ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಡು ಗೂಡು ಮಾಡು

By Staff
|
Google Oneindia Kannada News


ಎಲ್ಲವೂ ಒಂದೊಂದು ಕಾಲಘಟ್ಟ. ಬದುಕಿನ ಬಂಡಿ ಕ್ರಮಿಸುವ ಹಾದಿ ಸುದೀರ್ಘ. ತೊಂದರೆ ಮತ್ತು ಪೇಚಿಗೆ ಕಾರಣವಾಗಿದ್ದ ಅಂದಿನ ಕ್ಷಣಗಳನ್ನು ಇಂದು ನೆನೆದರೆ, ನಗು ಉಕ್ಕುತ್ತದೆ. ಕಾಣದ ದೇಶಕ್ಕೆ ಹೋಗಿ ಪರದಾಡಿದ್ದು, ನೆಲೆನಿಂತದ್ದು, ತಮ್ಮದೇ ಗೂಡು ಕಟ್ಟಿಕೊಂಡ ಬಗೆಯನ್ನು ಸ್ವಾರಸ್ಯಕರವಾಗಿ ಅಂಕಣಕಾರರು ಇಲ್ಲಿ ನೆನೆದಿದ್ದಾರೆ.



The story of my journey to my nestಆಗಸ್ಟ್ ತಿಂಗಳು ಬಂದೊಡನೆಯೇ ನನಗೆ ಫ್ಲ್ಯಾಷ್‍ಬ್ಯಾಕ್ ಶುರುವಾಗುತ್ತದೆ. ಕಾರಣ, ನಾನು ಹುಟ್ಟಿದ್ದು ಆಗಸ್ಟಿನಲ್ಲಿ, ದೇಶ ಬಿಟ್ಟಿದ್ದು ಆಗಸ್ಟಿನಲ್ಲಿ, ಅಮೇರಿಕದ ಜೀವನ ಪ್ರಾರಂಭವಾಗಿದ್ದು, ಮದುವೆ ಆಗಿದ್ದು ಕೂಡ ಆಗಸ್ಟಿನಲ್ಲೆ. ಅದರಲ್ಲೂ, ಆಗಸ್ಟ್ ಹದಿನೈದು ಭಾರತವೆಲ್ಲ ಸ್ವಾತಂತ್ಯದಿನವನ್ನು ಆಚರಿಸುವಂದು ನಾನು ಮದುವೆ ಆಗಿ (ಸ್ವಾತಂತ್ರ್ಯ ಕಳೆದುಕೊಂಡ) ದಿನ! ಇವೆಲ್ಲ ಕಾರಣಗಳಿಂದ ಆಗಸ್ಟ್ ನನಗೆ ಮುಖ್ಯವಾದ ತಿಂಗಳು.

ಕಳೆದ ಮೇ 19,20ರಂದು ಶಿಕಾಗೋ ನಗರದಲ್ಲಿ ಕನ್ನಡ ಸಾಹಿತ್ಯರಂಗ ಏರ್ಪಡಿದ್ದ ಸಮ್ಮೇಳನದ ಬಗ್ಗೆ ಹಲವು ಓದುಗರಿಗೆ ಈಗಾಗಲೇ ಸಾಕಷ್ಟು ಮಾಹಿತಿ ಇದೆ. ಆ ಸಮ್ಮೇಳನದಲ್ಲಿ ಹಾಸ್ಯರಸಕ್ಕೇ ಪ್ರಾಧಾನ್ಯಕೊಟ್ಟು ಆ ಸಂದರ್ಭಕ್ಕಾಗಿ ಪ್ರಕಟಿಸಿದ ಪುಸ್ತಕ "ನಗೆಗನ್ನಡಂ ಗೆಲ್ಗೆ"ನಲ್ಲಿ ಅನೇಕ ಹಾಸ್ಯಲೇಖನಗಳಿವೆ (ಅಭಿನವ ಪ್ರಕಾಶನ, ಬೆಂಗಳೂರು). ಆ ಗ್ರಂಥದ ಸಂಪಾದಕರಲ್ಲಿ ನಾನೂ ಒಬ್ಬನಾಗಿದ್ದೆ. ಗ್ರಂಥದಲ್ಲಿ ಒಂದು ಆಹ್ವಾನಿತ ಬರಹವೂ ಸೇರಿದಂತೆ, ನನ್ನ ಎರಡು ಲೇಖನಗಳು ಪ್ರಕಟವಾಗಿವೆ. ಅವುಗಳಲ್ಲಿ ಒಂದು ಲೇಖನ ಹುಟ್ಟಿದ್ದು ಆಗಸ್ಟ್ ತಿಂಗಳಿನ ಫ್ಲ್ಯಾಷ್‍ಬ್ಯಾಕಿನಿಂದಲೇ.

