• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುರಂದರದಾಸರು ಎಷ್ಟು ಕೃತಿಗಳನ್ನು ರಚಿಸಿದ್ದಿರಬಹುದು?

By Staff
|

ಪುರಂದರ ದಾಸರು ಸುಮಾರು ಮೂರು-ನಾಲ್ಕು ಸಾವಿರ ಕೃತಿಗಳನ್ನು ರಚಿಸಿದ್ದರೆನ್ನುವುದಕ್ಕೆ ಯಾವ ಅಭ್ಯಂತರವೂ ಇರಕೂಡದು. ಆದರೆ, ನಾಲ್ಕು ಲಕ್ಷದ ಎಪ್ಪೈತ್ತೈದು ಸಾವಿರ ಎಂದು ಹೇಳಲು ಆಧಾರಗಳನ್ನು ಕಲ್ಪಿಸುವುದು ತುಂಬಾ ಕಷ್ಟವಾಗುತ್ತದೆ! ಈ ಬಗ್ಗೆ ಒಂದು ಜಿಜ್ಞಾಸೆ.

Purandaradasaಲೆಕ್ಕವಿಲ್ಲದಷ್ಟು ದೇವರನಾಮಗಳನ್ನು ರಚಿಸಿದ ಶ್ರೀ ಪುರಂದರದಾಸರನ್ನು ಕರ್ನಾಟಕ-ಸಂಗೀತ-ಪಿತಾಮಹ ಎಂದು ನಾವು ಗೌರವಿಸುತ್ತೇವೆ. ಅವರ ಜೀವನ ಮತ್ತು ಅವರ ಕೊಡುಗೆಗಳ ಬಗ್ಗೆ ಸಾಕಷ್ಟು ದಂತಕತೆಗಳಿವೆ. ಇಂಥ ಕತೆಗಳಲ್ಲಿ ಒಂದು ಪ್ರಸಿದ್ಧವಾದ ಕತೆ, ಮೂಗುತಿಯ ಪ್ರಕರಣ. ಶ್ರೀನಿವಾಸ ನಾಯಕ (ಶೀನಪ್ಪ ನಾಯಕ) ಎಂಬ ಶ್ರೀಮಂತ, ಆದರೆ ಕೃಪಣ, ಚಿನ್ನದ ವ್ಯಾಪಾರಿ ಶ್ರೀಮನ್ನಾರಾಯಣನ ಭಕ್ತನಾದ ವೃತ್ತಾಂತ ಇಲ್ಲಿ ಬರುತ್ತದೆ.

ಹೆಂಡತಿಯು ದಾನವಿತ್ತ ವಜ್ರದ ಮೂಗುತಿಯ ಕಾರಣ ನಡೆಯುವ ಒಂದು ಘಟನೆಯೇ ಶೀನಪ್ಪ ನಾಯಕ ಭೌತಿಕಜಗತ್ತಿನ ಆಸೆಗಳನ್ನು ತೊರೆದು ಪಾರಮಾರ್ಥಿಕದೆಡೆಗೆ ಹೆಜ್ಜೆ ಇಡಲು ನಾಂದಿಯಾಗುತ್ತದೆ. ಅಂದಿನಿಂದ ಈ ಕಡು ಕೃಪಣ ವ್ಯಾಪಾರಿ ಪುರಂದರ ವಿಠಲನ ಭಕ್ತನಾಗಿ ಮುಂದೆ ಪುರಂದರದಾಸರೆಂಬ ಹೆಸರಿನಿಂದ ಸುಪ್ರಸಿದ್ಧರಾಗುತ್ತಾರೆ. ದಾಸವೃತ್ತಿಯನ್ನು ಹಿಡಿದಮೇಲೆ ಲೆಕ್ಕವಿಲ್ಲದಷ್ಟು ದೇವರನಾಮಗಳನ್ನು ರಚಿಸುತ್ತಾರೆ. ದಾಸರಬಗ್ಗೆ ಓದುವ ಅನೇಕ ಲೇಖನಗಳಲ್ಲಿ ಪುರಂದರದಾಸರು 4,75,000 (ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ) ಕೃತಿಗಳನ್ನು ರಚಿಸಿದರು ಎಂಬ ಮಾತು ಪ್ರಚಲಿತವಾಗಿದೆ.

