• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಬೆಲ್ ಸ್ಟಾರ್ ಅಂಬರೀಶ್ ಸಿನೆಮಾ ಟಿಕೆಟ್ ಗಾಗಿ ಗುದ್ದಾಟ, ಹೊಡೆದಾಟ, ಪರದಾಟ!

|

ಮೂರು ದಶಕಗಳ ಹಿಂದೆ ನಟನೆಯ ಉತ್ತುಂಗದಲ್ಲಿದ್ದಾಗ 'ರೆಬೆಲ್ ಸ್ಟಾರ್' ಅಂಬರೀಶ್ ಸಿನೆಮಾ ಅಂದ್ರೆ ಮೊದಲ ದಿನವೇ ಕೆಲಸಕ್ಕೆ ಗೋಲಿಮಾರೋ, ಶಾಲೆಗೆ ಚಕ್ಕರ್... ಹೆಣ್ಣುಮಕ್ಕಳು ಕೂಡ ಅಡುಗೆ ಅಂದು ಸಲಾಂ ಹೊಡೆದು ಕ್ಯೂನಲ್ಲಿ ಬಂದು ಕೂತಿರುತ್ತಿದ್ದರು.

ಬೆಳಗಿನ ಶೋಗೆ ಟಿಕೆಟ್ ಸಿಗಲ್ಲಾ ಅಂದ್ರೆ ಅದರ ಮುಂದಿನ ಶೋ. ಊಟ ತಿಂಡಿ ಎಲ್ಲ ಬಿಟ್ಟು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಗುದ್ದಾಡಿ ಟಿಕೆಟ್ ಗಿಟ್ಟಿಸಿಕೊಂಡಾಗ ಸಿಗುತ್ತಿದ್ದ ಸಂತೋಷವಿರುತ್ತಿತ್ತಲ್ಲ, ಬಹುಶಃ ಅಂತಹ ಖುಷಿ ಯಾವಾಗಲೂ ಸಿಗುತ್ತಿರಲಿಲ್ಲ. ಒಟ್ಟಿನಲ್ಲಿ ಹೇಗೋ ಟಿಕೆಟ್ ಗಿಟ್ಟಿಸಿ ಸಿನೆಮಾ ನೋಡದೆ ಮನೆಗೆ ಹೋಗುವ ಹಾಗೇ ಇಲ್ಲ.

In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ

ಟಿಕೆಟಿಗಾಗಿ ಗುದ್ದಾಟ ಅಂದ್ರೆ ಅಂತಿಂಥ ಗುದ್ದಾಟ ಅಲ್ಲ. ಕೆಲ ಪಡ್ಡೆಗಳು ಕ್ಯೂವನ್ನೇ ಧಿಕ್ಕರಿಸಿ, ಕಬ್ಬಿಣದ ಕಟಾಂಜನದೊಳಗೆ ನುಗ್ಗಿಕೊಂಡು, ಅಂಗಿ ಹರಿದುಕೊಂಡರೂ, ವಿರೋಧಿಸಲು ಬಂದವರ ಹಲ್ಲು ಮುರಿದು, ಪೊಲೀಸರಿಂದ ಲಾಠಿ ರುಚಿ ತಿಂದರೂ ಸರಿ ಟಿಕೆಟ್ ಗಿಟ್ಟಿಸಿಯೇ ತೀರಬೇಕು.

ಮೃತ್ಯುಂಜಯ ಹೋಮ ಮಾಡಲು ಮುಂದಾಗಿದ್ದ ಅಂಬರೀಷ್ ಗೆ ಮೃತ್ಯು ಕಾಡಿತು

ಅಂಬರೀಶ್ ಚಿತ್ರಗಳ ಹವಾ ಅಂದ್ರೆ ಅದು. ಆ ಕಾಲದಲ್ಲಿ ಬೇರಾವ ನಟರಿಗೂ ಇರದಿದ್ದಂಥ ರಶ್ ಅಂಬರೀಶ್ ಸಿನೆಮಾಗೆ ಇರುತ್ತಿತ್ತು. ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿದ್ದಕ್ಕಿಂತ ಅಂಬಿ ಕಟ್ಟಾ ಅಭಿಮಾನಿಗಳು ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಇನ್ನೂ ಹಲವಾರು ಉತ್ತರ ಕರ್ನಾಟಕದ ನಗರಗಳಲ್ಲಿ ಇದ್ದಾರೆ.

