• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಗಿನೆಲೆ ಅವರ 'ಬಿಳಿಯ ಚಾದರ'

By Staff
|

ಪ್ರಪಂಚದ ಅತ್ಯಂತ ಶ್ರೀಮಂತ ದೇಶವೆನ್ನಿಸಿಕೊಳ್ಳುವ ಅಮೆರಿಕದ ವೈದ್ಯಕೀಯ ವ್ಯವಸ್ಥೆಯ ಹಲವೊಂದು ದೌರ್ಬಲ್ಯಗಳನ್ನು ನಿಷ್ಠುರವಾಗಿ ಮತ್ತು ಮಾರ್ಮಿಕವಾಗಿ ವಿಮರ್ಶಿಸುವುದರಲ್ಲಿ ಗುರುಪ್ರಸಾದ್ ತಮ್ಮ ಕಾದಂಬರಿ 'ಬಿಳಿಯ ಚಾದರ'ದಲ್ಲಿ ಸಾಕಷ್ಟು ವಿಜಯವನ್ನು ಗಳಿಸಿದ್ದಾರೆ. ಏನಕೇನಪ್ರಕಾರೇಣ ದುಡ್ಡು ದೋಚುವ ಔಷಧ ಸಂಶೋಧನೆ ಮತ್ತು ಕೊಳ್ಳೆ ಹೊಡೆಯುವ ವ್ಯಾಪಾರೀಮನೋಭಾವವನ್ನು ಬೆತ್ತಲುಮಾಡುವುದರಲ್ಲಿ ಕೂಡ ಸಫಲರಾಗಿದ್ದಾರೆ.

ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

Dr. Guruprasad Kaginele's first novel Biliya Chadaraಅಮೇರಿಕದ ಕರಗಿಸುವ ಕಡಾಯಿಯಲ್ಲಿ ಬೆರೆತರೂ ತಮ್ಮ ಭಾಷೆಯನ್ನು ಮರೆಯದೇ ರೂಢಿಸಿಕೊಳ್ಳುತ್ತಾ, ವರ್ತಮಾನದಲ್ಲಿ ಸುತ್ತಲಿನ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತಿದ್ದರೂ ಭೂತಕಾಲದ ಭಾರತದ ಭಾರವನ್ನು ಹೊರುತ್ತಿರಲೇಬೇಕಾದ ಅನಿವಾರ್ಯತೆಯ ಮಧ್ಯೆ, ಸಂಪೂರ್ಣವಾಗಿ ತಾವಿನ್ನೂ ಒಪ್ಪಿಕೊಂಡಿರದ ಸುತ್ತಲಿನ ಜೀವನವನ್ನು ಪ್ರತಿಬಿಂಬಿಸುವ ಸೃಜನಶೀಲ ಸಾಹಿತ್ಯವನ್ನು ಕನ್ನಡದಲ್ಲಿ ಹುಲುಸಾಗಿ ಬೆಳೆಸುತ್ತಿರುವ ಕೆಲವೇ ಲೇಖಕರಲ್ಲಿ ಡಾ. ಗುರುಪ್ರಸಾದ್ ಕಾಗಿನೆಲೆ ಒಬ್ಬರು ಎಂದು ಧಾರಾಳವಾಗಿ ಹೇಳಬಹುದು. ಅವರೀಗಾಗಲೇ ಹಲವಾರು ಕಥೆಗಳನ್ನು ಬರೆದು ಕನ್ನಡ ಕಥಾಪ್ರಪಂಚಕ್ಕೆ ಪರಿಚಿತರಾಗಿದ್ದಾರೆ ಮತ್ತು ಇತರ ಹಿರಿಯ-ಕಿರಿಯ ಸಮಕಾಲೀನ ಲೇಖಕರ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಕಾಗಿನೆಲೆಯವರ ಇತ್ತೀಚಿನ ಕೃತಿ "ಬಿಳಿಯ ಚಾದರ" ಎಂಬ ಚೊಚ್ಚಲು ಕಾದಂಬರಿಯನ್ನು ಮನೋಹರ ಗ್ರಂಥ ಮಾಲಾ ದವರು ಪ್ರಕಟಿಸಿರುವುದು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಹೆಮ್ಮೆಯಿಂದ ಗುರುತಿಸಿಕೊಳ್ಳಬಹುದಾದ ಮತ್ತೊಂದು ಮಹತ್ವದ ಹೆಜ್ಜೆ.