ದಾಸರು, ಕ್ರಿ.ಶ. 1480 ರಿಂದ 1564 ರ ವರೆಗೆ ಅಂದರೆ, ಸುಮಾರು 84 ವರ್ಷಗಳ ದೀರ್ಘಜೀವನವನ್ನು ನಡೆಸಿ ವೈಕುಂಠ ಸೇರುತ್ತಾರೆ. ಇವರು ನಿಜವಾಗಿಯೂ ಎಷ್ಟು ಕೃತಿಗಳನ್ನು ರಚಿಸಿರಲು ಸಾಕು? ಈ ಪ್ರಶ್ನೆಗೆ ಉತ್ತರವನ್ನು ಅಂದಾಜು ಮಾಡಬಹುದೇ ವಿನಃ ನಿರ್ದಿಷ್ಟವಾದ ಸಂಖ್ಯೆಯನ್ನು ನಿರ್ಧರಿಸಲಾಗುವುದಿಲ್ಲ.

ನಮಗೆ ದೊರಕುವ ಆಧಾರಗಳ ಪ್ರಕಾರ, ದಾಸರಾಗುವ ಮುನ್ನ, ಶೀನಪ್ಪ ಚಿನ್ನ-ಬೆಳ್ಳಿ ವ್ಯಾಪಾರದಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದ ಸಂಸಾರಿ. ಆಗಿನ ಪದ್ಧತಿಯಂತೆ ಸುಮಾರು 20 ರಿಂದ 25 ವಯಸ್ಸಿನೊಳಗೆ ಮದುವೆಯಾಗಿ ವ್ಯಾಪಾರದಲ್ಲಿ ತಳವೂರಿ ಶ್ರೀಮಂತನಾಗುವ ವೇಳೆಗೆ, ಶೀನಪ್ಪನಿಗೆ ಸುಮಾರು 30 ರಿಂದ 35 ವಯಸ್ಸಾಗಿತ್ತು ಎಂದಿಟ್ಟುಕೊಳ್ಳೋಣ. ಇಂತಿಷ್ಟೇ ವಯಸ್ಸಿನಲ್ಲಿ ಆತ ಸಂಸಾರವನ್ನು ತೊರೆದು ದಾಸವೃತ್ತಿಯನ್ನು ಹಿಡಿದನೆನ್ನುವುದು ಕಷ್ಟವಾದರೂ, ಮೂಗುತಿಯ ಘಟನೆ ನಡೆಯುವ ಹೊತ್ತಿಗೆ ಆತನಿಗೆ 35 ವಯಸ್ಸಾದರೂ ಆಗಿದ್ದಿರಬಹುದು ಎಂದು ಒಪ್ಪಿಕೊಂಡು ಮುಂದುವರೆಯೋಣ.

ಶೀನಪ್ಪ ತಾನು ವಾಸಿಸುತ್ತಿದ್ದ ನಗರವನ್ನು ಬಿಟ್ಟಮೇಲೆ ಮುಂದೇನು ನಡೆದಿದ್ದಿರಬಹುದು ಎಂಬುದನ್ನು ಊಹೆಯಿಂದ ಮಾತ್ರ ಕಂಡುಕೊಳ್ಳಬೇಕಾಗಿದೆ. ಆದರೆ, ಅವರು, ಶ್ರೀ ವ್ಯಾಸರಾಯರ ಶಿಷ್ಯವೃತ್ತಿಯಲ್ಲಿ ಹಲವು ವರ್ಷಗಳನ್ನು ಕಳೆದರು ಎಂಬುದಕ್ಕೆ ಸಾಕಷ್ಟು ಆಧಾರ ದೊರಕುತ್ತದೆ. ಆ ವರ್ಷಗಳಲ್ಲಿ ಅವರು ತತ್ತ್ವಶಾಸ್ತ್ರ, ಸಾಹಿತ್ಯ, ಸಂಗೀತ ಮುಂತಾದ ವಿಷಯಗಳ ಅಧ್ಯಯನ ಮಾಡಿದ್ದಿರಬೇಕು. ಅಂದಿನ ಕಾಲದ ಪದ್ಧತಿಯಂತೆ ವ್ಯಾಪಾರಿಯಾಬ್ಬನ ಮಗ ಮದುವೆಗೆ ಮುಂಚೆ ಒಂದಿಷ್ಟು ಅಧ್ಯಯನ ಮಾಡಿದ್ದಿರಲೂ ಬಹುದು. ಅಥವಾ ಇತರರಿಗಿಂತ ಹೆಚ್ಚಿನ ಅಧ್ಯಯನವನ್ನು ಮಾಡಿದ್ದರೂ ಮಾಡಿರಬಹುದು.

