ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾದೇ ಇರುವಳು ರಾಧೆ-ವಿಮರ್ಶೆ

By Staff
|
Google Oneindia Kannada News

Kade Iruvalu Radhe-Kannada Book Review
ಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.

* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್

ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ ಕೃಷ್ಣರ ಪ್ರೇಮ ಗೀತೆಗಳನ್ನು ಓದಿ ಅಥವಾ ತತ್ಸಂಬಂಧವಾದ ನೃತ್ಯ, ನಾಟಕಗಳನ್ನು ನೋಡಿ, ರಾಧೆಯ ಬಗ್ಗೆ ದೀರ್ಘವಾಗಿ ಆಳವಾಗಿ ಚಿಂತಿಸಬೇಕೇಂಬ ಆಸೆ ಇವರ ಮನಸ್ಸಿನಲ್ಲಿ ಮೂಡಿರಬೇಕು. ರಾಧೆಯನ್ನು ಒಂದು ಪ್ರತಿಮೆಯಾಗಿ ನೋಡುವ ಬದಲು ಸಜೀವ ವ್ಯಕ್ತಿಯಂತೆ ಕಾಣಬೇಕೆಂಬ ತೀವ್ರ ಒತ್ತಡ ಐತಾಳರ ಮನಸ್ಸಿನಲ್ಲಿ ಮೂಡಿರಬೇಕೆಂದು ಈ ಕಾದಂಬರಿಯನ್ನೋದಿದಮೇಲೆ ನನಗೆ ಅನ್ನಿಸಿತು.

ರಾಧೆ ಎಂಬ ಪಾತ್ರವನ್ನು ಯಾವ ಪ್ರೇಮಿ ಸೃಷ್ಟಿಸಿದನೋ, ಅಂತು ಅವಳಿಲ್ಲದೇ ಕೃಷ್ಣನಿಗೂ ಅಸ್ತಿತ್ವವಿಲ್ಲ ಅನ್ನುವಷ್ಟು ಅವಳು ಭಾರತೀಯರ ಹೃದಯದಲ್ಲಿ ಬೀಡು ಬಿಟ್ಟಿದ್ದಾಳೆ. ಅಂಥವಳೊಬ್ಬಳು ಇದ್ದಳೇ, ಹಾಗಿದ್ದಿದ್ದರೆ ಅವಳಿಗೂ ಕೃಷ್ಣನಿಗೂ ಎಂಥಾ ಸಂಬಂಧವಿತ್ತು? ಕೃಷ್ಣ ತುಂಟ ಬಾಲಕನಾಗಿದ್ದಾಗ ಆಕೆಯ ವಯಸ್ಸೆಷ್ಟಿತ್ತು? ಆಕೆಗೂ ಕೃಷ್ಣನಿಗೂ ವಿವಾಹವಾಯಿತೇ? ಇತರ ಗೋಪಿಕಾಸ್ತ್ರೀಯರಂತೆ ಅವಳೂ ಒಬ್ಬಳೇ? ಕೃಷ್ಣ ಗೋಕುಲವನ್ನು ಬಿಟ್ಟಮೇಲೆ ಅವಳ ಗತಿ ಏನಾಯಿತು? ಕೃಷ್ಣನ ಜೊತೆಗೆ ಅವಳಿಗೂ ದೈವತ್ವ ಯಾವಾಗ ಪ್ರಾಪ್ತವಾಯಿತು? ಇನ್ನೂ ಅನೇಕ ಪ್ರಶ್ನೆಗಳಿಗೆ ನಮ್ಮಲ್ಲಿ ಖಚಿತವಾದ ಉತ್ತರ ಸಿಕ್ಕುವುದಿಲ್ಲ. ಆದರೆ, ರಾಧಾ-ಕೃಷ್ಣರ ಪ್ರೇಮವೆಂಬುದು ಜಗದ್‍ವಿಖ್ಯಾತ. ಜಯದೇವನಿಂದ ಮೊದಲ್ಗೊಂಡು ಇಂದಿನ ವರೆಗೂ ರಾಧಾಕೃಷ್ಣರ ಅಮರ ಪ್ರೇಮವನ್ನು ಕೊಂಡಾಡಿದ, ಅವರನ್ನೇ ಕೇಂದ್ರವಾಗಿಟ್ಟುಕೊಂಡು ಕಾವ್ಯ ರಚಿಸಿದ ಕವಿಗಳಿಗೆ ಲೆಕ್ಕವಿಲ್ಲ. ಭಾರತೀಯ ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ರಾಧೆಗೆ ವಿಶಿಷ್ಠ ಸ್ಥಾನವಂತೂ ಇದ್ದೇ ಇದೆ.

