• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ತ ಕವಿತೆಯ ಸುತ್ತ

By Staff
|

ವಿ-ಅಂಚೆ, ಎಸ್ಎಮ್ಎಸ್ ವೇಗದ ಯುಗದಲ್ಲಿ ಕೈಯಲ್ಲಿ ಪೆನ್ನು ಹಿಡಿದು ಪತ್ರ ಬರೆಯುವ ಪದ್ಧತಿ ಲಾಗ ಹಾಕಿದೆ. ಶಾರ್ಟ್ ಕಟ್ ಪದಗಳಲಿ ಭಾವನೆಗಳನ್ನಂತೂ ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ಭಾವಜೀವಿ ಭಾವನಾ ಬರೆದ 'ಇವತ್ತು ಒಂದು ಕವಿತೆ ಸತ್ತಿತು' ಎಂಬ ಪ್ರತಿಮಾಮಯ ಕವಿತೆಯನ್ನು ಸರಣಿ ವಿ-ಅಂಚೆಯ ಮೂಲಕ ಸ್ನೇಹಿತರೊಡನೆ ವಿನಿಮಯ ಮಾಡಿಕೊಳ್ಳಿ. ಕಾಲ ಎಷ್ಟೇ ಮುಂದುವರಿದಿರಲಿ ಪತ್ರ ಬರೆಯುವ ರೂಢಿಯನ್ನು ಮಾತ್ರ ಬಿಡಬೇಡಿ.

