• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಳಚೆ ನಾಯಿ-ಕೋಟೀಶ್ವರ

By Super
|

ಭಾರತದ ಹೊರಗಿನವರು ಭಾರತೀಯ ಕಥೆಯೊಂದನ್ನು ನೋಡುವ ವಿಧಾನವೇ ಬೇರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದಿದ್ದರೆ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ಭಾರತೀಯ ನೋಡುಗರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ, ನೋಡುವಾಗ ತೆರೆದ ಮನಸ್ಸಿನಿಂದ ನೋಡಿದರೆ ಒಂದಿಷ್ಟು ಒಳ್ಳೆಯ ಗುಣಗಳೂ ಕಾಣಿಸುತ್ತವೆ. ಈ ಚಿತ್ರಕ್ಕೆ ಅಡಿಗರ 'ದಿ ವೈಟ್ ಟೈಗರ್'ಗೆ ಬಂದ ಪ್ರತಿಕ್ರಿಯೆಗಳು ಬಂದರೂ ಆಶ್ಚರ್ಯವಿಲ್ಲ.

* ಡಾ||ಮೈ.ಶ್ರೀ.ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್

ಇತ್ತೀಚೆಗೆ ಒಂದು ಸಿನೆಮಾ ಬಿಡುಗಡೆಯಾಯಿತು, ಹೆಸರು "ಸ್ಲಮ್‌ಡಾಗ್ ಮಿಲಿಯನೇರ್." ವಿಕಾಸ್ ಸ್ವರೂಪ್ ಎಂಬಾತ ಬರೆದ ಕಾದಂಬರಿಯನ್ನಾಧರಿಸಿ ಡ್ಯಾನಿ ಬಾಯ್ಲ್ ಎಂಬಾತ ನಿರ್ದೇಶಿಸಿರುವ ಒಂದು ಆಂಗ್ಲ ಚಿತ್ರ. ಕಥೆ ನಡೆಯುವುದು ಭಾರತದಲ್ಲಿ, ಮುಖ್ಯವಾಗಿ ಮುಂಬೈನಲ್ಲಿ. ಅನಿಲ್ ಕಪೂರ್ ಮತ್ತು ಇರ್ಫಾನ್ ಖಾನ್ ಇಬ್ಬರನ್ನು ಬಿಟ್ಟು ಅಂಥಾ ಹೇಳಿಕೊಳ್ಳುವ ನಟ-ನಟಿಯರಿಲ್ಲದ ಚಿತ್ರ. "ಕೌನ್ ಬನೇಗಾ ಕರೋಡ್‌ಪತಿ" ಟೀವೀ ಕಾರ್ಯಕ್ರಮ --"ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್" ಕಾರ್ಯಕ್ರಮದ ತದ್ರೂಪ, ಭಾರತದಲ್ಲಿ ಜನಪ್ರಿಯವಾದ ಕಾರ್ಯಕ್ರಮ. ಅಂಥಾ ಒಂದು