ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರವಿ ಕೆಂಪೇಗೌಡರಿಗೆ ನಾದತರಂಗಿಣಿಯ ನಮನ

By Super
|
Google Oneindia Kannada News

Musical tributes to Byravi vidwan Kempegowda in Nadatarangini WDC
ಮಂಡ್ಯ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಕೆಂಪೇಗೌಡ ಅಂತ ಒಬ್ಬರಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ಅವರದು ಎತ್ತಿದ ಕೈ. ಆಸ್ಥಾನ ಗಾಯಕ, ಜರಿಪೇಟ, ಚಿನ್ನದ ಪದಕ ಮುಂತಾದ ಅಲಂಕಾರಗಳಿಂದ ದೂರವೇ ಉಳಿದಿದ್ದ ಅವರು ಆತ್ಮಸಂತೋಷಕ್ಕಾಗಿ, ಪಾಮರರಿಗಾಗಿ ಮಾತ್ರ ಹಾಡುತ್ತಿದ್ದರು. ಅವರನ್ನು ಭೈರವಿ ಕೆಂಪೇಗೌಡ ಎಂದೂ ಕರೆಯಲಾಗುತ್ತಿತ್ತು. ಅನೇಕರು ಹೆಸರೇ ಕೇಳದ ಇಂಥ ಆಗಿಹೋದ ಮಹಾನುಭಾವನನ್ನು ಸ್ಮರಿಸಲು ಅಮೆರಿಕಾದ ನಾದತರಂಗಿಣಿ ಸಂಸ್ಥೆಯವರು ಮೊನ್ನೆ ಒಂದು ಕಾರ್ಯಕ್ರಮ ಏರ್ಪಾಟು ಮಾಡಿ ಕೆಂಪೇಗೌಡರಿಗೆ ಸಂಗೀತ ಶ್ರದ್ಧಾಂಜಲಿ ಸಲ್ಲಿಸಿದರು.

*ಡಾ|| ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

"ಕೆಂಪೇ ಗೌಡ" ಎಂಬ ಹೆಸರನ್ನು ಕೇಳಿದಕೂಡಲೇ ಕನ್ನಡಿಗರಿಗೆ ನೆನಪಾಗುವುದು ಬೆಂಗಳೂರು ನಗರದ ಎಲ್ಲೆಯನ್ನು ಸ್ಥಾಪಿಸಿದ ಯಲಹಂಕ ನಾಡಿನ ಪ್ರಭು "ಬೆಂಗಳೂರು ಕೆಂಪೇಗೌಡ," (ಅಥವಾ "ಮಾಗಡೀ ಕೆಂಪೇಗೌಡ") ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದ ಚಾರಿತ್ರಿಕ ವ್ಯಕ್ತಿ. ಆದರೆ, ಕರ್ನಾಟಕ ಸಂಗೀತ ಪ್ರಪಂಚದಲ್ಲೂ "ಕೆಂಪೇಗೌಡ" ಎಂಬ ಪ್ರಖ್ಯಾತ ವ್ಯಕ್ತಿಯೊಬ್ಬರಿದ್ದರು ಎಂಬ ಅಂಶ ಅನೇಕರಿಗೆ ಗೊತ್ತಿದ್ದಹಾಗೆ ಕಾಣುವುದಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದೆ ಜನಿಸಿ, ಸುಮಾರು ಎಂಬತ್ತು ವರ್ಷಗಳ ಕಾಲ ವಿರಾಗಿಯಂತೆ ಬಾಳಿ, ಯಾವ ಯಶಸ್ಸು, ಕೀರ್ತಿ, ಹಣ, ಸಾಮಾಜಿಕ ಸ್ಥಾನಮಾನಗಳಿಗೂ ಗಮನಕೊಡದೇ, ಆತ್ಮಸಂತೋಷಕ್ಕಾಗಿ, ಸಾಧಾರಣ ಪಾಮರ ರಸಿಕರಿಗಾಗಿ ಹಾಡಿ ಕಣ್ಮರೆಯಾದ ವ್ಯಕ್ತಿ ಕೆಂಪೇಗೌಡ ಎಂಬ ಅಸಾಧಾರಣ ಹಾಡುಗಾರ.

