ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಂದರ ಸಾಕು; ಯಾರಿಗೆ ಬೇಕು ಈ ಲೆಕ್ಕ?

By Staff
|
Google Oneindia Kannada News


ಓದುಗ : ಕನ್ನಡ ಭಾಷೆಯಲ್ಲಿರುವ ದಾಸಸಾಹಿತ್ಯದಷ್ಟು ವಿಪುಲವೂ ಶ್ರೀಮಂತವೂ ಆದ ಬರವಣಿಗೆ ಮತ್ತೊಂದು ಭಾಷೆಯಲ್ಲಿ ಕಾಣಸಿಗದು.

ಇದು ನನ್ನ ಮತವೂ ಸಹ.

ಓದುಗ : ಘಂಟೆಗೊಂದೇ ಕೃತಿ ಬರೆದರು ಎಂದು ಹೇಳಲು ಹೇಗೆ ಸಾಧ್ಯ, ದಿನಕ್ಕೆ ಹದಿನೈದೇ ಏಕೆ, ನಲವತ್ತೇಕೆ ಆಗಬಾರದು? ಇತ್ಯಾದಿ.

‘‘ನಲವತ್ತೇ ಏಕೆ, ಎಂಬತ್ತೇಕೆ ಆಗಬಾರದು?’’ ಎಂದು ಮತ್ತೊಬ್ಬರು ಕೇಳಿದರೆ ನೀವೇನು ಜವಾಬು ಕೊಡುವಿರಿ? ಅಂದಾಜು ಮಾಡುವಾಗ ನಮ್ಮ ಮನಸ್ಸಿಗೆ ಸಾಧು ಎನ್ನಿಸುವ ಆಧಾರವನ್ನು ಕಲ್ಪಿಸಿಕೊಳ್ಳಬೇಕಷ್ಟೆ? ಎಲ್ಲರೂ ನನ್ನ ಊಹೆಗಳನ್ನು ಅನುಮೋದಿಸುತ್ತಾರೆಂಬ ಭ್ರಮೆಯಾಗಲೀ ಅನುಮೋದಿಸಲೇಬೇಕೆಂಬ ಹಟವಾಗಲೀ ನನಗಿಲ್ಲ.

ಅಭಿಪ್ರಾಯ ವ್ಯಕ್ತಪಡಿಸುವವರು ಲೇಖನದ ಉದ್ದೇಶ ಮತ್ತು ಅದರ ಚೌಕಟ್ಟನ್ನು ಅರ್ಥಮಾಡಿಕೊಳ್ಳದೇ ವಾದ ಮಾಡಿದರೆ ಪರಸ್ಪರ ಕಾಲಹರಣ ವಾಗುತ್ತದೆ - ಓದುಗಮಹಾಶಯರೊಬ್ಬರು ಉಪಯೋಗಿಸಿದ ಮಾತುಗಳಲ್ಲೇ ಹೇಳುವುದಾದರೆ, TWT(Time Wasting Tactics). ಖಂಡಿತವಾಗಿ ಕಾಲಹರಣ ಮಾಡಲು ನನ್ನ ಬಳಿ ಅಷ್ಟು ಸಮಯವಿಲ್ಲ, ನಿಮ್ಮ ಕಾಲದ ವಿಷಯದಲ್ಲೂ ನನಗೆ ಕಾಳಜಿ ಉಂಟು.

ಓದುಗ : ಸಂಖ್ಯೆಗಿಂತ ಗುಣ ಮುಖ್ಯ

ನಿಸ್ಸಂಶಯವಾಗಿ. ಅದೇ ನನ್ನ ಲೇಖನದ ಸಂದೇಶ.

ಓದುಗ : 475,000 ಎಂಬ ಸಂಖ್ಯೆ ಉತ್ಪ್ರೇಕ್ಷೆಯ ಫಲವಿರಬಹುದೇ?

ಇದ್ದರೂ ಇರಬಹುದು. ದಾಸರ ಪದವೊಂದರಲ್ಲಿ ಹಲವಾರು ಸಂಖ್ಯೆಗಳ ವಿವರಣೆ ಇದೆ. (‘‘ವಾಸುದೇವನ ನಾಮಾವಳಿಯ’’) ಅದರ ಪ್ರಕಾರ, ನಾಲ್ಕು ಲಕ್ಷ, ಎಪ್ಪತ್ತೊಂಭತ್ತು ಸಾವಿರ ವಾಗುತ್ತದೆ. ಇದನ್ನೇ ಆಧಾರವೆಂದು ಪರಿಗಣಿಸಿದರೆ, ಇನ್ನಾವ ವಾದಕ್ಕೂ ಎಡೆಯಿಲ್ಲ. ಚಾರಿತ್ರಿಕ ಆಧಾರಗಳನ್ನು ಒಪ್ಪಿಕೊಳ್ಳುವಾಗ ಕೇವಲ ಭಕ್ತಿಭಾವದಿಂದ ನೋಡಲಾಗದು, ಹಲವಾರು ದೃಷ್ಟಿಗಳಿಂದ ನೋಡಿ ಖಚಿತಪಡಿಸಿಕೊಳ್ಳುವ ಅಗತ್ಯ ಇರುತ್ತದೆ.

