ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಿತೆರೆಯ ಮೇಲೆ ಯುದ್ಧ ಮತ್ತು ಗಾಂಧಾರದ ಗಾಳಿಪಟ

By ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್
|
Google Oneindia Kannada News


Tom Hanks and Julia Roberts in Charlie Wilsons War ಕ್ರಿಸ್ಮಸ್ ಮತ್ತು ಹೊಸವರ್ಷದ ನಡುವೆ ಮತ್ತು ಅವುಗಳ ಸುತ್ತಮುತ್ತ ರಜಾದಿನಗಳಲ್ಲಿ ಪಾರ್ಟಿ-ಸಿನಿಮಾ-ವಿಶ್ರಾಂತಿಗಳ ಭರಾಟೆ ಎಲ್ಲರಿಗೂ ಇದ್ದದ್ದೇ. ಪ್ರತಿದಿನ ಸೂರ್ಯ ಹುಟ್ಟಿದಮೇಲೆ ನಿಧಾನಕ್ಕೆ ಎದ್ದು, ಮಧ್ಯರಾತ್ರಿಯಾದಮೇಲೆ ನಿಧಾನಕ್ಕೆ ಮಲಗುವುದು, ಎರಡೆರಡು ಡೋಜ್ ಹೆಚ್ಚಾಗಿ ಕಾಫಿ ಕುಡಿದು, ಉದ್ದುದ್ದನೇ ವಾಕಿಂಗ್ ಹೋಗುವುದು, ಅರ್ಧಕ್ಕೆ ನಿಲ್ಲಿಸಿದ್ದ ಒಂದೆರಡು ಪುಸ್ತಕಗಳನ್ನೋದಿ ಮುಗಿಸುವುದು, ನಾಲ್ಕಾರು ಸಿನಿಮಾಗಳನ್ನು ನೋಡುವುದು, -- ಇವೆಲ್ಲ ಮುಗಿದು ರಜಾ ದಿನಗಳು ಕಳೆದೇ ಹೋದುವು. ಎಷ್ಟೇ ನಿಗಾ ವಹಿಸಿದರೂ ಪ್ಯಾಂಟನ್ನು ಏರಿಸಿ ಸೊಂಟದ ಗುಂಡಿ ಹಾಕುವಾಗ ಆಗುವ ಬಿಗಿತ. ತೂಕದಲ್ಲಿ ಮೂರು ನಾಲ್ಕು ಪೌಂಡುಗಳಾದರೂ ಹೆಚ್ಚಾಗಿರಬಹುಂದೆಂಬ ಹೆದರಿಕೆಯಿಂದಾಗಿ ತೂಕಸೂಚಿಯಮೇಲೆ ನಿಲ್ಲಲು ಅಳುಕು. ಹೊಸವರ್ಷದ ಮಸೂದೆಗಳೆಲ್ಲ ನೀರಿನಲ್ಲಿ ಮಾಡಿದ ಹೋಮ. ಮತ್ತೆ ಬೆಳಗಾಗೆದ್ದು ಕೂಲಿಗೆ ಹೊರಡಲೇಬೇಕು. ಮತ್ತದೇ ಹಳಸಲು ಆಫೀಸಿನ ದಿನಚರಿ. ಕೂಳಿಗೆ ಮೂಲ ಕೂಲಿ. ಇನ್ನೂ ಎಷ್ಟು ದಿನ ಸವೆಸಬೇಕೋ, ಅಂತೂ 2008ರ ಕೆಲಸದ ಚಕ್ರಕ್ಕೆ ಸಿಕ್ಕಿಕೊಂಡಾಗಿದೆ.

