• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಲ್ಟ್ ವೇ ಯಿಂದ ಕಾವೇರಿ ತೀರದವರೆಗೆ..

By Staff
|

The road to Cauvery belt from the belt wayವಾಷಿಂಗ್ ಟನ್ ಡಿಸಿ ಪ್ರದೇಶದಲ್ಲಿ ನೆಲೆಸಿರುವ ನಮ್ಮ ಜಾಲತರಂಗದ ಅಂಕಣಕಾರ ನಟರಾಜ್ ನಾಲಕ್ಕು ವರ್ಷಗಳ ನಂತರ ಭಾರತದತ್ತ ಮುಖಮಾಡಿ ನಿಂತಿದ್ದಾರೆ. ಪ್ರಯಾಣಕ್ಕೆ ಸೂಟ್ ಕೇಸುಗಳನ್ನು ಸಿದ್ಧಪಡಿಸಿಕೊಳ್ಳುವ ಮುನ್ನ ಬುಷ್ಯಪ್ಪನ ಯುದ್ಧ ಮೋಹ, ಅಧ್ಯಕ್ಷೀಯ ಚುನಾವಣೆಯ ಬಣ್ಣ, ಹದಗೆಟ್ಟ ಆರ್ಥಿಕ ಅವ್ಯವಸ್ಥೆ, ಕಿಮ್ಮತ್ತು ಕಳೆದುಕೊಂಡಿರುವ ಡಾಲರು ನೋಟಿನ ಮೇಲೆ ಒಮ್ಮೆ ಕಣ್ಣಾಡಿಸುತ್ತಾರೆ. ಹಸಿರು ನೋಟಿನ ಮೇಲೆ ರಾರಾಜಿಸುತ್ತಿರುವ ಜಾರ್ಜ್ ವಾಷಿಂಗ್ ಟನ್ ಚಿತ್ರವನ್ನು ನೋಡುತ್ತಿರುವಾಗಲೆ ಮೈಸೂರಿನ ಚಿಗರು ವಿಳ್ಳೆಯದೆಲೆಯ ಪಾನ್ ಬೀಡಾ, ನಂಜನಗೂಡಿನ ಬಾಳೆಹಣ್ಣು ಮತ್ತು ಹೇಮಾವತಿ ನದಿತೀರದ ಮರಳಿನ ಮೇಲೆ ನಡೆದಾಡುವ ಕನಸುಗಳು ಬೀಳುತ್ತಿವೆ.

ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ನಾಲ್ಕು ವರ್ಷಗಳ ಮಧ್ಯಾಂತರದ ನಂತರ, ಮತ್ತೊಮ್ಮೆ ಭಾರತಭೇಟಿಗೆ ಹೊರಟಿರುವೆ. ಭಾರತ ಅಮೇರಿಕೆಗಳ ನಡುವೆ ದೂರ ಮೊದಲಿನಂತೆಯೇ ಇದ್ದರೂ ದೂರವಾಣಿ ಮತ್ತು ಅಂತರ್ಜಾಲದ ಸಂಪರ್ಕ ಸಾಕಷ್ಟು ಅಭಿವೃದ್ಧಿಹೊಂದಿರುವ ಕಾರಣ ಈ ನಾಲ್ಕು ವರ್ಷಗಳ ಅಂತರ ಅಷ್ಟೇನೂ ದೊಡ್ಡದೆನಿಸುತ್ತಿಲ್ಲ. ಭೌತಿಕವಾಗಿ ಅಲ್ಲಿಲ್ಲದಿದ್ದರೂ ಅಲ್ಲಿನ ದಿನ ನಿತ್ಯದ ಆಗುಹೋಗುಗಳಲ್ಲಿ ನಾವೂ ಭಾಗಿಗಳಾಗುತ್ತಿದ್ದೀವೋ ಅನ್ನುವಷ್ಟು ಪ್ರಪಂಚ ಕಿರಿದಾಗಿದೆ, ಕುಗ್ಗಿದೆ. ನಾವಿಲ್ಲಿ ನಿದ್ರಿಸುವಾಗ ಅವರಲ್ಲಿ ಎಚ್ಚರ, ನಾವಿಲ್ಲಿ ಎಚ್ಚರಗೊಂಡಾಗ, ಅಲ್ಲವರಿಗೆ ನಿದ್ರೆ. ಅಂತು ಎರಡೂ ಖಂಡಗಳ ನಡುವೆ ನಾವೀಗ ಸೀಮಾರಹಿತರೂ ಮತ್ತು "ಸೀಮ್‌ಲೆಸ್" ಕೂಡ ಆಗಿಬಿಟ್ಟಿದ್ದೇವೆ.

