• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್!

By ಪ್ರಸಾದ ನಾಯಿಕ
|

ಬಳ್ಳಾರಿ ಜಿಲ್ಲೆಯ ಹವಾಗುಣವೇ ವಿಶಿಷ್ಟವಾದುದು. ಚುರುಗುಟ್ಟುವ ರಣರಣ ಬಿಸಿಲು, ಮಳೆಗಾಲದಲ್ಲಿ ಬಂಡೆಗಲ್ಲುಗಳನ್ನು ಸೀಳಿಕೊಂಡು ತುಂಬಿಹರಿಯುವ ತುಂಗಭದ್ರೆ, ಗಣಿಗಾರಿಕೆ ಎಬ್ಬಿಸಿರುವ ಧೂಳು, ಜೊತೆಗೆ ಹರಿಸಿರುವ ಹಣದ ಹೊಳೆ, ಕಂಡಲ್ಲೆಲ್ಲ ಜಾಲಿಬಡ್ಡಿಯ ಖತರ್ನಾಕ್ ಮುಳ್ಳುಗಳು, ಕನ್ನಡಕ್ಕಿಂತ ತೆಲುಗಿನ ಮೇಲೆ ತುಸು ಜಾಸ್ತಿ ಎನ್ನಿಸುವಂಥ ಪ್ರೇಮ... ಅಗಾಧವಾದ ಶ್ರೀಮಂತಿಕೆ, ಮುರುಗುಟ್ಟುವ ಬಡತನ, ಮಂಡಾಳು ಒಗ್ಗರಣೆ, ಖಡಕ್ ಮಿರ್ಚಿ!

ಬರೀ ಜಾಲಿಮುಳ್ಳುಗಳಿರುವ ಗಿಡಕಂಟಿಗಳಿಂದಲೇ ತುಂಬಿಕೊಂಡಿದ್ದ, ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿರುವ ತುಣುಕು ಭೂಮಿಯಲ್ಲಿ ಕಬ್ಬಿಣವನ್ನು ಉತ್ಪಾದಿಸುವ ಕಾರ್ಖಾನೆಯನ್ನು ಸ್ಥಾಪಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ. ಅಂಥದೊಂದು ಜಾಗದಲ್ಲಿ 1994ರಲ್ಲಿ ಸ್ಟೀಲ್ ಕಾರ್ಖಾನೆ ಸ್ಥಾಪಿಸಿ, ಈ ದೇಶದ ಅತೀದೊಡ್ಡ ಸ್ಟೀಲ್ ಉತ್ಪಾದನಾ ಕಾರ್ಖಾನೆ ಎಂಬ ಹೆಸರು ಗಳಿಸಿರುವ ಜಿಂದಾಲ್ ಸಮೂಹ ಸಂಸ್ಥೆ ಕರ್ನಾಟಕದ ಹೆಮ್ಮೆಯ ಕುರುಹಾಗಿ ತಲೆಯೆತ್ತಿ ನಿಂತಿದೆ.

ದೇಶದಲ್ಲಿ ಹತ್ತಕ್ಕೂ ಹೆಚ್ಚು ಕಂಪನಿಗಳು ದೇಶವನ್ನು ಸುಭದ್ರವಾಗಿ ಕಟ್ಟುವ ಕೆಲಸಕ್ಕೆ ಅವಶ್ಯಕವಾಗಿರುವ ಕಬ್ಬಿಣದ ಉತ್ಪಾದನೆಯಲ್ಲಿ ತೊಡಗಿವೆ. ಟಾಟಾ, ಇಸ್ಕೋ, ಮಿಸ್ಕೋ, ಜಿಂದಾಲ್ ಪ್ಲಾಂಟುಗಳು, ಭಿಲಾಯಿ, ರೂರ್ಕೆಲಾ, ಬೋಕಾರೋದಲ್ಲಿರುವ ಕಂಪನಿಗಳು ಸ್ಟೀಲ್ ತಯಾರಿಕೆಯಲ್ಲಿ ಶ್ರಮಿಸುತ್ತಿವೆ.