ಓದುಗ : ಒಂದು ಕೃತಿಯನ್ನೂ ರಚಿಸಲು ಶಕ್ತಿಯಿಲ್ಲದವರು ಸಂಗೀತ ಪಿತಾಮಹ ಎನ್ನಿಸಿಕೊಳ್ಳುವ ಪುರಂದರದಾಸರು ಬರೆದ ಕೃತಿಗಳ ಸಂಖ್ಯೆಯ ವಿಷಯದಲ್ಲಿ ಅನುಮಾನ ವ್ಯಕ್ತಪಡಿಸಕೂಡದು.

ಒಂದು ಚಲನಚಿತ್ರವನ್ನೂ ತಯಾರಿಸದ ಪ್ರೇಕ್ಷಕ, ಪ್ರಸಿದ್ಧ ನಿರ್ಮಾಪಕನ/ನಿರ್ದೇಶಕನ ಚಲನಚಿತ್ರವನ್ನು ನೋಡಿ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸಕೂಡದು ಎಂದರೆ ನೀವು ಒಪ್ಪುತ್ತೀರಾ?

ಓದುಗ : ಕನ್ನಡ ಚಲನಚಿತ್ರರಂಗದಲ್ಲಿ ದುಡಿದು ಇತ್ತೀಚೆಗೆ ದೈವಾಧೀನರಾದ ಶ್ರೀ ರಾಜಾರಾಂ ಎಂಬುವವರು ಹತ್ತು ಸಾವಿರದಷ್ಟು ಕವನ, ಹನ್ನೆರಡು ಸಾವಿರದಷ್ಟು ವಚನ ರಚಿಸಿದ್ದಾರೆ. ಪಿ.ಬಿ.ಶ್ರೀನಿವಾಸ್‌ ಲಕ್ಷದಷ್ಟು ಕವನಗಳನ್ನು ಬರೆದಿರುವುದಾಗಿ ತಾವೇ ಮೊನ್ನೆ ಹೇಳಿದರು. ಹೀಗಿರುತ್ತ, ಪುರಂದರದಾಸರಂಥ ದೈವಾಂಶಸಂಭೂತರು (ಅವರನ್ನು ನಾರದಮುನಿಯ ಅವತಾರವೆಂದು ಕರೆಯಲಾಗಿದೆ) ಲಕ್ಷಾಂತರ ಕೃತಿಗಳನ್ನು ರಚಿಸಿರಲು ಸಾಧ್ಯವಿಲ್ಲವೇ?

ಆ ದೃಷ್ಟಿಯಿಂದ ಮಾತ್ರ ಅವರನ್ನು ನೋಡಿದಾಗ ಅದು ಖಂಡಿತಾ ಸಾಧ್ಯ ಎನಿಸುತ್ತದೆ. ಆ ದೃಷ್ಟಿಯಿಂದಲೇ ಎಲ್ಲರೂ ನೋಡುತ್ತಾರೆಯೇ, ನೋಡಬೇಕೆ? ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯುಳ್ಳ ಸಂಶೋಧಕರೊಬ್ಬರು ಅವರನ್ನು ದೈವಾಂಶಸಂಭೂತರೆಂದು ಪರಿಗಣಿಸದೇ ಇರಲು ಸಾಧ್ಯವೇ ಇಲ್ಲವೇ? ಉದಾಹರಣೆಗೆ, ಪಾಶ್ಚಾತ್ಯ ತತ್ತ್ವಶಾಸ್ತ್ರಜ್ಞರು ಭಾರತೀಯ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡುವಾಗ ನಮ್ಮ ಆಚಾರ್ಯರುಗಳನ್ನು ನಮ್ಮಹಾಗೆ ಭಕ್ತಿಭಾವದಿಂದ ಓದುವುದಿಲ್ಲ. ಹಾಗೆಂದಮಾತ್ರಕ್ಕೆ ಅವರ ಅಭಿಪ್ರಾಯಗಳಿಗೆ ಬೆಲೆ ಇಲ್ಲ ಎನ್ನಲಾಗುವುದೇ? ನಾವು ಅವರ ಅಭಿಪ್ರಾಯವನ್ನು ಅನುಮಾನಿಸಬಹುದು ಆದರೆ ಅವರನ್ನು ಅವಮಾನಿಸಲಾಗದು.