ಇತ್ತ, ಅಮೇರಿಕಕ್ಕೆ ಒಂದು ಪರ್ವಕಾಲ ಬಂದಿದೆ. ವಿಶ್ವಮಾರುಕಟ್ಟೆಯಲ್ಲಿ ಡಾಲರ್ರಿನ ಬೆಲೆ ಒಂದೇ ಸಮನೆ ಜಾರುತ್ತಿದೆ (ಅಂದರೆ, ಭಾರತ ಭೇಟಿಗೆ ನಾವು ಹೋಗುವಾಗ ಖರ್ಚಿಗೆ ಕೊಂಡೊಯ್ಯುವ ಹಣ ಸಾಲದೇ ಬರಬಹುದು!). ಸ್ಟಾಕ್‌ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಆರ್ಥಿಕ ರಕ್ತ ಸೋರಿಹೋಗುತ್ತಿದೆ. ಹಿಂದೊಮ್ಮೆ, ಬೆಂಗಳೂರಿನಂಥ ಊರಿನಲ್ಲಿ ಡಾಲರ್ ಕಾಲೋನಿಯಲ್ಲಿ, ಪರದೇಶದಿಂದ ಗಂಟುಮಾಡಿಕೊಂಡು ಬಂದ ಶ್ರೀಮಂತರು ಭವ್ಯಭವನಗಳನ್ನು ಕಟ್ಟಿಸುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಅಂಥಾ ಜಾಗಗಳಲ್ಲಿ ಬಂಗಲೆ ಕಟ್ಟಿಸುವುದಿರಲಿ, ಸೈಟು ಕೊಂಡುಕೊಳ್ಳುವುದೂ ಸಾಧಾರಣ ಸಂಬಳದವರಿಗೆ ಕಷ್ಟವೆನಿಸುವ ದಿನಗಳು ಬಂದಿವೆ. ಬೆಂಗಳೂರಿಗರು ಡಾಲರ್ ಗಳಿಸುವುದರಲ್ಲಿ ಪ್ರಸಿದ್ಧರಾಗುತ್ತಿದ್ದಾರೆ. ಅಲ್ಲಿ ದುಡಿದ ಡಾಲರನ್ನು ಅಮೇರಿಕದಲ್ಲಿ ಬಂದು ಖರ್ಚುಮಾಡುತ್ತಿದ್ದಾರೆ. "ಆಹಾ ಅಮೇರಿಕದ ಬಂಧು ಬಂದಿದ್ದಾನೆ!" ಎಂದು ಬಾಯ್ಬಿಟ್ಟು ಅಚ್ಚರಿ ವ್ಯಕ್ತಪಡಿಸಿ ಸ್ವಾಗತಿಸುವ ಬದಲು, "ಅಯ್ಯೋ, ಅಮೇರಿಕದಿಂದ ಬಂದನೇ" ಎಂದು ಬಲೂನನ್ನು ಟುಸ್ ಎನಿಸುವ ಈ ಸಂದರ್ಭದಲ್ಲಿ ಎಂಥಾ ಸ್ವಾಗತ ಕಾದಿರಬಹುದು ಎಂಬ ಅನುಮಾನದಿಂದಲೇ ಹೊರಟಿದ್ದೇನೆ.

