• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆರೆಯ ಮೇಲೆ ತೆರೆದೆದೆ ಸಂಸ್ಕೃತಿ ವಿಲಾಸ

By Super
|

ಸಭ್ಯತೆ ಮತ್ತು ಅಸಭ್ಯತೆಯ ನಡುವಿನ ಅಂತರವನ್ನು ಇದಮಿತ್ಥಂ ಎಂದು ಗೆರೆಕೊಯ್ದು ಬೇರ್ಪಡಿಸಿ ನಿರೂಪಿಸುವುದು ದುಸ್ಸಾಧ್ಯ. ಒಂದೊಂದು ದೇಶ ಮತ್ತು ಒಂದೊಂದು ಸಂಸ್ಕೃತಿ ತನಗೆತಾನೆ ಮಾದರಿಯೆನಿಸುವ ವ್ಯಾಖ್ಯಾನಗಳನ್ನು ಕಾಲಕಾಲಕ್ಕೆ ಕೊಟ್ಟುಕೊಳ್ಳುತ್ತದೆ. ಆದರೆ, ಉನ್ಮಾದದ ಹೊಳೆಯಲ್ಲಿ ಈಜುತ್ತಿರುವ, ಟಿವಿ ಕೃಪಾಪೋಷಿತ ತೆರೆದೆದೆ ಸಂಸ್ಕೃತಿ ಮಾತ್ರ ಇಂದು ವಿಶ್ವವ್ಯಾಪಿಯಾಗಿರುವುದಂತೂ ನಿಶ್ಚಿತ. ಈ Infotainment ಗಳಿಂದ ಉತ್ಪತ್ತಿಯಾಗುವ ಉಲ್ಲಾಸವೇನು? ಅನಾಹುತಗಳೇನು ?. ರೂಪದರ್ಶಿ ಟೈರಾ ಬ್ಯಾಂಕ್ಸ್ ಉದಾಹರಣೆಯನ್ನು ಮುಂದಿಟ್ಟುಕೊಂಡು ಒಂದು ಸಿಂಹಾವನೋಕನ.

ಡಾ. ಮೈಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ವಾರಾಂತ್ಯಗಳಲ್ಲಿ ಮಾರ್ನಿಂಗ್ ಷೋಗಳಿಗೆ ಹೋಗುತ್ತಿದ್ದುದು ನೆನಪಿರಬಹುದು. ಕೆಲವೊಮ್ಮೆ ತರಗತಿಗೆ ಚಕ್ಕರ್ ಹೊಡೆದು ಹೋದದ್ದೂ ಉಂಟು, ಅಪರೂಪಕ್ಕೆ. ಆ ದಿನಗಳಲ್ಲಿ ನಮಗೆ ದೊರಕುತ್ತಿದ್ದ ಅತಿ ಕಮ್ಮಿ ಖರ್ಚಿನ ಮನರಂಜನೆ ಎಂದರೆ ಅದೇ. ಅರ್ಧ ಕಾಸುಕೊಟ್ಟು ಸಿನಿಮಾ ನೋಡುವುದರಲ್ಲಿ ಒಂದು ವರ್ಣಿಸಲಾಗದ ಖುಷಿ ಇರುತ್ತಿತ್ತು. ರಾಜ್ ಕಪೂರ್-ನರ್ಗಿಸ್, ದೇವಾನಂದ್-ಕಲ್ಪನಾ ಕಾರ್ತಿಕ್, ದಿಲೀಪ್ ಕುಮಾರ್-ವೈಜಯಂತಿಮಾಲಾ ಇನ್ನೂ ಮುಂತಾದ ಜನಪ್ರಿಯ ಜೋಡಿಗಳನ್ನು ಹಳೇ ಹಿಂದೀ ಚಿತ್ರಗಳಲ್ಲಿ ನೋಡುವುದರಲ್ಲಿ ಒಂದು ಮಜಾ ಇರುತ್ತಿತ್ತು. ಅದೇ ರೀತಿ ಸಿಸಿಲ್ ಬಿ ಡಿಮಿಲಿ ನಿರ್ದೇಶಿಸಿದ ಚಿತ್ರಗಳು, ಆಲ್ಫ್ರೆಡ್ ಹಿಚ್‌ಕಾಕ್‌ನ ಚಿತ್ರಗಳು, ಒಂದೇ ಎರಡೇ? ರಾಕ್ ಹಡ್ಸನ್, ಡೊರಿಸ್ ಡೇ, ಗ್ರೆಗರಿ ಪೆಕ್, ಮುಂತಾದವರನ್ನು ತೆರೆಯಮೇಲೆ ಗುರುತಿಸುವುದೇ ಒಂದು ದೊಡ್ದ ಸಾಧನೆ ಅಂದುಕೊಂಡಿದ್ದ ಕಾಲವದು. ಚಿತ್ರಕತೆಯ ವಿವರಗಳು ಮರೆತುಹೋಗಿದ್ದರೂ, ವಾರಾಂತ್ಯದಲ್ಲಿ ಮಿತ್ರರೊಂದಿಗೆ ಕಳೆದ ರಸಮಯ ಸನ್ನಿವೇಶಗಳು ಇನ್ನೂ ಮನದಲ್ಲೇ ಉಳಿದಿವೆ. ಆದರೆ ನಾನೀಗ ಹೇಳ ಹೊರಟಿದ್ದು ಭಾರತದಲ್ಲಿ ನೋಡಿದ ಹಗಲಿನ ಪ್ರದರ್ಶನಗಳ ವಿಚಾರವನ್ನಲ್ಲ.

ಕೆಲಸಕ್ಕೋಸ್ಕರ ಮನೆಯಿಂದಾಚೆ ಹೋಗಬೇಕಾದ ಅಗತ್ಯವಿಲ್ಲದ ಅನೇಕರು ಹಗಲನ್ನು ಮನೆಯಲ್ಲೇ ಕಳೆಯುತ್ತಾರಷ್ಟೆ? ಅವರಿಗಾಗಿಯೇ ಟೀವಿಯಮೇಲೆ ಹಲವಾರು ಸೋಪ್ ಆಪೆರಾಗಳು ಹುಟ್ಟಿಕೊಂಡಿವೆ. ಭಾರತದ ಎಲ್ಲಾ ಭಾಷೆಗಳಲ್ಲೂ ಇಂಥ ಸೀರಿಯಲ್ಲುಗಳು ಜನಪ್ರಿಯವಾಗಿವೆ. ಅಪರೂಪಕ್ಕೆ ಇಲ್ಲಿಂದ ಭಾರತಕ್ಕೆ ಭೇಟಿಕೊಡುವರು ಮಿತ್ರರ ಅಥವಾ ನೆಂಟರ ಮನೆಗಳಿಗೆ ಹೋಗುವಾಗ ಜನಪ್ರಿಯ ಧಾರಾವಾಹಿ ಯಾವುದೂ ನಡೆಯದ ಸಮಯವನ್ನೇ ಹುಡುಕಬೇಕು. ಇಲ್ಲದಿದ್ದರೆ, ನೀವೂ ಅವರೊಂದಿಗೆ ಆ ಸೀರಿಯಲ್ಲುಗಳನ್ನು ನೋಡಲು ತಯಾರಿರಬೇಕು. ಸೀರಿಯಲ್‌ಗಳನ್ನು ಪ್ರದರ್ಶಿಸುವುದು ಒಂದು ಭಾರೀ ಉದ್ಯಮ. ಅವನ್ನು ನಡೆಸಲು ಅನೇಕ ನಟ ನಟಿಯರು, ತಂತ್ರಜ್ಞರು, ಬರಹಗಾರರು, ನಿರ್ದೇಶಕರು, ನಿರ್ಮಾಕರೂ ಹುಟ್ಟಿಕೊಳ್ಳುತ್ತಾರೆ. ಹಲವಾರು ಜನರಿಗೆ ಉದ್ಯೋಗ, ಪ್ರತಿಭಾಪ್ರದರ್ಶನಕ್ಕೆ ಅವಕಾಶ ಇತ್ಯಾದಿ, ಇತ್ಯಾದಿ, ಇವೆಲ್ಲ ಅದರ ಪರಿಣಾಮ. ಇಂಥಾ ಬೆಳಗಿನ ಧಾರಾವಾಹಿಗಳಬಗ್ಗೆಯೂ ಅಲ್ಲ, ನಾನು ಹೇಳ ಹೊರಟಿರುವುದು.

