• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧರ್ಮ, ಮಾರ್ಕ್ಸ್‌ವಾದ ಮತ್ತು ಕೊಳಚೇನಾಯಿ ಎಂಬ ಚಲನಚಿತ್ರ

By Staff
|

ಭಾರತದಲ್ಲಿ ಬೇಕಾದಷ್ಟು ಬಡತನ ಇದೆ, ಶ್ರೀಮಂತರಿಗೂ ಬಡವರಿಗೂ ನಡುವೆ ಸಾಕಷ್ಟು ದೊಡ್ಡ ಕಂದಕವಿದೆ. ಆದರೆ, ಭಾರತದಲ್ಲಿ ಸಾಕಷ್ಟು ಶ್ರೀಮಂತಿಕೆಯೂ ಇದೆ. ಕೇವಲ ಎಣಿಸುವ ನೋಟಿನ ಶ್ರೀಮಂತಿಕೆಯಷ್ಟೇ ಅಲ್ಲ, ಭೌತಿಕ, ತಾತ್ವಿಕ, ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ. ಇದು ಪಾಶ್ಚಿಮಾತ್ಯದೇಶಗಳಿಗಿಂತ ಅನೇಕ ಪಟ್ಟು ಹೆಚ್ಚು ಅನ್ನುವುದನ್ನು ಮರೆಯುವಂತಿಲ್ಲ.

(ಇಂಗ್ಲಿಷ್ ಮೂಲ: ಫ್ರಾಂಕ್ವಾ ಗೋತಿಯೇ; ಕನ್ನಡಕ್ಕೆ ಭಾಷಾಂತರ: ಡಾ|| ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್)

ಭಾರತದ ಬಗ್ಗೆ ಅತ್ಯಂತ ಋಣಾತ್ಮಕ ಭಾವನೆಗಳನ್ನು ಹರಡುವ ಚಲನಚಿತ್ರ ಕೊಳಚೆನಾಯಿ ಕೋಟೀಶ್ವರ (ಸ್ಲಂಡಾಗ್ ಮಿಲಿಯನೇರ್)' ಆಸ್ಕರ್ ಪಡೆಯುವ ಮುನ್ನ ಮತ್ತು ಪಡೆದ ನಂತರ ಪಾಶ್ಚಿಮಾತ್ಯ ದೇಶಗಳಲ್ಲಿ ಏಕಿಷ್ಟು ಸುದ್ದಿ ಮಾಡಿದೆ? ಈ ಚಿತ್ರದ ವಸ್ತುವಾದರೂ ಏನು? ಕೊಳಚೆ ಪ್ರದೇಶ, ಸುಲಿಗೆ, ಬಡತನ, ಲಂಚಕೋರತನ, ಅಲ್ಪಸಂಖ್ಯಾತರ ವಿರುದ್ಧ ಕ್ರೌರ್ಯ. ವಸ್ತುಸ್ಥಿತಿಯನ್ನು ಕೆಟ್ಟ ಉದ್ದಿಶ್ಯದಿಂದ ಬೇಕೆಂತಲೇ ತಿರುಚಿ ಅಪಪ್ರಚಾರ ಮಾಡಿದ್ದಕ್ಕೆ ಭಾರತ ಸರ್ಕಾರ ಏಕೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ? ಚೈನಾ ದೇಶದ ಸರ್ಕಾರ ಇದೇ ಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದ್ದರೆ, ಅದು ಸುಮ್ಮನಿರುತ್ತಿತ್ತೆ? ಈ ಪ್ರಶ್ನೆಗೆ ಹಲವು ಉತ್ತರಗಳಿವೆ: ಕ್ರೈಸ್ತಮತ ಪ್ರಚಾರಕರು ಭಾರತದಲ್ಲಿ ಕಾಲಿಟ್ಟ ಕೂಡಲೇ ಅವರಿಗೆ ಅರಿವಾದದ್ದೇನೆಂದರೆ, ಹಿಂದೂ ಧರ್ಮ ಕೇವಲ ಬಹುಸಂಖ್ಯಾತರ ಧರ್ಮವಷ್ಟೇ ಅಲ್ಲ, ಹಿಂದೂ ಸಂಸ್ಕೃತಿಯ ಬೇರು ಭಾರತೀಯರಲ್ಲಿ ಆಳವಾಗಿ ಬೆಳೆದಿದೆ, ಆ ಬೇರುಗಳನ್ನು ಕಿತ್ತುಹಾಕದೇ ಭಾರತವೆಂಬ ಉಪಖಂಡದ ಜನರನ್ನು ಗುಲಾಮರನ್ನಾಗಿಸಿಕೊಳ್ಳುವುದು ಅಸಾಧ್ಯ' ಎಂದು ಆ ಕ್ರೈಸ್ತ ಮತಪ್ರಚಾರಕರಿಗೆ ಮನದಟ್ಟಾಯಿತು.

