• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀಡು ಗೂಡು ಮಾಡು

By Staff
|

The story of my journey to my nestಐದನೇ ಮಹಡಿ ಸೇರುವಹೊತ್ತಿಗೆ ಉಸಿರು ಕಟ್ಟುವಂಥ ಗಬ್ಬು ವಾಸನೆ, ಧಡ ಧಡ ಸದ್ದು ಮಾಡುತ್ತ ಕುಂಟುತ್ತ ಮೇಲೇರಿದ ಎಲಿವೇಟರ್ ತನ್ನ ಜೀವನದಲ್ಲಿ ಎಷ್ಟು ಬಾರಿ ದುರಸ್ತಿಯಾಗಿ ಇನ್ನೂ ಉಸಿರಾಡುತ್ತಿತ್ತೋ ದೇವರೇ ಬಲ್ಲ. ಎಲಿವೇಟರ್‍ನಿಂದ ಹೊರಬಂದೊಡನೆಯೇ ಅಪಾರ್ಟ್‍ಮೆಂಟುಗಳಿಂದ ಘಮಘಮ ಈರುಳ್ಳಿ, ಬೆಳ್ಳುಳ್ಳಿ, ಸೋಯ್ ಸಾಸ್, ಹಳೇ ಉಪ್ಪಿನಕಾಯಿ, ಮುಗ್ಗಲು ತೆಂಗಿನಕಾಯಿ, ಮುಂತಾದ ಪರಿಚಿತ, ಮತ್ತೆಷ್ಟೋ ಅಪರಿಚಿತ ವಾಸನೆಗಳ ಕಿಮಟು, ಘಾಟುಗಳಿಂದ ತಲೆ ಸುತ್ತುವ ಅನುಭವ.

’ಸ್ವಾಮೀ ಭಗವಂತ ಕಾಪಾಡೋ’ ಎಂದು ನಮಗೆ ದೊರೆತ ಅಪಾರ್ಟ್‍ಮೆಂಟನ್ನು ಪ್ರವೇಶಿಸಿದರೆ, ಎಲ್ಲಿ ನೋಡಿದರೂ ಧೂಳು. ಬಾಥ್ ರೂಂ ನೋಡಿದರೆ, ಸಿಂಕು ಟಬ್ಬುಗಳೆಲ್ಲ ಹಳದಿ ಬಣ್ಣ. ಹಾಸಿಗೆಗಳೋ-- ಅದನ್ನು ಬಣ್ಣಿಸದಿರುವುದೇ ಮೇಲು. ಮೂವರೂ ಕೂಡಿ ಕೈಲಾದಷ್ಟು ಶುಚಿಮಾಡಿಕೊಂಡು, ಹತ್ತಿರದಲ್ಲೇ ಇದ್ದ ಒಂದು ಅಂಗಡಿಯಿಂದ ಒಂದಿಷ್ಟು ಸುಗಂಧದ ತುಂತುರನ್ನು ಎರಚುವ ಸಾಧನೆಗಳನ್ನು ತಂದು ಮನೆಯ ತುಂಬಾ ಸಿಂಪಡಿಸಿ ಪುಣ್ಯಾಹ ಮಾಡಿದ್ದಾಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಹಾಸಿಗೆಗಳು ನಮ್ಮ ಚರ್ಮಗಳನ್ನು ಎಂದೆಂದಿಗೂ ಸೋಂಕದಂತೆ, ಪ್ಲ್ಯಾಸ್ಟಿಕ್ ಹಚ್ಚಡಗಳನ್ನು ತಂದು ಮ್ಯಾಟ್ರೆಸ್‍ಗಳ ಸುತ್ತಲೂ ಹೊದಿಸಿ ಸಿಕ್ಕಿಸಿ, ಸ್ಕಾಚ್ ಟೇಪಿನಿಂದ ಅಂಟಿಸಿ ಅದರಮೇಲೆ ಬೆಡ್‍ಶೀಟ್ ಹಾಕಿ ಭಗವಂತನನ್ನು ಪ್ರಾರ್ಥಿಸುತ್ತ ರಾಮಸ್ಕಂದಂ ಹೇಳಿ ಮಲಗಿದ ಎಷ್ಟೋ ಹೊತ್ತಿನ ಮೇಲೆ ಮೈಮೇಲೆಲ್ಲ ಏನೋ ಜುಳು ಜುಳು ಹರಿದಂತೆ ಭಾಸವಾಗಿ ಝಗ್ಗನೆದ್ದು ನೋಡಿದರೆ, ಆಗಲೇ ಕತ್ತಲು ಹರಿದು ಕಿಟಕಿಯಿಂದ ಬಿಸಿಲು. ನಾನೆಲ್ಲಿ ಮಲಗಿದ್ದೇನೆ ಎಂಬ ಪ್ರಶ್ನೆ. ಹಾಸನವೇ, ಬೆಂಗಳೂರೇ, ಮುಂಬೈಯೇ? ಅಲ್ಲ, ಪಿಟ್ಸ್‍ಬರ್ಗ್ ಎಂದು ನಂಬಲು ಸ್ವಲ್ಪ ಹೊತ್ತಾಯಿತು!