ಆತನ ಪೂರ್ವಜರು ಮಂಡ್ಯ ಜಿಲ್ಲೆಯ ಶೆಟ್ಟಿಹಳ್ಳಿ ಎಂಬ ಗ್ರಾಮದವರು. ಆತನ ತಂದೆಯಕಾಲದಲ್ಲಿ ಅವರ ಕುಟುಂಬ ಕೊಯಂಬತ್ತೂರಿಗೆ ವಲಸೆ ಹೋದಮೇಲೆ ಅದೇ ಪ್ರದೇಶದಲ್ಲಿ 1857ರಲ್ಲಿ ಕೆಂಪೇಗೌಡರ ಜನನವಾಗಿರಬೇಕೆಂದು ಅಂದಾಜುಮಾಡಲಾಗಿದೆ. ಆತನ ಜೀವನ ಮತ್ತು ಸಾಧನೆಗಳ ಬಗ್ಗೆ ಅಧ್ಯಯನ ನಡೆಸಿರುವ ಸಂಶೋಧಕರ ಪ್ರಕಾರ, ಆತ 1937ರ ಸನಿಹದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯ ಉಸಿರೆಳದಿರಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಕನ್ನಡದ ಪ್ರಸಿದ್ಧ ಬರಹಗಾರರಾದ ಡಾ. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಒಂದು ಕಿರು ಲೇಖನ, ಕೆಂಪೇಗೌಡರ ಬಗ್ಗೆ ದೊರೆತಿರುವ ಮೊದಲನೆಯ ಅಧಿಕೃತ ಪ್ರಕಟಿತ ದಾಖಲೆ ಎಂದು ಹೇಳಬಹುದು (ಕಲೋಪಾಸಕರು, 1969).

ಮೈಸೂರು ವಾಸುದೇವಾಚಾರ್ಯರ ಆತ್ಮಕಥನದಲ್ಲೂ ಕೆಂಪೇಗೌಡರಬಗ್ಗೆ ಉಲ್ಲೇಖವಿದೆ. ಆದರೆ, ಈ ಕಲಾವಿದನ ಪ್ರತಿಭೆಯನ್ನು ಗುರುತಿಸಿ ಜಗತ್ತಿಗೆ ತಿಳಿಯಪಡಿಸುವ ಉದ್ದಿಶ್ಯದಿಂದ ಸಾಕಷ್ಟು ಶ್ರಮವಹಿಸಿ, ಶ್ರದ್ಧೆಯಿಂದ ಸಂಶೋಧನೆ ನಡೆಸಿದವರೆಂದರೆ, "ಕರ್ನಾಟಕ ಜಾನಪದಲೋಕದ ಜನಕ" ಎಂದೇ ಪ್ರಸಿದ್ಧರಾಗಿರುವ, ಕನ್ನಡ ಬರಹಗಾರರಾದ ಎಚ್. ಎಲ್. ನಾಗೇಗೌಡರು. ಕೆಂಪೇಗೌಡರ ಜೀವನವನ್ನಾಧರಿಸಿ ನಾಗೇಗೌಡರು ಬರೆದ ಕಾದಂಬರಿ "ಭೂಮಿಗೆ ಬಂದ ಗಂಧರ್ವ" 1977ರಲ್ಲಿ ಪ್ರಕಟವಾಯಿತು. ಕೆಂಪೇಗೌಡರು ಹುಟ್ಟಿದ, ಬಾಳಿದ ಮತ್ತು ಭೇಟಿಮಾಡಿದ್ದ ಊರುಗಳಿಗೂ ಮತ್ತು ಅವರ ವಂಶಜರು ಇರುವ ಹಲವಾರು ಸ್ಥಳಗಳಿಗೂ ಖುದ್ದಾಗಿ ಹೋಗಿ, ಸಂಬಂಧಪಟ್ಟವರನ್ನು ಸಂದರ್ಶಿಸಿ, ಒಬ್ಬೊಬ್ಬರ ಮಾತನ್ನೂ ತಾಳೆಹಾಕಿ ಪರಿಷ್ಕರಿಸಿ ಹೆಣೆದಿರುವ ಈ ಕಾದಂಬರಿ ಒಂದಿಷ್ಟು ಊಹಾಪೋಹಗಳಿಂದ ಕೂಡಿದ್ದರೂ ಅವರ ಜೀವನಚರಿತ್ರೆಯೆಂದೇ ಹೇಳಬಹುದಾದಷ್ಟು ಸತ್ಯಾಂಶಗಳಿಂದಕೂಡಿದೆ.