ರಜೆಯಲ್ಲಿ ನೋಡಿದ ಹಲವು ಚಿತ್ರಗಳಲ್ಲಿ ಮನಸ್ಸಿನಲ್ಲಿ ಉಳಿದವು ನಾಲಕ್ಕು: ಚಾರ್ಲಿ ವಿಲ್ಸನ್ಸ್ ವಾರ್ (ಚಾರ್ಲಿ ವಿಲ್ಸನ್ನನ ಯುದ್ಧ); ಕೈಟ್ ರನ್ನರ್ಸ್ (ಗಾಳಿಪಟ); ಗ್ರೇಟ್ ಡಿಬೇಟರ್ಸ್ (ಚರ್ಚಾಪಟುಗಳು); ಮತ್ತು ಅಟೋನ್‌ಮೆಂಟ್ (ಪ್ರಾಯಶ್ಚಿತ್ತ). ಅವುಗಳಲ್ಲೂ ಮೊದಲನೇ ಎರಡು ಚಿತ್ರಗಳು ಒಂದಕ್ಕೊಂದು ಹೊಸೆದುಕೊಂಡಿರುವಂತೆ ಭಾಸವಾಗುತ್ತದೆ. ಏಷ್ಯಾಖಂಡದ ರಾಜಕೀಯದಲ್ಲಿ ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳಿಗಿರುವ ಆಸಕ್ತಿಯ ಕಾರಣದಿಂದ ಗಾಂಧಾರದ ಚರಿತ್ರೆ ಮತ್ತು ಭೂಗೋಳಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಅದೇ ಕಾರಣಕ್ಕೆ ಈ ಎರಡು ಚಲನಚಿತ್ರಗಳಿಗೆ ಒಂದು ವೈಶಿಷ್ಟ್ಯವಿದೆ. ಮಹಾಭಾರತದ ಗಾಂಧಾರವೇ ಕಾಂದಹಾರ್. ಅದರ ಸುತ್ತಮುತ್ತಲ ಪ್ರದೇಶವೇ ಇಂದಿನ ಆಫ್‌ಘಾನಿಸ್ತಾನ್. ಎತ್ತೆತ್ತರದ ಬುದ್ಧನ ವಿಗ್ರಹಗಳ ಅವಶೇಷವಿರುವ ಈ ನಾಡು ಒಂದಾನೊಂದು ಕಾಲದಲ್ಲಿ ಬೌದ್ಧಧರ್ಮದ ಅನುಯಾಯಿಗಳ ಬೀಡಾಗಿತ್ತು. ಆದರೆ ಇಂದು ಆ ವಿಗ್ರಹಗಳನ್ನು ಸ್ಫೋಟಿಸಿ ಪರಧರ್ಮದ ಬಗ್ಗೆ ಅಸಹಿಷ್ಣುತೆ ಮತ್ತು ಧಿಕ್ಕಾರವನ್ನು ವ್ಯಕ್ತಪಡಿಸುತ್ತಿರುವ ತಾಲಿಬಾನಿಗಳ ನಾಡು. ಅಫೀಮನ್ನು ಬಿಟ್ಟರೆ ಅಲ್ಲೇನೂ ಬೆಳೆಯುವಂತೆ ಕಾಣುತ್ತಿಲ್ಲ ಈ ಬೆಟ್ಟ-ಗುಡ್ಡಗಳ ನಾಡಿನಲ್ಲಿ. ಅಂತೂ ಆಫ್‌ಘಾನಿಸ್ತಾನದ ಭೀಕರ ಚರಿತ್ರೆಯ ಹಿನ್ನೆಲೆಯಲ್ಲಿ ಹೆಣೆಯಲ್ಪಟ್ಟ ಈ ಎರಡು ಚಲನಚಿತ್ರಗಳು ಹಲವಾರು ಕಾರಣಗಳಿಂದ ಮನಮುಟ್ಟುತ್ತವೆ.