ಕಾರ್ಯಕ್ರಮದಲ್ಲಿ ಕೊಳಚೆ ಪ್ರದೇಶದಲ್ಲಿ ಬೆಳೆದ ಒಬ್ಬ ಹುಡುಗ ಭಾಗವಹಿಸಿ ಗೆಲ್ಲುವ ಘಟ್ಟವನ್ನು ಮುಟ್ಟಿದಾಗ ಅವನು ಶಂಕೆಗೆ ಪಾತ್ರನಾಗುವುದು ಸಹಜ ತಾನೆ? ಅವನು ಗೆಲ್ಲುವುದು ಎಂದರೆ ಅವನು ಮೋಸಮಾಡಿರಲೇ ಬೇಕು ಎಂಬ ಅನುಮಾನ ಕಾರ್ಯಕ್ರಮದ ವ್ಯವಸ್ಥಾಪಕರಿಗೆ. ಪೋಲೀಸರ ಕೈಯಿಗೆ ಸಿಕ್ಕು ಚಿತ್ರಹಿಂಸೆಗೆ ಒಳಪಟ್ಟಾಗ ತನ್ನ ಕಥೆಯನ್ನು ನಾಯಕ (ದೇವ್ ಪಟೇಲ್) ಪೋಲೀಸ್ ಇನ್ಸ್‌ಪೆಕ್ಟರ್ (ಇಫ್ರಾನ್ ಖಾನ್) ಮುಂದೆ ಹೇಳಿಕೊಳ್ಳುವಾಗ ಕೊಳಚೆ ಪ್ರದೇಶವೊಂದು ನವನವೀನ ನಗರಿಯಾಗಿ ಪರಿವರ್ತಿತವಾಗುವ ಸಮಾನಾಂತರ ಕಥೆ ರಜತಪರದೆಯಮೇಲೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕಥಾನಾಯಕ ಮೋಸ ಮಾಡಿದ್ದನೇ, ವ್ಯವಸ್ಥಾಪಕರು ಸುಮ್ಮನೇ ಅವನ ಮೇಲೆ ದೋಷ ಹೊರಿಸಿ ಅವನಿಗೆ ದಕ್ಕಬೇಕಾಗಿದ್ದ ಹಣವನ್ನು ಕೊಡದೇ ಪಂಗನಾಮ ಹಾಕಲು ಹೊರಟಿದ್ದರೇ? ಇದರಲ್ಲಿ ಪೋಲೀಸರದ್ದು ಕೈವಾಡವಿತ್ತೇ? ಅಥವಾ ಭೂಗತ ಮಾಫಿಯಾಗಳ ಜೊತೆಯಲ್ಲಿ ಅವನೇನಾದರೋ ಬೆರೆತು ಹೋಗಿದ್ದನೇ? ಈ ಪ್ರಶ್ನೆಗಳಿಗೆ ಜವಾಬು ಬೇಕಿದ್ದರೆ, ಚಿತ್ರವನ್ನು ರಜತಪರದೆಯಮೇಲೆ ನೋಡಿ ಆನಂದಿಸಿರಿ(ಅನುಭವಿಸಿರಿ?). ಎಲ್ಲಾ ರಹಸ್ಯವನ್ನೂ ಹೇಳಿ ನಿಮ್ಮ ಮಜಾ ಕೆಡಿಸುವುದು ನನ್ನ ಉದ್ದೇಶವಲ್ಲ.

ಈ ಚಿತ್ರದ ಮೂಲಭೂತ ಉದ್ದೇಶದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ, ಒಂದಿಷ್ಟು ಅನುಮಾನ ಸಹ ಉಂಟಾಗುತ್ತದೆ. ಮುಂಬೈನಲ್ಲಿ ವಾಸಮಾಡಿದವರಿಗೆ ಗೊತ್ತಿಲ್ಲದ ರಹಸ್ಯ ಇಲ್ಲೇನಿಲ್ಲವಾದರೂ ಕೊಳಚೆಪ್ರದೇಶವನ್ನು