಿಗೆ ಹೇಳಿದೆ. ಕ್ಷಣಮಾತ್ರವೂ ಯೋಚಿಸದೆ ಕಿಡ್ನಿ ದಾನ ಮಾಡಲು ಹಲವಾರು ಕಾರಣಗಳೂ ಇವೆ. ಅವೆಂದರೆ,

1) ನಾನು ನನ್ನ ಸಹೋದರನನ್ನು ತುಂಬಾ ಪ್ರೀತಿಸುತ್ತೇನೆ.

2) ನಮ್ಮಿಬ್ಬರ ಮಧ್ಯೆ ಕೇವಲ 1 ವರ್ಷದ ಅಂತರವಿದ್ದರೂ ನಾವಿಬ್ಬರೂ ಅತ್ಯುತ್ತಮ ಸ್ನೇಹಿತರಂತಿದ್ದೇವೆ.

3) ಯಾವಾಗಲೂ ಆತನ ಕುರಿತು ನನ್ನ ಮೇಲೆ ಜವಾಬ್ದಾರಿ ಇದೆ ಎಂದು ನನಗೆ ಅನಿಸುತ್ತಿತ್ತು.

4) ಹಲವಾರು ಜನರಿಗೆ ಜೀವನ ದಾನ ಮಾಡುವ ನರರೋಗ ತಜ್ಞ ಅವರಾಗಿದ್ದಾರೆ. ಅವರ ಸೇವೆ ಇನ್ನೂ ಅನೇಕ ವರ್ಷಗಳ ಕಾಲ ಸಮಾಜಕ್ಕೆ ಸಿಗಬೇಕು.

5) ಅವರು ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾಗ, ಅವರ ಸೇವಾಮನೋಭಾವದಿಂದ ತುಂಬಾ ಪ್ರಭಾವಿತನಾಗಿದ್ದೆ ಮತ್ತು ಈ ಸೇವೆಗಾಗಿ ಎಂಥ ಸಹಾಯ ಮಾಡಲೂ ಸಿದ್ಧನಿದ್ದೇನೆ ಎಂದು ಹೇಳಿದ್ದೆ. ಅವಶ್ಯಕತೆ ಬಿದ್ದಾಗ ಕೇಳುತ್ತೇನೆ ಎಂದು ಅವರು ಹೇಳಿದ್ದರು.

ಒನ್ಇಂಡಿಯಾ : ಇಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾದಾಗ ನಿಮ್ಮ ಪತ್ನಿ ಮತ್ತು ಮಕ್ಕಳ ಸಲಹೆ ಕೇಳಿದಿರಾ?

ಅನಿಲ್ : ಇದೇ ನನಗೆ ಎದುರಾದ ಅತಿ ಕ್ಲಿಷ್ಟಕರ ಸವಾಲು. ನನ್ನ ಮಕ್ಕಳಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ನನ್ನ ಮಗ, ಅವಶ್ಯಕತೆ ಬಿದ್ದರೆ ತನ್ನ ಸಹೋದರಿಗೆ 'ಹಾರ್ಟ್‌ಬೀಟ್' ದಾನ ನೀಡುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದ.

ಆದರೆ, ನನ್ನ ಹೆಂಡತಿ ತುಸು ಗೊಂದಲದಲ್ಲಿದ್ದಳು. ಆಕೆ ಕೊಟ್ಟ ಕಾರಣಗಳು ಸಕಾರಣವಾಗಿದ್ದವು ಮತ್ತು ಹಲವಾರು ಬಾರಿ ಆಕೆಯ ಮನವೊಲಿಸಲು ಯತ್ನಿಸಬೇಕಾಯಿತು. ಆ ಯಾವ ಪ್ರಯತ್ನಗಳೂ ಕೆಲಸ ಮಾಡಲಿಲ್ಲ. ಅಂತಿಮವಾಗಿ ಆಕೆಯ ಮನಸ್ಸು ಬದಲಾಯಿಸಿದ್ದು ನನ್ನ ಮಕ್ಕಳೆ. ನನ್ನ ಸಹೋದರನ ಅನುಮತಿ ಕೇಳಿ ಹಿಮಾಲಯಕ್ಕೆ ಹೋದಾಗ, ನನ್ನ ಹೆಂಡತಿ ಈ ವಿಷಯದ ಕುರಿತು ಮಕ್ಕಳೊಂದಿಗೆ ಚರ್ಚೆ ನಡೆಸಿದಳು.