ಇವೆರಡೂ ಬೇರೆ ಬೇರೆ ಸ್ವತಂತ್ರ ಚಿತ್ರಗಳಾದರೂ 'ಕೈಟ್ ರನ್ನರ್ಸ್' ಕತೆ ಮಧ್ಯಭಾಗವನ್ನು ಮುಟ್ಟುತ್ತಿರುವಾಗಲೇ 'ಚಾರ್ಲಿ ವಿಲ್ಸನ್ನನ ಯುದ್ಧ'ದ ಕತೆ ಪ್ರಾರಂಭವಾಗುತ್ತದೆ. ಒಂದು ಸೋವಿಯತ್ ಆಕ್ರಮಣದ ಪ್ರಾರಂಭವನ್ನು ಚಿತ್ರಿಸಿದರೆ ಮತ್ತೊಂದು ಅದರ ಅಂತ್ಯವನ್ನು ಚಿತ್ರಿಸುತ್ತದೆ. ಮೊದಲನೇ ಚಿತ್ರದಲ್ಲಿ ಆಫ್‌ಘಾನಿಸ್ತಾನದಲ್ಲಿ ಹಾರಲಾಗದೇ ಗೋತ ಹೊಡೆದ ಗಾಳೀಪಟ ಅಮೇರಿಕದ ಸ್ವತಂತ್ರ ಬಯಲಿನಲ್ಲಿ ಹಾರಾಡುತ್ತದೆ. ಎರಡನೆಯ ಚಿತ್ರದಲ್ಲಿ ಅಮೇರಿಕಾ ಹೇಗೆ ಪಾಕಿಸ್ತಾನದ ಸಹಾಯದಿಂದ ಮುಜಾಹಿದ್ದೀನ್ ಯೋಧರನ್ನು ಬಳಸಿಕೊಂಡು ಸೋವಿಯತ್ ಸೈನ್ಯಕ್ಕೆ ಮಣ್ಣು ಮುಕ್ಕಿಸಿತು ಎಂಬುದರ ಒಂದು ಸೂಕ್ಷ್ಮ ಬಣ್ಣನೆ ಇದೆ. 'ಚಾರ್ಲಿ ವಿಲ್ಸನ್ನನ ಯುದ್ಧ' ಜಾರ್ಜ್ ಕ್ರೈಲ್ ಎಂಬಾತನ ಪ್ರಸಿದ್ಧ ಪುಸ್ತಕವನ್ನು ಆಧಾರಿಸಿ ಮೈಕ್ ನಿಕೋಲ್ಸ್ ಎಂಬಾತನ ನಿರ್ದೇಶನದಲ್ಲಿ ತೆಗೆದ ಚಿತ್ರ. 'ಕೈಟ್ ರನ್ನರ್ಸ್' ಆಫ್‌ಘಾನಿಸ್ತಾನದ ಪ್ರಸಿದ್ಧ ಬರಹಗಾರ ಖಾಲಿದ್ ಹೊಸೇನ್ ಎಂಬಾತ ಬರೆದ ಕಾದಂಬರಿಯನ್ನಾಧರಿಸಿ ಮಾರ್ಕ್ ಫಾರ್‍ಸ್ಟರ್ ಎಂಬಾತನ ನಿರ್ದೇಶನದಲ್ಲಿ ತಯಾರಾದ ಚಿತ್ರ.

