• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂಬತ್ತು ಹನ್ನೊಂದರ ಒಂದು ಸ್ಮರಣೆ

By Super
|

ಕಳೆದ ಏಳು ವರ್ಷಗಳ ಅವಧಿಯಲ್ಲಿ ಅಮೆರಿಕಾ ದೇಶವು ಭಯೋತ್ಪಾದಕರ ಹಾವಳಿಯಿಂದ ಮುಕ್ತವಾಗಿದೆ. ಇದಕ್ಕೆ ಕಾರಣ ಬದಲಾದ ರಾಜಕೀಯ ಧೋರಣೆಗಳಾ? ಅಥವಾ ಆಂತರಿಕ ಭದ್ರತಾ ವ್ಯವಸ್ಥೆಗಳು ಬಿಗಿಯಾದದ್ದಾ? ಅಥವಾ ಅದು ದೈವನಿಯಾಮಕವೋ? ಅಥವಾ ಲಲ್ ಬಿಫೋರ್ ದಿ ಸ್ಟಾರಮ್ ಅಂತಾರಲ್ಲಾ ಅದೋ..ಬಲ್ಲವರಾರು? ನೀವು ಯೋಚನಾಮಗ್ನರಾಗುತ್ತಿರುವಾಗ, ನಮ್ಮ ಅಂಕಣಕಾರರು ಕರಾಳನೆರಳಿನಗೋಪುರ ಹತ್ತಿ ಕವನವೊಂದನ್ನು ಬಿಡಿಸಿ ತಂದಿದ್ದಾರೆ, ಸಮಸ್ತರಿಗಾಗಿ!

ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್

ಸೆಪ್ಟೆಂಬರ್ ಹನ್ನೊಂದು ಬಂತೆಂದರೆ ನೆನಪು ನಮ್ಮನು 2001ನೇ ಇಸವಿಗೆ ಕೊಂಡೊಯ್ಯುತ್ತದೆ. ಅಮೇರಿಕದ ವೈರಿಗಳು ಈ ನಾಡಿನ ಎದೆಗೆ ನೇರ ಗುರಿಯಿಟ್ಟು ಹೊಡೆದ ಕರಾಳದಿನವದು. ಅಮೇರಿಕದ ಸಿರಿಯ ಕೇಂದ್ರವೆನಿಸಿದ ಜೋಡಿ ಕಂಬಗಳನ್ನು, ಹೈಜ್ಯಾಕ್ ಮಾಡಿದ ವಿಮಾನಗಳನ್ನೇ ಕ್ಷಿಪಣಿಯಂತೆ ಉಪಯೋಗಿಸಿ ಕೆಡವಿದ ದಿನವದು. ಅಮೇರಿಕದ ರಕ್ಷಣಾಕೇಂದ್ರವಾದ "ಪಂಚಭುಜ"ವನ್ನು (ಪೆಂಟಗನ್) ಅಷ್ಟೇ ನಿರಾಯಾಸದಿಂದ ಮತ್ತೊಂದು ವಿಮಾನ-ಕ್ಷಿಪಣಿ ಭೇದಿಸಿದ ದಿನ ಸಹ ಅದೇ.

ಅಷ್ಟೇ ಅಲ್ಲ, ಅಂದೇ ಅಮೇರಿಕದ ಆಡಳಿತ ಕೇಂದ್ರವಾದ ಕ್ಯಾಪಿಟಲ್ ಸೌಧವನ್ನೂ ಮತ್ತು ಅಮೇರಿಕದ ಅಧಿಕಾರಕೇಂದ್ರವಾದ ಶ್ವೇತಭವನವನ್ನೂ ಹೊಡೆದುರುಳಿಸುವ ದುಸ್ಸಾಹಸವೂ ನಡೆದಿತ್ತು, ಸುದೈವದಿಂದ ವೈರಿಗಳ ಸಂಚು ಕೈಗೂಡದೇ ಹೋಯಿತು. ಕಳೆದೇಳು ವರ್ಷಗಳಲ್ಲಿ ಉಗ್ರರ ಒಂದೇಒಂದು ಆಕ್ರಮಣವೂ ಆಗದಂತೆ ನೋಡಿಕೊಂಡಿರುವುದು ಅಮೇರಿಕದ ಹೆಗ್ಗಳಿಕೆಯೋ ದೈವಾನುಗ್ರಹವೋ ಎಂಬ ಪ್ರಶ್ನೆಯ ಉತ್ತರ ನೀವು ಡೆಮೊಕ್ರ್ಯಾಟ್ ಪಕ್ಷದವರೋ ರಿಪಬ್ಲಿಕನ್ನರೋ ಅನ್ನುವದನ್ನು ಅವಲಂಬಿಸಿದೆ!

