ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಯಾತ್ರೆಯ ಮೆಲಕುಗಳು; ಭಾಗ 2

By Staff
|
Google Oneindia Kannada News

Enchanting Karnataka: Travel Diary ( part 2)ಈ ಬಾರಿಯ ಕರ್ನಾಟಕ ಪ್ರವಾಸ ಕಾಲದಲ್ಲಿ ಲೇಖಕರು ಸಂಪಾದಿಸಿದ ಅನುಭವ ಬುತ್ತಿ ದೊಡ್ಡದು. ಅನೇಕ ಪ್ರವಾಸಿ ತಾಣಗಳು ದೇವಸ್ಥಾನಗಳನ್ನು ಸುತ್ತಿದ್ದಾರೆ. ಹಳೆಮಿತ್ರರನ್ನು ಕಂಡು ಪುಳಕಿತರಾಗಿದ್ದಾರೆ, ಹೊಸಕಾಲದ ಯುವಕರನ್ನು ಕಂಡು ಬೆರಗಾಗಿದ್ದಾರೆ. ಕಾಲಚಕ್ರದ ಪರಿಭ್ರಮಣೆಯಲ್ಲಿ ಸುತ್ತುತ್ತಿರುವ ಜೀವನ ಶೈಲಿಗಳನ್ನು ಗುರುತು ಹಾಕಿಕೊಂಡಿದ್ದಾರೆ. ಭಿತ್ತಿಯಲ್ಲಿ ಕರ್ನಾಟಕದ ಅನೇಕಾನೇಕ ಚಿತ್ರಗಳು ಅಚ್ಚಾಗಿದ್ದರೂ ಆ ಎಳನೀರು ಮಾರುವ ಪ್ರಜೆಯ ಶಿಸ್ತು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

* ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

(ಕಳೆದ ವಾರದಿಂದ ಮುಂದುವರೆದದ್ದು..)

ಉಡುಪಿಯಲ್ಲಿ ಕಡಗೋಲ ಕೃಷ್ಣ. ನಾವು ದರ್ಶನಕ್ಕೆ ಹೋದಾಗ, ಪುತ್ತಿಗೆ ಸ್ವಾಮಿಗಳು ಶಿಷ್ಯರಿಗೆ ಪಾಠಮಾಡುತ್ತಾ ಇದ್ದರು. ಕೆಲವೇ ದಿನಗಳಹಿಂದೆ ಪತ್ರಿಕೆಗಳಲ್ಲಿ ಓದಿದ ಯಾವ ವಾದವಿವಾದಗಳೂ ಅಲ್ಲಿನ ಚಟುವಟಿಕೆಗಳಮೇಲೆ ಪರಿಣಾಮ ಬೀರಿದಂತೆ ಕಾಣಲಿಲ್ಲ. ಕೃಷ್ಣನ ಕಾರಣದಿಂದ ಪ್ರಸಿದ್ಧವಾಗಿರುವಹಾಗೆ, ಉಡುಪಿ ಹೋಟೆಲುಗಳ ರಾಜಧಾನಿಯೂ ಹೌದು. ಅಲ್ಲಿ ಮಸಾಲೆ ದೋಸೆಯನ್ನು ತಿನ್ನಲೇಬೇಕೆಂಬ ಉತ್ಕಟ ಇಚ್ಛೆಯನ್ನು ಪೂರೈಸಿಕೊಂಡೇ ಅಲ್ಲಿಂದ ಹೊರೆಟೆವು. ದಾರಿಯಲ್ಲಿ ಬರುವ ಆನೆಗುಡ್ಡೆ ಗಣಪತಿಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ದೀಪಾರತಿ ಬಲು ರಮ್ಯವಾಗಿತ್ತು. ಮುಂದೆ ಕೊಲ್ಲೂರಿನ ಮೂಕಾಂಬಿಕೆಯನ್ನು ದರ್ಶನಮಾಡಿ, ಅಲ್ಲೇ ಊಟ. ಹೊರನಾಡಿನಲ್ಲಿ ಮಡಿ ಜನಗಳ ಜೊತೆ ಊಟಕ್ಕೆ ಕೂತಾಗ ನೆಲದ ಮೇಲೆ ಕುಳಿತು ಕಷ್ಟಪಡಬೇಕಾಯಿತು. ಕೊಲ್ಲೂರಿನಲ್ಲಿ ಎಲ್ಲರೊಂದಿಗೆ ಬೆರೆತು ಟೇಬಲ್ ಊಟದ ಅನುಕೂಲವನ್ನು ಅನುಭವಿಸಿದೆವು! ಒಟ್ಟಿನಲ್ಲಿ, ಈ ದೇವಸ್ಥಾನಗಳಲ್ಲಿ ಬಂದವರಿಗೆಲ್ಲಾ ನಡೆಯುವ ಊಟದ ಸತ್ಕಾರವನ್ನು ಎಷ್ಟು ಮೆಚ್ಚಿದರೂ ಸಾಲದು.

