ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷ, ಆದರ್ಶ ಟಿವಿ ಪತ್ರಕರ್ತನ ಸಾವು

By Super
|
Google Oneindia Kannada News

ಸಾವು ನೋವು ವಂಚನೆ ಅತ್ಯಾಚಾರ ಬಲಾತ್ಕಾರ ಮುಂತಾದ ಅಪರಾತಪರಾ ಸುದ್ದಿಸ್ಫೋಟಗಳ ನೆಪದಲ್ಲಿ ನಮ್ಮ ಟಿವಿ ವಾಹಿನಿಗಳು ಅರೆಬೆಂದ ಮಾಹಿತಿಯನ್ನು ಬಿತ್ತರಿಸುತ್ತಿವೆ ಎಂಬ ಆರೋಪದ ಬೆನ್ನಲ್ಲೆ ಅಮೆರಿಕಾದ ಟಿವಿ ಪತ್ರಕರ್ತ ಟಿಮ್ ರಸರ್ಟ್ ಸಾವಿನ ಸುದ್ದಿ ದಟ್ಸ್‌ಕನ್ನಡ ಸುದ್ದಿ ಮನೆ ತಲುಪಿದೆ. ದಕ್ಷತೆಕೆ, ವೃತ್ತಿಪರತೆಗೆ ಮತ್ತು ಕರಾರುವಾಕ್ಕು ಸಂಭಾಷಣೆಗೆ ಲೋಕಪ್ರಸಿದ್ದಿಯಾಗಿದ್ದ ಎನ್‌ಬಿಸಿ ಸುದ್ದಿ ವಾಹಿನಿಯ "ಮೀಟ್ ದಿ ಪ್ರೆಸ್" ಮಾಂತ್ರಿಕನಿಗೆ ಕನ್ನಡ ಅಕ್ಷರಗಳ ಮೂಲಕ ವಿದಾಯ ಹೇಳುವ ಸಮಯವಿದು.

ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

Tim Russert"ಜಾತಸ್ಯ ಮರಣಮ್ ಧೃವಮ್" (ಹುಟ್ಟಿದಮೇಲೆ ಸಾವು ಖಚಿತ) ಎಂಬ ಗೀತಾವಾಕ್ಯವನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇರುತ್ತೇವೆ. ಅಮೇರಿಕದಲ್ಲಿ ಒಂದು ನಾಣ್ನುಡಿ ಇದೆ, "ದೇರ್ ಆರ್ ಓನ್ಲಿ ಟು ಥಿಂಗ್ಸ್ ಸರ್ಟನ್ ಇನ್ ಲೈಫ್, ಡೆಥ್ ಎಂಡ್ ಟ್ಯಾಕ್ಸಸ್" (ಜೀವನದಲ್ಲಿ ಎರಡೇ ನಿಶ್ಚಿತ, ಮೃತ್ಯು ಮತ್ತು ತೆರಿಗೆ). ಈ ಮಾತನ್ನು ತೆರಿಗೆಯಬಗ್ಗೆ ಲಘುವಾಗಿ ಮಾತಾಡಲು ಉಪಯೋಗಿಸಿದರೂ ಪೂರ್ವಾರ್ಧದಲ್ಲಿ ಅಡಗಿರುವ ಸತ್ಯವನ್ನು ಮನಗಾಣಿಸಲೂ ಉಪಯೋಗಿಸುತ್ತಾರೆ.

