ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರಟಪ್ರಿಯ-ಕರಟಪ್ರಿಯ-ಕುಕ್ಕುಟಪ್ರಿಯ

By Staff
|
Google Oneindia Kannada News


Three Modern Music ragas in Singaluru! ಮೂರನೆಯದಾಗಿ ಮತ್ತು ಕೊನೆಯದಾಗಿ, ಸಿಂಗಳೂರು ತಂಗಳೂರುಗಳ ನಡುವೆ ರಾರಾಜಿಸುವ ಚೆನ್ನಪಟ್ಟಣದ ಚೆನ್ನಮೌಲಾನಾ ಸಾಹೇಬರು ಪ್ರಸ್ತುತ ಪಡಿಸಿದ ‘‘ಕುಕ್ಕುಟಪ್ರಿಯ’’ ರಾಗವಂತೂ ಪಂಡಿತರನ್ನೂ ಪಾಮರರನ್ನೂ ಏಕಕಾಲದಲ್ಲಿ ರಂಜಿಸಿದ ಅತ್ಯಂತ ರೋಚಕ ರಾಗವಾಗಿತ್ತು.

ಮೌಲಾನಾ ಸಾಹೇಬರ ಚರಿತ್ರೆಯ ಒಂದಿಷ್ಟು ವಿವರಗಳನ್ನಾದರೂ ತಿಳಿದುಕೊಳ್ಳದೇ ಅವರ ರಾಗರಂಜನೆಯಬಗ್ಗೆ ತಿಳಿದುಕೊಳ್ಳುವುದು ಕಷ್ಟಸಾಧ್ಯವು. ಅಪ್ಪಟ ಹಿಂದುಗಳಾಗಿದ್ದ ಚಿನ್ನಾಸಾಮಿ ಮತ್ತು ಪೊನ್ನಮ್ಮ ದಂಪತಿಗಳ ಏಕಮಾತ್ರ ಪುತ್ರ ಪೊನ್ನಾಸಾಮಿಯ ಜ್ಯೇಷ್ಠಪುತ್ರನಾಗಿ ಚೆನ್ನಪಟ್ಟಣದಲ್ಲಿ ಜನಿಸಿದ್ದ ಚೆನ್ನಕೇಶವುಲು ಮೊಟ್ಟಮೊದಲ ಬಾರಿಗೆ ಭೇರ್ಯ ಎಂಬ ಊರಿನ ಬ್ಯಾರೀ ಹೋಟೆಲಿನಲ್ಲಿ ತಂದೆತಾಯಿಗಳ ಕಣ್ತಪ್ಪಿಸಿ ಕದ್ದು ತಿಂದ ತಂದೂರಿ ಕೋಳಿಯ ರುಚಿ ಹತ್ತಿದ ಮೇಲೆ ಮನೆಯಿಂದ ಉಚ್ಛಾಟಿಸಲ್ಪಟ್ಟರಂತೆ.

ಮನೆಯನ್ನು ಕಳೆದುಕೊಂಡ ಬಾಲಚೆನ್ನಕೇಶವುಲುವಿಗೆ ಊರೂರಲೆಯುವ ಪ್ರಸಂಗ ಬಂದಿತಂತೆ. ಈ ರೀತಿ ಅಲೆಯುತ್ತ ವಾರಣಾಸಿಯನ್ನು ತಲುಪಿದ ತರುಣ ಚೆನ್ನಕೇಶವುಲು, ತನ್ನಕಂಠಮಾಧುರ್ಯದಿಂದ ಅಲ್ಲಿನ ಮಶಹೂರ್‌ ಉಸ್ತಾದ್‌ ಛೋಟೇ-ಮೋಟೆ ಅಲಿಮುದ್ದೀನ್‌ ಎಂಬ ಉದ್ದಾಮ ಪಂಡಿತರ ಮನಸ್ಸನ್ನು ಕದ್ದುಬಿಟ್ಟರಂತೆ. ಚೆನ್ನಕೇಶವುಲುವನ್ನು ಉಸ್ತಾದರು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದ್ದೇ ಅಲ್ಲದೇ, ಉತ್ತರಾದಿ ಸಂಗೀತವನ್ನು ಧಾರೆ ಎರೆದರಂತೆ.

