ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಧರ್ಮ ಸಂಕಟ’ ಪದ ಬಳಕೆ ಬಗೆಗೊಂದು ಜಿಜ್ಞಾಸೆ

By Staff
|
Google Oneindia Kannada News


ಈಗ, ಶರ್ಮಾ ಅವರ ಮಾತುಗಳನ್ನು ಒಂದೊಂದಾಗಿ ಪರಿಶೀಲಿಸೋಣ...

ಎಲ್ಲಕ್ಕಿಂತ ಮೊದಲು, ಶರ್ಮಾ ಅವರ ವಿಚಾರಸರಣಿಯಲ್ಲಿ ಮೆಚ್ಚತಕ್ಕ ಅಂಶಗಳು ಬಹಳಷ್ಟಿವೆ ಮತ್ತು ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಯೇ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ನಾನು ಒಪ್ಪಿಕೊಂಡೇ ಮುಂದುವರೆಯುತ್ತೇನೆ.

(1) ಆಧ್ಯಾತ್ಮಿಕತೆಯಿಂದ ಮನಸ್ಸಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು ಎಂಬ ವಿಷಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ, ಆದರೆ ತಾತ್ವಿಕ ದೃಷ್ಟಿಯಿಂದ ಮಾತ್ರ. ವ್ಯಾವಹಾರಿಕ ದೃಷ್ಟಿಯಿಂದ ಇದು ಬಾಯಲ್ಲಿ ಹೇಳುವಷ್ಟು ಸುಲಭವಲ್ಲ ಎಂಬುದನ್ನು ನಮ್ಮಂತಹ ಇತಿ-ಮಿತಿಗಳಿಂದ ಕೂಡಿದ ಹುಲುಮಾನವರು ಒಪ್ಪಿಕೊಳ್ಳಲೇಬೇಕು. ‘ಅರ್ಥ’ವನ್ನು ಗಳಿಸುವಾಗ ಮತ್ತು ‘ಕಾಮ’ವನ್ನು ಭೋಗಿಸುವಾಗ ‘ಧರ್ಮ’ದ ಚೌಕಟ್ಟಿನೊಳಗೇ ಇದ್ದು ಇವೆಲ್ಲವೂ ‘ಮೋಕ್ಷ’ಕ್ಕಾಗಿಯೇ ಎಂಬ ನಂಬಿಕೆಯಿಂದ ಬಾಳಬೇಕೆಂಬುದು ನಮ್ಮ ಹಿಂದೂ ಧರ್ಮದ ಆದರ್ಶ. ಮೌಲ್ಯಗಳ ಆವರಣದಲ್ಲಿ ಬಾಳುವುದು ಯಾವ ದೇಶದಲ್ಲಿದ್ದರೂ ಸಾಧ್ಯ. ಆದರೆ, ಒಂದು ದೇಶ/ಧರ್ಮದ ಮೌಲ್ಯಗಳೊಂದಿಗೆ ಬೆಳೆದು ಮತ್ತೊಂದು ದೇಶ/ಧರ್ಮದ ಮೌಲ್ಯಗಳೊಂದಿಗೆ ತಾಕಲಾಟವಾಡುವ ಪ್ರಸಂಗಗಳು ನಿತ್ಯಜೀವನದಲ್ಲಿ ಎದುರಾದಾಗ ದ್ವಂದ್ವಗಳು ತಲೆದೋರುತ್ತವೆ ಎಂಬುದಂತೂ ನಿಜ.