ಕೆಲವಾರಗಳ ಕೆಳಗೆ ನಮ್ಮ ಬಂಧುವೊಬ್ಬರು, ಮುಂಬೈನಿಂದ ಬೆಂಗಳೂರಿಗೆ ಪಯಣ ಬೆಳೆಸಿ, ಹೊರದೇಶದಿಂದ ಬಂದಿದ್ದ ಸೋದರ ಮತ್ತು ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಹತ್ತಿರದ ಬಂಧುಗಳನ್ನೆಲ್ಲ ಒಂದು ಸಂತೋಷಕೂಟದಲ್ಲಿ ಭೇಟಿಮಾಡಿ ಎಲ್ಲರೊಂದಿಗೆ ಖುಷಿಯಲ್ಲಿ ಕಳೆದು ಮುಂಬೈಗೆ ಹಿಂದಿರುಗಿದರು. ಅದು ಕಳೆದು ಒಂದೆರಡೇ ದಿನಗಳಲ್ಲಿ, ಆತ ರಾತ್ರಿ ಮಲಗಿದವರು ಬೆಳಿಗ್ಗೆ ಏಳಲೇ ಇಲ್ಲವೆಂದು ಪಕ್ಕದ ಮನೆಯವರಿಂದ ವರದಿ ಬಂತು. ಎಂಬತ್ತು ವಯಸ್ಸು ಮೀರಿದ್ದರೂ ಪ್ರತಿನಿತ್ಯ ಬೆಳಿಗ್ಗೆ ನಾಲಕ್ಕಕ್ಕೇ ಎದ್ದು, ಮುಂಬೈ ನಗರದ ಜನಸಂದಣಿಯ ಚಟುವಟಿಕೆ ಪ್ರಾರಂಭವಾಗುವ ಮೊದಲೇ ಕಾಲ್ನಡಿಗೆಯಲ್ಲಿ ದೀರ್ಘವಾದ ವಾಯುವಿವಾರವನ್ನು ಮುಗಿಸಿಕೊಂಡು, ಹೊರಗೆ ಬಿದ್ದಿರುತ್ತಿದ್ದ ಪತ್ರಿಕೆಯನ್ನೂ ಬಾಗಿಲಿನಲ್ಲಿಟ್ಟಿರುತ್ತಿದ್ದ ಹಾಲಿನ ಬಾಟಲಿಯನ್ನೂ ಎತ್ತಿಕೊಂಡು ಒಳಗೆ ಹೋಗುವುದು ಅವರ ದಿನಚರಿ.

ಅದನ್ನು ಅಕ್ಕಪಕ್ಕದವರು ನೋಡಿ ಇವರು ಆರೋಗ್ಯದಲ್ಲಿರುವರು ಎಂಬ ತೀರ್ಮಾನಕ್ಕೆ ಬರುತ್ತಿದ್ದರಂತೆ. ಪತ್ನಿಯನ್ನು ಕೆಲ ವರ್ಷಗಳ ಹಿಂದೆ ಕಳೆದುಕೊಂಡಿದ್ದ ಇವರು, ಪಕ್ಕದ ಮನೆಯವರಿಗೆ ತಮ್ಮ ಮನೆಯ ಒಂದು ಬೀಗದಕೈಯನ್ನು ಕೊಟ್ಟು, "ಹಾಲಿನ ಬಾಟಲಿ ಮತ್ತು ವೃತ್ತಪತ್ರಿಕೆ ಹೊರಗೇ ಬಿದ್ದಿದ್ದರೆ ಬಾಗಿಲು ತೆಗೆದು ನೋಡಿ" ಎಂಬ ಸೂಚನೆಯನ್ನೂ ಕೊಟ್ಟಿದ್ದರಂತೆ. ಹೀಗಾಗಿ, ಅಂದು ಬೆಳಿಗ್ಗೆ ಪಕ್ಕದಮನೆಯಾಕೆ ಬಾಗಿಲು ತೆರೆದು ಅವರು ಪ್ರಜ್ಞಾಹೀನರಾಗಿ ಹಾಸಿಗೆಯಬಳಿ ಕುಸಿದಿರುವುದನ್ನು ನೋಡಿ ಅವರನ್ನು ಆಸ್ಪತ್ರೆಗೆ ಒಯ್ದದ್ದು ನೆಪಮಾತ್ರ. ಜವರಾಯ ಅವರ ಅಸುವನ್ನು ಹಲವು ಘಂಟೆಗಳ ಮುನ್ನ ಕೊಂಡೊಯ್ದಾಗಿತ್ತು. ಬಂದರೆ ಹೀಗೆ ಬರಬೇಕು ನೋಡಿ ಸಾವು. ಖಾಯಿಲೆಯಿಂದ ನರಳಲಿಲ್ಲ, ನೋವನ್ನು ಅನುಭವಿಸಲಿಲ್ಲ, ಇತರರಿಗೆ ಭಾರವಾಗಲಿಲ್ಲ, ಕೊನೆಯದಿನದವರೆಗೂ ಸ್ವತಂತ್ರ ಜೀವನವನ್ನು ನಡೆಸಿ, ಯಾವ ಸದ್ದುಗದ್ದಲವೂ ಇಲ್ಲದೇ, ವಿದಾಯ ಹೇಳಿಬಿಟ್ಟರು!

