ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವೂ ಕನ್ಯಾದಾನ ಮಾಡಿಬಿಟ್ಟೆವು!

By Staff
|
Google Oneindia Kannada News


ಇದೊಂದು ಅತ್ಯಂತ ವೈಯಕ್ತಿಕ ಅನುಭವವಾದರೂ ಬೇಕಾದವರೊಂದಿಗೆ ಹಂಚಿಕೊಳ್ಳಲು ಯೋಗ್ಯವಾದದ್ದು.


I fulfill my responsibilities!ಮಗಳ ಮದುವೆಯ ಭರಾಟೆಯಲ್ಲಿ ದಿನಗಳು ಉರುಳಿದ್ದೇ ಗೊತ್ತಾಗಲಿಲ್ಲ. ಜಾಲತರಂಗದ ಓದುಗರಬಗ್ಗೆ ಗಮನ ಹರಿಸಲು ಸಾಧ್ಯವಾಗದೇ ಇದ್ದದ್ದು ಅನಿರೀಕ್ಷಿತವೇನಲ್ಲ. ಹೀಗಾಗಿ ಹಲವು ವಾರಗಳ ಬಿಡುವಿನ ನಂತರ ನಿಮ್ಮೊಂದಿಗೆ ಭೇಟಿ.

ಜೂನ್ 24, ಭಾನುವಾರ ನಮ್ಮ ಮಗಳು ಶ್ರುತಿ-ರಂಜನಿಯನ್ನು ದಿನೇಶನೆಂಬ ವರನಿಗೆ ಧಾರೆ ಎರೆದು ಕೊಟ್ಟೆವು. ಈ ಸಂದರ್ಭದ ಅಂಗವಾಗಿ ನಮ್ಮ ಬಂಧು-ಮಿತ್ರರನೇಕರ ಸಮ್ಮುಖದಲ್ಲಿ ಸರಳವೂ ಸುಂದರವೂ ಆದ ಸಮಾರಂಭವೊಂದನ್ನು ಏರ್ಪಡಿಸಬೇಕೆಂಬುದು ನಮ್ಮ ಕುಟುಂಬದ ಎಲ್ಲ ಸದಸ್ಯರ ಇಚ್ಛೆಯಾಗಿತ್ತಾದರೂ, ಸರಳ, ಸುಂದರ, ಬಂಧು, ಮಿತ್ರ, ಮುಂತಾದ ಶಬ್ದಗಳ ಅರ್ಥ ಒಬ್ಬೊಬ್ಬರಿಗೆ ಒಂದೊಂದೊಂದು ರೀತಿ ತೋರುವುದರಿಂದ ಎಲ್ಲರ ಇಚ್ಛೆಯನ್ನೂ ಕಾರ್ಯರೂಪಕ್ಕಿಳಿಸುವಾಗ ಸಾಕಷ್ಟು ಶ್ರಮಪಡಬೇಕಾಯಿತು.

ಹಿಂದೆ, ಎಲ್ಲ ತೀರ್ಮಾನಗಳನ್ನೂ ವಧೂ-ವರರ ತಂದೆತಾಯಿಗಳು ಮಾಡುತ್ತಿದ್ದರು. ಹುಡುಗ ಹುಡುಗಿ ಸುಮ್ಮನೆ ಮದುವೆ ಮಾಡಿಕೊಳ್ಳುತ್ತಿದ್ದರು. ಆದರೆ, ಇಂದು ಮದುವೆಯಾಗುವ ವರ ಮತ್ತು ವಧುವಿನಿಂದ ಮೊದಲುಗೊಂಡು ಅನೇಕರ ಅಭಿಪ್ರಾಯಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳ ಏರ್ಪಾಟಾಗಬೇಕಾಗುತ್ತದೆ.

ಭಾರತದಿಂದ ಹಲವಾರು ಸಂಪ್ರದಾಯಗಳನ್ನು ಹೊತ್ತು ತಂದಿರುವ ನಮಗೆ, ಭಾರತದಲ್ಲಿ ದೊರಕುವ ಅನುಕೂಲಗಳಾಗಲೀ ವಸ್ತುಗಳಾಗಲೀ ಸುಲಭವಾಗಿ ದೊರೆಯುವುದಿಲ್ಲ. ಆಳು-ಕಾಳುಗಳಿಲ್ಲದ ಕೊರತೆಯೊಂದಾದರೆ, ತೋರಣಕ್ಕೆ ಬೇಕಾದ ಮಾವಿನಸೊಪ್ಪಾಗಲೀ ಊಟಕ್ಕೆ ಬೇಕಾದ ಬಾಳೆ ಎಲೆಗಳಾಗಲೀ, ಹೆಣ್ಣಿನ ಅಲಂಕಾರಕ್ಕೆ ಬೇಕಾದ ಮಲ್ಲಿಗೆಯ ಹೂವಾಗಲೀ, ಮದುವೆಯ ವಾತಾವರಣವನ್ನುಂಟುಮಾಡುವ ಓಲಗದವರಾಲೀ, ಪ್ರತಿಯೊಂದಕ್ಕೂ ಕಷ್ಟಪಡಬೇಕಾಗುತ್ತದೆ.

