• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಸರ್ಜನೆಯೂ ವಿಷಯಾರ್ಜನೆಯೂ

By Staff
|

ಬಚ್ಚಲಮನೆಯಲ್ಲಿ ಓದುವ ಜನರನ್ನು ಬಚ್ಚಲೋದುಗರು ಎಂದು ಕರೆಯಬಹುದು ಎಂಬುದು ನನ್ನ ಅಭಿಪ್ರಾಯ. ನಾನೂ ಒಬ್ಬ ಬಚ್ಚಲೋದುಗನೇ. ಈಗ ಮುಖ್ಯವಾದ ಒಂದು ಪ್ರಶ್ನೆ ಎಂದರೆ, "ಶೌಚಾಲಯದಲ್ಲಿ ಓದಬಹುದೇ?"


Bathroom, Toilet and Readingಓದುಗ ಮಹಾಶಯರೇ, ’ಅದುವೆಕನ್ನಡ’ದಲ್ಲಿ ಇತ್ತೀಚಿನ ಅಂಕಣಗಳನ್ನು ಗಮನಿಸಿದ್ದೀರ? ಬಾಥ್‌ರೂಮಿನಲ್ಲಿ ಓದು, ಬಾಥ್‌ರೂಮಿನಲ್ಲಿ ಸ್ನಾನ ಮುಂತಾದ ಬರಹಗಳು ಕಾಕತಾಳೀಯವೋ ಎಂಬಂತೆ ಒಂದಾದಮೇಲೆ ಒಂದು ಬಂದಾಗ ನನಗೂ ಬಾಥ್‌ರೂಮನ್ನು ಪ್ರವೇಶಿಸುವ ಬಯಕೆ ಆಯಿತು.

ತುಳಸೀವನದಲ್ಲಿ ಸ್ನಾನಮಾಡಿದ ನಂತರ ನನಗೂ ನಾನು ಹಿಂದೆ ಸ್ನಾನಮಾಡಿರುವ ಅನೇಕ ಸ್ನಾನಗೃಹಗಳ ಚಿತ್ರ ಕಣ್ಮುಂದೆ ಬಂತು.

