ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಭಾರತಯಾತ್ರೆಯ ಮೆಲಕುಗಳು:ಮೈಶ್ರೀ ನ

By Staff
|
Google Oneindia Kannada News

Horanadu Temple entranceಮನೆಮಂದಿ ಸಮೇತ ಕರ್ನಾಟಕದ ನಾನಾ ಪ್ರದೇಶಗಳ ಊರುಕೇರಿಗಳಲ್ಲಿ ಅಲೆಯುವುದೊಂದು ಸೊಗಸು. ನಮ್ಮ ನಾಡಿನ ಒಳಪದರಗಳಲ್ಲಿ ಕೈಗೊಳ್ಳುವ ಪ್ರವಾಸ ಕಟ್ಟಿಕೊಡುವ ಅನುಭವ ತನಗೆತಾನೆ ವಿಶಿಷ್ಟವಾಗಿರುತ್ತವೆ. ದಾರಿಯುದ್ದಕ್ಕೂ ಸ್ನೇಹಿತರ ಕೈಕುಲುಕಾಟ, ಮಾತು ಮೌನದ ನಡುವೆ ನೆಂಟರ ಮನೆಯ ಊಟ,ಗುಡಿಗುಂಡಾರಗಳ ಪ್ರದಕ್ಷಿಣೆ, ಅನುಭವವೇ ಪ್ರಸಾದ.

ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ಮೂರು ವಾರಗಳ ಭಾರತದ ಪ್ರವಾಸ ಮೂರೇ ದಿನಗಳಂತೆ ಕಳೆದು ಹೋಯಿತು. ಹಿಂದೆ ಮಾಡಿದ ಅನೇಕ ಭೇಟಿಗಳಂತೆ ಇದೂ ನೆನಪಿನ ಉಗ್ರಾಣವನ್ನು ಸೇರಿಹೋಯಿತು. ಇನ್ನೊಂದುಬಾರಿ ಭೇಟಿ ಮಾಡುವವರೆಗೂ ಮೆಲಕು ಹಾಕಲು ಸಾಕಷ್ಟು ವಿವರಗಳೂ ನೆನಪಿನಲ್ಲಿ ಉಳಿದಿವೆ. ಹೆಚ್ಚಿನ ವಿವರಗಳನ್ನು ಬಿಟ್ಟು, ಆಯ್ದ ಕೆಲವು ಅನಿಸಿಕೆಗಳನ್ನು, ನೆನಪುಗಳನ್ನು ಮೆಲಕುಹಾಕುವ ಉದ್ದೇಶದಿಂದ, ತುಣುಕುಗಳ ರೂಪದಲ್ಲಿ ಭಟ್ಟಿ ಇಳಿಸಲುಯತ್ನಿಸುತ್ತೇನೆ.

ಹೊಸದಾಗಿ ಪ್ರಾರಂಭವಾದ ಜೆಟ್ ಏರ್ ಸಂಸ್ಥೆ ಉತ್ತಮಮಟ್ಟದ ಸೇವೆಯನ್ನೇ ಕೊಟ್ಟಿತಾದರೂ, ವಾಷಿಂಗ್‌ಟನ್ ಡಿ.ಸಿ.ಯಿಂದ ಬೆಂಗಳೂರಿಗೆ ಪಯಣಿಸುವವರಿಗೆ ಅನುಕೂಲಕರವಲ್ಲ ಎನ್ನಿಸುತ್ತದೆ. ನುವರ್ಕಿನಲ್ಲಿ, ಬ್ರಸ್ಸೆಲ್ಸಿನಲ್ಲಿ, ಮುಂಬಯಿನಲ್ಲಿ ಕಾಯುತ್ತಾ ಕ(ಕೊ)ಳೆಯುವ ಸಮಯದ ಬೆಲೆ, ಟಿಕೆಟ್ಟಿನಲ್ಲಿ ಆಗುವ ಉಳಿತಾಯಕ್ಕಿಂತ ಹೆಚ್ಚು. ಬ್ರಸ್ಸೆಲ್ಸಿನಲ್ಲಿ ವೃಥಾ ಪಯಣಿಗರನ್ನು ಸೆಕ್ಯೂರಿಟಿ ಚೆಕ್ಕಿಗೆ ಕಳುಹಿಸಲು ಕಾರಣವೇನೆಂದು ನನಗೆ ಹೊಳೆಯಲಿಲ್ಲ. ನಾವು ಟರ್ಮಿನಲ್ಲನ್ನಾಗಲೀ ಗೇಟನ್ನಾಗಲೀ ಬದಲಾಯಿಸಲಿಲ್ಲ. ಪ್ರಾಯಶಃ, ಎಲ್ಲರೂ ಡ್ಯೂಟಿ ಫ್ರೀ ಲೌಂಜಿಗೆ ಭೇಟಿಕೊಟ್ಟು ಚಾಕಲೇಟು, ವಿಸ್ಕಿ ಮುಂತಾದ ಪದಾರ್ಥಗಳನ್ನು ಖರೀದಿಸಿ ಹಿಂದುರಗಲೆಂಬ ಉದ್ದೇಶವಿರಬಹುದು.