ಮುಕ್ತಾಯ : ಓದುಗರ ಅಭಿಪ್ರಾಯವನ್ನು ಗಮನಿಸದೇ ಬರೆಯುವ ಲೇಖಕ ಸೋಲುತ್ತಾನೆ. ಲೇಖಕ ತನ್ನ ದೃಷ್ಟಿಕೋನವನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಾನೆ, ತನ್ನ ದೃಷ್ಟಿಕೋನವನ್ನು ಅವರು ಮೆಚ್ಚಲಿ ಎನ್ನುವ ಒಂದು ಆಸೆ ಎಲ್ಲಾ ಲೇಖಕರಿಗೂ ಇದ್ದೇ ಇರುತ್ತದೆ. ಹಾಡುಗಾರ ಶ್ರೋತೃಗಳು ಮೆಚ್ಚಲಿ ಎಂದೇ ಹಾಡುತ್ತಾನೆ. ಆದರೆ, ಒಬ್ಬ ಹಾಡುಗಾರ ತನ್ನ ಹಾಡುಗಾರಿಕೆಯನ್ನು ‘ಮಾರಿಕೊಳ್ಳಲು’ ಪ್ರಾರಂಭಿಸಿದರೆ ಅವನು ತನ್ನತನವನ್ನು ಕಳೆದುಕೊಳ್ಳುವಂತೆ, ಕೇವಲ ಓದುಗರ ಮೆಚ್ಚುಗೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆಯುವ ಲೇಖಕನೂ ಅಷ್ಟೆ, ತನ್ನತನವನ್ನು ಕಳೆದುಕೊಳ್ಳುತ್ತಾನೆ. ಹಾಗಾಗಿ ಲೇಖಕ ತನ್ನ ಸಮತೋಲನವನ್ನು ಕಳೆದುಕೊಳ್ಳದೇ ಜವಾಬ್ದಾರಿಯಿಂದ ಬರೆಯಬೇಕಾಗುತ್ತದೆ.

ಅದೇರೀತಿ ಓದುಗನಿಗೂ ಒಂದು ಜವಾಬ್ದಾರಿ ಇರುತ್ತದೆ. ಅದರಲ್ಲೂ ತನ್ನ ಅಭಿಪ್ರಾಯವನ್ನು ಇತರರೊಂದಿಗೆ ಬಹಿರಂಗವಾಗಿ ಹಂಚಿಕೊಳ್ಳುವಾಗ ಆತನೂ ಯೋಚಿಸಿ ಶಬ್ದಗಳನ್ನು ಬಳಸಬೇಕು. ಲೇಖನವನ್ನು ಆಮೂಲಾಗ್ರವಾಗಿ ಪರಿಶೀಲಿಸಿ ನಂತರ ವಿಶ್ಲೇಷಿಸಬೇಕೇ ವಿನಃ ಲೇಖಕನ ಮೇಲೆ ಆಕ್ರಮಣ ನಡೆಸಕೂಡದು. ಹಲವು ಸಜ್ಜನ ಓದುಗರು ಆ ಬಗ್ಗೆ ಎಚ್ಚರಿಕೆ ನೀಡಿರುವುದು ಸೂಕ್ತವಾಗಿದೆ.

ಸಾಲ್ಮನ್‌ ರಶ್ದಿ ಬರೆದ ಕಾದಂಬರಿಯನ್ನು ತಿರಸ್ಕರಿಸುವ ಬದಲು ಅವನ ಮೇಲೆ ‘ಫತ್ವಾ’ ಹೊರಡಿಸಿದ ಮುಲ್ಲಾನ ನಡವಳಿಕೆಗೂ ಎಲ್ಲಾ ಅಭಿಪ್ರಾಯಗಳಿಗೂ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಕೊಡುವ ನಮ್ಮ ಪದ್ಧತಿಗೂ ವ್ಯತ್ಯಾಸವಿದೆ. ‘‘ನನಗೆ ಯಾರಬಗ್ಗೆ ಗೌರವವಿದೆಯೋ ಅವರಬಗ್ಗೆ ನನ್ನ ಮನಸ್ಸಿಗೆ ಒಗ್ಗದಂತೆ ಬರೆಯಲಿಕ್ಕೆ ನಿಗೇನು ಅಧಿಕಾರ?’’ ಎಂಬ ಧಾಟಿಯಲ್ಲಿ ಪ್ರಶ್ನಿಸುವ ಬದಲು, ‘‘ನಿಮ್ಮ ಅಭಿಪ್ರಾಯ ಹೀಗಿದೆ, ಆದರೆ ಅದು ಇಂಥಾ ಕಾರಣಗಳಿಂದ ನನಗೆ ಸರಿ ಎನಿಸುವುದಿಲ್ಲ, ನನ್ನ ಅಭಿಪ್ರಾಯ ಇಂತಿದೆ, ಅದಕ್ಕೆ ನನ್ನ ಕಾರಣ ಹೀಗಿದೆ’’ ಇತ್ಯಾದಿಯಾಗಿ ಬರೆದು ಅಭಿಪ್ರಾಯಗಳನ್ನು ಪರಸ್ಪರ ವಿನಿಮಯಮಾಡಿಕೊಂಡಾಗ ಎಲ್ಲರ ಕಾಲವೂ ಸದುಪಯೋಗವಾಗುತ್ತದೆ.