ಮಸಿಗಟ್ಟಿದ ಗೋಡೆ, ಲಂಗೋಟಿಗಳನ್ನು ನೇತುಹಾಕಿದ ತಂತಿ, ಸೌದೆಯ ಒಲೆ, ತಣ್ಣೀರಿನ ತೊಟ್ಟಿ, ತಾಮ್ರದ ಬೋಸಿ, ಹೂತ ಹಂಡೆಯಿಂದ ಕುದಿಯುವ ನೀರನ್ನು ಎತ್ತಿ ತೋಡಿಕೊಳ್ಳಲೋಸುಗವೇ ಸೃಷ್ಟಿಯಾದ ಉದ್ದನೆ (ವರ್ಟಿಕಲ್) ಹಿಡಿಯ ಅಂಡೆ, ಆಳದ ಬಚ್ಚಲು, ಸರಿಯಾಗಿ ಮುಚ್ಚಿಕೊಳ್ಳದ (ಮುಚ್ಚಿಕೊಂಡರೂ ಕಿಂಡಿಗಳಿರುವ) ಬಾಗಿಲು, ಭಾವಿಯಂತೆ ಆಳವಿರುವ ಬಚ್ಚಲಿನಲ್ಲಿ ಕುಳಿತವರು ಯಾರಿಗೂ ಗೋಚರವಾಗದಿದ್ದರೂ ತಮ್ಮ ಮನಸ್ಸಿನ ಆತಂಕವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಕಿಂಡಿಯನ್ನು ಮುಚ್ಚಲು ಹೆಂಗಸರು ಇಳಿಬಿಡುತ್ತಿದ್ದ ಹಳೆಯ ಸೀರೆ, ಬಿಸಿಲಿನ ಕೋಲನ್ನು ಒಳಕ್ಕೆ ಬಿಡುವ ಸೀಳಿದ ಹಂಚಿನ ಛಾವಣಿ, ಬಚ್ಚಲ ಕಟ್ಟೆಯ ಸಹಾಯದಿಂದ ಮೇಲೇರಬಹುದಾದ ಸೌದೆ ಒಟ್ಟಲು ಇರುವ ಅಟ್ಟ, ಅಂಥಾ ಒಂದು ವಾತಾವರಣದಲ್ಲಿ ಹಾಕಿಸಿಕೊಂಡ ಲೆಕ್ಕವಿಲ್ಲದಷ್ಟು ಎಣ್ಣೆ-ನೀರು, ಕಿವಿಯೊಳಕ್ಕಿಳಿದ ಹರಳೆಣ್ಣೆ, ಕಣ್ಣೊಳಕ್ಕೆ ಹೋದ ಸೀಗೇಪುಡಿ, "ಅಶ್ವತ್ಥಾಮ-ಬಲಿರ್ವ್ಯಾಸ, ಹನೂಮಶ್ಚ ವಿಭೀಷಣಃ, ಕೃಪಃ ಪರಶುರಾಮಶ್ಚ, ಸಪ್ತೈಃ ತೇ ಚಿರಜೀವಿನಃ" ಹೇಳುತ್ತ ಇಟ್ಟ ಕರಿಯ ಕಿಮಟಿನ ಸೌಟಿನಲ್ಲಿ ಕಾದ ಎಣ್ಣೆಯ ಏಳು ಬೊಟ್ಟುಗಳು, ತಲೆ ತಿರುಗುವಂತೆ ತಟ್ಟಿಸಿಕೊಂಡರೂ ಹಿತವೆನ್ನಿಸುವ ಅನುಭವ, ಕಣ್ಮುಚ್ಚಿ ಕುಳಿತ ಕುಕ್ಕರುಗಾಲು - ಒಂದೇ ಎರಡೇ ನೆನಪುಗಳ ಮಾಲೆ? ಸರಿ, ಅದು ಅಲ್ಲಿನ ಸ್ನಾನಗೃಹ -- ಬಚ್ಚಲಮನೆ. ಇಲ್ಲಿ ಬಾಥ್‌ರೂಮ್ ಎಂದಾಗ ಸ್ನಾನಗೃಹ ಮತ್ತು ಶೌಚಾಲಯ ಎರಡೂ ಸೇರಿಕೊಳ್ಳುತ್ತವೆ. ಆದರೆ, ವಿಚಿತ್ರಾನ್ನದ ಭಟ್ಟರು ಬಚ್ಚಲೋದಿನಬಗ್ಗೆ ಬರೆದ ಲಲಿತಪ್ರಬಂಧದಲ್ಲಿ ಉಪಯೋಗಿಸಿರುವ ’ಪಾಯಖಾನೆ’ ಎಂಬ ಶಬ್ದವೂ ಒಂದಿಷ್ಟು ನೆನಪುಗಳಿಗೆ ಕಾರಣವಾಯಿತು.

’ಪಾಯಖಾನೆ’ ಎಂಬ ಶಬ್ದವಾದರೋ ಸ್ನಾನಗೃಹಕ್ಕೆ ಅನ್ವಯಿಸುವುದಿಲ್ಲವಷ್ಟೆ? ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಂದೆ, ಬಹುಶಃ ಅವರ ಅನೇಕ ಮುಸಲ್ಮಾನ ಸಹೋದ್ಯೋಗಿಗಳ ಪ್ರಭಾವದಿಂದಲೋ ಏನೋ, ’ಪಾಯಖಾನೆ’ ಎಂಬ ಶಬ್ದವನ್ನು ಉಪಯೋಗಿಸುತ್ತಿದ್ದರು. ನನ್ನ ಮುಸಲ್ಮಾನ ಸ್ನೇಹಿತನೊಬ್ಬನ ತಂದೆ ಆಗಾಗ್ಗೆ ಉಪಯೋಗಿಸುತ್ತಿದ್ದ ಒಂದು ಸೊಗಸಾದ ಉರ್ದೂ ಗಾದೆಯ ಕಾರಣದಿಂದ ಸಹ ಆ ಶಬ್ದ ನನಗೆ ಆಪ್ಯಾಯಮಾನವಾಗಿ ಉಳಿದುಬಿಟ್ಟಿದೆ. ಆ ಗಾದೆ ಹೀಗಿದೆ: "ಮೇರೇ ಇಜಾರೆ ಮೆ ಕೌನ್ ಪಾಯ್‌ಖಾನಾ ಕರ್‍ಯ?" (ನನ್ನ ಚೆಡ್ಡಿ/ಶರಾಯಿಯಲ್ಲಿ ಕಕ್ಕ ಮಾಡಿಕೊಂಡವರು ಯಾರು ?). ತಾವೇ ಗಲೀಜು ಮಾಡಿ ಇತರರಮೇಲೆ ಹೇರುವ ಭಂಡರನ್ನು ಹಂಗಿಸುವ ಒಂದು ಉತ್ತಮ ಗಾದೆ ಅದು.

