• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚರಟಪ್ರಿಯ-ಕರಟಪ್ರಿಯ-ಕುಕ್ಕುಟಪ್ರಿಯ

By Staff
|

ಚಿಕಾಗೋ ನಗರದಲ್ಲಿ ಮೇ 19/20, 2007ರಂದು ನಡೆದ, ಹಾಸ್ಯಕ್ಕೆ ಒತ್ತುಕೊಟ್ಟ ಕನ್ನಡ ಸಾಹಿತ್ಯರಂಗದ ಮೂರನೇ ಸಮ್ಮೇಳನದಲ್ಲಿ ಓದಿದ ಈ ಲಘುಪ್ರಬಂಧ, ನಿಮ್ಮ ಮುಖದಲ್ಲಿ ನಗೆ ಅರಳಿಸಲಿ.

Three Modern Music ragas in Singaluru!ಇತ್ತೀಚೆಗೆ ನಮ್ಮ ಸಿಂಗಳೂರಿನಲ್ಲಿ ಒಂದು ಅದ್ಭುತವಾದ ಸಂಗೀತೋತ್ಸವ ನಡೆಯಿತಂತೆ. ಹಲವಾರು ಹೆಸರಾಂತ ಸಂಗೀತಗಾರರು ಭಾಗವಹಿಸಿದ್ದರಂತೆ. ಈ ಸಂದರ್ಭದಲ್ಲಿ ಅನೇಕ ಅಪೂರ್ವರಾಗಗಳ ಪ್ರಯೋಗಗಳು ನಡೆದುವಂತೆ. ಸಂಗೀತರಸಿಕರು ಹಿಂದೆಂದೂ ಕೇಳಿರದ ನವ್ಯರಾಗಗಳನ್ನು ಕೇಳಿ ಆನಂದಿಸಿದರಂತೆ. ಕಮ್ಮಟದಲ್ಲಿ ಪ್ರಯೋಗವಾದ ಮೂರು ನವ್ಯರಾಗಗಳ ಕಿರುಪರಿಚಯ ಮಾಡಿಕೊಡುವುದೇ ಈ ಲೇಖನದ ಉದ್ದೇಶ.

ಮೊದಲನೆಯದಾಗಿ, ಸಿಂಗಳೂರಿನ ಎಲ್ಲಾ ಉಡುಪಿ ಹೋಟೆಲಿನವರು ಒಟ್ಟಾಗಿ ಪ್ರಾಯೋಜಿಸಿದ ಮಂ-ಮಂ-ರಾಯರ ಕಾರ್ಯಕ್ರಮ. ಮಂಗಳೂರು ಮಂಗೇಶರಾಯರು ಸಿಂಗಳೂರಿನಲ್ಲಿ ಮಂ-ಮಂ-ರಾಯರೆಂದೇ ಜನಪ್ರಿಯರಾಗಿರುವರು ಎಂಬುದು ತಮಗೆಲ್ಲಾ ತಿಳಿದಿರುವ ವಿಷಯವೇ. ರಾಯರು ಮೊಟ್ಟಮೊದಲಬಾರಿಗೆ ದೀರ್ಘಾಲಾಪ ಮಾಡಿದ ‘‘ಚರಟಪ್ರಿಯ’’ ಎಂಬ ರಾಗ ತುಂಬಾ ಗಮನಾರ್ಹವಾಗಿತ್ತಂತೆ.

ಈ ರಾಗದ ವೈಶಿಷ್ಟ್ಯವೇನೆಂದರೆ, ಇದನ್ನು ಹಾಡುವ ಮೊದಲು ಒಳ್ಳೆಯ ಬೇಳೆಸಾರನ್ನು ತಯಾರಿಸಿ ಕೊಳ್ಳಬೇಕು. (ತಯಾರು ಮಾಡುವ ವಿಧಾನದಬಗ್ಗೆ ವಿವರಗಳು ಬೇಕಿದ್ದವರು, ತುಳಸೀವನದ/ಕಡೂರಿನ ತ್ರಿವೇಣಿ ಅವರನ್ನು ಚಿಕಾಗೋ ನಗರದಲ್ಲಿ ವಿಚಾರಿಸಿ. ಘಮಘಮ ಹಿಂಗಿನ ಒಗ್ಗರಣೆಯ ಅವರ ರಿಸೈಪಿ, ಸಂಗೀತ ಮತ್ತು ಸಾಹಿತ್ಯಪ್ರಿಯರಿಗೆ ಪುಕ್ಕಟ್ಟೆ ದೊರಕುವ ಸಾಧ್ಯತೆ ಇದೆ ಎಂದು ಬಲ್ಲವಲಯಗಳಿಂದ ತಿಳಿದುಬಂದಿದೆ.) ಹೀಗೆ ತಯಾರಿಸಿದ ಸಾರಿನ ತಿಳಿ ಎಲ್ಲವನ್ನೂ ಬಗ್ಗಿಸಿ ಸಾಹಿತ್ಯಪ್ರಿಯರಿಗೆ ಬಡಿಸತಕ್ಕದ್ದು.

