ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ಮೋನಿಕಾ ಕಿಂಗ್ ಅನೂಪ್ ಗೋಪಾಲ್ ಸಿಂಗ್!

By ಪ್ರಸಾದ ನಾಯಿಕ
|
Google Oneindia Kannada News

ಈ ಸಂಗೀತ ಸಾಧನ ಸ್ಮಾಲ್ ಆಗಿದ್ದರೂ ಬಲು ಸ್ಮಾರ್ಟ್. ಪ್ಯಾಷನ್ ಇಲ್ಲದಿದ್ದರೆ ಜೀವಮಾನ ಪ್ರಯತ್ನಪಟ್ಟರೂ ಒಲಿಯದಂಥ ಹಠಮಾರಿ ಪ್ರೇಯಸಿಯಂತೆ. ಇದನ್ನು ಕಲಿಸಲು ಗುರುಗಳೂ ಬೇಕಿಲ್ಲ, ಕಲಿಸುವ ಸಂಸ್ಥೆಗಳಂತೂ ವಿಶ್ವದಾದ್ಯಂತ ಇಲ್ಲವೇ ಇಲ್ಲ. ಕಲಿಯುವವರ ಹೃದಯದಲ್ಲಿ, ಆತ್ಮದಲ್ಲಿ ಸಂಗೀತದ ತುಡಿತ ಇದ್ದವರಿಗೆ, ತಮಗೆ ತಾವೇ ಗುರುಗಳಾದರೆ ಮತ್ತು ವಾಗ್ದೇವಿಯ ಆಶೀರ್ವಾದವಿದ್ದರೆ ಮಾತ್ರ ಶರಣಾಗುವಂಥ ಸಂಗೀತ ಸಾಧನವಿದು.

ಇದುವೇ ಶಾರ್ಟ್, ಸ್ಮಾರ್ಟ್ ಮತ್ತು ಸ್ವೀಟಾದ ಸಂಗೀತ ಸಾಧನ ಹಾರ್ಮೋನಿಕಾ. ಭಾರತದಲ್ಲಿ ಮೌತ್ ಆರ್ಗನ್ ಅಂತ ಕರೀತಾರೆ. ಚೋಟುದ್ದ ಇರುವ ಸಂಗೀತ ಸಾಧನದಲ್ಲಿ ಇಡೀ ಜಗತ್ತಿನಲ್ಲಿ ಇರುವ ಎಲ್ಲಾ ಸಂಗೀತ ಸಾಧನಗಳ ಮಾಧುರ್ಯವನ್ನು ತರಬಲ್ಲಂಥ ತಾಕತ್ತಿದೆ. ಇದನ್ನು ಸಾಧ್ಯವಾಗಿಸಿರುವ ವಿರಳಾತಿವಿರಳ ಕಲಾವಿದರಲ್ಲಿ ಒಬ್ಬರಾಗಿರುವವರು ಬಹುಪ್ರತಿಭೆಯ ಕಲಾವಿದ, ಕನ್ನಡಿಗ ಅನೂಪ್ ಗೋಪಾಲ್ ಸಿಂಗ್. ಮೂಲತಃ ರಾಜಸ್ತಾನದವರಾದರೂ ಹುಟ್ಟಿ ಬೆಳೆದಿದ್ದೆಲ್ಲ ಮೈಸೂರಿನಲ್ಲಿ, ಈಗ ನೆಲೆಸಿರುವುದು ಬೆಂಗಳೂರಿನಲ್ಲಿ.