ನಾನು ಈ ದೇಶಕ್ಕೆ ಕಾಲಿಟ್ಟಾಗಿನ, ಪಿಟ್ಸ್ ಬರ್ಗ್ ನಗರದಲ್ಲಿ ವಿದ್ಯಾರ್ಥಿಯಾಗಿ ಕಳೆದ ದಿನಗಳ ಫ್ಯ್ಲ್ಯಾಷ್‍ಬ್ಯಾಕನ್ನು ಉಪಯೋಗಿಸಿಕೊಂಡು ಬರೆದ ಲಘುಪ್ರಬಂಧವೇ "ಬೀಡು ಗೂಡು ಮಾಡು," ಇದೋ ಓದಿ.

ನಾಡಿನಿಂದ ನಾಡಿಗೆ

ಮುಂಬೈನಿಂದ ಹೊರಟು, ಆಂಸ್ಟರ್ ಡ್ಯಾಂ, ನಗರವನ್ನು ಹಾದು ನ್ಯೂಯಾರ್ಕಿನಲ್ಲಿ ಇಳಿದಾಗ ನನ್ನ ಸೂಟ್‍ಕೇಸ್ ಇನ್ನೂ ಬಂದು ತಲುಪಿಲ್ಲವೆಂದು ತಿಳಿದು ಪೆಚ್ಚಾಯಿತು. ಇಮ್ಮಿಗ್ರೇಷನ್ ದಾಟಿ ವಿಮಾನ ಬದಲಿಸಿ ಪಿಟ್ಸ್‍ಬರ್ಗಿಗೆ ಹೋಗಬೇಕಿತ್ತು. "ಏನಿದು ವಾಸನೆ?" ಎಂದು ಕೇಳಿದ ಇಮ್ಮಿಗ್ರೇಷನ್ ಆಫೀಸರ್. ಮುಂಬೈ ವಿಮಾನನಿಲ್ದಾಣದಲ್ಲಿ ಮಿತ್ರರು ಕತ್ತಿಗೇರಿಸಿದ್ದ ಹೂಮಾಲೆಯನ್ನು ಎಸೆಯಲಾಗದೇ ಕೈಚೀಲದಲ್ಲಿ ತುಂಬಿಟ್ಟುಕೊಂಡಿದ್ದೆ. ಸ್ವಲ್ಪ ಬಾಡಿದ್ದರೂ ಹೂವಿನ ವಾಸನೆ ಇನ್ನೂ ಘಂ ಎನ್ನುತ್ತಿತ್ತು. ತೆಗೆದು ಬಿಸಾಡು, ಇದನ್ನು ಹೇಗೆ ಜೊತೆಯಲ್ಲಿ ತರಲು ಬಿಟ್ಟರು ಎಂದು ಗೊಣಗಿದ. ’ಎಲ್ಲಿ ನಿನ್ನ ಲಗೇಜು’ ಎಂದು ಕಸ್ಟಮ್ ಆಫೀಸರ್ ಕೇಳಿದ, ’ಇನ್ನೂ ಬಂದಿಲ್ಲ’ವೆಂದೆ.