ಭಾರತೀಯ ಮುಸಲ್ಮಾನರು ವಂದೇಮಾತರಮ್‌ ಹಾಡುವುದಕ್ಕೆ ಅಭ್ಯಂತರವ್ಯಕ್ತಪಡಿಸಿದಾಗ ಭಾರತೀಯ ಹಿಂದೂಗಳಿಗೆ ಕಿರಿಕಿರಿ ಆಗುವಂತೆ, ಭಗವದ್ಗೀತೆಯನ್ನು ಹಿಂದೂ ಅಮೆರಿಕನ್ನರು ದಿನಬಳಕೆಯಲ್ಲಿ ಉದಹರಿಸಿದಾಗ, ಬೈಬಲ್ಲಿನ ಮೌಲ್ಯಗಳಿಂದ ಬೆಳೆದ ಕ್ರೈಸ್ತ ಅಮೆರಿಕನ್ನರಿಗೆ ಕಿರಿಕಿರಿ ಆಗುತ್ತದೆ. ಆಧ್ಯಾತ್ಮವನ್ನು ಹಿಂದೂಗಳು ನೋಡುವಂತೆ ಇತರರೂ ನೋಡುವುದಿಲ್ಲವಾದ್ದರಿಂದ ತಾಕಲಾಟವನ್ನು ತಪ್ಪಿಸುವುದು ಸಾಧ್ಯವಾಗುವುದಿಲ್ಲ. ಆದರೆ, ವೈಯಕ್ತಿಕ ಮಟ್ಟದಲ್ಲಿ ದ್ವಂದ್ವಗಳನ್ನು ಶಮನಮಾಡಿಕೊಳ್ಳಲು ಆಧ್ಯಾತ್ಮ ಸಾಕಷ್ಟು ಸಹಾಯ ಒದಗಿಸುತ್ತದೆ. ಆದುದರಿಂದ, ಅವರವರ ಆಧ್ಯಾತ್ಮಿಕ ನೆಲೆಯನ್ನೇ ನೆಚ್ಚಬೇಕೆಂಬುದನ್ನು ನಾನು ಒಪ್ಪುತ್ತೇನೆ.

(2) ಬರುವ ಸಂಬಳದಲ್ಲಿ ತೆರಬೇಕಾದ ತೆರಿಗೆಯನ್ನು ತೆತ್ತು ಮಿಕ್ಕಿದ್ದರಲ್ಲಿ ಸುಖಸೌಲಭ್ಯಗಳನ್ನು ಅನುಭವಿಸುವುದರಲ್ಲಿ ಯಾವ ಗೊಂದಲವೂ ಇಲ್ಲ, ನಿಜ. ಆದರೆ ದೇಶವೆಂಬುದು ಕೇವಲ ಒಂದು ನೆಲವಲ್ಲ, ಅದು ಒಂದು ಭಾವನಾತ್ಮಕ ಶ್ರದ್ಧೆಯೂ ಹೌದು. ಕೊಡುವ ಬಾಡಿಗೆ ತೆತ್ತು ಬಾಡಿಗೆ ಮನೆಯನ್ನು ಅನುಭವಿಸುವುದಕ್ಕೂ ತಾವೇ ಕಟ್ಟಿದ ಅಥವಾ ವಂಶಪಾರಂಪರ್ಯವಾಗಿ ಬಂದ ಮನೆಯಲ್ಲಿ ಜೀವಿಸುವುದಕ್ಕೂ ವ್ಯತ್ಯಾಸವಿಲ್ಲವೇ? ಬಾಡಿಗೆದಾರ ಎಂದಿಗೂ ಮನೆಯನ್ನು ತನ್ನದೆಂಬಂತೆ ನೋಡಿಕೊಳ್ಳುವುದಿಲ್ಲ. ಕ್ರಿಕೆಟ್‌ ಅಥವಾ ಫುಟ್‌ಬಾಲ್‌ ಪಂದ್ಯದ ಸೋಲು ಗೆಲುವುಗಳನ್ನು ಸಹಿಸಿಕೊಳ್ಳಬಹುದು, ಆದರೆ ಎರಡು ದೇಶಗಳ ನಡುವೆ ಯುದ್ಧವಾದಾಗ ನಮ್ಮ ವೈರಿಗಳ ಸೈನ್ಯ ಗೆದ್ದರೆ ಸಹಿಸುವುದು ಕಷ್ಟವಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ, ಸೋಲು ಗೆಲುವು ಯಾವುದೂ ನಮ್ಮ ಕೈಯಲ್ಲಿಲ್ಲ, ಮಾಡುವ ಕರ್ತವ್ಯವನ್ನು ಸುಮ್ಮನೆ ಮಾಡಿದರೆ ಸಾಕು. ಚೀನೀಯರು ಉತ್ತರದ ಗಡಿಯಲ್ಲಿ ನಮ್ಮ (ಎಂದರೆ, ಭಾರತದ!) ಸೈನಿಕರನ್ನು ನಿರ್ನಾಮ ಮಾಡಿದಾಗ ನಿಜವಾದ ಭಾರತೀಯರಿಗೆ ನೋವಾಗದೇ ಇತ್ತೇ? ಪಾಕಿಸ್ತಾನದ ಸೇನೆಯನ್ನು ಬಗ್ಗುಬಡಿದು ಬಂಗ್ಲಾದೇಶದ ಹುಟ್ಟಿಗೆ ಕಾರಣವಾದ ಬಾರತದ ಸೇನೆಯಬಗ್ಗೆ ನಿಜವಾದ ಭಾರತೀಯರಿಗೆ ಹೆಮ್ಮೆಯಾಗಲಿಲ್ಲವೇ? ಅಥವಾ, ಇವೂ ದೇಶಭಕ್ತಿಯ ಮತ್ತು ರಾಷ್ಟ್ರನಿಷ್ಠೆಯ ಅಪವ್ಯಾಖ್ಯಾನಗಳ ಹಿನ್ನೆಲೆಯ ಗೊಂದಲಗಳೇ?