ನಾವು ತಲುಪುವ ಮುನ್ನ ಬರುತ್ತಿದ್ದ ಅಕಾಲಿಕ ಮಳೆ ನಿಂತು ಸ್ವಲ್ಪ ಮಟ್ಟಿಗೆ ಸೆಖೆ ಶುರುವಾಗಿತ್ತು. ಭಾನುವಾರ ಬೆಳಿಗ್ಗೆ ಬೆಂಗಳೂರು ತಲುಪಿದ್ದರಿಂದ ಮನೆ ಸೇರಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ, ಬೆಂಗಳೂರು ಗುರುತು ಸಿಕ್ಕದಷ್ಟು ಬೆಳೆದಿದೆ, ಇನ್ನೂ ಬೆಳೆಯುತ್ತಲೇ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಒಂದೆರಡು ದಿನಗಳೇ ಸಾಕು. ಅದೇ ಊರಿನಲ್ಲಿ ವಾಸಿಸುವ ಸ್ಥಳೀಕರಿಗೂ ಕೆಲವೇ ತಿಂಗಳ ಹಿಂದೆ ಭೇಟಿಕೊಟ್ಟ ಸ್ಥಳವನ್ನು ಗುರುತಿಸಲಾಗದಷ್ಟು ಹೊಸ ಕಟ್ಟಡಗಳು ಪ್ರತಿ ಬಡಾವಣೆಯಲ್ಲೂ ಆಗುತ್ತಿವೆ. ಒಳ್ಳೊಳ್ಳೆ ಸೌಧಗಳು ಎದ್ದಿವೆ. ಒಳಗಡೆ ಭವ್ಯವಾದ ವಿನ್ಯಾಸಗಳಿಂದ ಕಂಗೊಳಿಸುವ ಉತ್ತಮ ಶೈಲಿಯ ಮನೆಗಳು ಅಭಿವೃದ್ಧಿಯ ದ್ಯೋತಕವಾಗಿವೆ. ಆದರೆ ಒಳಗಡೆ ಮಾತ್ರ. ಹೊರಗಡೆ ಬಂದರೆ ಎಲ್ಲ ಅಸ್ತವ್ಯಸ್ತ.

ಬೆಂಗಳೂರಿಗೆ ಎಷ್ಟೇ ಸಲ ಭೇಟಿ ಕೊಟ್ಟಿದ್ದರೂ, ಇದೇ ಮೊದಲು ಗವಿ ಗಂಗಾಧರೇಶ್ವರನ ದರ್ಶನಭಾಗ್ಯ ದೊರೆತದ್ದು. ಆಲಯದೊಳಗೆ ಅಲಂಕಾರ, ದೀಪ, ಧೂಪ, ಅಭಿಷೇಕ. ದರ್ಶನ ಪಡೆದು ಧನ್ಯನಾಗಿ ಹೊರಬಂದರೆ ಪೌಳಿಯ ಪಕ್ಕದಲ್ಲೇ ಕಸದ ತಿಪ್ಪೆ! ಕಂಡು ಸಂಕಟವಾಯಿತು. ಇದು ದೇವಾಲಯ ನಡೆಸುವವರ ಗಮನಕ್ಕೆ ಬಾರದೇ ಇರುವುದು ಶೋಚನೀಯ. ಇಂಥಾ ಪ್ರೇಕ್ಷಣೀಯ ಹಾಗೂ ಪವಿತ್ರ ಸ್ಥಳಗಳ ಸುತ್ತ ಕಸವನ್ನು ಗುಡ್ಡೆಹಾಕಬಾರದೆಂದು ಪೌರರಿಗೆ ಅರಿವಿಲ್ಲ, ಕಸದ ವಿಲೇವಾರಿಯಬಗ್ಗೆ ಪುರಸಭೆಗೆ ಗಮನವಿಲ್ಲ.