ಆದರೆ, ಮೊಟ್ಟಮೊದಲ ಬಾರಿಗೆ ವರ್ಷಕ್ಕೆ ಹತ್ತು ಮೆಟ್ರಿಕ್ ಟನ್ ನಷ್ಟು ಕಾರ್ಬನ್ ಕಬ್ಬಿಣವನ್ನು ವೇಗವಾಗಿ ಉತ್ಪಾದಿಸಿದ ಕಂಪನಿಯೆಂದರೆ ಅದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪ್ರದೇಶದಲ್ಲಿ ಹತ್ತು ಸಾವಿರ ಎಕರೆಯಲ್ಲಿ ವಿಸ್ತರಿಸಿಕೊಂಡಿರುವ, ದೇಶದ ಹೆಮ್ಮೆಯ ಕಂಪನಿ ಜಿಂದಾಲ್ ಸ್ಟೀಲ್ ವರ್ಕ್ಸ್! ಜೆಎಸ್‌ಡಬ್ಲ್ಯೂ ಇಂದು ದೇಶದ ಅತೀದೊಡ್ಡ ಸ್ಟೀಲ್ ಕಂಪನಿ ಮಾತ್ರವಲ್ಲ, ವಿಶ್ವದರ್ಜೆಯ ಕಬ್ಬಿಣ ಉತ್ಪಾದಿಸುವ ಕಂಪನಿಗಳಲ್ಲಿ ವಿಶ್ವದಲ್ಲಿ 6ನೇ ಸ್ಥಾನದಲ್ಲಿದೆ.

2005ರಲ್ಲಿ ಜಿಂದಾಲ್ ಐರನ್ ಮತ್ತು ಸ್ಟೀಲ್ ಕಂಪನಿ ಮತ್ತು ವಿಜಯನಗರ ಸ್ಟೀಲ್ ಲಿಮಿಟೆಡ್ ಒಂದುಗೂಡಿದ ನಂತರ ಭಾರತದಲ್ಲಿ ಸಂಸ್ಥೆ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಕರ್ನಾಟಕದ ವಿಜಯನಗರ (ತೋರಣಗಲ್ಲು), ತಮಿಳುನಾಡಿನ ಸೇಲಂ, ಮಹಾರಾಷ್ಟ್ರದ ತಾರಾಪುರ, ವಸಿಂದ್, ಕಮಲೇಶ್ವರ್ ಮತ್ತು ಡೊಲ್ವಿಗಳಲ್ಲಿ ಸಂಸ್ಥೆ ಸ್ಟೀಲನ್ನು ಉತ್ಪಾದಿಸುತ್ತಿದೆ. ಅಮೆರಿಕದಲ್ಲಿ ಪ್ಲೇಟ್ ಮತ್ತು ಪೈಪ್ ಮಿಲ್ ಸ್ಥಾಪಿಸುವುದರ ಜೊತೆಗೆ, ಚಿಲಿ, ಅಮೆರಿಕ ಮತ್ತು ಮೊಝಾಂಬಿಕ್ ನಲ್ಲಿ ಗಣಿಯನ್ನು ಹೊಂದಿದೆ.