ಕಳೆದ ಶಿವರಾತ್ರಿಯ ಸಂದರ್ಭದಲ್ಲಿ ನಮ್ಮ "ಈ-ಗೆಳೆಯ" ಮಧುಸೂದನ ಪೇಜತ್ತಾಯರು ಒಂದು ಸುಂದರವಾದ ಈಶ್ವರನ ಚಿತ್ರವನ್ನು ಕಳಿಸಿ ಶುಭ ಕೋರಿದ್ದರು. ಆ ಚಿತ್ರದಲ್ಲಿದ್ದ ಶಿವನ ಮೂರ್ತಿಗೆ ನಾನು ಮಾರುಹೋಗಿದ್ದೆ. ಕೂಡಲೆ, ಯಾವುದು ಆ ಚಿತ್ರ ಎಂದು ವಿಚಾರಿಸಿದಾಗ, ಅದು ಕಾರವಾರ ಜಿಲ್ಲೆಯ ಮುರುಡೇಶ್ವರದಲ್ಲಿ ಈ ಕೆಲವು ವರ್ಷಗಳ ಹಿಂದೆ ತಯಾರಾದ 123 ಅಡಿ ಎತ್ತರದ ಶಿವನ ಮೂರ್ತಿ ಎಂದು ತಿಳಿಯಿತು. ಹೇಗಾದರೂ ಮಾಡಿ, ಈ ಬಾರಿ ಭಾರತಕ್ಕೆ ಹೋದಾಗ ಆ ಸ್ಥಳವನ್ನು ಸಂದರ್ಶಿಸಬೇಕೆನ್ನಿಸಿತ್ತು. ಆ ಕಾರಣದಿಂದಲೇ ಹಾಸನದಿಂದ ಮೂರುದಿನಗಳ ಪಯಣ, ದಾರಿಯಲ್ಲಿ ಹಲವಾರು ರಮಣೀಯ ಪ್ರದೇಶಗಳಿಗೆ ಭೇಟಿ. ಭಟ್ಕಳದಿಂದ ಅನತಿದೂರದಲ್ಲಿರುವ ಅರಬ್ಬೀ ಸಮುದ್ರದದ ದಡದಲ್ಲಿ ಪುಟ್ಟ ಬೆಟ್ಟವೊಂದರಮೇಲೆ ಕುಳಿತಿರುವ ಈ ಸಿಮೆಂಟ್ ಕಾಂಕ್ರೀಟಿನ ಶಿವನ ಭವ್ಯ ವಿಗ್ರಹ ಮತ್ತು ಅದರ ಮುಂದೆ ಗಗನಚುಂಬಿಯಾಗಿ ನಿಂದಿರುವ ಸುಮಾರು 250 ಅಡಿ ಎತ್ತರದ ರಾಜಗೋಪುರ.