ಮೊನ್ನೆ ಒಂದು ಶುಕ್ರವಾರ ಮನೆಯಲ್ಲೇ ಇದ್ದೆ. ನಿಧಾನವಾಗೆದ್ದು ಪತ್ರಿಕೆ ಓದಿ ಬ್ರಂಚ್ ತಿನ್ನುವಾಗ ಟೀವಿ ಹಚ್ಚಿದೆ. ಯಾವ ಯಾವ ಚಾನಲ್ಲುಗಳಲ್ಲಿ ಏನೇನು ನಡೆಯುತ್ತಿದೆ ಎಂದು ಹುಡುಕುತ್ತಿದ್ದಾಗ ಟೈರಾ ಬ್ಯಾಂಕ್ಸ್ ಷೋ ಶುರುವಾಗಿತ್ತು. ಹಿಂದೆಯೂ ನಾನು ಈಕೆಯ ಷೋ ನೋಡಿದ್ದೇನೆ. ಆದರೆ ಈಕೆ ನನ್ನ ಕುತೂಹಲವನ್ನು ಹಲವು ಕಾರಣಗಳಿಂದ ಕೆರಳಿಸಿದ್ದಾಳೆ. ಮೊದಲನೆಯದಾಗಿ, ಇತ್ತೀಚೆಗೆ ಅವಳ ಒಂದು ಷೋ ಯೂ-ಟ್ಯೂಬಿನಲ್ಲಿ ಓಡಾಡುತ್ತಿದೆ, ಅದನ್ನು ಯಾರೋ ನನಗೆ ರವಾನಿಸಿದ್ದರು. ಆ ಪ್ರದರ್ಶನ ಕೊಂಚಮಟ್ಟಿಗಾದರೂ ಕೆಲವರ ಮನಸ್ಸನ್ನು ಕಲಕಿಬಿಟ್ಟಿದೆ. ಎಲ್ಲರಿಗೂ ತಿಳಿದಿರುವಂತೆ, ಟೈರಾ ಒಬ್ಬಳು ರೂಪದರ್ಶಿ. ಅವಳಿಗೆ ಅಂಗಾಂಗ ಪ್ರದರ್ಶನಮಾಡುವುದು ಒಂದು ಉದ್ಯೋಗ. ಹಾಗೆಂದಮಾತ್ರಕ್ಕೆ ಊರಿನ ಹೆಣ್ಣುಗಳನ್ನೆಲ್ಲ ಕರೆದು ಅಂಗಾಂಗ ಪ್ರದರ್ಶನ ಮಾಡಿಸಬೇಕೇ? ಇದು ಪ್ರಶ್ನೆ.

ದೇವರು ಕೊಟ್ಟ ಅಮೃತಕಲಶಗಳನ್ನು ಮುಚ್ಚುವ ಕಂಚುಕ (ಬ್ರಾ) ಹಾಗು ಹೆಂಗಸರ ಒಳಮೈವಸ್ತ್ರಗಳನ್ನು ಮಾರಾಟಮಾಡಲು ಆಕರ್ಷಕವಾದ ರೂಪದರ್ಶಿಗಳನ್ನು ಬಳಸಿಕೊಂಡು ಪ್ರಚಾರ ನಡೆಸುವ ಕ್ರಿಯೆ ಎಲ್ಲರಿಗೂ ಪರಿಚಿತವೇ. "ವಿಕ್ಟೋರಿಯಾಸ್ ಸೀಕ್ರೆಟ್" ಎಂಬ ಕಂಪನಿ, ಜಾಹೀರಾತುಗಳಿಗಾಗಿ ಇಟ್ಟುಕೊಂಡಿರುವ ಅನೇಕ ಸುಂದರ ತರುಣಿಯರ ಪೈಕಿ ಟೈರಾ ಸಹ ಒಬ್ಬಳು. ಆಕೆಯ ಉಬ್ಬು-ತಗ್ಗುಗಳನ್ನು, ಗುಡ್ಡ ಕಣಿವೆಗಳನ್ನು ವಿಕ್ಟೋರಿಯಾಸ್ ಸೀಕ್ರೆಟ್ ಕಂಪನಿ ಸಾಕಷ್ಟು ಉಪಯೋಗಿಸಿಕೊಂಡಿದೆ. ಹೀಗಾಗಿ ನೀವು ಇಷ್ಟಪಟ್ಟರೂ ಸರಿ, ಬೇಡವೆಂದರೂ ಸರಿ, ಆಕೆಯ ಅಂಗಸೌಷ್ಟವದ ಇಣುಕುದೃಶ್ಯಗಳು ದೂರದರ್ಶನದ ತೆರೆಯಮೇಲೆ ಮತ್ತು ಪತ್ರಿಕೆಗಳ ಪುಟಗಳಲ್ಲಿ ಸಹಸ್ರಾರು ಕಡೆ ಅಚ್ಚಾಗಿ ಜಗಜ್ಜಾಹೀರಾಗಿಬಿಟ್ಟಿವೆ.