ಮತ್ತೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಇಲ್ಲಿ ವೆಟರನ್ಸ್‌ ಡೇ ಮೆಮೋರಿಯಲ್‌ ಡೇ ಮುಂತಾದ ದಿನಾಚರಣೆಗಳಿವೆ. ಅವತ್ತಿನ ದಿನ ದೇಶಕ್ಕಾಗಿ ಪ್ರಾಣತೆತ್ತ ಸೈನಿಕರ ಸಮಾಧಿಗಳಿಗೆ ಮೃತರ ಸಂಬಂಧಿಗಳು ಭೇಟಿ ಕೊಡುತ್ತಾರೆ. ವಲಸೆಬಂದ ಮೊದಲ ಪೀಳಿಗೆಯವರಿಗೆ ಇಂಥಾ ತ್ಯಾಗಮಾಡಿದ ಬಂಧುಗಳಿರುವುದಿಲ್ಲ. ಇತರ ಅಮೆರಿಕನ್ನರಂತೆ ತಮ್ಮ ಮಕ್ಕಳನ್ನು ಸಮಾಧಿಗೆ ಕೊಂಡೊಯ್ಯುವ ಸಂದರ್ಭ ಅವರಿಗೆ ಬರುವುದಿಲ್ಲ. ಹೀಗಾಗಿ ದೇಶಕ್ಕಾಗಿ ತ್ಯಾಗಮಾಡಿ ಮಡಿದ ಯೋಧರಬಗ್ಗೆ ಭಾವಾತ್ಮಕವಾಗಿ ಅವರು ಸ್ಪಂದಿಸಲಾಗುವುದಿಲ್ಲ. ಆಧ್ಯಾತ್ಮಿಕವಾಗಿ ನೋಡಿದರೆ, ಸಾವು ಎಲ್ಲರಿಗೂ ಬರುತ್ತದೆ, ಆತ್ಮವು ಬಟ್ಟೆ ಬದಲಿಸುವಂತೆ ದೇಹವನ್ನು ಬದಲಿಸುತ್ತದೆ, ಇದಕ್ಕಾಗಿ ಶೋಕವೇಕೆ ಎಂದು ಅಮೆರಿಕನ್‌ ಗೆಳೆಯರನ್ನು ಕೇಳಲು ಸಾಧ್ಯವೋ? ಹಾಗೆ ಕೇಳುವುದು ಸಾಧುವೋ?