61 ವರ್ಷದ ಅನೂಪ್ ಗೋಪಾಲ್ ಸಿಂಗ್ ಅವರನ್ನು 'ಹಾರ್ಮೋನಿಕಾ ಕಿಂಗ್' ಅಂತ ಸ್ನೇಹಿತರು ಪ್ರೀತಿಯಿಂದ ಬಣ್ಣಿಸುತ್ತಾರೆ. ಭಾರತಕ್ಕಿಂತ ವಿದೇಶಗಳಲ್ಲಿಯೇ ಅವರಿಗೆ ಹೆಚ್ಚು ಬೇಡಿಕೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರೊಫೆಸರಾಗಿ ನಿವೃತ್ತರಾಗಿರುವ ಅನೂಪ್ ಅವರು ಇಪ್ಪತ್ತಕ್ಕೂ ಹೆಚ್ಚು ಹೊರದೇಶಗಳಲ್ಲಿ ಕಚೇರಿಗಳಲ್ಲಿ, ಸಂಗೀತ ಉತ್ಸವಗಳಲ್ಲಿ ನುಡಿಸಿ ಸಂಗೀತ ಪ್ರೇಮಿಗಳ ಪ್ರೀತಿ ಗಳಿಸಿದ್ದಾರೆ. ಹಾರ್ಮೋನಿಕಾ ಮಾತ್ರವಲ್ಲ ಅನೂಪ್ ಅವರು ಚಿತ್ರಕಲೆ, ಮ್ಯಾಂಡೋಲಿನ್, ಸರೋದ್ ವಾದನ ನುಡಿಸುವುದರಲ್ಲಿಯೂ ಪ್ರವೀಣರು.

ಬಾಯಿಮುಂದೆ ಕೈ ಅಡ್ಡ ಹಿಡಿದುಕೊಂಡರೆ ನೋಡುಗರಿಗೆ ಕಾಣಿಸದಷ್ಟು ಪುಟ್ಟದಾದ ಹಾರ್ಮೋನಿಕಾ ನುಡಿಸಲು ಆರಂಭಿಸಿದರೆ ಕೇಳುಗರು ಮಂತ್ರಮುಗ್ಧರಾಗುವಂತೆ ಅನೂಪ್ ನುಡಿಸುತ್ತಾರೆ. ದೇಶವಿದೇಶಗಳ ಹಲವಾರು ಪ್ರಶಸ್ತಿಗಳನ್ನು ಅವರನ್ನು ಹುಡುಕಿಕೊಂಡು ಬಂದರೂ, ಕರ್ನಾಟಕದಲ್ಲಿ ಅವರಿಗೆ ಮಾನ್ಯತೆ ಸಿಕ್ಕಿಲ್ಲ. ನಿಜ ಹೇಳಬೇಕೆಂದರೆ, ಯಾವುದೇ ಪ್ರಶಸ್ತಿ ಹುಡುಕಿಕೊಂಡು ಅವರು ಹೋಗಿಲ್ಲ ಎಂಬುದೇ ಅವರ ಹೆಗ್ಗಳಿಕೆ. ಜನರು ತೋರುವ ಪ್ರೀತಿಯೇ ನಿಜವಾದ ಪ್ರಶಸ್ತಿ ಎನ್ನುವ ಇಂಥ ವಿಶಿಷ್ಟ ಕಲಾವಿದರು ತಮ್ಮ ಸಂಗೀತದ ಪಯಣವನ್ನು ಒನ್ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡರು.

ಹಾರ್ಮೋನಿಕಾ ಕಲಿಕೆ ಆರಂಭವಾಗಿದ್ದು ಹೇಗೆ?

ಹಾರ್ಮೋನಿಕಾ ಕಲಿಕೆ ಆರಂಭವಾಗಿದ್ದು ಹೇಗೆ?

ಮೈಸೂರಿನ ಸೇಂಟ್ ಫಿಲೋಮಿನಾ ಶಾಲೆಯಲ್ಲಿ ಕಲಿಯುತ್ತಿದ್ದಾಗ ಸಹಪಾಠಿಯೊಬ್ಬ ಕಟ್ಟಿಗೆಯಿಂದ ತಯಾರಿಸಿದ 'ಪಕ್' ಎಂಬ ಪುಟ್ಟ ಸಂಗೀತ ಸಾಧನ ನುಡಿಸುತ್ತಿದುದನ್ನು ನೋಡಿ ಇದನ್ನು ಕಲಿಯಲು ಆರಂಭಿಸಿದೆ. ಸೋದರಮಾವನಿಂದ ಹೇಗಿದ್ದರೂ ಶಾಸ್ತ್ರೀಯ ಸಂಗೀತದ ಪಾಠ ಸಿಕ್ಕಿತ್ತು. ಅಂದು ಕಲಿಯಲು ಆರಂಭಿಸಿ, ಪಟ್ಟು ಹಿಡಿದು ಹಾರ್ಮೋನಿಕಾವನ್ನು ಪಳಗಿಸಿಕೊಂಡೆ. ಇಂದು ಇಂಡಿಯನ್, ವೆಸ್ಟರ್ನ್, ಫ್ಯೂಜನ್, ಶಾಸ್ತ್ರೀಯ ಸಂಗೀತವನ್ನು ನಿರರ್ಗಳವಾಗಿ ನುಡಿಸಬಲ್ಲೆ.