ಉತ್ತರ ಕರ್ನಾಟಕದ ಅಭಿಮಾನಿಗಳಿಗೆ ಅಂಬಿ ಸಿನೆಮಾ ಅಂದ್ರೆ ಬರೀ ಹುಚ್ಚಲ್ಲ ಅದು ಹಬ್ಬ. ಆ ಉನ್ಮಾದ ಪೊಲೀಸರ ಲಾಠಿಗೂ ಬಗ್ಗುತ್ತಿರಲಿಲ್ಲ. ಅಂಥ ಕಟ್ಟಾ ಪುಂಡ ಅಭಿಮಾನಿಗಳಿನ್ನು ನಿಯಂತ್ರಿಸಲು ದಢೂತಿ ದೇಹದ ಹೆಣ್ಣುಮಕ್ಕಳನ್ನು ನಿಯೋಜಿಸುತ್ತಿದ್ದ ನಿದರ್ಶನಗಳೂ ಇವೆ. ಅದು ಅಂಬಿಯ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ.

ರಂಗನಾಯಕಿಯಿಂದ ಬದಲಾದ ಇಮೇಜ್

ರಂಗನಾಯಕಿಯಿಂದ ಬದಲಾದ ಇಮೇಜ್

ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಪಳಗಿದ ನಟ ಅಂಬರೀಶ್ ಅವರ ನಟನೆಯ ಗ್ರಾಫು 'ರಂಗನಾಯಕಿ'ಯಿಂದ ಮೇಲೇರಲು ಆರಂಭಿಸಿತ್ತು. 'ಶುಭ ಮಂಗಳ', 'ಪಡವಾರಹಳ್ಳಿ ಪಾಂಡವರು' ಚಿತ್ರಗಳಲ್ಲಿ ಅಂಬಿ ವಿಭಿನ್ನವಾಗಿ ನಟಿಸಿದ್ದರೂ, 'ರಂಗನಾಯಕಿ'ಯ ನಂತರ ವಿಭಿನ್ನ ಪಾತ್ರಗಳು ಅದರಲ್ಲಿಯೂ ಹೀರೋನನ್ನು ಮೆರೆದಾಡಿಸುವ ಪಾತ್ರಗಳು ಅವರನ್ನು ಅರಸಿಕೊಂಡು ಬರಲು ಆರಂಭಿಸಿದ್ದವು.

ಅಂಬರೀಶ್ ನಿಧನ: ಕುಮಾರಸ್ವಾಮಿ ಎದುರಿಸುತ್ತಿರುವ 2ನೇ ಅತ್ಯಂತ ಕಠಿಣ ಸವಾಲು

ಕುತ್ತೆ ಕನ್ವರ್ ಲಾಲ್ ಬೋಲೋ

ಕುತ್ತೆ ಕನ್ವರ್ ಲಾಲ್ ಬೋಲೋ

ರಾಜೇಂದ್ರ ಸಿಂಗ್ ಬಾಬು ಅವರ ನಟನೆಯ 'ಅಂತ' ಚಿತ್ರದಲ್ಲಿ ಇನ್ಸ್ ಪೆಕ್ಟರ್ ಮತ್ತು ಖಳನ ಡಬಲ್ ರೋಲ್ ಅಂಬರೀಶ್ ಅವರಿಗೆ ಭರ್ಜರಿ ಇಮೇಜ್ ತಂದುಕೊಟ್ಟಿತು. 'ಕುತ್ತೆ ಕನ್ವರ್ ಲಾಲ್ ಬೋಲೋ' ಎಂಬ ಡೈಲಾಗ್ ಎಲ್ಲರ ಬಾಯಲ್ಲಿ ಅಬ್ಬರಿಸಲು ಆರಂಭಿಸಿತ್ತು. ಅಂಬರೀಶ್ ಅಂತಹ ಮಹಾನ್ ನಟ ಅಲ್ಲದಿದ್ದರೂ, ತಮ್ಮ ಇತಿಮಿತಿಯಲ್ಲಿಯೂ ಪಾತ್ರಕ್ಕೆ ನ್ಯಾಯವನ್ನು ನೂರಕ್ಕೆ ನೂರರಷ್ಟು ಒದಗಿಸುವಲ್ಲಿ ಎಂದೂ ಸೋಲುತ್ತಿರಲಿಲ್ಲ. ಎಲ್ಲಕ್ಕಿಂತ ಅವರ ನಟನೆಯ ಶೈಲಿ, ಸ್ಟೈಲು ಭಾರೀ ಮೆಚ್ಚುಗೆ ಗಳಿಸಿತ್ತು.

ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!