ದಾಸವೃತ್ತಿಯನ್ನು ಹಿಡಿಯುವ ಮುನ್ನ ಅವರ ವಿದ್ಯಾಭ್ಯಾಸ ಯಾವ ಮಟ್ಟವನ್ನು ತಲುಪಿತ್ತೋ ಹೇಳವುದು ಕಷ್ಟ. ಆದರೆ, ಅವರ ಕೃತಿಗಳನ್ನು ಕೊಂಚ ಗಮನವಿಟ್ಟು ಅಧ್ಯಯನಮಾಡಿದರೆ, ಅವರಿಗೆ ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಮನೋವಿಜ್ಞಾನ, ಮುಂತಾದ ವಿಷಯಗಳ ಆಳವಾದ ಪರಿಚಯವಿದ್ದಿತೆಂಬುದನ್ನು ಗಮನಿಸಬಹುದು. ಅಂದಿನ ಮಠಗಳ ಬೌದ್ಧಿಕ ವಾತಾವರಣದಲ್ಲಿ ಅವರು ಸಾಕಷ್ಟು ಸಮಯವನ್ನು ಕಳೆಯದೇ, ವಿದ್ವತ್‌ ಸಭೆಗಳಲ್ಲಿ ನಡೆಯುವ ಗಂಭೀರ ಚರ್ಚೆಗಳಲ್ಲಿ, ವಾದ-ವಿವಾದ-ಸಂವಾದ ಮತ್ತು ತರ್ಕಗಳಲ್ಲಿ ಭಾಗವಹಿಸದೇ ಇಂಥಾ ಪರಿಣತಿಯನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ.

ಶ್ರೀ ಪುರಂದರದಾಸರ ಪ್ರಾರಂಭದ ದಿನಗಳಲ್ಲಿ ಇಂಥ ಒಂದು ಅವಧಿ ಇತ್ತೆಂಬುದಕ್ಕೂ ಪುರಾವೆಗಳು ದೊರಕುತ್ತವೆ. ಈ ಘಟ್ಟ ತಲಪುವ ವೇಳೆಗೆ ದಾಸರಿಗೆ ಸುಮಾರು 40 ವಯಸ್ಸು ಎಂದಿಟ್ಟುಕೊಂಡರೆ ಪ್ರಾಯಶಃ ಯಾರೂ ಅಡ್ಡಿಮಾಡಲಾರರು. ಈ ವೇಳೆಗೆ ಅವರು ಸಂಗೀತ ರಚನೆಗೆ ಪ್ರಾರಂಭ ಮಾಡಿದ್ದರೂ ಮಾಡಿರಬಹುದು.