* ಡಾ|| ಮೈ. ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ಹಿಂದೆ, ಒಂದಾನೊಂದು ಕಾಲದಲ್ಲಿ, ಜನ ಒಬ್ಬರಿಗೊಬ್ಬರು ಪತ್ರ ಬರೆಯುತ್ತಿದ್ದರು. ನಾವು ಹುಡುಗರಾಗಿದ್ದಾಗ ಊರಿಗೆ ಹೊರಡುವ ಮುನ್ನ "ತಲುಪಿದ್ದಕ್ಕೆ ಒಂದು ಪೋಸ್ಟ್ ಕಾರ್ಡ್ ಆದರೂ ಬರೆದು ಹಾಕು" ಎಂಬ ಬುದ್ಧಿವಾದದ ಮಾತಿನೊಂದಿಗೆ ಬೀಳ್ಕೊಡುಗೆ ನಡೆಯುತ್ತಿದ್ದುದು ಸಾಮಾನ್ಯ. ಆ ಕಾರ್ಡಿನಲ್ಲೂ ಅಂಥದ್ದೇನೂ ಜಾಗ ಇರುತ್ತಿರಲಿಲ್ಲ. ತಂದೆಯವರಿಗಾದರೆ "ಮೈ ಡಿಯರ್ ಫಾದರ್" ಎಂದು ಇಂಗ್ಲೀಷಿನ ಒಕ್ಕಣೆಯೊಂದಿಗೆ ಶುರು. ತಾಯಿಗಾದರೆ, ಮಾತೋಶ್ರೀಯವರಿಗೆ ಸಾ-ಪೂ-ನ (ಸಾಷ್ಟಾಂಗ-ಪೂರ್ವಕ-ನಮಸ್ಕಾರಗಳು), ಅ.ಈ.ಉ.ಕು.ಸಾಂ." ಎಂಬ ಒಕ್ಕಣೆಯೊಂದಿಗೆ ಶುರು. "ಅದಾಗಿ ಈವರೆಗೆ ಉಭಯ-ಕುಶಲೋಪರಿ-ಸಾಂಪ್ರತ" ಎಂಬುದನ್ನು ಪದಕ್ಕೊಂದೇ ಅಕ್ಷರ ಉಪಯೋಗಿಸಿ ಮೊಟಕು ಗೊಳಿಸಲು ಕಾರಣ, ಕಾರ್ಡಿನಲ್ಲಿದ್ದ ಜಾಗದ ಕೊರತೆಯೇ ಇರಬೇಕು. "ಬಸ್ಸಿನಲ್ಲಿ ಕೂರಲು ಸ್ಥಳ ಸಿಕ್ಕದೇ ಒದ್ದಾಡಿದ್ದು, ಧೂಳು, ಪೆಟ್ರೋಲ್ ಮತ್ತು ಬೀಡಿ-ಸಿಗರೇಟಿನ ವಾಸನೆ ತಡೆಯಲಾರದೇ ಒತ್ತರಿಸಿಕೊಂಡು ಬಂದ ವಾಂತಿ, ದಾರಿಯುದ್ದಕ್ಕೂ ಚಚ್ಚಿದ ಮಳೆ, ಚನ್ನರಾಯಪಟ್ಟಣದ ಬಳಿ ಬಸ್ಸು ಕೆಟ್ಟು ಕೂತದ್ದು, ಮಲ್ಲೇಶ್ವರ ಸೇರುವ ವೇಳೆಗೆ ಸಾಕು ಸಾಕಾಗಿಹೋದದ್ದು," ಇತ್ಯಾದಿ ವಿವರಗಳೊಂದಿಗೆ ತಲುಪಿದ ಸಮಾಚಾರವನ್ನು ಊರಿಗೆ ಮುಟ್ಟಿಸದೇ ಹೋದರೆ "ತಲುಪಿದ್ದಕ್ಕೆ ಒಂದು ಕಾರ್ಡನ್ನಾದರೂ ಬರೆದು ಹಾಕು ಎಂದು ಹೇಳಿದ್ದು ಕಿವಿಗೆ ಬೀಳಲಿಲ್ಲವೇ?" ಎಂಬ ದೂರನ್ನೂ ಅಸಮಾಧಾನವನ್ನೂ ಹೊತ್ತ ಕಾಗದ ಊರಿನಿಂದ ಬರುತ್ತಿತ್ತು. ಅನೇಕ ವಿದ್ಯಾರ್ಥಿ ನಿಲಯಗಳಲ್ಲಾಗಲೀ ಊರಿನ ಮನೆಗಳಲ್ಲಾಗಲೀ ದೂರವಾಣಿಯ ಅನುಕೂಲವಿರಲಿಲ್ಲವಾದ್ದರಿಂದ ಸಂವಹನಕ್ಕೆ ಭಾರತದ ಅಂಚೆ ಇಲಾಖೆಯ ಕಾರ್ಡು ಪರಮ ಸಾಧನವಾಗಿತ್ತು. ಆ ಕಾರ್ಡಿನ ಪ್ರತಿ ಚದುರಂಗುಲವನ್ನೂ ಉಪಯೋಗಿಸಿಕೊಂಡು, ಸಣ್ಣಕ್ಷರದಲ್ಲಿ ಕೊರೆದು, ಅಡ್ಡಡ್ಡಕೆ, ಉದ್ದುದ್ದಕೆ, ವಿಳಾಸ ಬರೆಯುವ ಸ್ಥಳವನ್ನೂ ಅತಿಕ್ರಮಿಸಿ, ಪೈಸೆಗಳ ಸಂಪೂರ್ಣ ಉಪಯೋಗವನ್ನು ನಾವೆಲ್ಲ ಪಡೆಯುತ್ತಿದ್ದೆವು.