ಪ್ರಶಸ್ತಿ, ಪ್ರಶಂಸೆಗಳು : 2015ರಲ್ಲಿ ಇಂಡಸ್ಟ್ರಿ ಲೀಡರ್ಶಿಪ್ ಅವಾರ್ಡ್, 2012-13ರಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕಾಗಿ 'ದಿ ಬೆಸ್ಟ್ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಇನ್ ಇಂಡಿಯಾ' ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯಿಂದ ಪಡೆದಿರುವ ಮತ್ತು 2013-14ರಲ್ಲಿ ಕರ್ನಾಟಕ ಸರಕಾರದಿಂದ ಎಕ್ಸ್‌ಪೋರ್ಟ್ ಎಕ್ಸೆಲೆನ್ಸ್ ಅವಾರ್ಡ್ ಪಡೆದಿರುವ ಜಿಂದಾಲ್ ಸ್ಟೀಲ್ ವರ್ಕ್ಸ್ ಕಂಪನಿ ಮತ್ತಷ್ಟು ಸಾಧನೆ ತೋರುವ ಉಮೇದಿಯಿಂದ ದಾಪುಗಾಲಿಟ್ಟಿದೆ. [ಜಿಂದಾಲ್ ಸ್ಟೀಲ್ ನಿವ್ವಳ ಲಾಭ ಪ್ರತಿಶತ 547 ಏರಿಕೆ]

ಯಶಸ್ಸಿನ ಹಿಂದೆ ಕಾರ್ಮಿಕರ ಬೆವರು : ಜೆಎಸ್‌ಡಬ್ಲ್ಯೂ ಸಂಸ್ಥೆಯ ಯಶಸ್ಸಿನ ಹಿಂದೆ ಇದನ್ನು ಕಟ್ಟಿ ಬೆಳಿಸಿದ ಸಜ್ಜನ್ ಜಿಂದಾಲ್ ಅವರ ಪರಿಶ್ರಮದ ಜೊತೆಗೆ ಹಲವಾರು ಕೈಗಳ ಕೈವಾಡವಿದೆ. ಬಳ್ಳಾರಿ ಬಿಸಿಲಿನಲ್ಲಿ ತಣ್ಣನೆಯ ಎಸಿ ರೂಮಿನಲ್ಲಿ ಕುಳಿತು ಲಾಭನಷ್ಟದ ಲೆಕ್ಕಾಚಾರ ಹಾಕುವ ಇತರರಿಗಿಂತ, ಒಂದೂವರೆ ಸಾವಿರ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವಿರುವ ಕುಲುಮೆಯಲ್ಲಿ ಭಗ್ಗನೆ ಮುಖಕ್ಕೆ ರಾಚುವ ಕಬ್ಬಿಣದೊಂದಿದೆ ಕೆಲಸ ಮಾಡುತ್ತ ನಿತ್ಯದ ಕೂಳಿನ ಕನಸು ಕಾಣುವ ಲಕ್ಷಾಂತರ ಕಾರ್ಮಿಕರ ಬೆವರಿದೆ.

ಮತ್ತಷ್ಟು ಯಶಸ್ಸಿನ ಕನವರಿಕೆಯಲ್ಲಿ : ವಿಜಯನಗರ ಪ್ಲಾಂಟ್ ವಾರ್ಷಿಕವಾಗಿ ಎಷ್ಟು ಕಬ್ಬಿಣವನ್ನು ಉತ್ಪಾದಿಸುತ್ತಿದೆ, ಎಲ್ಲೆಲ್ಲಿಂದ ಕಬ್ಬಿಣ ಅದಿರನ್ನು ಕೊಂಡುಕೊಳ್ಳುತ್ತಿದೆ, ಗಣಿಗಾರಿಕೆ ನಡೆಸಲು ಎಂತೆಂಥ ಅಡೆತಡೆಗಳನ್ನು ಎದುರಿಸುತ್ತಿದೆ, ಮುಂದಿನ ಗುರಿಗಳೇನು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದೆ, ಯಾವ್ಯಾವ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದನ್ನು ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ (ಆಪರೇಷನ್) ಆಗಿರುವ ರಾನಡೆ ಸುರೇಂದರ್ ಅವರು ಒನ್ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ.

