• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುರಂದರ ಸಾಕು; ಯಾರಿಗೆ ಬೇಕು ಈ ಲೆಕ್ಕ?

By Staff
|

ಪುರಂದರ ದಾಸರು 4,75,000 ಕೀರ್ತನೆ ಬರೆದಿದ್ದು ನಿಜವೇ? -ಈ ಲೇಖನ ಅರೋಗ್ಯಕರ ಚರ್ಚೆಗೆ ನಾಂದಿಯಾಡಿದೆ. ಓದುಗರ ಪ್ರಶ್ನೆ, ಟೀಕೆ, ಮೆಚ್ಚುಗೆಗೆ ಅಂಕಣಕಾರರ ಪ್ರತ್ಯುತ್ತರ ನಿಮ್ಮ ಮುಂದೆ.

Shri Purandara Dasa - Father of Karnataka Classical Musicಶ್ರೀ ಪುರಂದರದಾಸರು ಬರೆದಿರಬಹುದಾದ ಕೃತಿಗಳ ಸಂಖ್ಯೆಯ ಅಂದಾಜಿನ ಬಗ್ಗೆ ನಾನು ಬರೆದ ಲೇಖನ ಹಲವಾರು ಜನರ ಗಮನವನ್ನು ಸೆಳೆದಿದೆ. ಹೆಚ್ಚುಪಾಲು ಜನರು ಲೇಖನವನ್ನು ಸರಿಯಾಗಿ ಓದಿಕೊಂಡಿದ್ದಾರೆ. ಅವರಲ್ಲಿ ಕೆಲವರು ನನ್ನ ವಾದಸರಣಿಯನ್ನು ಮೆಚ್ಚಿದ್ದಾರೆ.

ಮತ್ತೆ ಕೆಲವರು ನನ್ನ ಅಭಿಪ್ರಾಯವನ್ನು ಒಪ್ಪದಿದ್ದರೂ ತಮ್ಮ ಅಭಿಪ್ರಾಯವನ್ನು ಪ್ರೌಢವಾಗಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಮ್ಮ ಭಿನ್ನಾಭಿಪ್ರಾಯವನ್ನು ಹಂಚಿಕೊಳ್ಳುವಾಗ ಒಂದಿಷ್ಟು ಕೋಪವನ್ನೂ ವ್ಯಕ್ತಪಡಿಸಿದ್ದಾರೆ. ಅಂಕಣ ಬರಹದ ಪ್ರಪಂಚದಲ್ಲಿ ಇದೆಲ್ಲವೂ ಮಾಮೂಲು.

ಪ್ರಕಟವಾಗಿರುವ ಅಭಿಪ್ರಾಯಗಳನ್ನೇ ಒಂದಿಷ್ಟು ಸ್ವಚ್ಛಗೊಳಿಸಿ (ನಂಜನ್ನು ಕಂಠದಲ್ಲೇ ಉಳಿಸಿಕೊಂಡು) ಉತ್ತಮಾಂಶಗಳನ್ನು ಜೀರ್ಣಿಸಿಕೊಳ್ಳುವ ಉದ್ದೇಶ ಈ ಸದರಿ ಲೇಖನದ್ದು. ಯಾರು ಹೇಳಿದರು ಎನ್ನುವುದಕ್ಕಿಂತ ಏನು ಹೇಳಿದರು ಎಂಬುದೇ ಮುಖ್ಯವಾದ್ದರಿಂದ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರ ಹೆಸರುಗಳನ್ನು ಬಿಟ್ಟಿದ್ದೇನೆ.

ಅಲ್ಲದೇ, ಎಲ್ಲ ಟೀಕೆಗಳನ್ನೂ ಪುನರುತ್ತರಿಸುವ ಗೋಜಿಗೆ ಹೋಗಿಲ್ಲ, ಮುಖ್ಯಾಂಶಗಳನ್ನು ಮಾತ್ರ ಆಮದು ಮಾಡಿಕೊಂಡಿದ್ದೇನೆ. ಪೂರ್ಣಪಾಠ ಬೇಕಾದವರು ನನ್ನ ಹಿಂದಿನ ಲೇಖನದ ಬಾಲಂಗೋಚಿಯನ್ನು ಓದಿಕೊಳ್ಳಬಹುದು.

ಓದುಗ : ಇಡೀ ಜೀವನಕ್ಕೆ ಒಂದು ದಾಸಕೃತಿಯೇ ಸಾಕು, ಅನಗತ್ಯವಾದ ವಿಷಯಗಳ ಬಗ್ಗೆ ಮಾತೇಕೆ?