ಕೊಬ್ಬರೀ ಗಿಟಕಿನ ಮೇಲೆ ಕೆತ್ತನೆ ಮಾಡಿ ಅಲಂಕರಿಸುವವರು ಯಾರು? ಬಾಗಿಣಕ್ಕೆ ಚಕ್ಕುಲಿ, ಉಂಡೆಗಳನ್ನು ಮಾಡಿಕೊಡುವವರು ಯಾರು? ಯಾಕೀ ತಂಟೆ, ಭಾರತಕ್ಕೆ ಹೋದರೆ ಎಲ್ಲವನ್ನೂ ಮಾಡಿಕೊಡುವ ಜನರಿದ್ದಾರೆ, ಹಣವೊಂದನ್ನು ಧಾರಾಳವಾಗಿ ಸುರಿದರೆ, ಆರಾಮಾಗಿ ಕೈಬೀಸಿಕೊಂಡು ಹೋಗಿ ಬೀಗರಂತೆ ವರ್ತಿಸಬಹುದು. ಹೂವು, ಚಪ್ಪರ, ಎಲೆ ಅಡಿಕೆ, ಊಟ, ಉಪಚಾರ, ತಾಂಬೂಲ ಎಲ್ಲಕ್ಕೂ ಜನರಿದ್ದಾರಂತೆ. ಏನು ಕೊಡಬೇಕು, ಎಷ್ಟು ಕೊಡಬೇಕು, ಯಾರುಯಾರಿಗೆ ಕೊಡಬೇಕು, ಎಲ್ಲವನ್ನೂ ಮುಂಗಡವಾಗಿ ತಿಳಿದುಕೊಂಡು ಅವರವರ ಅಂತಸ್ತಿಗೆ ತಕ್ಕಂತೆ ಎಲ್ಲರನ್ನೂ ಉಪಚರಿಸುವ ಜವಾಬ್ದಾರಿಯನ್ನು ಅವರೇ ವಹಿಸಿಕೊಳ್ಳುತ್ತಾರಂತೆ.

ಪುರೋಹಿತರಿಗೆ ಚಿಲ್ಲರೆ ಬೇಕಾದರೆ ಚಿಲ್ಲರೆ, ನೋಟು ಬೇಕಾದರೆ ನೋಟು, ದಿಬ್ಬಣವನ್ನು ಸ್ವಾಗತಿಸಲು ವಾಹನ, (ಕಾರು ಬೇಸರವಾದರೆ, ಕುದುರೆ ಗೊತ್ತುಮಾಡಿಕೊಳ್ಳಬಹುದು. ಇತ್ತೀಚೆಗೆ ಒಬ್ಬ ವರನನ್ನು ಆನೆಯ ಮೇಲೆ ಕೂರಿಸಿಕೊಂಡು ಬಂದದ್ದನ್ನು ನಾನು ವೀಡಿಯೋದಲ್ಲಿ ನೋಡಿದ್ದೇನೆ!) ಏನು ಬೇಕಿದ್ದರೂ ನಿಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರಾಯಿತು, ಪ್ರತಿಯೊಂದೂ ಸಿದ್ಧ! ದೀಪದ ಕಂಬ, ಚೊಂಬು ತಟ್ಟೆ ಮುಂತಾದ ಬೆಳ್ಳಿ ಸಾಮಾನುಗಳನ್ನೂ ಎರವಲು ಪಡೆಯಬಹುದಂತೆ. ಚಿನ್ನಾಭರಣಗಳಿಂದ ಕಳ್ಳ-ಕಾಕರ ಭಯವೆಂಬ ಕಾರಣದಿಂದ ಸೀರೆ ಕುಪ್ಪುಸಗಳ ಜೊತೆಗೇ ಅದಕ್ಕೆ ಮ್ಯಾಚ್ ಆಗುವ ಕೃತಕ, ಆದರೂ ಸುಂದರವಾದ ಆಭರಣಗಳು ಸಿಕ್ಕುತ್ತವಂತೆ. ಹೆಣ್ಣಿಗೆ ಮುಖಾಲಂಕಾರ ಮತ್ತು ಕೇಶಾಲಂಕಾರ ಮಾಡಲು, ಜನರಿದ್ದಾರಂತೆ.