ಬಿಡಿಸಿ ಬಿಡಿಸಿ ಇಡೀ ಜಗತ್ತಿನಮುಂದಿಟ್ಟಿರುವುದು ಸ್ವಲ್ಪ ಮುಜುಗರಕ್ಕೆ ಕಾರಣವಾಗುತ್ತದೆ. ಹಾಂಗ್‌ಕಾಂಗ್, ಬ್ಯಾಂಗ್‌ಕಾಕ್ ಮುಂತಾದ ನಗರಗಳ ಕೊಳಚೆ ಪ್ರದೇಶಗಳನ್ನು ಅನೇಕ ಪಾಶ್ಚಿಮಾತ್ಯ ಚಿತ್ರಗಳಲ್ಲಿ ನೋಡಿದವರಿಗೆ ಇದೇನೂ ಶಾಕ್ ಹೊಡೆಯುವಂಥದ್ದಲ್ಲವೆನ್ನಿ. ಆದರೂ, ಝೋಂಪಡ್‌ಪಟ್ಟಿಯಲ್ಲಿರುವ ಜನರಿಗೆ ಮಲಮೂತ್ರ ವಿಸರ್ಜನೆಗೆ ಬೇಕಾದ ಏಕಾಂತವೂ ಒಂದು ವೈಭೋಗ ಎಂಬುದು ಎಲ್ಲರಿಗೂ ತಿಳಿದದ್ದೇ ಆದರೂ ಅದನ್ನು ಪರದೆಯಮೇಲೆ ನೋಡಿದಾಗ ಆಗುವ ಪರಿಣಾಮವೇ ಬೇರೆ. ಚಿತ್ರದ ಒಂದು ದೃಶ್ಯವಂತೂ ವಾಂತಿ ಬರಿಸುತ್ತದೆ. ನಾಯಕ ಬಾಲಕನಾಗಿದ್ದಾಗಿನ ಕಥೆಯಲ್ಲಿ ಅಮಿತಾಭ್ ಬಚ್ಚನ್ ಕೊಳಚೆಪ್ರದೇಶಕ್ಕೆ ಭೇಟಿಕೊಟ್ಟಾಗ, ಅವನ ಸಹಿ ಹಾಕಿಸಿಕೊಳ್ಳಲು ಹುಡುಗ ಪಟ್ಟ ಪಾಡು ಬೀಭತ್ಸದ ಪರಮಾವಧಿ ಎನ್ನಿಸುತ್ತದೆ. ಇಂಥಾ ಚಿತ್ರಣ ಇನ್ನೆಲ್ಲೂ ನಡೆದಿಲ್ಲವೆಂದಲ್ಲ. ಹಾಗೆ ನೋಡಿದರೆ, ಶಿಂಡ್ಲರ್ಸ್ ಲಿಸ್ಟ್' ಎಂಬ ಚಿತ್ರದಲ್ಲಿ, ಜೆರ್ಮನ್ ಸೈನಿಕರ ಕಣ್‌ತಪ್ಪಿಸಿ ಜೀವ ಉಳಿಸಿಕೊಳ್ಳಲು ಯಹೂದಿ ಮಕ್ಕಳು ಸೆಪ್ಟಿಕ್ ಟ್ಯಾಂಕುಗಳಲ್ಲಿ ಧುಮುಕುವ ಪರಿಸ್ಥಿತಿ ಉಂಟಾಗುತ್ತದೆ. ಆ ದೃಶ್ಯ ಮತ್ತು ಸನ್ನಿವೇಶ ಅಲ್ಲೂ ಅಸಹ್ಯವೆನಿಸಿದರೂ ಆ ಸಂದರ್ಭ ಐತಿಹಾಸಿಕ ಸತ್ಯವಾದ್ದರಿಂದ ಅತ್ಯಂತ ಕಷ್ಟದಿಂದ ಆ ದೃಶ್ಯವನ್ನು ಮನಸ್ಸು ಒಪ್ಪಿಕೊಳ್ಳಬೇಕಾಗುತ್ತದೆ. ಸ್ಲಮ್-ಡಾಗ್ ಚಿತ್ರದ ಈ ಒಂದು ಪ್ರಸಂಗವೂ ನಡೆಯಬಹುದಾದಂಥದ್ದೇ ಇರಬಹುದು. ಆದರೂ ತೋರಿಸುವ ಔಚಿತ್ಯದ ಬಗ್ಗೆ ಚಿಂತಿಸಲೇಬೇಕಾಗುತ್ತದೆ.