(3) ಅಭಿಪ್ರಾಯ ಸ್ವಾತಂತ್ರ್ಯವನ್ನು ಅಮೆರಿಕದ ಸಂವಿಧಾನ ಎಲ್ಲಾ ಪೌರರಿಗೂ ಕೊಟ್ಟಿದೆ. ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಡ್ಡಿಯಿಲ್ಲ. ಆದರೆ, ಎಲ್ಲಾ ಸ್ವಾತಂತ್ರ್ಯಗಳಿಗೂ ಇತಿ-ಮಿತಿಗಳು ಇರುತ್ತವೆ, ಉದಾಹರಣೆಗೆ, ವಿಮಾನನಿಲ್ದಾಣದಲ್ಲಿ ಸ್ಥಳೀಯರಂತೆ ಕಾಣುವ ಶ್ವೇತವರ್ಣೀಯರಿಗಿಂತ ಪರದೇಶಿಗಳಂತೆ ಕಾಣುವ ಕಂದುಚರ್ಮದ ಪ್ರಯಾಣಿಕರನ್ನೇ ತಪಾಸಣೆಗೆ ಗುರಿಮಾಡುತ್ತಾರೆ. ಅಭಿಪ್ರಾಯಸ್ವಾತಂತ್ರ್ಯವಿದೆಯೆಂದು ಅದನ್ನು ವ್ಯಕ್ತಪಡಿಸಿದರೆ, ಅದರ ಫಲಿತಾಂಶ ಹಿತಕರವಾಗಿರುವುದಿಲ್ಲ!

(4) ‘ಅಧ್ಯಯನ, ಆಚಾರ, ಹೊಂದಾಣಿಕೆ, ತಾಳ್ಮೆ, ಕುಶಲತೆ’ ಎಲ್ಲವೂ ಮೇಳೈಸಿದರೆ ಭಾರತೀಯನೊಬ್ಬನೇ ಏಕೆ ಪ್ರತಿ ದೇಶದ ಪ್ರತಿ ಪ್ರಜೆಯೂ ವಿಶ್ವಕುಟುಂಬಿಯೇ. ಇವೆಲ್ಲವೂ ಒಂದೇ ಮನುಷ್ಯನಲ್ಲಿ ಮೇಳೈಸಿದಾಗ ಅಲ್ಲೊಬ್ಬ ಇಲ್ಲೊಬ್ಬ ಸ್ಥಿತಃಪ್ರಜ್ಞ ಇದ್ದಾನೆ ಎನ್ನಿಸಲೂ ಬಹುದು

(5) ಮೊದಲೇ ಹೇಳಿದಂತೆ, ಶರ್ಮಾ ಅವರು ತಮ್ಮ ಅಂಚೆಯಲ್ಲಿ ನಾನು ಉಪಯೋಗಿಸಿದ ‘ಧರ್ಮ-ಸಂಕಟ’ ಎಂಬ ಶಬ್ದವೇ ಸಾಧುವಲ್ಲ ಎಂದು ತಿಳಿದ್ದಾರೆ. ‘ಧರ್ಮವನ್ನು ಅರಿತವನಿಗೆ/ಪಾಲಿಸುವವನಿಗೆ ಸಂಕಟವೇ ಇಲ್ಲ’ ಎಂಬುದು ಅವರ ಅಭಿಪ್ರಾಯವೆಂದು ಕಾಣುತ್ತದೆ. ಇದು ಕೂಡ ತಾತ್ವಿಕಮಟ್ಟದಲ್ಲಿ ಒಪ್ಪಬೇಕಾದ ಮಾತೇ. ಆದರೆ, ಈ ವ್ಯಾವಹಾರಿಕ ಜಗತ್ತಿನಲ್ಲಿ ನಡೆಯುವ ಮಾತೇ ಬೇರೆ. ಮಹಾಶೂರನೂ ಮೇಧಾವಿಯೂ ಆದ ಅರ್ಜುನನಿಗೂ ಯುದ್ಧರಂಗದಲ್ಲಿ ಗೊಂದಲವುಂಟಾಯಿತು, ’ಧರ್ಮಸಂಕಟ’ವುಂಟಾಯಿತು. ಆದರೆ, ಅವನಿಗೆ ಶ್ರೀಕೃಷ್ಣಪರಮಾತ್ಮನಂಥಾ ಸಾರಥಿಯೂ ಸಖನೂ ಗುರುವೂ ಪಕ್ಕದಲ್ಲಿದ್ದ. ದಾನವೀರನೂ ಮಹಾ ಪರಾಕ್ರಮಿಯೂ ಆದ ಕರ್ಣನಿಗೂ ಪಾಂಡವರು ತನ್ನ ತಮ್ಮಂದಿರೆಂದು ತಿಳಿದಮೇಲೆ ಧರ್ಮಸಂಕಟವುಂಟಾಯಿತು. ಇಲ್ಲಿ ಧರ್ಮಸಂಕಟ ಎಂಬ ಶಬ್ದದ ಅರ್ಥ ಉಭಯಸಂಕಟ,ಇಬ್ಬಗೆ, ದ್ವಂದ್ವ, ಗೊಂದಲ, ಕಿಂಕರ್ತವ್ಯಮೂಢತೆ... ಮುಂತಾದ ಅರ್ಥದಲ್ಲಿ ಬಳಕೆಯಾಗಿದೆ. ಬಳಕೆಯಲ್ಲಿರುವ ಈ ಶಬ್ದದ ಯುಕ್ತಾಯುಕ್ತತೆಯಬಗ್ಗೆ ಭಾಷಾಶಾಸ್ತ್ರಜ್ಞರ ಮೊರೆಹೊಕ್ಕು ನೋಡಬೇಕಾಗಿದೆ.