ಪುಸ್ತಕವನ್ನು ಓದಲು ಕುಳಿತಾಗ ಮೊದಲು ಕಣ್ಣಿಗೆ ಬಿದ್ದದ್ದು, ಹಿರಿಯ ಕಾದಂಬರಿಕಾರರಾದ ಡಾ. ಅನಂತಮೂರ್ತಿಯರ ಮುನ್ನುಡಿ. ಕಾದಂಬರಿಯನ್ನೋದಿದಮೇಲೆ ಮುನ್ನುಡಿಯನ್ನೋದಿದರೆ ಉತ್ತಮ ಎಂಬ ಚೇತಾವನಿಯನ್ನು ಅವರ ಮುನ್ನುಡಿಯ ಆದಿಭಾಗದಲ್ಲೇ ಓದಿ, ತಕ್ಷಣ ಪುಟಗಳನ್ನು ಹಾರಿಸಿ ನೇರ ಕಾದಂಬರಿಯನ್ನೇ ಓದಿ ನಂತರ ಮುನ್ನುಡಿಯನ್ನೋದಿದೆ. ಅನಂತಮೂರ್ತಿಯವರು "ಬಿಳಿಯ ಚಾದರ"ವನ್ನು "ಇದೊಂದು ಪ್ರಾಯೋಗಿಕ ಕಾದಂಬರಿ" ಎಂದಿದ್ದಾರೆ. ಅಷ್ಟೇ ಅಲ್ಲ, "ಕನ್ನಡದ ಸಾರಸ್ವತ ಲೋಕವನ್ನು ಅಪ್ಪಟವಾದ, ಚುರುಕಾದ, ವೈಚಾರಿಕ ಶೋಧದ ಕನಸನ್ನು ಪಡೆದ ಪ್ರಜ್ಞೆಯೊಂದು ಪ್ರವೇಶಿಸಿ ವಿಸ್ತರಿಸುತ್ತಿದೆ" ಎಂದು ಹೆಮ್ಮೆಯನ್ನೂ ಸಂತೋಷವನ್ನೂ ವ್ಯಕ್ತಪಡಿಸಿದ್ದಾರೆ. ಅದಕ್ಕಿಂತ ದೊಡ್ಡ ಮಾತುಗಳನ್ನು ನಾನು ಹೇಳಲಾರೆನಾದರೂ ನನ್ನ ಕೆಲವು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲು ಹೊರಟಿದ್ದೇನೆ.

ಕಾಗಿನೆಲೆ ಅವರ ಲೇಖನಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿರುವ ನನಗೆ, ಇವರ ಬರವಣಿಗೆಯಲ್ಲಿ ಹೊಸತನ ಕಾಣುತ್ತದೆ. ಮೊಟ್ಟ ಮೊದಲಿಗೆ, "ಬಿಳಿಯ ಚಾದರ" ಎಂಬ ಹೆಸರಿನಿಂದಲೇ ಇವರು ಓದುಗರನ್ನು ಸೆಳೆಯುತ್ತಾರೆ. ವೃತ್ತಿಯಿಂದ ವೈದ್ಯರಾಗಿರುವ ಗುರುಪ್ರಸಾದರಿಗೆ ಆಸ್ಪತ್ರೆಯ ಚಿತ್ರಗಳು ಅಲ್ಲಿನ ಪಾತ್ರಗಳು ಮತ್ತು ಸನ್ನಿವೇಶಗಳು ಹತ್ತಿರದಿಂದ ನೋಡಲು ಸಿಕ್ಕುತ್ತವೆ. ಆ ಚಿತ್ರಗಳನ್ನು ತಮ್ಮ ಕಾದಂಬರಿಯಲ್ಲಿ ಧಾರಾಳವಾಗಿ ದುಡಿಸಿಕೊಂಡಿದ್ದಾರೆ. ಆದರೆ, "ಬಿಳಿಯ ಚಾದರ" "ಶುಚಿತ್ವ" ಮತ್ತು "ನೈರ್ಮಲ್ಯ"ಗಳ ಪ್ರತೀಕವಾಗುವ ಬದಲು, ಆಸ್ಪತ್ರೆಯಲ್ಲಿನ ಹೇಸಿಗೆ ಮತ್ತು ರೋಗಿಗಳ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯ ಹಿಂದಡಗಿರುವ ಬೀಭತ್ಸವನ್ನು ಸೂಚಿಸುತ್ತದೆ.