ಹಿಂದೆ ನಡೆದ ಮೊದಲನೇ ಮತ್ತು ಎರಡನೇ ವಿಶ್ವಸಮರಗಳಂಥಾ ಮಹಾಯುದ್ಧಗಳಿಗಿಂತ ಹೆಚ್ಚು ಕಾಲ, ಅಂದರೆ ಐದು ವರ್ಷಗಳಾದರೂ ಮುಗಿಯದ ಇಂದಿನ ಇರಾಕ್ ಯುದ್ಧ ಎಲ್ಲಾ ವಿಕ್ರಮಗಳನ್ನೂ ದಾಟಿ ನಡೆದಿದೆ. ಪ್ರತಿದಿನವೂ ಮುನ್ನೂರೈವತ್ತು ಮಿಲಿಯನ್ ಡಾಲರ್ ಖರ್ಚು ತಗುಲಿತ್ತಿರುವ ಈ ಯುದ್ಧದ ಪರಿಣಾಮವೆಂದರೆ, ನಾಲ್ಕು ಸಾವಿರ ಅಮೇರಿಕದ ಯೋಧರು ಸಾವನ್ನಪ್ಪಿದ್ದಾರೆ. ಸುಮಾರು ನಾಲ್ಕು ಲಕ್ಷ ಇರಾಕಿಗಳು ಸತ್ತಿದ್ದಾರೆ, ಅದಕ್ಕೆ ಹತ್ತರಷ್ಟು ಜನ ದಿಕ್ಕೆಟ್ಟಿದ್ದಾರೆ. ಸದ್ದಾಮ ಉರುಳಿದ ಎಂಬ ಒಂದು ಅಲ್ಪ ತೃಪ್ತಿಯನ್ನು ಬಿಟ್ಟರೆ ಮತ್ತಾವ ಹೊಳೆಯುವ ತಾರೆಯೂ ಗೋಚರವಾಗುತ್ತಿಲ್ಲ. ಬುಷ್-ಚೇನಿ ಜೋಡಿಯ ಕಣ್ಣು ಇರಾಕಿನಿಂದ ಇರಾನಿನ ಕಡೆಗೂ ಹಾಯುತ್ತಿದೆ. ಅವರಿಬ್ಬರ ಸಮರನೀತಿಯನ್ನೇ ಮುಂದುವರೆಸುವ ಜಾನ್ ಮೆಕ್ಕೇನ್ ರಿಪಬ್ಲಿಕನ್ ಪಕ್ಷದ ಪ್ರತಿನಿಧಿಯಾಗಿ ಅಧ್ಯಕ್ಷಸ್ಥಾನದ ಸ್ಪರ್ಧೆಗೆ ಆಯ್ಕೆ ಆಗಿದ್ದಾನೆ. ಆತ ಚುನಾಯಿತನಾದರೆ, ಅಮೇರಿಕಾ ನೂರುವರ್ಷವಾದರೂ ಮಧ್ಯಪ್ರಾಚ್ಯದಲ್ಲಿದ್ದು ಶತ್ರುವನ್ನು ನಾಶಪಡಿಸಲು ಸಿದ್ಧನೆಂದು ಆತ ಈಗಾಗಲೇ ತೊಡೆತಟ್ಟಿದ್ದಾನೆ.

ಇನ್ನು ಡೆಮೋಕ್ರ್ಯಾಟಿಕ್ ಪಕ್ಷದ ಕಥೆಯೂ ದಿನದಿನಕ್ಕೆ ಹೆಚ್ಚು ಹೆಚ್ಚು ಸ್ವಾರಸ್ಯಕರವೂ ಸಮಸ್ಯಾತ್ಮಕವೂ ಆಗುತ್ತಿದೆ. ಮೊಟ್ಟ ಮೊದಲಬಾರಿಗೆ ಮಹಿಳೆಯೊಬ್ಬಳು ಅಮೇರಿಕದ ಅಧ್ಯಕ್ಷೆ ಆಗುವಳೇನೋ ಎಂದು ಅನೇಕರು ಆಶಿಸಿದ್ದರು. "ಕನ್ಸರ್ವೆಟೀವ್" ಎನ್ನಿಸಿಕೊಳ್ಳುವ ಬ್ರಿಟನ್ನಿನಲ್ಲಿ ಮಹಿಳೆಯ ಆಡಳಿತವನ್ನು ನೋಡಿದೆವು. ಸದಾ ಯುದ್ಧದ ಮಧ್ಯದಲ್ಲೇ ಬಾಳಿರುವ ಇಸ್ರೇಲಿನಲ್ಲಿ ಮಹಿಳೆಯ ರಾಜ್ಯಾಡಳಿತವನ್ನು ಕಂಡೆವು. ಪುರುಷಪ್ರಧಾನ ದೇಶಗಳಾದ ಭಾರತ, ಪಾಕೀಸ್ತಾನ, ಶ್ರೀಲಂಕಾ ಮತ್ತು ಬಂಗ್ಲಾದೇಶಗಳಲ್ಲೂ ಮಹಿಳಾರಾಜ್ಯವನ್ನು ಕಂಡೆವು. ಭಾರತದಲ್ಲಂತೂ, ಪುರಾಣದ ಪ್ರಮೀಳಾರಾಜ್ಯದಿಂದ ಹಿಡಿದು, ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ಮೊದಲಾದ ರಾಣಿಯರು, ಇತ್ತೀಚಿನ ಇಂದಿರಾಗಾಂಧಿ, ಮುಂದೆ ಸೋನ್ಯಾ ಗಾಂಧಿ---? ಇನ್ನೂ ಅನೇಕ ಮಹಿಳಾಮುಖಂಡರನ್ನು ಜಗತ್ತು ಕಂಡರೂ ಅತ್ಯಂತ ಮುಂದುವರೆದ ಅಮೇರಿಕೆಯಲ್ಲಿ ಇನ್ನೂ ಬರಲಿಲ್ಲವಲ್ಲ ಹೆಂಗಸರಿಗೆ ನ್ಯಾಯ ಎಂದು ಚಿಂತಿಸುತ್ತಿದ್ದಾಗಲೇ ಹಿಲರಿ ಕ್ಲಿಂಟನ್ ಖಂಡಿತವಾಗಿಯೂ ಮುಂದಿನ ಅಧ್ಯಕ್ಷೆ ಎಂದು ನಂಬುವ ದಿನಗಳು ಬಂದವು. ಆದರೆ, ಆಕೆಯ ದುರದೃಷ್ಟವೋ, ಅಥವಾ ಮಹಿಳೆಯರ ಕಾಲ ಇನ್ನೂ ಈ ದೇಶದಲ್ಲಿ ಬಂದಿಲ್ಲವೋ, ಅಂತೂ ಮತ್ತೊಬ್ಬ ಪ್ರಬಲ ಪ್ರತಿಸ್ಪರ್ಧಿ ಬರಾಕ್ ಒಬಾಮನ ಪ್ರವೇಶ ರಾಜಕೀಯರಂಗವನ್ನು ದಂಗುಬಡಿಸಿದೆ.

ಕೃಷ್ಣವರ್ಣೀಯರಿಗೆ ಇಲ್ಲಿಯವರೆಗೂ ಇಲ್ಲಿನ ರಾಜಕೀಯದಲ್ಲಿ ನ್ಯಾಯ ದೊರಕಿಲ್ಲ, ಈಗೊಬ್ಬ ಕಪ್ಪು ನಾಯಕ ನಮಗೆ ದೊರಕಿದ್ದಾನೆಂದು ಸಕಾರಣವಾಗೇ ಆಫ್ರಿಕನ್ ಅಮೇರಿಕನ್ನರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ವಿಶೇಷವೆಂದರೆ, ಈತ ಯುವಕ, ಉತ್ತಮ ವಾಗ್ಮಿ, ವರ್ಚಸ್ವೀ, ಬುದ್ಧಿವಂತ, ವಿದ್ಯಾವಂತ (ಹಾರ್ವರ್ಡ್ ವಿದ್ಯಾಭ್ಯಾಸ), ಕಪ್ಪು ಬಿಳುಪು, ಹಿರಿಯ ಕಿರಿಯ, ಗಂಡು ಹೆಣ್ಣು ಎಲ್ಲಾ ಮತದಾರರ ಗುಂಪಿನಿಂದಲೂ ಮತಗಳನ್ನು ಪಡೆದು ಅತ್ಯಂತ ಜನಪ್ರಿಯನಾಗಿ ಪ್ರಾಥಮಿಕ ಚುನಾವಣೆಯಲ್ಲಿ ಹಿಲರಿಗಿಂತ ಮುಂದಿದ್ದಾನೆ. ಡೆಮೋಕ್ರ್ಯಾಟಿಕ್ ಪಕ್ಷದವರಿಗೆ ಈಗ ಇಬ್ಬಗೆ. ಇಬ್ಬಿಬ್ಬರು ಒಳ್ಳೆಯ ಅಭ್ಯರ್ಥಿಗಳು ಒಟ್ಟೊಟ್ಟಾಗಿ ಬರಬೇಕೆ? ಇವರಿಬ್ಬರಲ್ಲಿ ಯಾರಾದರೂ ಸರಿ ಮೆಕ್ಕೇನ್‌ಗಿಂತ ಉತ್ತಮ ಅಧ್ಯಕ್ಷರಾಗಬಲ್ಲರು, ಏನು ಮಾಡುವುದು ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭವಾದರೆ ಏನು ಗತಿ? ಇದು ದೇಶದ ಎಲ್ಲಾ ಪ್ರಜೆಗಳನ್ನೂ ಕಾಡುತ್ತಿರುವ ಪ್ರಶ್ನೆ.