ಯೂ ಟ್ಯೂಬಿನ ಬಗ್ಗೆ ಹೇಳಿದೆನಷ್ಟೆ? ಅದು ಆಕೆಯ ಒಂದು ಷೋನಲ್ಲಿ ಜೀನ್ಸ್ ಗಳ ವಿಚಾರದಲ್ಲಿ ನಡೆದ ಚರ್ಚೆಯ ಒಂದು ಸಣ್ಣ ತುಣುಕು. ಜೀನ್ಸ್‌ಗಳು ಹೇಗೆ ಮೈಗಂಟಿರಬೇಕು, ಅಂಟಿದ್ದರೂ ಒಳವಸ್ತ್ರಗಳು ಇಣುಕಿ ನೋಡದಂತೆ ಮಾಡಲು ಸಾಧ್ಯವೇ ಮುಂತಾದ ಪ್ರಶ್ನೆಗಳ ರಸಪೂರಿತ ಚರ್ಚೆಯೇ ಆ ಪ್ರಕರಣದ ಮೂಲ ವಸ್ತು. ಈ ತುಣುಕಿನ ಕೊನೆಯಲ್ಲಿ ತಾವು ತೊಟ್ಟದ್ದನು ಕಿತ್ತು ಬಿಸಾಡಿ ಹೊಸ ಜೀನ್ಸ್‌ಗಳನ್ನು ತೊಟ್ಟು ತೋರಿಸಲು ಹಲವಾರು ಸಭಾಸದೆಯರನ್ನು ಉಪಯೋಗಿಸಿಕೊಳ್ಳಲಾಗಿದೆ. ಈಕೆ ಮಾಡಿದ್ದು ಸ್ವಲ್ಪ ಅತಿರೇಕವಲ್ಲವೇ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ. ಬದಲಿಸುವ ಕಕ್ಷೆಗೆ ಹೋಗಿ ಜೀನ್ಸ್‌ಗಳನ್ನು ತೊಟ್ಟು ಬನ್ನಿ ಎನ್ನಬಾರದಿತ್ತೇ? ಇಲ್ಲ, ಈಕೆ ಮಾಡಿದ್ದೇನು? ಇಡೀ ಸಭೆಯ ಎದುರಿಗೆ ತಾವು ತೊಟ್ಟ ವಸ್ತ್ರಗಳನ್ನು ಕಳಚಿ ತಮ್ಮ ಒಳಗಿನ ಬಟ್ಟೆಗಳನ್ನು ಪ್ರದರ್ಶಿಸುತ್ತಾ ಕ್ಯಾಮರಾಗಳ ಸಮಕ್ಷಮದಲ್ಲಿ ಲಕ್ಷಾಂತರ ನೋಡುಗರ ಸಾಕ್ಷಿಯಲ್ಲಿ, ಅದರಲ್ಲಿ ಭಾಗವಹಿಸಿದ ತರುಣಿಯರೆಲ್ಲ ಅರೆಬೆತ್ತಲಾದರು. ಒನ್, ಟು, ತ್ರೀ ಎಂದು ಕೂಗುತ್ತಾ, ಟೈರಾ ಸಹ ಜೀನ್ಸ್ ಕಳಚಿ ಬೀಸಿ ಎಸೆದು, ಒಳ ಚೆಡ್ಡಿಯಲ್ಲಿ ನಿಂತು ಅಂಗಾಂಗಗಳನ್ನು ಮಿಂಚಿಸಿದಳು. ತಮಗೆ ಮುಫತ್ತಾಗಿ ಕೊಡಲ್ಪಟ್ಟ ಜೀನ್ಸ್‌ಗಳನ್ನು ಎಲ್ಲರೆದುರಿಗೂ ಅವರೆಲ್ಲ ತೊಟ್ಟುಕೊಂಡರು. ಈ ದೃಶ್ಯಕ್ಕೆ ಯಾವ ಗೋಪ್ಯವೂ ಇಲ್ಲ, ಯಾವ ಮುಚ್ಚೂ ಇಲ್ಲ, ಯಾವ ಮರೆಯೂ ಇಲ್ಲ. ಮಾಲಿನಲ್ಲಿರುವ ಎಲ್ಲಾ ರೂಮುಗಳ ಬಾಗಿಲುಗಳನ್ನೂ ಹಾರುಬಡಿದು ಪ್ರತಿ ಸ್ಟಾಲಿನ ಮುಂದೂ ಒಂದು ಕ್ಯಾಮರಾ ಇಟ್ಟು ದೊಡ್ಡ ತೆರೆಗಳಿಗೆ ಪ್ರೊಜೆಕ್ಟ್ ಮಾಡಿದರೆ ಹೇಗಿರುತ್ತೋ, ಹಾಗೆ.