ಅಮೇರಿಕದ ಒಬ್ಬ ಲಂಪಟ ರಾಜಕಾರಣಿ, ಲಂಗು ಲಗಾಮಿಲ್ಲದ ಬೇಸತ್ತ ಒಬ್ಬ ಗೂಢಚಾರ, ಮತ್ತು ರಾಜಕೀಯ, ಧರ್ಮ ಹಾಗೂ ಸಮಾಜ ಇವುಗಳಲ್ಲಿ ಆಸಕ್ತಿಯುಳ್ಳ ಒಬ್ಬಳು ಶ್ರೀಮಂತ ಮಹಿಳೆ, ಈ ಮೂರು ಜನರ ಆಸಕ್ತಿ, ಉತ್ಸಾಹ, ಸಾಹಸ ಮತ್ತು ಪ್ರಭಾವದಿಂದ ವಿದೇಶಾಂಗನೀತಿಯೇ ಬದಲಾಗುತ್ತದೆ. ಅಮೇರಿಕ ಪಾಕೀಸ್ತಾನ ಮತ್ತು ಆಫ್‌ಘಾನಿಸ್ತಾನಗಳಿಗೆ ಕೊಡುತ್ತಿದ್ದ ಯುದ್ಧಸಹಾಯ-ನಿಧಿ ಕೆಲವೇ ಮಿಲಿಯನ್ ಡಾಲರ್‍ಗಳಿಂದ ಬಿಲಿಯನ್‌ಗಟ್ಟಲೆ ಆಗಿ ಬೆಳೆಯುತ್ತದೆ. ಅತ್ಯಂತ ಶಕ್ತಿಶಾಲಿಯಾದ ಸೋವಿಯತ್ ವಿಮಾನಗಳನ್ನು ಬಡಿದುರುಳಿಸಲು ಬೇಕಾದ ಹೆಗಲು-ಕ್ಷಿಪಣಿಗಳನ್ನು ಪಾಕೀಸ್ತಾನದ ಸೈನಿಕರಿಗೂ ಆಫ್‌ಘಾನಿಸ್ತಾನದ ಯೋಧರಿಗೂ ಕೊಟ್ಟು ಕಮ್ಯೂನಿಷ್ಟರನ್ನು ಬಗ್ಗುಬಡಿಯಲು ಕಾರಣ ಟೆಕ್ಸಸ್ ಪ್ರಾಂತ್ಯದ ಒಬ್ಬ ಅಪ್ರಸಿದ್ಧ (ಹಾಗೂ ಕುಪ್ರಸಿದ್ಧ) ಕಾಂಗ್ರೆಸ್‌ಮನ್ ಎಂದರೆ ನಂಬಬೇಕೋ ಬೇಡವೋ ಎಂಬ ಅನುಮಾನ ಬರುವಷ್ಟು ವಿಡಂಬನಾತ್ಮಕವಾಗಿದೆ. ಮಾನವೀಯ ಹೋರಾಟಗಳ ನಡುವೆ ಕಮ್ಯೂನಿಸ್ಟ್, ಕ್ಯಾಪಿಟಲಿಸ್ಟ್ ಮತ್ತು ತಾಲಿಬಾನಿಗಳ ನಡುವಿನ ಪರಸ್ಪರ ವೈಪರೀತ್ಯ ಮತ್ತು ವಿಪರ್ಯಾಸಗಳ ಮಥನವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಟಾಮ್ ಹ್ಯಾಂಕ್ಸ್ ಮತ್ತು ಜೂಲಿಯಾ ರಾಬರ್ಟ್ಸ್ ಮನೋಜ್ಞವಾಗಿ ನಟಿಸಿದ್ದಾರೆ.