ಅದು ಹಳೆಯ ಮಾತಾಯಿತು. ಈಗೆಲ್ಲ, ದಿಢೀರ್ ಸುದ್ದಿಗಳು, ವಿ-ಅಂಚೆ, ಐ. ಎಮ್ ಮುಂತಾಗಿ ಓಡಾಡುತ್ತವೆ. ಅಷ್ಟೇ ಅಲ್ಲ, ಎಲ್ಲರ ಬಳಿಯೂ ಮೊಬೈಲುಗಳು ಇರುವುದರಿಂದ ನೆನಪಾದ ಕೂಡಲೆ, ಮನೋವೇಗದಲ್ಲಿ ಬೇಕಾದವರನ್ನು ಕರೆದು ಮಾತಾಡಿಸಬಹುದು ಅಥವಾ ಸಂದೇಶಗಳನ್ನು ಬಿಡಬಹುದು. ಹದಿಹರೆಯದ ತರುಣ-ತರುಣಿಯರಿಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಈಗ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅವಕಾಶ ಹೇರಳವಾಗಿವೆಯಷ್ಟೆ. ಭಾವನೆ' ಎಂದ ಕೂಡಲೆ ಒಂದು ಮಿಂಚು ಹೊಳೆಯುತ್ತದೆ. ಭಾವನಾ' ಎಂಬ ತರುಣಿಯೊಬ್ಬಳು ಬರೆದ ಕವಿತೆ ಈ ಲೇಖನಕ್ಕೆ ನಾಂದಿಯಾಗುವ ಸಂಗತಿ! ಎಲ್ಲಿಂದೆಲ್ಲಿಗೆ ಹಾರುತ್ತಿರುವಿರಿ ಸ್ವಾಮೀ' ಎನ್ನಬೇಡಿ. ಈ ವೃತ್ತಾಂತ ಶುರುವಾಗುವುದೂ ವಿ-ಅಂಚೆಗಳ ವಿನಿಮಯದೊಂದಿಗೇನೆ. ಕೇಳಿ, ಹೇಳುತ್ತೇನೆ.

ನನ್ನ ಬರಹಗಾರ ಮಿತ್ರ ಶ್ರೀವತ್ಸ ಜೋಶಿಯಿಂದ ಒಂದು ವಿ-ಅಂಚೆ ಬಂತು. ಅದು ಅವರಿಗೆ ಬಂದ ವಿ-ಅಂಚೆ ಮತ್ತು ಇವರು ಅದಕ್ಕೆ ಪ್ರತಿಯಾಗಿ ಬರೆದ ವಿ-ಅಂಚೆಗಳ ಸರಪಳಿ. ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆಯುವ ಆನಂದರಾಮ ಶಾಸ್ತ್ರಿ, ಜೋಶಿ ಅವರಿಗೂ ನಾಗೇಶ್ ಹೆಗ್ಡೆ ಎಂಬ ಮತ್ತೊಬ್ಬ ಪತ್ರಕರ್ತರಿಗೂ ಕಳುಹಿದ ವಿ-ಅಂಚೆಯಲ್ಲಿ ಒಂದು ಕಿರುಪದ್ಯ ಹೀಗಿತ್ತು:

ಚರಮಗೀತೆ

ಬೆಂಗಳೂರು ಹಬ್ಬದ

ಕ್ಯಾನ್ಸಲ್ ಆದ

ಕವಿಗೋಷ್ಠಿಯಲ್ಲಿ

ಸಭಾಸದರು ಕೇವಲ

ನಾಲ್ವರು ಇದ್ದರಂತೆ,

ಯಾಕೆ?

ಕಾವ್ಯವನ್ನು ಹೊತ್ತುಕೊಂಡುಹೋಗಲಿಕ್ಕೆ!