Musical tributes to Byravi vidwan Kempegowda in Nadatarangini WDCಬಾಲ್ಯದಿಂದಲೂ ಯಾವುದೋ ಪೂರ್ವಜನ್ಮ ಸಂಸ್ಕಾರದಿಂದ ಬಾಲಕ ಕೆಂಪುವಿಗೆ ಹಾಡುವ ಹುಚ್ಚು. ಆದರೆ ತಂದೆಯಿಂದ ಪ್ರೋತ್ಸಾಹವಿರಲಿ, ಸಂಗೀತದ ಮಾತೆತ್ತಿದರೆ ಅವರಿಗೆ ಕೋಪ ಬರುತ್ತಿತ್ತು. ಆದರೆ ತಾತನ ಪ್ರೀತಿಪೂರ್ವಕ ಪ್ರೋತ್ಸಾಹವೇ ಆ ಬಾಲಕನ ಪ್ರತಿಭೆಯನ್ನು ಕಾಪಾಡಿತು. ಹೇಗಾದರೂಮಾಡಿ ಅವನಿಗೆ ಸಂಗೀತ ಕಲಿಸಬೇಕೆಂದು ಅವರು ಪಟ್ಟ ಬವಣೆ ಅಷ್ಟಿಷ್ಟಲ್ಲ. ಶುಲ್ಕವನ್ನು ಹಣದರೂಪದಲ್ಲಾಗಲೀ ಸೇವೆ ಅಥವಾ ಬೆಳೆದ ಪದಾರ್ಥಗಳ ರೂಪದಲ್ಲಾಗಲೀ ಕೊಡಲು ತಯಾರಿದ್ದರೂ, ಕಲಿಸುವವರು ಬೇಕಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದಿನ ಕಾಲದ ಮೈಸೂರು ನಗರದಲ್ಲಿದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ, ಹಳ್ಳಿಯ ರೈತಕುಟುಂಬದ ಬಾಲಕನೊಬ್ಬ, ಅವನು ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡುವುದು ಅಸಂಭವವಾಗಿದ್ದ ದಿನಗಳವು. ಹಾಗಾಗಿ, ಸಂಗೀತಕ್ಕೆ ಹೆಸರುವಾಸಿಯಾಗಿದ್ದ ಮೈಸೂರು ನಗರದಲ್ಲಿ ಹುಡುಗನನ್ನು ಬಿಟ್ಟು ಪಾಠ ಹೇಳಿಸಬೇಕೆಂಬ ಹಿರಿಯರ ಆಸೆಯನ್ನು ಅಲ್ಲಿನ ಮಡಿವಂತ ಪಂಡಿತರು ಪೂರೈಸಲಿಲ್ಲ.

ಕೆಂಪೇಗೌಡರ ತಾತ, ಹಲವಾರು ವರ್ಷಗಳು ಉಳಿತಾಯಮಾಡಿ ಶೇಖರಿಸಿಟ್ಟಿದ್ದ ಹಣವನ್ನು ಮೊಮ್ಮಗನಿಗೆ ಆಶೀರ್ವದಿಸಿಕೊಟ್ಟು ಗುಟ್ಟಾಗಿ ತಿರುವೈಯೂರಿಗೆ ಕಳಿಸದೇ ಹೋಗಿದ್ದರೆ ಆ ಪ್ರತಿಭಾವಂತ ಹುಡುಗನ ಜೀವನ ಯಾವ ದಿಕ್ಕಿಗೆ ಹೋಗುತ್ತಿತ್ತೋ ಏನೋ. ಆದರೆ, ಕರ್ನಾಟಕ ಸಂಗೀತ ಜಗತ್ತಿಗೆ ಒಬ್ಬ ಉತ್ತಮ ಹಾಡುಗಾರ ದೊರಕಬೇಕಾಗಿದ್ದಿದ್ದರಿಂದ, ವಿಧಿ ಅವನನ್ನು ಪ್ರಸಿದ್ಧ ಹಾಡುಗಾರರೂ, ವಾಗ್ಗೇಯಕಾರರೂ ಆಗಿದ್ದ ಪಟ್ಟಣಂ ಸುಬ್ರಮಣ್ಯ ಅಯ್ಯರ್‌ರಂಥಾ ಮಹಾನ್ ಗುರುಗಳಬಳಿ ತಂದು ಸೇರಿಸಿತು. ಹಾಗೆಂದಮಾತ್ರಕ್ಕೆ, ಅವರು ಸುಲಭವಾಗಿ ಈ ಹಳ್ಳಿಯ ಹುಡುಗನಿಗೆ ವಿದ್ಯಾದಾನ ಮಾಡುವಷ್ಟು ಉದಾರಿಗಳೇನೂ ಆಗಿರಲಿಲ್ಲ, ಆದರೆ, ತಮ್ಮ ಮನೆಯ ಹಸುವನ್ನು ಕಾಯುತ್ತಿದ್ದ ಹುಡುಗ ಬಿಟ್ಟುಹೋಗುವವನಿದ್ದನಾದ್ದರಿಂದ, ಅವನ ಸ್ಥಾನದಲ್ಲಿ ಇವನನ್ನು ನೇಮಿಸಿಕೊಳ್ಳಲು ಅವರಿಗೆ ಅಭ್ಯಂತರವೇನೂ ಇರಲಿಲ್ಲ. ಹೀಗೆ ಪ್ರಾರಂಭವಾಗುತ್ತದೆ, ಕೆಂಪೇಗೌಡರ ಶಿಷ್ಯವೃತ್ತಿ!