ದಾಸರ ಜೀವನದ ಅಂತ್ಯ ಬರುವುದು ಅವರಿಗೆ 80ಕ್ಕೂ ಹೆಚ್ಚು ವಯಸ್ಸಾದಮೇಲೆ. ಕೊನೆಯವರೆಗೂ ಅವರು ಸಂಪೂರ್ಣ ಆರೋಗ್ಯವಂತರಾಗಿದ್ದರೆಂದಿಟ್ಟುಕೊಳ್ಳೋಣ. ಹೀಗಾಗಿ ಅವರಿಗೆ ಸುಮಾರು ನಲವತ್ತು ವರ್ಷಗಳಷ್ಟು ಅವಧಿ ಕೃತಿರಚನೆ ಮಾಡಲು ಇದ್ದಿರಬೇಕು. ಎಲ್ಲ ಜೀವಿಗಳಂತೆ ಅವರೂ ನಿದ್ರೆ, ಊಟ, ಸಂಚಾರ, ನಿತ್ಯಕ್ರಿಯೆ, ಪೂಜೆ ಪುನಸ್ಕಾರ, ಜಪ-ತಪ, ಭಿಕ್ಷಾಟನೆ ಇವೆಲ್ಲಕ್ಕೂ ಕಾಲವ್ಯಯಮಾಡದೇ ವಿಧಿ ಇಲ್ಲ. ಈ ಸಂದರ್ಭದಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ನೆನಪುಮಾಡಿಕೊಳ್ಳಬಹುದು:

‘‘ಆಯುವರ್ಷ ಶತಾಂ ನೄಣಾಂ ಪರಿಮಿತಂ, ರಾತ್ರೌ ತದರ್ಧಂ ಗತಮ್‌

ತಸ್ಯಾರ್ಧಸ್ಯ ಪರಸ್ಯ ಸಾರ್ಧಮಪರಂ ಬಾಲತ್ವ ವೃದ್ಧತ್ವಯೋಃ

ಶೇಷಂ ವ್ಯಾಧಿ-ವಿಯೋಗ-ದುಃಖ-ಸಹಿತಂ ಸೇವಾದಿಭಿರ್ನೀಯತೇ

ಜೀವೇ ವಾರಿತರಂಗ ಬುದ್ಬುದ ಸಮೇ ಸೌಖ್ಯಂ ಕುತಃ ಪ್ರಾಣಿನಾಂ’’

ತಾತ್ಪರ್ಯ : ‘‘ಒಬ್ಬರ ಆಯುಷ್ಯ ನೂರು ವರ್ಷವಿದ್ದರೆ, ಅದರಲ್ಲರ್ಧ (ಸುಮಾರು 50 ವರ್ಷ) ರಾತ್ರಿ ನಿದ್ರೆಯಲ್ಲೇ ಕಳೆದುಹೋಗುತ್ತದೆ. ಅಸಹಾಯಕ ಶೈಶವ, ಮಕ್ಕಳಾಟಿಕೆ ಮತ್ತು ಹುಡುಗಾಟಿಕೆಯ ಕಾಲ ಮತ್ತು ಅಸಹಾಯಕ ವೃದ್ಧಾಪ್ಯ ಇವುಗಳಲ್ಲಿ ಇನ್ನೊಂದಿಪ್ಪತ್ತೈದು ವರ್ಷಗಳು ಹೋಗುತ್ತವೆ.

ಇನ್ನು ಖಾಯಿಲೆ ಕಸಾಲೆ, ಅವರಿವರನ್ನು ಕಳೆದುಕೊಂಡ ವಿಯೋಗ, ದುಃಖ, ಪರರ ಸೇವೆ ಇವುಗಳಿಗಾಗಿ ಇನ್ನೊಂದು 10-12 ವರ್ಷ ಕಳೆದು ಹೋದರೆ ಉಳಿದದ್ದೆಷ್ಟು? ಅಂದರೆ ನಿಜವಾದ ಕ್ರಿಯಾತ್ಮಕ ಕೆಲಸಕ್ಕೆ ಉಳಿಯುವುದು ಹತ್ತೋ ಹನ್ನೆರಡೋ ವರ್ಷಗಳು ಮಾತ್ರ. ಪೂರ್ಣಾಯುಸ್ಸು ಇಲ್ಲದವರೇ ಹೆಚ್ಚು ಈ ನೀರ್ಗುಳ್ಳೆಯಂಥ ಜೀವನದಲ್ಲಿ. ಇನ್ನು ಮನುಷ್ಯರಿಗೆ ಸುಖವೆಲ್ಲಿಂದ ಬರಬೇಕು?’’