ಅವರು ಅಲ್ಲಿಗೆ ಬಂದಿದ್ದು

ಹೊತ್ತು ಸಾಗಿಸಲಿಕ್ಕೆ

ಇದನ್ನೋದಿ ನನ್ನ ನೆನಪಿನ ದೋಣಿ ಮುವ್ವತ್ತು ವರ್ಷಕ್ಕೂ ಹಿಂದಕ್ಕೆ ಹೋಯಿತು. ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ ಮತ್ತು ಡಿಲವೇರ್ ಸಂಸ್ಥಾನಗಳ ಕನ್ನಡಿಗರ ಕೂಟ ತ್ರಿವೇಣಿ'ಯ ಆಶ್ರಯದಲ್ಲಿ ಎರಡನೇ ಈಶಾನ್ಯ ಅಮೇರಿಕಾ ಕನ್ನಡ ಸಮ್ಮೇಳನ ನಡೆದ ಸಂದರ್ಭ. ಇನ್ನೇನು ಕವಿಗೋಷ್ಠಿ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು, ಕಾರ್ಯಕರ್ತರೊಬ್ಬರು ಬಂದು ಉದ್ಘೋಷಿಸಿದರು - "ಸಂಜೆಯ ಭೋಜನದ ವೇಳೆಯಾಗಿದೆ, ಆದಷ್ಟೂ ಬೇಗ ಹೋಗಿ ಊಟ ಮಾಡಿಕೊಂಡು ಬನ್ನಿ, ಊಟದ ನಂತರ ಮಾಸ್ಟರ್ ಹಿರಣ್ಣಯ್ಯನವರಿಂದ ನಾಟಕವಿದೆ. ತಡವಾಗಿ ಹೋದರೆ ಊಟ ಸಿಕ್ಕದೇ ಹೋಗಬಹುದು." ರಂಗದ ಮೇಲೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ತರುಣ ಕವಿಗಳು, ಕವಯಿತ್ರಿಯರು ಅತ್ಯಂತ ಉತ್ಸಾಹದಿಂದ ಆಸನಗಳನ್ನು ಅಲಂಕರಿಸಿಕೊಂಡಿದ್ದರು. ಉದ್ಘೋಷಣೆಯ ಫಲಿತಾಂಶ ಏನಾಯಿತು ಎಂದು ವಿವರಿಸುವ ಅಗತ್ಯವಿಲ್ಲ. ನಾನು ಕವನ ಓದುವ ಮುನ್ನ ಸಭೆಯನ್ನುದ್ದೇಶಿಸಿ, "ರಂಗದ ಮೇಲೆ ಆಸೀನರಾಗಿರುವ ಆತ್ಮೀಯ ಕವಿ-ಕವಯಿತ್ರಿಯರೇ, ಇನ್ನೂ ಭೋಜನಕ್ಕೆ ಹೋಗದೇ ಮುಂದಿನ ಸಾಲಿನಲ್ಲಿ ಕುಳಿತಿರುವ ಕಾವ್ಯಾಸಕ್ತರೇ ಮತ್ತು ನೂರಾರು ಖಾಲೀ ಕುರ್ಚಿಗಳೇ---" ಎಂದು ಪ್ರಾರಂಭಿಸಿದೆ. ಮೊದಲ ಸಾಲಿನಲ್ಲಿ ಆಸಕ್ತಿಯಿಂದ ಕುಳಿತಿದ್ದ (ಮುಖ್ಯ ಅತಿಥಿಗಳಾಗಿ ಬಂದಿದ್ದ) ಎಸ್. ಎಲ್. ಭೈರಪ್ಪನವರು ಹಿಂದಿರುಗಿ ನೋಡಿದರು. ಹೌದು, ರಂಗದ ಮೇಲಿದ್ದ ಕವಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ಸಭಾಸದರಿದ್ದರು. ಪ್ರಾಯಶಃ, ಇದು ಕವಿಗಳ ದೌರ್ಭಾಗ್ಯವೇ ಇರಬೇಕು. ದೇಶ ಕಾಲ ಯಾವುದಾದರೂ ಜನರ ಪ್ರಯಾರಿಟಿ ಹೆಚ್ಚು ಕಮ್ಮಿ ಒಂದೇ ಇರುತ್ತದೆ. ಊಟವನ್ನು ಮಿಸ್ ಮಾಡಿಕೊಂಡಾದರೂ ಕವಿತೆ ಕೇಳಬೇಕೆಂಬ ತೆವಲಿನವರು ಯಾವ ದೇಶದಲ್ಲೂ, ಯಾವ ಕಾಲದಲ್ಲೂ ಸಿಕ್ಕುವುದಿಲ್ಲ.