ತನ್ನದೇ ಸ್ವಂತ ಗಣಿಯನ್ನು ಹೊಂದಬೇಕೆಂಬ ಕನಸು ಕಟ್ಟಿಕೊಂಡಿರುವ ಜಿಂದಾಲ್ ಸ್ಟೀಲ್ ಪ್ಲಾಂಟ್, ಇನ್ನು ಐದು ವರ್ಷದಲ್ಲಿ ವಾರ್ಷಿಕ 20 ಮಿಲಿಯನ್ ಟನ್ ಕಬ್ಬಿಣವನ್ನು ಉತ್ಪಾದಿಸುವ ಗುರಿ ಹೊಂದಿದೆ. ಅಲ್ಲದೆ, 16 ಮಿಲಿಯನ್ ಟನ್ ಉತ್ಪಾದಿಸಲು ಅನುಮತಿ ಕೂಡ ದಕ್ಕಿದೆ. ಆದರೆ, ಸ್ವಂತ ಗಣಿಗಳಿಲ್ಲದಿದ್ದರಿಂದ ಬೇರೆ ರಾಜ್ಯಗಳಿಂದ ಅದಿರನ್ನು ದುಬಾರಿ ಬೆಲೆ ತೆತ್ತು ತರಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ದೊರೆಯುತ್ತಿರುವ ಕಬ್ಬಿಣದ ಅದಿರು ಕೂಡ ಅತ್ಯುತ್ತಮದ ಗುಣಮಟ್ಟದ್ದಲ್ಲ ಎಂಬುದು ಅವರ ಅಭಿಮತ.

ಕರ್ನಾಟಕದಲ್ಲಿ ಅಥವಾ ಬೇರೆ ರಾಜ್ಯದಲ್ಲಿ ಕೆಟಗರಿ 'ಸಿ' ಗಣಿ ಗುತ್ತಿಗೆ ದೊರೆತರೆ ಹೆಚ್ಚು ಕಾರ್ಬನ್ ಕಬ್ಬಿಣ ಉತ್ಪಾದಿಸಲು ಸಾಧ್ಯ ಮತ್ತು ಕಡಿಮೆ ದರದಲ್ಲಿ ಕಬ್ಬಿಣವನ್ನು ಮಾರುವುದು ಸಾಧ್ಯ ಎಂದು ಕಂಪನಿಯ ಅಡ್ಮಿನ್ ಮತ್ತು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ವಿಭಾಗದ ಉಪಾಧ್ಯಕ್ಷರಾಗಿರುವ ಮಂಜುನಾಥ್ ಪ್ರಭು ಅವರು ದನಿಗೂಡಿಸುತ್ತಾರೆ. ಕಂಪನಿ ಮತ್ತೆ ಗತಕಾಲದ ವೈಭವ ಗಳಿಸುವ ದಿನಗಳೂ ದೂರವಿಲ್ಲ ಎಂದು ಅವರು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಹಸಿರು ಸ್ಟೀಲ್ ಹರಿಕಾರ : ಜೆಎಸ್‌ಡಬ್ಲ್ಯೂ ಕುರಿತ ಮತ್ತೊಂದು ಮೆಚ್ಚುಗೆಯ ಸಂಗತಿಯೆಂದರೆ, ಪರಿಸರದ ಬಗ್ಗೆ ಕಂಪನಿಗೆ ಇರುವ ಕಾಳಜಿ. ಬರಬಿಸಿಲು ನಾಡಿನಲ್ಲಿಯೂ ಕಂಪನಿ ಕಟ್ಟಿರುವ ಟೌನ್‌ಶಿಪ್ ಹಸಿರುಹಸಿರಿನಿಂದ ಕಂಗೊಳಿಸಿ, ಕಣ್ಣಿಗೆ ಮನಸ್ಸಿಗೆ ಹಬ್ಬವನ್ನುಂಟು ಮಾಡಿರುವುದು ಒಂದು ಸಂಗತಿಯಾದರೆ, ಕೋರೆಕ್ಸ್ ತಂತ್ರಜ್ಞಾನ ಬಳಸಿ ಉತ್ಪಾದಿಸುತ್ತಿರುವ 'ಗ್ರೀನ್ ಸ್ಟೀಲ್' ಕಂಪನಿಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಜರ್ಮನಿಯ 'ಕೋರೆಕ್ಸ್' ತಂತ್ರಜ್ಞಾನವನ್ನು ಭಾರತಕ್ಕೆ ತಂದ ಹೆಮ್ಮೆ ಜೆಎಸ್‌ಡಬ್ಲ್ಯೂ ಕಂಪನಿಯದು.