ಆಷ್ಟಿಷ್ಟು ಆಗಿದ್ದ ಬಾಲ್ಯಪಾಠದಲ್ಲಿ ಕಲಿತಿದ್ದ ಸಂಗೀತಜ್ಞಾನದ ನೆರವಿನಿಂದ, ಪಟ್ಟಣಮ್ ಇತರ ಶಿಷ್ಯರಿಗೆ ಹೇಳುವ ಪಾಠವನ್ನು ಗುರುವಿಗೆ ತಿಳಿಯದಂತೆ ಆಲಿಸಿ, ಹಸುಗಳನ್ನು ಕಾಯುವಾಗ ಗೋಪ್ಯದಲ್ಲಿ ಅಭ್ಯಸಿಸಿ, ಹಾಡುವುದೇ ಆತನಿಗಿದ್ದ ಕಲಿಕೆಯ ಮಾರ್ಗ. ಅದು ಗುರುಗಳಿಗೆ ಅಕಸ್ಮಾತ್ ತಿಳಿಯುತ್ತದೆ. ಆತನ ಪ್ರತಿಭೆಗೆಯನ್ನು ಅವರು ಮೆಚ್ಚುತ್ತಾರೆ, ಇವನೂ ತಮ್ಮ ಶಿಷ್ಯನಾಗಲು ಯೋಗ್ಯ ಎಂಬುದು ಅವರಿಗೆ ಮನದಟ್ಟಾಗುತ್ತದೆ. ಕೆಂಪುವಿನ ಸಹನೆ, ತಾಳ್ಮೆ, ಗುರುಭಕ್ತಿ, ಸಂಗೀತಪ್ರೇಮ, ಏಕಲವ್ಯನಿಗಿದ್ದಂಥಾ ಸಾಧನೆಯ ಪ್ರವೃತ್ತಿ, ಗುರುಪತ್ನಿಯ ಅನುಕಂಪ ಮತ್ತು ಭಗವಂತನ ಅನುಗ್ರಹ ಎಲ್ಲಾ ಸೇರಿ, ಗುರುವು ತಮ್ಮೆಲ್ಲ ವಿದ್ಯೆಯನ್ನೂ ಅವರಿಗೆ ಅರೆದು ಹುಯ್ಯುತ್ತಾರೆ. ಪಟ್ಟಣಮ್ ಸುಬ್ರಮಣ್ಯ ಅಯ್ಯರ್ ಅವರ ನಾಲ್ಕು ಪ್ರಮುಖ ಶಿಷ್ಯರಲ್ಲಿ ಇವರೂ ಒಬ್ಬರು ಎಂಬ ಖ್ಯಾತಿಯನ್ನು ಪಡೆಯುತ್ತಾರೆ. (ರಾಮನಾಡ್ ಶ್ರೀನಿವಾಸ ಅಯ್ಯಂಗಾರ್, ಟೈಗರ್ ವರದಾಚಾರ್, ಮತ್ತು ಮೈಸೂರು ವಾಸುದೇವಾಚಾರ್ಯರು ಇತರ ಮೂವರು). ಕೊನೆಗೆ, ಸಂಪೂರ್ಣವಿದ್ಯಾಭ್ಯಾಸವಾದಮೇಲೆ, ಗುರುಗಳ ಆಶೀರ್ವಾದದೊಂದಿಗೆ ಕೆಂಪು, "ವಿದ್ವಾನ್ ಕೆಂಪೇಗೌಡ"ರಾಗಿ ಹಿಂದಿರುಗುತ್ತಾರೆ!

ಮುಂದೆ ನಡೆದದ್ದನ್ನು ಊಹಿಸುವುದು ಸುಲಭ. ಗುರುವಿನ ಅನುಗ್ರಹವಾದಮೇಲೆ ಇನ್ನು ಹೆಸರು, ಹಣಕ್ಕೇನು ಕೊರತೆ? ಅನೇಕ ಕಡೆ ಕಚೇರಿಮಾಡಿ ಪ್ರಸಿದ್ಧರಾಗಿ ಮೈಸೂರು ಅರಸರ ಕಣ್ಣಿಗೂ ಬಿದ್ದು, ಅರಸರ ಆಸ್ಥಾನದಲ್ಲೂ ಹಾಡಿ ಆಗಿನ ಉದ್ದಾಮ ಪಂಡಿತರೆನಿಸಿಕೊಂಡಿದ್ದ ಬಿಡಾರದ ಕೃಷ್ಣಪ್ಪ, ವೀಣೆ ಶೇಷಣ್ಣ ಮತ್ತು ಸಹಪಾಠಿ ವಾಸುದೇವಾಚಾರ್ಯ ಇವರೆಲ್ಲರಿಂದ ಬೆನ್ನುತಟ್ಟಿಸಿಕೊಂಡು ಸಮ್ಮಾನಿತರಾಗುತ್ತಾರೆ. ಜಯಭೇರಿಯ ಜೊತೆಗೆ, ಕ್ಷುದ್ರಹೃದಯಿಗಳ ತಿರಸ್ಕಾರ ಈರ್ಷೆಗಳಿಗೂ ತುತ್ತಾಗುತ್ತಾರೆ. ಅನೇಕ ಬಾರಿ ಪರೀಕ್ಷೆಗೊಳಗಾಗಿ ಜಯಗಳಿಸಿದರೂ ಅವರಿಗೆ ರಾಜರ ಮುಂದೆ ಕಮರ್‌ಬಂದ್ ಕಟ್ಟಿಕೊಂಡು ಬಗ್ಗಿ ನಮಸ್ಕರಿಸಿಕೊಂಡು, ಜರೀಪೇಟಗಳನ್ನು ಕಟ್ಟಿಕೊಂಡು ಶಾಲುಗಳನ್ನು ಹೊದ್ದಿಸಿಕೊಂಡು ತೋಡಾಗಳಿಂದ ಅಲಂಕೃತರಾಗುವ ಆಸೆ ಹುಟ್ಟುವುದಿಲ್ಲ. ಅದಕ್ಕಿಂತ ಮಿಗಿಲಾಗಿ, ಸಾಧಾರಣ ಜನರಿಗಾಗಿ ಹಾಡುವುದು, ದೇವರಮುಂದೆ ಹಾಡುವುದೇ ಅವರಿಗೆ ತೃಪ್ತಿ ಕೊಡುತ್ತದೆ. ಈ ಕಾರಣದಿಂದ ಕೆಂಪೇಗೌಡರು ಥಳುಕಿನ ಅರಮನೆಯ ಪಾಂಡಿತ್ಯಕ್ಕೆ ಗಮನಕೊಡದೇ ತಮಗೆ ದೊರಕಬಹುದಾಗಿದ್ದ ಹಲವಾರು ಪದವಿ, ಬಿರುದು ಮತ್ತು ಪಾರಿತೋಷಕಗಳಿಂದ ವಂಚಿತರಾಗುತ್ತಾರೆ. ಚಿಕ್ಕ ವಯಸ್ಸಿನಲ್ಲೆ ಹೆಂಡತಿಯನ್ನು ಕಳೆದುಕೊಂಡು ಜೀವನದಲ್ಲಿ ವೈರಾಗ್ಯ ಬಂದು ಭೌತಿಕ ಸುಖಗಳಿಂದ ದೂರವಿದ್ದ ವಿರಾಗಿ ಈತ. ಯೋಗಿಯಂತೆ, ಜೋಗಿಯಂತೆ, ವಿರಾಗಿಯಂತೆ ಬಾಳುವುದೇ ಅವರ ಕರ್ಮವಾಗಿತ್ತೇನೋ? ಅಂತೂ ಅವರು ಸಂಗೀತ ಪ್ರಪಂಚದ ಚರಿತ್ರೆಯಲ್ಲಿ ಅಮರರಾದರೂ ದುರಂತಜೀವನವೇ ಅವರ ಪಾಲಿಗೆ ಉಳಿಯುವುದು.