ಕಲಿಯಲು ಸ್ಫೂರ್ತಿ ಯಾರು? ಯಾವ ಗುರುಗಳ ಬಳಿ ಕಲಿತಿರಿ?

ಕಲಿಯಲು ಸ್ಫೂರ್ತಿ ಯಾರು? ಯಾವ ಗುರುಗಳ ಬಳಿ ಕಲಿತಿರಿ?

ಸ್ನೇಹಿತ ನುಡಿಸುವುದನ್ನು ನೋಡಿ ಹಾರ್ಮೋನಿಕಾ ಜೊತೆ ಸ್ನೇಹ ಆರಂಭವಾಯಿತು. ಕಲಿಸುವ ಗುರುಗಳು ಇಲ್ಲದ್ದರಿಂದ ನಾನೇ ಕಲಿಯಲು ಆರಂಭಿಸಿದೆ. ಹಿಂದಿ ಚಿತ್ರರಂಗದ ಮಿಲನ್ ಗುಪ್ತಾ ಇದನ್ನು ಅದ್ಭುತವಾಗಿ ನುಡಿಸುತ್ತಿದ್ದರು. ಆದರೆ, ಇದನ್ನು ನುಡಿಸಲು ನನಗೆ ನಾನೇ ಸ್ಫೂರ್ತಿ. ಮುಂದೆ ಶಾಲೆಯಲ್ಲಿ, ಕಾಲೇಜಿನಲ್ಲಿ ಉತ್ಸವಗಳಲ್ಲಿ ನುಡಿಸುತ್ತಿದ್ದರೆ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿಯುತ್ತಿದ್ದರು, ಒನ್ಸ್ ಮೋರ್ ಕೂಗು ಕೇಳಿಬರುತ್ತಿದ್ದವು, ಚಪ್ಪಾಳೆ ಗಗನ ಮುಟ್ಟುತ್ತಿದ್ದವು.

ಇದನ್ನು ಕಲಿಯಲು ಶಾಸ್ತ್ರೀಯ ಸಂಗೀತದ ಹಿನ್ನೆಲೆ ಅಗತ್ಯವಿದೆಯಾ?

ಇದನ್ನು ಕಲಿಯಲು ಶಾಸ್ತ್ರೀಯ ಸಂಗೀತದ ಹಿನ್ನೆಲೆ ಅಗತ್ಯವಿದೆಯಾ?

ಶಾಸ್ತ್ರೀಯ ಸಂಗೀತದ ಹಿನ್ನೆಲೆ ಅಗತ್ಯವಿಲ್ಲದಿದ್ದರೂ, ಇಂಪ್ರೂವೈಸ್ ಮಾಡುವ, ತಂತ್ರಗಾರಿಕೆ ಬಳಸಿಕೊಳ್ಳುವ ಚಾಣಾಕ್ಷತೆ ಇರಬೇಕು. ಇಲ್ಲದಿದ್ದರೆ ನುಡಿಸುವಾಗ ಅಪಸ್ವರ ಹೊರಡುವುದು ಗ್ಯಾರಂಟಿ. ಇತರ ವೃತ್ತಿಯಲ್ಲಿ ಪರಿಣತಿ ಸಾಧಿಸಿದವರು ಇದನ್ನು ಪಳಗಿಸಿಕೊಳ್ಳಲು ಎಷ್ಟೋ ಪ್ರಯತ್ನಪಟ್ಟಿದ್ದಾರೆ. ಕಾಲೇಜಲ್ಲಿದ್ದಾಗ ಎಲ್ಲರೂ ಜೇಬಲ್ಲಿ ಹಾರ್ಮೋನಿಕಾ ಹಿಡಿದುಕೊಂಡು ಸ್ಟೈಲಾಗಿ ಅಡ್ಡಾಡುತ್ತಿದ್ದರು. ಆದರೆ, ಈ ಸುಂದರಿ ಒಲಿದದ್ದು ಮಾತ್ರ ಕೆಲವರಿಗೆ ಮಾತ್ರ.

ಜನಪ್ರಿಯತೆ ಸಿಕ್ಕಿದ್ದು ಭಾರತದಲ್ಲಾ, ವಿದೇಶದಲ್ಲಾ?

ಜನಪ್ರಿಯತೆ ಸಿಕ್ಕಿದ್ದು ಭಾರತದಲ್ಲಾ, ವಿದೇಶದಲ್ಲಾ?

ಅಮೆರಿಕಾ, ಇಂಗ್ಲೆಂಡ್, ಗ್ರೀಸ್, ಜರ್ಮನಿ, ಸಿಂಗಪುರ, ಕೌಲಾಲಂಪುರ, ಆಸ್ಟ್ರೇಲಿಯಾ ಮುಂತಾದ ಹಲವಾರು ದೇಶಗಳಲ್ಲಿ ಆರ್ಕೆಸ್ಟ್ರಾ ಜೊತೆ ನುಡಿಸಿದ್ದೇನೆ. ವಿಶ್ವದಾದ್ಯಂತ ಇದಕ್ಕೆ ಭಾರೀ ಡಿಮ್ಯಾಂಡ್ ಇದೆ. ಆದರೆ, ನಿಮಗೆ ವಿಶ್ವಾಸ ಇರಬೇಕು. ಪರಿಸ್ಥಿತಿಗೆ ತಕ್ಕಂತೆ ಅಡಾಪ್ಟ್ ಮಾಡಿಕೊಂಡು, ವಿಭಿನ್ನವಾದ ಶ್ರೋತೃಗಳಿಗೆ ಇಷ್ಟವಾಗುವಂತೆ ನುಡಿಸುವ ತಾಳ್ಮೆ, ತಂತ್ರಗಾರಿಕೆ, ಪರಿಣತಿ ನುಡಿಸುವವರಿಗೆ ಇರಬೇಕು.

ಹೆಚ್ಚಿನ ಪ್ರಶಂಸೆ ಸಿಕ್ಕಿದ್ದು ಎಲ್ಲಿ?

ಹೆಚ್ಚಿನ ಪ್ರಶಂಸೆ ಸಿಕ್ಕಿದ್ದು ಎಲ್ಲಿ?

ಪ್ಯಾಟ್ರಿಕ್ ವೈಟ್ ಎಂಬಾತ ಗ್ರೇಟೆಸ್ಟ್ ಲವರ್ ಆಫ್ ಹಾರ್ಮೋನಿಕಾ. ನಿಜಕ್ಕೂ ಹೇಳಲು ಮುಜುಗರವಾಗುತ್ತದೆ. 'ಹಾರ್ಮೋನಿಕಾ ನುಡಿಸುವವರನ್ನು ಬೇಕಾದಷ್ಟು ನೋಡಿದ್ದೇನೆ, ಇವರು ಅತ್ಯಂತ ಗ್ರೇಟೆಸ್ಟ್' ಎಂದು ಅವರು ಬರೆದಿರುವುದು ನನ್ನ ಜೀವನದ ಅತೀದೊಡ್ಡ ಪ್ರಶಸ್ತಿ. ಐ ರಿಯಲಿ ಟ್ರೆಷರ್ ಇಟ್. ಈ ಪ್ರಶಂಸೆ ನನ್ನ ಬಗ್ಗೆಯೇ ನನಗೆ ಅತ್ಯಂತ ಹೆಮ್ಮೆ ಮೂಡಿಸಿದೆ. ಹಾಗೆಯೆ, ಈ ಹೊಗಳಿಕೆ ನನ್ನ ಮೇಲಿನ ಜವಾಬ್ದಾರಿ ಮತ್ತು ನಿರೀಕ್ಷೆ ಕೂಡ ಹೆಚ್ಚಿಸಿದೆ.

ಹಾರ್ಮೋನಿಕಾ ಎಲ್ಲೆಲ್ಲಿ ತಯಾರಿಸುತ್ತಾರೆ? ಭಾರತದಲ್ಲಿ ಸಿಗುತ್ತದಾ?

ಹಾರ್ಮೋನಿಕಾ ಎಲ್ಲೆಲ್ಲಿ ತಯಾರಿಸುತ್ತಾರೆ? ಭಾರತದಲ್ಲಿ ಸಿಗುತ್ತದಾ?

