• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರ ಪೂಜೆಗೆ ಒಂದು ಭಾಷೆ ಬೇಕೆ?

By Staff
|

ನಮ್ಮ ದೇವರಿಗೆ,ನಮ್ಮದೇ ಭಾಷೆಯಲ್ಲಿ ಪೂಜೆ ಮಾಡುವುದು ಒಳ್ಳೆಯದಲ್ಲವೇ? ಈ ನಿಟ್ಟಿನಲ್ಲಿ ಕನ್ನಡ ಮಂತ್ರಪುಷ್ಪಗಳನ್ನು ಸಿದ್ಧಪಡಿಸುವಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಫಲರಾಗಿದ್ದಾರೆ. ಈಗ ಸತ್ಯನಾರಾಯಣ ಪೂಜಾ ವಿಧಾನವನ್ನು ಕನ್ನಡದಲ್ಲಿ ನಡೆಸಲು ಸಾಧ್ಯವಾಗುವಂತೆ ಹರಿಹರೇಶ್ವರ ಪುಸ್ತಕ ಬರೆದಿದ್ದಾರೆ. ಇಂತಹ ಪ್ರಯತ್ನಗಳು ಇನ್ನಷ್ಟು ನಡೆಯಲಿ.


The Language of Worship!"ಯಾನಿಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ

ತಾನಿ ತಾನಿ ವಿನಶ್ಯಂತಿ, ಪ್ರದಕ್ಷಿಣ ಪದೇ ಪದೇ

ಪಾಪೋಹಮ್ ಪಾಪಕರ್ಮಾಹಮ್

ಪಾಪಾತ್ಮಾ ಪಾಪಸಂಭವಃ

ತ್ರಾಹಿಮಾಮ್ ಕೃಪಯಾ ದೇವ ಶರಣಾಗತ ವತ್ಸಲ

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಮ್ ಮಮ

ತಸ್ಮಾತ್ ಕಾರುಣ್ಯಭಾವೇನ ರಕ್ಷ ರಕ್ಷ ಮಹೇಶ್ವರ"

ಈ ಮೇಲಿನ ಪ್ರಾರ್ಥನೆಯನ್ನು ಮಾಡುತ್ತ ದೇವರ ಮುಂದೆ ಪ್ರದಕ್ಷಿಣೆ ಹಾಕುವುದು, ಸಾಷ್ಟಾಂಗ ಪ್ರಣಾಮ ಮಾಡುವುದು, ತೀರ್ಥ-ಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾಗುವುದು ಪೂಜೆ ಪುನಸ್ಕಾರಗಳಲ್ಲಿ ನಂಬಿಕೆ ಉಳ್ಳ ನಮ್ಮಲ್ಲನೇಕರಿಗೆ ಚಿಕ್ಕವಯಸ್ಸಿನಿಂದಲೇ ಅಭ್ಯಾಸವಾಗಿರುತ್ತದೆ. ಇನ್ನೂ ಪುಟ್ಟ ಮಕ್ಕಳಿಗಿರುವಾಗಲೇ, ತಂದೆತಾಯಿಗಳು "ಸ್ವಾಮೀ ಕಾಪಾಡಪ್ಪ, ನೀನೇ ಗತಿ" ಎಂದು ಹೇಳಿಕೊಟ್ಟು ’ಮಾಮೀ-ಚೋತಾ’ (ಕೆಲವರು ’ಜೋತಾ’ ಎನ್ನುವುದುಂಟು) ಮಾಡಿಸುವುದು ವಾಡಿಕೆ.

ಅರ್ಥವಾಗುವ ಮಾತಿನಲ್ಲಿ ಬೇಡಿಕೊಂಡಾಗ ಮನಸ್ಸಿಗೆ ಆಪ್ಯಾಯಮಾನ, ಒಂದುರೀತಿಯ ಸಮಾಧಾನ. ಮೇಲೆ ಹೇಳಿದ ಸಂಸ್ಕೃತ ಶ್ಲೋಕದ ಒಳ ಅರ್ಥವನ್ನೇ ಸರಳ ಕನ್ನಡದಲ್ಲಿ ಹೇಳಿದಾಗ ಹೇಗಿರಬಹುದು ನೋಡಿ.