ಮಾರನೆಯದಿನ ನನ್ನನ್ನು ನೋಡಲು ಬಂದ ನನ್ನ ಮಿತ್ರನ-ಮಿತ್--ಕ್ಷಮಿಸಿ, ನನಗೂ ನನ್ನ ಕೊಠಡಿ ಸಂಗಾತಿಗಳಿಗೂ ಶಹಭಾಸ್‍ಗಿರಿ ಕೊಟ್ಟ. "ಹೆ ಗೈಸ್, ದಿಸ್ ಪ್ಲೇಸ್ ಇಸ್ ನಾಟ್ ಸೋ ಬ್ಯಾಡ್ ಆಫ್ಟರ್ ಆಲ್, ಯೂ ಷುಡ್ ಹ್ಯಾವ್ ಸೀನ್ ವ್ಹೇರ್ ಐ ಹ್ಯಾಡ್ ಟು ಸ್ಪೆಂಡ್ ಮೈ ಫಸ್ಟ್ ಸೆಮೆಸ್ಟರ್" ಎಂದು ಸಮಾಧಾನ ಪಡಿಸಿದ. ಆಗ ನಮಗೆ ತಿಳಿಯಿತು, ಅಂದಿನಿಂದಲೇ ನಾವು ಬೇರೊಂದು ಸ್ಥಳವನ್ನು ಹುಡುಕಲು ಶುರುಮಾಡಬೇಕೆಂದು. ಬಡದೇಶದ ಬಡಪಾಯಿ ಪರದೇಸಿ ವಿದ್ಯಾರ್ಥಿಗಳು ತೆರಬೇಕಾದ ಕರಗಳಲ್ಲಿ ಇದೂ ಒಂದು -- ಭೂತಬಂಗಲೆಯ ವಾಸ. ಇದು ಮೂರು ತಿಂಗಳೋ, ಆರು ತಿಂಗಳೋ ಅನ್ನುವುದು ಅವರವರ ಕರ್ಮಾವಶೇಷವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಇದು "ಬೀಡು" ಅಂದರೆ ತಾತ್ಕಾಲಿಕವಾಗಿ ತಂಗಬೇಕಾದ ನಿವಾಸ.

ಕೆಲವೇ ದಿನಗಳಲ್ಲಿ ನಮ್ಮ ಮೂಗುಗಳು ಭಂಡಮೂಗುಗಳಾದವು, ಕಾರಿಡಾರುಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ, ಸಿಗರೇಟು, ರಾತ್ರಿಯಹೊತ್ತು ಅಮಲೇರಿದವರು ಮಾಡಿದ ವಾಂತಿ ಒಣಗಿ ಉಂಟಾದ ಹುಳಿವಾಸನೆಯೇ ಮುಂತಾದ ದುರ್ಗಂಧಗಳನ್ನು ಕಡೆಗಣಿಸುವಷ್ಟು ಭಂಡಗೆಟ್ಟೆವೋ ಅಥವಾ ಸಹಿಸಿಕೊಳ್ಳುವಷ್ಟು ಶಕ್ತಿಶಾಲಿಗಳಾದೆವೋ, ಅಂತು ನಮ್ಮ ಕರ್ಮಾವಶೇಷ ಕಳೆದು, ನಾವು ಮೂವರೂ ಬೇರೆ ಬೇರೆ ನಿವಾಸಗಳನ್ನು ಕಂಡುಕೊಂಡೆವು. ಋಣಾನುಬಂಧರೂಪೇಣ ಪಶು ಪತ್ನಿ ಸುತಾಲಯಾಃ, ಅಷ್ಟೇ ಅಲ್ಲಾ, ಅಪಾರ್‍ಟ್‍ಮೆಂಟಾಃ, ರೂಂ ಮೇಟಾಃ!