ಕೆಂಪೇಗೌಡರ ಜೀವನದ ಹಲವಾರು ಸಂದರ್ಭಗಳು ಅಲ್ಲಿಲ್ಲಿ ಪ್ರಕಟವಾದ ಮತ್ತು ಅವರ ಸಮಕಾಲೀನರ ಹೇಳಿಕೆಗಳಿಂದ ತಿಳಿದುಬಂದಿವೆ. ಡಿವಿಜಿ ಅವರು ಗಾಯಕ ಕೆಂಪೇಗೌಡರೊಂದಿಗೆ ತಮಗಾದ ಕೆಲವೇ ಗಂಟೆಗಳ ಪರಿಚಯವನ್ನು ತಮ್ಮ "ಕಲೋಪಾಸಕರು" ಪುಸ್ತಕದಲ್ಲಿ ವರ್ಣಿಸಿದ್ದಾರೆ. ಡಿವಿಜಿಯವರ ಸಂಬಂಧಿ ವೆಂಕಪ್ಪಯ್ಯ ಎಂಬ ಒಬ್ಬ ಸಂಗೀತರಸಿಕರಿಂದ ಎಂಟಾಣೆ ಸಾಲ ಕೇಳಲು ಬಂದು, ಆ ಉಪಕಾರಕ್ಕೆ ಪ್ರತಿಯಾಗಿ ಎರಡು ಘಂಟೆ ಕಾಲ ನಡೆದ ಕೆಂಪೇಗೌಡರ ಆನಂದ ಭೈರವಿ ರಾಗಾಲಾಪನೆ ಮತ್ತು "ಹಿಮಾಚಲ ತನಯ ಬ್ರೋಚುಟಿಕಿದಿ" ಕೃತಿಯ ಅದ್ಭುತ ಪ್ರಸ್ತುತಿಯ ವಿವರವನ್ನು ಡಿವಿಜಿ ಅವರ ಮಾತುಗಳಲ್ಲೇ ಓದಿ ಆನಂದಿಸಬೇಕು! ಸಾಧಾರಣ ವ್ಯಾಪಾರಿಗಳು ಗೌಡರ ಕಚೇರಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ, ಕಾರಣ ಅವರು ಕಚೇರಿ ನಡೆಯುವ ಸಮಯದಲ್ಲಿ ಗಲ್ಲಾದಮೇಲೆ ಕೂರಬೇಕಲ್ಲ. ಆದರೆ ಅಂಥಾ ರಸಿಕರಿಗಾಗಿ ಕಚೇರಿಯನ್ನೇ ಅಂಗಡಿ ಮುಂಗಟ್ಟಿದ್ದ ಜಾಗಕ್ಕೆ ಒಯ್ದು ಅವರನ್ನು ತೃಪ್ತಿಪಡಿಸುತ್ತಿದ್ದುದು ಗೌಡರ ಔದಾರ್ಯ. ಹೀಗೊಂದು ಬಾರಿ, ರಾಗಿ ಮೂಟೆಯಮೇಲೆ ಕುಳಿತು ಸಾವೇರಿ ರಾಗಾಲಾಪನೆ ಮಾಡಿ ಸುತ್ತ ಮುತ್ತಲಿನ ಪೇಟೆಯ ಜನರನ್ನೆಲ್ಲ ರಂಜಿಸಿದ್ದ ಪ್ರಸಂಗವನ್ನೂ ಡಿವಿಜಿ ವಿವರಿಸಿದ್ದಾರೆ.