ಕೆಳಗುಳಿದ ಚರಟವನ್ನು ಕಚೇರಿ ಪ್ರಾರಂಭವಾಗುವ ಎರಡೂವರೆಯಿಂದ ಎರಡೂಮುಕ್ಕಾಲು ಘಂಟೆ ಮುನ್ನ ಕಂಠಪೂರ್ತಿ ಕುಡಿದು, ಬಿಸಿನೀರಿನಿಂದ ಬಾಯಿ ಮುಕ್ಕಳಿಸಿ, ದೀರ್ಘ ಉಛ್ವಾಸ ಮತ್ತು ನಿಶ್ವಾಸಗಳ ಕಸರತ್ತನ್ನು ಅಂದರೆ, ಬ್ರೀದಿಂಗ್‌ ಎಕ್ಸರ್ಸೈಜನ್ನು, ಕನಿಷ್ಠ ಮುವ್ವತ್ತು ನಿಮಿಷಗಳಾದರೂ ಮಾಡಿರಬೇಕು. ನಂತರ ಹಾಡಿದರೆ ಈ ರಾಗದ ಸಕಲ ಸೌಂದರ್ಯಗಳನ್ನು ಅನುಭವಿಸುತ್ತಾ ಹಾಡಬಹುದು ಮತ್ತು ಕೇಳುಗರ ರಸಾನುಭವವನ್ನು ದ್ವಿಗುಣಗೊಳಿಸಬಹುದು ಎಂಬುದು ಮಂ-ಮಂ-ರಾಯರ ಅಂಬೋಣ.

ರಾಗ ತಗ್ಗು ಸ್ಥಾಯಿಯಲ್ಲೇ ನಿಧಾನಗತಿಯಲ್ಲಿ ನಡೆದು ಬಗ್ಗಡಾನುಭವವನ್ನು ಕೊಡುವುದರಿಂದ ರಾಯರು ಈ ರಾಗಕ್ಕೆ ಚರಟಪ್ರಿಯ ಎಂಬ ನಾಮಕರಣ ಮಾಡಿದ್ದಾರಂತೆ. ಈ ರಾಗವನ್ನು ಕೇಳಿದವರಿಗೆ ಸಂಜೆಯ ಸಾರನ್ನದೂಟ ಉಣ್ಣುವ ಬಯಕೆ ಉಂಟಾಗುವ ಕಾರಣದಿಂದ ಇದನ್ನು ಸಂಜೆಯ ರಾಗವೆಂದು ಗುರುತಿಸಲಾಗಿದೆ.

ಎರಡನೆಯದಾಗಿ, ಚರಟಪ್ರಿಯದಷ್ಟು ರುಚಿಕರವಾದ ರಕ್ತಿ-ರಾಗವಲ್ಲದಿದ್ದರೂ, ಕೊ-ಕೊಟ್ರಪ್ಪನವರು ಅಂದರೆ, ಕೊರಟಕೆರೆಯ ಕೊಟ್ಟೂರಪ್ಪನವರು ಮೊದಲಬಾರಿಗೆ ವಿಸ್ತರಿಸಿದ ‘‘ಕರಟಪ್ರಿಯ’’ ರಾಗವೂ ರಸಿಕರ ಮನ್ನಣೆಯನ್ನು ಪಡೆಯಿತಂತೆ. ಈ ರಾಗಕ್ಕೂ ಒಂದು ವಿಶಿಷ್ಟತೆ ಇದೆ ಎಂದು ಒತ್ತಿ ಒತ್ತಿ ಹೇಳಬೇಕಾದ ಅಗತ್ಯವಿಲ್ಲ ಎಂಬ ಅಂಶವನ್ನು ಕೊ-ಕೊ-ರಪ್ಪನವರು ಒತ್ತಿ ಒತ್ತಿ ಹೇಳಿದರಂತೆ.

ಕೊ-ಕೊಟ್ರಪ್ಪನವರ ಖಾಸಾ ಶಿಷ್ಯ, ಕಿಕ್ಕೇರಿ ಕಿಟ್ಟಪ್ಪನವರ ಪ್ರಕಾರ ಇವರು ತಮ್ಮ ಊರಿನ ಸುತ್ತ ಮುತ್ತ ಕಿಕಿಟ್ಟಪ್ಪ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ, ಕಚೇರಿಗೆ ಸರಿಯಾಗಿ ಮೂರೂವರೆ ಘಳಿಗೆ ಮುಂಚೆ, ಒಳ್ಳೆಯ ಬಲಿತ ತೆಂಗಿನಕಾಯನ್ನೊಡೆದು, ಕಾಯಿನ ಒಂದುಭಾಗವನ್ನು ತುರಿದು ಚರಟಪ್ರಿಯ ರಾಗವನ್ನು ಹಾಡುವ ಗವಯಿಗಳ ಸಾರಿನ ತಯಾರಿಕೆಗೆ ಉಪಯೋಗಿಸತಕ್ಕದ್ದು. ಮಿಕ್ಕರ್ಧವನ್ನು ತುರಿದು ನಿಂಬೇಗಾತ್ರದ ಬೆಲ್ಲ ಮತ್ತು ಎರಡು ಚಿಟಿಕೆ ಏಲಕ್ಕಿ ಪುಡಿಗಳೊಂದಿಗೆ ಬೆರೆಸಿ ರುಬ್ಬಬೇಕು.