ಬೀಡಿನಿಂದ ಗೂಡಿಗೆ

ನನಗೆ ’ಬೀಡಿ’ನಿಂದ ’ಗೂಡಿಗೆ’ ಬಡ್ತಿಯೊಂದಿಗೆ ವರ್ಗಾವಣೆ ಆಯಿತು. ನನ್ನ ಕನ್ನಡ ಮಿತ್ರರೊಬ್ಬರು ಬಾಡಿಗೆಗಿದ್ದ ಕಟ್ಟಡದ -- ಅದು, ಕೇವಲ ಆರು ಅಪಾರ್ಟ್‍ಮೆಂಟುಗಳಿರುವ ಹಳೆಯ ಮನೆ -- ಅಲ್ಲಿ ಮೂರನೆಯಮಹಡಿಯಮೇಲೆ ನನಗೊಂದು ಪುಟ್ಟ ಮನೆ ಸಿಕ್ಕಿತ್ತು. ಅಲ್ಲಿ ನಾನು ಸರ್ವತಂತ್ರ-ಸ್ವತಂತ್ರ. ಮನೆಯ ಮಧ್ಯಭಾಗವನ್ನು ಬಿಟ್ಟರೆ ನನ್ನಂಥ ಹೆಚ್ಚು ಎತ್ತರವಿಲ್ಲದವರೂ ತಲೆತಗ್ಗಿಸಿಕೊಂಡೇ ನಡೇಯಬೇಕಾದಷ್ಟು ತಗ್ಗಿನಲ್ಲಿತ್ತು ಆ ಗೂಡಿನ ಮಾಡು, ’ತಲೆಯ ಮ್ಯಾಗಿನ ಸೂರು.’ ಅರೆ, ಇದೇನು, ಹಾಸಿಗೆ ಎಲ್ಲಿ? ಎಂದು ನೋಡಿದರೆ, ಅದು ಗುಪ್ತವಾಗಿತ್ತು. ಗೋಡೆಯೊಳಗೊಂದು ಬೀರುವಿನ ಹಾಗಿರುವ ಒಂದು ಸ್ಥಳದಲ್ಲಿ ಇಡೀ ಮಂಚವನ್ನೇ ಅನಾಮತ್ತಾಗಿ ಮೇಲೆತ್ತಿ ಗೋಡೆಯೊಳಕ್ಕೆ ನೂಕಿ ಬೀರುವಿನ ಬಾಗಿಲನ್ನು ಮುಚ್ಚಿಬಿಟ್ಟರೆ ಹಾಸಿಗೆ ಮಾಯ! ಕೊಠಡಿಯ ಮಧ್ಯಬಾಗದಲ್ಲಿ ಎಷ್ಟೊಂದು ಸ್ಥಳವಿದೆ ಎನಿಸುವಷ್ಟು ವಿಸ್ತಾರ! ಭಲೆ ಭಲೆ.

ಓಹೋ ಅಡುಗೆ ಮನೆ? ಅದೇನೂ ಬೇರೆಯಾಗಿರಲಿಲ್ಲ. ಒಂದು ಗೂಡು, ಅದರೊಳಗೆ ಎರಡು ಸಣ್ಣ ಗ್ಯಾಸಿನ ಒಲೆ, ಗಾಳಿಯನ್ನು ಹೊರದಬ್ಬುವ ಒಂದು ಫ್ಯಾನು, ಒಲೆಯ ಪಕ್ಕ ಸಣ್ಣದಾದ ಒಂದು ಸಿಂಕು. ಬಾಗಿಲನ್ನು ಎಳೆದುಕೊಂಡರೆ, ಎಲ್ಲವನ್ನೂ ಮುಚ್ಚಿ ಅಡುಗೆಮನೆಯನ್ನೂ ಮಾಯಮಾಡಿಬಿಡಬಹುದು. ಸರಿ, ಬಚ್ಚಲುಮನೆ? ಇದೊಂದು ಅದ್ಭುತ. ಒಬ್ಬ ತೆಳ್ಳನೆಯ ವ್ಯಕ್ತಿ ಮಾತ್ರ ಒಳಕ್ಕೆ ಪ್ರವೇಶಿಸಬಹುದು. ಸ್ವಲ್ಪ ರಭಸದಿಂದ ತಿರುಗಿದರೆ ಸಿಂಕಿಗೋ, ಕಮೋಡಿಗೋ ಅಥವಾ ಟಬ್ಬಿಗೋ ಡಿಕ್ಕಿ ಆಗುವುದು ಖಂಡಿತ.