ಬೆಂಗಳೂರಿಗೆ ಹೋದಮೇಲೆ ಬಟ್ಟೆಬರೆ, ಸೀರೆ, ಸಲ್ವಾರ್, ಕುರ್ತಾ, ಪಜಾಮ ವಗೈರೆ ಖರೀದಿ ಇದ್ದದ್ದೇ. ನಂತರ ಸೀರೆಗೆ ಫಾಲ್ ಹಾಕಿಸಬೇಕು, ಸೆರಗಿಗೆ ಕುಚ್ಚು ಕಟ್ಟಿಸಬೇಕು, ರವಿಕೆ ಇತ್ಯಾದಿ ಹೊಲಿಸಬೇಕು, ಉದ್ದ ಹೆಚ್ಚಾದರೆ ಸರಿಪಡಿಸಬೇಕು. ಬೆಂಗಳೂರಿನ ದರ್ಜಿಗಳು ಹಿಂದಿನಂತೆಯೇ, "ಆಗ ಬಾ, ಈಗ ಬಾ, ಹೋಗಿಬಾ" ಎನ್ನುತ್ತ "ಇದೋ ಇನ್ನೇನು ಕೊಟ್ಟೆ," "ಕಾಫೀ ಕುಡಿದು ಬನ್ನಿ," "ಕಾಜ ಹಾಕಿದರಾಯಿತು," "ಎಲ್ಲಾ ಕತ್ತರಿಸಿಟ್ಟಿದ್ದೇನೆ, ಹೊಲಿಗೆ ಹಾಕುವುದು ಎಷ್ಟು ಹೊತ್ತು," ಮುಂತಾದ ಸಬೂಬು ಹೇಳುವುದನ್ನು ಬಿಟ್ಟಿಲ್ಲ. ಆದರೂ, ಹಬ್ಬದ ಸೀಸನ್ನಿನಲ್ಲಿ, ನಮ್ಮ ಅರ್ಜೆಂಟಿಗೆ (ದುಪ್ಪಟ್ಟು ಮಜೂರಿ ತೆಗೆದುಕೊಂಡು) ಮಾಡಿಕೊಟ್ಟರೆನ್ನುವುದು ಸಮಾಧಾನದ/ಆಶ್ಚರ್ಯದ ವಿಷಯ.

ನಾನು ಇತ್ತೀಚೆಗೆ ಹಿಂದಿಯಿಂದ ಭಾಷಾಂತರಿಸಿರುವ ನಾಟಕದ ಪ್ರತಿಯನ್ನು ಕೊಡಲು ಕಿರಿಯ ಗೆಳೆಯ, ಪ್ರಸಿದ್ಧ ನಿರ್ದೇಶಕ, ಹಾಗು ಅನೇಕ ಜನಪ್ರಿಯ ಧಾರಾವಾಹಿಗಳ ಜನಕ, ಟಿ. ಎನ್. ಸೀತಾರಾಮ್ ಮನೆಗೆ ಕೊಟ್ಟ ಭೇಟಿ ಸಿಹಿ ನೆನಪುಗಳ ಪೈಕಿಯದು. ವಿದ್ಯಾರ್ಥಿಜೀವನದ ಹಳೆಯ ನೆನಪುಗಳನ್ನು ಸವಿಯುತ್ತ, ಅದೇ ತಾನೇ ಬೀಜ ಹುರಿದು ಪುಡಿಮಾಡಿ ತಯಾರಿಸಿದ ಅವರ ಮನೆಯ ಉತ್ತಮ ರುಚಿಯ ಪ್ರಸಿದ್ಧ ಕಾಫೀ ಸೇವನೆ ಸಹ ಮೆಲಕಿಗೆ ಯೋಗ್ಯ.

