ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಪೂಜೆಗೆ ಒಂದು ಭಾಷೆ ಬೇಕೆ?

By Staff
|
Google Oneindia Kannada News


The Language of Worship! ಭಾರತದ ನಾನಾ ಮೂಲೆಗಳಲ್ಲಿ, ಉಚ್ಚ-ನೀಚರೆಂಬ ಭೇದವಿಲ್ಲದೇ, ಬಡವ-ಬಲ್ಲಿದನೆಂಬ ತಾರತಮ್ಯವಿಲ್ಲದೇ, ಸಮಾಜದ ಎಲ್ಲ ವರ್ಗಗಳಲ್ಲೂ ಇಂದಿಗೂ ಅತ್ಯಂತ ಜನಪ್ರಿಯವಾದ ಪೂಜೆ ಎಂದರೆ ಶ್ರೀ ಸತ್ಯನಾರಾಯಣನ ವ್ರತ. ಈ ವ್ರತವನ್ನು ಕನ್ನಡದಲ್ಲಿ ಮಾಡಲು ನಿಮಗೆ ಇಚ್ಛೆಯಿದ್ದರೆ, ಅದಕ್ಕೊಬ್ಬರು ಮಹಾನುಭಾವರು ಮಾರ್ಗದರ್ಶನಮಾಡಿದ್ದಾರೆ. ಅವರು ಇನ್ಯಾರೂ ಅಲ್ಲ, ನಮಗೆಲ್ಲ ಚಿರಪರಿಚಿತರೇ ಆದ, ನಮ್ಮಲ್ಲನೇಕರಿಗೆ ಆಪ್ತರೂ ಆದ ಶ್ರೀ ಶಿಕಾರೀಪುರ ಹರಿಹರೇಶ್ವರ ಅವರು.

ಹರಿಹರೇಶ್ವರ ಅವರು ಅಮೇರಿಕದಲ್ಲಿ ನೆಲೆಸಿದ್ದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಲ್ಲಿ ಸಾಧಿಸಿದ ಕನ್ನಡ ಸಾಹಿತ್ಯಕೃಷಿ, ಕನ್ನಡ ಪತ್ರಿಕೋದ್ಯಮ ಮತ್ತಿತರ ಸಾಂಘಿಕ ಚಟುವಟಿಕೆಗಳು ಎಲ್ಲರಿಗೂ ಪರಿಚಿತವೇ. ಅವರು ನಡೆಸುತ್ತಿದ್ದ "ಅಮೆರಿಕನ್ನಡ" ನಿಯತಕಾಲಿಕ ಇಲ್ಲಿನ ಕನ್ನಡ ಬರಹಗಾರರ ಸುಪ್ತ ಪ್ರತಿಭೆಯನ್ನು ಹೊರತರುವುದರಲ್ಲಿ ಮಾಡಿದ ಅನನ್ಯ ಸೇವೆಯನ್ನು ಇಂದಿಗೂ ನಾವೆಲ್ಲ ಸ್ಮರಿಸಿಕೊಳ್ಳುತ್ತೇವೆ.