ಅವರ ವಿದ್ಯಾರ್ಥಿಜೀವನದ ಅನೇಕ ದಾರುಣ ಆದರೂ ಸ್ವಾರಸ್ಯಕರ ಪ್ರಸಂಗಗಳ ವಿವರಣೆ ನಾಗೇಗೌಡರ ಕಾದಂಬರಿಯಲ್ಲಿ ಬರುತ್ತದೆ. ಅವುಗಳಲ್ಲಿ ಉಲ್ಲೇಖವಾದ ಒಂದು ಪ್ರಸಂಗ ಹೀಗಿದೆ. ಗುರುಗಳು ತಮ್ಮ ಮಹಡಿಯಲ್ಲಿ ನಡೆಸುತ್ತಿದ್ದ ಕಚೇರಿಯೊಂದರಲ್ಲಿ ಹಾಡುತ್ತಿದ್ದಾಗ, ಭೈರವಿ ರಾಗಾಲಾಪನೆ ಉದ್ದವಾಗಿ ಬೆಳೆದು, ಗುರುಪತ್ನಿ ಅವರನ್ನು ಊಟಕ್ಕೆಬ್ಬಿಸಲು ಯತ್ನಿಸುವ ಪ್ರಸಂಗ. ಗುರುಪತ್ನಿಯ ಇಚ್ಛೆಯಂತೆ, ಕೆಂಪುವೇ ಗುರುವಿಗೆ ಕಚೇರಿಯಮಧ್ಯೆ ಹೋಗಿ "ಅಮ್ಮಾ ಊಟಕ್ಕೆ ಕರೆಯುತ್ತಿದ್ದಾರೆ, ನೀವು ಊಟ ಮುಗಿಸುವವರೆಗೆ, ಅಪ್ಪಣೆಯಾದರೆ, ನಾನೇ ಸಭಾಸದರನ್ನು ರಂಜಿಸುತ್ತೇನೆ" ಎಂದು ಹೇಳಿ ಪೇಚಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ, ಅನುಭವವಿಲ್ಲದ ಕಿರಿಯ. ಗುರುವಿಗೆ ತಡೆಯಲಾಗದ ಸಿಟ್ಟು ಬರುತ್ತದೆ, ಧರಧರನೆ ಎಳೆದು ಕೂರಿಸಿ "ಹಾಡು, ನಾನೂ ಕೇಳಿಯೇ ಬಿಡುತ್ತೇನೆ" ಎಂದು ಅಬ್ಬರಿಸಿದ ಪಟ್ಟಣಮ್ ಎದುರಿಗೆ ನಡುಗುತ್ತಾ ಕೂತ ಕೆಂಪುವಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಆದರೂ, ಪಕ್ಕವಾದ್ಯದ ಕೃಷ್ಣ ಅಯ್ಯರ್ ಅವರ ಪ್ರೋತ್ಸಾಹದಿಂದ ಭೈರವಿ ರಾಗವನ್ನು ಅದ್ಭುತವಾಗಿ ಹಾಡಿ ಪಲ್ಲವಿಯನ್ನೂ ವಿಸ್ತರಿಸಿ ಗುರುಗಳಿಗೂ ಸಭಿಕರಿಗೂ ಆನಂದಬಾಷ್ಪ ಬರುವಂತೆ ಮಾಡಿ ಗುರುಗಳ ಅಂತಃಕರಣವನ್ನು ಒಲಿಸಿಕೊಂಡ ಆ ಪ್ರಸಂಗ, ಕೆಂಪೇಗೌಡರಿಗೂ ಭೈರವಿ ರಾಗಕ್ಕೂ ಅಪೂರ್ವ ಸಂಬಂಧವನ್ನು ಕಲ್ಪಿಸುತ್ತದೆ.