ದೊಡ್ಡ ಕುದುರೆಯ ಚೇಷ್ಟೆ ಬೇಡದಿದ್ದರೂ ಒಂದಿಷ್ಟಾದರೂ ಚೇಷ್ಟೆ ಇಲ್ಲದಿದ್ದರೆ ಮದುವೆ ಮನೆಯ ಕಳೆ ಕಟ್ಟುವುದಿಲ್ಲ. ಅಂತೂ, ಭಾರತದಲ್ಲಿ ನಡೆಸುವಂತೆ ಇಲ್ಲಿ ನಡೆಸಲಾಗದಿದ್ದರೂ, ಇಲ್ಲಿನ ಇತಿಮಿತಿಗಳಲ್ಲಿ ಮಾಡಲು ಸಾಧ್ಯವಾದಷ್ಟನ್ನು ಸಂತೋಷದಿಂದ ಮಾಡಿದೆವು. ಮನೆಯ ಮುಂದೆ ಒಂದು ಸಣ್ಣ ಚಪ್ಪರವನ್ನು ನಾವೇ ಹಾಕಿ, ಫ್ಲೋರಿಡಾದಿಂದ ಚಿಗುರು ಮಾವಿನೆಲೆಯನ್ನು ತರಿಸಿ ಅಲಂಕರಿಸಿದೆವು. ಮೂರು ಘಂಟೆಗಳ ನಿಯಮಿತ ಸಮಯದಲ್ಲೇ ಎಲ್ಲಾ ವಿಧಿಗಳನ್ನೂ ಅನುಸರಿಸಿದೆವು. ಟೊರಾಂಟೊದಿಂದ ನಾದಸ್ವರದವರನ್ನೂ ಕರೆಸಿ ನಮ್ಮ ಆಸೆಯನ್ನು ಪೂರೈಸಿಕೊಂಡೆವು.

ಮದುವೆಯಾದನಂತರ ನಮ್ಮೂರಿನಂತೆಯೇ ಭೋಜನ, ಆದರೆ ತಟ್ಟೆಯಲ್ಲಿ. ಆಹ್ವಾನಿತ ಬಂಧು-ಮಿತ್ರರೆಲ್ಲ ಸಹಕರಿಸಿ ಲೋಪದೋಷಗಳನ್ನು ಗಮನಿಸದೇ ಮನಸಾರೆ ಹರಸಿ ಹಿಂದಿರುಗಿದರು. ನಮ್ಮ ಸಮುದಾಯದ ಮಿತ್ರರು ಅನೇಕರು ಇದು ತಮ್ಮ ಮನೆಯ ಮದುವೆಯೋ ಎಂಬಂತೆ ಓಡಾಡಿ ಅತ್ಯಂತ ಪ್ರೀತಿ ಅಭಿಮಾನಗಳನ್ನು ಪ್ರದರ್ಶಿಸಿ ನಮ್ಮನ್ನು ಮೂಕರನ್ನಾಗಿಸಿದರು. ನೆಂಟರಿಷ್ಟರನ್ನು ಕಳಿಸಿಕೊಟ್ಟಾದಮೇಲೆ ಮನೆಯೆಲ್ಲಾ ಭಣ-ಭಣ.

ಇದೊಂದು ಅತ್ಯಂತ ವೈಯಕ್ತಿಕ ಅನುಭವವಾದರೂ ಬೇಕಾದವರೊಂದಿಗೆ ಹಂಚಿಕೊಳ್ಳಲು ಯೋಗ್ಯವಾದದ್ದು. ಕೊನೆಯ ಒಂದೆರಡು ದಿನಗಳಲ್ಲಿ ತೋಚಿದ ಹಲವು ಸಾಲುಗಳನ್ನು ಕಲೆಹಾಕಿದಾಗ ಅವಕ್ಕೊಂದು ಕವನರೂಪ ಬಂತು. (ಕವನ ಅನ್ನುವುದಕ್ಕಿಂತ ಇದೊಂದು ಗ-ಪದ್ಯ ಎನ್ನಬಹುದೇನೋ?) ಔತಣಾಂಗಣದಲ್ಲಿ ಭೋಜನಕ್ಕೆ ಮುನ್ನ ಓದಿದ ಈ ಕವನವನ್ನು ಜಾಲತರಂಗದ ಓದುಗರೊಂದಿಗೆ ಹಂಚಿಕೊಂಡರೆ ಅಪ್ರಸ್ತುತವಾಗಲಾರದು ಎಂಬ ನಂಬಿಕೆಯೊಂದಿಗೆ ನಿಮ್ಮ ಮುಂದಿಟ್ಟು ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X