ಕಾರ್ಖಾನೆ ಹೊರಉಗುಳುವ ತ್ಯಾಜ್ಯದ ಶೇಕಡಾ 95ರಷ್ಟು ಮರುಬಳಕೆ ಮಾಡುತ್ತಿರುವುದರಿಂದ 'ಶೂನ್ಯ ತ್ಯಾಜ್ಯ ವಿಸರ್ಜನಾ' ಕಂಪನಿ ಎಂಬ ಹೆಗ್ಗಳಿಕೆಗೂ ಜೆಎಸ್‌ಡಬ್ಲ್ಯೂ ಪಾತ್ರವಾಗಿದೆ. ಕಬ್ಬಿಣ ಉತ್ಪಾದನೆಯಲ್ಲಿ ಉತ್ಪತ್ತಿಯಾಗುವ ಅನಿಲವನ್ನು ಬಳಸಿ 1800 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸುತ್ತಿರುವ ಕಂಪನಿ, ಬೇಕಷ್ಟನ್ನು ಬಳಸಿ ಉಳಿದಿದ್ದನ್ನು ಗ್ರಿಡ್‌ಗೆ ರವಾನೆ ಮಾಡುತ್ತಿದೆ. ಇದೆಲ್ಲದರ ಹೊರತಾಗಿ ಕಂಪನಿಗೆ ಮುಕುಟವಿಟ್ಟಂತೆ ಹಸುರಿನಿಂದ ಕಂಗೊಳಿಸುವ ಟೌನ್‌ಶಿಪ್, ದೇಶದ ಅತ್ಯುತ್ತಮ ಟೌನ್‌ಶಿಪ್‌ಗಳಲ್ಲೊಂದು ಎಂಬ ಕೀರ್ತಿಗೆ ಪಾತ್ರವಾಗಿದೆ.

ಸಿಎಸ್ಆರ್ ಚಟುವಟಿಕೆಗಳು : ದೇಶದ ನಂ.1 ಸ್ಟೀಲ್ ಕಂಪನಿ ಎನಿಸಿರುವ ಜಿಂದಾಲ್ ಸ್ಟೀಲ್ ವರ್ಕ್ಸ್ ಸಮೂಹ ಕಂಪನಿ ಪರಿಸರ ಕಾಳಜಿ ಮತ್ತು ಸಮಾಜದ ಔನ್ನತ್ಯದ ಕುರಿತು ತನ್ನ ಜವಾಬ್ದಾರಿಯನ್ನು ಅತ್ಯಂತ ಶಿಸ್ತಿನಿಂದ ನಿಭಾಯಿಸುತ್ತಿದೆ. ಸಂಗೀತಾ ಜಿಂದಾಲ್ ಅವರ ಸಮರ್ಥ ನೇತೃತ್ವದಲ್ಲಿ ಜೆಎಸ್‌ಡಬ್ಲ್ಯೂ ಫೌಂಡೇಷನ್ ನಡೆಸುತ್ತಿರುವ ಓಪಿಜೆಸಿ, ಸುತ್ತಲಿನ ಹಳ್ಳಿಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ನಿರ್ಗತಿಕರಿಗೆ ಆಶಾದೀಪವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JSW Steel Ltd owned by JSW Group is India's largest private sector steel company. JSW Steel Vijayanagar plant is the first integrated steel plant to reach 10 MTPA capacity in a single location. It is the first in India to use the Corex technology for hot metal production. The company shares its success story with Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more