ದೋಣಿಯಲ್ಲಿ ಬೆಟ್ಟವನ್ನು ಸುತ್ತುಹಾಕಿ, ದೂರದಿಂದ ಶಿವನ ಮುಖವನ್ನು ನೋಡಿ ಆನಂದಿಸಿ, ನಂತರ ಸಮುದ್ರಮಟ್ಟದಲ್ಲಿರುವ ಮೃಡೇಶ್ವರ ದೇವಾಲಯಕ್ಕೆ ಭೇಟಿ. (ಮೃಡ=ಶಿವ, ಅದೇ ಮುರುಡೇಶ್ವರವಾಗಿದೆ.) ನಂತರ ಬೆಟ್ಟದಮೇಲಿರುವ ಅನೇಕ ಮೂರ್ತಿಗಳನ್ನು ಹತ್ತಿರದಿಂದ ಸಂದರ್ಶಿಸಿದೆವು. ಕೊನೆಗೆ ಸಮುದ್ರದ ಅಲೆಗಳು ಬಡಚುತ್ತಿರುವ ರೆಸಾರ್ಟಿನ ಭೋಜನಗೃಹದಲ್ಲಿ ರುಚಿಕರವೂ ಶುಚಿಕರವೂ ಆದ ಊಟ. ಆ ಮರಳ ದಂಡೆಯ ಸೌಂದರ್ಯ ಆ ಸಂಜೆಯನ್ನು ಚಿರಸ್ಮರಣೀಯವಾಗಿಸಿತು. ಮರುದಿನ ದಾರಿಯಲ್ಲಿ ಇಡುಗುಂಜಿಯ ಮಹಾಮಹಿಮ ಗಣಪನ ದರ್ಶನ, ಅಲ್ಲಿಂದ ಶಿರಸಿಯ ಮಾರಿಕಾಂಬಿಕಾ, ಮುಂದೆ ಬನವಾಸಿಯ ಮಧುಕೇಶ್ವರ (ಜೇನುತುಪ್ಪದ ಬಣ್ಣದ ಕಲ್ಲಿನಲ್ಲಿ ಕೆತ್ತಿರುವ ಲಿಂಗ) ದೇವಾಲಯಗಳನ್ನು ನೋಡಿಕೊಂಡು ಮತ್ತೆ ಹಾಸನಕ್ಕೆ ವಾಪಸ್. ಅಷ್ಟೊಂದು ಪ್ರಸಿದ್ಧವಾದ ಬನವಾಸಿಗೆ ಹೋಗುವ ರಸ್ತೆ (ಇಲ್ಲಿ ಹಲವಾರು ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ) ಬಲು ಕೆಟ್ಟದಾಗಿತ್ತು.

ಹಾಸನದಿಂದ ಮೈಸೂರು, ಅಲ್ಲಿಗೆ ಹೋದಮೇಲೆ ಚಾಮುಂಡಿಯ ದರ್ಶನ. ನನ್ನ ಪುಸ್ತಕಗಳನ್ನು ಅತ್ಯಂತ ಶ್ರದ್ಧೆಯಿಂದ ಪ್ರಕಟಿಸುತ್ತಿರುವ ಗೀತಾ ಬುಕ್‌ಹೌಸಿನ ಶ್ರೀ ಸತ್ಯನಾರಾಯಣರಾಯರೊಂದಿಗೆ ಉಪಹಾರ. ಹಿರಿಯ ಗೆಳೆಯರು ಮತ್ತು ಹಿತೈಶಿಗಳೂ ಆದ ಹರಿಹರೇಶ್ವರ ಮತ್ತು ಅವರ ಪತ್ನಿ ನಾಗಲಕ್ಷ್ಮಿ ಅವರೊಂದಿಗೆ ಒಂದು ಊಟ. ನನ್ನ ಸೋದರಳಿಯ ಮತ್ತು ಅವನ ಧರ್ಮಪತ್ನಿ (ಡಾ. ರವಿಶಂಕರ್ ಮತ್ತು ಡಾ. ಉಮಾ ರವಿಶಂಕರ್) ನಡೆಸುತ್ತಿರುವ ಉಷಾ ಕಿರಣ್ ಕಣ್ಣಾಸ್ಪತ್ರೆಗೆ ಒಂದು ಸಣ್ಣ ಭೇಟಿ. ಮೈಸೂರಿನ ಸುತ್ತಮುತ್ತಲಿನ ಜನರಿಗೆ ಕಣ್ಣಿನ ಉತ್ತಮ ಚಿಕಿತ್ಸೆಯನ್ನು ಒದಗಿಸುವುದರ ಜೊತೆಜೊತೆಗೇ ದೀನದಲಿತರಿಗೆ ಮತ್ತು ಅನುಕೂಲವಿಲ್ಲದ ಬಡಬಗ್ಗರಿಗೆ ಉಚಿತ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತಿರುವ ಈ ದಂಪತಿಗಳ ಸೇವಾಮನೋವೃತ್ತಿ ನನಗೆ ಯಾವಾಗಲೂ ಹೆಮ್ಮೆಯ ಸಂಗತಿ.