ಹಿಂದೂ ಧರ್ಮದ ಬೇರಿನ ಶಕ್ತಿಯನ್ನು ಮನಗಂಡ ಕ್ರೈಸ್ತ ಪಾದ್ರಿಗಳು ಅದನ್ನು ನಾಶಮಾಡಲು ಒಂದು ಸುಲಭೋಪಾಯವನ್ನು ಹುಡುಕಿದರು. ಅದೇನೆಂದರೆ, ತಮ್ಮ ದೃಷ್ಟಿಯಲ್ಲಿ ಅವರಿಗೆ ಕಂಡುಬಂದ ಹಿಂದೂ ಧರ್ಮದ ನ್ಯೂನತೆಗಳನ್ನು ನೂರ್ಪಟ್ಟು ಉತ್ಪ್ರೇಕ್ಷಿಸಿದರು. ಜಾತಿ ಪದ್ಧತಿ, ಶಿಶು-ವಿವಾಹ, ಮೂಡನಂಬಿಕೆಗಳು, ವಿಧವೆಗಳ ದುರ್ಗತಿ, ಸತೀ ಪದ್ಧತಿ, ಹೀಗೆ ಪಟ್ಟಿ ಮಾಡುತ್ತಾ ಹೋದರು. ಅಂದು ಅವರು ಅರ್ಧಸತ್ಯ ಕಾಲುಸತ್ಯಗಳ ಆಧಾರದ ಮೇಲೆ ಬಿತ್ತನೆ ಮಾಡಿದ ಕೆಟ್ಟ ಅಭಿಪ್ರಾಯಗಳು, ಪಾಶ್ಚಿಮಾತ್ಯರ ಮನಸ್ಸಿನಲ್ಲಿ ಇಂದಿಗೂ ಮನೆಮಾಡಿಕೊಂಡಿರುವುದೇ ಅಲ್ಲದೇ, ದುರ್ದೈವವಶಾತ್, ಭಾರತೀಯ ಬುದ್ಧಿಜೀವಿಗಳ ತಲೆಯನ್ನೂ ಮಡಿಮಾಡಿಬಿಟ್ಟಿದೆ.

ಪಾಶ್ಚಿಮಾತ್ಯರಾದ ನಾವುಗಳಾದರೋ, ಮೂರನೇ ವಿಶ್ವದ ಬಗ್ಗೆ, ಅದರಲ್ಲೂ ಭಾರತದ ಬಗ್ಗೆ ಮೇಲರಿಮೆಯಿಂದ ಕೂಡಿದವರಾಗಿದ್ದೇವೆ. ಸಂಜೆ ಊಟಮಾಡುತ್ತಾ ಪುಷ್ಕಳವಾಗಿ ತಿನ್ನುತ್ತಾ ದೂರದರ್ಶನಗಳಲ್ಲಿ ಇತರ ಬಡ ದೇಶಗಳ ದಾರುಣ ಚಿತ್ರಗಳನ್ನು ನೋಡಿ ಕನಿಕರ ತೋರಿಸುವುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಿದ್ದೇವೆ. ಇತರರನ್ನು ಕಂಡು ಅಯ್ಯೋ ಅನ್ನುವುದೇ ಒಂದು ದೊಡ್ಡ ಸಾಧನೆಯೋ ಅನ್ನುವ ಭ್ರಮೆಯಲ್ಲಿದ್ದೇವೆ. ಈ ಕಾರಣಗಳಿಂದಲೇ, ಡಾಮಿನಿಕ್ ಲಾಪಿಯೇ ಬರೆದ, ಭಾರತವೇ ಒಂದು ದೊಡ್ಡ ಕೊಳಚೆ ಪ್ರದೇಶವೆಂಬ ಭ್ರಮೆ ತರಿಸುವ ದಿ ಸಿಟಿ ಆಫ್ ಜಾಯ್' ತರಹದ ಪುಸ್ತಕಗಳು, ಕೊಳಚೆ-ನಾಯಿ-ಕೋಟೀಶ್ವರ'ದಂತಹ ಚಲನ ಚಿತ್ರಗಳು ನಮ್ಮನ್ನು ಆಕರ್ಷಿಸುತ್ತವೆ, ನಮ್ಮ ಮೇಲೆ ಇನ್ನಿಲ್ಲದ ಪ್ರಭಾವ ಬೀರುತ್ತವೆ.