ವೈದ್ಯವೃತ್ತಿಯನ್ನು ಹೊಟ್ಟೆಕಿಚ್ಚಿನಿಂದ ನೋಡುವ ಅಥವ ವೈದ್ಯರನ್ನು ಉನ್ನತಶಿಖರದಮೇಲಿಟ್ಟು ವೈಭವೀಕರಿಸುವ ಹಾಗು ದಾಸ್ಯಭಾವದಿಂದ ನೋಡುವ ಅನೇಕ ಭಾರತೀಯರಿಗೆ ಶಾಕ್ ಕೊಡಲೋಸುಗವೋ ಎಂಬಂತೆ, ವೈದ್ಯರು ಎದುರಿಸಬೇಕಾದ ಅಸಹ್ಯ ಸಂದರ್ಭಗಳನ್ನು (ಸ್ವಲ್ಪ ಅಗತ್ಯಕ್ಕಿಂತ ಹೆಚ್ಚಾಗಿಯೇ) ವಿವರಿಸುವುದರಮೂಲಕ ತಮ್ಮ ವೃತ್ತಿಯ ಅಸಹಾಯಕತೆಯನ್ನು ಬಹಿರಂಗಪಡಿಸುತ್ತಾರೆ ಮತ್ತು ನಿರ್ವೈಭವೀಕರಿಸುತ್ತಾರೆ. ಪ್ರಪಂಚದ ಅತ್ಯಂತ ಶ್ರೀಮಂತ ದೇಶವೆನ್ನಿಸಿಕೊಳ್ಳುವ ಅಮೆರಿಕದ ವೈದ್ಯಕೀಯ ವ್ಯವಸ್ಥೆಯ ಹಲವೊಂದು ದೌರ್ಬಲ್ಯಗಳನ್ನು ನಿಷ್ಠುರವಾಗಿ ಮತ್ತು ಮಾರ್ಮಿಕವಾಗಿ ವಿಮರ್ಶಿಸುವುದರಲ್ಲಿ ಗುರುಪ್ರಸಾದ್ ಸಾಕಷ್ಟು ವಿಜಯವನ್ನು ಗಳಿಸಿದ್ದಾರೆ. ಏನಕೇನಪ್ರಕಾರೇಣ ದುಡ್ಡು ದೋಚುವ ಔಷಧ ಸಂಶೋಧನೆ ಮತ್ತು ಕೊಳ್ಳೆ ಹೊಡೆಯುವ ವ್ಯಾಪಾರೀಮನೋಭಾವವನ್ನು ಬೆತ್ತಲು ಮಾಡುವುದರಲ್ಲಿ ಕೂಡ ಸಫಲರಾಗಿದ್ದಾರೆ.

ಇನ್ನೂ ಓದದೇ ಇರುವವರನ್ನು ಮನಸ್ಸಿನಲ್ಲಿಟ್ಟುಕೊಂಡು, ಕತೆಯ ವಿವರಗಳಿಗೆ ಕೈಹಾಕದೇ ಮುಂದುವರೆಯುತ್ತೇನೆ. ಕಥೆಗಿಂತ ಕಥಾನಕಕ್ಕೇ ಹೆಚ್ಚು ಒತ್ತುಕೊಟ್ಟಿರುವುದರಿಂದ, ಇಲ್ಲಿ ಅಂಥ ಹೇಳಬಹುದಾದ ಕಥೆ ಏನೂ ಇಲ್ಲವೆಂದೇ ಹೇಳಬೇಕು. ಮಾಮೂಲು ದೃಷ್ಟಿಕೋಣದಲ್ಲಿ ನೋಡಿದರೆ, ಇಲ್ಲಿ ನಾಯಕ ನಾಯಕಿ, ಖಳನಾಯಕರೂ ಇಲ್ಲ. ನಾಯಕ ಎನ್ನಿಸಿಕೊಳ್ಳುವ ಶ್ರೀಧರ ಮತ್ತು ಅವನ ಅವಳಿ ಸಹೋದರಿ ರಶ್ಮಿ ಪ್ರಮುಖ ಪಾತ್ರಗಳು. ಅವರಿಬ್ಬರೂ ಒಂದೇ ಪಾತ್ರದ ಪೂರಕಗಳೂ ಮಾರಕಗಳೂ ಆಗಿ ನಾಣ್ಯದ ಎರಡು ಮುಖಗಳಾಗುತ್ತಾರೆ.