ಇದನ್ನೇ ನಮ್ಮವರು, "ಅನಾಯಾಸೇನ ಮರಣಮ್, ವಿನಾ ದೈನ್ಯೇನ ಜೀವನಮ್" (ಆಯಾಸವಿಲ್ಲದ ಮರಣ, ದೈನ್ಯವಿಲ್ಲದ ಜೀವನ) ಎಂದು ಕರೆಯುತ್ತಾರೆ. ನಮ್ಮ ಹಿರಿಯರು "ಅದೆರಡನ್ನು ಕೊಟ್ಟು ಕಾಪಾಡು ದೇವರೇ" ಎಂದು ಕೇಳಿಕೊಳ್ಳುತ್ತಿದ್ದರೇ ವಿನಾ, ಹಣವನ್ನಲ್ಲ, ಕಾಸನ್ನಲ್ಲ, ಬಂಗಲೆಯನ್ನಲ್ಲ.

ಹಠಾತ್ತನೆ ಬಾಗಿಲುತಟ್ಟುವ ಮೃತ್ಯುವಿನ ಬಗ್ಗೆ ಚಿಂತಿಸಲು ಇನ್ನೂ ಒಂದು ಕಾರಣ, ನಮ್ಮ ಭಾನುವಾರದ ಸಖ, "ಮೀಟ್ ದ ಪ್ರೆಸ್" ಕಾರ್ಯಕ್ರಮದ ರೂವಾರಿ ಟಿಮ್ ರಸೆರ್ಟನ ಅಕಾಲ ಮರಣ. ಯಾರನ್ನೇ ಸಂದರ್ಶಿಸಲಿ, ತನ್ನ ಹೋಂ ವರ್ಕ್ ಮಾಡದೇ ಬರುವ ದುರಭ್ಯಾಸ ಆತನಿಗಿರಲಿಲ್ಲ. ಖಡಾಖಂಡಿತವಾಗಿ ನುಡಿದರೂ, ಮನಸ್ಸನ್ನು ನೋಯಿಸದಂತೆ ಜಾಗರೂಕನಾಗಿ, ಸೌಜನ್ಯವನ್ನು ಮೀರದೇ, ಪ್ರಶ್ನೆಗಳ ಬಾಣ ಬಿಡುವುದರಲ್ಲಿ ಅವನು ನಿಸ್ಸೀಮ. ಹಿಂದೆಂದೋ ಹೇಳಿದ ಮಾತನ್ನು ಅಕ್ಷರಶಃ ಕ್ವೋಟ್ ಮಾಡಿ ನೆನಪಿಸಿ, "ಈಗೇನನ್ನುತ್ತೀರಿ" ಎಂದು ನಯವಾಗಿ ಕಾಲೆಳೆಯುತ್ತಿದ್ದ. ಎರಡೂ ಪಕ್ಷದವರನ್ನೂ ಒಟ್ಟೊಟ್ಟಿಗೇ ಸೇರಿಸಿ ವಿರೋಧಾಭಿಪ್ರಾಯಗಳಿಗೆ ಸಮಾನಾವಕಾಶ ಕಲ್ಪಿಸುವುದರಲ್ಲಿ ಅವನು ಘಟ್ಟಿಗನಾಗಿದ್ದ. ಒಳ್ಳೆಯ ತಂದೆ, ಒಳ್ಳೆಯ ಗಂಡ, ಉತ್ತಮದರ್ಜೆಯ ಪತ್ರಿಕೋದ್ಯಮಿ, ಬಡತನದಿಂದ ಮೇಲೆಬಂದು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಉನ್ನತಸ್ಥಾನವನ್ನು ಗಳಿಸಿಕೊಂಡಿದ್ದ.