ಇದು ಎಲ್ಲರೂ ಒಪ್ಪಬೇಕಾದ ಮಾತು. ದಾಸರ ಯಾವುದಾದರೊಂದು ಕೃತಿಯನ್ನು ನಮ್ಮ ಜೀವನದ ದಾರಿದೀಪವಾಗಿಸಿಕೊಳ್ಳೋಣ.

ಓದುಗ : ಆಧುನಿಕ ಬರಹಗಾರರು ಪ್ರಕಟಿಸಿದ ಮುದ್ರಿತ ಪುಟಗಳ ಆಧಾರದಮೇಲೆ ಹೇಳುವುದಾದರೆ, ದಾಸರಂಥ ಅಸಾಧಾರಣ ವ್ಯಕ್ತಿಗಳಿಗೆ 475,000 ಕೃತಿರಚನೆ ಅಸಾಧ್ಯವೇನಲ್ಲ.

ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಅಷ್ಟೊಂದು ಕೃತಿಗಳು ರಚಿತವಾಗಿದ್ದಲ್ಲಿ, ಕೇವಲ ಐನೂರುವರ್ಷಗಳ ಅವಧಿಯಲ್ಲಿ ಅಷ್ಟೊಂದು ಕೃತಿಗಳು ಹೇಗೆ ನಷ್ಟವಾದವು ಎಂಬ ಪ್ರಶ್ನೆಯನ್ನು ನಾವು ಎದುರಿಸಲೇ ಬೇಕಾಗುತ್ತದೆ.

ಓದುಗರಲ್ಲೇ ಕೆಲವರು ಹೇಳಿದಂತೆ, ಅವೆಲ್ಲ ಮುದ್ರಣವಾದುವುಗಳಲ್ಲ, ಬಾಯಿಂದ ಕಿವಿಗೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ ದೇವರನಾಮಗಳವು. ನಮ್ಮ ತಾಯಿಯವರೇ ಸುಮಾರು ನೂರಕ್ಕಿಂತ ಹೆಚ್ಚು ದೇವರನಾಮಗಳನ್ನು ಹೇಳುತ್ತಿದ್ದರು. ಅವರ ತಾಯಿಗೆ ಇನ್ನೂ ಹೆಚ್ಚು ದೇವರನಾಮಗಳು ನೆನಪಿದ್ದವಂತೆ. ದಾಸಕೃತಿಗಳಿಗಿಂತ ನೂರಾರು ವರ್ಷ ಮೊದಲು ಬರೆಯಲ್ಪಟ್ಟ ಅನೇಕ ಕಾವ್ಯಗಳು ಉಳಿದುಕೊಂಡಿವೆ. ದಾಸರ ಶಿಷ್ಯಕೋಟಿ ತುಂಬಾ ದೊಡ್ಡದು, ಅವರ ಕೃತಿಗಳನ್ನು ಅವರು ಅಷ್ಟು ಸುಲಭವಾಗಿ ನಷ್ಟವಾಗಲು ಬಿಡುತ್ತಿರಲಿಲ್ಲ ಎಂದು ನನ್ನ ನಂಬಿಕೆ.

ಓದುಗ : ಪುರಂದರ ದಾಸರ ಕೊಡುಗೆ ಇಲ್ಲದೇ ಇಂದು ಕರ್ನಾಟಕ ಸಂಗೀತ ಇರುತ್ತಿರಲಿಲ್ಲ.

ದಾಸರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಕ್ಕಳಿಗೆ ಹೇಳಿಕೊಡುವ ಕ್ರಮವನ್ನು ಸಂಶೋಧಿಸಿ, ಕ್ರಮಬದ್ಧಗೊಳಿಸಿ, ಸಂಸ್ಥಾಪಿಸಿದರು ಎಂಬುದರ ಬಗ್ಗೆ ನಿಷ್ಪಕ್ಷಪಾತಿಗಳಾದ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿದ್ದಂತಿಲ್ಲ.

ಓದುಗ : ದಾಸರಿಗೆ ಸಿಗಬೇಕಾದ ಸ್ಥಾನವನ್ನು ಇತರರು ಕಿತ್ತುಕೊಳ್ಳಲು ಯತ್ನಿಸುತ್ತಿರುವ ಇಂದಿನ ಸಂದರ್ಭದಲ್ಲಿ, ಇಂಥಾ ಲೇಖನದಿಂದ ಅವರ ಸ್ಥಾನಕ್ಕೆ ಇನ್ನೂ ಹಾನಿಯಾಗುವ ಸಾಧ್ಯತೆ ಇದೆ.

