• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಿಪೂರ್ಣತಾ-ಪಿಶಾಚಿಗಳು!!!

By Staff
|

ಬಣ್ಣದ ಕುಡಿಕೆಯ ನಿದರ್ಶನ :

ಕುಡಿಕೆಗಳನ್ನು ಮಾಡಿ ಅವುಗಳಿಗೆ ಬಣ್ಣ ಹಚ್ಚಿ ಪ್ರದರ್ಶನಕ್ಕೆ ಯೋಗ್ಯವಾದ ವಸ್ತುಗಳನ್ನು ಮಾಡುವುದನ್ನು ಕಲಿಸುವ ಒಂದು ತರಗತಿಯಲ್ಲಿ ನಡೆದ ಒಂದು ಸಂಗತಿ ಹೀಗಿದೆ. ಉಪಾಧ್ಯಾಯರು ವಿದ್ಯಾರ್ಥಿಗಳನ್ನು ಎರಡು ಭಾಗ ಮಾಡಿದರು. ಒಂದೊಂದು ಗುಂಪಿನ ಕೆಲಸಕ್ಕೆ ಒಂದೊಂದು ಅಳತೆಗೋಲು. ಒಂದಕ್ಕೆ ಗಾತ್ರ (ಕ್ವಾಂಟಿಟಿ) ಮತ್ತೊಂದಕ್ಕೆ ಗುಣ (ಕ್ವಾಲಿಟಿ). ಅಂದರೆ, ಮೊದಲನೆಯ ಗುಂಪಿಗೆ, ನಿಯಮಿತ ಅವಧಿಯೊಳಗೆ ಎಷ್ಟು ಬಣ್ಣಹಚ್ಚಿದ ಕುಡಿಕೆಗಳು ತಯಾರಾಗುತ್ತವೆ ಎಂಬುದೇ ಗೆಲುವಿನ ಅಳತೆಗೋಲು.

ಉದಾಹರಣೆಗೆ ಒಟ್ಟು 50 ಕುಡಿಕೆಗಳು = ಅತ್ಯುತ್ತಮ, 40 = ಮಧ್ಯಮ, 30 ಅಥವ ಕಡಿಮೆ ಇದ್ದರೆ ಅಧಮ. ಮತ್ತೊಂದು ಗುಂಪಿಗೆ ಕ್ವಾಲಿಟಿ ಅಥವಾ ಗುಣಮಟ್ಟದ ಅಳತೆ. ಅಂದರೆ, ಅತ್ಯಂತ ಸುಂದರವೂ, ಅತ್ಯಂತ ಆಕರ್ಷಕವೂ ಆದ ಒಂದೇ ಒಂದು ಕುಡಿಕೆಯನ್ನು ಮಾಡಿದರೆ ಸಾಕು ಅವರು ಅತ್ಯುತ್ತಮ ದರ್ಜೆಯಲ್ಲಿ ಉತೀರ್ಣರಾದಂತೆ.

ಫಲಿತಾಂಶ ಬೋಧಪ್ರದವಾಗಿತ್ತು. ಸಂಖ್ಯೆಯಿಂದ ಅಳೆಯಲ್ಪಟ್ಟವರು ನಿರ್ಭಯರಾಗಿ ಅನೇಕ ಕುಡಿಕೆಗಳನ್ನು ತಯಾರಿಸಿಟ್ಟರು. ಹಲವು ಆಕರ್ಷಕವಾಗಿದ್ದವು, ಹಲವು ಅಷ್ಟೇನೂ ಮನಮೋಹಕವಾಗಿರದಿದ್ದರೂ ಪರವಾಗಿಲ್ಲ ಅನ್ನುವಂತಿದ್ದವು. ಒಟ್ಟಾರೆ ನೋಡಿದಾಗ ಅವು ಗುಣಮಟ್ಟದಲ್ಲೂ ಕಳಪೆಯೇನೂ ಆಗಿರಲಿಲ್ಲ. ಆದರೆ, ಎರಡನೇ ಗುಂಪು ಮಾಡಿದ್ದೇನು? ತನ್ನ ಎಲ್ಲಾ ಸಮಯವನ್ನೂ ಎಂಥಾ ವಿನ್ಯಾಸ ಮಾಡಿದರೆ ಉತ್ತಮ ಎಂಬ ಚರ್ಚೆಯಲ್ಲೇ ಕಳೆದುಬಿಟ್ಟಿತು. ನಿಜವಾದ ಕುಡಿಕೆಯನ್ನು ತಯಾರಿಸಲು ಆ ಗುಂಪಿಗೆ ಸಮಯವೇ ಉಳಿಯಲಿಲ್ಲ. ತಮ್ಮ ವಿನ್ಯಾಸದ ಪರಿಕಲ್ಪನೆಗಳು ಮತ್ತು ಒಂದಿಷ್ಟು ಹಸಿ ಜೇಡಿಮಣ್ಣು ಇದನ್ನು ಬಿಟ್ಟರೆ ಎರಡನೆಯ ಗುಂಪಿಗೆ ತೋರಿಸಲು ಯಾವ ಫಲಿತಾಂಶವೂ ಇರಲಿಲ್ಲ.