ಗುರುಗಳ ಆಶೀರ್ವಾದದಿಂದ ಭೈರವಿ ರಾಗವನ್ನು ಕರತಲಾಮಲಕ ಮಾಡಿಕೊಂಡು ಮುಂದೆ ಕೆಂಪೇಗೌಡರು "ಭೈರವಿ ಕೆಂಪೇಗೌಡ" ಎಂದೇ ಗುರುತಿಸಲ್ಪಡುತ್ತಾರೆ. ಆದರೆ, ಮುಂದೆ ಯಾವುದೋ ಬಡಜನರಿಗೆ ಸಹಾಯಮಾಡಲು ಹೋಗಿ, ಸಾಲಮಾಡಬೇಕಾದ ಸಂದರ್ಭ ಉಂಟಾಗುತ್ತದೆ. ಸಾಲಕೊಟ್ಟವ ಇವರಿಗೆ ಅತ್ಯಂತ ಪ್ರಿಯವಾದ ಭೈರವಿ ರಾಗವನ್ನು ಒತ್ತೆ ಇಡಿಸಿಕೊಳ್ಳುತ್ತಾನೆ. (ಒತ್ತೆ ಇಡಲು ಅವರ ಬಳಿ ಇನ್ನೇನೂ ಇರುವುದಿಲ್ಲ!) ಅವರಿಂದ ಆ ರಾಗವನ್ನು ಹಲವು ವರ್ಷಗಳು ಕೇಳದೇ ನಿರಾಶರಾಗಿದ್ದ ಅವರ ಅಭಿಮಾನಿಗಳು, ಆ ರಾಗವನ್ನು ಕಡೆಗೂ ಒತ್ತೆಯಿಂದ ಬಿಡಿಸಿಕೊಂಡು, ಅವರ ಕಂಠದಿಂದ ಮತ್ತೆ ಮತ್ತೆ ಕೇಳಿ ಸಂತಸಪಡುವ ದಿನಗಳೂ ಬರುತ್ತವೆ. ಇಂಥಾ ಇನ್ನೂ ಅನೇಕ ಪ್ರಸಂಗಗಳು ನಾಗೇಗೌಡರ ಕಾದಂಬರಿಯಲ್ಲಿ ಹೃದಯಂಗಮವಾಗಿ ವರ್ಣಿಸಲ್ಪಟ್ಟಿವೆ. ಉದಾಹರಣೆಗೆ, ಶೃಂಗೇರಿ ಶಾರದಾಂಬೆಯ ಮುಂದೆ, ಜಗದ್ಗುರು ಚಂದ್ರಶೇಖರ ಭಾರತಿಗಳ ಸಮ್ಮುಖದಲ್ಲಿ, ವಿಶ್ವನಾಥ ಅಯ್ಯರ್ ರಂಥಾ ವಿದ್ವಾಂಸರ ಉಪಸ್ಥಿತಿಯಲ್ಲಿ ಹಾಡಿ ಮೆಚ್ಚುಗೆ ಗಳಿಸುವ ಪ್ರಸಂಗ. ಮತ್ತು, ಅರಮನೆಯಲ್ಲಿ ಇವರಿಗೆ ತೇಜೋಭಂಗಮಾಡಬೇಕೆಂಬ ದುರುದ್ದೇಶದಿಂದ ಹುಟ್ಟಿದ ಒಂದು ಸ್ಪರ್ಧೆಯಲ್ಲಿ ಇವರು ಹಾಡಿದ ಸಾರಂಗ ರಾಗಕ್ಕೆ ಜಿಂಕೆ ಮನಸೋತು ಕಿವಿಯನ್ನು ನಿಮಿರಿಸಿ ಕೇಳುವ ಪ್ರಸಂಗ. ಮೈಸೂರು ಅರಮನೆಯಲ್ಲಿ ಸ್ವಾಮೀ ವಿವೇಕಾನಂದರ ಸಮ್ಮುಖದಲ್ಲಿ ಹಾಡಿ ಅವರ ಮನಸ್ಸನ್ನು ಗೆದ್ದ ಕೆಂಪೇಗೌಡರು, ಸ್ವಾಮಿ ಅಮೇರಿಕಾ ಪ್ರವಾಸದಿಂದ ಹಿಂದಿರುಗಿದಮೇಲೆ ಅವರನ್ನು ಕಲ್ಕತ್ತೆಯಲ್ಲಿ ಭೇಟಿಯಾಗುತ್ತಾರೆ. ಇವರ ಗಾಯನದ ಇಂಪನ್ನು ಇನ್ನೂ ಮರೆಯದೇ ಇದ್ದ ಸ್ವಾಮಿಯ ಮುಂದೆ ಮತ್ತೊಮ್ಮೆ ಹಾಡಿ ಅವರಿಂದ ಕಾವಿಬಟ್ಟೆಯ ಪಾರಿತೋಷಕವನ್ನು ಸ್ವೀಕರಿಸಿ ಹಿಂದಿರುಗುತ್ತಾರೆ. ಆ ಕಾವೀ ವಸ್ತ್ರ ಅವರೊಂದಿಗೆ ಕೊನೆಯವರೆಗೂ ಉಳಿಯುತ್ತದೆ, ಪ್ರಾಯಶಃ ಅವರಿಗೆ ವಿರಕ್ತಿಮಾರ್ಗವನ್ನು ಸದಾ ನೆನಪಿಸುತ್ತಾ ಇರುತ್ತದೆ.