ಗಂಡಿನ ಹೆಣ್ಣುತನವನ್ನು ತೋರುವ ಶ್ರೀಧರನ ಮತ್ತು ಹೆಣ್ಣಿನ ಗಂಡುತನವನ್ನು ತೋರುವ ರಶ್ಮಿಯ ಪಾತ್ರಗಳು ಪರಸ್ಪರ ಸವಾಲು ಪ್ರತಿಸವಾಲುಗಳಾಗಿ ಬೆಳೆಯುತ್ತವೆ. ಇವರ ಏಕತೆಯಂತೆ ತೋರುವ ದ್ವಂದ್ವವೂ ಬುದ್ಧಿಪೂರ್ವಕವಾಗಿಯೇ ಕಾದಂಬರಿಕಾರರು ಉಪಯೋಗಿಸಿರುವ ತಂತ್ರವಿದ್ದರೂ ಇರಬಹುದು ಎಂಬ ಅನುಮಾನ ಓದುಗರನ್ನು ಕಾಡುತ್ತದೆ. ಅದು ಹೇಗೇ ಇರಲಿ, ಪುಸ್ತಕ ಓದುಗರಲ್ಲಿ ಕೊನೆಯ ತನಕ ಕುತೂಹಲವನ್ನು ಇರಿಸಿಕೊಂಡು ಸರಾಗವಾಗಿ ಓದಿಸಿಕೊಳ್ಳುತ್ತದೆ. ಉತ್ತಮ ರಚನಾಕೌಶಲದಿಂದ ಉತ್ಪನ್ನವಾದ ಈ ಕಾದಂಬರಿಯ ದೌರ್ಬಲ್ಯವಿರುವುದು ಪಾತ್ರಗಳ ಬೆಳವಣಿಗೆ ಸಾಕಷ್ಟು ಆಳವನ್ನು ತಲುಪದೇ ತೇಲುತನವನ್ನು ಪ್ರದರ್ಶಿಸುವುದರಲ್ಲಿ ಎನ್ನಿಸುತ್ತದೆ. ಓದಿದಮೇಲೆ ಯಾವ ಪಾತ್ರವಾಗಲೀ ಸನ್ನಿವೇಶಗಳಾಗಲೀ ಮತ್ತೆ ಮತ್ತೆ ಬಂದು ಮನಸ್ಸನ್ನು ಕಾಡುವಷ್ಟು ಶಕ್ತಿಶಾಲಿಗಳಾಗದಿದ್ದರೂ ಅವುಗಳ ಅಸಹಾಯಕತೆಯನ್ನು ಕುರಿತು ಚಿಂತಿಸುವಂತೆ ಮಾಡುವಷ್ಟು ಪರಿಣಾಮಕಾರಿಯಾಗಿವೆ.

ಕೊನೆಯದಾಗಿ, ಕಾದಂಬರಿ ಓದುವಾಗ ನಾನು ಗಮನಿಸಿದ ಒಂದು ಮುಖ್ಯವಿಷಯವೆಂದರೆ ಕನ್ನಡವಲ್ಲದ ವಾತಾವರಣದಲ್ಲಿ ನಡೆಯುವ ಕತೆಯನ್ನು ಕನ್ನಡದಲ್ಲಿ ಹೇಳುವಾಗ ಬಳಸಿರುವ ಭಾಷೆ. (ಇದನ್ನು ಅನಂತಮೂರ್ತಿಯವರೂ ಗಮನಿಸಿ ಪ್ರಸ್ತಾಪಿಸಿದ್ದಾರೆ.) ವಿಶೇಷವಾಗಿ ಹಲವು ಇಂಗ್ಲಿಷ್ ಭಾಷೆಯ ಬಳಕೆಯನ್ನು ಕನ್ನಡಕ್ಕೆ ತರುವ ಅನುವಾದದಬಗ್ಗೆ ನಾನು ಹೆಚ್ಚು ಗಮನಕೊಟ್ಟೆ.