ನಾನು ಹಿಮಾಲಯದಿಂದ ತಿರುಗಿಬಂದಾಗ ಹೆಂಡತಿ ವಿಭಿನ್ನ ವ್ಯಕ್ತಿಯಾಗಿದ್ದಳು, ತನ್ನ ನಿರ್ಧಾರವನ್ನೇ ಬದಲಿಸಿಕೊಂಡಿದ್ದಳು. ದಾನ ಮಾಡಲು ಏನು ಮಾಡಬೇಕು ಎಂಬಿತ್ಯಾದಿ ಸಲಹೆ ನೀಡಲು ಪ್ರಾರಂಭಿಸಿದಳು. ಆ ಕ್ಷಣವೇ ನನ್ನ ಹೃದಯ ತುಂಬಿಬಂದಿತು. ಹೆಂಡತಿ ಮತ್ತು ಮಕ್ಕಳ ಬಗ್ಗೆ ಹೆಮ್ಮೆ ಮೂಡಿತು. ಅವರ ಅನುಮತಿ ಇಲ್ಲದಿದ್ದರೂ ನಾನು ದಾನ ನೀಡುವವನೇ ಇದ್ದೆ. ಆದರೆ, ಅವರ ಹೃತ್ಪೂರ್ವಕ ಬೆಂಬಲ ಸಿಕ್ಕಾಗ ಆದ ಆನಂದವೇ ಬೇರೆ.

ಒನ್ಇಂಡಿಯಾ : ಇದು ನಿಮ್ಮ ಸ್ವಂತ ನಿರ್ಧಾರವಾಗಿತ್ತೋ ಅಥವಾ ಸಹೋದರ ಕೇಳಿದರೆಂದು ಈ ನಿರ್ಧಾರಕ್ಕೆ ಬಂದಿರೋ?

ಅನಿಲ್ : ಹಹಾ, ನನ್ನ ಕಿಡ್ನಿ, ನನ್ನ ನಿರ್ಧಾರ. ಅವರು ಕೇಳಿದರಷ್ಟೆ. ಆದರೆ, ಯಾವತ್ತೂ ಒತ್ತಡ ಹೇರಲಿಲ್ಲ.

ಒನ್ಇಂಡಿಯಾ : ನೀವು ಮೂತ್ರಪಿಂಡ ದಾನ ಮಾಡಲು ಒಪ್ಪಿದಾಗ ನಿಮ್ಮ ಸಹೋದರನ ಪ್ರತಿಕ್ರಿಯೆ ಹೇಗಿತ್ತು?

ಅನಿಲ್ : ನನ್ನ ನಿರ್ಧಾರವನ್ನು ಡಾ. ಅರ್ಜುನ್ ಶ್ರೀವತ್ಸ ಅವರಿಗೆ ತಿಳಿಸಿ, ಅವರ ಉತ್ತರಕ್ಕಾಗಿ ಕಾದೆ. ಅವರ ಉತ್ತರ ಕೆಳಗಿನಂತಿದೆ.

"ಇಂಥ ಪ್ರಸಂಗ ಬರುವುದಕ್ಕೆ ಮೊದಲೇ ಅನಿಲ್ ಕಿಡ್ನಿ ದಾನ ಮಾಡುವ ಚಿಂತನೆ ಹೊಂದಿದ್ದ. ಅವನ ಇಡೀ ಕುಟುಂಬ ಬೆಂಬಲಕ್ಕೆ ನಿಂತಿದ್ದರಿಂದ ಮತ್ತು ಮೊದಲಿಂದಲೂ ನಾವಿಬ್ಬರೂ ತೀರ ಆತ್ಮೀಯರಾಗಿದ್ದರಿಂದ ನನಗೆ ಈ ನಿರ್ಧಾರ ಅಂತಹ ಅಚ್ಚರಿ ತರಲಿಲ್ಲ. ನಾನು ನಿಜಕ್ಕೂ ಭಾವುಕನಾಗಿದ್ದೇನೆ. ನಿಷ್ಕಲ್ಮಶ ಪ್ರೀತಿ ಮಾತ್ರ ಇಂಥ ದಿಟ್ಟ ನಿರ್ಧಾರ ತಳೆಯಲು ಸಹಾಯ ಮಾಡುತ್ತದೆ. ಹಿಂದೆ ಅನೇಕರು ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ. ಆದರೆ, ನನ್ನ ಪಾಲಿಗೆ ಅವರ ಇಡೀ ಕುಟುಂಬವೇ ಹೀರೋನಂತೆ ಕಾಣಿಸುತ್ತಿದೆ."

ಒನ್ಇಂಡಿಯಾ : ಜೀವಂತವಿರುವಾಗಲೇ ಅಂಗ ದಾನ ಮಾಡುತ್ತಿದ್ದರಿಂದ ಜೀವವಿಮೆ ಕಂಪನಿಯಿಂದ ಸಮಸ್ಯೆಗಳು ಎದುರಾದವೆ?