ರೇಗನ್ ಕಾಲದಲ್ಲಿ ಪ್ರಾರಂಭವಾದ ಬೇಜವಾಬ್ದಾರಿ ಅರ್ಥನೀತಿ ಇಂದು ಅಮೇರಿಕವನ್ನು ಮುಳುಗಿಸುತ್ತಿದೆ. ಶ್ರೀಮಂತರ ಪರವಾದ ರೇಗನ್ ನೀತಿಯನ್ನು ಅಪ್ಪ ಬುಷ್ ಮತ್ತು ಮಗ ಬುಷ್ ಮುಂದುವರೆಸಿದ್ದಾರೆ. ಬಿಲ್ ಕ್ಲಿಂಟನ್ ಸರ್ಕಾರದ ಲೆಕ್ಕವನ್ನು ಸರಿದೂಗಿಸಿದ್ದೇ ಅಲ್ಲದೇ ರಾಷ್ಟ್ರದ ಬೊಕ್ಕಸದಲ್ಲಿ ಬಿಟ್ಟುಹೋಗಿದ್ದ ಬಿಲಿಯನ್ ಗಟ್ಟಲೇ ಆಪದ್ಧನವನ್ನೆಲ್ಲ ಕೊಳ್ಳೇ ಹೊಡೆದು ಶ್ರೀಮಂತರಿಗೆ ಆದಾಯತೆರಿಗೆಯನ್ನು ಕಮ್ಮಿ ಮಾಡಿ ಮಧ್ಯಮವರ್ಗದ ಹೊಟ್ಟೆಯಮೇಲೆ ಹೊಡೆಯುತ್ತಿರುವ ರಿಪಬ್ಲಿಕನ್ ಅರ್ಥನೀತಿ ಹೀಗೇ ಮೇಕ್ಕೇನ್ ನೇತೃತ್ವದಲ್ಲಿ ಮುಂದುವರೆದರೆ, ಕೋಟಿ-ಕೋಟಿಗಟ್ಟಲೆ ಡಾಲರ್ ಗಳನ್ನು ಕೂಡಿಸಿಟ್ಟಿರುವ ಜಪಾನ್ ಮತ್ತು ಚೈನಾ ದೇಶಗಳು ಅಮೇರಿಕದ ಅರ್ಥನೀತಿಯನ್ನು ನಿಯಂತ್ರಿಸಬಹುದಾದ ದುರ್ಗತಿ ಬರಬಹುದಾಗಿದೆ. ಯಾವ ತೈಲಕ್ಕಾಗಿ ಇರಾಕಿನ ಮೇಲೆ ಮುತ್ತಿಗೆ ಹಾಕಲಾಯಿತೋ, ಆ ತೈಲದಿಂದ ಅಮೇರಿಕಕ್ಕೆ ಉಪಯೋಗವಾಗುವುದು ಹಾಗಿರಲಿ, ಇರಾಕಿನಲ್ಲಿ ನಡೆಯುತ್ತಿರುವ ಯುದ್ಧದ ಖರ್ಚಿಗೂ ಒಂದು ಬಿಡುಗಾಸೂ ಸಿಕ್ಕುತ್ತಿಲ್ಲ. ಅಥವಾ ಸಿಕ್ಕಿದರೂ ಅದರ ಲೆಕ್ಕ ಸಿಕ್ಕುತ್ತಿಲ್ಲ. ಕಾರಿನ ಟ್ಯಾಂಕನ್ನು ತುಂಬುತ್ತಿರುವ ದುರ್ಬಲ ಹೃದಯದ ವ್ಯಕ್ತಿಗಳಿಗೆ ಆಘಾತವಾದರೆ ಆಶ್ಚರ್ಯವೇನಿಲ್ಲ. ಆಹಾರದ ಬೆಲೆಯಬಗ್ಗೆ ಅಮೇರಿಕನ್ನರು ಗೊಣಗಿದ್ದನ್ನು ನಾನು ಹಿಂದೆಂದೂ ಕೇಳಿರಲಿಲ್ಲ, ಆದರೆ, ದಿನಸಿ ಅಂಗಡಿಯಲ್ಲಿ ಎದೆ ಧಸಕ್ಕೆನ್ನುವಹಾಗೆ ಬೆಲೆ ಏರುತ್ತಿದೆ. ಅದಕ್ಕೂ ಏರುತ್ತಿರುವ ತೈಲದ ಬೆಲೆಯೇ ಕಾರಣ. ಇದು ಸತ್ತ ಸದ್ದಾಮನ ಶಾಪವೋ ಅಥವಾ ತೈಲವ್ಯಾಪಾರಿಗಳ ಕುತಂತ್ರವೋ ನಾನರಿಯೆ.

