• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿರೀಶ್ ಕಾರ್ನಾಡ್ ಅವರ 'ತಲೆದಂಡ' ನಾಟಕ ಕೈಗೆತ್ತಿಕೊಂಡಾಗ...

|

ತೊಂಬತ್ತರ ದಶಕದ ಆರಂಭ. ಎಂಇಎಸ್ ಕಾಲೇಜಿನಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದಿದ್ದ, ಯಕ್ಷಗಾನದಲ್ಲಿ ನಿಪುಣರಾಗಿದ್ದ ಗೋಪಾಲಕೃಷ್ಣ ನಾಯರಿ, ಸ್ಟ್ರಕ್ಚರಲ್ ಥಿಯೇಟರ್ ನ (ದಿವಂಗತ) ಸುಬ್ರಾಯ್ ಭಟ್ ಮುಂತಾದ ದಿಗ್ಗಜ ನಾಟಕರಾರ ರಂಗ ತರಬೇತಿಯಲ್ಲಿ ಪಳಗುತ್ತಿದ್ದ ಸಮಯ.

ಹಗಲು ರಾತ್ರಿ ನಮ್ಮ ಧ್ಯಾನವೆಲ್ಲ ಆಗ ನಾಟಕದೆಡೆಗೆ. ಅಂತರ್ ತರಗತಿ ನಾಟಕ ಸ್ಪರ್ಧೆ ಒಂದೆಡೆಯಾಗಿದ್ದರೆ, ಜ್ಞಾನಭಾರತಿ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ನಮ್ಮ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು. ಪ್ರತಿವರ್ಷ ಅತ್ಯುತ್ತಮ ನಾಟಕ ಆರಿಸಿಕೊಂಡು, ಅತ್ಯುತ್ತಮವಾಗಿ ಅಭಿನಯಿಸಿ ಪ್ರಶಸ್ತಿ ಕಬಳಿಸಿಕೊಂಡು ಬರುತ್ತಿದ್ದುದು ನಮಗೆ ಸಾಮಾನ್ಯವಾಗಿತ್ತು.

ಗಿರೀಶ್ ಕಾರ್ನಾಡರ ನಿಧನಕ್ಕೆ ಟ್ವಿಟ್ಟರ್‌ನಲ್ಲಿ ಗಣ್ಯರ ಸಂತಾಪ

ಪರೀಕ್ಷೆ ಇನ್ನೊಂದೆರಡು ತಿಂಗಳಿದ್ದರೂ ನಾಟಕದ ಗುಂಗಿನಿಂದ ಹೊರಬರುತ್ತಿರಲಿಲ್ಲ. ಅಂತಹುದೇ ಸಮಯದಲ್ಲಿ ಅಂತರ್ ಕಾಲೇಜು ನಾಟಕ ಸ್ಪರ್ಧೆಗೆ ನಾವು ಆಯ್ಕೆಕೊಂಡಿದ್ದು, ಅದೇ ತಾನೆ ರಚನೆಯಾಗಿದ್ದ ಗಿರೀಶ್ ಕಾರ್ನಾಡ್ ಅವರ 'ತಲೆ ದಂಡ' ನಾಟಕ. ನಾಟಕದ ಪ್ರಥಮ ಪ್ರಯೋಗ ನಮ್ಮದೇ ಆಗಿದ್ದರಿಂದ, ಹೆದರಿಕೆ ಒಂದೆಡೆಯಾಗಿದ್ದರೆ ಇಂಥ ದಿಗ್ಗಜ ನಾಟಕಕಾರರ ನಾಟಕವನ್ನು ಆಯ್ದುಕೊಂಡಿದ್ದಕ್ಕೆ ಉತ್ಸಾಹ ಮೇರೆಮೀರಿತ್ತು. ಕೇವಲ ನೂರು ರುಪಾಯಿ ರಾಯಲ್ಟಿ ನೀಡಿ ಅವರಿಂದ ಅನುಮತಿ ಪಡೆಯಲಾಗಿತ್ತು.

ನಾವೆಲ್ಲ ಸ್ಕ್ರಿಪ್ಟ್ ರೀಡಿಂಗ್ ಶುರು ಮಾಡಿದ ಸಂದರ್ಭದಲ್ಲಿ, ತಮ್ಮ ನಾಟಕದ ಪ್ರಥಮ ಪ್ರಯೋಗವನ್ನು ಸ್ವತಃ ಗಿರೀಶ್ ಕಾರ್ನಾಡ್ ಅವರೇ ನೋಡಲು ಬರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ನಮಗೆಲ್ಲ ಒಂದು ರೀತಿಯ ಢವಢವವೂ ಆರಂಭವಾಗಿತ್ತು. ಆದರೆ, ನಮಗೆಲ್ಲ ನಾಟಕ ಮಾಡಿ ಸಾಕಷ್ಟು ಅನುಭವವಿದ್ದಿದ್ದರಿಂದ ಮತ್ತು ನಮ್ಮಲ್ಲಿಯೇ ವಿಶ್ವಾಸವಿದ್ದಿದ್ದರಿಂದ ಆ ಆರಂಭಿಕ ಹೆದರಿಕೆಯನ್ನು ಮೀರಿ ನಾಟಕ ಪ್ರದರ್ಶಿಸಿದ್ದೆವು. ಕಡೆಗೂ ಗಿರೀಶ್ ಕಾರ್ನಾಡ್ ಅವರು ಬರಲೇ ಇಲ್ಲ.