ಮಗನು ಕಾಲೇಜು ಮುಗಿಸಿದ ಸಂಭ್ರಮವನ್ನು ಆಚರಿಸಲು ಸಂಸಾರಸಮೇತ ಇಟಲಿಗೆ ಹೋಗಿ ಅಲ್ಲಿ ಧರ್ಮಗುರು ಪೋಪರ ದರ್ಶನವನ್ನೂ ಮಾಡಿ ಹಿಂದಿರುಗಿದ್ದ. ತನಗೆ ಅತ್ಯಂತ ಪ್ರಿಯವಾದ ಕಾರ್ಯಕ್ರಮದ ಧ್ವನಿಚಿತ್ರಣ ನಡೆಯುತ್ತಿದ್ದಾಗಲೇ , ಸೈನಿಕ ಯುದ್ಧದಲ್ಲಿ ಹೋರಾಡುತ್ತಾ ಮಡಿದು ವೀರಸ್ವರ್ಗ ಸೇರುವಂತೆ ಕೊನೆಯುಸಿರೆಳೆದುಬಿಟ್ಟ. ಇನ್ನೂ ಐವತ್ತೆಂಟರ ಯುವಕ, ನೋಡಲು ಥೇಟ್ "ಟೆಡ್ಡಿ ಬೇರ್"ನಂಥಾ ದೊಡ್ಡ ಮುಖ, ಸ್ವಲ್ಪ ಧಡೂತಿ ಕಾಯ, ನಗುತ್ತಾ ಇರುವಾಗ ಕ್ಲೋಸ್ ಅಪ್ ತೆಗೆದರೆ ಇಡೀ ತೆರೆಯನ್ನೇ ಮುಚ್ಚುವಂಥಾ ವಿಶಾಲ ಹಸನ್ಮುಖ! ಕೈಯಲ್ಲೊಂದು ಬಿಳಿ ಹಲಗೆ ಬಳಪ ಹಿಡಿದು ಕುಮಾರವ್ಯಾಸನನ್ನು ಅಣಕಿಸಲೋ ಎಂಬಂತೆ "ಹಲಗೆ ಬಳಪವ ಪಿಡಿದ ಒಂದಗ್ಗಳಿಕೆ" ಮಾಡುತ್ತಿದ್ದ ಅವನ ವೈಖರಿ ಮನಸ್ಸಿಗೆ ತುಂಬಾ ಆಪ್ಯಾಯಮಾನವಾಗಿರುತ್ತಿತ್ತು.