"ತಿಳಿತಿಳಿದೋ ತಿಳಿಯದೆಯೋ ಮಾಡಿದಾ ತಪ್ಪುಗಳು

ಪಾಪವಾಗಾವರಿಸಿವೆ ತುಂಬಿ ನನ್ನ ಒಳಗೆ ಹೊರಗೆ:

ಏನೇನ ಪಾಪಗಳ ಎಸಗಿದೆನೋ ಜನ್ಮಜನ್ಮಾಂತರದಿ

ಹೆಜ್ಜೆಹೆಜ್ಜೆಗೂ ನಾಶವಾಗಲವು ನಿನ್ನ ಸುತ್ತುತ್ತಿರಲು;

ನೀನಲ್ಲದಿನ್ನಾರು ನೆರಳು ಮೊರೆಹೊಕ್ಕವಗೆ ದೀನನಿಗೆ-

ಇದನರಿತು ಪೊರೆ, ಜಗದೀಶ, ದಯೆಯ ತೋರು"

ನಮಗೆ ತಿಳಿದ ಮಾತಿನಲ್ಲೇ ನಾವು ದೇವರೊಂದಿಗೆ ವ್ಯವಹರಿಸಿದರೆ ಎಷ್ಟು ಹಿತ? ಎಂಥ ಸೊಗಸು?

ಪೂಜೆ ಎಂಬುದು ಮನುಷ್ಯನ ಮನಸ್ಸಿನೊಳಗೆ ನಡೆಯಬೇಕಾದ್ದು. ಇತರರಿಗೋಸ್ಕರ ಪೂಜೆ ಮಾಡುವವರ ವಿಚಾರ ಬೇರೆ. ಪೂಜೆ ಮಾಡಿದ್ದರಿಂದ ಏನೋ ಲಾಭ ಆಗುವುದೆಂಬ ಪ್ರತಿಫಲಾಪೇಕ್ಷೆಯಿಂದ ಪೂಜೆ ಮಾಡುವವರ ವಿಚಾರ ಇಲ್ಲಿ ಬೇಡ. ’ಭಗವಂತ’ ಎಂಬುದು ಮನುಷ್ಯನ ಒಂದು ಸುಂದರ ಕಲ್ಪನೆ. ಅವನಿಗೆ/ಅವಳಿಗೆ/ಅದಕ್ಕೆ ರೂಪವಿಲ್ಲ, ಹೆಸರಿಲ್ಲ, ಗುಣವಿಲ್ಲ, ಆ ಕಲ್ಪನೆಗೆ ಒಂದು ಮಿತಿ ಇಲ್ಲ, ಅದಕ್ಕೆ ಕೊನೆ-ಮೊದಲಿಲ್ಲ, ಅದು ’ಅನಂತ’ ಎಂದು ಗೊತ್ತಿದ್ದರೂ ಅವನಿಗೆ/ಅವಳಿಗೆ/ಅದಕ್ಕೆ ಒಂದು ರೂಪ, ಹೆಸರು ಕೊಟ್ಟು "ಅರ್ಚ-ಸ್ವರೂಪ"ದಲ್ಲಿ ಪೂಜಿಸುತ್ತೇವೆ.

ಪೂಜಿಸುವಾಗ, ಭಗವಂತನನ್ನು ಧ್ಯಾನಿಸಿ, ಆಹ್ವಾನಿಸಿ, ಒಂದು ಮೂರ್ತಿಯಲ್ಲಿ ಆವಾಹನೆ ಮಾಡಿ, ಕೈ-ಕಾಲ್ ತೊಳೆಯಲು ನೀರುಕೊಟ್ಟು, ಆಸನದಲ್ಲಿ ಕೂರಿಸಿ, ಸತ್ಕರಿಸಿ, ಹಾಲು-ಮೊಸರು-ತುಪ್ಪ-ಜೇನುತುಪ್ಪ-ಸಕ್ಕರೆ-ಎಳನೀರು, ಕೊನೆಗೆ ತಿಳಿನೀರಿನಿಂದ ಅಭಿಷೇಕಮಾಡಿ, ಮೈ ಒರಸಿ, ಸುಗಂಧದ್ರವ್ಯಗಳನ್ನು ಸಿಂಪಡಿಸಿ, ಅಲಂಕಾರಕ್ಕೆ ಗೆಜ್ಜೆ ವಸ್ತ್ರಗಳನ್ನು ಕೊಟ್ಟು, ಧೂಪವನ್ನು ಮೂಸಿಸಿ, ದೀಪಗಳನ್ನು ಬೆಳಗಿಸಿ, ಪತ್ರ-ಪುಷ್ಪಗಳಿಂದ ಆರಾಧಿಸಿ, ಛತ್ರ-ಚಾಮರಗಳ ಸೇವೆ ಮಾಡಿ, ನಾನಾವಿಧ ಭಕ್ಷ್ಯ-ಭೋಜ್ಯಗಳಿಂದ ಒಡಗೂಡಿದ ನೈವೇದ್ಯವನ್ನು ಉಣಿಸಿ, ತೃಪ್ತಿಪಡಿಸಿ, ಆರತಿ ಬೆಳಗಿ, ಅವನಿಗೆ ಕೊಟ್ಟು ಮಿಕ್ಕದ್ದನ್ನು ಪ್ರಸಾದವೆಂದು ಸ್ವೀಕರಿಸಿ, ಪುನಃ ಬಾರೆಂದು ಬೀಳ್ಕೊಡುವ "ಷೋಡಷೋಪಚಾರ" ಪೂಜಾಕ್ರಮವನ್ನು ನಮ್ಮ ಪೂರ್ವಿಕರು ನಮಗೆ ಬಿಟ್ಟುಹೋಗಿದ್ದಾರೆ.