ಮೈಸೂರಿನ ಹೊರಾಂಗಣದಿಂದ ಬೆಂಗಳೂರಿನ ಹೊರಾಂಗಣಕ್ಕೆ ಉತ್ತಮವಾದ ಹೆದ್ದಾರಿಯಲ್ಲಿ ಚಲಿಸಲು ಹೆಚ್ಚೆಂದರೆ ಎರಡು ಘಂಟೆ ಸಾಕು. ಆದರೆ, ನಗರದ ಹೊರಗಿನಿಂದ ನಗರದ ಒಳಭಾಗಕ್ಕೆ (ಉದಾಹರಣೆಗೆ, ನಾವು ಅವತ್ತು ಮಲ್ಲೇಶ್ವರಕ್ಕೆ ಹೋಗಬೇಕಾಗಿತ್ತು) ಹೋಗಲು ಮತ್ತೆರಡು ಘಂಟೆಗಳೇ ಹಿಡಿದವು. ಬೆಂಗಳೂರಿನ ಕಾರ್‌ಸಂದಣಿಯಬಗ್ಗೆ ಬರೆಯುವ ಅಗತ್ಯವಿಲ್ಲ, ಎಲ್ಲರಿಗೂ ತಿಳಿದಿರುವುದೇ. ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಹಂಚಿಕೊಳ್ಳಲು ಯೋಗ್ಯ. ನಾವು ಒಂದು ಸಂಜೆ ನಮ್ಮ ಅಕ್ಕನ ಮಗಳ ಮನೆಗೆ ಹೊರಟಿದ್ದೆವು. ಹೊಸ ಏರ್ಪೋರ್ಟ್ ಕಡೆ ಹೋಗುವ "ಉಡಿದಾರಿಯಲ್ಲಿ" (ರಿಂಗ್ ರೋಡ್) ವಾಹನಗಳು ಅಂಗುಲ-ಅಂಗುಲವಾಗಿ ಚಲಿಸುತ್ತಿದ್ದವು. ಸಂಜೆಯ ಭಾರೀ ಟ್ರ್ಯಾಫಿಕ್ ಜ್ಯಾಮಿನಲ್ಲಿ ಸಿಕ್ಕಿಬಿದ್ದೆವು. ಸೈಕಲ್, ಆಟೋ, ಸ್ಕೂಟರ್ ಇತ್ಯಾದಿಗಳು ಅಡ್ಡಡ್ಡವಾಗಿ, ಉದ್ದುದ್ದವಾಗಿ ಒಂದುಮಟ್ಟದಿಂದ ಇನ್ನೊಂದುಮಟ್ಟವನ್ನೂ ಏರುತ್ತ/ಇಳಿಯುತ್ತ ಮನಸೋಇಚ್ಛೆ ನಡೆಸುತ್ತಿದ್ದರು.

ನಮ್ಮ ಮುಂದೆ ಒಂದು ಲಾರಿ, ಯಾವುದೋ ಕಂಪನಿಯ ಕೆಲಸಗಾರರನ್ನು ತುಂಬಿಕೊಂಡು ಹೋಗುತ್ತಿತ್ತು. ಬೇಕಾದವರು ಬೇಕಾದಾಗ ಹತ್ತುವುದೂ ಇಳಿಯುವುದೂ ನಡೆಯುತ್ತಿತ್ತು. ಅದರ ಹಿಂದೆ ಒಬ್ಬ ಹುಡುಗ ಸಮೋಸಾಗಳನ್ನು ರಟ್ಟಿನ ಡಬ್ಬದಲ್ಲಿ ತುಂಬಿಕೊಂಡು ಮಾರುತ್ತಾ ಹಿಂದೆ ನಡೆಯುತ್ತಿದ್ದ. ಸ್ವಲ್ಪ ದಟ್ಟಣಿ ಕಮ್ಮಿಯಾಗಿ ಲಾರಿ ಮುಂದೆ ಹೋಗಲು ಹೊರಟಿತು. ನನ್ನ ಮಡದಿ "ನೋಡ್ರೀ, ಸಮೋಸ ತೆಗೆದುಕೊಂಡವರು ಹಣ ಕೊಡಲೇ ಇಲ್ಲ, ಪಾಪ ಹುಡುಗ" ಎಂದು ಕೊರಗಿದಳು. ಅದಕ್ಕೆ ನಾನೆಂದೆ, "ಮುಂದೆ ಕಾಣುವ ವಾಹನಗಳ ನಡುವೆ ಈ ಲಾರಿ ಎಲ್ಲಿಗೂ ಹೋಗಲು ಸಾಧ್ಯವಿಲ್ಲ." ಅದೇ ರೀತಿ ನಿಂತೂ ಚಲಿಸಿ, ನಿಂತೂ ಚಲಿಸಿ ಹೋಗುತ್ತಿದ್ದ ಆ ಲಾರಿಯ ಹಿಂದೆ ನಿರಾತಂಕವಾಗಿ ಹುಡುಗ ನಡೆಯುತ್ತಲೇ ಇದ್ದ, ಇಡೀ ಡಬ್ಬ ಸಮೋಸಾಗಳನ್ನು ಮಾರಿ, ಬರಬೇಕಾದ ಹಣವನ್ನು ಗಿಟ್ಟಿಸಿಕೊಂಡ. ರಸ್ತೆಯ ಕೆಳಕ್ಕಿಳಿದು ಹೋಗಿ ಮತ್ತೊಂದು ಡಬ್ಬಾ ಸಮೋಸ ತಂದ, ನಮ್ಮೆಲ್ಲರನ್ನೂ ಹಿಂದಕ್ಕೆ ಹಾಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಲಾರಿಯ ಹಿಂದೆ ಸಮೋಸಾ ವ್ಯಾಪಾರ ಮುಂದುವರೆಸಿದ! ಸುಮಾರು ಅರ್ಧ ಘಂಟೆಯ ಕಾಲ, ಪಾದಚಾರಿಗಳು ವಾಹನಚಾರಿಗಳಿಗಿಂತ ಭರದಲ್ಲಿ ಸಾಗಿದಮೇಲೆ, (ಅಂದರೆ, ರಸ್ತೆಯ ಮೇಲೆ ಒಂದೂವರೆಘಂಟೆ ಕಳೆದ ನಂತರ) ನಮ್ಮ ಕಾರು ಓಡುತ್ತಾ ಮುಂದೆ ಸಾಗಿತು.