ಹಾರ್ಮೋನಿಕಾ ಒಂದು ವಿಶಿಷ್ಟ ಸಾಧನ. ಚೀನಾದಲ್ಲಿ ಕಡಿಮೆ ದರದ ಮತ್ತು ಜರ್ಮನಿಯಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ (ಹೋನರ್) ಹಾರ್ಮೋನಿಕಾ ತಯಾರಿಸುತ್ತಾರೆ. ಭಾರತದಲ್ಲಿ ತಯಾರಿಸುತ್ತಾರಾದರೂ ಇಷ್ಟು ಪ್ರೊಫೆಷನಲ್ ಆಗಿ ತಯಾರಿಸಲು ಆಗುವುದಿಲ್ಲ. ಜರ್ಮನಿಯಲ್ಲಿ ಪ್ರತಿವರ್ಷ ಹಾರ್ಮೋನಿಕಾ ಉತ್ಸವ ನಡೆಯುತ್ತದೆ. ಬೆಂಗಳೂರಿನಲ್ಲಿ ಸೋನೋ ಡೈನ್ ಎಂಬ ಅಂಗಡಿಯಲ್ಲಿ ಹೋನರ್ ಬ್ರಾಂಡಿನ ಅತ್ಯುತ್ಕೃಷ್ಟ ಹಾರ್ಮೋನಿಕಾ ಸಿಗುತ್ತದೆ.

ಇಷ್ಟೊಂದು ಸಾಧ್ಯತೆಗಳಿರುವಾಗ ಕಲಿಸುವ ಸಂಸ್ಥೆಗಳು ಏಕಿಲ್ಲ?

ಇಷ್ಟೊಂದು ಸಾಧ್ಯತೆಗಳಿರುವಾಗ ಕಲಿಸುವ ಸಂಸ್ಥೆಗಳು ಏಕಿಲ್ಲ?

ವಿಶ್ವದಲ್ಲಿ ಕಲಿಸುವವರು ಕಡಿಮೆ. ಕಲಿಯಲು ಬೇಕಾದಷ್ಟು ವಿದ್ಯಾರ್ಥಿಗಳಿದ್ದಾರೆ. ಆದರೆ, ಕಲಿಯಲು ಸಾಧ್ಯವಾಗದೆ ಹಲವರಿಗೆ ಭ್ರಮನಿರಸನ ಆಗಿಬಿಡುತ್ತದೆ. ಎಷ್ಟು ಕಷ್ಟಪಟ್ಟರೂ ಬರುವುದಿಲ್ಲ. ಶೇ.90ರಷ್ಟು ಜನ ಇದರ ಸಹವಾಸವೇ ಸಾಕೆಂದು ಬಿಟ್ಟುಬಿಡುತ್ತಾರೆ. ಇದನ್ನು ಕಲಿಯಲು ಸಾಕಷ್ಟು ತಾಳ್ಮೆ ಬೇಕು ಮತ್ತು ಸಾಕಷ್ಟು ಪ್ರಯತ್ನವೂ ಬೇಕು.

ನೀವು ನುಡಿಸುವುದು ಸಿನೆಮಾ ಸಂಗೀತವನ್ನೋ, ಶಾಸ್ತ್ರೀಯ ಸಂಗೀತವನ್ನೋ?

ನೀವು ನುಡಿಸುವುದು ಸಿನೆಮಾ ಸಂಗೀತವನ್ನೋ, ಶಾಸ್ತ್ರೀಯ ಸಂಗೀತವನ್ನೋ?

ಜಾಜ್, ರಾಕ್, ಇಂಡಿಯನ್, ವೆಸ್ಟರ್ಸ್ ಟೆಕ್ನಿಕ್ ಬಳಸುತ್ತೇನೆ. ಒಂದೇ ಹೋಲಲ್ಲಿ ಬ್ಲೋ ಮಾಡಿದ್ರೆ ಒಂದು ನೋಟ್, ಉಸಿರು ಎಳೆದುಕೊಂಡರೆ ಮತ್ತೊಂದು. ಕಾರ್ಡ್ ಬಳಸಿ ಬೇಕಾದಷ್ಟು ವಿಭಿನ್ನತೆ ತರಬಹುದು. ಪಿಯಾನೋ ಎಫೆಕ್ಟ್ ಕ್ರಿಯೇಟ್ ಮಾಡಬಹುದು. ಹತ್ತು ವರ್ಷಗಳ ಹಿಂದೆ ಹಿಂದೂಸ್ತಾನಿ ಕ್ಲಾಸಿಕಲ್ ಬಿಹಾಗ್ ರಾಗದಲ್ಲಿ ನುಡಿಸಿದ್ದೆ. ಇದನ್ನು ಕೇಳಿ ಜನರು ಅಚ್ಚರಿಪಟ್ಟಿದ್ದರು. ಆದರೆ, ಜನರಿಗೆ ಮನರಂಜನೆ ಬೇಕು ಅಷ್ಟೇ. ಹಾಗಾಗಿ, ಸಿನೆಮಾ ಹಾಡುಗಳನ್ನೇ ಹೆಚ್ಚಾಗಿ ನುಡಿಸುತ್ತೇನೆ.