ಗಿರೀಶ್ ಕಾರ್ನಾಡ್ ನಿಧನ: ಸರ್ಕಾರಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಕಟ್ಟಚ್ಚೂರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ರಾಜ್ಯ ಕಬಳಿಕೆಗಾಗಿ ಮಕ್ಕಳ ಬಡಿದಾಟ, ಅಂತರ್ ಜಾತೀಯ ಮದುವೆಯ ಕ್ರಾಂತಿ ಮೊಳಗಿಸಿದ ಜಗಜ್ಯೋತಿ ಬಸವೇಶ್ವರನ ತೊಳಲಾಟಗಳು ನಾಟಕದಲ್ಲಿ ಪ್ರಭಾವಶಾಲಿಯಾಗಿ ಮೂಡಿಬಂದಿದ್ದವು. 12ನೇ ಶತಮಾನದಲ್ಲಿ ಇದ್ದ ಜಾತಿಯಲ್ಲಿ ರಾಜಕೀಯ, ರಾಜಕೀಯದಲ್ಲಿ ಜಾತಿ, ಪ್ರಜಾಪ್ರಭುತ್ವದ ಕಗ್ಗೊಲೆ, ಜಾತಿ ಜಾತಿ ಸಂಘರ್ಷಗಳನ್ನು ಕಾರ್ನಾಡ್ ಅವರು ಪ್ರಖರವಾಗಿ ಭಾಷೆಯ ಮೂಲಕ ಮತ್ತು ನಾಟಕೀಯ ದೃಶ್ಯಾವಳಿಗಳ ಮೂಲಕ ಹಿಡಿದಿಟ್ಟಿದ್ದಾರೆ. ಈ ನಾಟಕ ಅಂದು, ಇಂದು ಮತ್ತು ಎಂದೆಂದಿಗೂ ಪ್ರಸ್ತುತ.

ಆದರೆ, ಅಪ್ಪಟ ಧಾರವಾಡ ಕನ್ನಡ ಶೈಲಿಯಲ್ಲಿ ಗಿರೀಶ್ ಕಾರ್ನಾಡ್ ಅವರು ಬರೆದಿದ್ದ ಡೈಲಾಗುಗಳು ಬೆಂಗಳೂರಿನ ಗಾಳಿ ನೀರು ಕುಡಿದು ಬೆಳೆದ ಯುವ ನಾಟಕಕಾರರಿಗೆ ಭಾರೀ ಸವಾಲಾಗಿದ್ದವು. ನಮ್ಮ ಪ್ರಥಮ ಪ್ರಯೋಗ ಭಾರೀ ಯಶಸ್ಸು ಪಡೆಯದಿದ್ದರೂ, ಪ್ರಥಮ ಬಾರಿಗೆ ಇಂಥದೊಂದು ತೂಕದ ನಾಟಕವನ್ನು ಆಯ್ದುಕೊಂಡಿದ್ದಕ್ಕೆ ಪ್ರಶಂಸೆಗಳು ಬಂದಿದ್ದವು. ನನಗೆ ಈ ನಾಟಕದಲ್ಲಿ ಜಗದೇವನ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿತ್ತು.