ಮತ್ತೊಂದು ಟೈರಾ ಬ್ಯಾಂಕ್ಸ್ ಷೋ ವಿಚಾರ ಕೇಳಿ. ಅದರಲ್ಲಿ, ಡಾಕ್ಟರ್ ಸೂ ಜೋಹ್ಯಾಂಸನ್ ಎಂಬ ಲೈಂಗಿಕತಜ್ಞೆ ಸಭಾಸದರ ನೇರ ಪ್ರಶ್ನೆಗಳಿಗೆ ನೇರ ಉತ್ತರಗಳನ್ನು ಯಾವ ಅಡೆತಡೆಯೂ ಇಲ್ಲದೇ ಕೊಡಮಾಡಿದ್ದು. (ಈಕೆ ಲೈಂಗಿಕ ಚರ್ಚೆಗೆ ಸಂಬಂಧಿಸಿದ ಪ್ರಶ್ನೋತ್ತರಗಳಿಗೇ ಮೀಸಲಾದ ತನ್ನದೇ ಷೋ ನಡೆಸುತ್ತಾಳೆ.) ಲೈಂಗಿಕ ವಿಚಾರವೆಂದಮಾತ್ರಕ್ಕೆ ಮಡಿವಂತರಾಗಬೇಕೆಂಬ ಅಭಿಪ್ರಾಯ ನನ್ನದಲ್ಲ. ಅಂಥಾ ವಿಚಾರಗಳಿಗೆ ಸಂಬಂಧಪಟ್ಟ ವಿವರಗಳು ಪುಸ್ತಕಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಹೇರಳವಾಗಿ ದೊರಕುತ್ತವೆ. ಅದಕ್ಕಾಗೇ ಮುಡುಪಾದ ಷೋಗಳೂ ಇವೆ. ಆದರೆ, ಹಾಡುಹಗಲಿನಲ್ಲಿ, ಮಟಮಟ ಮಧ್ಯಾಹ್ನದಲ್ಲಿ, ಎಲ್ಲ ವಯಸ್ಸಿನ ಹೆಂಗಸರು ಗಂಡಸರು ಮಕ್ಕಳು ನೋಡಬಹುದಾದ ಕಾರ್ಯಕ್ರಮಗಳಲ್ಲಿ ರೂಪದರ್ಶಿಗಳು ಕ್ಯಾಮರಾಗಳ ಮುಂದೆ ಅರೆಬೆತ್ತಲಾಗುವ ಸಂಸ್ಕೃತಿ, ಇನ್ನೂ ಯಾವ ಮಟ್ಟವನ್ನು ಮುಟ್ಟಬಹುದು? ಗುಪ್ತವಾಗಿರಬೇಕಾದ ಲೈಂಗಿಕ ವಿವರಗಳನ್ನು, ಅದೂ ಇಬ್ಬರು ಪ್ರೇಮಿಗಳ ನಡುವೆ ನಡೆಯುವ ಅತ್ಯಂತ ಆಪ್ತ ವೈಯಕ್ತಿಕ ರತಿಕ್ರೀಡೆಗಳ ಚರ್ಚೆಯನ್ನು ಬಹಿರಂಗವಾಗಿ ನಡೆಸ ಬಹುದೇ? ಗುಪ್ತಾಂಗಗಳ ಭೌತಿಕ ವರ್ಣನೆ, ಸಂಭೋಗದ ಪರಾಕಾಷ್ಠೆಯ ವಿವರಗಳು, ಇವುಗಳ ಮುಕ್ತ ಚರ್ಚೆ ಬಹಿರಂಗವಾಗಿ ನಡೆಯಬಹುದೇ? ಭಾಗವಹಿಸುವವರಲ್ಲಿ ಅನಾಮಿಕತೆಯಿಲ್ಲ, ತಮ್ಮತಮ್ಮ ರಹಸ್ಯಗಳನ್ನು ಎಲ್ಲರೊಂದಿಗೆ ನಿಸ್ಸಂಕೋಚವಾಗಿ ಹಂಚಿಕೊಳ್ಳುವ ಈ ಚಟಕ್ಕೆ ಏನೆನ್ನೋಣ? ಈ ಪ್ರಶ್ನೆಗಳು ಎಲ್ಲರನ್ನೂ ಕಾಡಬೇಕು. ನಾನು ಮೊದಲೇ ಹೇಳಿದಂತೆ, ಇದು ಮಡಿವಂತಿಕೆಯ ಪ್ರಶ್ನೆಯಲ್ಲ. ಮಾಧ್ಯಮದ ಸ್ವಾತಂತ್ರ್ಯದ ಪ್ರಶ್ನೆಯೂ ಅಲ್ಲ. ನಮ್ಮ ಮೇಲೆ ನಾವೇ ಹೇರಿಕೊಳ್ಳಬೇಕಾದ ಇತಿ-ಮಿತಿಗಳ ಪ್ರಶ್ನೆ ಇದು.

ಇಂದು ಇಲ್ಲಿ (ಅಂದರೆ ಅಮೇರಿಕದಲ್ಲಿ) ಆಗುತ್ತಿರುವುದು ನಾಳೆ ಭಾರತದಲ್ಲಿ ಖಂಡಿತವಾಗಿ ಆಗೇ ತೀರುತ್ತದೆ. ಜಗತ್ತು ಸಂಕುಚಿಸುತ್ತಿದೆ. ಮಿತಿಮೀರಿದ ಮೈಪ್ರದರ್ಶನದ ಹುಚ್ಚು ಇಲ್ಲಿಂದ ಅಲ್ಲಿಗೂ ಹರಿದುಹೋಗಿದೆ. ಇತ್ತೀಚಿನ ಬಾಲಿವುಡ್ ಚಿತ್ರಗಳಲ್ಲಿ ಅಂಗಾಂಗ ಪ್ರದರ್ಶನಕ್ಕೆಂದೇ ಒಂದೆರಡು ವೃಂದನೃತ್ಯಗಳಿರುತ್ತವೆ. ನಾಯಕ ನಾಯಕಿಯರ ಹಿಂದೆ ಅಂಗಾಂಗಭಂಗ ಮಾಡಿಕೊಳ್ಳುವ ಕುಣಿತಗಳಲ್ಲಿ ಭಾರತೀಯ ನರ್ತಕ-ನರ್ತಕಿಯರ ಜೊತೆಗೆ ವಸ್ತ್ರಕೃಪಣೆಯರ ಒಂದು ಪರದೇಶೀ ಗುಂಪೇ ಇರುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಜೊಲ್ಲು ಸುರಿಸಿಕೊಂಡು ನೋಡುವ ಗಂಡುಗಳಿಗಾಗೇ ಈ ಪಶ್ಚಿಮದಿಂದ ಆಮದುಮಾಡಿಕೊಂಡ ಅರೆನಗ್ನ ಬಿಳೀ-ಕರೀ ಹುಡುಗಿಯರ ಪಾಳ್ಯವನ್ನು ಬಾಲಿವುಡ್ ಸಾಕಿರುವಂತಿದೆ. ಇದು ಎಷ್ಟರ ಮಟ್ಟಿಗೆ ಆರೋಗ್ಯಕರ? ಎಷ್ಟರ ಮಟ್ಟಿಗೆ ಬೆಳೆಯುವ ಹುಡುಗರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಮಾಡಬಹುದು? ಈ ವಿಚಾರಗಳನ್ನು ಕುರಿತು ಸಮಾಜಶಾಸ್ತ್ರಜ್ಞರೂ ಮನಸ್‌ಶಾಸ್ತ್ರಜ್ಞರೂ ಚಿಂತಿಸಬೇಕಾಗಿದೆ.