ಮೊದಲೇ ಸಂಗೀತದ ವಂಶಕ್ಕೆ ಸೇರಿದ್ದ ಚೆನ್ನಕೇಶವುಲು ಚೆನ್ನಾಗಿಯೇ ಸಂಗೀತವನ್ನು ಕಲಿತರಂತೆ. ಸ್ವದೇಶಕ್ಕೆ ಹಿಂದಿರುಗಿದಮೇಲೆ ತಮ್ಮವಂಶಪಾರಂಪರ್ಯವಾಗಿ ಬಂದಿದ್ದ ದಕ್ಷಿಣಾದಿ ಸಂಗೀತವನ್ನೂ ರೂಢಿಸಿಕೊಂಡವರಾಗಿ ಬಹಳೇ ಪ್ರಸಿದ್ಧಿ ಪಡೆದರಂತೆ. ಇವರ ಪ್ರಸಿದ್ಧಿ ಎಷ್ಟೇ ಇದ್ದರೂ, ಮಡಿವಂತ ಹಿಂದುಗಳು ಯಾರೂ ಇವರಿಗೆ ಹೆಣ್ಣುಕೊಡಲು ಒಪ್ಪದೇ ಇದ್ದರಿಂದ ತಮಗೆ ಮೊದಲಿಂದಲೂ ಪರಿಚಯವಿದ್ದ ಗುರುಗಳ ಮಗಳನ್ನೇ ವಿವಾಹವಾಗಿ ಇಸ್ಲಾಮ್‌ ಮತಕ್ಕೆ ಸೇರಿ, ಉಸ್ತಾದ್‌ ಚೆನ್ನಮೌಲಾನಾ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವರಂತೆ.

ತಂದೂರಿಯ ಆಸ್ವಾದದ ಪ್ರಭಾವ ಆಗದೇ ಇರುತ್ತದೆಯೇ? ಇದ್ದಕ್ಕಿದ್ದಂತೆ ಒಂದು ರಾತ್ರಿ ಎದ್ದು ಕುಳಿತ ಮೌಲಾನಾ ಒಂದೇಸಮ ಹಾಡಲು ಶುರುಮಾಡಿದರಂತೆ. ಈ ವರೆಗೆ ಗುರುತು ಹಿಡಿಯಲ್ಪಟ್ಟ ಎಪ್ಪತ್ತೆರಡು ಜನಕರಾಗಳಿಗಿಂತ ವಿಭಿನ್ನವಾದ ಮತ್ತು ಹಿಂದೆ ವಿಸ್ತರಿಸಿದ ಕರಟ ಮತ್ತು ಚರಟ ಎಂಬ ವರಟು ಸ್ವರಗಳ ಕಾಟವಿಲ್ಲದ ಒಂದು ಹೊಸ ರಾಗ ಹುಟ್ಟಿಕೊಂಡಿತಂತೆ. ಈ ರಾಗದಲ್ಲಿ ಕೇವಲ ‘‘ಕೊ-ಕೊ-ಕೋ, ಕೊ-ಕೊ-ಕೋ, ಕೊ-ಕೊ-ಕೋ’’ ಎಂಬ ಮೂರುಸ್ಥಾಯಿಗಳಲ್ಲೂ ಕಿವಿಗೆ ಹಿತವೆನಿಸುವ ಅದ್ಭುತರಾಗದ ಸ್ವರಸಂಚಾರವಿದೆ.