ಆನಂದರಾಮ ಶಾಸ್ತ್ರಿಗಳಾದರೋ, ಕೇವಲ' ಸಭಾಸದರ ಬಗ್ಗೆ ಬರೆದಿದ್ದಾರೆಯೇ ಹೊರತು (ಅವರ ಸಾಲು ಎಲ್ಲಿಗೆ ಮುಗಿಯುತ್ತೆ ಗಮನಿಸಿ, ಸಭಾಸದರು ಕೇವಲ) ಕವಿಗಳ ಸಂಖ್ಯೆಯ ಬಗ್ಗೆ ಯಾವ ಬೆಳಕನ್ನೂ ಚೆಲ್ಲಿಲ್ಲ! ಅಂತೂ "ಹೊತ್ತು ಸಾಗಿಸಲಿಕ್ಕೆ" ಅಂದರೆ ಹೊತ್ತು ಕಳೆಯುವುದಕ್ಕೆ ಎಂತಲೂ ಅರ್ಥೈಸಬಹುದಲ್ಲವೇ? ಹೊತ್ತು ಕಳೆಯಲು ಬಂದು ಕ್ಯಾಂಸಲ್ ಆದ ಕವಿತೆಯನ್ನು ಹೊತ್ತು ಸಾಗಿಸಿದರು, ಬಿಡಿ. ಅದಕ್ಕೆ ನಮ್ಮ ಜೋಶಿಯ ಜವಾಬೇನು?

ಹೌದು,

ಅದುವರೆಗೆ ಅವರಿಗೆ ಚಟ' ಆಗಿದ್ದ

ಕಾವ್ಯವ(ಳ)ನ್ನು

ಚಟ್ಟಕ್ಕೇರಿಸಿದ ಕೀರ್ತಿ ಅವರದ್ದು!

(ಆನಂದ)ರಾಮ ನಾಮ ಸತ್ಯ ಹೈ!

ಎನ್ನುತ್ತಾ ಇವರು ಮಡಕೆಯಲ್ಲಿ ಬೆಂಕಿ ಹಿಡಿದು ಎಲ್ಲರಿಗಿಂತ ಮುಂದೆ ನಡೆದೇಬಿಟ್ಟರು. "ಯೆಟ್ಟೂ ಜೋಶಿ"

ಈಗ ಬರುತ್ತಾಳೆ ನಮ್ಮ ಭಾವನಾ! ಜೋಶಿ ಯಾವುದೋ ಬ್ಲಾಗಿನಲ್ಲಿ ತಮ್ಮ ಕಣ್ಣಿಗೆ ಬಿದ್ದ ಭಾವನಾ ಕಪೂರ್ ಎಬುವಳ "ಎ ಫೊಯೆಮ್ ಡೈಡ್ ಟುಡೆ" (ಇವತ್ತೊಂದು ಕವಿತೆ ಸತ್ತಿತು) ಎಂಬ ಕವನವನ್ನು ಜಾಲಾಡಿ ತೆಗೆಯುತ್ತಾರೆ, ತಮ್ಮ ಇಬ್ಬರು ಮಿತ್ರರಿಗೂ ರವಾನಿಸುತ್ತಾರೆ. ಈ ಭಾವನಾ ಎಂಬಾಕೆ ಪ್ರಾಯಶಃ ಹಲವಾರು ಪತ್ರಿಕಾ ಸಂಪಾದಕರ ಕತ್ತರೀ ಪ್ರಯೋಗಕ್ಕೆ ಒಳಗಾದವಳಿರಬೇಕು. ಏಕೆಂದರೆ, ಅವಳ ಪ್ರಕಾರ ಕೇವಲ ಛಂದಸ್ಸು, ಪ್ರಾಸ ಇತ್ಯಾದಿಗಳ ಚರ್ವಿತಚರ್ವಣದಲ್ಲಿ ಸಿಕ್ಕುಬಿದ್ದ ವಿಮರ್ಶಕರು, ತರುಣ ಕವಿಗಳ ನವ್ಯಕಾವ್ಯವನ್ನು ಮೆಚ್ಚುವ ಬದಲು ಖಂಡಿಸಿ ತುಂಡರಿಸುವ ಕ್ರೌರ್ಯದಿಂದ ಕವಿಗಳ ಸೃಜನಶೀಲತೆಯನ್ನು ಕೊಲೆಗೈಯ್ಯುತ್ತಾರೆ. ಹೀಗಾಗಿ, ಇವಳ ಕವಿತೆಯ ನಾಯಕಿ ತನ್ನ ಪ್ರತಿಮೆಗಳ ಭಾರವನ್ನು ತಡೆಯಲಾರದೇ ಎಂಪೈರ್ ಸ್ಟೇಟ್ ಬಿಲ್ಡಿಂಗಿನಿಂದ ಪ್ರಾಣ ಕಳೆದುಕೊಳ್ಳಲು ನೆಗೆದರೂ, ಅವಳು ನಿಜವಾಗಿ ಸಾವನ್ನಪ್ಪುವುದು ಆಟಾಪ್ಸಿ (ಶವಪರೀಕ್ಷೆ)ಯ ಸಮಯದಲ್ಲಿ!