ಮೃತ್ಯು ಎಂದು, ಹೇಗೆ ಯಾವರೀತಿ ಬರುವುದೋ ಎಂಬುದರಬಗ್ಗೆ ಅವನಿಗೆ ಮುನ್ನೆಚ್ಚರಿಕೆ ಇತ್ತೇ? ಕೆಲದಿನಗಳಹಿಂದೆ "ಸ್ಟ್ರೆಸ್ ಟೆಸ್ಟ್" ಮಾಡಿಸಿಕೊಂಡಿದ್ದನಂತೆ. ರಕ್ತದ ಒತ್ತಡವನ್ನು ನಿಯಂತ್ರಿಸುವ, ಕೊಲೆಸ್ಟರಾಲನ್ನು ಕಡಿಮೆ ಮಾಡುವ ಔಷಧಗಳನ್ನು ತೆಗೆದುಕೊಳ್ಳುವುದರ ಜೊತೆಗೆ ನಿತ್ಯ ಆಸ್ಪರಿನ್ ಬೇರೆ, ಮತ್ತು ಕಸರತ್ತೂ ಮಾಡುತ್ತಿದ್ದನಂತೆ. ಮೃತ್ಯುವನ್ನು ದೂರವಿಡಲು ಮತ್ತೇನನ್ನು ತಾನೇ ಮಾಡಬಹುದಿತ್ತು. ಆತನ ವೃದ್ಧ ತಂದೆ ತನ್ನ ಮಗನ ಸಾವನ್ನು ಕೊನೆಗಾಲದಲ್ಲಿ ಕಾಣುವ ದಾರುಣ ಪರಿಸ್ಥಿತಿ ಬರಬಾರದಿತ್ತು.

ಹೀಗೆ ಹಠಾತ್ತಾಗಿ ಬರುವ ಮೃತ್ಯು ಒಂದು ಬಗೆ. ಕ್ಯಾನ್ಸರ್ ನಂಥಾ ಖಾಯಿಲೆ ಬಡಿದು, ವೈದ್ಯರು "ನಿನಗಿನ್ನು ಕೆಲವೇ ತಿಂಗಳುಗಳು ಬಾಕಿ ಇವೆ ಅಂತಲೋ, ಇನ್ನು ಕೆಲವೇ ದಿನಗಳು ಬಾಕಿ ಇವೆ ಅಂತಲೋ ತೀರ್ಪು ಕೊಟ್ಟಾಗ ಪರಿಸ್ಥಿತಿ ಇನ್ನೆಷ್ಟು ಸಂಕಟಕರವಾಗಿರಬಹುದು? ನಾನು ಕೆಲಸ ಮಾಡುವ ಅಣು ನಿಯಂತ್ರಣ ಸಂಸ್ಥೆಯ ಕಮೀಷನರುಗಳ ಪೈಕಿ ಒಬ್ಬರಾಗಿದ್ದ ಮೆಗ್ಗಾಫೆಗನ್, ಚರ್ಮದ ಕಾರ್ಸಿನೋಮ ಬಂದು ಅವನ ಆಯು ಇನ್ನು ಕೆಲವೇ ಮಾಸಗಳು ಎಂಬ ಕಟುಸತ್ಯ ಗೊತ್ತಾದಮೇಲೂ, ಆತ ಕೆಲಸಕ್ಕೆ ಬರುವುದನ್ನು ನಿಲ್ಲಿಸಲಿಲ್ಲ. ಥಿರಪಿಯ ದಿನಗಳನ್ನು ಬಿಟ್ಟರೆ ಮಿಕ್ಕ ದಿನಗಳು ಕೆಲಸಕ್ಕೆ ಹಾಜರ್. ಯಾವ ಮೀಟಿಂಗನ್ನೂ ತಪ್ಪಿಸಿಕೊಳ್ಳುತ್ತಲಿರಲಿಲ್ಲ. ಆರೋಗ್ಯವಂತರಿಗಿಂತ ಹಲವಾರು ಘಂಟೆ ಹೆಚ್ಚು ದುಡಿಯುತ್ತಿದ್ದ. ಸಂಸ್ಥೆಯ ಎಲ್ಲ ಕೆಲಸಗಾರರನ್ನೂ ಸಭೆಗೆ ಕರೆದು ತನ್ನ ಚರಮ-ಭಾಷಣವನ್ನು ಮಾಡಿ ಗದ್ಗದಕಂಠದಿಂದ ಸಂಸ್ಥೆಯ ವಿಜ್ಞಾನಿಗಳನ್ನೂ ತಂತ್ರಜ್ಞರನ್ನು ಮನಸಾರೆ ವಂದಿಸಿ ವಿದಾಯಹೇಳಿ, ಸಾಯುವ ಹಿಂದಿನದಿನವೂ ತನ್ನ ಕಛೇರಿಗೆ ಬಂದಿದ್ದ ಎಂದರೆ, "ಎಲೆ ಮೃತ್ಯುವೇ, ಹೋಗೋಲೆಲೆ ನಾನು ನಿನಗೆ ಹೆದರುವವನಲ್ಲ" ಎಂದು ಘೋಷಿಸಿದಹಾಗೇ ತಾನೆ?