"ದಶಾಂಗಮ್ ಗುಗ್ಗುಳಂ ಧೂಪಮ್ ಸುಗಂಧಂ ಚ ಮನೋಹರಮ್--" ಮುಂತಾಗಿ ವರ್ಣಿಸದಿದ್ದರೆ, "ಧೂಪಮ್ ಆಘ್ರಾಪಯಾಮಿ" ಎಂದು ಹೇಳದಿದ್ದರೆ ದೇವರಿಗೆ ಸುಗಂಧ ಬರುವುದಿಲ್ಲವೇ? ಸುಮ್ಮನೆ ದೀಪವನ್ನು ಹತ್ತಿಸಿದರೆ ಸಾಲದೇ, "ದೀಪಮ್ ದರ್ಶಯಾಮಿ" ಎಂದು ಹೇಳಲೇ ಬೇಕೆ? ಹೇಳದಿದ್ದರೆ ದೀಪದ ಬೆಳಕು ದೇವರಿಗೆ ಕಾಣುವುದಿಲ್ಲವೇ? ಒಂದುವೇಳೆ ಹೇಳಲೇಬೇಕಿದ್ದರೆ, ಸಂಸ್ಕೃತದಲ್ಲೇ ಹೇಳಬೇಕೆ? ಕನ್ನಡ ಅಥವಾ ಮತ್ಯಾವುದೋ ಭಾಷೆಯಲ್ಲಿ ಹೇಳಿದರಾಗದೇ? ಭಾರತೀಯ ಭಾಷೆಗಳ ಪರಿಚಯವಿಲ್ಲದ, ಉದಾಹರಣೆಗೆ, ಅಮೇರಿಕದಲ್ಲಿ ಹುಟ್ಟಿದ ಹಿಂದೂ ಮಕ್ಕಳು ಅದರಲ್ಲೂ ಭಾರತೀಯ ಭಾಷೆ ಯಾವುದೂ ಬಾರದವರು, ಏನು ಮಾಡಬೇಕು? ಮಾತೇ ಬಾರದ ಮೂಕರು ಏನು ಮಾಡಬೇಕು? ಸುಮ್ಮನೆ ಮನಸ್ಸಿನಲ್ಲಿ ಭಾವಿಸಿಕೊಂಡರೆ ಸಾಲದೇ?

ನಮ್ಮ ಪೂರ್ವಜರು ಚೆನ್ನಾಗಿ ಯೋಚಿಸಿಯೇ ಒಂದು ಪೂಜಾಕ್ರಮವನ್ನು ಜಾರಿಗೆ ತಂದಿದ್ದಿರಬೇಕು.

ಪೂಜಾವಿಧಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ಸುಲಭಮಾರ್ಗವನ್ನು ನಮ್ಮ ಪೂರ್ವಜರು ಕಂಡುಹಿಡಿದುಕೊಂಡಿದ್ದರು. ಮಂತ್ರಗಳ ರೂಪದಲ್ಲಿ ಪ್ರತಿಯೊಂದು ಕ್ರಮವನ್ನೂ ಪಟ್ಟಿಮಾಡಿ ಆಯಾ ಕ್ರಿಯೆ-ಕರಣಗಳಿಗೆ ಅನ್ವಯಿಸುವಹಾಗೆ ಕೈಪಿಡಿಯನ್ನು ತಯಾರು ಮಾಡಿಕೊಂಡರು. ಅದರಿಂದ ಆಯಾ ಮಂತ್ರಗಳನ್ನು ಹೇಳಿಕೊಳ್ಳುತ್ತ ಸುಲಭವಾಗಿ ಪೂಜೆ ಮಾಡುವ ಒಂದು ಪದ್ಧತಿ ಉಂಟಾಯಿತು. ಲೌಕಿಕರಿಗೆ ಸುಲಭವಾಗುವ ಹಾಗೆ ನಿತ್ಯಪೂಜೆಗಳ ವಿಧಿ-ವಿಧಾನಗಳನ್ನು ತಯಾರಿಸಿಕೊಟ್ಟರು. ವಿಶೇಷ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಲು ಪುರೋಹಿತರ ವರ್ಗ ಹುಟ್ಟಿಕೊಂಡಿತು. ಆದರೆ, ಬರಬರುತ್ತ, ಪೂಜೆಯೂ ಒಂದು ಯಾಂತ್ರಿಕ ಕ್ರಿಯೆ ಆಯಿತು.

ಸಂಸ್ಕೃತ ಭಾಷೆಯ ಪರಿಚಯವಿಲ್ಲದವರಿಗೆ ಮಂತ್ರವನ್ನು ಯಾಂತ್ರಿಕವಾಗಿ ಪಠಿಸುತ್ತ ಪೂಜೆ ಮಾಡುವಾಗ, ಉಚ್ಚಾರಣೆ, ವ್ಯಾಕರಣಶುದ್ಧಿಯ ಕಡೆ ಗಮನಹರಿಸುವುದು ಸಾಧ್ಯವಾಗದೇ ಹೋಯಿತು. ಮಾಡುವ ಕೆಲಸದಲ್ಲಿ ಶ್ರದ್ಧೆಯೂ ಕಮ್ಮಿಯಾಗುತ್ತ ಬಂತು. ಭಕ್ತರಿಗೂ ಭಗವಂತನಿಗೂ ಮಧ್ಯೆ ಪುರೋಹಿತ ದೊಡ್ಡ ಅಡ್ಡಗೋಡೆಯಂತಾದ. ಬರಬರುತ್ತ, ಪೌರೋಹಿತ್ಯವೂ ಒಂದು ವೃತ್ತಿಯಾಗಿ ಬೆಳೆಯಿತು. ವೃತ್ತಿಯ ಬೆಳವಣಿಗೆಗೋಸ್ಕರ ನಾನಾ ವ್ರತಗಳು ಹುಟ್ಟಿಕೊಂಡವು. ಪ್ರತಿಯೊಂದು ತಿಥಿಗೂ ಒಂದೊಂದು ಹಬ್ಬ ಶುರುವಾಯಿತು. ಇಂಥಾ ಪೂಜೆಗೆ ಇಷ್ಟಿಷ್ಟು ಶುಲ್ಕ, ದಕ್ಷಿಣೆ, ಸಂಭಾವನೆ ಮುಂತಾದ ಒಪ್ಪಂದಗಳೂ ಕಾಲ-ದೇಶಗಳಿಗನುಗುಣವಾಗಿ ನಿಷ್ಕರ್ಷೆಯಾದವು. ಸಾಮಾನ್ಯ ಲೌಕಿಕರು ಎಲ್ಲವನ್ನೂ ಪುರೋಹಿತರಿಗೆ ಬಿಟ್ಟರು. ಆಡಂಬರದ ಪೂಜೆಗಳೇ ಹೆಚ್ಚಾಗಿ ನಿರ್ಮಲ ಭಕ್ತಿಯು ಮಾಯವಾಯಿತು. ಬ್ರಾಹ್ಮಣರು ಪೂಜೆ ಮಾಡಿಕೊಳ್ಳಲಿ, ನಮಗೇಕೆ ಪೂಜೆ ಎಂಬ ಧೋರಣೆ ಸಮಾಜದ ಮಿಕ್ಕ ವರ್ಗಗಳಲ್ಲಿ ಬೆಳೆಯಿತು. ಹೀಗಿರುತ್ತ, ಪೂಜೆಯ ಭಾಷೆಯಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ.