ಸುಮಾರು ಮುವ್ವತ್ತೋ ನಲವತ್ತೋ ವರ್ಷಗಳ ಹಿಂದೆ, ಲೂಯಿ ಮ್ಯಾಲೆ ಎಂಬಾತ ಕೊಲ್‌ಕೊತ್ತೆಯ ಚರಂಡಿಗಳಲ್ಲಿ, ದುರ್ಗಂಧದ ಕೊಚ್ಚೆಯಲ್ಲಿ ಹಂದಿಗಳೊಡನೆ ಆಡುವ ಬಡಮಕ್ಕಳನ್ನೂ ಸ್ಮಶಾನದಲ್ಲಿ ನಡೆಯುವ ದಹನಕ್ರಿಯೆಯನ್ನೂ ಸವಿವರವಾಗಿ ಚಿತ್ರೀಕರಿಸಿ ವಿಶ್ವದ ಎಲ್ಲೆಡೆ ಪ್ರದರ್ಶಿಸಿದ್ದನೆಂಬುದು ಕೆಲವರಿಗಾದರೂ ನೆನಪಿರಬಹುದು. ಪಾಶ್ಚಿಮಾತ್ಯರು ಮದರ್ ಥೆರೇಸಾ ಅವರ ಕಾರ್ಯಕ್ಷೇತ್ರವನ್ನು ತೋರಿಸುವಾಗಲೆಲ್ಲ, ರಸ್ತೆಯಲ್ಲಿ ಇನ್ನೇನು ಸಾಯಲು ಹೊರಟಿರುವ ಕುಷ್ಠರೋಗಿಗಳನ್ನೂ ಕೊಳಚೆಯಲ್ಲಿ ಬಿದ್ದು ಒದ್ದಾಡುವ ಬೆತ್ತಲೆ ಮಕ್ಕಳನ್ನೂ ತೋರಿಸಿ "ಅಯ್ಯೋ ಭಾರತವೇ" ಎನ್ನಿಸುವಂತೆ ಮಾಡುತ್ತಿದ್ದುದೂ ನೆನಪಿರಬಹುದು. ಅದೇ ರೀತಿ ಸ್ಲಮ್‌ಡಾಗ್ ಚಿತ್ರೀಕರಣದ ದೃಶ್ಯಗಳಲ್ಲಿ ಹಲವು ಗುಪ್ತಸಂದೇಶಗಳು ಹೂತುಕೊಂಡಿವೆಯೋ ಎಂಬ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಅಲ್ಪಸಂಖ್ಯಾತರ ಮೇಲಿನ ಅನುಕಂಪದಿಂದಲೋ ಅಧಿಕಸಂಖ್ಯಾತರಮೇಲಿನ ದುರ್ಭಾವನೆಯಿಂದಲೋ, ಅಂತೂ ಬ್ರಿಟಿಷರು ಬಳಸುತ್ತಿದ್ದ ಮತ್ತೊಂದು ತಂತ್ರವೂ ಇಲ್ಲಿ ನುಸುಳಿಕೊಂಡಿದೆ. ಚಿತ್ರಕತೆಯ ಆರಂಭದಲ್ಲಿ ನಡೆಯುವ ಹಿಂದೂ-ಮುಸ್ಲಿಂ ಮತೀಯ ಗಲಭೆಯಲ್ಲಿ ಬಡ ಮುಸಲ್ಮಾನರು ಹತ್ಯೆಗೀಡಾಗುವ ಮತ್ತು ಅವರ ಮನೆಮಠಗಳು ಅಗ್ನಿಗೆ ಆಹುತಿಯಾಗುವ ದಾರುಣ ದೃಶ್ಯಗಳೂ ಇವೆ. ಇವೆಲ್ಲಾ ಕಥೆಗೆ ಆಧಾರವಾಗೆ ಇವೆಯಾದ್ದರಿಂದ ನಂಬಬಹುದಾದ ಸನ್ನಿವೇಶಗಳೇ ಎಂದು ಒಪ್ಪಿಕೊಳ್ಳುವಂತೆ ಚಿತ್ರೀಕರಿಸಿದ್ದಾರೆ.