ಅಮೇರಿಕದ ಜೀವನವನ್ನು ಎಲ್ಲ ಕನ್ನಡಿಗರಿಗೂ ಅರ್ಥವಾಗಿಸಲು ಹಲವಾರು ಹೊಸ ಶಬ್ದಗಳ ಸೃಷ್ಟಿ ಆಗುತ್ತಲೇ ಇದೆ ಮತ್ತು ಅಗುತ್ತಲೇ ಇರಬೇಕು. ಇಂಥ ಹೊಸ ಶಬ್ದಗಳ ಮತ್ತು ಪದಗುಚ್ಛಗಳ ಒಂದು ನಿಘಂಟಿನ ಅಗತ್ಯ ಇದೆ ಎಂದು ನನಗೆ ಅನ್ನಿಸುತ್ತಿದೆ. "ಬಿಳಿಯ ಚಾದರ"ದಲ್ಲಿ ನನ್ನ ಗಮನಕ್ಕೆ ಬಂದ ಹಲವು ಉದಾಹರಣೆಗಳನ್ನು ಪಟ್ಟಿಮಾಡಿದ್ದೇನೆ.

(1) "ಪ್ರಾಣಪಾಲಕರು" = ಅಪಘಾತಗಳಾದಾಗ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನ ಅಪಘಾತದ ಸ್ಥಳಕ್ಕೆ ಬಂದು ಸೇರುವ "ರೆಸ್ಕ್ಯೂ ಸ್ಕ್ವಾಡಿ"ನ ಸದಸ್ಯರು.

(2) "ಅಷ್ಟದಶಕಿಗಳು" = ಎಂಬತ್ತು ವಯಸ್ಸು ಮೀರಿದ "ಆಕ್ಟಾಗನೇರಿಯನ್ಸ್."

(3)"ಗಣಕಿ" = ಗಣಕಯಂತ್ರದಲ್ಲಿ ನಿಪುಣ, (ಕಂಪ್ಯೂಟರ್ ಎಕ್ಸ್‍ಪರ್ಟ್).

(4) ಕಂಪನಿಯನ್ನು "ತೇಲಿಸು" = ಟು ಫ್ಲೋಟ್ ಎ ಕಂಪನಿ.

(5) "ಮೃದುಯಂತ್ರ" = ಸಾಫ್ಟ್‍ವೇರ್.

(6) "ಮೃದುಯಂತ್ರಿ" = ಸಾಫ್ಟ್‍ವೇರ್ ಇಂಜಿನಿಯರ್.

(7) "ಘನಯಂತ್ರ" = ಹಾರ್ಡ್‍ವೇರ್.

(8) "ಘನಯಂತ್ರಿ" = ಹಾರ್ಡ್‍ವೇರ್ ಇಂಜಿನಿಯರ್.

(9) "ಐದಂಕಿಯ ಸಂಬಳ" = ಫೈವ್ ಫಿಗರ್ ಸ್ಯಾಲರಿ.

(10) "ತೊಡೆಯಮೇಲಿಗ" = ಲ್ಯಾಪ್‍ಟಾಪ್ ಕಂಪ್ಯೂಟರ್.

(11) "ಟೀ ಚೌಕ" = ಟೀ ಸ್ಕ್ವೇರ್

(12) "ಗುರುಕುಲ" = ವಿಶ್ವವಿದ್ಯಾಲಯ/ಕಾಲೇಜು.

(13) "ಹಾರುವ ಬಣ್ಣ"ಗಳಿಂದ ಹೊರಬಂದಳು = ಗ್ರ್ಯಾಜುಯೇಟೆಡ್ ವಿತ್ ಫ್ಲೈಯಿಂಗ್ ಕಲರ್ಸ್

(14) "ಮರಳ ಕಣಿವೆ" = ಸಿಲಿಕಾನ್ ವ್ಯಾಲಿ

(15) "ಹ್ಯಾರಿಯಮಗ/ಡೇವಿಡ್ಮಗ/ಜಾನ್ಮಗ" ಇತ್ಯಾದಿ = ಹ್ಯಾರಿಸನ್, ಡೇವಿಡ್ಸನ್, ಜಾನ್ಸನ್ ಇತ್ಯಾದಿ ಹೆಸರುಗಳು.