ಸೂರಿನ ಇಳಿಜಾರಿನಿಂದಾಗಿ ಬಚ್ಚಲುಮನೆಯಲ್ಲಿ ಎಲ್ಲಾ ಭಾಗದಲ್ಲೂ ತಲೆ ಎತ್ತಿ ನಿಲ್ಲುವಂತಿಲ್ಲ. ಸಿಂಕು, ಬೊಂಬೇ ಆಟದ ಸಿಂಕಿನಂತೆ ಪುಟ್ಟದಾಗಿತ್ತು. ಸ್ವಲ್ಪ ಹೆಚ್ಚುಕಮ್ಮಿ ಆದರೆ ಮುಕ್ಕಳಿಸಿ ಉಗಿದ ನೀರು ಸಿಂಕಿನಿಂದ ಹೊರಗೆ. ಆದರೆ ಈ ಬಚ್ಚಲಿನಲ್ಲೂ ಒಂದು ತುಂಬ ದೊಡ್ಡ ಅನುಕೂಲವಿತ್ತು. ಅದೇನೆಂದರೆ, ಕಮೋಡಿನ ಮೇಲೆ ಕುಳಿತರೆ ಎದುರಿಗೇ ಕನ್ನಡಿ ಮತ್ತು ಸಿಂಕು ಇದ್ದದ್ದರಿಂದ, ವಿಸರ್ಜನೆ, ದಂತಧಾವನ ಮತ್ತು ಮುಖಕ್ಷೌರ, ಈ ಮೂರು ಕ್ರಿಯೆಗಳಲ್ಲಿ ಕೊನೆಯಪಕ್ಷ ಎರಡೆರಡನ್ನು ಏಕಕಾಲದಲ್ಲಿ ಮಾಡಿ ಸಮಯವನ್ನು ಮಿಗಿಸಿ ಅಲ್ಲಿಂದ ಟಬ್ಬಿನೊಳಕ್ಕೆ (ಜೋಪಾನವಾಗಿ) ಜಿಗಿದು, ಜಳಕವನ್ನೂ ಮಾಡಿಬಿಟ್ಟರೆ, ಬಚ್ಚಲುಮನೆಯ ಬಾಗಿಲನ್ನು ಮುಚ್ಚಿ, ಹೊರಗಿನ ವಿಶಾಲಪ್ರದೇಶವನ್ನು ಪ್ರವೇಶಿಸಿ ಹಾಸಿಗೆಯನ್ನು ಮಾಯಮಾಡಿದ ಸ್ಥಳದಲ್ಲಿ ಕುಳಿತು ಸಂಧ್ಯಾವಂದನೆ ಅಥವಾ ಯೋಗ ಮಾಡಲು ಮಹದಾನಂದಕರವಾದ ವಾತಾವರಣವಿತ್ತು ಆ ನನ್ನ ಪುಟ್ಟ ಗೂಡಿನಲ್ಲಿ! ಹೌದು, ಬೀಡಿನಿಂದ ಬಿಡುಗಡೆಯಾದಮೇಲೆ ನನಗೆ ದೊರೆತ ಗೂಡು ಅದು. ಆ ಗೂಡನ್ನು, ಅದರ ಮಾಡನ್ನೂ ನೋಡಿದಮೇಲೆಯೇ ನಮ್ಮ ದಾಸರು ಬರೆದಿರಬೇಕು, "ಮಾಡು ಚಿಕ್ಕದಲ್ಲ ಮಾಡಿನ ಗೂಡು ಚಿಕ್ಕದಲ್ಲ" ಎಂಬ ಅರ್ಥಪೂರ್ಣವಾದ ದೇವರನಾಮವನ್ನು!