ಈ ಚಿತ್ರದಲ್ಲಿ ಭಾರತದ ಶತ್ರುಗಳು ಕೈಜೋಡಿಸಿದ್ದಾರೆ. ಇಂತಹ ಚಿತ್ರಗಳ ಕಾರಣದಿಂದಾಗಿ, ಇಂದು ಅನೇಕ ಏನೂ ಅರಿಯದ ಪಾಶ್ಚಿಮಾತ್ಯರು ಧಾರಾಳವಾಗಿ ಕೊಡುವ ದಾನದ ಹಣವನ್ನು ಬಳಸಿ ಭಾರತದಂತಹ ದೇಶಗಳ ಬಡ ಜನರನ್ನು, ಅವರಿಗೆ ಸಾಲ, ಶಾಲೆ, ಆಸ್ಪತ್ರೆಗಳ ಆಮಿಷ ತೋರಿಸಿ ಕ್ರೈಸ್ತಮತಕ್ಕೆ ಮತಾಂತರಗೊಳಿಸಲಾಗುತ್ತಿದೆ. ಸುನಾಮಿ ನಂತರದ ಇಂದಿನ ತಮಿಳುನಾಡಿನ ತೀರಪ್ರದೇಶವನ್ನು ನೋಡಿ ಬನ್ನಿ, ಅರ್ಧಕಿಲೋಮೀಟರ್ರಿಗೆ ಒಂದರಂತೆ ಹೊಸದೊಂದು ಇಗರ್ಜಿ ಎದ್ದಿದೆ! ಹೀಗೆ ಮತಾಂತರಗೊಂಡ ಹೊಸ ಕ್ರೈಸ್ತರಿಗೆ "ದೇವಸ್ಥಾನವನ್ನು ಪ್ರವೇಶಿಸುವುದು, ಪೂಜೆಮಾಡುವುದು, ಹಣೆಗೆ ತಿಲಕವಿಡುವುದು, ಇವೆಲ್ಲಾ ಪಾಪಕಾರ್ಯಗಳು" ಎಂಬ ಬೋಧನೆಮಾಡಲಾಗುತ್ತದೆ. ಹೀಗೆ ಮಾಡುವುದರ ಉದ್ದೇಶ, ಭಾರತೀಯ ಸಾಂಸ್ಕೃತಿಕ ಸಮತೋಲನವನ್ನು ಹಾಳುಮಾಡುವುದೇ ಆಗಿದೆ. ಬ್ರಿಟಿಷ್ ವೃತ್ತಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಕೊಳಚೆ-ನಾಯಿ' ಚಿತ್ರದ ನಿರ್ದೇಶಕ ಡ್ಯಾನಿ ಬಾಯಿಲ್ ಒಪ್ಪಿಕೊಂಡಿರುವ ವಿಷಯವೇನೆಂದರೆ, ಆತ ಚಿಕ್ಕವನಿದ್ದಾಗ ತಾನೂ ಒಬ್ಬ ಕ್ರೈಸ್ತ ಮತ ಪ್ರಚಾರಕನಾಗಬೇಕೆಂಬ ಆಶೆವುಳ್ಳವನಾಗಿದ್ದನಂತೆ. ಅಷ್ಟೇ ಅಲ್ಲ, ಈಗಲೂ ಆತ ಕ್ರೈಸ್ತ ಪಾದ್ರಿಗಳ ಆದರ್ಶದಿಂದಲೇ ತನ್ನ ಬಾಳಿಗೆ ಮಾರ್ಗದರ್ಶನ ಪಡೆದುಕೊಳ್ಳುತ್ತಾನಂತೆ. ಈತ ಇನ್ನೆಷ್ಟು ನಿಷ್ಪಕ್ಷಪಾತಿ ಇರಬಹುದು?