ಹರಿಹರೇಶ್ವರರು ನಾಲ್ಕಾರು ಪುಸ್ತಕಗಳನ್ನು ಬರೆದಿದ್ದಾರೆ, ಇನ್ನೂ ಬರೆಯುತ್ತಲೇ ಇದ್ದಾರೆ. ಅವರ ಕನ್ನಡ ಬರವಣಿಗೆ ತುಂಬಾ ಉತ್ತಮ ಮಟ್ಟದ್ದು, ಗದ್ಯ ಪದ್ಯ ಎರಡನ್ನೂ ರೂಢಿಸಿಕೊಂಡಿರುವುದು ಅವರ ವೈಶಿಷ್ಟ್ಯ. ಅವರ ಹಲವಾರು ಪ್ರಬಂಧಗಳನ್ನು ನಾನು ಮೆಚ್ಚಿಕೊಂಡಿದ್ದೇನಾದರೂ, ನನ್ನ ದೃಷ್ಟಿಯಲ್ಲಿ ಅವರ ಕೃತಿಗಳಲ್ಲಿ ಅತ್ಯಂತ ಬೆಲೆಬಾಳುವ ಕೆಲಸವೆಂದರೆ ಸಂಸ್ಕೃತದಿಂದ ಆಯ್ದ ಆಣಿಮುತ್ತುಗಳನ್ನು ತಿಳಿಗನ್ನಡಕ್ಕೆ ಭಾವಾನುವಾದ ಮಾಡಿರುವುದು. ಇವುಗಳಲ್ಲಿ, ಮಾತುಗಳು, ಕವನಗಳು, ಸ್ತೋತ್ರಗಳು, ಮಂತ್ರಗಳು ಎಲ್ಲ ಸೇರಿಕೊಂಡಿವೆ. ಇವೆಲ್ಲವನ್ನೂ ಒಳಗೊಂಡ "ಕನ್ನಡದಲ್ಲಿ ಶ್ರೀಸತ್ಯನಾರಾಯಣ ಪೂಜೆ" ಎಂಬ ಪುಸ್ತಕ ಅವರ ಇತ್ತೀಚಿನ ಪ್ರಮುಖ ಕೊಡುಗೆ.

ಸಂಸ್ಕೃತವನ್ನು ಆಳವಾಗಿ ಅಧ್ಯಯನ ಮಾಡಿರುವ, ಕನ್ನಡದಲ್ಲಿ ತಮ್ಮದೇ ಆದ ಬರವಣಿಗೆಯ ಧಾಟಿಯನ್ನು ಕಂಡುಹಿಡಿದುಕೊಂಡಿರುವ ಹರಿಹರೇಶ್ವರ ಅವರು ಓದಿದ್ದು ಸಿವಿಲ್ ಇಂಜಿನಿಯರಿಂಗ್ ಎಂದರೆ ಅಚ್ಚರಿಯಾಗಬಹುದು. ಆದರೆ, ಅವರು ಮೂಲ ಸಂಸ್ಕೃತದ ಒಳಾರ್ಥವನ್ನು ಕಂಡುಹಿಡಿದುಕೊಂಡು ಅದನ್ನು ಸುಲಭವಾದ ಕನ್ನಡಕ್ಕೆ ಇಳಿಸುವ ರೀತಿ ಅನನ್ಯವಾದುದು. ಶ್ಲೋಕವನ್ನು ಶ್ಲೋಕದಂತೆ, ಸ್ತೋತ್ರವನ್ನು ಸ್ತೋತ್ರದಂತೆ, ಮೂಲಕ್ಕೆ ಕೊಂಚವೂ ಅಪಚಾರವಾಗದಂತೆ, ಅನುವಾದ ಮಾಡಿ ಹಲವಾರು ವೇದಮಂತ್ರಗಳನ್ನು ಸಹ ಕನ್ನಡಿಗರಿಗೆ ಕೊಟ್ಟಿದ್ದಾರೆ.

ಸದರಿ ಈ ಪುಸ್ತಕದಲ್ಲಿ, ಸತ್ಯನಾರಾಯಣ ಪೂಜೆಗೆ ಒಂದು ಹೊಸ ಅರ್ಥವನ್ನು ಕೊಟ್ಟಿದ್ದಾರೆ ಎಂದರೆ ಅದು ಕೇವಲ ಅಭಿಮಾನದ ಮಾತಲ್ಲ. ’ದೇವರು’ ಎಂಬ ಕಲ್ಪನೆಗೂ ’ಸತ್ಯ’ ಎಂಬ ಕಲ್ಪನೆಗೂ ಏನೂ ವ್ಯತ್ಯಾಸವಿಲ್ಲ, ಸತ್ಯವನ್ನು ಆರಾಧಿಸಿದರೆ ಆ ಭಗವಂತನನ್ನೂ ಆರಾಧಿಸಿದಂತೆಯೇ, ಎಂಬುದೇ ಸತ್ಯನಾರಾಯಣ ಪೂಜೆಯ ಉದ್ದಿಶ್ಯ ಎಂಬ ಸಂದೇಶವನ್ನು ವಿಸ್ತಾರವಾಗಿ ಪ್ರಸುತಪಡಿಸುವುದರಲ್ಲಿ ಶ್ರೀಯುತರು ಸಫಲರಾಗಿದ್ದಾರೆ.