ಕುಕ್ಕುಟವನ್ನು ಯಾವ ರೂಪದಲ್ಲಾಗಲೀ ಕಂಡುಹಿಡಿಯುವ ಬ್ಯಾರಿ, ಅಪರಾತ್ರಿಯಲ್ಲಿ ಕೂಗಿದ ಕೋಳಿಯ ಇಂಚರದಿಂದ ದಿಕ್‌ಮೂಢರಾಗಿದ್ದರೂ, ತಮ್ಮ ಹಾರ್ಮೋನಿಯಮ್‌ ಸಾಥ್‌ ಕೊಟ್ಟರಂತೆ. ಆರೋಹಣದಲ್ಲಿ ದಕ್ಷಿಣಾದಿಯಂತೆಯೂ ಅವರೋಹಣದಲ್ಲಿ ಉತ್ತರಾದಿಯಂತೆಯೂ ಕೇಳುವ ಈ ಅಪರೂಪದ ಮಾಧುರ್ಯಸಂಗಮವನ್ನು ಮೌಲಾನಾ ಗವಯಿಗಳ ಬೇಗಮ್‌ ತಕ್ಷಣವೇ ಧ್ವನಿಮುದ್ರಿಸಿ ಚೆನ್ನೈನಲ್ಲಿರುವ ಕರ್ನಾಟಕ ಸಂಗೀತ ಅಕ್ಯಾಡೆಮಿಗೆ ಒಂದು ಪ್ರತಿಯನ್ನೂ ದೆಹಲಿಯಲ್ಲಿರುವ ಹಿಂದುಸ್ತಾನೀ ಸಂಗೀತ ಅಕ್ಯಾಡೆಮಿಗೆ ಮತ್ತೊಂದು ಪ್ರತಿಯನ್ನೂ ಕಳುಹಿಸಲಾಗಿ, ಸಂಗೀತಪ್ರಪಂಚದಲ್ಲಿ ಕೋಲಾಹಲವೆದ್ದಿತಂತೆ.

ಉಸ್ತಾದರಿಗೆ ಬರಬಹುದಾದ ಬಿರುದುಬಾವಲಿಗಳನ್ನು ನೆನೆಸಿಕೊಳ್ಳುತ್ತಾ ರೋಮಾಂಚಿತರಾದ ಬೇಗಮ್‌, ಬೇಗ ಬೇಗನೆ ಬಂದು ಗದ್ದಕೆ ಮುದ್ದನಿಟ್ಟು ಎದ್ದು ಓಡಿದ ದೃಶ್ಯ ನಯನಮನೋಹರವಾಗಿತ್ತೆಂದು ಕಣ್ಣಾರೆ ಕಂಡವರು ವಿವರಿಸಿದ್ದಾರೆ.

ಬ್ಯಾರಿ ಮಾಡುವ ತಂದೂರಿಯನ್ನು ತಿನ್ನದೇ ಉಸ್ತಾದರು ಎಂದೂ ಕಚೇರಿ ಮಾಡುವುದಿಲ್ಲವಂತೆ. ಈ ಅಪೂರ್ವರಾಗಕ್ಕೆ ‘‘ಕುಕ್ಕುಟಪ್ರಿಯ’’ ಎಂಬನಾಮಕರಣವಾದನಂತರ ಮಂ-ಮಂ ರಾಯರು, ಕೊ-ಕೊಟ್ರಪ್ಪನವರು ಮತ್ತು ಚೆ-ಚೆ-ಮೌಲಾನರು (ಅಂದರೆ ಚೆನ್ನಪಟ್ಟಣದ ಚೆನ್ನ ಮೌಲಾನಾ ಎಂದು ಬೇರೆ ಹೇಳುವ ಅಗತ್ಯವಿದೆಯೆ?) ಸೇರಿ ಚರಟಪ್ರಿಯ, ಕರಟಪ್ರಿಯ ಮತ್ತು ಕುಕ್ಕುಟಪ್ರಿಯ ಮೂರೂ ರಾಗಗಳನ್ನು ಏಕಕಾಲದಲ್ಲಿ ವಿಸ್ತರಿಸಿ ರಾಗ-ತಾನ-ಪಲ್ಲವಿಯನ್ನು ಹಾಡಿರುವ ಧ್ವನಿಸಂಪುಟವನ್ನು ಬಿಡುಗಡೆಮಾಡಿದ್ದಾರೆ. ಸೀಡಿ ಹೊರಬಿದ್ದಮೇಲೆ, ಸಿಂಗಳೂರಿನ ಕಾರುಗಳಲ್ಲಿ ಮತ್ತಾವ ಸಂಗೀತಕ್ಕೂ ಸ್ಥಾನವಿಲ್ಲವಂತೆ!