ಇನ್ನು, ಮೂಲಭೂತವಾದೀ ಮುಸಲ್ಮಾನರ ಆಕ್ರಮಣ ಭಾರತದಮೇಲೆ ತಪ್ಪಿದ್ದೇ ಇಲ್ಲ, ಇತ್ತೀಚಿನ ನವೆಂಬರ್ 26ರ ಘಟನೆಯನ್ನು ಮರೆಯಲು ಸಾಧ್ಯವೇ? ಹಿಂದೆ, ಒಂದೇ ಆಕ್ರಮಣದಲ್ಲಿ ಲಕ್ಷಾಂತರ ಹಿಂದುಗಳನ್ನು ಕೊಂದ ತೈಮೂರನ ನೆನಪಾಗುವುದಿಲ್ಲವೇ? ಕ್ರೈಸ್ತರು, ಮುಸಲ್ಮಾನರ ಜೊತೆಗೆ, ಕಮ್ಯೂನಿಸ್ಟರ ಪಾತ್ರ ಕಮ್ಮಿಯೇನಿಲ್ಲ. ಇವಿಷ್ಟೇ ಸಾಲದೋ ಎಂಬಂತೆ, ಪಶ್ಚಿಮದಲ್ಲೇ ಸಫಲವಾಗಿರದ, ಮೇಲ್ನೋಟಕ್ಕೆ ಫಳಫಲಿಸುವ ಅಮೆರಿಕೀಕರಣ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಮೇಲೆ ಹಲ್ಲೆಮಾಡಿದೆ. ಈ ಹಿನ್ನೆಲೆಯ ಲಾಭವನ್ನು ಬಹುಬುದ್ಧಿವಂತಿಕೆಯಿಂದ ಪಡೆಯುತ್ತದೆ, ಸ್ಲಮ್ ಡಾಗ್' ಎಂಬ ಚಿತ್ರ.

ಭಾರತವನ್ನು ಅಧ್ಯಯನ ಮಾಡುವ ಅನೇಕ ಪಾಶ್ಚಿಮಾತ್ಯ ತಜ್ಞ'ರು ಹಿಂದೂ ವಿರೋಧಿಗಳು. ಇದಕ್ಕೆ ಕಾರಣಗಳು ಎರಡು ; ಅವರೆಲ್ಲ ಕ್ರೈಸ್ತಮತಾವಲಂಬಿಗಳು, ಹಾಗೂ ಅವರಲ್ಲನೇಕರು ಮ್ಯಾಕ್ಸ್ ಮುಲ್ಲರನ ಶಿಷ್ಯಕೋಟಿಗೆ ಸೇರಿದವರು. ಅಂಥಾ ಉದ್ದಾಮ ಸಂಸ್ಕೃತ ವಿದ್ವಾಂಸನೆನಿಸಿಕೊಂಡಿದ್ದ ಮ್ಯಾಕ್ಸ್ ಮುಲ್ಲರ್ ಹೇಳಿದ್ದ ಮಾತುಗಳನ್ನು ಇಲ್ಲಿ ನೆನೆಸಿಕೊಳ್ಳಬಹುದು ; " ವೇದಗಳಲ್ಲಿ ಬಾಲಿಶವೂ, ದಡ್ಡತನದಿಂದಕೂಡಿದವೂ, ಪೈಶಾಚಿಕವೂ ಆದ ಪರಿಕಲ್ಪನೆಗಳೇ ತುಂಬಿಕೊಂಡಿವೆ. ವೇದದ ವಸ್ತು ಸುಲಭಗ್ರಾಹ್ಯವಲ್ಲದ್ದು, ಕೀಳುಮಟ್ಟದ್ದು, ತೀರಾ ಸಾಧಾರಣವಾದದ್ದು. ಮಾನವ ಪ್ರಕೃತಿಯ ಕೆಳಮಟ್ಟದ ಮತ್ತು ಲೌಕಿಕದ ಸ್ವಾರ್ಥಚಿಂತನೆಯನ್ನೇ ವೇದಗಳು ಪ್ರತಿನಿಧಿಸುತ್ತವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅಲೌಕಿಕವಾದ ಆಧ್ಯಾತ್ಮಿಕ ಚಿಂತನೆಗಳು ವೇದಗಳಲ್ಲಿ ಕಾಣಿಸಿಕೊಳ್ಳುತ್ತವೆ." ಈ ಮಹಾಶಯನು ಹಾಕಿಕೊಟ್ಟ ದಾರಿಯನ್ನು ಅಮೇರಿಕದ ವಿಟ್ಸೆಲ್, ವೆಂಡಿ ಡಾನಿಗರ್ ಮುಂತಾದ ಭಾರತೀಯಶಾಸ್ತ್ರಜ್ಞರು, ಮತ್ತು ಫ್ರಾನ್ಸ್ ದೇಶದಲ್ಲಿರುವ ಹಲವು (ಸರ್ಕಾರದಿಂದ ಧನಸಹಾಯಪಡೆದುಕೊಂಡು ಬದುಕಿರುವ) ತಜ್ಞರೂ ಅನುಸರಿಸುತ್ತ ಬಂದಿದ್ದಾರೆ. ಅವರ ಅತಿಪ್ರಿಯ ವಿಚಾರವೆಂದರೆ, ಜಾತಿಪದ್ಧತಿ, ಬಡತನ, ಕೊಳಚೆ ಪ್ರದೇಶ. ಇವರ ಮಾದರಿಯನ್ನು ಪ್ರಶ್ನಿಸಿದವರನ್ನು ಅವರು ಹಿಂದೂ ಮೂಲಭೂತವಾದಿಗಳೆಂದು ಕರೆದು ಬಾಯ್ಮುಚ್ಚಿಸಲು ಯತ್ನಿಸುತ್ತಾರೆ. ಇವರ ಸುಳ್ಳಿನ ಮುಂದೆ ಮತ್ತೊಂದು ಸುಳ್ಳಿಲ್ಲ.

ಸತ್ಯವೇನೆಂದು ಬಲ್ಲಿರಾ? ಭಾರತದ ಬಹುಸಂಖ್ಯಾತರಾದ ಹಿಂದುಗಳು ವಿಶಾಲ ಮನಸ್ಸಿನವರು. ಅವರು, ಇತರದೇಶಗಳಲ್ಲಿ ಹಿಂಸೆಗೊಳಗಾಗಿ ತಮ್ಮ ನಾಡನ್ನು ಬಿಟ್ಟು ಹೋಗಬೇಕಾಗಿಬಂದ ಜನರನ್ನು ತಲೆತಲಾಂತರದಿಂದ ಸ್ವಾಗತಿಸುತ್ತಲೇ ಬಂದಿದ್ದಾರೆ. ಸಿರಿಯಾದ ಕ್ರೈಸ್ತರು, ಪಾರ್ಸೀಗಳು, ಆರ್ಮೇನಿಯನ್ನರು, ಯೆಹೂದಿಗಳು, ಇತ್ತೀಚೆಗೆ ಟಿಬೆಟ್ಟಿನವರು, ಇವರನ್ನೆಲ್ಲಾ ತಮ್ಮ ನಾಡಿನಲ್ಲಿ ನೆಲೆಸಲು ಬಿಟ್ಟಿದ್ದಷ್ಟೇ ಅಲ್ಲ, ಅವರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಆದರೆ, ಒಂದು ಮಾತು ನಿಜ, ಶತಮಾನಗಳ ಕಾಲ ಪರಕೀಯರ ದಾಸ್ಯಕ್ಕೊಳಗಾದ ಭಾರತೀಯರಿಗೆ ರಾಷ್ಟ್ರೀಯತೆ ಏನೆಂದು ಗೊತ್ತಿಲ್ಲ. (ಇಲ್ಲೇ ಚೀನೀಯರಿಗೂ ಭಾರತೀಯರಿಗೂ ಇರುವ ಮುಖ್ಯ ವ್ಯತ್ಯಾಸ.) ಇಂದು, ಭಾರತದ ಬುದ್ಢಿಜೀವಿಗಳು ತಮ್ಮ ಸಂಸ್ಕೃತಿಯ ಬೇರನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ಪ್ರತಿ ಸಮಸ್ಯೆಯ ಪರಿಹಾರಕ್ಕೂ ಪಶ್ಚಿಮದ ಕಡೆ ನೋಡುತ್ತಾರೆ. ತಮ್ಮ ಪೂರ್ವಜರು ಕೊಟ್ಟ ತಾತ್ವಿಕ ನೆಲೆಯಲ್ಲಿ ಅಡಗಿರುವ ಅನಂತಜ್ಞಾನವನ್ನು ಕೈಬಿಟ್ಟಿದ್ದಾರೆ. ಅವರು ಈಗ ತಮ್ಮದೇ ಆದ ಪ್ರಾಣಾಯಾಮ, ಯೋಗ, ಧ್ಯಾನ ಮುಂತಾದ ಅಪರಿಮಿತ ಸಂಪತ್ತನ್ನೂ ಮರೆತಿದ್ದಾರೆ.