ನನ್ನ ಲೇಖನ ಕೆಲವರಿಗಾದರೂ ಮನಸ್ಸಿಗೆ ತೊಂದರೆ ಕೊಡುತ್ತದೆ ಎಂಬ ಅನುಮಾನ ನನಗೆ ಇದ್ದದ್ದರಿಂದಲೇ ಇಬ್ಬರು ಮಿತ್ರರಿಗೆ ಮೊದಲೇ ಕಳುಹಿಸಿ ಒಂದಷ್ಟು ಪ್ರತಿಕ್ರಿಯೆಯನ್ನು ಸ್ವೀಕರಿಸಿ ಮತ್ತಷ್ಟು ತಿದ್ದುಪಡಿ ಮಾಡಿ ಲೇಖನ ಮುಗಿಸಿದೆ. ಇದನ್ನು ಹೇಳಲು ಕಾರಣವೇನೆಂದರೆ, ನನಗೆ ಈ ವಿಷಯದ ಸೂಕ್ಷ್ಮತೆಯಬಗ್ಗೆ ಅರಿವಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುವುದೇ ಆಗಿದೆ. ಅವರಿಗೆ ನಾನು ಕೃತಜ್ಞತೆ ಕೊಡಬೇಕೆಂಬ ಸದುದ್ದೇಶದಿಂದ ಅವರ ಹೆಸರನ್ನು ಪ್ರಕಟಿಸಿದೆ, ಅವರ ಹಿಂದೆ ಬಚ್ಚಿಟ್ಟುಕೊಳ್ಳುವ ಉದ್ದೇಶದಿಂದ ಅಲ್ಲ. ಆದರೆ, ಒಬ್ಬ ಓದುಗರು ನನ್ನ ಮೇಲೆ ವ್ಯಂಗ್ಯ ಕಾರಿದ್ದು ಸಾಲದೋ ಎಂಬಂತೆ ಅವರಿಬ್ಬರನ್ನೂ ಸೇರಿಸಿಕೊಂಡೇ ಕಿಡಿಕಾರಿದ್ದಾರೆ. ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಲೇಖನಕ್ಕೆ ನಾನೊಬ್ಬನೇ ಜವಾಬ್ದಾರ, ಅಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ನನ್ನದು ಮಾತ್ರ. ನನ್ನ ಅಭಿಪ್ರಾಯವನ್ನು ನಿಮ್ಮದೇ ಕಾರಣಗಳಿಗಾಗಿ ನೀವು ಒಪ್ಪದಿದ್ದರೆ ನಾನು ಅರ್ಥಮಾಡಿಕೊಳ್ಳುತ್ತೇನೆ.

ನನಗೆ ನೇರವಾಗಿ ಸಹ ಕೆಲವು ಪ್ರತಿಕ್ರಿಯೆಗಳು ಬಂದಿವೆ. ಎಲ್ಲಕ್ಕಿಂತ ಉತ್ತಮವಾದ ಪ್ರತಿಕ್ರಿಯೆಯನ್ನು ಒಬ್ಬ ಕಿರಿಯ ಮಿತ್ರರು ಮಾಡಿದ್ದಾರೆ. ಅವರ ಸವಿಮಾತು, ಅರ್ಥಪೂರ್ಣವಾದ ಸಂದೇಶವೂ ಹೌದು.

ಮಳೆಗರೆದ ಹನಿಹನಿಗೆ ಭೂತಾಯಿ ಬರೆದಳೇ ಲೆಕ್ಕ?
ಚಿಗುರೊಡೆದ ಎಲೆಎಲೆಗೆ ವನದೇವಿ ಇಡುವಳೇ ಲೆಕ್ಕ?

ಈ ಹಿನ್ನೆಲೆಯಲ್ಲಿ ನೋಡಿದರೆ ಸಂಖ್ಯೆ ಗೌಣವಾಗುತ್ತದೆ. ದಾಸರ ಕೃತಿಗಳ ಲೆಕ್ಕ ಇಡುವುದು ಅನಗತ್ಯವೆನಿಸುತ್ತದೆ! ಅಭಿಪ್ರಾಯವ್ಯಕ್ತಪಡಿಸಿದವರಿಗೆಲ್ಲ ನನ್ನ ಕೃತಜ್ಞತೆಗಳನ್ನರ್ಪಿಸುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X