The Kite Runners is the movie based on novel by Khaled Hosseiniಕೈಟ್ ರನ್ನರ್ಸ್ ಚಿತ್ರ ಒಂದು ಮಾನವೀಯ ಮೌಲ್ಯಗಳ ಸುತ್ತ ಹೆಣೆಯಲ್ಪಟ್ಟ ಕತೆ. ಒಬ್ಬ ಆಫ್ಘನ್ ಲೇಖಕನ ಕಾದಂಬರಿಯನ್ನಾಧರಿಸಿದ್ದು. ಬಾಲ್ಯದ ಇಬ್ಬರು ಮಿತ್ರರ ಮನೋಜ್ಞ ಕಥೆ ಇಲ್ಲಿದೆ. ಅವರು ಮಿತ್ರರು ಮಾತ್ರವಲ್ಲ, ಅಣ್ಣ ತಮ್ಮಂದಿರು, ಅಂದರೆ ಒಂದೇ ತಂದೆಯ ಆದರೆ ಬೇರೆ ಬೇರೆ ತಾಯಂದಿರಿಗೆ ಹುಟ್ಟಿದವರು, ಆದರೆ ಅದು ಅವರಿಗೆ ಗೊತ್ತಿರುವುದಿಲ್ಲ. ಸೋವಿಯತ್ ಆಕ್ರಮಣದ ಸಂದರ್ಭದಲ್ಲಿ ಬೇರಾದ ಈ ಸೋದರರು ಮತ್ತೆಂದೂ ಪರಸ್ಪರ ಮಿಲನವಾಗದ ದುರಂತವನ್ನು ಮನಮುಟ್ಟುವಂತೆ ಬೆಳೆಸಲಾಗಿದೆ. ಸಿನಿಮಾ ನೋಡುವುದಾಗಲೀ ಗೀತ-ನೃತ್ಯಗಳಲ್ಲಿ ಪಾಲ್ಗೊಳ್ಳುವುದಾಗಲೀ ಸಮಾಜಕ್ಕೆ ಒಳ್ಳೆಯದಲ್ಲವೆಂದು ಆಧುನಿಕ ವಿಚಾರಗಳನ್ನೆಲ್ಲ ಬಹಿಷ್ಕಾರಹಾಕುವುದರ ಜೊತೆಗೆ ಗಾಳಿಪಟಗಳನ್ನು ಹಾರಿಸುವ ಮಕ್ಕಳ ಆಟವನ್ನೂ ಧಿಕ್ಕರಿಸುವ ಒಂದು ಭಯಾನಕ ಸಂಸ್ಕೃತಿಯ ಚಿತ್ರ ಈ ನಾಡಿನಲ್ಲಿ ಬೆಳೆಯುತ್ತದೆ. ಅಷ್ಟೇ ಅಲ್ಲ, ಸಾಕರ್ ಪಂದ್ಯಗಳ ನಡುವೆ ನಡೆಯುವ ಹಾಫ್ ಟೈಮ್ ಎಂಟರ್‍ಟೈನ್ಮೆಂಟ್ ಏನು ಗೊತ್ತೆ? ಗಂಡನಿಗೆ ಮೋಸಮಾಡಿ ಪರಪುರುಷನೊಂದಿಗೆ ಸಂಬಂಧ ಬೆಳೆಸಿಕೊಂಡಳೆಂಬ ಕಾರಣದಿಂದ, ಮದುವೆಯ ಪಾವಿತ್ರ್ಯವನ್ನು ಹಾಳುಮಾಡಿದ ಆ ಹೆಣ್ಣನ್ನೂ ಅವಳನ್ನು ಅನೈತಿಕವಾಗಿ ಭೋಗಿಸಿದನೆಂಬ ಕಾರಣದಿಂದ ಅವನನ್ನೂ ಮೈದಾನದ ಮಧ್ಯೆ ಹೆಡೆಮುರಿ ಕಟ್ಟಿತಂದುರುಳಿಸಿ ತೆಂಗಿನಕಾಯಿದಪ್ಪದ ಕಲ್ಲುಗಳಿಂದ ಬಹಿರಂಗವಾಗಿ ಚೆಚ್ಚಿ ಕೊಲ್ಲುವ ಕ್ರೂರ ಶಿಕ್ಷೆ. ತಲೆಗಳು ಪುಡಿಯಾದಮೇಲೆ ಅವರ ದೇಹಗಳನ್ನು ಕಾಯಿ-ಮೂಟೆಯನ್ನು ಎತ್ತಿ ಎಸೆಯುವಂತೆ ಲಾರಿಯೊಳಕ್ಕೆಸೆದು ಕೊಂಡೊಯ್ದ ನಂತರ ಸಾಕರ್ ಆಟದ ಪುನರಾರಂಭ.