ಇಂಥಾ ಹಿನ್ನೆಲೆ, ಸ್ಲಂ ಡಾಗ್'ನಂಥ ಚಲನಚಿತ್ರಗಳಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸುತ್ತದೆ. ಈ ಚಿತ್ರ ಮೊಟ್ಟ ಮೊದಲ ದೃಶ್ಯದಿಂದಲೇ ಭಾರತದ ಮೈಮೇಲೆ ಹೇಸಿಗೆ ಮಾಡಲು ತೊಡಗುತ್ತದೆ. ಅದರಲ್ಲಿರುವ ಕೆಲ ದೃಶ್ಯಗಳಂತೂ ಡ್ಯಾನೀ ಬಾಯಿಲ್ ನಂತಹ ತಲೆತಿರುಕರ ಊಹೆಯಲ್ಲಿ ಮಾತ್ರ ಇರಲು ಸಾದ್ಯ, ಏಕೆಂದರೆ, ಅವು ವಿವೇಕ ಸ್ವರೂಪರು ಬರೆದ ಪುಸ್ತಕದಲ್ಲಿಲ್ಲ. ಪುಸ್ತಕದ ನಾಯಕ ಮುಸಲ್ಮಾನನಲ್ಲ. ಅವನು ಯಾವ ಧರ್ಮಕ್ಕೂ ಸೇರಿದವನಲ್ಲ, ಅವನ ಹೆಸರು ರಾಮ್ ಮೊಹಮ್ಮದ್ ಥಾಮಸ್. ಅವನ ಬಾಲ್ಯ ಕಳೆಯುವುದು ಮುಂಬೈನಲ್ಲಲ್ಲ, ದೆಹಲಿಯ ಕ್ಯಾಥೋಲಿಕ್ ಅನಾಥಾಲಯವೊಂದರಲ್ಲಿ. ಚಿತ್ರದಲ್ಲಿ ತೋರಿಸಿರುವಂತೆ ಜಮಾಲನ ತಾಯಿ (ಅವನ ಹೆಸರು ಜಮಾಲ್ ಅಲ್ಲ) ಹಿಂದು ಮತಾಂಧರ ಕೈಯಲ್ಲಿ ಸಿಕ್ಕು ಸಾಯುವುದಿಲ್ಲ. ಅವಳಾದರೋ, ಯಾವ ಧರ್ಮಕ್ಕೆ ಸೇರಿದವನೆಂದು ತಿಳಿಯದ ತನ್ನ ಮಗುವನ್ನು ಚರ್ಚೊಂದರಲ್ಲಿ ಬಿಟ್ಟು ಹೋಗುತ್ತಾಳೆ. ಜಮಾಲನನ್ನು ಚಿತ್ರಹಿಂಸೆಗೆ ಗುರಿಮಾಡುವ ಯೋಚನೆ ದೂರದರ್ಶನದ ಸಂಚಾಲಕರದ್ದಲ್ಲ. ದೂರದರ್ಶನದ ವಹಿವಾಟನ್ನು ವಹಿಸಿಕೊಂಡ ರಷ್ಯನ್ನರನ್ನು ಬಗ್ಗುಬಡಿಯಲು ಕೂಟವನ್ನು ಹೂಡಿದ ಒಬ್ಬ ಅಮೇರಿಕನ್ ಈ ಚಿತ್ರಹಿಂಸೆಗೆ ಕಾರಣ. ಮನೆ ಮಠವನ್ನು ತಾಯಿತಂದೆಯರನ್ನೂ ಕಳೆದುಕೊಂಡು ಕಣ್ಣೀರಿಡುತ್ತ ಮಳೆಯಲ್ಲಿ ನೆನೆಯುವ ಮೂರು ಮಕ್ಕಳ ದೃಶ್ಯ ಕೂಡ ಪುಸ್ತಕದಲ್ಲಿಲ್ಲ. ಜಮಾಲ್ ಮತ್ತು ಅವನ ಪ್ರೇಯಸಿ ಮೊದಲಬಾರಿಗೆ ಸಂಧಿಸುವುದು ಅವರು ಹದಿಹರೆಯದವರಾದಮೇಲೆ. ಆಗ ಅವರು ಒಂದು ಅಪಾರ್ಟ್‌ಮೆಂಟಿನಲ್ಲಿರುತ್ತಾರೆ, ಕೊಳಚೆ ಪ್ರದೇಶದ ಗುಡಿಸಿಲಿನಲ್ಲಲ್ಲ.