ಗಿರೀಶ್ ಕಾರ್ನಾಡ್ ನಿರ್ದೇಶನದ ಪ್ರಮುಖ ಸಿನಿಮಾಗಳ ಪಟ್ಟಿ

ನಮ್ಮ ಪ್ರಯೋಗ ಮುಗಿಯುತ್ತಿದ್ದಂತೆ ವಾರ್ಷಿಕ ಪರೀಕ್ಷೆಗಳ ನಡುವಿನಲ್ಲಿಯೇ ರಾಷ್ಟ್ರೀಯ ನಾಟಕ ಶಾಲೆಯ ನುರಿತ ಕಲಾವಿದರು ತಲೆದಂಡವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಿಸಿದ್ದರು. ಲಗಾನ್, ಸರ್ಫರೋಶ್ ಮುಂತಾದ ಹಿಂದಿ ಸಿನೆಮಾಗಳಲ್ಲಿ ಮಿಂಚಿದ್ದ ಶ್ರೀವಲ್ಲಭ್ ವ್ಯಾಸ್ ಮುಂತಾದವರ ಅಭಿನಯ ನೋಡುವ ಅವಕಾಶ ನಮಗೆ ಸಿಕ್ಕಿತ್ತು. ಇವರು ನಮಗಿಂತ ಹೇಗೆ ವಿಭಿನ್ನವಾಗಿ ಅಭಿನಯಿಸುತ್ತಾರೆ, ಹೇಗೆ ವಿಶಿಷ್ಟವಾಗಿ ಪ್ರಯೋಗ ಮಾಡುತ್ತಾರೆ ಎಂಬ ಕುತೂಹಲ ನಮಗೆ. ನಾಟಕ ನೋಡಿ, ಅಭಿನಯಿಸಿದವರ ಕೈಕುಲುಕಿ ಮಾಡಿದ್ದ ನೆನಪು ಇನ್ನೂ ಹಸಿರು.

ಅಸಲಿಗೆ ನಮ್ಮ ಪ್ರಯೋಗವೇ ರಾಷ್ಟ್ರೀಯ ನಾಟಕ ಶಾಲೆಯ ಪರಿಣಿತ ಕಲಾವಿದರಿಗಿಂತ ಉತ್ತಮವಾಗಿತ್ತು ಎಂಬುದು ನಮ್ಮೆಲ್ಲರ ಅನಿಸಿಕೆಯಾಗಿತ್ತು. ಹಾಗಂತ, ನಮ್ಮದೇನೂ ಅಮೋಘ ಪ್ರಯೋಗವೂ ಆಗಿರಲಿಲ್ಲ. ಇದಾದ ನಂತರ ಹಲವಾರು ತಂಡಗಳು ಈ ನಾಟಕವನ್ನು ರಂಗಪ್ರಯೋಗ ಮಾಡಿವೆ. ಆದರೆ, ಈ ನಾಟಕ ಅಷ್ಟೊಂದು ಯಶಸ್ಸು ಕಂಡಿದ್ದು ಕಡಿಮೆಯೇ ಎಂದು ಹೇಳಬಹುದು.

ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಜ್ಞಾನ ಸಂಪತ್ತನ್ನು ಅಪಾರವಾಗಿ ಸಂಪಾದಿಸಿದ್ದ ಗಿರೀಶ್ ಕರ್ನಾಡ್ ಅವರ ಸಮಾಜದ ಬಗೆಗಿನ ಧೋರಣೆಗಳು, ಎಡಬಲ ಚಿಂತನೆಗಳು, ರಾಜಕೀಯ ಸಿದ್ಧಾಂತಗಳು ಏನೇ ಇರಲಿ, ನಾಟಕ ವಿಷಯದ ಆಯ್ಕೆ, ರಚನೆ, ಭಾಷಾ ಪ್ರಯೋಗದ ವಿಷಯದಲ್ಲಿ ಗಿರೀಶ್ ಕರ್ನಾಡ್ ಅವರಿಗೆ ಅವರೇ ಸಮಾನರು. ಅವರ ಹೆಚ್ಚಿನ ನಾಟಕಗಳು ಪುರಾಣ, ಇತಿಹಾಸದ ವಿಷಯವನ್ನೇ ಹೆಚ್ಚಿಗೆ ಹೊಂದಿದ್ದರೆ, 'ಅಂಜು ಮಲ್ಲಿಗೆ' ಪುರಾಣ ಇತಿಹಾಸದಿಂದ ಹೊರಪಡಿಸಿದ ಮೊದಲ ಕೃತಿಯಾಗಿತ್ತು.

81 ವಸಂತಗಳನ್ನು ಕಳೆದಿದ್ದ ಗಿರೀಶ್ ಕರ್ನಾಡ್ ಅವರು ಇಂದು ನಮ್ಮಿಂದ ಮರೆಯಾಗಿದ್ದರೂ, ಅವರ ಕೃತಿಗಳು ಅವರನ್ನು ಎಂದೆಂದಿಗೂ ಜೀವಂತ ಇಟ್ಟಿರುತ್ತವೆ. ಕಾರ್ನಾಡ್ ಅವರ 'ತುಘಲಕ್' ನಾಟಕವನ್ನು ಅಜರಾಮರ ಮಾಡಿದ್ದು ಸಿಆರ್ ಸಿಂಹ ಅವರು. ಇವರಿಬ್ಬರೂ ಇಂದು ಇಲ್ಲದಿದ್ದರೂ 'ತುಘಲಕ್' ಜೀವಂತವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legendary dramatist Girish Karnad will always be alive through his Kannada plays. May his soul rest in peace. Girish Karnad breathed his last on 10th June in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more