ಈ ಚಿತ್ರದಲ್ಲಿ ಭಾರತದ ಅತಿದೊಡ್ಡ ತಿಪ್ಪೆಗಳನ್ನು ನೀವು ಹತ್ತಿರದಿಂದಲೂ ಎತ್ತರದಿಂದಲೂ ನೋಡಿ ಕಣ್ಣು ಮೂಗು ಮುಚ್ಚಿಕೊಳ್ಳಬಹುದು. ಆ ನಾರುವ ಕಸದ ರಾಶಿಗಳಲ್ಲಿ ಜೀವನ ಸಾಗಿಸುವ ದುರ್ಭಾಗ್ಯ ಮಕ್ಕಳನ್ನು ಕಂಡು ಮರುಗಬಹುದು. ಅಂಥಾ ಜಾಗದಲ್ಲಿ ಬೆಳೆಯುವ ಅನಾಥ ಮಕ್ಕಳು ಹಿಂದೂ ಮುಸ್ಲಿಮ್ ಮುಂತಾದ ಭಾವನೆಗಳಿಗೆ ಬಲಿಯಾಗುವ ಬದಲು ಹೇಗೆ ಬದುಕಬೇಕು ಎಂಬ ಪಾಠವನ್ನು ಕಲಿಯಬೇಕಾಗುತ್ತದೆ. ತಮ್ಮ ಸುತ್ತಲ ಕ್ರೌರ್ಯದ ನಡುವೆಯೂ ಅವರಲ್ಲಿ ಪರಸ್ಪರ ಪ್ರೀತಿ-ವಾತ್ಸಲ್ಯಗಳು ಬೆಳೆಯುವ ಸಾಧ್ಯತೆಯನ್ನು ಸೂಚಿಸಿ, ನಿರ್ದೇಶಕರು ತಮ್ಮ ಮಾನವತಾವಾದವನ್ನು ಮೆರೆದಿದ್ದಾರೆ. ಕೊಳಚೆ ಪ್ರದೇಶದ ಮಕ್ಕಳಿಗೆ ಆಸೆ ತೋರಿಸಿ ಕೊಂಡೊಯ್ದು ಅವರನ್ನು ಅಂಗವಿಕಲರನ್ನಾಗಿಸಿ ಭಿಕ್ಷೆಗೆ ಕೂರಿಸಿ ಅವರನ್ನು ಲಾಭದಾಯಕ ಭಿಕ್ಷುಕರನ್ನಾಗಿಸುವ ಅಮಾನುಷತೆ, ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮುಂಬೈಯಿನ ಕೆಂಪುದೀಪದ ಬೀದಿಗಳಲ್ಲಿ ಕಾಮುಕರಿಗೆ ಒದಗಿಸುವ ಸಮಾಜಘಾತುಕತೆ, ಇವುಗಳನ್ನು ತೋರಿಸುವ ನೆಪದಲ್ಲಿ ಮುಂಬೈ ಮಹಾನಗರಿಯ ಸೂಳೆಗೇರಿಗಳನ್ನೂ ಚಿತ್ರದ ನಿರ್ದೇಶಕರು ಪರಿಚಯಮಾಡಿಸುತ್ತಾರೆ. ಆದರೆ, ಚಿತ್ರದಲ್ಲಿ ಅಶ್ಲೀಲಕ್ಕೆ ಎಡೆಕೊಟ್ಟಿಲ್ಲವೆಂಬುದು ಸಮಾಧಾನದ ಸಂಗತಿ. ನಮ್ಮಲ್ಲಿರುವ ದೋಷಗಳನ್ನು ಬೇರೆಯವರು ಬೆಟ್ಟುಮಾಡಿ ತೋರಿದಾಗ, ಕೆಟ್ಟಮುಖಕ್ಕೆ ಕನ್ನಡಿ ಹಿಡಿದಾಗ ಆಗುವ ನೋವಂತೂ ಆಗೇ ಆಗುತ್ತದೆ. ಚಿತ್ರದಲ್ಲಿ ತೋರಿಸಿರುವ ಪೋಲೀಸರ ಕ್ರೌರ್ಯವೇ ಆಗಲೀ ಬಡತನದಿಂದ ಉದ್ಭವಿಸುವ ಮೋಸ, ತಟವಟಗಳೆ ಆಗಲಿ, ಎಲ್ಲ ಸಹಜವೆನ್ನಿಸುತ್ತವೆ. ಅವೆಲ್ಲ ಸುಳ್ಳಾಗಿರಬಾರದೇಕೆ ಎಂಬ ಮೌನ ಪ್ರಾರ್ಥನೆಯೊಂದಿಗೇ ನೋಡಿದರೂ ಕರುಳು ಚುರಕ್ ಎನ್ನುವುದಂತೂ ನಿಜ.