ಪಾಯಖಾನೆ ಎಂಬ ಶಬ್ದ ಎಷ್ಟೇ ಯೋಗ್ಯವೆನಿಸಿದರೂ ಓದುವ ಕೆಲಸಕ್ಕೂ ಅಲ್ಲಿ ನಡೆಯುವ ಕೆಲಸಕ್ಕೂ ಎಲ್ಲಿಯ ಸಂಬಂಧ? ಎಂದು ಕೆಲವರು ಮೂಗು ಮುರಿಯುವರೇನೋ? ಭಾರತದ ’ಪಾಯಖಾನೆ’ಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಓದುವ ದೃಶ್ಯವನ್ನು ಕಲ್ಪಿಸಿಕೊಳ್ಳುವುದೂ ಅಸಾದ್ಯ. ಸ್ನಾನಗೃಹವೇ ಶೌಚಗೃಹವೂ ಆಗಿರುವುದು ಇತ್ತೀಚಿನ ಪದ್ಧತಿ. ಹೀಗಾಗಿ, "ಬಾಥ್‌ರೂಮ್ ರೀಡಿಂಗ್" ಎಂಬ ಪರಿಕಲ್ಪನೆ ಕನ್ನಡದಲ್ಲಿ ಬರುವುದೇ ಒಂದು ಕಷ್ಟದ ಮಾತು. ಬಚ್ಚಲು ಮನೆಯ ಒಲೆಯಮುಂದೆ ಕುಳಿತು ಮೈ ಕಾಯಿಸಿಕೊಳ್ಳುತ್ತ ಪೇಪರ್ ಓದುತ್ತಿದ್ದ ವಯೋವೃದ್ಧರನ್ನು ಭಾರತದಲ್ಲೂ ನಾನು ನೋಡಿದ್ದೇನೆ. ಬಚ್ಚಲಮನೆಯಲ್ಲಿ ಓದುವ ಜನರನ್ನು "ಬಚ್ಚಲೋದುಗರು" ಎಂದು ಕರೆಯಬಹುದು ಎಂಬುದು ನನ್ನ ಅಭಿಪ್ರಾಯ. ನಾನೂ ಒಬ್ಬ ಬಚ್ಚಲೋದುಗನೇ. ಹೀಗಾಗಿ, ವಿಚಿತ್ರಾನ್ನದ ಅಂಕಣ ಬರಹವನ್ನು ಓದಿದಾಗ ನನಗಾದ ಪ್ರತಿಕ್ರಿಯೆಯನ್ನು ಒಂದು ಪದ್ಯರೂಪದಲ್ಲಿ ವಿಚಿತ್ರಾನ್ನದ ಭಟ್ಟರಿಗೆ ಬರೆದು ಕಳಿಸಿದೆ:

ಬಚ್ಚಲೋದುಗರು

ಕಮೋಡಿನ ಮೇಲೆ ಕುಳಿತುಕೊಂಡರೂ

ಓದುವ ಚಟವನು ಬಿಡದವರು

ವಾಯುನಿಯಂತ್ರಿತ ಶೌಚಾಲಯದಲಿ

ಘಂಟೆಗಟ್ಟಲೆ ಕಳೆಯುವರು

ಪುಡಿ-ಪುಡಿ ಪುಟಗಳನೋದುತ ಊದುತ

ಕಾಲದ ಪ್ರತಿಕ್ಷಣ ಬಳಸುವರು

ವಿಸರ್ಜನೆ ಜೊತೆ ವಿಷಯಾರ್ಜನೆ ಮಾಡುವ

ಬಚ್ಚಲೋದುಗಗೆ ಜೈ ಎನ್ನಿ!

(ಈ ಕವಿತೆಯ ಛಂದಸ್ಸು ಭಾಮಿನೀ ಷಟ್ಪದಿಯಲ್ಲ, ಕಾಮಿನೀ ಅಷ್ಟಪದಿ!)