ಅನೇಕ ಕಲಾವಿದರಲ್ಲಿ ಕಂಡುಬರುವ ಒಂದಿಲ್ಲ ಒಂದು ದೋಷದಂತೆ, ಕೆಂಪೇಗೌಡರ ಜೀವನದಲ್ಲೂ ಮಾನವೀಯ ದೌರ್ಬಲ್ಯಕ್ಕೆ ಕೊರತೆ ಇರಲಿಲ್ಲ. ಯಾವುದೋ ಕಷ್ಟದ ಪರಿಸ್ಥಿತಿಯಲ್ಲಿ, ಜೀವನದಲ್ಲಿ ನಿರಾಸೆಗೊಂಡಾಗಲೋ, ನೋವನ್ನನುಭವಿಸಿದಾಗಲೋ, ನೆಚ್ಚಿನ ಹೆಂಡತಿಯನ್ನು ಕಳೆದುಕೊಂಡ ವಿಯೋಗ ದುಃಖದಲ್ಲಿದ್ದಾಗಲೋ, ಅಂತೂ, ಕುಡಿತದ ದುರಭ್ಯಾಸ ಇವರ ಜೀವನದ ದುರಂತಕ್ಕೆ ಕಾರಣವಾಗುತ್ತದೆ. ಆದರೂ ಅವರ ಸಂಗೀತಕ್ಕೆ ಅದರಿಂದ ಯಾವ ಅಪಚಾರವೂ ಆದಂತೆ ತೋರದಿದ್ದರೂ ಅವರು ಏರಬಹುದಾಗಿದ್ದ ಎತ್ತರ, ತಲುಪಬಹುದಾಗಿದ್ದ ಸ್ಥಾನಮಾನಗಳಿಂದ ಅವರು ವಂಚಿತರಾಗಲು ಅದೂ ಒಂದು ಮುಖ್ಯ ಕಾರಣವಾಗುತ್ತದೆ. ಅವರು ಕಣ್ಮರೆಯಾಗಿ ಸುಮಾರು ಏಳು ದಶಕಗಳ ನಂತರ, ಅವರ ಹುಟ್ಟೂರಿನಿಂದ ಸಹಸ್ರಾರು ಮೈಲಿ ದೂರದ ಅಮೆರಿಕೆಯಲ್ಲಿ, ನಾದತರಂಗಿಣಿ ಸಂಸ್ಥೆ ನಡೆಸುವ ವಾರ್ಷಿಕ ಸಂಗೀತೋತ್ಸವದ ಸಂದರ್ಭದಲ್ಲಿ ರಾಜಧಾನಿಯ ಸುತ್ತಮುತ್ತಲ ಸಂಗೀತ ರಸಿಕರು ಇವರನ್ನು ಸ್ಮರಿಸಿಕೊಂಡಿದ್ದು ಒಂದು ಸಂತಸದ ಸುದ್ದಿ.

2008 ಏಪ್ರಿಲ್ 19ರಂದು ವಿದುಷಿ ಎಂ.ಎಸ್. ಶೀಲಾ ಅವರ ಒಂದು ಭವ್ಯ ಕಚೇರಿಯ ಮೂಲಕ, ಭೈರವಿ ಕೆಂಪೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕೀರ್ತಿ ನಾದತರಂಗಿಣಿ ಸಂಸ್ಥೆಯ ಉಷಾ ಚಾರ್ ಮತ್ತು ಎ. ಆರ್. ಚಾರ್ ದಂಪತಿಗಳಿಗೆ ಸಲ್ಲುತ್ತದೆ. ವಿದ್ವಾನ್ ಅನಂತ ಕೃಷ್ಣ ಶರ್ಮ (ಶಿವು) ಅವರ ಮೃದಂಗ, ಮತ್ತು ಸಂಧ್ಯಾ ಶ್ರೀನಾಥ್ ಅವರ ಪಿಟೀಲು ಪಕ್ಕವಾದ್ಯಗಳೊಂದಿಗೆ, ಶೀಲಾ ಅವರು ಭೈರವಿಯಲ್ಲೇ ರಾಗ-ತಾನ-ಪಲ್ಲವಿಯನ್ನು ಅಮೋಘವಾಗಿ ಹಾಡಿ ಕೆಂಪೇಗೌಡರ ಆತ್ಮಕ್ಕೆ ತೃಪ್ತಿಯನ್ನು ತಂದರೆಂದು ಅಲ್ಲಿ ನೆರೆದಿದ್ದ ಎಲ್ಲಾ ರಸಿಕರೂ ಭಾವಿಸಿದರು. ಅಂದಿನ ಕಚೇರಿಗೆ ಮುನ್ನ ಪರಿಚಯರೂಪದಲ್ಲಿ ನಾನು ಮಾಡಿದ ಚಿಕ್ಕ ಭಾಷಣದ ವಿಸ್ತೃತ ಸ್ವರೂಪವೇ ಈ ಲೇಖನ. ಭಾಷಣ ಮತ್ತು ಲೇಖನ ಎರಡಕ್ಕೂ ಬೇಕಾದ ಸಾಮಗ್ರಿಯನ್ನು ನನಗೆ ಒದಗಿಸಿ ಉಪಕರಿಸಿದ ವಿಜಯಲಕ್ಷ್ಮಿ ಗೌಡ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X