ನಮ್ಮ ತಾಯಿಯ ಒಡಹುಟ್ಟಿದವರಲ್ಲಿ ಇನ್ನೂ ಉಳಿದಿರುವ ಏಕೈಕ ಚಿಕ್ಕಮ್ಮನೊಂದಿಗೆ ಕಳೆದ ಒಂದು ಗಂಟೆ ಸಹ ಸ್ಮರಣೀಯ. ವಯಸ್ಸಾಗಿ ಸೋತಿದ್ದರೂ, ಜಾರಿಬಿದ್ದು ಕೈಮುರಿದುಕೊಂಡು ಮೂಳೆಗೆ ಲೋಹವನ್ನು ಅಂಟಿಸಿದ್ದರೂ, ಲವಲವಿಕೆಯಿಂದ ಹಳೆಯ ನೆನಪುಗಳನ್ನು ಮಾಡಿಕೊಂಡ ಅವರ ಅದ್ಭುತ ಜ್ಞಾಪಕಶಕ್ತಿಗೆ ನಮೋ ಎಂದೆ.

ಇರುವ ಮಿತವಾದ ಕಾಲದಲ್ಲೇ ಬೇಕಾದ ನಾಲ್ಕಾರು ಜನರನ್ನು ಒಟ್ಟಾಗೇ ನೋಡುವ ನನ್ನ ಆಸೆಯನ್ನು ಪೂರೈಸಲು ಅದುವೆ ಕನ್ನಡದ ಶಾಮ ಸುಂದರ್ ನಮ್ಮನ್ನು ವಿಜಯ ಕರ್ನಾಟಕದ ಕಛೇರಿಗೆ ಕರೆದೊಯ್ದರು. ಅಲ್ಲಿ, ಮುಖ್ಯ ಸಂಪಾದಕರಾದ ವಿಶ್ವೇಶ್ವರ ಭಟ್ಟರೊಂದಿಗೆ ಲಂಚ್ ಮೀಟಿಂಗ್. ಅಲ್ಲಿಗೇ ನಮ್ಮ "ಈ-ಬಂಧು/ಈ-ಮಿತ್ರ"ರುಗಳಾದ ಮಧುಸೂದನ ಪೇಜತ್ತಾಯರ ಕುಟುಂಬ, ಬರಹ ವಾಸುವಿನ ತೀರ್ಥರೂಪರಾದ ಚಂದ್ರಶೇಖರನ್ ಸಹ ನಮ್ಮ ಆಹ್ವಾನವನ್ನು ಮನ್ನಿಸಿ ಬಂದು ಸೇರಿಕೊಂಡರು. ಯಾವ ಅಜೆಂಡಾವೂ ಇಲ್ಲದೇ ಮನಸ್ಸಿಗೆ ತೋಚಿದ ವಿಷಯಗಳಮೇಲೆ ಎಲ್ಲಾ ಹರಟುತ್ತಾ ಉಂಡೆವು. ಕನ್ನಡದ ಅತ್ಯಂತ ಜನಪ್ರಿಯ ಹಾಗು ಹೆಚ್ಚು ಸಂಖ್ಯೆಯಲ್ಲಿ ಮುದ್ರಣವಾಗುವ ಒಂದು ಪತ್ರಿಕೆಯ ಮುಂದಾಳತ್ವವನ್ನು ವಹಿಸಿರುವ ಭಟ್ಟರ ವಾಗ್ವೈಖರಿಯನ್ನು ಕೇಳುವುದೇ ಖುಶಿ. ಭಟ್ಟರ ವ್ಯಾಖ್ಯಾನಕ್ಕೆ ಶಾಮ್ ಹಾಕುತ್ತಿದ್ದ ಒಗ್ಗರಣೆ ಊಟದ ರುಚಿಯನ್ನು ಹೆಚ್ಚಿಸಿತ್ತು! ಅಲ್ಲಿ ಕೆಲಸ ಮಾಡುವ ನಟೇಶ್ ಬಾಬು ಮತ್ತು ಪ್ರತಾಪ ಸಿಂಹರುಗಳ ಭೇಟಿಯೂ ಆಯಿತು. ಅಷ್ಟೇ ಅಲ್ಲ, ಹಿಂದೆ ನಾನು ಸಾಕಷ್ಟು ಕೇಳಿದ್ದ, ನಾಟಕ ಕ್ಷೇತ್ರದಲ್ಲಿ ಹಲವು ದಶಕಗಳು ದುಡಿದು ಪ್ರಸಿದ್ಧರಾಗಿರುವ ಬಿ.ಎಸ್. ಕೇಶವ ರಾವ್ ಅವರ ಅಚಾನಕ್ ಭೇಟಿಯೂ ಆಯಿತು. ಕರ್ನಾಟಕದ ರಾಜಕೀಯದಿಂದ ಹಿಡಿದು, ಇಡೀ ಭಾರತದ ಸುತ್ತ ಸುತ್ತಾಡಿದ ಆ ಕೂಟ ಮೆಲಕುಹಾಕಲು ಯೋಗ್ಯವಾಗಿತ್ತು.