ಸಂಸ್ಕೃತ ಮಂತ್ರಗಳನ್ನು ಹೇಳಿಕೊಂಡೇ ಪೂಜೆ ಮಾಡ ಬಯಸುವವರಿಗೂ ಅನುಕೂಲವಾಗುವಂತೆ ಮೂಲವನ್ನೂ ಜೊತೆಗೇ ಕೊಟ್ಟಿರುವುದು ಈ ಪುಸ್ತಕದ ಒಂದು ವಿಶೇಷ. ಅಂಥವರು ಕೂಡ ಕನ್ನಡವಿಭಾಗವನ್ನು ಓದಿ ಅರ್ಥಮಾಡಿಕೊಂಡರೆ ಅವರ ಪೂಜಾ ವಿಧಾನಕ್ಕೂ ಹೆಚ್ಚಿನ ಅರ್ಥವುಂಟಾಗುವ ಸಾಧ್ಯತೆ ಇದೆ. ಪೂಜೆಯ ಪ್ರತಿ ಅಂಗವನ್ನೂ ಸಾಕಷ್ಟು ವಿಸ್ತಾರವಾಗಿ, ಸ್ವಾರಸ್ಯಕರವಾಗಿ ಮತ್ತು ಸಾಮಾನ್ಯರಿಗೂ ಎಟುಕುವಂತೆ ಬರೆದಿರುವುದು ಈ ಪುಸ್ತಕದ ಮುಖ್ಯ ಗುಣ.

ಪುಸ್ತಕದ ಮೊದಲ ಭಾಗ, ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ದುಡಿದು ನಿವೃತ್ತರಾಗಿರುವ, ಎಚ್. ವಿ. ನಾಗರಾಜರಾಯರ ಅಮೂಲ್ಯವಾದ ಮುನ್ನುಡಿಯೊಂದಿಗೆ ಪ್ರಾರಂಭವಾಗುತ್ತದೆ. ಅದರ ನಂತರ, ಗ್ರಂಥಕರ್ತರೇ ಬರೆದಿರುವ ದೀರ್ಘ ಪ್ರಸ್ತಾವನೆ ಎಲ್ಲರೂ ಅಗತ್ಯವಾಗಿ ಓದಬೇಕಾದ ಭಾಗ. "ಸತ್ಯ" ಎಂಬ ಪರಿಕಲ್ಪನೆಯನ್ನು ಕುರಿತ ವಿದ್ವತ್ಪೂರ್ಣವೂ ಅರ್ಥಗರ್ಭಿತವೂ ಆದ ಪ್ರಬಂಧ ಈ ಪ್ರಸ್ತಾವನೆಯಲ್ಲಿ ಅಡಕವಾಗಿದೆ. ಆಮೇಲೆ, ಶ್ರದ್ಧೆಯಿಂದ ಎಲ್ಲವನ್ನೂ ಅರ್ಥಮಾಡಿಕೊಂಡು ಪೂಜೆಮಾಡಬಯಸುವವರಿಗೆ ಅನುಕಲವಾಗುವಷ್ಟು ವಿವರಗಳೊಂದಿಗೆ ಕನ್ನಡದಲ್ಲಿ ಶ್ರೀ ಸತ್ಯನಾರಾಯಣನ ಪೂಜಾವಿಧಿ.