ಇತ್ತೀಚಿಗೆ ನಡೆದ ಅಕ್ಕ ಸಮ್ಮೇಳನದ ಕವಿಗೋಷ್ಠಿಯಲ್ಲಿ ಓದಲೆಂದು ಎರಡು ಮೂರು ಕವನಗಳನ್ನು ಬರೆದಿಟ್ಟುಕೊಂಡಿದ್ದೆ. ಅವುಗಳಲ್ಲಿ ಎರಡು ಲಘು ಧಾಟಿಯಲ್ಲೂ ಮತ್ತೊಂದು ಗಂಭೀರ ಧಾಟಿಯಲ್ಲೂ ಇದ್ದವು. ಸಾಧಾರಣವಾಗಿ ಲಘು ಧಾಟಿಯ ಕವನಗಳನ್ನು ಓದುವುದೇ ರೂಢಿ ಮತ್ತು ಸುಲಭದ ಮಾರ್ಗ. ಗಂಭೀರ ಧಾಟಿಯ ಕವನವನ್ನು ಕೇಳುಗರು ಮೆಚ್ಚುವರೋ ಇಲ್ಲವೋ ಎಂಬ ಸಂಶಯವಂತೂ ಕವಿಯಾದವನಿಗೆ ಇದ್ದೇ ಇರುತ್ತದೆ. ಹೀಗಾಗಿ, ಲಘುಕವನಗಳನ್ನೇ ಓದಿದೆ.

ಅಂದು ಅಲ್ಲಿ ಓದದಿದ್ದರೂ ಈ 9-11ರ ವಾರ್ಷಿಕದ ಸಂದರ್ಭದಲ್ಲಿ ಜಾಲತರಂಗದ ಓದುಗರೊಂದಿಗೆ ಈ ಕವನವನ್ನು ಹಂಚಿಕೊಳ್ಳುವ ಮನಸ್ಸಾಗಿದೆ. ಈ ಕವನಕ್ಕೆ ಸ್ಫೂರ್ತಿ, ಗೆಳೆಯ ಹರಿ ಸರ್ವೋತ್ತಮ ಕಳುಹಿಸಿದ ಒಂದು ವಿ ಅಂಚೆ. ಆತ ಸಂಗ್ರಹಿಸಿ ಕಳುಹಿಸಿದ ಸುದ್ದಿ ಮತ್ತು ಚಿತ್ರಗಳ ವಿವರಣೆಯಿಂದ ನನಗೆ ಸೆಪ್ಟೆಂಬರ್ ಹನ್ನೊಂದರ ದುರಂತ ಮತ್ತೆ ಕಣ್ಮುಂದೆ ಬಂತು. ಸಿರಿಕೇಂದ್ರ ಉರುಳಿದಾಗ ಅಳಿದುಳಿದ ಉಕ್ಕಿನ ತುಣುಕುಗಳನ್ನು ಹೆಕ್ಕಿ ತೆಗೆದು ಕರಗಿಸಿ ಅಮೇರಿಕಾ ಒಂದು ಯುದ್ಧನೌಕೆಯನ್ನು ತಯಾರಿಸಿದೆ. ಅದರ ಹೆಸರು ಯು ಎಸ್ ಎಸ್ ನ್ಯೂಯಾರ್ಕ್ ಎಂದು. ವಿಶ್ವದ ನಾನಾ ಮೂಲೆಗಳಲ್ಲಿ ಅಡಗಿರಬಹುದಾದ ಉಗ್ರರನ್ನು ಅಟ್ಟಿಸಿ ಕೊಲ್ಲುವ ಉದ್ದೇಶದಿಂದಲೇ ಈ ನೌಕೆಯು ಜನ್ಮ ತಾಳಿದೆ. ಈ ಸುದ್ದಿಯನ್ನೋದಿ, ಏಕೋ ಇದ್ದಕ್ಕಿದ್ದಂತೆ ಮಹಾಭಾರತದ ಶಕುನಿಯ ನೆನಪು ನನಗೆ ಬಂತು. ಈ ಯುದ್ಧನೌಕೆಯೂ ಶಕುನಿಯ ದಾಳದಂತೆ ಎಂದು ನನಗೆ ಅನ್ನಿಸಿತು. ಇಗೋ ಓದಿ ಕವನ.