ಬೆಂಗಳೂರಿಂದ ಹಾಸನಕ್ಕೆ ಹೋಗುವ ದಾರಿಯಲ್ಲಿ, ಆದಿ ಚುಂಚನಗಿರಿ ಕ್ಷೇತ್ರಕ್ಕೆ ಒಂದು ಸಣ್ಣ ಡೀಟೂರ್. ವಿದ್ಯಾ ಕೇಂದ್ರವಾಗಿರುವಂತೆ, ಈ ಸ್ಥಳ ಪುಣ್ಯಸ್ಥಳವೂ ಆಗಿದೆ. ಇತ್ತೀಚೆಗೆ ಶ್ರೀ ಬಾಲಗಂಗಾಧರಸ್ವಾಮಿಗಳ ನೇತೃತ್ವದಲ್ಲಿ ಕಟ್ಟಿರುವ ಕಾಲಭೈರವ ದೇವಾಲಯ ಬೃಹತ್ತಾಗಿದೆ. ಇನ್ನೂ ಕೆಲಸ ನಡೆಯುತ್ತಿದೆಯಾದರೂ ಭೈರವನ ನಾನಾ ರೂಪಗಳನ್ನು ಭವ್ಯವಾಗಿ ಕೆತ್ತಿ ಶಿಲ್ಪಿಗಳು ಸಾಕಷ್ಟು ಶಿಲ್ಪಕಲಾಚಾತುರ್ಯವನ್ನು ಪ್ರದರ್ಶಿಸಿದ್ದಾರೆ.

ಹಾಸನದ ಬಳಿ ಮಾವಿನಕೆರೆ ಕ್ಷೇತ್ರ ಪ್ರಸಿದ್ಧವಾದದ್ದು. ನಮ್ಮ ಕುಲದೈವ. ಹಾಸನಕ್ಕೆ ಹೋದಾಗಲೆಲ್ಲ ಒಂದಿಷ್ಟು ಕೈಂಕರ್ಯ ಮಾಡುವುದು, ಮನೆಮಂದಿಯೆಲ್ಲಾ ಒಟ್ಟಾಗಿ ಹೋಗಿ ಬೆಟ್ಟದ ಮೇಲೆ ಮತ್ತು ಕೆಳಗೆ ಸೇವೆ ಮಾಡಿ ಬರುವುದು ನಮ್ಮ ಪೂರ್ವಿಕರಿಂದ ಬಂದಿರುವ ಸಂಪ್ರದಾಯ. ಬೆಟ್ಟದಮೇಲೆ ಲಿಂಗರೂಪೀ ವಿಷ್ಣು, ರಂಗನಾಥ ಎಂಬ ಹೆಸರಿನಲ್ಲಿ ಪೂಜೆ ಸ್ವೀಕರಿಸಿದರೆ, ಬೆಟ್ಟದ ಕೆಳಗೆ ಹೇಮಾವತಿಯ ದಡದಲ್ಲಿ ಅವನಿಗೆ ಲಕ್ಷ್ಮೀ ವೆಂಕಟೇಶ್ವರನ ಹೆಸರಿನಲ್ಲಿ ಪೂಜೆ ಸಲ್ಲುತ್ತದೆ. ಇಲ್ಲಿಯವರೆಗೂ ಬೆಟ್ಟಕ್ಕೆ ಹತ್ತಿಯೇ ಹೋಗಬೇಕಾಗಿತ್ತು. ಇತ್ತೀಚೆಗೆ, ಬೆಟ್ಟದ ಮೇಲಕ್ಕೂ ವಾಹನ ಹೋಗುವಂತೆ ರಸ್ತೆಯಾಗಿದೆ. ಅನೇಕ ಭಕ್ತರ ಸಹಕಾರದಿಂದ, ಉತ್ತಮವಾದ ಮೆಟ್ಟಿಲುಗಳೂ ಜೋಡಿಸಲ್ಪಟ್ಟಿವೆ. ಮೇಲಿನ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಮೊದಲ ಬಾರಿ ಕಾರಿನಲ್ಲೇ ಮೇಲಕ್ಕೂ ಹೋದದ್ದು ಒಂದು ಹೊಸ ಅನುಭವ. ಈ ಕ್ಷೇತ್ರದ ಬಗ್ಗೆ ಮತ್ತೆ ಬರೆಯುತ್ತೇನೆ.