ಮೊನ್ನೆ, ವಾಷಿಂಗ್‌ಟನ್ ಪೋಸ್ಟಿನಲ್ಲಿ "ಪೊಯೆಟ್ಸ್ ಛಾಯ್ಸ್" ವಿಭಾಗದಲ್ಲಿ ಬರೆಯುವ ಮೇರೀ ಕಾರ್ ತನ್ನ ಕವಿ-ಮಿತ್ರ ಜೇಸನ್ ಶಿಂಡರ್ ಬಗ್ಗೆ ಬರೆದು, ಅವನ ಕೊನೆಯ ಕವನ "ಒನ್ ಡೇ ಐ ವಿಲ್ ಡೈ"ಅನ್ನು ಉದಹರಿಸಿದ್ದಳು. ಮೃತ್ಯುವಿನ ವಿಷಯ ತಲೆಯನ್ನು ಕಾಡುತ್ತಿದ್ದಾಗ, ಏಕೋ ಆ ಕವಿತೆ ತುಂಬ ಅರ್ಥಗರ್ಭಿತ ಎನ್ನಿಸಿತು. ತನ್ನ ಐವತ್ತೆರಡನೇ ವಯಸ್ಸಿನಲ್ಲಿ ಲುಕೀಮಿಯಾಕ್ಕೆ ತುತ್ತಾದ ಈ ಕವಿ ತನ್ನ ಮೃತ್ಯುವನ್ನು ಎದರು ನೋಡುತ್ತಿದ್ದಾಗ ಬರೆದ ಈ ಕವನದ ಭಾವಾನುವಾದವನ್ನು ಜಾಲತರಂಗದ ಓದುಗರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಕವನ ಭಾಷಾಂತರವಾದರೂ, ಕನ್ನಡಕ್ಕೆ ಸಹಜವೆನ್ನಿಸುವಂತೆ ಪರಿವರ್ತಿಸಲು, ಸಣ್ಣ ಪುಟ್ಟ ಮಾರ್ಪಾಟುಗಳನ್ನು ಮಾಡಿಕೊಂಡಿರುವೆನಾದರೂ, ಮೂಲದ ಧ್ವನಿಯನ್ನೂ ಅಲ್ಲಿನ ಕೇಂದ್ರಸಂದೇಶವನ್ನೂ ಇಡಿಯಾಗಿ ಇಟ್ಟುಕೊಳ್ಳಲು ಯತ್ನಿಸಿದ್ದೇನೆ. ಇಗೋ, ಓದಿ.

ನಾನೂ ಒಂದು ದಿನ ಸಾಯುವೆನಯ್ಯ

ಆಹಾ! ಬಲು ಹೆಮ್ಮೆ ಆಗುತಿದೆ, ನನಗೆ -
ದುರಂತದ ಕೇಂದ್ರಬಿಂದು ನಾನಾಗಿರುವ ಬಗ್ಗೆ.
ಮತ್ತೆ ಮತ್ತೆ ಸುತ್ತರೆದ ನೆರಳಿನ ಒಳಗೆ
ಮಲಗಿರುವೆ ದೇವ, ನಿನಗಿದೋ ವಂದನೆ,
ಎಲೆ ನೆರಳೇ, ನಿನಗೂ ವಂದನೆ.