ಇಂಥಾ ಅಮಾನುಷ ಹಿಂಸೆಯನ್ನು ಸಾವಿರಾರು ವರ್ಷಗಳ ಹಿಂದೆ ಆಚರಣೆಯಲ್ಲಿದ್ದ ಧರ್ಮದ ಹೆಸರಿನಲ್ಲಿ ಇಂದಿಗೂ ಅದು ತಕ್ಕ ನ್ಯಾಯಪದ್ಧತಿ ಎಂದು ತಾಲಿಬಾನಿಗಳು ನಿರ್ಧರಿಸಿದ್ದಾರೆ. ಆದರೆ ಇಂಥಾ ಹಿಂಸಾತ್ಮಕ ನ್ಯಾಯವನ್ನು ಇತರರಮೇಲೆ ಹೇರುವ ಹಲವು ನಾಯಕರು ಎಳೆಯವಯಸ್ಸಿನ ಬಾಲಕರನ್ನು ಹೆಣ್ಣುಗಳಂತೆ ಪರಿವರ್ತಿಸಿ ತಮ್ಮ ವಿಕೃತಕಾಮಕ್ಕೆ ಬಲಿಮಾಡಿಕೊಳ್ಳುವ ವಿಪರ್ಯಾಸವನ್ನೂ ಇಲ್ಲಿ ನಿರ್ದಾಕ್ಷಿಣ್ಯವಾಗಿ ಚಿತ್ರಿಸಲಾಗಿದೆ. ಕಥಾನಾಯಕನಿಗಾಗಿ ಯಾವ ಬಲಿದಾನವನ್ನೂ ಮಾಡಲು ತಯಾರಾಗಿದ್ದ ಅವನ ಬಲತಮ್ಮ ಅವನಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಪುಂಡ ಕ್ರೂರಿಗಳ ಕೈಯಲ್ಲಿ ಅತ್ಯಾಚಾರಕ್ಕೆ ಈಡಾಗಿ ಮೌನದಲ್ಲಿ ಸಹಿಸಿಕೊಳ್ಳುವ ದೃಶ್ಯ ಮತ್ತೆ ಮತ್ತೆ ಬಂದು ಕಾಡುತ್ತದೆ. ಇವೆಲ್ಲ ಮುಖ್ಯ ಕಥೆಗೆ ಪೋಷಕವಾಗಿ ಬರುವ ದೃಶ್ಯಗಳಾದರೂ ಕಥಾನಾಯಕ ಬಿಟ್ಟುಬಂದ ತನ್ನ ತಾಯ್ನಾಡಿನಲ್ಲಿ ಆಗಿರುವ ಬದಲಾವಣೆಗಳನ್ನು ಮನೋಜ್ಞವಾಗಿ ವರ್ಣಿಸುತ್ತವೆ. ತನ್ನ ತಮ್ಮನನ್ನು ಕಾಣಲಾಗದಿದ್ದರೂ ಅವನ ಮಗನನ್ನು ಅನಾಥಾಲಯದಿಂದ ಬಿಡಿಸಿಕೊಂಡು ಅಮೇರಿಕಕ್ಕೆ ಕರೆತರುವಲ್ಲಿ ಕಥೆ ಪರ್ಯವಸಾನವಾಗುತ್ತದೆ. ಚಿತ್ರಹಿಂಸೆಗೊಳಗಾಗಿ ನೊಂದು ಬೆಂದು ಮಂಕುಬಡಿದಿದ್ದ ಅನಾಥ ಬಾಲಕ ಆಫ್‌ಘಾನಿಸ್ತಾನದ ಪ್ರತಿನಿಧಿ. ಮತ್ತೊಮ್ಮೆ ಅವನು ಗಾಳಿಪಟ ಹಾರಿಸುವ ಕ್ರೀಡೆಯಲ್ಲಿ ತೊಡಗುವುದೇ ಆ ದೇಶದ ಸ್ವಾತಂತ್ರ್ಯದ ಕುರುಹಾಗುತ್ತದೆ.