ಸಿನೆಮಾಗಳಲ್ಲಿ ಈ ಸಾಧನವನ್ನು ನುಡಿಸಿದ್ದೀರಾ?

ಸಿನೆಮಾಗಳಲ್ಲಿ ಈ ಸಾಧನವನ್ನು ನುಡಿಸಿದ್ದೀರಾ?

ಸಿನೆಮಾಗಳಲ್ಲಿ ನುಡಿಸಲು ಬೇಕಾದಷ್ಟು ಆಫರ್ ಬಂದಿತ್ತು. ಆದರೆ, ನಾನು ಹಿಂದೇಟು ಹಾಕಿದೆ. ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹಿಂದಿನ ಕಾಲದಲ್ಲಿ ಓಪಿ ನೈಯರ್, ಶಂಕರ್ ಜೈಕಿಶನ್ ಈ ವಾದ್ಯವನ್ನು ಸಾಕಷ್ಟು ಜನಪ್ರಿಯತೆಗೊಳಿಸಿದ್ದರು. ಆದರೆ, ಇತ್ತೀಚೆಗೆ ಇದು ಕಡಿಮೆಯಾಗುತ್ತಿದೆ.

ಹಾರ್ಮೋನಿಕಾ ಪ್ಲೇಯರ್, ಪೇಂಟರ್, ಪ್ರೊಫೆಸರ್, ಇವುಗಳಲ್ಲಿ ಯಾವುದು ಇಷ್ಟ?

ಹಾರ್ಮೋನಿಕಾ ಪ್ಲೇಯರ್, ಪೇಂಟರ್, ಪ್ರೊಫೆಸರ್, ಇವುಗಳಲ್ಲಿ ಯಾವುದು ಇಷ್ಟ?

ನಾನು ಪತ್ರಕರ್ತ ಕೂಡ. ಹಲವಾರು ಪತ್ರಿಕೆಗಳಲ್ಲಿ ಕಾಲಂ ಬರೆಯುತ್ತಿದ್ದೆ. ಆದರೆ, ಸಂಗೀತ ನನಗೆ ತುಂಬಾ ಹತ್ತಿರ. ಸಂಗೀತ ನಮ್ಮಲ್ಲೇ ಇರುತ್ತದೆ. ಆದರೆ, ದೇವರು ಆಶೀರ್ವಾದ ಮಾಡಬೇಕಾಗುತ್ತದೆ. ಕಲಾವಿದನಿಗೆ ಮನಸು ಆತ್ಮದಲ್ಲಿ ಸಂಗೀತ ಇದ್ದರೆ, ಇವೆಲ್ಲ ಬರೀ ಟೂಲ್ಸ್. ವಾಗ್ದೇವಿ ಒಲಿಯಬೇಕು. ಇಲ್ಲದಿದ್ದರೆ, ಎಷ್ಟೇ ಪ್ರಯತ್ನ ಮಾಡಿದರೂ, ಪಿಎಚ್ಡಿ ಮಾಡಿದರೂ ಒಂದೇ ಒಂದು ನೋಟ್ ನುಡಿಸಲು ಬರುವುದಿಲ್ಲ. ಎಷ್ಟೋ ಲಕ್ಷಗಳಲ್ಲಿ ಒಬ್ಬರಿಗೆ ಮಾತ್ರ ಒಲಿಯುತ್ತದೆ.

ಹಾರ್ಮೋನಿಕಾ ನುಡಿಸುವವರು ಬದುಕು ಕಟ್ಟಿಕೊಳ್ಳಲು ಸಾಧ್ಯವೆ?