ಮುಖ್ಯವಾದ ಒಂದು ಪ್ರಶ್ನೆ ಎಂದರೆ, "ಶೌಚಾಲಯದಲ್ಲಿ ಓದಬಹುದೇ?" ನನ್ನ ಹಳೆಯದೊಂದು ಕವಿತೆಯಲ್ಲಿ "ಕಮೋಡಿನಮೇಲೆ ಕುಳಿತು ಕರ್ಮಯೋಗದ ಚಿಂತೆ" ಎಂಬೊಂದು ಸಾಲು ಬರುತ್ತದೆ. ಟಬ್ಬಿನಲ್ಲಿ ಕುಳಿತು ಜಳಕಮಾಡುತ್ತಿರುವಾಗ ಥಟ್ಟನೆ ವಿಷಯ ಹೊಳೆದು ಯುರೇಕಾದ ಪುಳಕವನ್ನು ಆರ್ಕಿಮಿಡೀಸನು ಅನುಭವಿಸಲು ಸಾಧ್ಯವಾಗಿದ್ದಲ್ಲಿ, ಕಮೋಡಿನಮೇಲೆ ಕುಳಿತು "ಪುರೇಕಾ ಮಾಡುತ್ತಿರುವಾಗ ಯುರೇಕಾ" ಏಕಾಗಬಾರದು? ಆದರೆ, ಇಲ್ಲೊಂದು ಧರ್ಮಸಂಕಟ: (ಈ ನನ್ನ ಪದಪ್ರಯೋಗವನ್ನು ಹಲವರು ಒಪ್ಪುವುದಿಲ್ಲವೆಂದು ಬಲ್ಲೆನಾದರೂ ಇಲ್ಲಿ ವಿಧಿ ಇಲ್ಲದೇ ಉಪಯೋಗಿಸಬೇಕಾಗಿದೆ, ಕ್ಷಮೆ ಇರಲಿ!) ದೇವರ ಚಿತ್ರ ಇರುವ ಪುಸ್ತಕಗಳನ್ನು, ಅಥವ ಆಧ್ಯಾತ್ಮಿಕ ವಿಷಯಗಳನ್ನೊಳಗೊಂಡ ಪುಸ್ತಕಗಳನ್ನು ಬಚ್ಚಲೋದಿಗೆ ಉಪಯೋಗಿಸಬಹುದೇ? ಇದು ಕೇವಲ ಮಡಿವಂತರಿಗೂ ಶ್ರದ್ಧಾವಂತರಿಗೂ ಉಂಟಾಗುವ ತುಮುಲವೆಂದು ಭಾವಿಸಲಾಗದು. ಪುಸ್ತಕವೇ ಸರಸ್ವತಿ ಎಂದು ಆರಾಧಿಸುವ ಹಿಂದೂ ಜನಾಂಗ ಇಂಥಾ ಒಂದು ಅವಹೇಳನವನ್ನು ಸಹಿಸೀತೆ?

"ಓದು" ಎಂಬ ಶಬ್ದವನ್ನು "ಪಾಯಖಾನೆ" ಎಂಬ ಶಬ್ದದೊಂದಿಗೆ ಜೋಡಿಸಬಹುದೇ? ಇದು ಅಪಚಾರ.