ಕೈಯಲ್ಲಿ ಎದೆಯ ಎಕ್ಸ್‍ರೇ ಮತ್ತು ಹೆಗಲಮೇಲೊಂದು ತೂಗುಚೀಲವನ್ನುಳಿದು ಬೇರೇನೂ ಇಲ್ಲ. ಮುಂದೆಲ್ಲಿಗೆ ಪಯಣ ಎಂದು ವಿಚಾರಿಸಿ ನನ್ನನ್ನು ಕಳಿಸಿಕೊಟ್ಟ. ಅಂದಕಾಲತ್ತಿಲೆ, ಮೊದಲಬಾರಿ ದೇಶ ಬಿಟ್ಟು ಉನ್ನತ ಶಿಕ್ಷಣಕ್ಕಾಗಿ ಪರದೇಶಯಾನ ಮಾಡುವ ಎಲ್ಲರಂತೆ ನಾನೂ ಸೂಟು-ಬೂಟು ಧರಿಸಿದ್ದೆ. ವಿಮಾನಕ್ಕೆ ತಡವಾಗಿತ್ತಾದುದರಿಂದ ನನ್ನ ಗೇಟಿಗೆ ಓಡಿದೆ. ಅಲ್ಲಿಂದ ಪಿಟ್ಸ್‍ಬರ್ಗು ಒಂದೇ ಘಂಟೆ. ಅಲ್ಲಿ, ನನ್ನ ಮಿತ್ರನ-ಮಿತ್ರನ-ಮಿತ್ರ ಒಬ್ಬ (ಇದು ನಮ್ಮ ಐ.ಐ.ಟಿ ಕನೆಕ್ಷನ್ ಎಂದು ಬೇರೆ ಹೇಳಬೇಕಿಲ್ಲವಷ್ಟೆ!) ಬಂದು ನನಗಾಗಿ ಕಾದು ಕಾದು ಸುಸ್ತಾಗಿ ಹಿಂದಿರುಗಿದ್ದ. ಲಗೇಜಿನ ಬಗ್ಗೆ ವಿಚಾರಿಸಿದ್ದಕ್ಕೆ ಟಿಡಬ್ಲ್ಯುಎ ವಿಮಾನ ಸಂಸ್ಥೆಯವ ಹೇಳಿದ, "ನಿನ್ನ ವಿಳಾಸ ಕೊಟ್ಟು ಹೋಗು, ಲಗೇಜು ಬಂದೊಡನೆ ತಲುಪಿಸುತ್ತೇವೆ" ಎಂದು. ಅವನ ಮಾತನ್ನು ನಂಬಲು ನಾನು ತಯಾರಿರಲಿಲ್ಲ. ಆ ಸೂಟ್‍ಕೇಸಿನಲ್ಲಿ ಒಂದು ಎಕ್ಸ್‍ಟ್ರ ಪೇರ್ ಅಂಬ್ಯಾಸಿಡರ್ ಬ್ಯಾಟಾ ಷೂಗಳಿವೆ. ಹೇಗೆತಾನೇ ಬಿಟ್ಟುಹೋಗಲಿ? ಬೇರೆ ವಿಧಿ ಇರಲಿಲ್ಲ.

ಸರಿ, ವಿಮಾನ ನಿಲ್ದಾಣದಿಂದ ಓಕ್ಲೆಂಡ್ ತಲುಪುವುದು ಹೇಗೆ? ಅತ್ತಿತ್ತ ನೋಡುತ್ತ ಅಡ್ಡಾಡುತ್ತಿದ್ದಾಗ, ಯಾರನ್ನೋ ಕಳಿಸಿಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ದೇಸೀ ಭಾಯಿ ಒಬ್ಬನಿಗೆ ಹಲ್ಲುಗಿರುದು ದೊಗ್ಗು ಸಲಾಮು ಹೊಡೆದು ಓಕ್ಲೆಂಡಿನಲ್ಲಿ ಮಿತ್ರನ ಮನೆಗೆ ಕರೆದೊಯ್ಯುವಿರಾ ಎಂದು ಕೇಳಿಕೊಂಡೆ. ಆತ ಒಳ್ಳೆಯವನಂತೆ ಕಂಡ. ನನ್ನ ಹೆಸರು, ಕುಲ, ಗೋತ್ರ ಎಲ್ಲ ವಿಚಾರಿಸಿಕೊಂಡಮೇಲೆ, ಆತ ಕೂಡ ನಾನು ಹೋಗಬೇಕಾಗಿದ್ದ ಸ್ಥಳಕ್ಕೇ ಹೋಗುತ್ತಿರುವುದಾಗಿ ತಿಳಿಸಿ ಮೊದಲು ತನ್ನ ಮನೆಗೆ ಕರೆದೊಯ್ದ. ಅವ ಹೈದರಾಬಾದಿನವ, ಬೆಂಗಳೂರಿನ ಟಾಟಾ ಇನ್ಸ್‍ಟಿಟ್ಯೂಟಿನಲ್ಲಿ ಓದಿದ್ದನಂತೆ. ಊಟ ಆಗಿದೆಯೇ ಎಂದು ವಿಚಾರಿಸಿದ, ಅಡ್ಡಡ್ಡಕ್ಕೆ ಅಲ್ಲಾಡಿಸುತ್ತ ತಲೆ ತಗ್ಗಿಸಿದೆ. ಮಿಕ್ಕಿದ್ದ ತಂಗಳನ್ನಕ್ಕೆ ಮೊಸರನ್ನು (ಅದರ ಹೆಸರು ಯೋಗರ್ಟ್ ಎಂದು ನಂತರ ತಿಳಿಯಿತು) ಸೇರಿಸಿ ಕಲಸಿ ಒಂದಿಷ್ಟು ಬೆಡೇಕರ್ ನಿಂಬೇ ಉಪ್ಪಿನಕಾಯಿನ ಜೊತೆ ಸೀರಿಯಲ್ ಬೌಲಿನಲ್ಲಿ ಬಡಿಸಿಕೊಟ್ಟ.