ಪುರಂದರ ದಾಸರು ಸಾಮಾನ್ಯರಲ್ಲ, ಅವರು ಎಲ್ಲರಂತೆ ಸರಾಸರಿ ಉತ್ಪಾದಕತೆಯವರಲ್ಲ. ಆದ್ದರಿಂದ ಅವರಿಗಿದ್ದ ನಲವತ್ತು ವರ್ಷಗಳಲ್ಲಿ ಅವರಿಗೆ ಇಪ್ಪತ್ತಾದರೂ ಉತ್ಪಾದಕ ವರ್ಷಗಳು ಎಂದು ಇಟ್ಟುಕೊಳ್ಳೋಣ. ಅದರಲ್ಲಿ ಅರ್ಧದಷ್ಟು ಅಂದರೆ 10 ವರ್ಷಗಳು ಸಾಹಿತ್ಯ ರಚನೆಯಾದರೆ ಇನ್ನು ಹತ್ತನ್ನು ಸಂಗೀತರಚನೆ, ಸಂಗೀತಾಭ್ಯಾಸ, ಸಂಗೀತ ಪಾಠ ಮುಂತಾದ ಕೆಲಸಗಳಿಗೆ ವಿನಿಯೋಗಿಸಿದ್ದಿರಬಹುದು. 10 ವರ್ಷಗಳು = 3,650 ದಿನಗಳು. ದಿನಕ್ಕೊಂದರಂತೆ ಕೃತಿರಚನೆ ಮಾಡಿದ್ದರೂ ಅವರು ಸುಮಾರು 3,650 ಕೃತಿಗಳನ್ನು ರಚಿಸಿದ್ದಿರಬಹುದು. ಮೂರರಿಂದ ನಾಲ್ಕು ಸಾವಿರ ಎಂದು ದಪ್ಪ ಲೆಕ್ಕ ಇಟ್ಟುಕೊಳ್ಳೋಣ.

ಈಗ ನಮಗೆ ದೊರೆತಿರುವ ಪುರಂದರದಾಸಕೃತಿಗಳು ಸುಮಾರು ಒಂದು ಸಾವಿರದಷ್ಟು. ಅಂದರೆ ಸುಮಾರು ಎರಡು-ಮೂರು ಸಾವಿರ ಕೃತಿಗಳು ನಮ್ಮ ಕೈಗೆ ಸಿಕ್ಕಿಲ್ಲದೇಹೋಗಿರಬಹುದು. ದಾಸರು ಸುಮಾರು ಮೂರು-ನಾಲ್ಕು ಸಾವಿರ ಕೃತಿಗಳನ್ನು ರಚಿಸಿದ್ದರೆನ್ನುವುದಕ್ಕೆ ಯಾವ ಅಭ್ಯಂತರವೂ ಇರಕೂಡದು. ಆದರೆ, ನಾಲ್ಕು ಲಕ್ಷದ ಎಪ್ಪೈತ್ತೈದು ಸಾವಿರ ಎಂದು ಹೇಳಲು ಆಧಾರಗಳನ್ನು ಕಲ್ಪಿಸುವುದು ತುಂಬಾ ಕಷ್ಟವಾಗುತ್ತದೆ.