ಉಗಾದಿ ಹಬ್ಬದ ಮುನ್ನಾದಿನ ಬೆಂಗಳೂರಿನಲ್ಲಿರುವ ನಮ್ಮ ಮನೆಮಂದಿಯನ್ನೆಲ್ಲಾ ಕರೆದುಕೊಂಡು ನಂದಿ ಬೆಟ್ಟಕ್ಕೆ ಹೋಗಿದ್ದು ತುಂಬಾ ಆಪ್ಯಾಯಮಾನವಾಗಿತ್ತು. ದಾರಿಯಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಒಂದು ಸಣ್ಣ ಡೀಟೂರ್. ಯುವಿಸಿಇನಿಂದ ಸರ್ವೇ ಕ್ಯಾಂಪಿಗಾಗಿ ಮೂರು ವರ್ಷ ಹೋಗಿ ತಂಗಿದ್ದ ಸ್ಥಳ ಹೇಗಿರಬಹುದೆಂಬ ಕುತೂಹಲವಿತ್ತು. ಹೆಚ್ಚೇನೂ ವ್ಯತ್ಯಾಸ ಕಾಣಲಿಲ್ಲ. ಹಿಂದೆ ನಾವು ಹೋದಾಗ ರಸ್ತೆ ಯಾವ ರೀತಿ ಇತ್ತೋ ಅದಕ್ಕಿಂತಲೂ ಕುಲಗೆಟ್ಟ ರಸ್ತೆಯನ್ನು ಕಂಡು ಸ್ವಲ್ಪ ಆಶ್ಚರ್ಯ, ಅದಕ್ಕಿಂತ ಹೆಚ್ಚು ದುಃಖ. ಪ್ರಕೃತಿಯ ಮಡಿಲಲ್ಲಿ ಶಾಂತವಾಗಿ ಮಲಗಿದ್ದ, ವಿದ್ಯಾರ್ಥಿಗಳೆಲ್ಲ ತಂಗುತ್ತಿದ್ದ ಛತ್ರದ ಸುತ್ತ ಮುತ್ತ ಅಂಗಡಿ ಮುಂಗಟ್ಟು ಬಂದಿವೆ, ಅದು ನಿರೀಕ್ಷಿಸಬಹುದಾದ ವ್ಯತ್ಯಾಸ. ನಾವು ಸರ್ವೇ ಮಾಡಿದ ಪ್ರದೇಶಗಳು ಹೆಚ್ಚು ವ್ಯತ್ಯಾಸವಾದಂತೆ ತೋರಲಿಲ್ಲ. ಕೋತಿಗಳ ಕಾಟ ಸ್ವಲ್ಪ ಹೆಚ್ಚಾಗಿತ್ತು ಅಷ್ಟೆ.