ಮುಂಬೈ ಬಿಟ್ಟು ಮೂರು ದಿನಗಳೇ ಆಗಿತ್ತು, ಆಗಸ್ಟಿನ ಬೇಸಿಗೆ ದಿನದಲ್ಲಿ ಆ ತಂಗಳನ್ನ ಮತ್ತು ಮೊಸರು ನನಗೆ ಸ್ವರ್ಗ ಸುಖವನ್ನೇ ಕೊಟ್ಟಿತು. ಸರಿ, ನನ್ನ ಅಪರಚಿತ ಮಿತ್ರ ಎಷ್ಟೋ ಯುಗಗಳ ನೆಂಟು ಎನಿಸುವಷ್ಟು ಹತ್ತಿರ ಎನಿಸಿಬಿಟ್ಟ. ನನ್ನನ್ನು ನನ್ನ ಮಿತ್ರನ-ಮಿತ್ರನ-ಮಿತ್ರನ ಮನೆಗೆ ಒಯ್ದು ನನಗೆ ವಿದಾಯ ಹೇಳಿದ. ಮಧ್ಯರಾತ್ರಿಯಲ್ಲಿ ನನ್ನ ಲಗೇಜು ನನಗೆ ಬಂದು ತಲುಪಿದಾಗ ನಾನು ದಂಗಾಗಿದ್ದೆ! ಎಲಾ ದೇಶವೇ, ಪರವಾಗಿಲ್ಲ ಎನ್ನಿಸಿತು. ಸದ್ಯ, ನಾಳೆ ಬಟ್ಟೆ ಬದಲಾಯಿಸಿಕೊಳ್ಳಬಹುದು ಎನ್ನಿಸಿ ನಿಟ್ಟುಸಿರು ಬಿಟ್ಟೆ.

ಸರಿ ತರಗತಿ ಶುರುವಾಗುವುದಕ್ಕೆ ಇನ್ನೂ ಎರಡು-ಮೂರು ದಿನಗಳಿದ್ದವು. ಅಷ್ಟರಲ್ಲಿ ಇರಲು ಒಂದು ಜಾಗ ಹುಡುಕಬೇಕಿತ್ತು. ವಿಶ್ವವಿದ್ಯಾನಿಲಯದ ಫಾರಿನ್ ಸ್ಟೂಡೆಂಟ್ ಆಫೀಸಿನವರು ಕಳಿಸಿದ್ದ ಎಲ್ಲಾ ವಿಳಾಸಗಳನ್ನೂ ವೀಕ್ಷಿಸಿ ಯಾವ್ಯಾವುದು ಇಂಜಿನಿಯರಿಂಗ್ ಕಾಲೇಜಿಗೆ ಹತ್ತಿರವಾಗುತ್ತವೋ ಅವುಗಳನ್ನು ನನ್ನ ಮಿತ್ರನ-ಮಿತ್ರನ-ಮಿತ್ರ ಗುರುತು ಹಾಕಿಕೊಟ್ಟಿದ್ದ. ಆ ವಿಳಾಸಗಳ ಜೊತೆಗಿದ್ದ ಟೆಲಿಫೋನ್ ನಂಬರನ್ನು ಡಯಲಿಸಿ ಡಯಲಿಸಿ ತೋರ್ಬೆರ್ಳು ಊದಿಕೊಂಡಿತು. (ಗಿರ್ ಗಿರ್ ಎಂದು ತಿರುಗಿಸುವ ಟೆಲಿಫೋನುಗಳ ಕಾಲವೂ ಒಂದಿತ್ತು ಎಂದರೆ ಈಗಿನ ಮಕ್ಕಳು ನಂಬುತ್ತಾರೋ ಇಲ್ಲವೋ, ನಾಕಾಣೆ.) ಹೆಚ್ಚು ಕಮ್ಮಿ ಎಲ್ಲರದೂ ಒಂದೇ ಉತ್ತರ -- "ಮನೆ ಖಾಲಿಯಿಲ್ಲ." ಇನ್ನು ಕೆಲವರೊಂದಿಗೆ ನಾನು ಮಾತನಾಡುವಾಗ ಅವರೂ ಎತ್ತುಚ್ಚೆ ಹುಯ್ದಂತೆ ಮಾತಾಡುತ್ತಲೇ ಇದ್ದರು.