(16) "ಅರಿವಳಿಕೆ" = ಅನೆಸ್ಥೀಸಿಯ

(17) "ಸೂರ್ಯನ ಕೆಳಗಿರೋ ಎಲ್ಲಾ ಟೆಸ್ಟುಗಳೂ" = ಆಲ್ ಪಾಸಿಬಲ್ ಟೆಸ್ಟ್ಸ್ ಅಂಡರ್ ದಿ ಸನ್

(18) "ಶುರುವಾತಿನ ಇಂಕ್" = ಸ್ಟಾರ್ಟ್ ಅಪ್ ಕಂಪನಿ

(19) "ಉಪೋಪೋಪೋಪ ಗುತ್ತಿಗೆದಾರರು" = ಸಬ್-ಸಬ್-ಸಬ್ ಕಾಂಟ್ರ್‍ಯಾಕ್ಟರ್ಸ್

(20) "ನಾಕುನೂರ್‍ಅರ ನಂತರದ ಬೆಸಸಂಖ್ಯೆಯ ನಿವೃತ್ತಿಯೋಜನೆ" = ೪೦೧-ಕೆ ಪ್ಲ್ಯಾನ್

(21) "ವಿಯಟ್ನಾಮ್ ಯುದ್ಧವೀರ" = ವಿಯಟ್ನಾಮ್ ವೆಟರನ್

(22) "ರಕ್ತದುಂಡೆಗಳು" = ಬ್ಲೆಡ್ ಕ್ಲಾಟ್ಸ್

(23) "ಸೂಳೆ ಗರತಿ ಅಲ್ಲ, ಪ್ಲ್ಯಾಸ್ಟಿಕ್ ಸರ್ಜನ್ ಧನ್ವಂತ್ರಿ ಅಲ್ಲ" = ಒಂದು ಹೊಸ ಅಮೆರಿಕನ್ನಡ ಗಾದೆ!

(24) ಅವನು ಕೆಲದಿನಗಳಿಂದ ಬೆಟ್ಟಿಯನ್ನು "ನೋಡುತ್ತಿದ್ದಾನೆ" = ಹಿ ಹ್ಯಾಸ್ ಬೀನ್ "ಸೀಯಿಂಗ್" ಬೆಟ್ಟಿ ಫಾರ್ ಎ ವ್ಹೈಲ್, ಅರ್ಥಾತ್ ಅವಳನ್ನು ಡೇಟ್ ಮಾಡುತ್ತಿದ್ದಾನೆ.

(25) "ನಿಮ್ನ ನಗರ" = ಡೌನ್ ಟೌನ್ (ಪೇಟೆ).

(26) "ಹಡಗಿನಿಂದ ಈಗ ಇಳಿದವನು" = ಎಫ್-ಓ-ಬಿ/ಫಾಬ್ = ಫ್ರೆಷ್ ಆಫ್ಫ್ ದ ಬೋಟ್.

(27) "ಗೋಡೆಬೀದಿಯ ಸಾಪ್ತಾಹಿಕ" = ವಾಲ್ ಸ್ಟ್ರೀಟ್ ವೀಕ್ಲಿ ಜರ್ನಲ್

(28) "ಪಾಳಯ" = ಷಿಫ್ಟ್. ಮುಂತಾದವು.

ಇಂಥ ಭಾಷಾಂತರಗಳಲ್ಲಿ ಹಲವು ಕೃತಕವೆನ್ನಿಸುವುದು ಸಹಜ. ಉಪಯೋಗಿಸುತ್ತಾ ಹೋದಲ್ಲಿ ಸಹಜವಾಗಿ ತೋರಬಹುದು. ಒಟ್ಟಿನಲ್ಲಿ, ಭರವಸೆ ಹುಟ್ಟಿಸಿರುವ ಈ ತರುಣ ಕಾದಂಬರಿಕಾರ ಮತ್ತು ಕಿರಿಯ ಗೆಳೆಯ ಡಾ. ಗುರುಪ್ರಸಾದ್ ಕಾಗಿನೆಲೆ ಅಮೆರಿಕದ ಕನ್ನಡಿಗರಲ್ಲಿ ಕನ್ನಡದಲ್ಲಿ ಬರೆಯುತ್ತಾ ಇರಬೇಕಾದವರ ಪೈಕಿ ಒಬ್ಬರು.

ಕಾದಂಬರಿಯ ಪ್ರತಿ ಬೇಕಾದವರು ಮನೋಹರಗ್ರಂಥ ಮಾಲಾ (ಧಾರವಾಡ) ಅಥವ ಗುರುಪ್ರಸಾದರನ್ನು ಸಂಪರ್ಕಿಸಬಹುದು. (gkaginele@gmail.com) ಇವರಿಗೆ ಹೆಚ್ಚು ಹೆಚ್ಚು ಬರೆಯುವ ಸ್ಫೂರ್ತಿ ದೊರಕಲೆಂದು ಶುಭಕೋರುತ್ತಾ ವಿರಮಿಸುವೆ ಮುಂದಿನ ಕಂತಿನವರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more