ನಂದಿ ಬೆಟ್ಟದ ಮೇಲೆ ಉದ್ಯಾನ ಚೆನ್ನಾಗಿದೆ. ಆದರೆ, 5,000 ಅಡಿ ಎತ್ತರದಲ್ಲಿ ನಾನು ನಿರೀಕ್ಷಿಸದಷ್ಟು ತಣ್ಣಗಿರಲಿಲ್ಲ. ಜಗತ್ತಿನ ಉಷ್ಣ ಅಧಿಕವಾಗುತ್ತಿರುವುದೇ ಇದಕ್ಕೆ ಕಾರಣವಿರಬಹುದು. ನಂದಿಯಿಂದ ಹಿಂದಿರುಗುವಾಗ, ಇನ್ನೇನು ಸಧ್ಯದಲ್ಲೇ ಪ್ರಾರಂಭವಾಗುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಗರಕ್ಕೆ ಎಷ್ಟು ದೂರ ಎಂಬುದರ ಒಂದು ಕಲ್ಪನೆ ಬಂತು. ವೇಗವಾಹಕ ವ್ಯವಸ್ಥೆ (ರಾಪಿಡ್ ಟ್ರ್ಯಾನ್ಸಿಟ್) ಆಗದೇ ಇದ್ದರೆ, ಬೆಂಗಳೂರಿನ ಭವಿಷ್ಯ ಕರಾಳವಾಗುವುದು ನಿಸ್ಸಂಶಯ.

ನಮ್ಮ ಯಾತ್ರೆಯಲ್ಲಿ ದಾರಿಯಲ್ಲಿ ಹಲವಾರು ಕಡೆ ಮಾಡಿದ ಸೀಬೆ ಹಲಸುಗಳ ಸೇವೆ, ಎಳನೀರು ಪಾನ ಖುಷಿ ಕೊಟ್ಟಿತ್ತು. ಆದರೆ, ಇಡೀ ಯಾತ್ರೆಯಲ್ಲಿ ಮನಸ್ಸಿನಮೇಲೆ ಪರಿಣಾಮ ಬೀರಿದ ಒಂದು ಎಳನೀರುಪಾನ ಅಂದರೆ, ಬೆಂಗಳೂರಿನ ಗಾಂಧೀ ಬಜಾರಿನ ಸುಬ್ಬಮ್ಮನ ಅಂಗಡಿಯ ಮುಂದೆ. ಕಾರಣ, ಆ ಎಳನೀರಿನವ ಒಬ್ಬ ಜವಾಬ್ದಾರಿಯ ಮನುಷ್ಯ. ರಸ್ತೆಯಲ್ಲಿ ಗಲೀಜು ಮಾಡಬಾರದೆಂಬ ಪರಿಸರಪ್ರಜ್ಞೆಯುಳ್ಳವನು. ಕಾಯಿನ ಗೊಂಚಲುಗಳನ್ನು ತನ್ನ ಸೈಕಲ್ಲಿನ ಹಿಂಭಾಗಕ್ಕೆ ಕಟ್ಟಿಕೊಂಡಿದ್ದ. ಸುಲಿದ ಜುಂಗನ್ನು, ಇಭ್ಭಾಗಮಾಡಿದ ಚಿಪ್ಪುಗಳನ್ನು ಶೇಖರಿಸಲು ತೆರೆದ ಬಾಯಿನ ಒಂದು ಚೀಲವನ್ನು ಬಾರಿನ ಮೇಲೆ ಇಟ್ಟುಕೊಂಡಿದ್ದ. ಕೆತ್ತಿದಾಗ ಒಂದೇ ಒಂದು ಚೂರು ಹೊರಗಡೆ ಬೀಳದಂತೆ ಉಳಿಕೆಗಳನ್ನೆಲ್ಲಾ ಸಂಗ್ರಹಿಸಿಕೊಳ್ಳುತ್ತಿದ್ದ. ಸಾರಿನಪುಡಿ ಹುಳಿಪುಡಿಗಳಿಗಾಗಿ ಕಿತ್ತಾಡುತ್ತಿದ್ದ ನಮ್ಮಂಥ ಗ್ರಾಹಕರಿಗೆ ಆ ಬಿಸಿಲಿನಲ್ಲಿ ದಾಹವನ್ನು ತಣಿಸಿಕೊಳ್ಳಲು ಅವಕಾಶಮಾಡಿಕೊಟ್ಟು, ತಂದಿದ್ದ ಇಡೀ ಗೊಂಚಲನ್ನು ಮಾರಿ, ನೀಟಾಗಿ ಹಿಂದಿರುಗಿದ್ದನ್ನು ಕಂಡು ಮನಸ್ಸಿಗೆ ಖುಷಿಯಾಯಿತು.