ಹಾರ್ಮೋನಿಕಾ ನುಡಿಸುವವರು ಬದುಕು ಕಟ್ಟಿಕೊಳ್ಳಲು ಸಾಧ್ಯವೆ?

ಬೇಕಾದಷ್ಟು ವೃತ್ತಿ ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ ದುಡ್ಡು ಕಡಿಮೆ. ವಿದೇಶದಲ್ಲಿ ಕಲಾವಿದರಿಗೆ ಸಾಕಷ್ಟು ಹಣ ನೀಡುತ್ತಾರೆ. ನಾನೂ ಬ್ಯಾಂಡ್ ಕಟ್ಟಬೇಕೆಂದಿದ್ದೇನೆ. ಇದು ಯಶಸ್ವಿಯಾಗಲು ಮಾರ್ಕೆಟಿಂಗ್ ತುಂಬಾ ಮುಖ್ಯ. ಇಲ್ಲದಿದ್ದರೆ ದುಡ್ಡುಹಾಕಿ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ. ದುಡ್ಡು ಸಿಕ್ಕರೆ ಕಲಾವಿದರಿಗೂ ಸ್ಫೂರ್ತಿ ನೀಡಿದಂತಾಗುತ್ತದೆ.

ಯಾವ್ಯಾವ ಪ್ರಶಸ್ತಿಗಳು ಬಂದಿವೆ?

ಯಾವ್ಯಾವ ಪ್ರಶಸ್ತಿಗಳು ಬಂದಿವೆ?

ಅಮೆರಿಕನ್ ಬಯೋಗ್ರಾಫಿಕಲ್ ಸೆಂಟರ್ ಮತ್ತು ಇಂಗ್ಲೆಂಡಿನ ಇಂಟರ್ನ್ಯಾಷನಲ್ ಬಯೋಗ್ರಾಫಿಕಲ್ ಸೆಂಟರ್ ಇಂಗ್ಲೆಂಡ್ ಸೇರಿ ಹಾಲ್ ಆಫ್ ಫೇಮ್ ಸ್ಥಾಪಿಸಿದ್ದಾರೆ. ಹತ್ತು ಫೈನ್ ಆರ್ಟ್ಸ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಕ್ಕೆ ನನಗೆ ಈ ಪ್ರಶಸ್ತಿ ಕೊಟ್ಟಿದ್ದಾರೆ. ಮುಂದಿನ ವರ್ಷ ಜರ್ಮನಿಯಲ್ಲಿ ನಡೆಯಲಿರುವ ಹಾರ್ಮೋನಿಕಾ ಉತ್ಸವದಲ್ಲಿ ನುಡಿಸಲು ಕೇಳಿದ್ದಾರೆ ಸ್ಟೀವ್ ಬಕ್ನರ್ ಎಂಬುವವರು.

ಕರ್ನಾಟಕ, ಭಾರತದಲ್ಲಿ ಪ್ರಶಸ್ತಿ, ಬಿರುದು ಬಾವಲಿ?

ಕರ್ನಾಟಕ, ಭಾರತದಲ್ಲಿ ಪ್ರಶಸ್ತಿ, ಬಿರುದು ಬಾವಲಿ?

ಪ್ರಶಸ್ತಿ ಕೊಡಿ ಎಂದು ಎಂದೂ ಕೇಳಲು ಹೋಗಿಲ್ಲ. ಪ್ರಶಸ್ತಿಗಾಗಿ ಅರ್ಜಿ ಹಾಕುವ, ಲಾಬಿ ನಡೆಸುವ ಅಗತ್ಯವಿಲ್ಲ. ಅವಾರ್ಡ್ ಗಿಂತ ಜನರು ಎಂಜಾಯ್ ಮಾಡುತ್ತಾರೆ. ಲೈವ್ ಪರ್ಫಾರ್ಮನ್ಸ್ ನಲ್ಲಿ ತಬ್ಬಿಕೊಂಡು, ಕಣ್ಣಲ್ಲಿ ನೀರು ಬರಿಸಿಬಿಟ್ರಿ ಅಂದು ಬೆನ್ನುತಟ್ಟಿದ್ದಾರೆ. ಇಷ್ಟು ದೊಡ್ಡ ಮ್ಯಾಜಿಕ್ ಮಾಡಿಬಿಟ್ಟಿರಲ್ಲ ಅಂತ ಪ್ರಶಂಸೆ ಮಾಡಿದ್ದಾರೆ. ನನ್ ಜೊತೆ ಹಾಡುತ್ತಾರೆ, ಕುಣಿಯುತ್ತಾರೆ. ಇದಕ್ಕಿಂತ ಇನ್ನೇನು ಬೇಕು?