ಚೆನ್ನಾಗಿ ರುಬ್ಬಿ ಕಾಯಿನ ಹಾಲನ್ನು ಹಿಂಡಿ ತೆಗೆದು ಕುದಿಸಿ ಬಿಸಿಯಾಗಿರುವಾಗಲೇ ಕುಡಿಯಬೇಕು. ಅಷ್ಟೇ ಅಲ್ಲದೇ ಬಲಿತ ತೆಂಗಿನ ಸಿಹಿ ಎಳನೀರನ್ನು ಕಚೇರಿ ಪ್ರಾರಂಭಕ್ಕೆ ಮುನ್ನ ಕುಡಿಯತಕ್ಕದ್ದು. ಎಳನೀರನ್ನು ಬೆಳ್ಳಿ ಪಂಚಪಾತ್ರೆಯಲ್ಲಿ ಮಾತ್ರ ಕುಡಿಯಬೇಕು ಮತ್ತು ಸಭಿಕರಿಗೆ ಕಾಣದಂತೆ ತಮ್ಮ ಶಲ್ಯದಿಂದ ಮುಚ್ಚಿಕೊಂಡು ಪಂಚಪಾತ್ರೆಗೆ ತುಟಿಗಳು ತಗುಳದಂತೆ ಮೇಲಿನಿಂದ ಎತ್ತಿ ಹುಯ್ದುಕೊಂಡರೆ ಮಾತ್ರ ಕರಟಪ್ರಿಯ ರಾಗದ ಸಕಲ ರಹಸ್ಯಗಳನ್ನೂ ಭೇದಿಸಲು ಸಾಧ್ಯವಾಗುವುದು ಎಂಬ ಕೊ-ಕೊಟ್ರಪ್ಪನವರ ವಿವರಣೆಯನ್ನು ಕಿಕಿಟ್ಟಪ್ಪನವರು ಪ್ರಸ್ತುತಪಡಿಸಿದರೆಂದು ಅವರಿವರ ಮಾತುಗಳಿಂದ ತಿಳಿದುಬಂದಿದೆ.

ಕರಟಪ್ರಿಯ ರಾಗದ ಮುಖ್ಯ ಲಕ್ಷಣಗಳೆಂದರೆ, ಅದು ಮಂದ್ರಗತಿಯಲ್ಲಿ ಸಾಗುವಾಗ ತಿರುಳು ಮುಗಿದ ಕರಟವನ್ನು ತುರಿಯುವ ಮಣೆಯಲ್ಲಿ ತುರಿಯುವಾಗ ಉಂಟಾಗುವ ‘ತುರ್‌-ತುರ್‌’ ಎಂಬ ಶಬ್ದ ಸೌಂದರ್ಯವೂ, ಎತ್ತುಗಡೆಯಲ್ಲಿ ತುರಿದ ಕರಟಗಳ ಎರಡರ್ಧಗಳನ್ನು ಮುಖಾಮುಖಿಮಾಡಿ ಒಂದಕ್ಕಿನ್ನೊಂದನ್ನು ತಟ್ಟಿದಾಗ ಉಂಟಾಗುವ ಕಟ-ಕಟ-ಧ್ವನಿಯೂ ಪ್ರಕಟವಾಗುವುವು. ಈ ಅಂಶಗಳನ್ನು ಸಾಕ್ಷಾತ್ತಾಗಿ ಪ್ರಾತ್ಯಕ್ಷಿಕೆಯ ಮೂಲಕ ಸಾಬೀತುಮಾಡುವ ಉದ್ದಿಶ್ಯದಿಂದ, ಕಿಕಿಟ್ಟಪ್ಪನವರು ಎರಡು ಕರಟಗಳನ್ನು ಉಪಯೋಗಿಸಿಕೊಂಡೇ ಹಾಡಿದರಂತೆ.

ಪ್ರತಿಯೊಂದು ರಾಗಕ್ಕೂ ಮತ್ತೊಂದು ಹೆಸರನ್ನಿಡುವ ದುರಭ್ಯಾಸವಿದ್ದ ಎತ್ತುಸ್ವಾಮಿ ದೀಕ್ಷಿತರ ಶಿಷ್ಯಪರಂಪರೆಗೆ ಸೇರಿದವರು ಕರಟಪ್ರಿಯ ರಾಗವನ್ನು ಕಟ-ಕಟ-ಪ್ರಿಯ ಎಂದು ಕರೆಯುತ್ತಾರೆ ಎಂಬ ರಹಸ್ಯವನ್ನು ಕಿಕ್ಕಿಟ್ಟಪ್ಪನವರು ವಿವರಿಸಲು ಮರೆಯಲಿಲ್ಲ. ಈ ರಾಗ ಮಧ್ಯಾಹ್ನ ಮತ್ತು ಅಪರಾಹ್ನದ ವೇಳೆಗೆ ಹಾಡಲು ಹೇಳಿ ಮಾಡಿಸಿದ ರಾಗವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X