ನಮ್ಮ ಹಿಂದಿನ ಭೇಟಿಗೂ ಈ ಭೇಟಿಗೂ ನಡುವೆ ಭಾರತದಲ್ಲೊಂದು ಸೆಲ್ ಫೋನ್ ಕ್ರಾಂತಿ ನಡೆದಿರುವುದು ಅನುಭವಕ್ಕೆ ಬಂತು. ಮಕ್ಕಳು, ಮರಿಗಳು, ಹೆಂಗಸರು, ವೃದ್ಧರು, ಬಡವರು, ಬಲ್ಲಿದರೆಂಬ ಯಾವ ಭೇದವೂ ಇಲ್ಲದೇ ಜನರು ಒಂದೇ ಸಮನೆ ಕಿವಿಗೆ ಸೆಲ್ ಫೋನನ್ನು ಅಂಟಿಸಿಕೊಂಡೇ ಇರುತ್ತಾರೆ. ವಾಹನಚಾಲಕರು (ದ್ವಿಚಕ್ರಿಗಳೂ ಸೇರಿದಂತೆ) ನಿರರ್ಗಳವಾಗಿ ಅವಿಶ್ರಾಂತವಾಗಿ ಮಾತಾಡುವುದನ್ನು ನೋಡಿದರೆ ಆ ನಮ್ಮ ಬೆಂಗಳೂರು ಮೊಬೈಲೂರಾಗಿದೆ ಎನ್ನಿಸಿತು! ಮತ್ತೊಂದು ಗೋಚರವಾಗಿದ್ದು ಏನೆಂದರೆ, ಪ್ರತಿ ಮನೆಯಲ್ಲೂ ಜನಗಳು ಒಂದಲ್ಲಾ ಒಂದು "ಸಾಬೂನು-ಕಥಾನಕ" (ಸೋಪ್ ಆಪೆರಾ) ನೋಡುವ ಚಟಕ್ಕೆ ಬಿದ್ದಿದ್ದಾರೆ! ಪಾತ್ರಗಳು ಹೇಳಲಿರುವ ಸಂಭಾಷಣೆಗಳನ್ನು ಅವರಿಗಿಂತ ಮೊದಲು ನೋಡುಗರೇ ಹೇಳುವುದನ್ನು ಕೇಳಿ ಕೇಳಿ ಖುಷಿಪಟ್ಟೆ.

ಮುಗಿಸುವ ಮುನ್ನ: ಬೇಸಿಗೆಯಲ್ಲಿ ಭಾರತದ ದೇವಸ್ಥಾನಗಳಿಗೆ ಭೇಟಿ ಕೊಟ್ಟಾಗ, ಆಲಯದ ಹೊರಾಂಗಣಗಳಲ್ಲಿ ಬರಿಗಾಲಿನಲ್ಲಿ ಕಾದ ಕಲ್ಲಿನ ಚಪ್ಪಡಿಗಳಮೇಲೆ ನಡೆದಾಗ ಬೊಬ್ಬೆ ಬರುವಷ್ಟು ಶಾಖದ ಅನುಭವವಾಗಿ, ಮನಸ್ಸಿಟ್ಟು ನೋಡುವುದೂ ಕಷ್ಟವಾಗುತ್ತದೆ. ಇದಕ್ಕೆ ಒಂದು ಸುಲಭೋಪಾಯವನ್ನು ಕಂಡುಹಿಡಿಯಬಾರದೇಕೆ ಎನ್ನಿಸಿತು. ಉದಾಹರಣೆಗೆ ಪ್ರಾಂಗಣದೊಳಗೆ ಉಪಯೋಗಿಸಿ ಬಿಸಾಡುವಂಥ ಎಲೆಗಳಿಂದ ಮಾಡಿದ ಅಥವಾ ಅಡಕೆ ಪಟ್ಟೆಯ ಪುಟ್ಟ ಪಾದರಕ್ಷೆಗಳನ್ನು ಮಾಡಿ ಚಪ್ಪಲಿ ಕಾಯುವ ಜನರೇ ಅವನ್ನು ಬೇಕಾದವರಿಗೆ ಒದಗಿಸಿದರೆ ಹೇಗೆ? ಬೇಲೂರು, ಹಳೇಬೀಡಿನಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಪಾಶ್ಚಿಮಾತ್ಯರು ಇಂಥ ಒಂದು ಅನುಕೂಲವನ್ನು ಮನಸಾ ಮೆಚ್ಚುತ್ತಾರೆ ಮತ್ತು ಅದಕ್ಕೆ ಓಂದಿಷ್ಟು ದಕ್ಷಿಣೆ ಕೊಡಲು ಹಿಂದೆಗೆಯುವುದಿಲ್ಲ ಎಂದು ನನ್ನ ಭಾವನೆ. ಇವನೆಂಥ ಕೋಮಲಪಾದ ಎಂದುಕೊಳ್ಳಬೇಡಿ, ಭಾರತದ ಬೇಸಿಗೆಯಲ್ಲಿ ಕಾದ ಕಲ್ಲಿನ ಮೇಲಿನ ನಡಿಗೆ ಹುಡುಗಾಟವಲ್ಲ!