ಹಾಸನವೂ ಎಲ್ಲಾ ಊರುಗಳಂತೆ ಹುಚ್ಚಾಬಟ್ಟೆ ಬೆಳೆಯುತ್ತಿದೆ. ಮನೆಗಳಿವೆ, ಆದರೆ, ಅವುಗಳ ಬಳಿ ಹೋಗಿ ತಲುಪಲು ರಸ್ತೆಗಳಿಲ್ಲ. ಇದು ನಿಜಕ್ಕೂ ಸಂಕಟಕರ. ನಮ್ಮದೂ ಒಂದು ಸೈಟಿದೆ. ಸೈಟನ್ನು ನೋಡೋಣವೆಂದು ಹೋದರೆ, ಹಿಂದೆ ಹಾಕಿಸಿದ್ದ ಎಲ್ಲೆ ಕಲ್ಲುಗಳೇ ಮಾಯವಾಗಿವೆ!. ಲೆ-ಔಟ್ ಮಾಡಿದವರು ರಸ್ತೆಯ ಇಕ್ಕೆಲಗಳಲ್ಲೂ ಮೂರು ಮೂರು ಅಡಿ ನೆಲವನ್ನು ಹೇಳದೇ ಕೇಳದೇ ಕಬಳಿಸಲು ನಿರ್ಧರಿಸಿದ್ದು ಹೋದಬಾರಿಯೇ ತಿಳಿದಿತ್ತು. ನಮ್ಮ ಸೈಟಿನ ಎದುರಿನ ಸೈಟಿನ ಸಜ್ಜನರು, ತಮ್ಮ ಸ್ವಂತ ನಿರ್ಧಾರದಿಂದ ಪೂರ್ತಿ ಆರಡಿ ನೆಲವನ್ನು ನಮ್ಮಕಡೆಯಿಂದ ಕಸಿದುಕೊಂಡು ತಮಗೆ ಯಾವ ನಷ್ಟವೂ ಆಗದಂತೆ ಮನೆ ಕಟ್ಟಿಸಲು ತಳಪಾಯ ತೋಡಿಸಿದ್ದು ತಿಳಿದು, ಲಾಯರ್ ನೋಟೀಸ್ ಕೊಟ್ಟು ನಾಲ್ಕು ವರ್ಷಗಳಾದರೂ ನ್ಯಾಯಾಲಯ ಯಾವ ತೀರ್ಪನ್ನೂ ಕೊಟ್ಟಂತೆ ಕಾಣಲಿಲ್ಲ. ನನ್ನ ತಮ್ಮ ಹೇಳುವ ಪ್ರಕಾರ, ಹಾಸನದಲ್ಲಿ "ಲಾ" ಎಂದರೆ, "ಏನ್‌ಲಾ"? "ಯಾಕ್‌ಲಾ?" ಎನ್ನುತ್ತಾರಂತೆ! "ಇನ್ಯಾವೋನ್-ಲಾ" ತರೋಣ ಎಂದು ನನ್ನ ತಮ್ಮ ಗಹಗಹಿಸಿ ನಕ್ಕನಾದರೂ ನನಗೆ ಬಂದಿದ್ದು "ಹುಳಿನಗೆ" ಮಾತ್ರ.