ಐತಾಳರು, ರಾಧೆಯನ್ನು ಓರ್ವ ಬಾಲೆಯನ್ನಾಗಿ ಚಿತ್ರಿಸಿ ಅವಳಿಗೆ ಜೀವ ತುಂಬಿದ್ದಾರೆ. ಅವಳ ತಂದೆ ತಾಯಿ, ಅವಳ ಊರು, ಅವಳ ಜೀವನ, ಅವಳ ಪ್ರೇಮ, ವಿರಹ ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಅವಳ ಮತ್ತು ಕೃಷ್ಣನ ಪ್ರೀತಿಯ ಸುತ್ತ ನಂಬಲರ್ಹವಾದ ಕಥೆಯೊಂದನ್ನು ಬಲು ನೈಜವಾಗಿ, ಸಹಜವಾಗಿ ರಚಿಸಿ ಒಂದು ಕಿರುಗಾದಂಬರಿಯನ್ನು ಹೆಣೆದಿದ್ದಾರೆ. ಇಲ್ಲಿ ಹೊಸದೆನಿಸುವ ವಿಷಯವೆಂದರೆ, ರಾಧೆ ಕೃಷ್ಣನಿಗಿಂತ ಚಿಕ್ಕವಳು. ಈ ಕಾದಂಬರಿಯಲ್ಲಿ ಅವಳ ವಯಸ್ಸು ಹನ್ನೊಂದು. ಅನುರಾಗ ಬೆಳೆಯುವ ವಯಸ್ಸಲ್ಲದಿದ್ದರೂ ಕೃಷ್ಣನಂಥಾ ಆಕರ್ಷಕ ವ್ಯಕ್ತಿಯಲ್ಲಿ ಮನಸ್ಸನ್ನು ಅರ್ಪಿಸುವ ಭಾವ ಉಂಟಾಗಲು ಅಡ್ಡಿಯಿಲ್ಲ. ಕೃಷ್ಣನೂ ಇಲ್ಲಿ ದೇವರಲ್ಲ. ಒಬ್ಬ ಅಸಾಧಾರಣ ಗೊಲ್ಲ ಬಾಲಕ, ತುಂಟ, ಕಿಲಾಡಿ, ಹೆಂಗೆಳೆಯರನ್ನು ಗೊಲ್ಲತಿಯರನ್ನು ಗೋಳುಹುಯ್ದುಕೊಳ್ಳುವ ಪೋರ. ಅವನ ಪಾತ್ರವೂ ನಂಬಬಹುದಾದಂತೆ ಬೆಳೆದಿದೆ. ಇಡೀ ಕಾದಂಬರಿ ಯಾವ ತಿರುವುಗಳೂ ಇಲ್ಲದೇ ಸರಳವಾಗಿ ಬೆಳೆದು ನಿರೀಕ್ಷಿತವಾಗುತ್ತದೆ. ಪುಟ್ಟ ಬಾಲಕಿಯ ವಿರಹ ಹೃದಯಸ್ಪರ್ಶಿಯಾಗಿದೆ. ಹೀಗೇ ಇದ್ದಿತೇನೋ ಅಂದಿನ ಗೋಕುಲ ಎಂಬ ಕಾವ್ಯಮಯತೆ ಇಲ್ಲೂ ಇದೆ.

"ಈಗಲೂ, ಗೋಕುಲದ ಸುತ್ತಲಿನ ಜನರು, ಬಿಳಿಯ ಸೀರೆಯನ್ನುಟ್ಟ ಒಬ್ಬ ಹೆಂಗಸು, ಕೊಳಲನ್ನು ಎದೆಗೆ ಅಪ್ಪಿಕೊಂಡು, 'ಕನ್ಹಯ್ಯಾ,...., ಕನ್ಹಯ್ಯಾ,...." ಎಂದು ಹಲುಬುತ್ತ, ಹುಣ್ಣಿಮೆಯ ರಾತ್ರಿ, ವೃಂದಾವನದಲ್ಲಿ ಸುತ್ತಾಡುತ್ತಿರುವುದನ್ನು ಕಂಡಿದ್ದೇವೆಂದು ಹೇಳುತ್ತಾರೆ. ಅವಳೇ ರಾಧೆಯೆಂಬುದೂ ಅವರ ನಂಬಿಕೆ..." ಈ ರೀತಿ ಕೊನೆಯಾಗುತ್ತದೆ ಈ ಕಾದಂಬರಿ. "ಕಾದೇ ಇರುವಳೆ ರಾಧೆ" ಎಂಬ ಶೀರ್ಷಿಕೆ ಸಾರ್ಥಕವಾಗಿ ಅನ್ವರ್ಥನಾಮವಾಗುತ್ತದೆ! ಒಟ್ಟಿನಲ್ಲಿ ಅಮೆರಿಕನ್ನಡಿಗರಲ್ಲಿ ಹಿರಿಯರಾದ ಐತಾಳರ ಲೇಖನಿ ಜೀವಂತವಾಗಿದೆ. ಈ ಎರಡು ಪುಸ್ತಕಗಳನ್ನು ಸಾರಸ್ವತಲೋಕಕ್ಕೆ ಇತ್ತ ಮತ್ತು ಇದಕ್ಕೂ ಮುನ್ನ ಅನೇಕ ಪುಸ್ತಕಗಳ ರಚನೆಗೆ ಕಾರಣಕರ್ತರಾದ ಐತಾಳರು ಇನ್ನೂ ತಮ್ಮ ಮನಸ್ಸಿನಲ್ಲಿ ಬೆಳೆಯುತ್ತಿರುವ ಹಲವಾರು ವಿಷಯಗಳನ್ನು ಪುಸ್ತಕರೂಪಕ್ಕೆ ಇಳಿಸಲಿ ಎಂದು ಆಶಿಸುತ್ತೇನೆ.

ನಾಗಐತಾಳರ ಎರಡು ಪುಸ್ತಕ-ಮಿಮರ್ಶೆನಾಗಐತಾಳರ ಎರಡು ಪುಸ್ತಕ-ಮಿಮರ್ಶೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X