ಹಾಗಾದರೆ, ಈ ಚಿತ್ರದ ಉದ್ದೇಶವಾದರೂ ಏನು? ಕೊಳಚೆಯನ್ನು ತೋರುದು ಮಾತ್ರವೇ? ಅಲ್ಲ, ಖಂಡಿತಾ ಅಲ್ಲ. ಹೀನರಿಗೂ ಕನಸುಗಳಿರುತ್ತವೆ, ದೀನರಿಗೂ ಅವಕಾಶಗಳು ಸಿಕ್ಕಬಹುದು. ಲಕ್ಷದಲ್ಲೋ ಕೋಟಿಯಲ್ಲೋ ಒಬ್ಬರು ಎಲ್ಲಾ ಅಡೆತಡೆಗಳನ್ನೂ ದಾಟಿ ಮೇಲೇರಬಹುದು. ಅವರಲ್ಲಿಯೂ ಭ್ರಾತೃಪ್ರೇಮ ಮಿಂಚಬಹುದು. ತಮ್ಮಂತೆ ಅನಾಥರಾದವರಬಗ್ಗೆ ಅನುಕಂಪವೂ ಹುಟ್ಟಬಹುದು. ಒಂದೇ ತಾಯಿಯಿಂದ ಹುಟ್ಟಿದ ಅಣ್ಣತಮ್ಮಂದಿರ ನಡುವೆ ಅಜಗಜಾಂತರ ಇರಬಹುದು. ಪುಟ್ಟಹುಡುಗರಲ್ಲೂ ದಿಟ್ಟತನವಿರಬಹುದು. ಅವರನ್ನೂ ಪ್ರೀತಿ ಕಾಡಬಹುದು. ದಲಿತರ ಕನಸುಗಳ ಹಿಂದೆ ಅಡಗಿರುವ ಆಶೆ-ಆಕಾಂಕ್ಷೆಗಳು, ತ್ಯಾಗ ಭೋಗಗಳನ್ನೆಲ್ಲಾ ಅರೆದು ಮಾಡಿದ ಮಸಾಲೆಯನ್ನು ಒಳ್ಳೆಯ ಛಾಯಾಗ್ರಹಣ ಮತ್ತು ದ್ವನಿಯ ಸಹಾಯದಿಂದ ಬೆಸೆದಾಗ ಒಂದು ನೋಡಬಹುದಾದ ಚಿತ್ರ ತಯಾರಾಗುತ್ತದೆ. ಇದು ಬಾಲೀವುಡ್ ಛಾಯೆಯ ಆಂಗ್ಲೀವುಡ್ ಚಿತ್ರ. ಹೌದು, ಭಾರತದಲ್ಲಿ ಬರೀ ಕೊಳಚೇ ಪ್ರದೇಶಗಳೇ ಅಲ್ಲ, ಇನ್ನೂ ಕೆಲವು ನೋಡಲು ಯೋಗ್ಯವಾದ ಸ್ಥಳಗಳುಂಟು ಎಂದು ತೋರಿಸಲು ತಾಜ್ ಮಹಲ್ಲನ್ನೂ ಒಂದೆರಡು ನಿಮಿಷ ಮಿಂಚಿಸಿರುವುದನ್ನು ಗಮನಿಸಬೇಕು. (ನೇಮ್ ಸೇಕ್ ಚಿತ್ರದಲ್ಲಿ ತಾಜ್ ಮಹಲ್ಲನ್ನು ತೋರಿದಷ್ಟು ಉತ್ತಮ ಭಂಗಿಗಳಲ್ಲಿ ಇಲ್ಲಿ ತೋರಿಸಿಲ್ಲ ಎನ್ನುವುದು ಬೇರೆ ಮಾತು, ಬಿಡಿ.) ನೋಡುವಾಗ ತೆರೆದ ಮನಸ್ಸಿನಿಂದ ನೋಡಿದರೆ ಒಂದಿಷ್ಟು ಒಳ್ಳೆಯ ಗುಣಗಳು ಕಾಣಿಸುತ್ತವೆ. ಚಿತ್ರ ಮುಗಿಯುವ ವೇಳೆಗೆ, ಕೊಳಚೆಯ ಪ್ರದೇಶ ಮಾಯವಾಗಿ ಅಲ್ಲೊಂದು ಆಧುನಿಕ ನಗರಿ ಹುಟ್ಟಿಕೊಳ್ಳುವ ಪರಿವರ್ತನೆಯೂ ಗಮನಾರ್ಹ.