ದಾಸರ ಮತ್ತು ದಾಸಕೃತಿಗಳ ಹಾಗು ಅವರು ಸಾರುವ ತತ್ತ್ವದಬಗ್ಗೆ ಅತ್ಯಂತ ಗೌರವವುಳ್ಳ ನನಗೆ ಈ ಬಗ್ಗೆ ಅತೀವ ಕಾಳಜಿಯಿದೆ. ಕನ್ನಡ ಭಾಷೆಯ ವಿಷಯದಲ್ಲಿ ಮತ್ತು ಭಾರತದ ಆಗುಹೋಗುಗಳಲ್ಲಿ ಹೇಗೆ ಕನ್ನಡೇತರರು ಕನ್ನಡಿಗರನ್ನು ತುಳಿಯುತ್ತಿದ್ದಾರೋ, ಅದೇರೀತಿಯಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲೂ ಎಂದಿನಿಂದಲೂ ನಡೆಯುತ್ತಲ್ಲೇ ಇದೆ. ಇದಕ್ಕೆ ಕನ್ನಡೇತರರು ಎಷ್ಟು ಕಾರಣರೋ, ಕನ್ನಡಿಗರೂ ಅಷ್ಟೇ ಕಾರಣರು. ತಮಿಳು, ತೆಲುಗು ಮತ್ತು ಮಲಯಾಳೀ ಸಂಗೀತಗಾರರು ಯಾರೇ ಬರಲಿ ಅಲ್ಲಿ ನಮ್ಮ ಕನ್ನಡ ರಸಿಕರು ಹಾಜರ್‌! ಕನ್ನಡಿಗ ಸಂಗೀತಗಾರರು ಬಂದರೆ ಅವರೆಲ್ಲಾ ನಾಪತ್ತೆ!

ಕನ್ನಡದ ದೇವರನಾಮಗಳನ್ನು ಹಾಡಿ ಜನಪ್ರಿಯಗೊಳಿಸುವುದಕ್ಕೂ ಸುಬ್ಬುಲಕ್ಷ್ಮಿ, ವಸಂತಕುಮಾರಿ, ಸುಧಾ ರಘುನಾಥನ್‌ ಇವರೇ ಬೇಕಾಗಲು ಏನು ಕಾರಣ? ನಮ್ಮ ಮನೆಯ ರಸದೌತಣವನ್ನು ಕಡೆಗಣಿಸಿ ಇತರರ ಮನೆಯ ಎಂಜಲಿಗೆ ಕೈ ಒಡ್ಡುವ ಕನ್ನಡಿಗರ ಮೌಢ್ಯಕ್ಕೆ ಏನೆನ್ನಬೇಕು? ಸಮಸ್ಯೆಯ ಮೂಲ ನಮ್ಮಲ್ಲೇ ಇದೆ. ಆದ್ದರಿಂದ, ದಾಸರ ಕೃತಿಗಳ ಸಂಖ್ಯೆ ಲಕ್ಷವೋ ಸಾವಿರವೋ ಎಂಬ ಬೌದ್ಧಿಕ ಮಟ್ಟದ ಚರ್ಚೆಯಿಂದ ಕರ್ನಾಟಕ ಸಂಗೀತಕ್ಕಾಗಲೀ ದಾಸರ ಸ್ಥಾನಕ್ಕಾಗಲೀ ಯಾವ ತೊಂದರೆಯೂ ಆಗುವುದಿಲ್ಲ.

ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಕನ್ನಡಿಗರು ಉದ್ಧಾರವಾಗಬೇಕಾದರೆ, ಮೊದಲು ಸಂಗೀತವನ್ನು ಚೆನ್ನಾಗಿ ಕಲಿಯಬೇಕು, ಸಾಧನೆ ಮಾಡಿ ದೇಶದ ಎಲ್ಲಾ ಭಾಗಗಳಲ್ಲೂ ಜಯಭೇರಿ ಹೊಡೆಯಬೇಕು. ದಾಸರ ಕೃತಿಗಳನ್ನು ವಿದ್ವತ್ಪೂರ್ಣವಾಗಿ ಹಾಡಿ ಕನ್ನಡೇತರರ ಕೈಯಲ್ಲೂ ಭೇಷ್‌ ಎನ್ನಿಸಿಕೊಳ್ಳಬೇಕು. (ಆ ರೀತಿ ಮಾಡಿರುವವರು ಹಲವರಾದರೂ ಇದ್ದಾರೆ ಎನ್ನುವುದು ಸಂತೋಷದ ಸಂಗತಿಯಾದರೂ, ಅಂಥವರ ಸಂಖ್ಯೆ ಏನೇನೂ ಸಾಲದು.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X