ಮೊದಲಭಾಗದ ಕೊನೆಯಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿರುವ ಸತ್ಯನಾರಾಯಣನ ಕಥೆ, ನಂಬಿಕೆ ಇಲ್ಲದವರಿಗೂ "ಹೌದು, ಇದು ಹೀಗೇನೇ ಇರಬೇಕು, ಅಯ್ಯೋ ಹಿಂದೆ ಎಷ್ಟೋ ಬಾರಿ ಓದಿದ್ದರೂ/ಕೇಳಿದ್ದರೂ ನಮಗೆ ಈ ವ್ರತಕಥೆಯ ನಿಜವಾದ ಸಂದೇಶವೇ ಅರ್ಥವಾಗಿರಲಿಲ್ಲವಲ್ಲ" ಅನ್ನಿಸುವಷ್ಟು ಸಹಜವಾಗಿ ಮೂಡಿಬಂದಿದೆ.

ಅದಕ್ಕಿಂತ ಮುಂದಿನ ವಿಭಾಗದಲ್ಲಿ ಸಂಸ್ಕೃತದ ಮೂಲ ಕಥಾವಿಧಿಯನ್ನು ಪರಿಷ್ಕರಿಸಿ ಕೊಟ್ಟಿದ್ದಾರೆ. ಭಾಷೆಯ ಸೌಲಭ್ಯ ಇಲ್ಲದವರಿಗೂ ಅನುಕೂಲವಾಗುವಂತೆ ಮಂತ್ರಗಳ ಸಂಧಿ-ಸಮಾಸಗಳನ್ನು ಸಾಕಷ್ಟು ಬಿಡಿಸಿ ಬಿಡಿಸಿ ಓದಲು ಸರಳವಾಗುವಂತೆ ಮಾಡಿರುವುದು ಪ್ರಶಂಶನೀಯ. ಕೊನೆಯಲ್ಲಿ, ಅನುಬಂಧದ ವಿಭಾಗದಲ್ಲಿ ಅನೇಕ ಸಂಸ್ಕೃತ ಮಂತ್ರಗಳನ್ನು ಅವುಗಳ ಅತ್ಯಂತ ಸಮರ್ಥವಾದ ಕನ್ನಡ ಭಾವಾನುವಾದವನ್ನೂ ಕೊಟ್ಟಿದ್ದಾರೆ.

ಉದಾಹರಣೆ ಕೊಡೋಣವೆಂದರೆ, ಯಾವುದನ್ನು ಕೊಡುವುದು, ಯಾವುದನ್ನು ಬಿಡುವುದು ಎನ್ನುವ ಸಂಕಟವನ್ನು ಅನುಭವಿಸಬೇಕಾಗುವುದು. ಇವರು ಕನ್ನಡಿಸಿರುವ ಶ್ರೀಸೂಕ್ತ ಒಂದೇ ಸಾಕು, ನಿದರ್ಶನಕ್ಕೆ. ಅದು ಕಾವ್ಯಮಯವೂ ಸುಂದರವೂ ಆಗಿ ಮೂಡಿಬಂದಿದೆ. ಇವರ ಕೊಡುಗೆಯಾದ ಕನ್ನಡದ ಮಂತ್ರಪುಷ್ಪವಂತೂ ಅನೇಕ ವರ್ಷಗಳ ಹಿಂದೆಯೇ ನನ್ನ ಮನಸ್ಸನ್ನು ಸೂರೆಗೊಂಡಿತ್ತು. "ಯೋಪಾಂ ಪುಷ್ಪಂ ವೇದ, ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ" ಎಂದು ಮೊದಲಾಗುವ ಮಂತ್ರಪುಷ್ಪದ ಪಠನವನ್ನು ಕೇಳದವರಾರು? ಆದರೆ,