ಈ ಅಪರೂಪದ ಪಲ್ಲವಿ ತೇರಾಕ್ಷರೀ-ತ್ರಿಪುಟತಾಳದ ಮಿಶ್ರನಡೆಯಲ್ಲಿದೆ. ಅಂದರೆ, ಬಿಕ್ಕಟ್ಟಾದ ಈ ತಾಳಕ್ಕೆ ‘‘ಕೊಕ್ಕಿಟ್ಟಕೊಂ-ಕೊಕ್ಕಿಟ್ಟ-ಕೊಂ-ಕೊಕ್ಕಿಟ್ಟ-ಕೊಂ-ಕೊಂ’’ ಒಟ್ಟು ಹದಿಮೂರಕ್ಷರಗಳು. ನಮ್ಮ ಮೌಲಾನಾ ಅವರೇ ಖುದ್ದಾಗಿ ರಚಿಸಿದ ಇದರ ಸಾಹಿತ್ಯ ಕೂಡ ತುಂಬಾ ವಿಶೇಷವಾಗಿದೆ:

‘‘ಕೋಳಿಯ ಕೊಂದು, ಕಾಲನು ತಂದು, ನೆನೆಹಾಕಿರಿ ಅರೆದ ಮಸಾಲೆಯಲಿ, ಇಂದು
ಉರಿವ ಕೆಂಡದ ತಂದೂರಿಯೊಳಿಟ್ಟರೆ, ಅದು ಬೆಂದು, ನಾತಿಂದು, ಗೋವಿಂದ ಎಂದು’’

ಇತ್ತೀಚಿನ ಸುದ್ದಿ ಏನೆಂದರೆ, ಸಿಂಗಳೂರಿನ ಕಾಕ್ಸ್‌ಟೌನ್‌ ಎಂಬ ಬಡಾವಣೆಯಲ್ಲಿ ತಂದೂರಿ ಆಕಾರದ ಒಂದು ಸಂಗೀತ-ಸಭಾ-ಭವನವನ್ನು ಮೌಲಾನಾ ಸಾಹೇಬರ ಅಭಿಮಾನಿಗಳು ಮಧ್ಯಪ್ರಾಚ್ಯದಲ್ಲಿರುವ ಅನೇಕ ಅರಬ್ಬೀ ಸಂಗೀತಪ್ರಿಯರ ಸಹಕಾರದೊಂದಿಗೆ ಕಟ್ಟಿಸಿದ್ದಾರಂತೆ. ಈ ಸೌಧದೊಳಕ್ಕೆ ಹೆಜ್ಜೆ ಇಟ್ಟರೆ ಸಾಕು ತಂಬೂರಿಯನಾದ ಕೊ-ಕೊ-ಕೋ-ಕೋ, ಕೊ-ಕೊ-ಕೋ-ಕೊ ಎಂಬ ನಾಭೀಹೃತ್ಕಂಠರದನವಾದ ಕೊಂಬೂರೀ ನಾದ ಹೊರಡಿಸುತ್ತದಂತೆ.