ಶಕುನಿಯ ದಾಳ

ಒಂಬತ್ತು-ಹನ್ನೊಂದರಂದು

ಅನಿರೀಕ್ಷಿತ ಆಘಾತಕ್ಕೆ ನಡುಗಿ,

ಬೆಂಕಿಯುಂಡೆಯ ಶಾಖವುಂಡು

ಕರುಗುತ್ತಾ ತನ್ನೊಳಕ್ಕೇ ಕುಸಿದು ಉಡುಗಿ,

ನಿಜಮಾಡಿಬಿಟ್ಟೆ ನಾಣ್ನುಡಿಯ ಮಾತು

"ಅತ್ಯುನ್ನತಿಯೆ ಪತನಕ್ಕೆ ಹೇತು!" (1)

ಬೆಳೆದಷ್ಟು ಬೆಳೆದಷ್ಟು ಎತ್ತರ,

ಸಹಸ್ರಾಕ್ಷನಾಗಿ ಹುಡುಕುತ್ತಿರಬೇಕು

ಸುತ್ತಲೂ ವೈರಿಗಳ ಪೂರ್ವೋತ್ತರ.

ವಿಶ್ವಸಿರಿಕೇಂದ್ರ ಆಗಿದ್ದೇನೋ ದಿಟ,

ಅವಳಿ-ಜವಳಿಗಳಾಗಿ ಹುಟ್ಟಿ ಬೆಳೆದು

ನೀವಾಡಿದ್ದೆ ಆಟ ಹೂಡಿದ್ದೆ ಹೂಟ? (2)

ಒಮ್ಮೆ ಕರಗಿದಮೇಲೆ ಆ ಸೊಕ್ಕು

ಮಿಕ್ಕದ್ದು ಬರಿ ಒಂದಷ್ಟು ಉಕ್ಕು.

ಉರಿದುಳಿದ ನಿಮ್ಮ ಅಸ್ಥಿಪಂಜರಕ್ಕು

ಏಳುವರ್ಷಗಳಲ್ಲೆ ಪುನರ್ಜನ್ಮ ಸಿಕ್ಕು,

ಹುಟ್ಟಿದೆ ನೋಡು ಮತ್ತೊಂದು ಯುದ್ಧನೌಕೆ.

ಹೊಡೆತಕ್ಕೆ ಕಾಯುತ್ತ ಕೂರದಿರಿ ಜೋಕೆ! (3)

ಎಲೆ ಯುದ್ಧನೌಕೆ, ಯು ಎಸ್ ಎಸ್ ನ್ಯೂಯಾರ್ಕೆ,

ವೈರಿಗಳ ಹುಡುಕಲು ತಡವಿನ್ನೇಕೆ?

ಉಗ್ರರ ಹಿಡಿಯಲು ಬೇಡ ಹಿಂಜರಿಕೆ,

ಕುರುನಾಡಬಿಟ್ಟು ನೀ ನಡೆ ಗಾಂಧಾರಕೆ.

ಸತ್ತು ಮತ್ತೆ ಚಿಗುರಿದ ಮೂಳೆಯ ದಾಳ

ಮುಗಿಸಲಿಲ್ಲವೇ ಕೌರವೇಂದ್ರನ ಬಾಳ? (4)

ಸಿರಿಕೇಂದ್ರದುರಿಯಿಂದ ಹುಟ್ಟಿಬಂದೀ ಅಸ್ತ್ರ,

ಆಗಿಬಿಡಲಿ ವೈರಿಗಳ ಸುಡುವ ಮಾರಕಾಸ್ತ್ರ.

ಉರುಳಿಸು ಉಗ್ರರನು ಮತ್ತೆ ತಲೆಯೆತ್ತದಂತೆ,

ಕಿತ್ತೊಗೆ ಬೇರುಗಳ ಮತ್ತೆಂದೂ ಚಿಗುರದಂತೆ.

ದಾಳಗಳನುರುಳಿಸುತ ಗರಗಳನು ಕೇಳು

ಒಂಬತ್ತು-ಹನ್ನೊಂದು ಬೀಳದಿದ್ದರೆ ಕೇಳು! (5)

ಟಿಪ್ಪಣಿಗಳು:

ಸೆಪ್ಟೆಂಬರ್ ಹನ್ನೊಂದು, ಎರಡುಸಾವಿರದ ಒಂದರಂದು ಸಿರಿಕೇಂದ್ರದ ಜೋಡಿ ಕಂಬಗಳು ಉಗ್ರರ ವಿಮಾನದ ಬಡಿತಕೆ ಸಿಕ್ಕು ಕುಸಿದನಂತರ, ಅಲ್ಲಿ ಕರಗಿದ ಉಕ್ಕನ್ನು ಬಳಸಿ ಯು ಎಸ್ ಎಸ್ ನ್ಯೂಯಾರ್ಕ್ ಎಂಬ ಯುದ್ಧನೌಕೆಯೊಂದನ್ನು ಕಟ್ಟಿ ಸಿದ್ಧಗೊಳಿಸಲಾಗಿದೆ. ವಿಶ್ವದಾದ್ಯಂತ ಉಗ್ರರ ವಿರುದ್ಧ ಧಾಳಿ ನಡೆಸುವ ಸಲುವಾಗೇ ಕಟ್ಟಿದ ಈ ನೌಕೆಯನ್ನು ಇಲ್ಲಿ ಶಕುನಿಯ ದಾಳಕ್ಕೆ ಹೋಲಿಸಲಾಗಿದೆ.

ಕೌರವನ ದ್ವೇಷಕ್ಕೆ ಪಾತ್ರರಾದ ಶಕುನಿಯ ಸಮಸ್ತ ಕುಟುಂಬದವರನ್ನು ಸೆರೆಯಲ್ಲಿಟ್ಟು ಒಬ್ಬರಿಗಾಗುವಷ್ಟು ಮಾತ್ರ ಆಹಾರವನ್ನು ಕೊಡುತ್ತಿದ್ದರಂತೆ. ಅವರೆಲ್ಲಾ ಆಲೋಚಿಸಿ, ತಮ್ಮೆಲ್ಲರ ಆಹಾರವನ್ನು ಶೇಖರಿಸಿ ಶಕುನಿಗೆ ಕೊಟ್ಟು ಅವನನ್ನು ಉಳಿಸಿ ತಾವು ಬಲಿಯಾದರಂತೆ. ತಮ್ಮ ಪ್ರಾಣಗಳನ್ನು ತ್ಯಾಗಮಾಡಿದ ಅವರೆಲ್ಲರ ಆಶಯವೇನಾಗಿತ್ತೆಂದರೆ, ಉಳಿದುಕೊಂಡ ಶಕುನಿ ಏನಾದರೂ ಕುತಂತ್ರಮಾಡಿ ಕೌರವರನ್ನು ನಿರ್ನಾಮಗೊಳಿಸಲಿ ಎಂದು. ಶಕುನಿ ತನ್ನ ಅಣ್ಣತಮ್ಮಂದಿರ ಮೂಳೆಯಿಂದ ಮಾಡಿದ ದಾಳಗಳನ್ನು ಪಗಡೆಯ ಜೂಜಿನಾಟಕ್ಕೆ ಉಪಯೋಗಿಸಿದನಂತೆ. ಅದರಲ್ಲಿ ಅವನಿಗೆ ಕೇಳಿದ ಗರ ಬೀಳುತ್ತಿತ್ತಂತೆ.

ಅದೇರೀತಿ, ನಾಗರೀಕ ದೇಶಗಳ ವೈರಿಗಳಾದ ಉಗ್ರರನ್ನು ಕೊಲ್ಲಲು ಸಿರಿಕೇಂದ್ರದ ಜೋಡಿ ಕಂಬಗಳಲ್ಲಿ ಕರಗಿದ ಉಕ್ಕು, ಅಲ್ಲಿ ಬಲಿಯಾದ ಮೂರು ಸಾವಿರ ಜನರ ಮೂಳೆಯಿಂದ ಬಲಗೊಂಡು ಈ ಯುದ್ಧನೌಕೆಯ ರೂಪತಾಳಿದೆ ಎಂಬುದೇ ಇಲ್ಲಿನ ಪ್ರತಿಮೆ.

ಕುರುನಾಡು = ಕುರ್ಡ್ ಜನರಿರುವ ಇಂದಿನ ಇರಾಕ್

ಗಾಂಧಾರ = ಕಾಂದಹಾರ್, ಮಹಾಭಾರತದ ಗಾಂಧಾರಿ ಮತ್ತು ಆಕೆಯ ತಮ್ಮ ಶಕುನಿಯ ನಾಡು, ಇಂದಿನ ಆಫ್ಘಾನಿಸ್ಥಾನ.

9/11 ದಾಳಿಯ ನೆನಪಿಗಾಗಿ ಅಮೆರಿಕದ ಯುದ್ಧ ನೌಕೆ

English summary
Recollections of 9/11 : Terrorist have not and or not able to penetrate US during the last seven years. The reasons for this "uneasy peace" depends upon either Democrats are Republicans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X