ಇಂಥಾ ಒಂದು ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಹೊರಟಿರುವೆನು ನಾ ಭಾರತ ಭೇಟಿಗೆ! ಮೂರುವಾರಗಳ ನಂತರ ಹಿಂದಿರುಗಿದಾಗ ಏನೇನು ಅನಾಹುತಗಳು ನಡೆದಿರುತ್ತವೋ ಬಲ್ಲವರಾರು? ಆದರೆ, ಬಂಧು-ಮಿತ್ರರನ್ನು ಕಂಡು ಯೋಗಕ್ಷೇಮ ವಿಚಾರಿಸಲು ಹೊರಟಿರುವ ನಮಗೆ ಅದ್ಯಾವುದರ ಚಿಂತೆಯೂ ಇರಕೂಡದು. ಕೆಲಸ, ಕಾರ್ಯ, ರಾಜಕೀಯ, ಸ್ಟಾಕ್‌ಮಾರುಕಟ್ಟೆ, 401(ಕೆ), ರಿಪಬ್ಲಿಕನ್ ಡೆಮೋಕ್ರ್ಯಾಟುಗಳ ವಾದ ವಿವಾದ, ಹಿಲರಿ ಒಬಾಮಗಳ ನಡುವಣ ಚರ್ಚೆ, ಗಂಡು ಹೆಣ್ಣು, ಕರಿ ಬಿಳಿ ಗಳ ಚರ್ಚೆ.. ಇವೆಲ್ಲಕ್ಕೂ ರಜಾ. ಮನೆ, ಮನೆಮಂದಿ, ಮನೆಮಾತು, ಮನೆದೇವರು, ಇವೇ ನಮ್ಮ ಮುಂದಿನ ಮೂರುವಾರಗಳ ಕೇಂದ್ರಬಿಂದುಗಳು.

ಬೆಂಗಳೂರು, ಮೈಸೂರು, ಹಾಸನಗಳ ಜನಸಂದಣಿ, ಅಂಗಡಿಗಳ ಭೇಟಿ, ದೇವರುಗಳ ದರುಶನ, ನೆಂಟರಿಷ್ಟರಮನೆಯಲ್ಲಿ ಊಟ ಉಪಚಾರ, ಚಿಗರು ವಿಳ್ಳೆಯದೆಲೆಯ ಪಾನ್ ಬೀಡಾ, ಮಲ್ಲಿಗೆಯ ಕಂಪು, ಒಂದೆರಡು ಎಳನೀರು ಪಾನ, ಅಲ್ಲೊಬ್ಬ ಇಲ್ಲೊಬ್ಬ ಹಳೆಯ ಮಿತ್ರರು ಸಿಕ್ಕರೆ ಅವರೊಂದಿಗೆ ಒಂದಿಷ್ಟು ಹರಟೆ, ಇವನ್ನೆಲ್ಲ ಎದುರುನೋಡುತ್ತಿದ್ದೇನೆ. ಹೋದ ಸಾರಿ ಹಿಂದಿರುಗುವ ದಿನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಸಂಖ್ಯಾತ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಹಿಂದಿರುಗಿದೊಡನೆಯೇ ಡೇಂಗೂ ಜ್ವರದಿಂದ ನರಳಿ ಆಸ್ಪತ್ರೆ ಸೇರಿದ್ದನ್ನು ನೆನೆಸಿಕೊಂದರೆ ಕೊಂಚ ಭಯವಾಗುತ್ತದೆ. ಆದರೆ ಸೊಳ್ಳೆಗೆ ಹೆದರಿ ತವರನ್ನು ಬಿಡಲು ಸಾಧ್ಯವೇ? ಅಮೆರಿಕಾಗೆ ಹಿಂದಿರುಗಿಬಂದಮೇಲೆ ವಿವರವಾಗಿ ವರದಿಮಾಡುತ್ತೇನೆ, ಇನ್ನು ಬರ್ಲಾ? ನಮಸ್ಕಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more