ಅಂದರೆ, ಪರೀಕ್ಷೆಯಲ್ಲಿ ಫೇಲ್! ಏಕೆಂದರೆ, ಇವರೆಲ್ಲ ಒಂದು ಪರಿಪೂರ್ಣ ವಿನ್ಯಾಸದ ಹಿಂದೆ ಬಿದ್ದು ಎಲ್ಲಾ ವಿವರಗಳನ್ನೂ ಮುಂಗಡವಾಗಿ ಕಂಡುಹಿಡಿದುಕೊಳ್ಳುವ ವ್ಯರ್ಥ ಕಾಲಹರಣದಲ್ಲಿ ತೊಡಗಿದ್ದೇ ಅವರ ಅಸಫಲತೆಗೆ ಕಾರಣವಾಗಿತ್ತು.

ತುಂಬಾ ಶ್ರಮ ಪಡುವವನು ತುಂಬಾ ದಡ್ಡನೂ ಆಗಿರಬಹುದು

ಯಾವುದೇ ಕಚೇರಿಯಲ್ಲಿ ನೋಡಿದರೆ, ಎಲ್ಲರಿಗಿಂತ ಅತಿ ಕಷ್ಟಪಟ್ಟು ಕೆಲಸ ಮಾಡುವವನು ಯಾರೆಂದು ನೋಡಿದರೆ ಗೊತ್ತಾಗುತ್ತದೆ, ಅವನು(ಳು) ಸಾಧಾರಣವಾಗಿ ಪರಿಪೂರ್ಣತಾ-ಪಿಶಾಚಿಯಾಗಿರುತ್ತಾನೆ(ಳೆ)! ಇದರಿಂದ ಕೆಲವು ಪ್ರಶ್ನೆಗಳು ಏಳುತ್ತವೆ. ಈತ(ಕೆ) ಏಕಿಷ್ಟು ಕಷ್ಟಪಡುತ್ತಾನೆ(ಳೆ)? ಈತ ನಿದಾನಪುರುಕನೇ? ಈಕೆ ದಡ್ದಳೆ? ಅಥವಾ ಮನೆಗೆ ಹೋದರೆ ಹೆಂಡತಿಯನ್ನು (ಅಥವಾ ಗಂಡನನ್ನು) ಎದುರಿಸಬೇಕಾಗುತ್ತದೆ ಎಂಬ ಪುಕ್ಕಲುತನದಿಂದ ಕಚೇರಿಯಲ್ಲಿ ಮುಖಮುಚ್ಚಿಟ್ಟುಕೊಂಡು ಕೆಲಸಮಾಡುವ ಅಗತ್ಯ ಇವರಿಗಿದೆಯೇ? ಇತ್ಯಾದಿ.

ಹೀಗೆ ಕಷ್ಟಪಡುವ ಜನರಲ್ಲಿ ಅನೇಕರು ಮರವನ್ನೋ, ಮರದ ಕೊಂಬೆಯನ್ನೋ ಅಥವಾ ಕೊಂಬೆಯ ಎಲೆಯನ್ನೋ ನೋಡಲು ಶಕ್ತರು ಆದರೆ ಅವರಿಗೆ ಇಡೀ ತೋಪು ಅಥವಾ ಇಡೀ ಕಾಡು ಗೋಚರಿಸುವುದೇ ಇಲ್ಲ. ಒಂದು ಘಂಟೆ ಬೇಕಾದ ಕೆಲಸಕ್ಕೆ ನಾಲ್ಕಾರು ಘಂಟೆ ಕಳೆಯುವ ವ್ಯಕ್ತಿ ಶ್ರಮಜೀವಿಯಾದರೂ ಮಂದಮತಿಯೇ ಸರಿ! ಇಂಥವರ ಕಚೇರಿ ಜೀವನವಾಗಲೀ ಸಾಂಸಾರಿಕ ಜೀವನವಾಗಲೀ ಸುಗಮವಾಗಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಆದಷ್ಟು ಕಮ್ಮಿ ಸಮಯ ಕೆಲಸಮಾಡಿ ವಂಚನೆ ಮಾಡಬೇಕೆಂಬ ಉಪದೇಶ ಇಲ್ಲಿಲ್ಲ.