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೆ?

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೆ?

ಇದನ್ನು ನುಡಿಸುವುದು ಹೃದಯ ಮತ್ತು ಪುಪ್ಪುಸಕ್ಕೆ ಒಳ್ಳೆಯದು. ಆದರೆ, ವೈಜ್ಞಾನಿಕವಾಗಿ ನುಡಿಸಬೇಕು. ಅವೈಜ್ಞಾನಿಕವಾಗಿ ನುಡಿಸಿದರೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ. ಉಸಿರಿನ ಮೇಲೆ ಹಿಡಿತ ಸಾಧಿಸಬೇಕಾದರೆ ಪ್ರಾಣಾಯಾಮ ಮಾಡಬೇಕಾಗುತ್ತದೆ. ಕೆಲಬಾರಿ ಅರ್ಧ ರಾತ್ರಿ ಕೂಡ ನುಡಿಸಬೇಕಾದ ಪರಿಸ್ಥಿತಿ ಇರುತ್ತದೆ. ಡಿಹೈಡ್ರೇಟ್ ಆಗುತ್ತದೆ. ಯಾವುದೇ ವಿಂಡ್ ಇನ್‌ಸ್ಟ್ರುಮೆಂಟ್ ನುಡಿಸಬೇಕಾದರೆ ಈ ತೊಂದರೆ ಇದ್ದದ್ದೆ. ಅನುಲೋಮ ವಿಲೋಮ ಮಾಡಿದರೆ ನಾರ್ಮಲೈಸ್ ಮಾಡಿಕೊಳ್ಳಬಹುದು.

ಕರ್ನಾಟಕದ ವಾದ್ಯಗಾರರ ಜೊತೆ ಪರ್ಫಾರ್ಮ್ ಮಾಡಿಲ್ಲವೇಕೆ?

ಕರ್ನಾಟಕದ ವಾದ್ಯಗಾರರ ಜೊತೆ ಪರ್ಫಾರ್ಮ್ ಮಾಡಿಲ್ಲವೇಕೆ?

ವೈಯಕ್ತಿಕವಾಗಿ ನಾನು ಪರ್ಫಾರ್ಮ್ ಮಾಡಿಲ್ಲ ಅನ್ನುವುದಕ್ಕಿಂತ ಅವಕಾಶ ಸಿಕ್ಕಿಲ್ಲ. ಆದರೆ, ಹಲವಾರು ವಿದೇಶಿಯರ ಜೊತೆ ನುಡಿಸುವ ಅವಕಾಶ ಸಿಕ್ಕಿದೆ. ಹೀಗಾಗಿ ವಿದೇಶದಲ್ಲಿಯೇ ಹೆಚ್ಚಿನ ಬೇಡಿಕೆ ಇದೆ. ಭಾರತದಲ್ಲಿ ಇದನ್ನು ತುಂಬಾ ಚೆನ್ನಾಗಿ ಸುರಬದ್ಧವಾಗಿ, ಡಿಸಿಪ್ಲಿನ್ ಆಗಿ, ಕ್ಲಾಸಿಕಲ್ ಆಗಿ ನುಡಿಸುವವರು ಕಡಿಮೆ. ಸ್ಮಾಲ್ ಆದರೆ ಸ್ಮಾರ್ಟ್ ಸಾಧನವನ್ನು ಕಲಿಯಲು ಇಚ್ಛಿಸುವವರಿಗೆ ಕಲಿಸಲು ನಾನಂತೂ ಸಿದ್ಧವಿದ್ದೇನೆ. ಕಲಿಯುವ ತುಡಿಕೆ ಅವರಿಲ್ಲರಬೇಕು.

English summary
A mouth organ or popularly known as Harmonica is a free reed aerophone with one or more air chambers fitted with a free reed. Very few people in the world have mastered it. One of them is Anoop Gopal Singh, originally from Mysore. Loved one call him Harmonica King.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X