ಒಟ್ಟಿನಲ್ಲಿ, ಹಿಂದೆ ಸೋವಿಯತ್ ಒಕ್ಕೂಟದ ದುಸ್ಸಾಹಸದಿಂದ ಆಫ್‌ಘಾನಿಸ್ತಾನದಲ್ಲಿ ಪ್ರಾರಂಭವಾದ ಶೀತಲಯುದ್ಧ, ಮುಂದೆ ಅಮೇರಿಕದಮೇಲೆ ನಡೆದ 9-11ರ ಧಾಳಿಗೆ ನಾಂದಿಯಾಗುತ್ತದೆ. ಎಲ್ಲಿಂದಲೋ ಶುರುವಾಗಿ ಎಲ್ಲೆಲ್ಲೋ ಹೋಗಿ ಇರಾಕಿನಮೇಲೆ ಅಮೇರಿಕದ ಆಕ್ರಮಣವಾಗುತ್ತದೆ. ಐದೋ ಹತ್ತೋ ಮಿಲಿಯನ್ ಡಾಲರಿನ ವಹಿವಾಟು ಬಿಲಿಯನ್ ಗಟ್ಟಲೆ ಆಗಿ ಈಗ ಟ್ರಿಲಿಯನ್ ಆದರೂ ಮುಗಿದಿಲ್ಲ. ಈ ವಿಚಾರಗಳು ಮೇಲೆ ಪ್ರಸ್ತಾಪಿಸಿದ ಚಲನಚಿತ್ರಗಳಲ್ಲಿ ಚರ್ಚಿತವಾಗಿಲ್ಲದಿದ್ದರೂ ಅಲ್ಲಿ ಕುಳಿತು ನೋಡುತ್ತಿದ್ದಾಗ ಇಂದಿನ ಪರಿಸ್ಥಿತಿಗೂ ಅಂದು ನಡೆದ ವಿಷಯಗಳಿಗೂ ಇರುವ ನೇರ ಸಂಬಂಧವನ್ನು ಕುರಿತು ನನ್ನ ಮನಸ್ಸು ಚಿಂತಿಸುತ್ತಿತ್ತು. ವಿನಾಶಕ್ಕೆ ಶುರು ಎಲ್ಲಿದೆ? ಧರ್ಮಾಂಧತೆಯಲ್ಲೇ? ಸ್ಪರ್ಧಾತ್ಮಕ ವಿದೇಶಾಂಗ ನೀತಿಗಳಲ್ಲೇ? ಕಮ್ಯೂನಿಸಂ ಮತ್ತು ಕ್ಯಾಪಿಟಲಿಸಂಗಳ ನಡುವೆ ಇರುವ ಪೈಪೋಟಿಗಳಲ್ಲೇ? ಶಕ್ತಿಶಾಲೀ ದೇಶಗಳ ಆಕ್ರಮಣಶೀಲತೆಯಲ್ಲೇ? ಚರಿತ್ರೆ ನಮ್ಮೆದುರಿಗೇ ನಡೆಯುತ್ತಿದೆ, ಪ್ರಪಂಚದ ಭೂಗೋಳವೂ ನಮ್ಮೆದುರಿಗೇ ಬದಲಾಗುತ್ತಿದೆ. ಸೋವಿಯತ್ ಒಕ್ಕೂಟ ಒಡೆದು ಹೋಗಿದೆ. ಒಮ್ಮೆ ಬಡಿದಾಡುತ್ತಿದ್ದ ಯೂರೋಪ್ ಒಂದಾಗಿದೆ. 2008ರಲ್ಲಿ ಯಾವ ದೇಶ ಒಡೆಯುತ್ತದೋ ಯಾವ ದೇಶಗಳು ಕೂಡಿಕೊಳ್ಳುತ್ತವೋ ಕಾದು ನೋಡೋಣ ಎಂಬ ತಿಳಿಯದ ಭವಿಷ್ಯದ ಬಗ್ಗೆ ಚಿಂತಿಸುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X