ಪುಸ್ತಕಗಳನ್ನು ಜೋಡಿಸಿಟ್ಟ ಬಾಥ್‌ರೂಮನ್ನು ಕಂಡವರು "ಇದೇನು ಗ್ರಂಥಾಲಯವೋ? ಶೌಚಾಲಯವೋ?" ಎಂದು ಉದ್ಗಾರ ತೆಗೆಯದೆ ಇರುವರೆ? "ಜಲ-ಮಲ-ವಿಸರ್ಜನಾರ್ಥಾಯ, ಬಹಿರ್ದೇಶಂ ಗಚ್ಚಾಮಿ" ಎನ್ನುತ್ತ ಒಂದೋ/ಎರಡೋ ಬೆರಳನ್ನು ತೋರಿಸಿ "ದೇವಭಾಷೆಗೆ ಅವಮಾನಮಾಡಿದನೆಂದು ಸಂಸ್ಕೃತಪಂಡಿತರಿಂದ ಬೈಯಿಸಿಕೊಂಡ ಬಾಲ ಕೈಲಾಸಂ ಬಗ್ಗೆ ನೀವು ಕೇಳಿರಬಹುದು. ದೇವಭಾಷೆಯಲ್ಲಿ ಇಂಥಾ ವಿಚಾರಸರಣಿಗೆ ಅವಕಾಶವೇ ಇಲ್ಲ, ಏಕೆಂದರೆ ದೇವತೆಗಳಿಗೆ ಹಸಿವೆ ನೀರಡಿಕೆ ವಿಸರ್ಜನೆಗಳ ಚಿಂತೆಯಿಲ್ಲ. ಆದರೆ, ಮನುಷ್ಯಮಾತ್ರದವರ ಗತಿ ಏನು? ನಾವು ತಿನ್ನದೇ ವಿಧಿಯಿಲ್ಲ, ತಿಂದದ್ದು ಜೀರ್ಣವಾಗುವುಗು ಪ್ರಕೃತಿಯ ಕ್ರಿಯೆ, ಜೀರ್ಣವಾಗದೇ ಉಳಿದದ್ದು ತ್ಯಾಜ್ಯ. ತ್ಯಾಜ್ಯವಸ್ತುವು ವಿಸರ್ಜನೆಗೊಳ್ಳಲೇಬೇಕು.

ತ್ಯಾಜ್ಯ/ವಿಸರ್ಜಿತ ಅವಶೇಷಗಳನ್ನು ನಿರ್ವಹಿಸುವುದರಲ್ಲಿ ಒಂದೊಂದು ಸಂಸ್ಕೃತಿ ಒಂದೊಂದು ರೀತಿಯ ವೈಶಿಷ್ಟ್ಯವನ್ನು ತೋರಿಸಿದೆ. ಸೂರ್ಯ ಹುಟ್ಟುವ ಮುನ್ನ ಕತ್ತಲೆಯಲ್ಲಿ ನೀರು ಹತ್ತಿರವಿರುವ ಬಳಿ ಗಿಡಗುತ್ತಿಗಳನ್ನು ಹುಡುಕುತ್ತಾ ಹೊರಟ ಪೂರ್ವ ದಿಕ್ಕಿನ ನಮ್ಮ ಪೂರ್ವಜರೆಲ್ಲಿ? ಬಿಸಿಲು ಮಳೆಗಳ ಕಾಟವಿಲ್ಲದಂತೆ ಸರ್ವಋತು ಶೌಚಾಲಯವನ್ನು (ಸರ್ವಋತುಬಂದರಿನ ಹಾಗೆ) ಕಂಡುಹಿಡಿದು ಮಂಡಿ ನೋವಿನ ತೊಂದರೆಯಾಗದಂತೆ ಸುಖಾಸೀನರಾಗುವ ಅದ್ಭುತವಾದ ’ಯೂಸರ್-ಫ್ರೆಂಡ್ಲಿ’ ಶೌಚಾಸನವನ್ನು (ಕಮೋಡನ್ನು) ಕಂಡುಹಿಡಿದ ಅಪೂರ್ವ-ಪಶ್ಚಿಮದ ಸುಖಲೋಲುಪರೆಲ್ಲಿ?

ಈಗ ನೀವೇ ಹೇಳಿ, ಇಂಥಾ ಶೌಚಾಸನಕ್ಕೆ ’ಓದುಗಮಿತ್ರ’ ಎಂಬ ಹೆಸರು ಅನ್ವರ್ಥವಾಗುವುದಿಲ್ಲವೇ? ಓದುಗಮಿತ್ರ-ಶೌಚಾಸನಾರೂಢರಾಗಿ, ವಿಸರ್ಜನೆಯೊಂದಿಗೆ ವಿಷಯಾರ್ಜನೆಯನ್ನೂ ಮಾಡಿದರೆ ಒಳ್ಳಿತಲ್ಲವೆ? ಅಂತೂ ಸ್ನಾನ, ಶೌಚ, ಓದು ಮುಂತಾದ ಖಾಸಾ ವಿಶೇಷಗಳಬಗ್ಗೆ ಹಳೆಯ ನೆನಪುಗಳ ಮಾಲೆಯನ್ನು ಹೆಣೆದುಕೊಳ್ಳಲು ಕಾರಣರಾದ ಸಹ-ಅಂಕಣಕಾರ/ಕಾರ್ತಿಯರಿಗೆ ವಂದಿಸುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X