ಇಷ್ಟೆಲ್ಲಾ ಹೇಳಿದಮೇಲೆ ಭಾವನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಈ ಲೇಖನವನ್ನು ಮುಗಿಸಲಾಗುವುದೇ? ಇಗೋ ಇಂಗ್ಲೀಷಿನಲ್ಲಿದ್ದ ಕವನವನ್ನು ನಿಮಗಾಗಿ ಕನ್ನಡಿಸಿದ್ದೇನೆ, ಓದಿ.

ಇವತ್ತು ಒಂದು ಕವಿತೆ ಸತ್ತಿತು

ಎಲೆ ಎಲೆ ವೈದ್ಯನೇ

ಕೇಳಯ್ಯ ಕೂತು

ಇಂದು ಸತ್ತಿಹ ಕವಿತೆಯ

ಕೊನೆಯ ಮಾತು

ಎಂಪೈರ್ ಸ್ಟೇಟ್ ಸೌಧದ

ತುದಿಯಿಂದ ನೆಗೆದಾಗ ಅವಳು

ತುಂಬಿ ತುಳುಕುತ್ತಿತ್ತು

ಪ್ರತಿಮೆಗಳ ಬಸಿರು

ಕಿವಿಗೆ ಕೇಳುತ್ತಿತ್ತು

ಉಪಮೆಗಳ ಉಸಿರು

ಪತನವೆಂದರೆ ಆವೇಗ

ಇಳಿಯುವಾಗಿನ ವೇಗ

ಗುರುತ್ವ ಹೊಡಿಸಿದ ಲಾಗ

ವೇಗೋತ್ಕರ್ಷವ ಗುಣಿಸಿ

ಲೆಕ್ಕ ಹಾಕಿದರೆ

9.8 ಮೀಟರುಗಳ ಮುಟ್ಟಿತಾಗ

ಕ್ಷಣ-ಕ್ಷಣಕೂ ವಿಯೋಗ!

ಬಿದ್ದಾಗ ಕವಿತೆ

ಆಗಬಹುದಿತ್ತು ಪುಡಿಪುಡಿ

ಅಕ್ಷರಗಳೆಲ್ಲ ಹಿಡಿ ಹಿಡಿ

ನೋಡಬಹುದಿತ್ತು ಅವಳು

ಮೆನ್‌ಹ್ಯಾಟನ್ನಿನ ಗಲ್ಲಿ-ಗಲ್ಲಿ

ಎಲ್ಲೆಲ್ಲೋ ಚದುರಿ ಚೆಲ್ಲಾಪಿಲ್ಲಿ

ಆದರೆ, ಕವಿತೆ ಎಂದರೆ

ಗಾಜಿನ ಗೋಪುರವಲ್ಲ

ಅದಕ್ಕೇ ಅವಳು ಬಿದ್ದಾಗ ಯಾವ

ಸದ್ದು ಗದ್ದಲವೂ ಇರಲಿಲ್ಲ

ಹಾರುವ ಧೂಳಿರಲಿಲ್ಲ

ಸೋರುವ ನೆತ್ತರೂ ಇರಲಿಲ್ಲ

ಒಳ್ಳೆಯ ಕವಿತೆ ಎಂದರೆ

ಅಗ್ಗದ ಪ್ಲ್ಯಾಸ್ಟಿಕ್ಕಿನಂತೆ

ಅವಿನಾಶಿಯಂತೆ!