ಬೀಡಾಯಿತು ಗೂಡಾಯಿತು ಉಸಿರಾಡು

ಸುಮಾರು ಆರು ತಿಂಗಳು ಕಳೆಯುವುದೂ ಬಹು ಕಷ್ಟವೆನಿಸಿತು ಆ ಗೂಡಿನಲ್ಲಿ. ಅಲ್ಲಿಂದ ಮುಂದೆ ನಾನು, ಮಲಗುವ ಕೋಣೆ ಇರುವ ಎರಡನೆಯ ಮಹಡಿಯಲ್ಲಿದ್ದ ಒಂದು ಅಪಾರ್ಟ್‍ಮೆಂಟನ್ನು ಮತ್ತೊಬ್ಬ ಮಿತ್ರನ-ಮಿತ್ರನೊಂದಿಗೆ ಸೇರಿಕೊಂಡೆ. (ಏಕೆ ಸ್ವಾಮಿ, ನಿಮಗೆ ನೇರವಾದ ಮಿತ್ರರು ಯಾರೂ ಇಲ್ಲವೇ, ಯಾವಾಗಲೂ ಮಿತ್ರನ-ಮಿತ್ರ ಅಥವಾ ಮಿತ್ರನ-ಮಿತ್ರ-ಮಿತ್ರ ಎಂದೇ ಹೇಳುತ್ತೀರಲ್ಲ, ಎನ್ನುತ್ತೀರೋ? ಧಾರಾಳವಾಗಿ ಅನ್ನಿ. ಇದೂ ಕೂಡ ನಮ್ಮ ಐ.ಐ.ಟಿ ಕನೆಕ್ಷನ್ನು. ಏನು ಮಾಡುವುದು, ಮಿತ್ರರೊಂದಿಗೆ ಮನೆ ಮಾಡಿದರೆ ಅವರು ಹೆಚ್ಚು ದಿನ ಮಿತ್ರರಾಗಿ ಉಳಿಯಲಾರರು. ಆದ್ದರಿಂದ ಮಿತ್ರರ-ಮಿತ್ರರಾದರೆ, ಅವರು ಮಿತ್ರರಾಗಿ ಉಳಿಯದಿದ್ದರೂ ಅಡ್ಡಿಯಿಲ್ಲ ಎಂಬುದು ನನ್ನ ತರ್ಕ!) ಈ ಮನೆಯಲ್ಲಿ ಎಲ್ಲಾ ಕೋಣೆಗಳೂ ವಿಶಾಲವಾಗಿದ್ದವು, ಗಾಳಿ ಬೆಳಕಿಗೆ ಯಾವ ತೊಂದರೆಯೂ ಇರಲಿಲ್ಲ. ಆಹ, ಎಂಥ ಚೆಂದದ ಮನೆ ಎಂದು ಆಗಾಗ್ಗೆ ಮಿತ್ರರನ್ನೆಲ್ಲ ಕರೆದು ಗುಂಪುಭೋಜನ ಮಾಡುವ ದುರಭ್ಯಾಸ ಶುರುವಾಯಿತು. ಇದ್ದಕ್ಕಿದ್ದಂತೆ ವಾರಾನ್ನದ ಮಿತ್ರರ ಸಂಖ್ಯೆ ಬೆಳೆಯುತ್ತಾ ಹೋಯಿತು!