ಹೌದು, ಭಾರತದಲ್ಲಿ ಬೇಕಾದಷ್ಟು ಬಡತನ ಇದೆ, ಶ್ರೀಮಂತರಿಗೂ ಬಡವರಿಗೂ ನಡುವೆ ಸಾಕಷ್ಟು ದೊಡ್ಡ ಕಂದಕವಿದೆ. ಆದರೆ, ಭಾರತದಲ್ಲಿ ಸಾಕಷ್ಟು ಶ್ರೀಮಂತಿಕೆಯೂ ಇದೆ. ಕೇವಲ ಎಣಿಸುವ ನೋಟಿನ ಶ್ರೀಮಂತಿಕೆಯಷ್ಟೇ ಅಲ್ಲ, ಭೌತಿಕ, ತಾತ್ವಿಕ, ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ. ಇದು ಪಾಶ್ಚಿಮಾತ್ಯದೇಶಗಳಿಗಿಂತ ಅನೇಕ ಪಟ್ಟು ಹೆಚ್ಚು ಅನ್ನುವುದನ್ನು ಮರೆಯುವಂತಿಲ್ಲ. ಪಾಶ್ಚಿಮಾತ್ಯರು ಭಾರತದತ್ತ ನೋಡುವಾಗ ಕಾಮಾಲೆಕಣ್ಣಿನಿಂದ ನೋಡುವ ಕೆಟ್ಟ ಚಾಳಿಯನ್ನು ಯಾವಾಗ ಬಿಡುತ್ತಾರೋ ಕಾಣೆ. ಇದೇ ಶತಮಾನದಲ್ಲಿ ಭಾರತ, ಚೈನಾ ದೇಶವನ್ನು ಹಿಂದೆಹಾಕಿ ಮುಂದೋಡುವುದರಲ್ಲಿ ಅನುಮಾನವೇ ಇಲ್ಲ. ಕಾಮಾಲೆ ದೃಷ್ಟಿ ಪರಿಹಾರವಾಗಲು ಒಂದು ಹೊಸ ದೃಷ್ಟಿಕೋನದ, ಹೊಸ ಪೀಳಿಗೆಯ ಭಾರತೀಯಶಾಸ್ತ್ರಜ್ಞರ ಅಗತ್ಯವಿದೆ. ಇಂಥ ತಜ್ಞರು ನಿಸ್ಪೃಹರೂ, ಓಬೀರಾಯನಕಾಲದ ಕ್ರೈಸ್ತಚಿಂತನೆಯ ಕೇಂದ್ರವನ್ನು ತೊರೆದವರೂ ಆಗಿರಬೇಕು. ಅದಕ್ಕಿಂತ ಮುಖ್ಯವಾಗಿ, ಭಾರತೀಯರು ಪಶ್ಚಿಮದ ಬಗ್ಗೆ ಇರುವ ದಾಸ್ಯಮನೋಭಾವವನ್ನು ತೊರೆದು ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯುಳ್ಳವರಾದಾಗಲೇ ಈ ಸಮಸ್ಯೆಗೆ ಪರಿಹಾರ.