ಯಾವುದಕ್ಕೆ ಎಷ್ಟು ಸಮಯ, ಎಷ್ಟು ಪ್ರಾಧಾನ್ಯ ಕೊಡಬೇಕೆಂಬ ತಾರತಮ್ಯ ಪ್ರತಿಯೊಬ್ಬರಿಗೂ ಇರಬೇಕಷ್ಟೆ? ಹೆಚ್ಚು ಕೆಲಸ ಮಾಡುವವರು ಸಾಧಾರಣವಾಗಿ ನಿದ್ರೆಗೆಡಬೇಕಾಗುತ್ತದೆ, ಅದರಿಂದ ಅವರ ಬುದ್ಧಿ ಚುರುಕಾಗಿ ಕೆಲಸ ಮಾಡುವುದಿಲ್ಲ, ದೇಹಕ್ಕೂ ಆಲಸ್ಯವುಂಟಾಗುತ್ತದೆ. ಅಂಥವರು ಕುಡುಕರ ಹಾಗೆ ಚುರುಕನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ, ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ, ವಿವರಕ್ಕೆ ಎಷ್ಟು ಅಗತ್ಯವೋ ಅಷ್ಟು ಗಮನಕೊಡುತ್ತಾ ಸಾಕಷ್ಟು ಚಾಕಚಕ್ಯತೆಯಿಂದ ದುಡಿದರೆ, ಮಿತವಾದ ಸಮಯದಲ್ಲಿ ಗಮನೀಯವಾಗಿ ಉತ್ಪಾದಕತೆಯನ್ನು ಪ್ರದರ್ಶಿಸಬಹುದು. ಅದರಿಂದ ನಿಮ್ಮ ಸಮಯದ ಮತ್ತು ಜೀವನದ ಮೇಲೆ ನಿಮಗೆ ಲಗಾಮಿರುತ್ತದೆ.

ಪರಿಪೂರ್ಣತೆಯೂ (ಪರ್ಫೆಕ್ಷನ್) ಮುಂದೂಡುವಿಕೆಯೂ (ಪ್ರೊಕ್ರ್ಯಾಸ್ಟಿನೇಷನ್)

ಮುಂದೂಡುವಿಕೆಯೇ ಉತ್ಪಾದಕತೆಯ ಶತ್ರು. ಉತ್ಪಾದಕತೆ ಇಲ್ಲದೇ ಇರುವುದಕ್ಕೆ ಕಾರಣ, ಎಲ್ಲವನ್ನೂ ದೋಷರಹಿತವಾಗಿ ಮಾಡಲೇಬೇಕೆಂಬ ಹುಚ್ಚು ಹಟ. ನಿಮ್ಮ ಸಮಯ ಮತ್ತು ಸಾಮರ್ಥ್ಯಗಳನ್ನು ಹೇಗೆ ಉಪಯೋಗಿಸಿಕೊಂಡರೆ ನಿಮ್ಮ ಆರೋಗ್ಯಕ್ಕೆ ಮತ್ತು ಅಭಿವೃದ್ಧಿಗೆ ಲಾಭದಾಯಕ ಎಂಬುದರ ಬಗ್ಗೆ ನೀವು ಪ್ರಾಮಾಣಿಕರಾಗಿ ಚಿಂತಿಸಬೇಕು.