ಅನಿಲ್ : ಇಲ್ಲೊಂದು ಸಮಸ್ಯೆಯಿದೆ. ಚಿಕಿತ್ಸೆ ಹಣ ವಾಪಸ್ ಪಡೆದುಕೊಳ್ಳಲು ಆಸ್ಪತ್ರೆ ಕಡತಗಳನ್ನು ಸಲ್ಲಿಸುವ ಪ್ರಶ್ನೆ ಇಲ್ಲಿ ಉದ್ಭವಿಸಲಿಲ್ಲ. ಸಣ್ಣಸಣ್ಣ ಸಂಗತಿಗಳು ಸಂಕೀರ್ಣವಾಗುವುದು ನಿಜಕ್ಕೂ ದುರಾದೃಷ್ಟಕರ. ಈ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಇದೆ. ನೋಡೋಣ ಏನಾಗುತ್ತೋ.

ಆದರೆ, ನಾನು ದಾನ ಮಾಡಲು ನಿರ್ಧಾರ ತೆಗೆದುಕೊಂಡಿದ್ದರಿಂದ ನನ್ನ ಜೀವವಿಮೆ ನಿರರ್ಥಕವಾಗುತ್ತಿದ್ದರಿಂದ ದಾನ ಮಾಡುವುದರಿಂದ ಹಿಂದೆ ಸರಿಯುವ ಸಂದರ್ಭವಿತ್ತು. ಅದೃಷ್ಟವಶಾತ್ ಅಮೆರಿಕದಲ್ಲಿಯೂ ಜೀವವಿಮೆ ಮಾಡಿಸಿದ್ದರಿಂದ ಯಾವುದೇ ತಕರಾರು ತೆಗೆಯುವ ಸಾಧ್ಯತೆಯಿರಲಿಲ್ಲ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ನಾನು ತೀರಿಕೊಂಡರೂ ನನ್ನ ಹೆಂಡತಿ ಮಕ್ಕಳು ಆರ್ಥಿಕವಾಗಿ ಬಡವಾಗುವುದಿಲ್ಲ ಎಂಬ ಧೈರ್ಯ ನಾನು ಮುಂದಡಿಯಿಡಲು ಸಹಾಯ ಮಾಡಿತು. (ಮೂರು ಸಾವಿರ ದಾನಿಗಳಲ್ಲಿ ಒಬ್ಬರು ಸಾಯಬಹುದು ಎಂದು ವೈದ್ಯರು ನನಗೆ ಹಲವಾರು ಬಾರಿ ಎಚ್ಚರಿಸಿದ್ದರು.)

ಒನ್ಇಂಡಿಯಾ : ಮೂತ್ರಪಿಂಡದ ಕಸಿಯ ನಂತರ ನಿಮ್ಮಿಬ್ಬರ ಆರೋಗ್ಯ ಹೇಗಿದೆ?

ಅನಿಲ್ : ದೇವರ ದಯೆ, ಅತ್ಯುತ್ತಮ ವೈದ್ಯರ ಕೈಗುಣ, ಕುಟುಂಬ ಮತ್ತು ಸ್ನೇಹಿತರ ಪ್ರೀತಿ ಮತ್ತು ಹಾರೈಕೆಯಿಂದ ಇಬ್ಬರೂ ಗುಣಮುಖರಾಗುತ್ತಿದ್ದೇವೆ. ನಮ್ಮಿಬ್ಬರ ಧರ್ಮಪತ್ನಿಯರಾದ ದೀಪಾಲಿ ಶ್ರೀವತ್ಸ ಮತ್ತು ಡಾ. ಚೇತನಾ ಅರ್ಜುನ್ ಅವರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಲೇಬೇಕು. ಅವರಿಬ್ಬರೂ ನಮ್ಮಿಬ್ಬರಿಗಾಗಿ ತಮ್ಮ ಜೀವನಶೈಲಿಯನ್ನೇ ಬದಲಿಸಿಕೊಂಡಿದ್ದಾರೆ.

ಒನ್ಇಂಡಿಯಾ : ಕಿಡ್ನಿ ದಾನ ಮಾಡುವ ಅವಶ್ಯಕತೆಯ ಕುರಿತು ನಿಮ್ಮ ರೇಡಿಯೋವಾಲಾ ನೆಟ್ವರ್ಕ್ ನಿಂದ ಇತರರಿಗೆ ಕೌನ್ಸೆಲಿಂಗ್ ಮಾಡುವಿರಾ?

ಅನಿಲ್ : ಖಂಡಿತವಾಗಿ. ಇದನ್ನು ಮಾಡಲು ಸೋಷಿಯಲ್ ಮೀಡಿಯಾ ಅತ್ಯುತ್ತಮವಾದ ವೇದಿಕೆ. ನನ್ನನ್ನು ಸಂಪರ್ಕಿಸಲು ಯತ್ನಿಸಿದ ಯಾರಿಗೇ ಆಗಲಿ ಮಾರ್ಗದರ್ಶನ ನೀಡುವ ಯಾವುದೇ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ.

English summary
Organ Donation : Processing Insurance papers for claims is a PAIN in our Society. But then, I was more than happy to donate Kidney and save my brother, so that he could serve society as a doctor says Anil Srivatsa. Anil Ki Aawaj - Radio Jockey with Online Digital Media. Interview with Anil Srivatsa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more