ನನ್ನ ಮಾತಿಗೆ ಅವಕಾಶವನ್ನೇ ಕೊಡದೇ ಮುಂದುವರೆಸುತ್ತಿದ್ದ ಆ ಪಕ್ಕದ ಧ್ವನಿ, ಸಜೀವವಲ್ಲ, ರೆಕಾರ್ಡೆಡ್ ಮೆಸೇಜ್ ಎಂಬುದನ್ನು ತಿಳಿಯಲು ಸಾಕಷ್ಟು ಸಮಯ ಹಿಡಿಯಿತು. ನನ್ನ ಮಿತ್ರನ-ಮಿತ್ರನ- (ಸುಮ್ಮನೆ ಯಾಕೆ ಬೋರು, ಇನ್ನು ಮೇಲೆ ಮಿತ್ರ ಎಂದು ಹೇಳಿದರೆ, ನೀವೇ ಅದನ್ನು ಮಿತ್ರನ-ಮಿತ್ರನ-ಮಿತ್ರ ಎಂದು ತಿಳಿದುಕೊಳ್ಳಿ) ನಾನು ರೆಕಾರ್ಡೆಡ್ ಮೆಸೇಜಿನೊಂದಿಗೆ ಮಾತಾಡುತ್ತಿದ್ದೇನೆಂದು ತಿಳಿದಮೇಲೆ ಚೆನ್ನಾಗಿ ನಕ್ಕ. ನನಗೆ ಪೆಚ್ಚಾಗುವಷ್ಟು ನಕ್ಕ. (ಆ ಮರಾಠೀ ಬಡ್ಡೀಮಗ, ಈ ದೇಶಕ್ಕೆ ನನಗಿಂತ ಒಂದು ವರ್ಷ ಮುಂಚೆ ಬಂದಿದ್ದನೆಂಬುದನ್ನು ಬಿಟ್ಟರೆ, ಅವನದೇನೂ ಹೆಚ್ಚುಗಾರಿಕೆ ಇರಲಿಲ್ಲ, ಆದರೆ ನನಗೆ ಅವನ ಸಹಾಯ ಅಗತ್ಯವಾಗಿತ್ತಾದ್ದರಿಂದ ಸಹಿಸಿಕೊಳ್ಳದೇ ಬೇರೆ ಗತಿಯಿರಲಿಲ್ಲ.) ಕೊನೆಗೂ ಅವನು ರಹಸ್ಯವನ್ನು ಬಿಚ್ಚಿದ.

ಎಲೈ ಮಿತ್ರನೇ (ಮಿತ್ರನ-ಮಿತ್ರನ-ಮಿತ್ರನೇ ಎಂದರ್ಥ ಮಾಡಿಕೊಂಡಿರಷ್ಟೇ?) ಕೇಳುವಂಥವನಾಗು. ಹಿಂದೆ ಶೌನಕ ಮಹರ್ಷಿಗಳು ನೈಮಿಶಾರಣ್ಯದಲ್ಲೋ ಅಥವಾ ದಂಡಕಾರಣ್ಯದಲ್ಲೋ, ಸರಿಯಾಗಿ ನೆನಪಿಲ್ಲ, ಇರಲಿ, ಜನಮೇಜಯನಿಗೆ ತಿಳಿಸಿದ ರಹಸ್ಯವೊಂದನ್ನು ಹೇಳುವೆನು.

ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಪಿಟ್ಸ್‍ಬರ್ಗಿಗೆ ಬಂದು, ಅಂದರೆ ವಿಶ್ವವಿದ್ಯಾಲಯದ ಬೇಸಿಗೆ ರಜಾ ಕಳೆದು ಫಾಲ್ ಸೆಮೆಸ್ಟರಿಗೆ ತೆರೆಯುವ ಒಂದು ವಾರ ಮುಂಚೆ ಬಂದು ಇರಲು ಒಂದು ಮನೆ ಸಿಕ್ಕಬೇಕು ಎಂದು ಬಯಸುವ ನಿನ್ನಂಥ ಪರದೇಶಿಗಳಿಗೋಸುಗವೇ ಭಗವಂತನು ಒಂದು ’ಬಂಗಲೆ’ಯನ್ನು ಸೃಷ್ಟಿಸಿದ್ದಾನೆ. ಆ ಬಂಗಲೆಯ ವೈಶಿಷ್ಟ್ಯವೇನೆಂದರೆ, ಅದು ಪುಷ್ಪಕವಿಮಾನದಂತೆ, ಎಷ್ಟು ಜನರು ಬಂದರೂ ಮತ್ತಷ್ಟು ಜನರಿಗೆ ಅಲ್ಲಿ ಸ್ಥಳಾವಕಾಶವಿದ್ದೇ ಇರುತ್ತದೆ. ಭಾರತ, ಚೈನಾ ಮುಂತಾದ ಬಡರಾಷ್ಟ್ರಗಳಿಂದ ತಡವಾಗಿ ಬರುವ ನಿನ್ನಂಥ (ಈ ರೀತಿ ’ನಿನ್ನಂಥ’ ಎನ್ನುವಾಗ ಅವನ ಅಟ್ಟಹಾಸದ ಶೈಲಿಯಿಂದ ನನಗೆ ವಿಪರೀತ ಕೋಪ ಬರುತ್ತಿತ್ತು, ಆದರೂ ವಿಧಿಯಿಲ್ಲ, ಮೊದಲೇ ಹೇಳಿದಂತೆ ಅವನು ನನಗಿಂತ ಒಂದುವರ್ಷ ಮೊದಲೇ ಬಂದಿದ್ದ) ಪರದೇಶಿಗಳಿಗಾಗಿಯೇ ಈ ಬಂಗಲೆ ಇರುವುದು. ಅಲ್ಲಿ ಹೋಗು, ನಿನಗೆ ಅಪಾರ್ಟ್‍ಮೆಂಟ್ ಸಿಕ್ಕಿಯೇ ಸಿಕ್ಕುತ್ತದೆ. ಬೇಕಾದರೆ, ನಾಳೆ ಬೆಳಿಗ್ಗೆ ನನ್ನ ಕಾರಿನಲ್ಲಿ ನಿನ್ನ ಸಾಮಾನನ್ನು ನಾನೇ ಅಲ್ಲಿಗೆ ಸಾಗಿಸಿಕೊಡುತ್ತೇನೆ, ಮುಂಗಡವಾಗಿ ಕರೆಯುವ ಗೋಜಿಗೆ ಹೋಗಬೇಡ. ನೇರ ಹೋಗೋಣ. ಆ ಲ್ಯಾಂಡ್ ಲೇಡಿ ನನಗೆ ಚೆನ್ನಾಗಿ ಗೊತ್ತು.ಯೋಚಿಸಬೇಡ ಎಂದು ಆಶ್ವಾಸನೆ ಇತ್ತಮೇಲೆ, ನಾನು ಮಲಗಿ ಸುಖವಾಗಿ ನಿದ್ರಿಸಿದೆ.

ಮಾರನೆಯ ದಿನ ನಾನು ಏಳುವ ಹೊತ್ತಿಗೆ ನನ್ನ ಮಿತ್ರನ-ಮಿತ್--ಕ್ಷಮಿಸಿ -- ನನ್ನ ಮಿತ್ರ, ಆಗಲೇ ಎದ್ದು ಎಲ್ಲೋ ಮಾಯವಾಗಿದ್ದ. ಸ್ವಲ್ಪ ಹೆಚ್ಚು ಕಮ್ಮಿ ಕ್ಯಾಂಪಸ್ ಸುತ್ತಮುತ್ತಲ ಪ್ರದೇಶ ನನಗೆ ಗೊತ್ತಾಗಿತ್ತು, ಸರಿ ನಾನೇ ಹೋಗಿ ವಿಚಾರಿಸೋಣವೆಂದು ಸ್ನಾನಮಾಡಿ, ಸೀರಿಯಲ್ ಭಕ್ಷಿಸಿ ಮನೆ ಮುಂದೆ ಇದ್ದ ಬಸ್ ಸ್ಟಾಪಿನಲ್ಲಿ ನಿಂತೆ. ಎರಡು ಮೂರು ಬಸ್ಸುಗಳು ಬಂದರೂ ಒಂದೂ ನಾನು ಹೋಗಬೇಕಾಗಿದ್ದ ಕಡೆಗೆ ಹೋಗುವ ಬಸ್ ಆಗಿರಲಿಲ್ಲ. ಅರೆ, ಇದೇನು? ಓಕ್ಲೆಂಡ್ ಕಡೆ ಹೋಗುವ ಬಸ್ಸುಗಳೆಲ್ಲ ನನ್ನ ಸ್ಟಾಪಿನ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿವೆ? ತಕ್ಷಣ ತಲೆಯಲ್ಲಿ ಮಿಂಚಿನ ಸಂಚಾರವಾಯಿತು. ನಾನಿರುವುದು ಅಮೆರಿಕದಲ್ಲಿ, ವಾಹನಗಳು ಸಂಚರಿಸುವುದು ರಸ್ತೆಯ ಬಲಗಡೆಯಲ್ಲಿ. ನಾನೆಷ್ಟು ದಡ್ದನೆಂದರೆ, ಮೂರು ಬಸ್ಸುಗಳನ್ನು ಮಿಸ್ ಮಾಡಿಕೊಂಡ ಕತೆಯನ್ನು ನನ್ನ ಮರಾಠೀ ಮಿತ್ರನಿಗೆ ಹೇಳಿ ಮತ್ತೆ ಅವನ ಗೇಲಿಗೆ ಒಳಗಾದೆ. ಏನು ಮಾಡಲಿ, ಅವನು ನನಗಿಂತ ಒಂದು ವರ್ಷ ಮುಂಚೆ ಬಂದುಬಿಟ್ಟಿದ್ದ.

ನಾಡಿನಿಂದ ಬೀಡಿಗೆ

ಸರಿ, ನನ್ನ ಮಿತ್ರ ಹೇಳಿದ ಬಂಗಲೆ ನಿಜಕ್ಕೂ ಬೃಹದಾಕಾರದ ಬಂಗಲೆ. ಅದಕ್ಕೇ ಅದರಲ್ಲಿ ಅಷ್ಟೊಂದು ಅಪಾರ್ಟ್‍ಮೆಂಟುಗಳು. ರೆಂಟಲ್ ಆಫೀಸಿನಲ್ಲಿ ಒಂದು ಮುದುಕಿ ಕೂತಿತ್ತು. ನಾನು ಹೋದೊಡನೆಯೇ ಒಂದು ಅಪ್ಲಿಕೇಷನ್ ಫಾರಮ್ಮನ್ನು ಹೊರತೆಗೆದು "ಒಂದು ರೂಮೋ, ಎರಡು ರೂಮೋ" ಎಂದು ಕೇಳುತ್ತ "ಭರ್ತಿಮಾಡು" ಎಂದಿತು. ಅಲ್ಲಿ ನೋಡಿದರೆ, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಬೇರೆ ಬೇರೆ ದೇಶಗಳ ಅನೇಕ ವಿದ್ಯಾರ್ಥಿಗಳು ಅರ್ಜಿ ತುಂಬುತ್ತಾ ಕೂತಿದ್ದರು. ಆಗಸ್ಟ್ ಕೊನೆಯವಾರದಲ್ಲಿ ಬಂದಿಳಿಯುವ ಹಲವಾರು ಪರದೇಶಿಗಳನ್ನು ಕಂಡು ನನ್ನ ಮನಸ್ಸಿನಲ್ಲಿ ಕೊಂಚ ಧೈರ್ಯಬಂತು. ಮಿಸಸ್ ಮಿಲ್ಲರ್ ಹೇಳಿದ ಪ್ರಕಾರ, ಒಬ್ಬರೇ ಇರುವಂಥ ’ಎಫಿಷಿಯನ್ಸಿ’ಗಳು ಯಾವುದೂ ಖಾಲಿ ಇರಲಿಲ್ಲ, ಒಂದು ಮತ್ತು ಎರಡು ಬೆಡ್‍ರೂಮುಗಳ ಅಪಾರ್ಟ್‍ಮೆಂಟುಗಳು ಸಾಕಷ್ಟು ಖಾಲಿ ಇದ್ದವು.