ಮನೆಯಲ್ಲಿಯೇ ಅಂಬಿ ಸಿನೆಮಾ ಮರುಪ್ರದರ್ಶನ

ಮನೆಯಲ್ಲಿಯೇ ಅಂಬಿ ಸಿನೆಮಾ ಮರುಪ್ರದರ್ಶನ

ಅಂಬರೀಶ್ ಸಿನೆಮಾ ನೋಡಿಬಂದ ಮೇಲೆ ನೋಡದವರ ಮುಂದೆ ಇಡೀ ಚಿತ್ರದ ಕಥೆಯನ್ನು ರಸವತ್ತಾಗಿ ಇಂಚಿಂಚು ಹೇಳದೆ ಇದ್ದರೆ ಸಮಾಧಾನ ಇರುತ್ತಿರಲಿಲ್ಲ. ಅವರು ವಿಶಿಷ್ಟ ರೀತಿಯಲ್ಲಿ ಅಡ್ಡಡ್ಡವಾಗಿ ಓಡಿಬರುವ ನಟನೆಯನ್ನು ತೋರಿಸುತ್ತ, ಕೇಡಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಸನ್ನಿವೇಶ ಬಣ್ಣಿಸುತ್ತ, ಬಣ್ಣಬಣ್ಣದ ಚಿತ್ರಗಳ ಟೈಟಲ್ ಕಾರ್ಡ್ ತೋರಿಸುವುದರಿಂದ ಹಿಡಿದು ಕ್ಲೈಮ್ಯಾಕ್ಸ್ ಮುಗಿದು ಶುಭಂ ಎಂದು ಹೇಳುವವರೆಗೆ ಎರಡೂವರೆ ಗಂಟೆಯ ಸಿನೆಮಾ ಮನೆಯಲ್ಲಿಯೇ ಮರುಪ್ರದರ್ಶನ ಆಗಿರುತ್ತಿತ್ತು.

ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?

ಇಮೇಜಿಗೆ ಜೋತು ಬಿದ್ದವರಲ್ಲ ಅಂಬಿ

ಇಮೇಜಿಗೆ ಜೋತು ಬಿದ್ದವರಲ್ಲ ಅಂಬಿ

ಅಂಬರೀಶ್ ಅವರ ಚಿತ್ರಗಳು ದುಃಖಾಂತ್ಯವಾಗಿದ್ದು ಕಡಿಮೆಯೆ. ಅವರ ಚಿತ್ರಗಳೆಂದರೆ ಅಪ್ಪಟ ಮನರಂಜನೆ. ಅಜಿತ್, ಚಕ್ರವ್ಯೂಹ, ಹಾಂಗ್ ಕಾಂಗ್ ನಲ್ಲಿ ಏಜೆಂಟ್ ಅಮರ್, ಸ್ನೇಹಿತರ ಸವಾಲ್, ಕಿಲಾಡಿ ಜೋಡಿ, ಮಹಾ ಪ್ರಚಂಡರು, ಮಿಸ್ಟರ್ ರಾಜಾ, ಬೇಡಿ... ಸಾಲು ಸಾಲು ಚಿತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸಿ ತೋಯಿಸಿದವರು ಅಂಬರೀಶ್. ಇಂಥದೇ ಪಾತ್ರ ಬೇಕು, ಇಂಥದೇ ಇಮೇಜ್ ಇರಬೇಕು ಎಂದು ಕೂತವರಲ್ಲ ಅಂಬಿ. ಇನ್ಸ್ ಪೆಕ್ಟರ್ ಪಾತ್ರದಲ್ಲಿ ಅವರು ಮಿಂಚಿದ ಮೇಲೆ ಅಂಥ ಪಾತ್ರಗಳೇ ಆರಿಸಿ ಬಂದರೂ ಅವಕ್ಕೂ ನ್ಯಾಯ ಸಲ್ಲಿಸಿದ ಸರಳಾತಿಸರಳ ನಟ ಅಂಬರೀಶ್. ಬೊಂಬೆ ಆಡಿಸುವವನ ಪಾತ್ರವನ್ನೂ ಮಾಡಿದರು, ಮಸಣ ಕಾಯುವವನ ಪಾತ್ರವನ್ನೂ ಮಾಡಿದರು. ಕೇಡಿಯ ಪಾತ್ರವನ್ನೂ ಮಾಡಿದರು, ರಾಜನ ಪಾತ್ರವನ್ನೂ ಅಷ್ಟೇ ಲೀಲಾಜಾಲವಾಗಿ ಅಭಿನಯಿಸಿದರು.

ರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರ

ವ್ಯಕ್ತಿತ್ವದ ತೂಕವೇ ಬೇರೆಯದು

ವ್ಯಕ್ತಿತ್ವದ ತೂಕವೇ ಬೇರೆಯದು

ಎಲ್ಲೂ ಚಿತ್ರಗಳೂ ಸೂಪರ್ ಡೂಪರ್ ಹಿಟ್ ಆಗದಿದ್ದರೂ ಅಂಬರೀಶ್ ಚಿತ್ರಗಳೆಂದರೆ ಮಿನಿಮಮ್ ಗ್ಯಾರಂಟಿ. ಅವರ ಚಿತ್ರ ನಿರ್ಮಿಸಿದ ನಿರ್ಮಾಪಕರು ಸೋತಿದ್ದು ಕಡಿಮೆ. ಹಾಗಿತ್ತು ಅಂಬರೀಶ್ ಅವರ ಹವಾ. ಆದರೆ, ತಮ್ಮ ಹವಾ ಹೇಗಿದೆಯೆಂದು ಅಂಬರೀಶ್ ಅವರು ಎಂದೂ ಬಾಯಿಬಿಟ್ಟು ಹೇಳುತ್ತಿರಲಿಲ್ಲ. ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವರ ನಟನೆಯದ್ದು ಒಂದು ತೂಕವಾದರೆ, ಅವರ ವ್ಯಕ್ತಿತ್ವದ ತೂಕವೇ ಬೇರೆಯದು. ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗಿದ್ದೇ ಈ ಗುಣದಿಂದಾಗಿ. ಇಂದು ಅಭಿಮಾನಿಗಳ ಕಣ್ಣೀರು ಕೋಡಿಯಾಗಿ ಹರಿಯುತ್ತಿಲ್ಲ, ಕಾವೇರಿ ನದಿಯಾಗಿ ಉಕ್ಕುತ್ತಿದೆ.

ಇಂದಾದರೂ ಮಳೆ ಹಚ್ಚೆ ಹೊಡೆಯಬಾರದಾ?

ಇಂದಾದರೂ ಮಳೆ ಹಚ್ಚೆ ಹೊಡೆಯಬಾರದಾ?

ನೋವನ್ನು ಮಾತ್ರವಲ್ಲ ಸಾವನ್ನು ಕೂಡ ದೂರ ತಳ್ಳುತ್ತಲೇ ಬಂದವರು ಅಂಬರೀಶ್. ಒಂದು ಬಾರಿ ಯಮನ ಹಿಡಿತದಿಂದ ತಪ್ಪಿಸಿಕೊಂಡು, ಸಿಂಗಪುರಕ್ಕೆ ಹೋಗಿ ಗುಣವಾಗಿ ಬಂದಿದ್ದರು. ಇಂಜೆಕ್ಷನ್ ಚುಚ್ಚಿಸಿಕೊಳ್ಳಲು ಕೂಡ ಹೆದರುತ್ತಿದ್ದ ಅವರು ಆಸ್ಪತ್ರೆಗಳಿಗೆ ತಾವಾಗಿಯೇ ಎಡತಾಕಿದವರೇ ಅಲ್ಲ. ಆದರೆ, ಕಡೆಕಡೆಯ ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ಕಳೆದದ್ದೇ ಹೆಚ್ಚು. ಕಲಿಯುಗದ ಕರ್ಣ ಅಂತಲೇ ಎಲ್ಲರಿಂದ ಕರೆಯಿಸಿಕೊಳ್ಳುತ್ತಿದ್ದ ಅಂಬರೀಶ್, ರಾಜಕೀಯದಲ್ಲಿ ಎಷ್ಟೇ ಏರುಪೇರು ಕಂಡರೂ ಬಡವರ ಪಾಲಿನ 'ದೇವರು', ಅಭಿಮಾನಿ 'ದೇವರು'ಗಳ ಪಾಲಿನ ಆರಾಧ್ಯ ದೈವ ಕೂಡ ಆಗಿದ್ದರು. ಇವತ್ತೊಂದು ದಿನವಾದರೂ ಆಕಾಶವೇ ಕಳಚಿ ಬೀಳುವ ಹಾಗೆ ಮಳೆ ಹಚ್ಚಿ ಹೊಡೆಯಬಾರದಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is very difficult to believe that Kannada actor Ambareesh is no more. He has huge fan following not only in Bengaluru, Mysuru, Mandya, but also in Hubballi, Dharwad, Belagavi and many more North Karnataka cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more