ವಾಪಸ್ ಬರುವಾಗ ಪ್ರಯಾಣ ಮುಗಿಯುವುದೇ ಇಲ್ಲವೇನೋ ಎನ್ನುವಷ್ಟು ಉದ್ದವೆನಿಸಿತು. ಹಿಂದೆಲ್ಲಾ, ಭಾರತದಲ್ಲಿ ನೂಕುವಗಾಡಿಗಳಿಗೆ ಕಾಸು ತೆರಬೇಕಾಗಿತ್ತು. ಈಗ ಪುಕ್ಕಟ್ಟೆ. ಆದರೆ, ಅಮೇರಿಕದಲ್ಲಿ ನೂಕುಗಾಡಿಗೆ ಕಾಸು ಕೀಳುತ್ತಿದ್ದಾರೆ. ಚಕ್ರ ಸುತ್ತುತ್ತಿದೆ. ಇಲ್ಲಾಗಿದ್ದು ಅಲ್ಲಿ, ಅಲ್ಲಾಗಿದ್ದು ಇಲ್ಲಿ. ಅಂತೂ ಕಾಲಚಕ್ರದ ಪರಿಭ್ರಮಣೆ ಮುಂದುವರೆಯುತ್ತಿದೆ! ಒಟ್ಟಿನಲ್ಲಿ, ನಾವು ಹೋದ ಉದ್ದೇಶ ಮನೆಮಂದಿಯೊಂದಿಗೆ ಕಾಲಕಳೆಯುವುದು, ಅದು ಸಫಲವಾಯಿತು. ಈ ಬಾರಿ ಸೊಳ್ಳೆ ಕಾಟ ಅಲ್ಲೊಂದು ಇಲ್ಲೊಂದು ಬಿಟ್ಟರೆ, ಅನುಭವಿಸಲಿಲ್ಲ. (ನಮ್ಮ ಮಿತ್ರರಾದ ಪೇಜತ್ತಾಯರು ಓಡೋಮಸ್ಸಿನ ಒಂದು ಟ್ಯೂಬನ್ನು ನನಗೆ ಕೊಟ್ಟಿದ್ದರೂ ಅದನ್ನು ಉಪಯೋಗಿಸುವ ಸಂದರ್ಭ ಬರಲೇ ಇಲ್ಲ!) ನೀರಿನಬಗ್ಗೆ ಜಾಗರೂಕತೆಯಿಂದ ಇದ್ದೆವು, ಹಾಗಾಗಿ ಹೊಟ್ಟೆಯೂ ತಹಬಂದಿಯಲ್ಲಿತ್ತು. ಈ ಬಾರಿಯ ಭಾರತ ಪ್ರವಾಸದಿಂದ ನಾನು ಕಟ್ಟಿಕೊಂಡು ಬಂದ ನೆನಪುಗಳ ಕಟ್ಟು ದೊಡ್ಡದೇ. ಆ ಟ್ರಂಕಿನಿಂದ ಆಯ್ದ ಕೆಲವನ್ನು ಬಿಚ್ಚಿ ನಿಮ್ಮ ಮುಂದಿಟ್ಟಿದ್ದೇನೆ. ನಮಸ್ಕಾರ.( ಮುಗಿಯಿತು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X