ತಲುಪಲಾಗದಷ್ಟು ಎತ್ತರದಲ್ಲಿ ಗುರಿ ಇಟ್ಟುಕೊಂಡರೆ, ನಿಮ್ಮನ್ನು ನೀವು ಅಳತೆಮಾಡಿಕೊಳ್ಳುವ ಮಾನದಂಡ ನೈಜತೆಯ ಹೊರಗೆ ಉಳಿಯುತ್ತದೆ. ಅದರಿಂದ ನೀವು ಯಾವ ಕೆಲಸವನ್ನೂ ಮಾಡಿ ಮುಗಿಸಲಾರಿರಿ, ಅಷ್ಟೇ ಏಕೆ, ಯಾವ ಯೋಜನೆಯನ್ನು ಪ್ರಾರಂಭಿಸಲೂ ಆರಿರಿ. ಯಾವಾಗ ಗುರಿಮುಟ್ಟಲು ಸಾಧ್ಯವಿಲ್ಲವೆಂದು ನಿಮಗೆ ಖಾತರಿಯಾಗಿಬಿಡುತ್ತದೋ, ಆಗ ನೀವು ಪರಿಪೂರ್ಣತೆಯ ಸೋಗು ಹಾಕುತ್ತಾ ಮುಂದೂಡುವಿಕೆಯಲ್ಲಿ ಪ್ರವೀಣರಾಗುತ್ತೀರಿ. ಕೆಟ್ಟ-ಕೆಟ್ಟದಾಗಿ ಮಾಡಿ ಮುಗಿಸುವ ಬದಲು ಮಾಡದೇ ಇರುವುದೇ ಮೇಲು ಎಂಬ ನಾಟಕವನ್ನು ಅಭ್ಯಾಸಮಾಡಿಕೊಂಡಾಗ ನಿಷ್ಕ್ರಿಯೆ ಕ್ರಿಯೆಗಿಂತ ಉತ್ತಮ ಎಂದು ನಂಬುವುದು ಸುಲಭವಾಗುತ್ತದೆ, ಸಹಜವೆಂದು ತೋರುತ್ತದೆ.

ಅರ್ಥ ಮಾಡಿಕೊಳ್ಳಿ -- ಅಪರಿಪೂರ್ಣತೆಯಿಂದಲೇ ಪರಿಪೂರ್ಣತೆ

ಮೇಲಿನ ಪಾಠಗಳನ್ನು ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳಿ. ಯಾವುದೇ ಅಭ್ಯಾಸದಲ್ಲಿ ತೊಡಗಿದರೂ, ಹೆಚ್ಚು ಹೆಚ್ಚು ಅಭ್ಯಾಸಮಾಡಿದಷ್ಟೂ ಹೆಚ್ಚು ಪರಿಪೂರ್ಣತೆ ದೊರಕುತ್ತದೆ ಎಂಬುದು ನಿಜವಾದರೂ, ತಪ್ಪು ಮಾಡಲು ಹೇಸುವವರು ಏನನ್ನೂ ಮಾಡಲಾರರು. ಅಭ್ಯಾಸ ಮಾಡುವುದೆಂದರೇನು? ಅನೇಕ ತಪ್ಪುಗಳನ್ನು ಮಾಡುವುದು ಎಂದಲ್ಲವೇ? ತಪ್ಪುಗಳಿಂದಲ್ಲವೇ ಸರಿ? ಅಪರಿಪೂರ್ಣತೆಯಿಂದಲ್ಲವೇ ಪರಿಪೂರ್ಣತೆ? ಪ್ರಾಮಾಣಿಕರಾಗಿ ಚಿಂತಿಸಿ.

ಈ ಪರಿಪೂರ್ಣತೆಯ ಭೂತ ನಿಮಗೇಕೆ ಹಿಡಿಯಿತು? ಪರಿಪೂರ್ಣತೆಯ ಹಿಂದೆ ಬಿದ್ದವರು ಯಾರೂ ಸುಖಿಗಳಲ್ಲ. ಅವರು ತಮ್ಮನ್ನೂ ತಮ್ಮ ಸುತ್ತಮುತ್ತಲಿನವರನ್ನೂ ದುಃಖ ಮತ್ತು ನೋವಿಗೀಡುಮಾಡುತ್ತಾರೆಂಬುದು ಖಂಡಿತ. ಹಲವೊಮ್ಮೆ ಅವರು ಭ್ರಮೆ ಹಿಡಿದು ನಿರುಪಯುಕ್ತರೂ ನಿಷ್ಕ್ರಿಯರೂ ಆಗುವುದರ ಜತೆಗೆ ಮನುಷ್ಯದ್ವೇಷಿಗಳೂ ಆಗುತ್ತಾರೆ. ಜೇಡಿ ಮಣ್ಣಿನ ಬಣ್ಣದ ಕುಡಿಕೆಗಳ ಕತೆ ನೆನಪಿದೆಯಷ್ಟೆ? ಹೋಗಿ, ಮಣ್ಣಿಗೆ ಕೈಹಾಕಿ, ಆಕಾರ ಕೊಡಿ, ಬಣ್ಣ ಹಾಕಿ, ಚಿತ್ತಾರ ಬಿಡಿಸಿ, ಏನಾದರೊಂದರ ಸೃಷ್ಟಿ ಮಾಡಿ, ಅದು ದೋಷರಹಿತವಾಗಿರಲೇಬೇಕಿಲ್ಲ. ಅನೇಕ ಸಾಧಾರಣ ಕುಡಿಕೆಗಳ ನಡುವೆ ಒಂದು ಅದ್ಭುತವಾದ ಫಲಿತಾಂಶ ಉಂಟಾದರೂ ಆಗಬಹುದು!"