ಎಲ್ಲ ಒಳ್ಳೆಯದರ ಜೊತೆ ಜೊತೆಗೇ ಕೆಲವು ಕೆಟ್ಟ ಫಲಿತಾಂಶಗಳೂ ಇರುತ್ತವಂತೆ. ಈ ಮನೆ ಕೊಂಚ ವಿಶಾಲವಾಗಿದ್ದುದು ನಮ್ಮ ಪ್ರಾಣಕ್ಕೇ ಬಂತು. ಯಾವಾಗ ನೋಡಿದರೂ ಒಂದಿಬ್ಬರು, ಕೆಲವೊಮ್ಮೆ ಮೂರು ನಾಲ್ಕು ಜನ, ಕೆಲಸ ಹುಡುಕುವ ನೆವದಲ್ಲಿ ಇತರರ ಮನೆಯಲ್ಲಿ ಝಾಂಡ ಹಾಕುವ ಅಥವಾ ಓದು ಮುಗಿದು ಉಂಡಾಡಿಗಳಂತೆ ಕಾಲಹರಣ ಮಾಡುತ್ತಿರುವ, ನಮ್ಮೂರಿನ ಮತ್ತು ಪರವೂರಿನ ಭಾರತೀಯ ವಿದ್ಯಾರ್ಥಿಗಳ ಕಾಟ ಶುರುವಾಯಿತು. ಅದರಲ್ಲಿ ಕೆಲವರು, ಮದುವೆ ಆದ ದಂಪತಿಗಳ ಒಬ್ಬಂಟಿ ಗೆಳೆಯರು. ಅವರನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಇಷ್ಟ ಪಡದೇ ತಮ್ಮ ಅಪಾರ್ಟ್‍ಮೆಂಟಿನಲ್ಲಿ ಜಾಗ ಕಮ್ಮಿ ಎಂಬ ಕಾರಣಕ್ಕಾಗಿ ಇತರರಿಂದ ಜಾರಿಸಲ್ಪಟ್ಟ ಅನಾಹ್ವಾನಿತ ಅತಿಥಿಗಳೂ ಇರುತ್ತಿದ್ದರು. ಹೀಗೆ ಉಂಡಾಡಿಗಳು ಬಂದು ಝಾಂಡಾ ಊರಲು ಶುರುಮಾಡಿದ್ದಷ್ಟೇ ಅಲ್ಲ, ಅವರಿಂದ ನಾವು ಬಚ್ಚಲಿಗೆ ಕಾಯಬೇಕಾದ ಪರಿಸ್ಥಿತಿ ಬಂತು. (ಇದೂ ಕೂಡ ಐ.ಐ.ಟಿ ಕನೆಕ್ಷನ್ನೇ ಎಂಬುದನ್ನು ವಿಷಾದದೊಂದಿಗೆ ತಿಳಿಸಬೇಕಾಗಿದೆ.) ಇಂಥ ವ್ಯವಸ್ಥೆ ನಮ್ಮ ಓದಿಗೆ ಅಡ್ಡಿಬರುವಷ್ಟರ ಮಟ್ಟಿಗೆ ಮುಂದುವರೆಯಿತು.

ಬೀಡೂ ಬೇಡ ಗೂಡೂ ಬೇಡ ಜೋಡಿಯಾಗೋಣ!

ಆ ಕೂಡಲೇ, ನಾನು ಮತ್ತು ನನ್ನ ಕೊಠಡಿ-ಸಂಗಾತಿ, ಅದೇ ಮಿತ್ರನ-ಮಿತ್ರ ಒಂದು ನಿರ್ಧಾರಕ್ಕೆ ಬಂದೆವು. ನಾವಿಬ್ಬರೂ ಆದಷ್ಟು ಬೇಗ ಮದುವೆ ಆಗತಕ್ಕದ್ದು. (ಅಂದರೆ ನಮ್ಮಿಬ್ಬರಿಗೇ ಒಬ್ಬರನ್ನು ಮತ್ತೊಬ್ಬರಿಗೆ ಕೊಟ್ಟು ಮದುವೆ ಎಂಬ ಅಪಾರ್ಥ ಮಾಡಿಬಿಡಬೇಡಿ, ಸಧ್ಯ! ಅವ ಒಂದು ಹುಡುಗಿಯನ್ನು, ನಾನು ಮತ್ತೊಂದು ಹುಡುಗಿಯನ್ನು ಮದುವೆ ಆಗುವುದು ಎಂಬರ್ಥದಲ್ಲಿ ನಾನು ಹೇಳಿದ್ದು.) ಯಾರ್ಯಾರನ್ನೋ ಸಾಕುವ ಬದಲು ಹೆಂಡಂದಿರನ್ನೇ ಏಕೆ ಸಾಕಬಾರದು? ಹೆಂಡತಿಯಾದರೋ ಜೊತೆಗಾರಳು, ಒಳ್ಳೇ ಅಡುಗೆ ಮಾಡಿ ಬಡಿಸಲೂ ಬಹುದು, ಅವಳಿಗೆ ಅಡುಗೆ ಬಾರದಿದ್ದರೆ, ನಾವೇ ಕಲಿಸಬಹುದು. ಹೆಂಡತಿಯೊಬ್ಬಳು ಜೊತೆಯೊಳಗಿದ್ದರೆ---ಎಂದು ಮನಸ್ಸಿನಲ್ಲೇ ಹಾಡಿಕೊಳ್ಳುತ್ತ, ಬಾಳಗೆಳತಿಯೊಬ್ಬಳು ಕಷ್ಟ ಸುಖಕ್ಕೆ ಭಾಗಿಯಾಗುತ್ತಾಳೆ ಮುಂತಾಗಿ ಯೋಚಿಸಿ ಇಬ್ಬರೂ ದಿಢೀರ್ ಎಂದು ಮದುವೆ ಆದೆವು (ಅದೇ, ಬೇರೆ ಬೇರೆ ಹುಡುಗಿಯರನ್ನು). ನಾನು ಭಾರತಕ್ಕೆ ಹೋಗಿ ಮಾಡಿದ ಕೆಲಸವನ್ನು ಅವ ಇಲ್ಲೇ ಇದ್ದುಕೊಂಡು ಸಾಧಿಸಿದ.