ಆದರೆ, ಹೆಣವ ಕುಯ್ಯುವ ವೈದ್ಯ,

ನೀನಾದರೋ ಕವಿತೆಗಳಿಗೆ

ಕತ್ತರೀಸೇವೆ ಮಾಡುತ್ತ

ಸಾರ್ಥಕ್ಯ ಹೊಂದುತಿರುವೆ

ಮುದ್ದೆಯಾದ ಮಾಂಸದ ನಡುವೆ

ಪುಡಿಯಾಗದೇ ಉಳಿದ

ಮೂಳೆಗಳ ಹೆಕ್ಕಿ

ಒಂದೊಂದೇ ಸಾಲನ್ನು

ಬೆತ್ತಲು ಮಾಡಿ

ಒಂದೊಂದೇ ಶಬ್ದವನ್ನು

ನಿಶ್ಶಬ್ದಗೊಳಿಸುತ್ತ

ತುಂಡರಿಸುವುದನ್ನು ಬಿಟ್ಟರೆ

ಮತ್ತೇನು ಬಲ್ಲೆ ನೀನು?

ಕೇಳಯ್ಯ ವೈದ್ಯ,

ಸತ್ತ ಕವಿತೆಯ ಕೊನೆಯ ಮಾತು

ಎತ್ತರದಿಂದ ಬಿದ್ದಾಗ

ಸಾಯುವುದಿಲ್ಲ ಕವಿತೆ

ಸಾವ ತರುವುದು

ಶವಪರೀಕ್ಷೆ!

(ಭಾವನಾ ಕಪೂರ್, ಡಿಸೆಂಬರ್ 2003)

ಅದಕ್ಕೆ ಷರಾ ಬರೆದವರು ನಾಗೇಶ ಹೆಗ್ಡೆ : "ಪದ್ಯ ಲಘುವಾಗಿದ್ದಿದ್ದರೆ ಈ ತಂಟೆ ಇರುತ್ತಿರಲಿಲ್ಲ, ಅರ್ಥಾತ್, ಎಷ್ಟು ಎತ್ತರದಿಂದ ಬಿದ್ದರೂ ಸಾಯುವ ಚಿಂತೆಯಿರುವುದಿಲ್ಲ. ಆದರೆ ಭಾವನೆಗಳಿಂದ ಬಸವಳಿದು ಸ್ವಲ್ಪ ತೂಕ ಹೆಚ್ಚಾದರೆ, ನೆಲದ ಮೇಲಿರುವ ಸಾಮಾನ್ಯರ ಕೈಗೂ ಸಿಕ್ಕಿಬಿಡುತ್ತೆ, ಕವಿತೆ." ಸುತ್ತೋಲೆಗಳ ಮೂಲಕ ಮತ್ತೆ ಮತ್ತೆ ನಿಮ್ಮ ಸುತ್ತ ಸತ್ತ ಕವಿತೆ ಸುತ್ತಿದರೆ, ಅದಕ್ಕೆ ಜೋಶಿಯವರಾಗಲೀ, ಆನಂದ ರಾಮ ಶಾಸ್ತ್ರಿಗಳಾಗಲೀ, ನಾಗೇಶ ಹೆಗ್ಡೆಯವರಾಗಲೀ, ಅಥವಾ ನಾನಾಗಲೀ ಹೊಣೆಯಲ್ಲ! ಒಂದು ವೇಳೆ ನೀವು ಇತರರಿಗೆ ಕಳಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more