ಆಪ್ತರ ಜೊತೆಯಲ್ಲಿ ನಡೆಸಿದ ಪಶ್ಚಿಮಘಟ್ಟದ ಯಾತ್ರೆ ಚಿರಸ್ಮರಣೀಯ. ಮೂರೇ ದಿನಗಳಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ್ದರಿಂದ ಎಲ್ಲ ವಿವರಗಳು ಮನಸ್ಸಿನಲ್ಲಿ ಉಳಿಯದಿದ್ದರೂ, ದಾರಿಯುದ್ದಕ್ಕೂ ಸವಿದ ಪ್ರಕೃತಿಯ ಸೌಂದರ್ಯ ಮಾತ್ರ ಕಣ್ಣಿಗೆ ಕಟ್ಟಿಯೇ ಇರುತ್ತದೆ. ಕುದುರೆಮುಖ ಪರ್ವತಶ್ರೇಣಿ, ಸುತ್ತಮುತ್ತಲ, ಕಾಡುಗಳು, ಕಾಫೀ ತೋಟಗಳು, ವಿಳ್ಳೆಯದೆಲೆಯ ಹಂಬಿನಂತೆ ಕಾಣುವ ಮೆಣಸಿನ ಬಳ್ಳಿಗಳು, ಮಧ್ಯೆಮಧ್ಯೆ ಕಾಣುವ ಅಮಟೇ ಕಾಯಿ, ಮಾವಿನಕಾಯಿನ ಗೊಂಚಲುಗಳು, ಗೇರುಬೀಜದ ಮರಗಳು, ಅಪರೂಪಕ್ಕೆ ಸಿಕ್ಕುವ ಟೀ ಪ್ಲ್ಯಾಂಟೇಷನ್, ಇವೆಲ್ಲ ಮನಸ್ಸನ್ನು ರಮಿಸಿಬಿಡುತ್ತವೆ.

ಕಳಸದಲ್ಲಿ ಕಳಶದಷ್ಟೇ ಚಿಕ್ಕದಾದ ಲಿಂಗ "ಕಳಶೇಶ್ವರ." ಹೊರನಾಡಿನಲ್ಲಿ, ಅನ್ನಪೂರ್ಣೇಶ್ವರಿಯನ್ನು ಕಾಣಲು ಎರಡು ಕಣ್ಣುಗಳು ಸಾಲವು. ಕಾರ್ಕಳದಲ್ಲಿ ಬಾಹುಬಲಿ. (ಬಾಹುಬಲಿಯ ಬೆಟ್ಟಕ್ಕೆ ಹೋಗುವ ಪ್ರವೇಶದ್ವಾರದಲ್ಲಿ ಗೇಟಿಗೆ ಬೀಗ ಹಾಕಿಕೊಂಡು ಒಳಕ್ಕೆ ಸುಲಭವಾಗಿ ಪ್ರವೇಶಿಸದಂತೆ ಮಾಡಿರುವುದು ಮಾತ್ರ ನನಗೆ ಕಿರಿಕಿರಿ ತಂದಿತು. ಅದಕ್ಕೆ ಅವರು ಕೊಟ್ಟ ವಿವರಣೆ ಇನ್ನೂ ಕಿರಿಕಿರಿ: ಕಾಲೇಜು ತರುಣ-ತರುಣಿಯರು ಬೆಟ್ಟದಮೇಲೆ ಹೋಗಿ ಮಾಡಬಾರದ್ದನ್ನು ಮಾಡುವರೆಂಬ ಕಾರಣಕ್ಕಾಗಿ ಗೇಟಿಗೆ ಬೀಗವಂತೆ. ಆದರೆ, ಅಲ್ಲೊಬ್ಬ ಕಾವಲುಗಾರನನ್ನು ಇಟ್ಟು ನಮ್ಮಂಥವರು ಬಂದರೆ ಬಾಗಿಲು ತೆರೆಯುವ ವ್ಯವಸ್ಥೆ ಮಾಡಬಾರದೇ?) ಅಲ್ಲಿಂದ ಮುಂದೆ ಮೂಡಬಿದ್ರಿಯಲ್ಲಿ ಸಾವಿರಕಂಬದ ಬಸದಿ.

ಉಡುಪಿಯಿಂದ ಬಸವನಗುಡಿತನಕ : ಭಾರತಯಾತ್ರೆಯ ಮೆಲಕುಗಳು; ಭಾಗ 2

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X