ಹಾಗಾದರೆ, ನಾವೀಗ ಇರುವ ಮನೆ ಯಾರಿಗೆ ಎಂಬ ಪ್ರಶ್ನೆ ಬಂತು. ಯಾರ ಹೆಂಡತಿ ಮೊದಲು ಪಿಟ್ಸ್‍ಬರ್ಗಿಗೆ ಬರುತ್ತಾಳೋ ಅವರಿಗೆ ಈ ಮನೆ ಎಂದು ನಿರ್ಧಾರವಾಯಿತು. ಆ ಸಂದರ್ಭದಲ್ಲಿ ನನ್ನ ಮಿತ್ರನ-ಮಿತ್ರನ ಹೆಂಡತಿ ಬೇರೆ ಊರಿನಲ್ಲಿ ಪಿ.ಎಚ್.ಡಿ ಮಾಡುತ್ತಿದ್ದುದರಿಂದ ಅವಳು ನನ್ನ ಮಡದಿಗಿಂತ ಮುಂಚೆ ಬರುವುದು ಸಾಧ್ಯವಿರಲಿಲ್ಲ ಎಂಬ ಮಾತು ನನಗೆ ಮೊದಲೇ ಗೊತ್ತಿತ್ತು. ನನ್ನ ಮಡದಿ ಬಂದೇ ಬಂದಳು, ನನಗೇ ಮನೆ ಸಿಕ್ಕಿಯೂಬಿಟ್ಟಿತು, ನಾನು ಸಂಸಾರಂದಿಗನಾಗಿಬಿಟ್ಟೆ.

ಇದು, ನಾನು ನಾಡು ಬಿಟ್ಟುಬಂದು ಈ ನಾಡಿನಲ್ಲಿ ಮೊದಲು (ತಾತ್ಕಾಲಿಕವಾಗಿ) ಭೂತ್ ಬಂಗಲಾದಲ್ಲಿ ಬೀಡು ಬಿಟ್ಟು, ಅಲ್ಲಿಂದ ಮತ್ತೊಂದು ಗೂಡು ಸೇರಿ, ಆ ಗೂಡಿನಿಂದ ಮಾಡು ಸೇರಿ ಮದುವೆಯಾಗಿ ಹೆಂಡತಿಯೊಂದಿಗೆ ಜೋಡಿಯಾಗಿ ಲಿವ್ಡ್ ಹ್ಯಾಪ್ಪಿಲಿ ಎವರ್ ಆಫ್ಟರ್ ಮಾಡಿದ ಕಥೆ. ಮುಂದಿನ ಕಥೆ ಇನ್ಯಾವಾಗಲಾದರೋ ಹೇಳೋಣ. ನಾನಿನ್ನು ಬರಲಾ?

***

ಈ ನನ್ನ ಆಗಸ್ಟ್ ಫ್ಲ್ಯಾಷ್ ಬ್ಯಾಕಿನಿಂದ ನಿಮಗೊಂದಿಷ್ಟು ಖುಷಿ ಸಿಕ್ಕಿರಬಹುದೆಂದು ನಂಬುತ್ತಾ ವಿರಮಿಸುವೆ ಮುಂದಿನ ಕಂತಿನವರೆಗೆ. (ಇನ್ನೊಂದು -- ಆಹ್ವಾನಿತ -- ಪ್ರಬಂಧವನ್ನು ಮುಂದೆ ಹಂಚಿಕೊಳ್ಳುವೆ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more