ನೋವಿನಂತರಾಳದ ಮಡಿಕೆಗಳ
ಇಣುಕಿನೋಡಬಲ್ಲವನೆ ಧನ್ಯ.
ಕಳಚಿ ಬೇರಾಗುತಿರುವ ಆತ್ಮವನು
ಕಲಸಿ ಗೊಟಾಯಿಸುವ ದುಃಖಗಳೇ,
ನಿಮಗಿದೋ ನನ್ನ ವಂದನೆ.

ನದಿಯ ಆಳದ ತಳವೇ,
ಇದ್ದುಬಿಡು ನನ್ನೊಡನೆ,
ಮಾಡುವೆನು ನಿನಗೂ ವಂದನೆ.
ಆರೂ ಕಾಣಿಸರಿನ್ನು, ಇನ್ನೇಕೆ ದುಡಿಮೆ?
ಎಲೆ ದುಡಿಮೆ, ನಿನಗೂ ವಂದನೆ.

ಒಡನಾಡಿ ನಿಶ್ಶಬ್ದ, ಹೋದಲ್ಲೆಲ್ಲ
ಎನ್ನ ಹೊತ್ತು ನಡೆದಿರುವೆಯಲ್ಲ,
ಬಾಯ್ತೆರೆವ ಮುನ್ನ ಎಚ್ಚರಿಸಿ
ನನ್ನ ತಡೆದು ಕಾದಿಹೆಯಲ್ಲ
ಎಲೆ ಮೌನ, ಇಗೊ, ನಿನಗೂ ವಂದನೆ.

ಬಾಯಿ ಒಣಗಿಹುದೆಂದು ಮರುಗಿ,
ಗಂಗೆ ಸುರಿಯಲು ಬೇಡ
ಬೆವರು ಹನಿದಿಹುದೆಂದು ಜಿನುಗಿ,
ಹಣೆಯ ಒರೆಸಲು ಬೇಡ
ಅದರಿಂದಿನ್ನಿಲ್ಲ ಲಾಭ ನೋಡ.

ಮುಗಿಯದ ಹಗಲಿನಲಿ ತೆರೆದ ಕಣ್ಣು
ನೀರವದ ನಿಶೆಯ ನೀಳ ನಿಮಿಷಗಳಲ್ಲಿ
ಮುಚ್ಚುವ ರಪ್ಪೆಯ ಬಡಿತ,
ಇನ್ನಿಲ್ಲ, ಎದೆಯಲ್ಲಿ ಮಿಡಿತ,
ಎಲೆ ನಿಶೆಯೇ, ನಿನಗೂ ವಂದನೆ.

ಇಗೋ, ಹೊರಟೆ, ಹೊರಡುವ ಮುನ್ನ
ವಂದಿಸುವೆ ನಿಮ್ಮೆಲ್ಲರನ್ನ
ಗೆಳೆಯರೇ, ಧನ್ಯವಾದಗಳ ತಿಳಿಸುವ
ಸಾವಿನಂಚಿನಲಿರುವ ನಾನೆ ಧನ್ಯ
ನನಗಿನ್ನಿಲ್ಲ ಬಯಕೆ ಮತ್ತೇನು ಅನ್ಯ.

ಟಿಮ್ ರಸರ್ಟ್ ಅವರಿಗೆ ಜತೆಗಾರ ಪತ್ರಕರ್ತರ ವಿದಾಯ

ಬ್ರೇಕಿಂಗ್ ನ್ಯೂಸ್ ಹಾವಳಿ ಸಾಕಪ್ಪಾ ಸಾಕುಬ್ರೇಕಿಂಗ್ ನ್ಯೂಸ್ ಹಾವಳಿ ಸಾಕಪ್ಪಾ ಸಾಕು

English summary
There are only two things certain in life : Death and Taxes. Yes, a farewell to the impeccable show man Time Russert (of NBC News) and a commentary on " untimely" death by Dr. M.S. Nataraj in WDC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X