ಒಂದುವೇಳೆ ಸಾಹಿತ್ಯ ಸಂಗೀತ ಇವೆಲ್ಲ ಏಕಕಾಲದಲ್ಲೇ ರಚನೆಯಾಗಿರಬಹುದೆಂದು ಊಹಿಸಿದರೆ, ಇದರ ಎರಡರಷ್ಟು, ಅಂದರೆ ಸುಮಾರು ಆರರಿಂದ ಎಂಟು ಸಾವಿರ ಕೃತಿಗಳ ರಚನೆಯೂ ಸಾಧ್ಯ ಎನಿಸುತ್ತದೆ. ಇಡೀ ನಲವತ್ತು ವರ್ಷಗಳನ್ನೂ ಉತ್ಪಾದಕ ವರ್ಷಗಳೆಂದು ಪರಿಗಣಿಸಿದರೆ ಹನ್ನೆರಡರಿಂದ ಹದಿನಾರು ಸಾವಿರ ಕೃತಿಗಳ ರಚನೆಯೂ ಸಾಧ್ಯವಾಗುತ್ತದೆ. ಒಟ್ಟಿನಲ್ಲಿ, ದಾಸರು ಕನಿಷ್ಠ ಮೂರು ಸಾವಿರ, ಹೆಚ್ಚೆಂದರೆ ಹದಿನಾರು ಸಾವಿರ ಕೃತಿಗಳನ್ನು ತಮ್ಮ ಜೀವಿತಕಾಲದಲ್ಲಿ ರಚಿಸಿದ್ದಿರಬಹುದೆಂದು ಅಂದಾಜು ಮಾಡಬಹುದು.

ಕೊನೆಮಾತು : ದಾಸರು ಎಷ್ಟು ಕೃತಿಗಳನ್ನು ರಚಿದರು ಎಂಬುದು ಮುಖ್ಯವಲ್ಲ, ಎಂಥ ಕೃತಿಗಳನ್ನು ರಚಿಸಿದರು ಎಂಬುದು ಮುಖ್ಯ. ದಾಸರು ವಾಗ್ಗೇಯಕಾರರೇ ಅಲ್ಲ ಎಂಬೆಲ್ಲ ಹುರುಳಿಲ್ಲದ ವಾದಗಳನ್ನು ಹಿಂದೆ ಕೆಲವರು ಕನ್ನಡೇತರರು ಎಬ್ಬಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ‘‘ಪಿತಾಮಹ’’ ಪಟ್ಟವನ್ನು ಕಸಿದುಕೊಳ್ಳುವ ವ್ಯರ್ಥಯತ್ನವನ್ನು ಮಾಡಿದ್ದರು. ಹಲವು ಕನ್ನಡಿಗರೂ ಅದೇ ವಾದಗಳನ್ನು ಮಂಡಿಸುತ್ತಾ (ಕರ್ನಾಟಕದ ಹೊರಗೆ) ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಹೀಗಿರುವಾಗ, ದಾಸಸಾಹಿತ್ಯ ಮತ್ತು ಸಂಗೀತಗಳಬಗ್ಗೆ ಅಭಿಮಾನವುಳ್ಳ ನಾನು ಬರೆಯುತ್ತಿರುವ ಈ ಲೇಖನದ ಸಂದೇಶವಾದರೂ ಏನು ಎಂಬ ಪ್ರಶ್ನೆ ಓದುಗರಲ್ಲಿ ಮೂಡುವುದು ಸಹಜ.

ದಾಸರು ಬರೆದ ಕೃತಿಗಳ ಸಂಖ್ಯೆಯಬಗ್ಗೆ ಅನುಮಾನ ಮೂಡಿಸಿ ಅವರ ಸ್ಥಾನಕ್ಕೆ ಭಂಗತರುವ ಯತ್ನ ಇಲ್ಲಿದೆಯೆಂದು ಯಾರೂ ಭ್ರಮಿಸಬಾರದು. 475,000 ಕೃತಿಗಳಲ್ಲಿ 474,000 ಕೃತಿಗಳು ಸುಮಾರು 500 ವರ್ಷಗಳ ಅವಧಿಯಲ್ಲಿ ಮಾಯವಾಗಿ ಬಿಡುವುದು ಸುಲಭದ ಮಾತಲ್ಲ. ಮುದ್ರಣವಿಲ್ಲದೇ ಬಾಯಿಂದ ಬಾಯಿಗೆ ಹರಡಿ ಉಳಿದುಕೊಂಡಿರುವ ನಮ್ಮ ಸಂಗೀತ ಸಂಪತ್ತಿನ ಮುಖ್ಯ ಅಂಶ ದಾಸಸಾಹಿತ್ಯ.