ಕರ್ನಾಟಕ ಮತ್ತು ಹಿಂದುಸ್ಥಾನೀ ಸಂಗೀತ ಪದ್ಧತಿಗಳೆರಡರಲ್ಲೂ ಕುಕ್ಕುಟಪ್ರಿಯ ರಾಗದ ಪರಿಚಯವಾಗಿ ಜನಪ್ರಿಯತೆ ಬಂದಮೇಲೆ, ಈ ರಾಗ ಇಡೀ ಭಾರತದಲ್ಲೇ ಅಲ್ಲದೇ ಅರಬ್‌ ದೇಶಗಳನ್ನು ಸಹ ಪ್ರವೇಶಿಸಿದೆಯಂತೆ. ಈ ರಾಗದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ ಒಬ್ಬ ಮುಸಲ್ಮಾನ ಗವೈ ಹೇಳಿರುವ ಪ್ರಕಾರ, ಆರೋಹಣ-ಅವರೋಹಣದಲ್ಲಿ ಉಪಯೋಗಿಸಲ್ಪಡುವ, ವಾದಿ, ವಿವಾದಿ, ಸಂವಾದಿ ಮತ್ತು ಪ್ರವಾದಿ ಸ್ವರಗಳನ್ನು ಪರಿಶೀಲಿಸಿದಾಗ ಗೊತ್ತಾಗುವುದೇನೆಂದರೆ, ವಾದಿ, ವಿವಾದಿ ಮತ್ತು ಸಂವಾದಿಗಳು ಅಪ್ಪಟ ಭಾರತೀಯ ಪದ್ಧತಿಗೆ ಸೇರಿದವಾದರೂ, ಪ್ರವಾದಿ ಸ್ವರಗಳು ಮಾತ್ರ, ಪ್ರವಾದಿ ಮೊಹಮ್ಮದರ (ಅವರ ಆತ್ಮಕ್ಕೆ ಶಾಂತಿ ಇರಲಿ) ಅನುಯಾಯಿಗಳು ಮಸೀದಿಯಲ್ಲಿ ನಮಾಜು ಮಾಡುವಾಗ ಉಪಯೋಗಿಸುವ ಧಾಟಿಯಲ್ಲೇ ಸಾಗುವುದರಿಂದ ಕುಕ್ಕುಟದ ಉಗಮವಾಗಿರುವುದು ಇಂದಿನ ದುಬೈ ಮತ್ತು ಅಬುಧಾಬಿಗಳ ನಡುವಣ ಪ್ರದೇಶದಲ್ಲೆ ಎಂದು ಖಚಿತವಾಗಿ ತಿಳಿಸಿದ್ದಾನೆ.

ಪ್ರಾತಃಕಾಲದ ಈ ಉದಯರಾಗವನ್ನು ಇತ್ತೀಚೆಗೆ ಮಸೀದಿಯ ಮೊದಲ ಪ್ರಾರ್ಥನೆಯೊಂದಿಗೆ ಕೇಳಬಹುದಾಗಿದೆ. ಸಿಂಗಳೂರಿನ ಸಭೆಯಿಂದ ನೇರವಾಗಿ ಮೌಲಾನಾ ಗವಯಿಗಳು ಮಧ್ಯಪ್ರಾಚ್ಯದ ದೀರ್ಘಯಾತ್ರೆಗೆ ಹೊರಟಿದ್ದಾರೆ ಎಂಬ ಸಮಾಚಾರದ ಜೊತೆಗೆ ಉಸ್ತಾದರ ಬೇಗಮ್‌ ಅವರ ಗಲ್ಲಕ್ಕೆ ಮುತ್ತನಿಕ್ಕುತ್ತಿರುವ ಚಿತ್ರ ಅನೇಕ ವೃತ್ತಪತ್ರಿಕೆಗಳಲ್ಲಿ ಛಾಪಾಗಿದೆಯಂತೆ

. ಸಿಂಗಳೂರಿನ ಸಂಗೀತೋತ್ಸವದಬಗ್ಗೆ ಹೆಚ್ಚಿನ ವಿವರಗಳು ಬೇಕಾಗಿದ್ದವರು www.moulAnApriya.org ಎಂಬ ಜಾಲತಾಣಕ್ಕೆ ತಪ್ಪದೇ ಭೇಟಿಕೊಡುವಿರೆಂದು ನಂಬುತ್ತಾ, ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X