(6) ಕೊನೆಯದಾಗಿ, ನಾನು ಪ್ರಕಟಿಸಿದ ಮೊದಲ ಕವನಸಂಕಲನದ (ನಾನೂ ಅಮೆರಿಕನ್‌ ಆಗಿಬಿಟ್ಟೆ, 1984) ಅದೇ ಶೀರ್ಷಿಕೆಯ ಕವನದಲ್ಲಿ ಈ ಸಂದಿಗ್ಧವನ್ನು ಬಣ್ಣಿಸಿದ್ದೇನೆ. ತೌರನ್ನು ಬಿಟ್ಟು ಗಂಡನ ಮನೆಗೆ ಬಂದ ಹೆಣ್ಣಿನಂತೆ, ಸ್ವದೇಶವನ್ನು ಬಿಟ್ಟುಬಂದ ಜನರ ಪರಿಸ್ಥಿತಿ. ಗಂಡನಮನೆಯೇ ತನ್ನ ಮನೆ ಎಂದು ಒಪ್ಪಿಕೊಂಡರೂ ತನ್ನ ತೌರಿನ ಬಳಗವನ್ನು ನೆನೆದು ಸಂಕಟಪಡುವ ಮನೋಸ್ಥಿತಿ ‘ಭಾವೋನ್ಮಾದರಹಿತ ವೈಚಾರಿಕ ಶ್ರದ್ಧೆ’ಯಿಂದ ಕೂಡಿರುವುದಿಲ್ಲ. ಹಾಗೆ ಕೂಡಿರುವುದೂ ಸಾಧಾರಣ ಮನುಷ್ಯರಿಗೆ ಸಾಧ್ಯವಿಲ್ಲದ ಮಾತು.

ಈ ಮೇಲಿನ ಕೆಲವು ಮಾತುಗಳನ್ನು ನನಗೆ ತೋಚಿದಂತೆ ಬರೆದು ಓದುಗರೊಂದಿಗೆ ಹಂಚಿಕೊಂಡಿದ್ದೇನೆ. ಶ್ರೀ ಶರ್ಮಾ ಅವರ ಪತ್ರದಿಂದ ನನಗೆ ತುಂಬಾ ಲಾಭವಾಗಿದೆ, ಆಧ್ಯಾತ್ಮಿಕತೆಯಬಗ್ಗೆ ನನಗಿರುವ ಒಲವು ಇನ್ನಷ್ಟು ಹೆಚ್ಚಾಗಿದೆ ಎಂದು ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X