ದಾಸರು ಅಸಾಧಾರಣ ಶಕ್ತಿಯುಳ್ಳವರಾದ್ದರಿಂದ, ಅವರು ದಿನಕ್ಕೆ 15 ಘಂಟೆ ದುಡಿದು ಘಂಟೆಗೊಂದರಂತೆ ಕೃತಿರಚನೆ ಮಾಡಿದ್ದರೆಂದುಕೊಂಡರೂ, ವರ್ಷದಲ್ಲಿ 300 ದಿನಗಳಾದರೂ ಕೃತಿರಚನೆಗಾಗಿ ಮುಡಿಪಾಗಿಟ್ಟಿದ್ದರೆಂದುಕೊಂಡರೂ, ವರ್ಷಕ್ಕೆ 4,500 ಕೃತಿಗಳಾದಾವು. ಬೇಡ, 4,750 ಎಂದೇ ಇಟ್ಟುಕೊಳ್ಳೋಣ. ಇದೇ ಗತಿಯಲ್ಲಿ ಮುಂದೆ ಸಾಗಿದರೆ, 475,000 ಕೃತಿಗಳನ್ನು ರಚಿಸಲು 100 ವರ್ಷಗಳು ಬೇಕಾಗುವುವು. ಇದು ದಾಸರ ಜೀವಿತದ ಅವಧಿಗಿಂತ ದೀರ್ಘವಾಗುವುದರಿಂದ ಅಂಥಾ ಯೋಚನಾಲಹರಿಯನ್ನು ಅಲ್ಲಿಗೇ ನಿಲ್ಲಿಸಬೇಕಾಗುವುದು. ಇದು ನಂಬಲರ್ಹವಾದ ಲೆಕ್ಕಾಚಾರವಲ್ಲ.

ಆದರೆ, ಅವರ ಸಾಹಿತ್ಯ ಮತ್ತು ಅವರ ಕೃತಿಗಳಲ್ಲಡಗಿರುವ ತತ್ತ್ವ ಇವುಗಳನ್ನೆಲ್ಲ ಗಮನಿಸಿದರೆ, ಮೂರು ನಾಲ್ಕು ಸಾವಿರ ಕೃತಿಗಳೇನು ಕಮ್ಮಿ ಕೊಡುಗೆಯಲ್ಲ. ಇದು ಅದ್ಭುತವಾದ, ಅಸಾಮಾನ್ಯವಾದ ಕೊಡುಗೆ. ಅವರು ಸಂಗೀತ ಶಿಕ್ಷಣದ ಪದ್ಧತಿಯನ್ನು ಕ್ರಮಬದ್ಧಗೊಳಿಸಿ ಕರ್ನಾಟಕ ಸಂಗೀತ ಪಿತಾಮಹ ಅನ್ನಿಸಿಕೊಂಡಿರುವುದು ಕನ್ನಡಿಗರೆಲ್ಲ ಹೆಮ್ಮೆ ಪಡಬೇಕಾದ ಸಂಗತಿ, ಎಂಬ ಸಂದೇಶದೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ಕೃತಜ್ಞತೆಗಳು : ನನ್ನ ಲೇಖನದ ಕರಡನ್ನು ಮಿತ್ರರಾದ ಶ್ರೀ. ಶ್ರೀವತ್ಸಜೋಶಿ ಅವರಿಗೂ ಮತ್ತು ನನ್ನ ಸೋದರಳಿಯ ಚಿ. ರಾಮಪ್ರಸಾದನಿಗೂ ಕಳುಹಿಸಿ ಅವರ ಅಭಿಪ್ರಾಯವನ್ನು ಕೇಳಿದ್ದೆ. ಅವರು ಲೇಖನವನ್ನು ಓದಿ ಸೂಕ್ತ ಸಲಹೆಗಳನ್ನಿತ್ತಿದ್ದಾರೆ. ಅಂಥಾ ಕೆಲವು ಸಲಹೆಗಳನ್ನು ನಾನು ಅಳವಡಿಸಿಕೊಂಡಿದ್ದೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more