"ನೀರ ಹೂವೇನೆಂದು ನೀಬಲ್ಲೆಯೇನು?
ಅದನರಿಯೆ ಹೂವಿನೊಲು ರಸದ ಸೆಲೆ ನಲಿವಿನೆಡೆ,
ಪಶು-ಪುತ್ರ ಸಂಪದವ ಪಡೆವೆ ನೀಲೆಲ್ಲವನು,
ತಂಗದಿರ ಚಂದಿರನೆ ನಭದ ನೀರಿನ ಹೂವು,
ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಇಂಬು ನಿನ್ನಲ್ಲೆ----"

ಎಂಬ ಕನ್ನಡ ಮಂತ್ರಪುಷ್ಪವನ್ನು ಅನೇಕರು ಕೇಳಿರಲಾರರು. ಇಷ್ಟು ಆಕರ್ಷಕವಾಗಿ ಇವರು ಅನುವಾದಿಸಲು ಕಾರಣ ಇವರು ಸುಮ್ಮನೆ ಪದಗಳನ್ನು ಭಾಷಾಂತರಿಸಿ ಸುಮ್ಮನಾಗುವ ಜಾತಿಯವರಲ್ಲ. ಮೂಲ ಮಂತ್ರದ ವಾಚ್ಯಾರ್ಥ, ಸೂಚ್ಯಾರ್ಥ ಮತ್ತು ಒಳಗಿನ ಧ್ವನಿ ಎಲ್ಲವನ್ನೂ ಭಟ್ಟಿ ಇಳಿಸಿ ಕನ್ನಡಕ್ಕೆ ಒಪ್ಪುವ ಪದಗುಚ್ಛಗಳನ್ನು ಬಳಸುವ ಇವರ ಚಾತುರ್ಯ ಅಸಾಮಾನ್ಯವಾದುದು.

ಕನ್ನಡ ಮಂತ್ರಪುಷ್ಪವನ್ನು ಸಾಮೂಹಿಕವಾಗಿ ಗೋಷ್ಠಿಯಲ್ಲಿ ಪಠಿಸುವ ದಿನಗಳೂ ಬರಬಹುದು, ಬರಲಿ! ಈ ಲೇಖನದ ಪ್ರಾರಂಭದಲ್ಲಿ ಉದಹರಿಸಿದ ಪ್ರದಕ್ಷಿಣ ನಮಸ್ಕಾರದ ಮಂತ್ರವೂ ಹರಿಹರೇಶ್ವರರ ಅನುವಾದವೇ. ಇಂಥ ಬೆಲೆಬಾಳುವ ಪುಸ್ತಕವನ್ನು ’ಕನ್ನಡದ ಪೂಜಾರಿ’ ಎಂದೇ ಪ್ರಸಿದ್ಧರಾದ, ಕನ್ನಡದಲ್ಲಿ ಪೂಜೆಮಾಡುವ ವಿಧಿಯನ್ನು ಪ್ರಾರಂಭಿಸಿದವಲ್ಲಿ ಅಗ್ರಗಣ್ಯರಾದ ಶ್ರೀ. ಹಿರೇಮಗಳೂರು ಕಣ್ಣನ್ ಅವರಿಗೆ ಸಮರ್ಪಿಸಿರುವುದು ಅತ್ಯಂತ ಸೂಕ್ತವಾಗಿದೆ.

ಇದೇ ರೀತಿಯ ಬೆಲೆಬಾಳುವ ಕೊಡುಗೆಗಳನ್ನು ಹರಿಹರೇಶ್ವರಿಂದ ನಾವು ನಿರೀಕ್ಷಿಸೋಣ. ಪುಸ್ತಕದ ಪ್ರತಿ ಬೇಕಾದವರು ಹರಿಹರೇಶ್ವರರನ್ನಾಗಲೀ ಮೈಸೂರಿನ ’ಸಂವಹನ’ ಪ್ರಕಾಶಕರನ್ನಾಗಲೀ ಸಂಪರ್ಕಿಸಬೇಕೆಂದು ಸೂಚಿಸುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X