ಭಾರತದ ಹೊರಗಿನವರು ಭಾರತೀಯ ಕಥೆಯೊಂದನ್ನು ನೋಡುವ ವಿಧಾನವೇ ಬೇರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದಿದ್ದರೆ ಭಾರತೀಯ ನೋಡುಗರಿಗೆ ಸ್ವಲ್ಪ ಕಷ್ಟವಾಗಬಹುದು. ಚಿತ್ರಕಥೆಗೆ ಆಧಾರವಾದ ಕಾದಂಬರಿಯನ್ನು ನಾನು ಓದಿಲ್ಲವಾಗಿ, ಚಿತ್ರ ಎಷ್ಟರಮಟ್ಟಿಗೆ ಕಾದಂಬರಿಗೆ ನ್ಯಾಯ ಒದಗಿಸಿದೆಯೋ ಹೇಳುವುದು ಕಷ್ಟ. ಇದ್ದಕ್ಕಿದ್ದಂತೆ, ಮುಂದುವರೆದ ದೇಶಗಳು ಭಾರತದದತ್ತ ನೋಡುವ ದಿನಗಳು ಬಂದಮೇಲೆ, ಆ ದೇಶ ಆರ್ಥಿಕವಾಗಿ ಮುಂದುವರೆಯುತ್ತಿರುವ ಸುದ್ದಿಗಳ ನಡುವೆ, ಅಲ್ಲಿನ ಘೋರಸತ್ಯಗಳನ್ನು ನೆನಪಿಸಲು ಈ ಚಿತ್ರ ಬಿಡುಗಡೆಯಾಗಿದ್ದರೂ ಆಗಿರಬಹುದು. ಅರವಿಂದ ಅಡಿಗರ ಬಿಳಿಯ ಹುಲಿ'ಯ ಬಗ್ಗೆ ಬಂದ ಆಕ್ಷೇಪಣೆಗಳೆಲ್ಲವೂ ಈ ಚಿತ್ರದ ವಿಷಯದಲ್ಲೂ ಭಾರತೀಯರಿಂದ ಬಂದರೆ ಆಶ್ಚರ್ಯವೇನಿಲ್ಲ. ಭಾರತೀಯರು ಹೊರುವ ಬ್ಯಾಗೇಜಿನ ಭಾರ ಪಾಶ್ಚಿಮಾತ್ಯರಿಗಿಲ್ಲ. ಅವರಿಗೆ ಯಾವ ಮುಲಾಜೂ ಇಲ್ಲ.

English summary
Movie review : Slum Dog Millionaire by Dr. M.S. Nataraj. Movie directed by Danny Boyle. Dev Patel, Anil Kapoor and Irfan Khan are in the lead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more