ಈ ಲೇಖನ ಟೈರಾ ಬ್ಯಾಂಕ್ಸ್ ವಿರುದ್ಧ ಬರೆದ ಲೇಖನವಲ್ಲ. ಆಕೆಯ ಷೋಗಳಂತೆ ಇಂದು ಹಲವಾರು ಷೋಗಳು ಅಮೆರಿಕದಲ್ಲಿವೆ. ಅಂಥವೇ ಪ್ರದರ್ಶನಗಳು ಭಾರತದಲ್ಲೂ ಇರಬಹುದು, ಇಂದು ಇಲ್ಲದಿದ್ದರೆ ನಾಳೆ ಬಂದೇ ಬರುವುದು ಶತಸ್ಸಿದ್ಧ. ಮುಂದಿನ ಜನಾಂಗದ ಆರೋಗ್ಯಕರ ಬೆಳವಣಿಗೆಗೆ ಇವು ಎಷ್ಟು ಸಾಧು ಎಂದು ಗಂಭೀರವಾಗಿ ಚಿಂತಿಸಬೇಕಾಗಿದೆ. ಕಟ್ಟಾ ಮುಸಲ್ಮಾನ ದೇಶಗಳಲ್ಲಿ ಸಂಪ್ರದಾಯವಾದಿಗಳು ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ ರೊಚ್ಚಿಗೆದ್ದಿರುವುದು ಇದೇ ಕಾರಣದಿಂದ. ನಿಜ, ಅವರು ಹೇಳುವಂತೆ ನಾವು ಎಲ್ಲಾ ಹೆಂಗಸರನ್ನೂ ಬುರ್ಖಾದಡಿ ಇರಿಸುವುದು ಈ ಸಮಸ್ಯೆಗೆ ಪರಿಹಾರವಲ್ಲ. ಸಭೆಯಲ್ಲಿ ಅಸಹಾಯಕ ಸ್ತ್ರೀಯೊಬ್ಬಳ ಸೀರೆಯನ್ನು ದುರ್ಯೋಧನನ ಅಪ್ಪಣೆಯ ಮೇರೆಗೆ ದುಶ್ಶಾಸನ ಸೆಳೆದನೆಂಬ ಕಾರಣದಿಂದ ಮಹಾಭಾರತ ಯುದ್ಧವೇ ನಡೆದುಹೋಯಿತು. ಯಾವ ದುರ್ಯೋಧನ-ದುಶ್ಶಾಸನರೂ ಇಲ್ಲದೇ ವನಿತೆಯರು ತಮ್ಮ ವಸ್ತ್ರಗಳನ್ನು ತಾವಾಗೆ ಬಹಿರಂಗವಾಗಿ ಕಳಚುವ ದೃಶ್ಯಗಳಿಗೆ ಉತ್ತೇಜನಕೊಡುವ ಟೀವೀ ಪ್ರದರ್ಶನಗಳಿಂದ ಎಂಥಾ ಯುದ್ಧ ನಡೆಯಬಹುದು? ಇದು ಪ್ರಶ್ನೆ. ಇತಿ-ಮಿತಿಗಳ ಗೆರೆಯನ್ನು ಆಯಾ ಸಮಾಜಗಳೇ ನಿರ್ಮಿಸಿಕೊಳ್ಳಬೇಕಷ್ಟೆ? ನಾನಿನ್ನು ಬರುತ್ತೇನೆ, ಮತ್ತೆ ಭೇಟಿಯಾಗೋಣ.

English summary
Dr. M.S. Nataraj in Maryland USA, talks about the most influential Tyrabank and the phenomenon of her daytime teleshows
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more