ಮಿಸಸ್ ಮಿಲ್ಲರ್ ಒಂದು ಉತ್ತಮ ಸಲಹೆ ಕೊಟ್ಟಳು. "ಹುಡುಗಾ, ಕೇಳಿಲ್ಲಿ, ನಾಳೆ ಪರದೇಶೀ ವಿದ್ಯಾರ್ಥಿಗಳಿಗೆಲ್ಲ ಓರಿಯಂಟೇಷನ್ ಇದೆ (ಯಾವ ಮಾಯದಲ್ಲಿ ಎಲ್ಲ ವಿವರಗಳನ್ನು ಅವಳು ತಿಳಿದಿಕೊಂಡಿದ್ದಳೋ, ದೇವರೇ ಬಲ್ಲ), ಅಲ್ಲಿ ನಿಮ್ಮ ದೇಶದ ಅನೇಕ ವಿದ್ಯಾರ್ಥಿಗಳು ಸಿಕ್ಕುತ್ತಾರೆ. ಅವರಲ್ಲಿ ಯಾರು ಯಾರು ಈ ಬಂಗಲೆಗೆ ಅರ್ಜಿ ತುಂಬಿದ್ದಾರೋ ತಿಳಿದುಕೊ, ಒಬ್ಬ ಅಥವಾ ಇಬ್ಬರು ಜೊತೆಗಾರರನ್ನು ಗೊತ್ತುಮಾಡಿಕೊಂಡು ಇಲ್ಲಿ ಬಾ. ನಿಮಗೆ ಸರಿಹೋಗುವ ಅಪಾರ್ಟ್‍ಮೆಂಟ್ ಒಂದನ್ನು ನಿಮಗಾಗಿ ಕಾದಿರುಸುತ್ತೇನೆ ಎನ್ನುತ್ತ ಹತ್ತಿರ ಬಂದು ಕಿವಿಯಲ್ಲಿ ಏನೋ ಮೆಲ್ಲಗೆ ಉಸುರಿದಳು. "ಕೇಳು, ಹುಡುಗಾ, ಭಾರತೀಯ ವಿದ್ಯಾರ್ಥಿಗಳೆಂದರೆ ನನಗೆ ಬಲು ಇಷ್ಟ, ಅವರಷ್ಟಿಗೆ ಅವರು ಓದಿಕೊಂಡು ಶಾಲೆಗೆ ಹೋಗಿಕೊಂಡಿರುತ್ತಾರೆ, ಕಾಲಕಾಲಕ್ಕೆ ಬಾಡಿಗೆ ತೆರುತ್ತಾರೆ, ಮನೆಯನ್ನು ಕೊಂಚ ಗಲೀಜು ಮಾಡುತ್ತಾರೆ ಅನ್ನುವುದನ್ನು ಬಿಟ್ಟರೆ, ಪಾರ್ಟೀ-ಗೀರ್ಟಿ ಅಂತ ಗಲಾಟೆ ಮಾಡುವುದಿಲ್ಲ. ಆದ್ದರಿಂದ ನಿನಗೇ ಒಂದು ಅಪಾರ್ಟ್‍ಮೆಂಟನ್ನು ಕಾದಿರುಸುತ್ತೇನೆ" ಎಂದು ಗುಟ್ಟಾಗಿ ಹೇಳಿ ಇತರರಿಗೆ ಕೇಳಿತೋ ಇಲ್ಲವೋ ಎಂಬಂತೆ ಅತ್ತಿತ್ತ ನೋಡಿದಳು. (ಆಕೆ ಎಲ್ಲ ದೇಶದವರಿಗೂ ಅದೇ ಮಾತುಗಳನ್ನಾಡುತ್ತಿದ್ದಳು ಎಂಬುದು ನಂತರ ತಿಳಿಯಿತು, ಬಿಡಿ.)

ಮಿಸಸ್ ಮಿಲ್ಲರ್ ಹೇಳಿದ್ದು ನಿಜವಾಯ್ತು, ಓರಿಯೆಂಟೇಷನ್ನಿನಲ್ಲಿ ನನಗಿಬ್ಬರು ಭಾರತೀಯ ವಿದ್ಯಾರ್ಥಿಗಳು ಜೊತೆಗೆ ಸಿಕ್ಕರು, ಅವರಲ್ಲೊಬ್ಬ ಯಥಾಪ್ರಕಾರ ಐ.ಐ.ಟಿ ಕನೆಕ್ಷನ್ನು! ಓರಿಯೆಂಟೇಶನ್ನಿನಲ್ಲಿದ್ದ ಎಲ್ಲ ಪರದೇಶಿಗಳಿಗೂ ಆಗಲೇ ನಮ್ಮ ’ಬಂಗಲೆ’ಯ ಬಗ್ಗೆ ಗೊತ್ತಿದ್ದನ್ನು ಕೇಳಿ ನನಗೆ ಕೊಂಚ ಆಶ್ಚರ್ಯವಾಯಿತು. ಆದರೆ ಅವರೆಲ್ಲ ಒಂದು ಗುಣವಾಚಕವನ್ನು ಉಪಯೋಗಿಸುವುದರ ಮೂಲಕ ಒಂದು ಸಣ್ಣ ಕರೆಕ್ಷನ್ ಮಾಡಿದ್ದರು. ಮಿಸಸ್ ಮಿಲ್ಲರ್ ಲ್ಯಾಂಡ್ ಲೇಡಿಯಾಗಿದ್ದ ಆ ಬೃಹತ್ ಬಂಗಲೆಯನ್ನು ಎಲ್ಲರೂ ’ಭೂತ್‍ಬಂಗ್ಲಾ’ ಎಂಬ ಹೆಸರಿನಿಂದ ಗುರುತಿಸುತ್ತಿದ್ದರು. ನಮ್ಮ ಸೂಟ್‍ಕೇಸುಗಳನ್ನು ಲಿಫ್ಟ್‍ನಲ್ಲಿ ಇಟ್ಟಕೂಡಲೇ ಅರಿವಾಯಿತು, ಆ ಹೆಸರು ಎಷ್ಟು ಅನ್ವರ್ಥನಾಮ ಎಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X