ಟಿಪ್ಪಣಿ : ಈ ಲೇಖನದಲ್ಲಿ ವ್ಯಕ್ತವಾಗಿರುವ ವಿಚಾರಧಾರೆಯನ್ನು ಹಲವರು ಹುರುಪಿನಿಂದ ಒಪ್ಪಿಕೊಳ್ಳಬಹುದು, ಇನ್ನು ಕೆಲವರು ಹಿಂದೆ ಮುಂದೆ ನೋಡದೆ ತಳ್ಳಿಹಾಕಬಹುದು. ವಸ್ತು ವಿವಾದಾಸ್ಪದವಾದದ್ದು ಎಂಬುದು ನಿರ್ವಿವಾದ. ಆ ಕಾರಣದಿಂದ, ಹಲವಾರು ಓದುಗರು ಪ್ರತಿಕ್ರಿಯೆ ವ್ಯಕ್ತಪಡಿಸಲು ಇಚ್ಛಿಸಬಹುದು. ಅಂಥವರು ಗಮನವಿಡಬೇಕಾದ ಮುಖ್ಯ ಅಂಶಗಳು ಏನೆಂದರೆ, (1) ಮೂಲ ಇಂಗ್ಲಿಷ್ ಲೇಖನವನ್ನು ಬರೆದಿರುವಾತ ಭಾರತದ ಬಗ್ಗೆ ಅಭಿಮಾನವುಳ್ಳ ಪಾಶ್ಚಿಮಾತ್ಯ ಬರಹಗಾರ. (2) ಲೇಖನದಲ್ಲಿನ ಅಭಿಪ್ರಾಯಗಳು ಮೂಲ ಲೇಖಕನದ್ದೇ ವಿನಃ ಭಾಷಾಂತರ ಮಾಡಿದವರದ್ದಲ್ಲ. (3) ಅದುವೆಕನ್ನಡದಲ್ಲಿ ಜಾಲತರಂಗದ ಓದುಗರಿಗಾಗಿ ಕನ್ನಡಿಸಿರುವುದಷ್ಟೇ ನನ್ನ ಕೆಲಸ. (4) ಈಗಾಗಲೇ ಸಾಕಷ್ಟು ಚರ್ಚೆಗೆ ಒಳಗಾಗಿರುವ ಸ್ಲಮ್ ಡಾಗ್' ಚಿತ್ರದ ಬಗ್ಗೆ ಬರೆಯುವಾಗ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸಿ ವಿಶ್ಲೇಷಣೆ ಮಾಡಿರುವುದು ಈ ಲೇಖನದ ವೈಶಿಷ್ಟ್ಯ. (5) ಚಲನಚಿತ್ರಕ್ಕೆ ಆಧಾರವಾದ ಮೂಲ ಪುಸ್ತಕವನ್ನು ಓದಿ ಪುಸ್ತಕಕ್ಕೂ ಚಲನಚಿತ್ರಕ್ಕೂ ನಡುವೆ ಇರುವ ವ್ಯತ್ಯಾಸಗಳನ್ನು ಓದುಗರ ಗಮನಕ್ಕೆ ತಂದಿರುವುದು ಮತ್ತೊಂದು ವಿಶೇಷ. (6) ಕಳೆದ ವಾರ (ಮಾರ್ಚ್ 16-18, 2009) ಪ್ರಕಟವಾದ ಇಂಗ್ಲಿಷ್ ಆವೃತ್ತಿ ಒಬ್ಬರಿಂದೊಬ್ಬರಿಗೆ ಸುತ್ತೋಲೆಯಾಗಿ ತಿರುಗಾಡುತ್ತಾ, ಹಲವು ಮಿತ್ರರಿಂದ ನನ್ನ ಗಮನಕ್ಕೆ ಬಂತು. (7) ಸಂದರ್ಭೋಚಿತವಾಗಿದೆಯೆಂಬ ಕಾರಣದಿಂದ ಜಾಲತರಂಗದ ಓದುಗರಿಗೆ ಪ್ರಸ್ತುತ ಪಡಿಸುತ್ತಿದ್ದೇನೆ. (8) ಈ ಚಿತ್ರದ ಬಗ್ಗೆ ನನ್ನ ಅಭಿಪ್ರಾಯಗಳು ಈಗಾಗಲೇ ಜಾಲತರಂಗದಲ್ಲಿ ಪ್ರಕಟವಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more