ಕಾಲಚಕ್ರವು ತಿರುಗುತ್ತಿರುತ್ತದೆಯಷ್ಟೆ. ಪದ್ಧತಿಗಳು ಬದಲಾಗುತ್ತವೆ, ಮತ್ತೆ ಹಿಂದಿನ ಪದ್ಧತಿಗಳೇ ಚಾಲತಿಗೆ ಬರುತ್ತವೆ. ಈಗೀಗ, ಜನಸಾಮಾನ್ಯರಲ್ಲಿ ಭಕ್ತಿ ಹುಟ್ಟುತ್ತಿದೆ, ಪೂಜೆ-ಪುನಸ್ಕಾರಗಳು ಮತ್ತೆ ಜನಪ್ರಿಯವಾಗುತ್ತಿವೆ. ಭಾರತಕ್ಕಿಂತಲೂ ಅಮೇರಿಕದಲ್ಲಿ ಈ ಮಾತು ಹೆಚ್ಚು ಸತ್ಯವೆನಿಸುತ್ತಿದೆ. ಏಕೆ ಪೂಜೆ ಮಾಡುತ್ತೇವೆ? ಪೂಜೆ ಮಾಡುವ ಕ್ರಮ ಏನು? ನಾವು ಹೇಳುವ ಮಂತ್ರಗಳ ಅರ್ಥವಾದರೂ ಏನು? ಇವೇ ಮುಂತಾದ ಪ್ರಶ್ನೆಗಳನ್ನು ಕೇಳಲು ಜನರು ಹಿಂದೆಗೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ತಿಳಿಯುವ ಕನ್ನಡದಲ್ಲೇ ಪೂಜೆ ಏಕೆ ಮಾಡಬಾರದು ಎಂಬ ಪ್ರಶ್ನೆಗೆ ಮಹತ್ವ ಬಂದಿದೆ.

ವೈಯಕ್ತಿಕ ಪೂಜೆಗೆ ಭಾಷೆಯ ಅಗತ್ಯವಿಲ್ಲ ಎಂಬುದನ್ನು ಒಪ್ಪಿಕೊಂಡರೂ, ಪ್ರತಿಯೊಂದು ಪೂಜೆಯೂ ಮಾನಸಪೂಜೆ ಆಗುವುದು ಹಲವಾರು ಕಾರಣಗಳಿಂದ ಅಸಾಧ್ಯ. ಒಂದು ಇಡೀ ಕುಟುಂಬದ ಸದಸ್ಯರು, ಅಥವಾ ನೆಂಟರಿಷ್ಟರೆಲ್ಲ ಜೊತೆಗೂಡಿ ಮಾಡುವ ಪೂಜೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಒಂದು ಸಮುದಾಯದ ಜನರೆಲ್ಲ ಒಟ್ಟುಗೂಡಿ ಮಾಡುವ ಪೂಜೆಗೆ ಪೂಜಾಮಾಧ್ಯಮವೊಂದು ಬೇಕಾಗುತ್ತದೆ. ಇಂದಿನ ಆಧುನಿಕಯುಗದಲ್ಲಿ, ಹಿಂದಿನಂತೆ ಎಲ್ಲವನ್ನೂ ಕ್ರಮವಾಗಿ ಮಾಡಲು ಸಾಧ್ಯವಿಲ್ಲ, ನಮಗೆ ಸುಲಭೋಪಾಯಬೇಕು.

ಊರಿನಲ್ಲಾಗಲೀ, ಕಾಡಿನಲ್ಲಾಗಲೀ, ಮನೆಯಲ್ಲಾಗಲೀ ನದೀತೀರದಲ್ಲಾಗಲೀ ಮಾಡಬಹುದಾದ ವ್ರತ ಒಂದಿದ್ದರೆ ಎಷ್ಟು ಚೆನ್ನ? ಬೆಳಿಗ್ಗೆ, ಸಂಜೆ ಎಂಬ ಭೇದ ಇರಕೂಡದು, ಯಾವ ಮಾಸ, ಯಾವ ತಿಥಿ ಎಂಬ ಚಿಂತೆಗೆ ಅವಕಾಶವಿರಕೂಡದು. ಈ ರೀತಿ ಯೋಚಿಸಿ, ಯಾವಾಗ ಮನಸ್ಸಾದರೆ ಆವಾಗ ನಮಗಿರುವ ಅನುಕೂಲದ ಮಿತಿಗಳಲ್ಲೇ ಭಕ್ತಿಯಿಂದ ಮಾಡಬಹುದಾದ ಪೂಜೆ ಒಂದನ್ನು ನಮ್ಮ ಹಿರೀಕರು ನಮಗೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more