ಸಾರಾಂಶ

ಸಣ್ಣಪುಟ್ಟ ದೋಷಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಲು ಸಾಕಷ್ಟು ಸೌಲಭ್ಯ ನಮಗಿರುವಾಗ, ತಿದ್ದಿಕೊಳ್ಳುವುದನ್ನು ನಾವು ಅಭ್ಯಾಸಮಾಡಿಕೊಳ್ಳಬೇಕು. ಉದಾಹರಣೆಗೆ, ವ್ಯವಹಾರಪತ್ರಗಳಲ್ಲಿ ಕಾಗುಣಿತದ ತಪ್ಪುಗಳು ಮತ್ತು ವ್ಯಾಕರಣದೋಷಗಳು ನುಸುಳಲು ಅವಕಾಶಕೊಡಬಾರದು. ದೊಡ್ಡ ಧ್ಯೇಯದ ಬಗ್ಗೆ ದೃಷ್ಟಿ ಇರಲಿ, ಗುರಿ ತಲುಪುವ ಬಗ್ಗೆ ಗಮನ ಇರಲಿ, ಒಟ್ಟಾರೆ ಯೋಜನೆಯ ಸ್ಥೂಲ ಹೆಜ್ಜೆಗಳ ಬಗ್ಗೆ ಮುಂಗಡವಾಗಿ ಚಿಂತಿಸಬೇಕು, ಆದರೆ ಯೋಜನೆಯ ಪ್ರತಿ ಹೆಜ್ಜೆಯನ್ನೂ ಮುಂದಾಲೋಚಿಸಬೇಕಿಲ್ಲ. ನಡೆ ಮುಖ್ಯ, ಮುನ್ನಡೆ ಮುಖ್ಯ. ನಿರ್ಧಾರಕ್ಕೆ ಬರಬೇಕಾದ್ದು ಅಗತ್ಯ. ಒಟ್ಟಾರೆ ದೃಶ್ಯವನ್ನು ನೋಡುವ ಸಿಂಹಾವಲೋಕನ ಮತ್ತು ಪ್ರಮುಖ ವಿವರಗಳ ವಿಷಯದಲ್ಲಿ ಹದ್ದಿನ ಕಣ್ಣು ಇದ್ದಾಗ ಜಯ ಖಂಡಿತ ಎಂಬ ಸಂದೇಶವನ್ನು ಹಂಚಿಕೊಳ್ಳುತ್ತಾ ವಿರಮಿಸುವೆ ಮುಂದಿನ ಕಂತಿನವರೆಗೆ.

ಸೂಚನೆ : ಮೇಲಿನ ಲೇಖನಕ್ಕೆ ಆಧಾರ : ಪಿನಲಪಿ ಟ್ರಂಕ್ ಬರೆದ "Breaking the Perfection Habit" ಮೂಲ ಲೇಖನದ ವಿಚಾರಗಳನ್ನು ಅಳವಡಿಸಿಕೊಳ್ಳುವಾಗ ನನ್ನ ಒಕ್ಕಣೆಯಲ್ಲಿ ಸಾಕಷ್ಟು ಸ್ವಾತಂತ್ರ್ಯ ವಹಿಸಿಕೊಂಡಿದ್ದೇನೆ, ಹೀಗಾಗಿ ಇದು ನೇರ ಅನುವಾದವಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X